ಅಂಕಣ

ವೈರಸ್ ಸಮಸ್ಯೆ ನಿವಾರಣೆಗೆ ಯಾವ ಕಷಾಯ ಉತ್ತಮ?

Webdesk - Ravikanth
ಕೆಲದಿನಗಳಿಂದ ನೆಗಡಿ, ಕಫ, ಜ್ವರ, ಕೆಮ್ಮಿನ ಸಮಸ್ಯೆಗಳನ್ನು ಅನುಭವಿಸುತ್ತಿಲ್ಲ ಎನ್ನುವವರೇ ಇಲ್ಲ ಎಂಬಂತಾಗಿದೆ. ಇದಕ್ಕೆ ಈಗ ಹರಡುತ್ತಿರುವ ವೈರಸ್ ಕೂಡ ಕಾರಣವಾಗಿದೆ. ಎಲ್ಲರಿಗೂ ತಿಳಿದಂತೆ ಅಮೃತಬಳ್ಳಿ ಅತ್ಯದ್ಭುತ ವೈರಸ್ ನಿರೋಧಕ ಗುಣವನ್ನು ಹೊಂದಿರುವಂಥದ್ದು. ನೆಗಡಿ, ಕಫ, ಕೆಮ್ಮು, ಜ್ವರ ಮತ್ತು ವೈರಸ್​ನಿಂದ ಎಲ್ಲರೂ ಸಮಸ್ಯೆ ಅನುಭವಿಸುತ್ತಿರುವ ಈ ಕಾಲದಲ್ಲಿ ಕೆಲದಿನಗಳ ಕಾಲ ಅಮೃತಬಳ್ಳಿ ಕಷಾಯವನ್ನು ಉಪಯೋಗಿಸುವುದು ಒಳ್ಳೆಯದು. ಹೆಸರೇ ಹೇಳುವಂತೆ ಅಮೃತಬಳ್ಳಿ ನಮ್ಮ ದೇಹದ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ವಿಶೇಷವಾಗಿ ವೈರಸ್ ಸೋಂಕಿನ ಕಾರಣದಿಂದ ಆಗುವ ಜ್ವರ, ಲಿವರ್​ನ ಸಮಸ್ಯೆಗಳು, ಚರ್ಮದ ಸಮಸ್ಯೆಗಳು ಮತ್ತು ಬಹುತೇಕ ಎಲ್ಲಾ ರೀತಿಯ ವೈರಸ್​ನಿಂದ ಉಂಟಾಗುವ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಅಮೃತ ಬಳ್ಳಿಗೆ ಇದೆ.

ನಿಮ್ಮ ಕಿರುಬೆರಳಿನ ತುದಿಯ ಗಂಟಿನಷ್ಟು ದೊಡ್ಡದಾದ ಅಂದರೆ ಸುಮಾರು ಎರಡು ಇಂಚು ಉದ್ದದ ಅಮೃತಬಳ್ಳಿಯನ್ನು ತಂದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದಕ್ಕೆ ಎರಡು ಲೋಟ ನೀರು ಹಾಕಿ ಸಣ್ಣ ಉರಿಯಲ್ಲಿ ಅರ್ಧ ಲೋಟಕ್ಕೆ ಬತ್ತಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತುಂಬಾ ಪ್ರಯೋಜಕ. ಇದಕ್ಕೆ ಉಷ್ಣ ಗುಣವಿರುವ ಕಾರಣ ಅತಿಯಾಗಿ ಸೇವಿಸಿದರೆ ಉಷ್ಣದಿಂದ ಆಗುವ ಕೆಲವು ಚಿಕ್ಕ ಪುಟ್ಟ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ಹಾಗಾಗಿ ಹತ್ತು-ಹನ್ನೆರಡು ದಿನಗಳಿಗಿಂತ ಹೆಚ್ಚು ಕಾಲ ಅಮೃತ ಬಳ್ಳಿಯ ಕಷಾಯದ ಸೇವನೆಯನ್ನು ಮಾಡು ವುದು ಸರಿಯಲ್ಲ. ಮಧ್ಯಾಹ್ನ ಊಟದ ಒಂದು ತಾಸು ಮೊದಲು ಜೇಷ್ಠಮಧುವಿನ ಕಷಾಯವನ್ನು ಸೇವಿಸಿದರೆ ಅದು ವೈರಸ್ ನಿರೋಧಕವಾಗಿಯಷ್ಟೇ ಅಲ್ಲದೇ ಅಸಿಡಿಟಿ, ಗಂಟಲು ಉರಿ, ಚರ್ಮದ ಸಮಸ್ಯೆಗಳು ಮುಂತಾದವುಗಳನ್ನು ನಿಯಂತ್ರಣದಲ್ಲಿಡುತ್ತದೆ. ಅರ್ಧ ಚಮಚ ಜೇಷ್ಠಮಧುವಿನ ಪುಡಿಯನ್ನು ನೀರಿಗೆ ಹಾಕಿ ಸೇವಿಸಿದರೆ ಒಣಕೆಮ್ಮು, ಹೊಟ್ಟೆಯಲ್ಲಿ ಉರಿ, ಮತ್ತು ಜ್ವರ-ನೆಗಡಿ ಆದಾಗ ಸೇವಿಸಿದ ಉಳಿದ ಔಷಧಗಳಿಂದ ಆದ ಉಷ್ಣತೆಯನ್ನು ಹತೋಟಿಗೆ ತರುತ್ತದೆ. ಕಫದ ಸಮಸ್ಯೆಗಳು ಇಲ್ಲದಿದ್ದಾಗ ಕೇವಲ ರೋಗನಿರೋಧಕ ಶಕ್ತಿಯ ವೃದ್ಧಿಗಾಗಿ ಜೇಷ್ಠಮಧುವಿನ ಬಳಕೆಯನ್ನು ಮಾಡುವುದಾದರೆ ಒಂದು ಚಮಚ ಜೇಷ್ಠಮಧುವಿನ ಪುಡಿಗೆ ಒಂದು ಲೋಟ ಹಾಲು, ಮೂರು ಲೋಟ ನೀರು ಹಾಕಿ ಸಣ್ಣ ಬೆಂಕಿಯಲ್ಲಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಸೇವಿಸುವುದು ಒಳ್ಳೆಯದು. ಇದರಿಂದ ಮಧ್ಯಾಹ್ನದ ಸಮಯದಲ್ಲಿ ಆಗುವ ಹೊಟ್ಟೆ ಉರಿ, ಸಂಕಟದಂತಹ ತೊಂದರೆಗಳು ಕೂಡಾ ನಿವಾರಣೆಯಾಗುತ್ತವೆ.

ನೆಲನೆಲ್ಲಿ ಮತ್ತು ಭದ್ರಮುಷ್ಟಿ ಎಂಬ ಎರಡು ಗಿಡಮೂಲಿಕೆಗಳು ಕೂಡ ವೈರಸ್ ನಿರೋಧಕ ಶಕ್ತಿಯನ್ನು ಹೊಂದಿರುವಂಥವು. ತಲಾ ಅರ್ಧ ಚಮಚದಷ್ಟು ನೆಲನೆಲ್ಲಿ ಮತ್ತು ಭದ್ರ ಮುಷ್ಟಿಯನ್ನು ತೆಗೆದುಕೊಂಡು ಎರಡು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಬತ್ತಿಸಿ ಸಂಜೆ ಊಟದ ಮೊದಲು ಸೇವಿಸುವುದರಿಂದ ನೆಗಡಿ, ಜ್ವರದಂತಹ ಸಮಸ್ಯೆಗಳು ಕಡಿಮೆಯಾಗುವುದಲ್ಲದೇ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ಆಮಶಂಕೆ, ಐಬಿಎಸ್, ಚರ್ಮರೋಗದಂತಹ ತೊಂದರೆಗಳು ನಿವಾರಣೆಯಾಗುತ್ತವೆ. ವಿಶೇಷವಾಗಿ ಲಿವರ್​ಗೆ ತೊಂದರೆ ಕೊಡುವ ವೈರಸ್​ಗಳನ್ನು ಇವು ನಾಶಪಡಿಸುತ್ತವೆ. ಇವೆಲ್ಲಾ ವೈಜ್ಞಾನಿಕ ಸಂಶೋಧನೆಗಳಿಂದಲೂ ಸಾಬೀತಾಗಿರುವ ವಿಷಯಗಳು. ಈ ಗಿಡಮೂಲಿಕೆಗಳೆಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ದೊರೆಯುವಂಥವು. ಗಂಟಲು ನೋವು, ಮೂಗು ಕಟ್ಟುವುದು ಮತ್ತು ನೆಗಡಿಯ ಸಮಸ್ಯೆಗಳು ಹೆಚ್ಚಾಗಿರುವ ಈ ಕಾಲದಲ್ಲಿ ಕೆಲದಿನಗಳ ಕಾಲ ಜಲನೇತಿಯನ್ನು ನಿತ್ಯವೂ ಅಭ್ಯಾಸ ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಆ ನೀರನ್ನು ಜಲನೇತಿಗೆ ಬಳಸಬೇಕು. ನಂತರ ಒಂದೆರಡು ನಿಮಿಷ ಕಪಾಲಭಾತಿ ಪ್ರಾಣಾಯಾಮವನ್ನು ಮಾಡಬೇಕು. ಇದು ಮೂಗಿನ ಮತ್ತು ಬಾಯಿಯ ಮೂಲಕ ಪ್ರವೇಶಿಸುವ ವೈರಸ್​ಗಳ ನಿಯಂತ್ರಣಕ್ಕೆ ಸಹಕಾರಿ. ವೈರಸ್ ನಿರೋಧಕ ಗಿಡಮೂಲಿಕೆಗಳ ಸಾರವನ್ನು ಬಳಸಿ ತಯಾರಿಸಿದ ಕೆಲವು ಔಷಧಗಳು ಕೂಡ ನೆಗಡಿ, ಕಫ, ಜ್ವರದ ಸಮಸ್ಯೆಗಳನ್ನು ಹತೋಟಿಗೆ ತಂದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೇಷ್ಠಮಧು, ನೆಲನೆಲ್ಲಿ, ಕಿರಾತಕಡ್ಡಿ, ಅಮೃತಬಳ್ಳಿ, ನೆಲಬೇವು ಮೊದಲಾದ ದ್ರವ್ಯಗಳನ್ನು ಬಳಸಿ ತಯಾರಿಸಿದ ಇಮ್ಯೂನ್ ಏಡ್ ನಂತಹ ಮಾತ್ರೆಗಳಿಂದ ವೈರಸ್, ಬ್ಯಾಕ್ಟೀರಿಯಾ ಮುಂತಾದವುಗಳಿಂದ ಬಂದ ತೊಂದರೆಗಳು, ನೆಗಡಿ, ಕೆಮ್ಮುಗಳ ನಿವಾರಣೆ ಶೀಘ್ರವಾಗಿ ಆಗುವುದನ್ನು ನಾವು ಕಂಡುಕೊಂಡಿದ್ದೇವೆ.

ಒಟ್ಟಿನಲ್ಲಿ ಸರಿಯಾದ ತಿಳುವಳಿಕೆಯಿಂದ ಆಯುರ್ವೆದದಲ್ಲಿ ಹೇಳಿದ ಗಿಡಮೂಲಿಕೆಗಳನ್ನು ಬಳಸಿದರೆ ಇಂತಹ ಸಂದರ್ಭಗಳಲ್ಲಿ ತುಂಬಾ ಅನುಕೂಲವಾಗುತ್ತದೆ ಎಂಬುದಂತೂ ಅಪ್ಪಟ ಸತ್ಯ.