ಅಂಕಣ

ದೇಶದ ಹೃದಯ ದೆಹಲಿಯಲ್ಲಿ ಗೆಲ್ಲುವವರಾರು?: ತೀವ್ರಗೊಂಡ ರಾಜಕೀಯ ಜಿದ್ದಾಜಿದ್ದಿ; ಆಮ್​ ಆದ್ಮಿ, ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆ

ರಾಜಧಾನಿ ದೆಹಲಿಯಲ್ಲಿ ಚುನಾವಣೆ ಪ್ರಚಾರದ ಅಬ್ಬರ ಜೋರಾಗಿದೆ. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಆಶ್ವಾಸನೆಗಳನ್ನು ನೀಡುತ್ತ, ಜನರ ಮನ ಗೆಲ್ಲಲು, ಮತ ಸೆಳೆಯಲು ತೀವ್ರ ಪೈಪೋಟಿ ನಡೆಸಿವೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಲೋಕಸಭಾ ಚುನಾವಣೆಯ ಲಿತಾಂಶವೇ ಮರುಕಳಿಸಲಿದೆ ಎಂಬ ವಿಶ್ವಾಸ ಬಿಜೆಪಿಯದ್ದು. ಆದರೆ, ಅಬಕಾರಿ ನೀತಿ ಹಗರಣದಲ್ಲಿ ಐದು ತಿಂಗಳು ಜೈಲಿಗೆ ಹೋಗಿ ಬಂದಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಇದನ್ನೇ ಅನುಕಂಪದ ದಾಳವಾಗಿ ಬಳಸಿ, ಮತ್ತೊಮ್ಮೆ ಆಮ್​ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಶತಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ "ಶೂನ್ಯ ಸಂಪಾದನೆ' ಮಾಡಿರುವ ಕಾಂಗ್ರೆಸ್​ ಈ ಬಾರಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತಿದೆ.

|ರವೀಂದ್ರ ಎಸ್​. ದೇಶಮುಖ್​

ದೆಹಲಿ ವಿಧಾನಸಭೆ ಚುನಾವಣೆಗೆ ಕೆಲ ದಿನಗಳೇ ಉಳಿದಿದ್ದು, ಬಿಜೆಪಿ, ಆಮ್​ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್​ ರಾಜಕೀಯದ ಎಲ್ಲ ಅಸ್ತ್ರಗಳನ್ನು ಬಳಸಿ, ಮತದಾರರನ್ನು ಸೆಳೆಯಲು ಯತ್ನಿಸುತ್ತಿವೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ (2019) ಬಿಜೆಪಿಯನ್ನು ಬೆಂಬಲಿಸಿದ್ದ ದೆಹಲಿ ಮತದಾರರು, ವಿಧಾನಸಭೆ ಚುನಾವಣೆಯಲ್ಲಿ ಮಾತ್ರ (2020) ಅರವಿಂದ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿದ್ದರು. 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ದೆಹಲಿಯಲ್ಲಿ ಕ್ಲೀನ್​ಸ್ವೀಪ್​ ಮಾಡಿ, 7ಕ್ಕೆ 7 ಸ್ಥಾನಗಳನ್ನು ಗೆದ್ದಿದೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಳೆದ ಬಾರಿಯ ಲಿತಾಂಶ ಮರುಕಳಿಸಲಿದೆಯೇ ಎಂಬ ಆತಂಕ ಕಮಲ ಪಾಳಯವನ್ನು ಕಾಡುತ್ತಿರುವುದು ಸುಳ್ಳಲ್ಲ. ಆದರೆ, ಕೇಜ್ರಿವಾಲ್​ ಬಿಜೆಪಿ, ಕಾಂಗ್ರೆಸ್​ ಎರಡನ್ನೂ ಎದುರಿಸಿ ಅಧಿಕಾರಕ್ಕೆ ಮರಳಲು ಕಾರ್ಯತಂತ್ರ ರೂಪಿಸಿದ್ದಾರೆ.

ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ. ಕೆಲ ರಾಜಕೀಯ ವಿಶ್ಲೇಷಕರ ಪ್ರಕಾರ ಆಮ್​ ಆದ್ಮಿ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಈ ಸ್ಥಿತಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಮಾತ್ರ ಬಿಜೆಪಿಗೆ ಲಾಭವಾಗಬಹುದು. ಅದೇನಿದ್ದರೂ, ಜನರಲ್ಲಿ ಭ್ರಷ್ಟಾಚಾರ, ಬೆಲೆಯೇರಿಕೆಯ ಬಗ್ಗೆ ಆಕ್ರೋಶ ಇರುವುದಂತೂ ಹೌದು. ಅಲ್ಲದೆ, "ಈ ಬಾರಿ ಎಲ್ಲ ಪಕ್ಷಗಳು ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದ್ದು, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವುಗಳನ್ನು ಈಡೇರಿಸುವುದು ಕಷ್ಟ. ಈಡೇರಿಸಿದರೂ ಆರ್ಥಿಕ ಸ್ಥಿತಿ ಡೋಲಾಯಮಾನವಾಗುತ್ತದೆ' ಎಂಬ ಅಭಿಪ್ರಾಯ ಆರ್ಥಿಕ ತಜ್ಞರದ್ದು.

ಚೇತರಿಸಿಕೊಳ್ಳುವುದೇ ಕಾಂಗ್ರೆಸ್​?

ದೆಹಲಿಯಲ್ಲಿ ಕಾಂಗ್ರೆಸ್​ ನೆಲೆ ಕಳೆದುಕೊಂಡಿರುವುದು ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ವೇಳೆ ಸ್ಪಷ್ಟವಾಗಿದೆ. ಹಾಗಾಗಿ, ಈ ಬಾರಿ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಅವರೇ ಪ್ರಚಾರ ರ್ಯಾಲಿಗಳನ್ನು ನಡೆಸುತ್ತಿದ್ದು, ವಿಧಾನಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ "ನ್ಯಾಯ ಯಾತ್ರೆ' ನಡೆಸುವ ಮೂಲಕ ಮತದಾರರನ್ನು ತಲುಪಲು ಕಾಂಗ್ರೆಸ್​ ಯತ್ನಿಸಿದೆ. ದೆಹಲಿಯ ಎಲ್ಲ ನಾಗರಿಕರಿಗೆ 25 ಲಕ್ಷ ರೂ. ಕವರೇಜ್​ನ ಆರೋಗ್ಯ ವಿಮೆ, "ಪ್ಯಾರಿ ದೀದಿ' ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., ಒದಗಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಬಿಜೆಪಿಗೆ ಚೇಕ್​ಮೇಟ್​ ಕಮಲ ಪಾಳಯದ ಪರಿವರ್ತನ್​ ಯಾತ್ರಾ

ಆಮ್​ ಆದ್ಮಿ ಸರ್ಕಾರದ ಭ್ರಷ್ಟಾಚಾರವನ್ನು ಗಟ್ಟಿದನಿಯಲ್ಲಿ ವಿರೋಧಿಸುತ್ತ, ಪರಿವರ್ತನ್​ ಯಾತ್ರೆ ಮೂಲಕವೇ ಬಿಜೆಪಿ ಚುನಾವಣಾ ಪ್ರಚಾರವನ್ನು ಆರಂಭಿಸಿತು. ದೆಹಲಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೆ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ನಂಬಿಕೊಂಡೇ ಬಿಜೆಪಿ ಪ್ರಚಾರಕ್ಕೆ ಬಲ ತುಂಬಿದೆ.

ಈ ಬಗ್ಗೆ ಲೇವಡಿ ಮಾಡಿರುವ ಆಮ್​ ಆದ್ಮಿ ಪಕ್ಷ "ಬಿಜೆಪಿ ಮದುಮಗನಿಲ್ಲದೆ ಮದುವೆಗೆ ಸಿದ್ಧವಾಗಿದೆ' ಎಂದು ಛೇಡಿಸಿದೆ. ಈ ಹಿಂದೆ ಉಚಿತ ಯೋಜನೆ/ಕೊಡುಗೆಗಳನ್ನು ವಿರೋಧಿಸಿದ್ದ ಬಿಜೆಪಿ, ತನ್ನ ನೀತಿ ಬದಲಿಸಿಕೊಂಡಿದ್ದು, ಈ ವಿಷಯದಲ್ಲಿ ವಿರೋಧ ಪಕ್ಷಗಳ ಹಾದಿಯನ್ನೇ ತುಳಿದಿದೆ. "ಮಹಿಳಾ ಸಮೃದ್ಧಿ ಯೋಜನೆ'ಯಡಿ ಪ್ರತಿ ತಿಂಗಳು 2,500 ರೂ., ಗರ್ಭೀಣಿಯರಿಗೆ 21 ಸಾವಿರ ರೂ. ನೆರವು ಹಾಗೂ ಪೋಷಣೆಯ 6 ಕಿಟ್​ ಒದಗಿಸುವ ಭರವಸೆ ನೀಡಲಾಗಿದೆ.

ಅಷ್ಟೇ ಅಲ್ಲ, ಹಿರಿಯ ನಾಗರಿಕರು, ನಿರಾಶ್ರಿತರು ಮತ್ತು ವಿಧವೆಯರ ಪಿಂಚಣಿ ಹೆಚ್ಚಿಸುವ, 5 ರೂಪಾಯಿಯಲ್ಲಿ ಪೌಷ್ಟಿಕ ಊಟ ಒದಗಿಸಲು ಅಟಲ್​ ಕ್ಯಾಂಟಿನ್​ ಸ್ಥಾಪಿಸುವ, 200 ಯೂನಿಟ್​ವರೆಗೆ ಉಚಿತ ವಿದ್ಯುತ್​ ಒದಗಿಸುವ, ದೆಹಲಿಯಲ್ಲೂ ಆಯುಷ್ಮಾನ್​ ಭಾರತ್​ ಯೋಜನೆ ಜಾರಿಗೊಳಿಸುವ ಆಶ್ವಾಸನೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹಲವು ಪ್ರಚಾರ ರ್ಯಾಲಿ ನಡೆಸಿದ್ದು, ಮಾಲಿನ್ಯ, ಜಲಸಂಕಟ ವಿಷಯಗಳನ್ನು ಪ್ರಸ್ತಾಪಿಸಿ ಆಮ್​ ಆದ್ಮಿ ಪಕ್ಷದ ಸರ್ಕಾರವನ್ನು ಆಪದಾ (ಆಪತ್ತು) ಎಂದು ಜರೆದಿದ್ದಾರೆ.

ಹಿಂದುತ್ವ ಕಾರ್ಡ್​

ದೆಹಲಿಯಲ್ಲಿ ಸುಮಾರು 29 ಸಾವಿರ ನೋಂದಾಯಿತ ದೇವಸ್ಥಾನಗಳಿವೆ. ಈ 29 ಸಾವಿರ ದೇವಸ್ಥಾನಗಳ ಮುಖ್ಯ ಅರ್ಚಕರು, ಸಹಾಯಕ ಅರ್ಚಕರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಮತ್ತು ಆಮ್​ ಆದ್ಮಿ ಪಕ್ಷದ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಂದಿರದ ಅರ್ಚಕರು ಮತ್ತು ಅಲ್ಲಿಗೆ ಸಂಬಂಧಪಟ್ಟ ವ್ಯವಸ್ಥೆಯಲ್ಲಿ 1.47 ಲಕ್ಷ ಜನರಿದ್ದು, ಈ ಮತಬ್ಯಾಂಕ್​ ಮಹತ್ವ ಪಡೆದುಕೊಂಡಿದೆ. "ಬಿಜೆಪಿಯದ್ದು ನಕಲಿ ಹಿಂದುತ್ವ' ಎಂದು ಕೇಜ್ರಿವಾಲ್​ ಆರೋಪಿಸಿದ್ದರೆ, "ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿ, ದೆಹಲಿಯ ಅರ್ಚಕರನ್ನು ಕರೆದೊಯ್ದು ಬಾಲರಾಮನ ದರ್ಶನ ಮಾಡಿಸಿದ್ದು ಬಿಜೆಪಿ' ಎಂದು ಕಮಲ ಪಾಳಯದ ಸ್ಥಳಿಯ ನಾಯಕರು ಹೇಳುತ್ತಿದ್ದಾರೆ. ಅದೇನಿದ್ದರೂ, ಎರಡೂ ಪಕ್ಷಗಳ ನಾಯಕರ ಟೆಂಪಲ್​ ರನ್​ ವೇಗ ಪಡೆದಿದ್ದು, ಅರ್ಚಕರು ಯಾರಿಗೆ "ತಥಾಸ್ತು' ಹೇಳುತ್ತಾರೋ ಕಾದು ನೋಡಬೇಕು. ಮತ್ತೊಂದೆಡೆ, 15 ಸಾವಿರ ಗುರುದ್ವಾರಗಳಿದ್ದು, ರಾಜಕೀಯ ನಾಯಕರು "ಸತ್​ ಶ್ರೀ ಅಕಾಲ್​' ಎನ್ನುತ್ತ ಅಲ್ಲೂ ಸುಳಿದಾಡುತ್ತಿದ್ದಾರೆ.

ಹಳೆಯ ದೋಸ್ತಿ ಬ್ರೇಕಪ್​

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಐಎನ್​ಡಿಐಎ ಒಕ್ಕೂಟದ ಹೆಸರಲ್ಲಿ ಕಾಂಗ್ರೆಸ್​, ಆಮ್​ ಆದ್ಮಿ ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಆದರೆ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಹಳೆಯ ಸ್ನೇಹಿತರೇ ಪರಸ್ಪರ ಸ್ಪರ್ಧೆ ಮಾಡುತ್ತಿದ್ದಾರೆ.

ಚುನಾವಣೆಯ ಪ್ರಮುಖ ವಿಷಯಗಳು

1.ಬೆಲೆಯೇರಿಕೆ ನಿಯಂತ್ರಣ 2.ರಿಯಲ್​ ಎಸ್ಟೇಟ್​ ಮಾಫಿಯಾಗೆ ಕಡಿವಾಣ. 3.ವಾಯುಮಾಲಿನ್ಯದ ಪ್ರಮಾಣವನ್ನು ತಗ್ಗಿಸಿ, ಉಸಿರಾಡಲು ಶುದ್ಧ ಗಾಳಿಯನ್ನು ಒದಗಿಸುವುದು. 4.ಕಾನೂನು ಸುವ್ಯವಸ್ಥೆ ಕಾಪಾಡುವುದು, ಮುಖ್ಯವಾಗಿ ಮಹಿಳೆಯರಿಗೆ ಸುರತ ವಾತಾವರಣ ಕಲ್ಪಿಸುವುದು. 5.ವಾಹನದಟ್ಟಣೆ ನಿಯಂತ್ರಣಕ್ಕೆ ಇನ್ನಷ್ಟು ಪೂರಕ ಕ್ರಮಗಳನ್ನು ಕೈಗೊಳ್ಳುವುದು. 6.ತೀವ್ರವಾಗಿ ಕಲುಷಿತಗೊಂಡಿರುವ ಯಮುನಾ ನದಿಯನ್ನು ಸ್ವಚ್ಛಗೊಳಿಸಿ, ಯಮುನೆಯ ಪಾವಿತ್ರ್ಯವನ್ನು ಕಾಪಾಡುವುದು. ನೈಸರ್ಗಿಕ ಹರಿವಿಗೆ ಅನುವು ಮಾಡಿಕೊಡುವುದು. 7.ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವುದು. 8.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಸೂಕ್ತಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದು. 9ಉದ್ಯೋಗಸೃಷ್ಟಿಗೆ ಒತ್ತು ನೀಡುವುದು. 10.ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿ. 11.ರಸ್ತೆಗಳ ಗುಣಮಟ್ಟವನ್ನು ಹೆಚ್ಚಿಸುವುದು. 12.ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಸುವುದು ಮತ್ತು ವಿಳಂಬವಿಲ್ಲದೆ ಲಾನುಭವಿಗಳನ್ನು ತಲುಪಿಸುವುದು.

ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸಿದೆ. ಸ್ಪಷ್ಟ ಮತ್ತು ಸ್ವಚ್ಛ ವಿಚಾರಗಳ ಅಭ್ಯರ್ಥಿಗಳಿಗೆ, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಲು ಸಿದ್ಧವಾಗಿ ಇರುವವರಿಗೆ, ಸಚ್ಚಾರಿತ್ರ$್ಯ ಇರುವ ಅಭ್ಯರ್ಥಿಗಳಿಗೆ, ಸತ್ಯಪಥದಲ್ಲಿ ನಡೆಯಲು ಸಿದ್ಧವಾಗಿ ಇರುವವರಿಗೆ ಹಾಗೂ ಅಪಮಾನವನ್ನು ಸಹಿಸ ಬಲ್ಲಂಥವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ. |ಅಣ್ಣಾ ಹಜಾರೆ -ಸಾಮಾಜಿಕ ಕಾರ್ಯಕರ್ತರು