ಅಂಕಣ

ಭಾರತ ನಿಜಕ್ಕೂ ಎತ್ತ ಸಾಗುತ್ತಿದೆ? ಇಂದಿನ ಭಾರತದ ನಿಜವಾದ ಮುಖ ಯಾವುದು? | ಭಾಗ-1

ಇಂದು ರಾಜಕೀಯ ನೇತಾರರು, ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಹಾಗೂ ತಥಾಕಥಿತ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾರತದ ಕುರಿತಾಗಿ ಪರಸ್ಪರ ವೈರುಧ್ಯಮಯ ಚಿತ್ರಗಳನ್ನು ಜಗತ್ತಿಗೆ ನೀಡುತ್ತಿದ್ದಾರೆ. ಇಲ್ಲಿ ಸತ್ಯವೂ ಇದೆ, ಮಿಥ್ಯವೂ ಇದೆ. ಈ ಗೊಂದಲದಲ್ಲಿ ಈ ದೇಶವೆಂದರೆ ಇಂದು ಏನು ಎನ್ನುವ ಸ್ಪಷ್ಟ ಚಿತ್ರಣ ಸುಲಭವಾಗಿ ನಿಲುಕದಾಗಿದೆ. ಇಂತಹ ಸನ್ನಿವೇಶದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸ್ಪಷ್ಟ ಚಿತ್ರಣ ಪಡೆದುಕೊಳ್ಳುವ ಒಂದು ಪ್ರಯತ್ನ ಎರಡು ಭಾಗಗಳ ಈ ಲೇಖನ.

ಮೊದಲಿಗೆ ಭಾರತದ ಅರ್ಥವ್ಯವಸ್ಥೆಯ ಕಿರುಪರಿಚಯ ಮಾಡಿಕೊಳ್ಳೋಣ. 2013-14ರಲ್ಲಿ ಯುಪಿಎಯಿಂದ ಎನ್​ಡಿಎಗೆ ಕೇಂದ್ರದಲ್ಲಿ ಅಧಿಕಾರ ಹಸ್ತಾಂತರವಾದಾಗ ಭಾರತದ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) 1.86 ಟ್ರಿಲಿಯನ್ ಡಾಲರ್​ಗಳಷ್ಟಿತ್ತು. ಸ್ವಾತಂತ್ರಾತರದ ಅರವತ್ತೇಳು ವರ್ಷಗಳಲ್ಲಿ ದೇಶ ಸಾಧಿಸಿದ್ದ ಆರ್ಥಿಕ ಪ್ರಗತಿ ಅಷ್ಟಿತ್ತು. ಅಂದು ಜಗತ್ತಿನ ಐದು ಅತ್ಯಂತ ಬಲಹೀನ ಅರ್ಥವ್ಯವಸ್ಥೆಗಳಲ್ಲೊಂದು ಎಂಬ ಹಣೆಪಟ್ಟಿ ಭಾರತಕ್ಕೆ ಅಂಟಿತ್ತು. ಇದು ಅರ್ಥಶಾಸ್ತ್ರಜ್ಞ-ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಹೆಮ್ಮೆ ತರುವಂತಹದೇನೂ ಆಗಿರಲಿಲ್ಲ. ನಂತರ ಎನ್​ಡಿಎ-2 ಆಡಳಿತದ ಮೊದಲ ಐದು ವರ್ಷಗಳು ಪೂರೈಸಿದಾಗ ಅಂದರೆ 2018-19ರಲ್ಲಿ 2.83 ಟ್ರಿಲಿಯನ್ ಡಾಲರ್​ಗಳಾಯಿತು. ಅಂದರೆ ಐದೇ ವರ್ಷಗಳಲ್ಲಿ ಸರಿಸುಮಾರು ಒಂದು ಟ್ರಿಲಿಯನ್ ಡಾಲರ್​ಗಳ ವೃದ್ಧಿ! ಇದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಾಭಾವನೆಯೂ ವೃದ್ಧಿಸಿ, 2025ರ ಹೊತ್ತಿಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್​ಗಳ ಅರ್ಥವ್ಯವಸ್ಥೆಯನ್ನಾಗಿಸುವ ಮಾತನ್ನು ಅವರು ಆಡಿದರು. ಆದರೆ ಕೋವಿಡ್ ಮಹಾಮಾರಿಯ ಪರಿಣಾಮವಾಗಿ ಇಡೀ ಜಗತ್ತು ತತ್ತರಿಸಿ ಜಾಗತಿಕ ಆರ್ಥಿಕ ಪ್ರಗತಿ ಕುಂಠಿತಗೊಂಡಾಗ ಭಾರತವೂ ಅದಕ್ಕೆ ಹೊರತಾಗಲಿಲ್ಲ. ಪರಿಣಾಮವಾಗಿ 2020-21ರಲ್ಲಿ ಜಿಡಿಪಿ 2.67 ಟ್ರಿಲಿಯನ್ ಡಾಲರ್​ಗಳಿಗೆ ಕುಸಿಯಿತು. ಆದರೆ ಚೀನಾ, ಜಪಾನ್, ಅಮೆರಿಕ ಮತ್ತು ಯೂರೋಪಿಯನ್ ಆರ್ಥಿಕ ದಿಗ್ಗಜಗಳು ಆರ್ಥಿಕ ದುಃಸ್ಥಿತಿಯಿಂದ ಹೊರಬರಲು ಹೆಣಗಾಡುತ್ತಿದ್ದಾಗ ಭಾರತ ಅಚ್ಚರಿ ಹುಟ್ಟಿಸುವ ಪ್ರಮಾಣದಲ್ಲಿ ಚೇತರಿಸಿಕೊಂಡು 2021-22ರಲ್ಲಿ 3.15 ಟ್ರಿಲಿಯನ್ ಡಾಲರ್​ಗಳ ಜಿಡಿಪಿ ದಾಖಲಿಸಿತು. 2022-23ರಲ್ಲಿ ಅದು ಇನ್ನಷ್ಟು ಮೇಲೇರಿ 3.39 ಟ್ರಿಲಿಯನ್ ಡಾಲರ್​ಗಳಾಯಿತು. ಇದೇ ನವೆಂಬರ್​ನಲ್ಲಿ ದೇಶದ ಜಿಡಿಪಿ 3.72 ಟ್ರಿಲಿಯನ್ ಡಾಲರ್​ಗಳನ್ನು ದಾಟಿದೆ. ಅಂದರೆ ಕೇವಲ ಒಂಬತ್ತು ವರ್ಷಗಳಲ್ಲಿ ಭಾರತದ ಜಿಡಿಪಿ ದುಪ್ಪಟ್ಟಾಗಿದೆ! ಈ ಸಾಧನೆಯ ಹಾದಿಯಲ್ಲಿ ನಮ್ಮ ದೇಶವು ಫ್ರಾನ್ಸ್, ಬ್ರಿಟನ್​ಗಳನ್ನು ಹಿಂದೆ ಹಾಕಿ ಜಗತ್ತಿನ ಐದನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದುನಿಂತಿದೆ. ಹತ್ತು ವರ್ಷಗಳ ಹಿಂದೆ ಜಗತ್ತಿನ ಐದು ಅತ್ಯಂತ ಬಲಹೀನ ಅರ್ಥವ್ಯವಸ್ಥೆಗಳಲ್ಲಿ ಒಂದು ಎಂಬ ಅವಮಾನಕರ ಸ್ಥಿತಿಯಲ್ಲಿದ್ದ ಭಾರತ ಇಂದು ಜಗತ್ತಿನ ಐದು ಅತಿ ಬಲಿಷ್ಠ ಅರ್ಥವ್ಯವಸ್ಥೆಗಳಲ್ಲೊಂದು ಎಂಬ ಧನಾತ್ಮಕ ಸ್ಥಿತಿಗೆ ತಲುಪಿರುವುದು ಭಾರತೀಯರು ಸಂತಸ ಪಡಬೇಕಾದ ಸಂಗತಿ. ಇಷ್ಟನ್ನು ಪ್ರಸಕ್ತ ಸರ್ಕಾರ ಸಾಧಿಸುತ್ತಲೇ 80 ಕೋಟಿ ಜನರಿಗೆ ಪುಕ್ಕಟೆಯಾಗಿ ಆಹಾರಧಾನ್ಯಗಳನ್ನು, ಮೂರು ಕೋಟಿ ಕುಟುಂಬಗಳಿಗೆ ಪಕ್ಕಾ ಗೃಹಗಳನ್ನು, ಹತ್ತು ಕೋಟಿ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ, ಹನ್ನೊಂದು ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವ್ಯವಸ್ಥೆಯನ್ನು ಕಲ್ಪಿಸಿ ಮತ್ತು ಹದಿಮೂರೂವರೆ ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವುದರೊಂದಿಗೆ! ಈ ಬಗೆಯ ಜಿಡಿಪಿ ವೃದ್ಧಿಯಾಗುವುದಕ್ಕೆ ಮತ್ತು ಜನಕಲ್ಯಾಣ ಕಾರ್ಯಯೋಜನೆಗಳಿಗೆ ಸರ್ಕಾರದ ಕೈಯಲ್ಲಿ ಹಣ ಸೇರುವುದಕ್ಕೆ ಮುಖ್ಯವಾಗಿ ಕಾರಣವಾಗುತ್ತಿರುವುದು ಮೋದಿಯವರ ಆತ್ಮನಿರ್ಭರ್ ಭಾರತ್ ಯೋಜನೆ ಮತ್ತು ಜಿಎಸ್​ಟಿ ವ್ಯವಸ್ಥೆ.

2013-14ರಲ್ಲಿ ಕರಗಳ ಮೂಲಕ ಸರ್ಕಾರ ಗಳಿಸಿದ್ದ ಆದಾಯ ಹನ್ನೊಂದು ಲಕ್ಷ ಕೋಟಿ ರೂಪಾಯಿಗಳು. ಅದೀಗ ಮೂವತ್ತು ಲಕ್ಷ ಕೋಟಿ ರೂಪಾಯಿಗಳಾಗಿವೆ! ಉತ್ಪಾದನೆ ಈ ಪ್ರಮಾಣದಲ್ಲಿ ವೃದ್ಧಿಯಾದ ಕಾರಣ ಸಹಜವಾಗಿಯೇ ಉದ್ಯೋಗಾವಕಾಶಗಳೂ ಹೆಚ್ಚಿವೆ. ಆದರೆ ಈ ಹೆಚ್ಚಳವನ್ನು ಹೆಚ್ಚುತ್ತಿರುವ ಜನಸಂಖ್ಯೆ ತಿಂದುಹಾಕುತ್ತಿದೆ. 2014ರಲ್ಲಿ 7.98% ಇದ್ದ ನಿರುದ್ಯೋಗ ಸೂಚ್ಯಾಂಕ ಇಂದು ಅತಿ ಕಡಿಮೆ ಪ್ರಗತಿ ಕಂಡು ಕೇವಲ 7.95%ಗಷ್ಟೇ ಇಳಿದಿರುವುದು ಇದನ್ನು ಢಾಳಾಗಿ ತೋರಿಸುತ್ತದೆ. ಆದರೆ ಸಮಾಧಾನ ನೀಡುವುದು ಬೆಲೆಯೇರಿಕೆಯ ಸೂಚ್ಯಾಂಕ. ಹತ್ತು ವರ್ಷಗಳ ಹಿಂದೆ 10.02% ಇದ್ದ ಅದು ಈಗ 5.55% ಇದೆ.

ಹೀಗೆ ಕೋವಿಡ್ ಮಹಾಮಾರಿಯ ಹೊಡೆತದಿಂದ ಚೇತರಿಸಿಕೊಂಡು ಮತ್ತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶದ ಅರ್ಥವ್ಯವಸ್ಥೆ ಪ್ರಧಾನಿ ಮೋದಿಯವರಲ್ಲಿ ಆಶಾಭಾವನೆ ಯನ್ನು ಮತ್ತೆ ಮೂಡಿಸಿದೆ. ತಮ್ಮ ಮೂರನೆಯ ಅಧಿಕಾರಾವಧಿಯಲ್ಲಿ ಭಾರತವನ್ನು ಜಗತ್ತಿನ 3ನೇ ದೊಡ್ಡ ಅರ್ಥವ್ಯವಸ್ಥೆಯಾಗಿಸುವುದಾಗಿ ಅವರು ಇತ್ತೀಚೆಗಷ್ಟೇ ಸೂರತ್​ನಲ್ಲಿ ದೇಶಕ್ಕೆ ಆಶ್ವಾಸನೆ ನೀಡಿದ್ದಾರೆ. ಆದರೆ ಭಾರತೀಯ ಅರ್ಥವ್ಯವಸ್ಥೆ ದಾಪುಗಾಲಿಟ್ಟು ಸಾಗುತ್ತಿರುವ ವೇಗವನ್ನು ನೋಡಿದರೆ ಮೋದಿಯವರ ಪ್ರಸಕ್ತ ಅಧಿಕಾರಾವಧಿಯಲ್ಲೇ ಕ್ರಮವಾಗಿ 4.07 ಟ್ರಿಲಿಯನ್ ಡಾಲರ್ ಮತ್ತು 4.23 ಟ್ರಿಲಿಯನ್ ಡಾಲರ್ ಜಿಡಿಪಿ ಇರುವ ಜರ್ಮನಿ ಮತ್ತು ಜಪಾನ್​ಗಳನ್ನು ಹಿಂದೆ ಹಾಕಿ ಭಾರತ ಜಾಗತಿಕವಾಗಿ ಮೂರನೆಯ ಅತಿದೊಡ್ಡ ಅರ್ಥವ್ಯವಸ್ಥೆ ಯಾಗಬಹುದು ಎಂದೂ ನಾವು ಆಶಿಸಬಹುದಾಗಿದೆ.

ಇಷ್ಟಾಗಿಯೂ ನಾವು ಚಿಂತಿಸಬೇಕಾದ ವಿಷಯವೆಂದರೆ ದೇಶದ ಪ್ರಸಕ್ತ ಋಣಬಾಧೆ. ಇದೇ ಮಾರ್ಚ್​ನಲ್ಲಿ ಭಾರತದ ವಿದೇಶಿ ಸಾಲ 624 ಬಿಲಿಯನ್ ಡಾಲರ್​ಗಳಿತ್ತು. ಇದು ದೇಶದ ಜಿಡಿಪಿಯ 18.9%! ಋಣ ಈ ಪ್ರಮಾಣದಲ್ಲೇ ಮುಂದುವರಿಯುವುದು ದೂರಗಾಮಿಯಾಗಿ ಒಳ್ಳೆಯದಲ್ಲ. ವೃದ್ಧಿಸುತ್ತಿರುವ ಜಿಡಿಪಿ ಹಾಗೂ ಸಂಗ್ರಹವಾಗುತ್ತಿರುವ ಕರದ ನೆರವಿನಿಂದ ಮೋದಿ ಸರ್ಕಾರ ಈ ಋಣಬಾಧೆಯನ್ನು ಕುಗ್ಗಿಸಿಕೊಳ್ಳುತ್ತದೆಂದು ಆಶಿಸಬಹುದು.

ಒಟ್ಟಾರೆ ದೇಶದ ಆರ್ಥಿಕ ಸ್ಥಿತಿ ನೆಮ್ಮದಿ ಉಂಟು ಮಾಡುವ ಮಟ್ಟದಲ್ಲೇ ಇದೆ. ಈ ಧನಾತ್ಮಕತೆಯನ್ನು ಹೀಗೇ ಕಾಪಾಡಿಕೊಂಡು ಹೋಗುವುದು ಸರ್ಕಾರದ್ದಷ್ಟೇ ಅಲ್ಲ, ನಮ್ಮ ರಾಜಕೀಯ ನೇತಾರರೂ ಸೇರಿದಂತೆ ಎಲ್ಲರ ಜವಾಬ್ದಾರಿ ಸಹಾ. ಆದರೆ ದೇಶದ ಪ್ರಗತಿಯನ್ನು ದೇಶದಲ್ಲಷ್ಟೇ ಅಲ್ಲ, ವಿದೇಶೀ ನೆಲದಲ್ಲೂ ನಗಣ್ಯಗೊಳಿಸುವುದರಲ್ಲಿ ಹಾಗೂ ಆರ್ಥಿಕ ಪ್ರಗತಿ ನಿಧಾನಗೊಳ್ಳುವಂತೆ ಮಾಡುವಲ್ಲಿ ದೇಶದೊಳಗಿನ ಕೆಲವು ಶಕ್ತಿಗಳೇ ಪ್ರಯತ್ನಿಸುತ್ತಿರುವ ಬೆಳವಣಿಗೆಗಳನ್ನು ನಾವೀಗ ಕಾಣುತ್ತಿದ್ದೇವೆ.

ತನ್ನ ಹೇಳಿಕೆಗಳು ಮತ್ತು ಕೃತ್ಯಗಳ ಮೂಲಕ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳಿಗೆ ಪ್ರೇರಣೆ ಹಾಗೂ ಸಹಕಾರ ನೀಡುವ ವ್ಯಕ್ತಿಯೆಂದು ಸ್ಪಷ್ಟವಾಗಿಯೇ ಗುರುತಿಸಲ್ಪಡುವ ಭಾರತ ಮೂಲದ ಪ್ರಸಕ್ತ ಅಮೆರಿಕ ಮತ್ತು ಕೆನಡಾ ದೇಶಗಳೆರಡರ ಪ್ರಜೆಯಾಗಿರುವ ಗುರುಪತ್ವಂತ್ ಸಿಂಗ್ ಪನ್ನೂ, ಸಂಸತ್ ದಾಳಿಯ ಇಪ್ಪತ್ತೆರಡನೆಯ ಸ್ಮರಣದಿನದಂದು ಮತ್ತೊಮ್ಮೆ ಭಾರತೀಯ ಸಂಸತ್ ಮೇಲೆ ದಾಳಿಯೆಸಗುವವರಿಗೆ ಒಂದು ನಿರ್ದಿಷ್ಟ ಮೊತ್ತದ ಹಣದ ಇನಾಮ್ ನೀಡುವ ಘೊಷಣೆ ಮಾಡಿ, ಕಾಕತಾಳೀಯವೆಂಬಂತೆ ಡಿಸೆಂಬರ್ 13ರಂದು ಸಂಸತ್​ನ ಒಳಗೆ ಮತ್ತು ಹೊರಗೆ ಅನುಚಿತ ಘಟನೆಗಳು ಘಟಿಸಿದ್ದನ್ನು ನಾವು ನೋಡಿದೆವು. ಒಳಗೆ ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ಸಭಾಭವನಕ್ಕೆ ಜಿಗಿದರೆ, ಅವರ ಸಹಯೋಗಿ ಮಹಿಳೆ ಸಂಸತ್​ನ ಹೊರಗೆ ನಿರುದ್ಯೋಗದಿಂದ ಬೆಲೆಯೇರಿಕೆಯವರೆಗೆ ಜನಸಾಮಾನ್ಯರ ಸಮಸ್ಯೆಗಳು, ಮಹಿಳಾ ಸುರಕ್ಷತೆಯಿಂದ ಮಣಿಪುರದವರೆಗೆ ಸರ್ಕಾರದ ವೈಫಲ್ಯಗಳು ಎಲ್ಲದರ ಕುರಿತಾಗಿ ಘೊಷಣೆ ಕೂಗಿದರು. ಇಪ್ಪತ್ತೆರಡು ವರ್ಷಗಳ ಹಿಂದಿನ ಪ್ರಕರಣದಂತೆ ಯಾರೊಬ್ಬರ ಜೀವಕ್ಕೂ ಹಾನಿ ತರಲಿಲ್ಲ. ಒಟ್ಟಿನಲ್ಲಿ ಅದು ಗಂಭೀರ ಭಯೋತ್ಪಾದನಾ ಕೃತ್ಯವಾಗಿರಲಿಲ್ಲ ಎನ್ನುವುದು ಸಮಾಧಾನದ ಸಂಗತಿ. ಆದಾಗ್ಯೂ, ಈ ಯುವಜನರ ಕೃತ್ಯಗಳು, ನಂತರ ಅವರ ಪರವಾಗಿ, ಅವರ ನೆಪದಲ್ಲಿ ಕೇಂದ್ರ ಸರ್ಕಾರದ ವಿರುದ್ಧವಾಗಿ ಬಂದ ಹೇಳಿಕೆಗಳು ಮತ್ತು ಕಾಣಿಸಿಕೊಂಡ ನಡವಳಿಕೆಗಳು ಈ ಬಾರಿಯ ಡಿಸೆಂಬರ್ 13ನ್ನು ರಾಷ್ಟ್ರೀಯ ಸುರಕ್ಷೆಯ ದೃಷ್ಟಿಯಿಂದ ಮಹತ್ವದ್ದನ್ನಾಗಿಸುತ್ತವೆ, ಗಂಭೀರವಾಗಿ ಯೋಚಿಸಲು ಪ್ರಜ್ಞಾವಂತ ಭಾರತೀಯರನ್ನು ಪ್ರೇರೇಪಿಸುತ್ತವೆ.

ಸಂಸತ್​ನ ಹೊರಗೆ ಉಚ್ಚ ಕಂಠದಲ್ಲಿ ಘೊಷಗಳನ್ನು ಕೂಗುತ್ತಿದ್ದ ಮಹಿಳೆ ನೀಲಮ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ, ತಾನು ಮತ್ತು ತನ್ನ ಸಹಚರರು ಯಾವುದೇ ಸಂಘಟನೆಗೆ ಸೇರಿದವರಲ್ಲ ಎಂದು ಹೇಳಿದ್ದು ಸತ್ಯದೂರ ಎನ್ನುವುದು ಕೆಲವೇ ತಾಸುಗಳಲ್ಲಿ ಸಾಬೀತಾಯಿತು. ಭೌಗೋಳಿಕವಾಗಿ ಪರಸ್ಪರ ದೂರದ, ವಿಭಿನ್ನ ಭಾಷೆಗಳ, ವಿಭಿನ್ನ ವೃತ್ತಿಗಳು ಒಟ್ಟುಗೂಡಿ ಒಂದೇ ಕೃತ್ಯವನ್ನು ಎಸಗಿದ್ದಾರೆ ಎನ್ನುವುದು ಅವರೆಲ್ಲರೂ ಸಂಘಟನೆಯೊಂದರ ಮೂಲಕ ಹತ್ತಿರವಾಗಿದ್ದಾರೆ ಎನ್ನುವುದನ್ನು ಸೂಚಿಸಿತು. ಮೊದಲಿನ ಆ ನಾಲ್ವರ ಜತೆ ನಂತರ ಬಯಲಿಗೆ ಬಂದ ಇನ್ನೂ ನಾಲ್ವರು ಊರು-ಭಾಷೆ, ವೃತ್ತಿ-ಪ್ರವೃತ್ತಿಗಳ ವಿಭಿನ್ನತೆಗಳನ್ನು ಇನ್ನಷ್ಟು ವಿಸ್ತರಿಸಿದ್ದು, ತಮ್ಮ ಕೃತ್ಯಕ್ಕಾಗಿ ಅವರು ಒಂದೂವರೆ-ಎರಡು ವರ್ಷಗಳಿಂದ ತಯಾರಿ ನಡೆಸಿದ್ದು, ಅದಕ್ಕಾಗಿ ಮತ್ತೆಮತ್ತೆ ಭೇಟಿಯಾದದ್ದು ಅವರ ಸಂಘಟನೆಯ ಇತಿಹಾಸ, ಸ್ವರೂಪ ಹಾಗೂ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿತು ಮತ್ತು ಪ್ರಕರಣದ ಆಮೂಲಾಗ್ರ ಶೋಧನೆಗೆ ತನಿಖಾ ಸಂಸ್ಥೆಗಳನ್ನು ಪ್ರೇರೇಪಿಸಿತು. ಸಂಚಿನ ಪಾತ್ರಧಾರಿಗಳೆಲ್ಲರ ಫೋನ್​ಗಳನ್ನು ಸಂಚಿನ ಪ್ರಮುಖ ವ್ಯಕ್ತಿಗಳಲ್ಲೊಬ್ಬರಾದ ಲಲಿತ್ ಝಾ ನಾಶಮಾಡಿದರೂ ಸಿಮ್ಳ ನಕಲುಗಳು ಸೃಷ್ಟಿಯಾಗಿವೆ ಮತ್ತು ಅವುಗಳ ಮೂಲಕ ಸಂಚುಗಾರರ ಸಂಪರ್ಕಜಾಲದ ವಿವರವೂ ತನಿಖಾ ತಂಡಗಳಿಗೆ ಸಿಗತೊಡಗಿದೆ. ಜತೆಗೆ ಬಹುತೇಕ ಸಂಚುಗಾರರ ಮಂಪರು ಪರೀಕ್ಷೆಯೂ ನಡೆದಿದ್ದು ಸೂಕ್ಷ ್ಮ ಮಾಹಿತಿಗಳೂ ತನಿಖಾ ತಂಡಗಳ ಕೈಗೆ ಬಿದ್ದಿವೆ. ಅವುಗಳನ್ನು ಈಗಲೇ ಬಹಿರಂಗಗೊಳಿಸುವುದು ತನಿಖೆಗೆ ತೊಡಕುಂಟುಮಾಡಬಹುದಾದ ಕಾರಣ ತನಿಖಾ ತಂಡಗಳು ಆ ಕ್ರಮಕ್ಕೆ ಮುಂದಾಗಿಲ್ಲ.

ಪ್ರಸಕ್ತ ಸಂಸತ್ ದಾಳಿಯ ಸಂಚುಗಾರರ ಪರವಾಗಿ ದನಿಯೆತ್ತಿದ ವ್ಯಕ್ತಿಗಳಲ್ಲಿ ಸ್ಥಾನದ ದೃಷ್ಟಿಯಿಂದ ರಾಹುಲ್ ಗಾಂಧಿ ಪ್ರಮುಖರಾದವರು. ಇಂತಹ ಕೃತ್ಯಗಳಿಗೆ ಕಾರಣ ಮೋದಿ ಸರ್ಕಾರದ ನೀತಿಗಳು ಮತ್ತು ಅದರಿಂದಾಗಿ ಹೆಚ್ಚಾಗಿರುವ ನಿರುದ್ಯೋಗ ಸಮಸ್ಯೆ ಎಂದವರು ಹೇಳಿದರು. ಆದರೆ ಅವರ ತೀರ್ಮಾನ ಸರಿಯಾದುದಲ್ಲ ಎನ್ನುವುದರ ಕುರಿತಾಗಿನ ವಿವರಗಳು ಅಷ್ಟರಲ್ಲಾಗಲೇ ಬಯಲಾಗಿದ್ದವು. ಹರಿಯಾಣಾದ ಜಿಂದ್​ನ ನಿವಾಸಿಯಾದ ನೀಲಮ್ ನಲವತ್ತೆರಡರ ಮಹಿಳೆ, ಎಂಎ, ಎಂ.ಫಿಲ್, ಬಿಎಡ್, ಎಂಎಡ್ ಪದವಿಗಳನ್ನು ಗಳಿಸಿ ಅಧ್ಯಾಪಕ ವೃತ್ತಿಗೆ ರಹದಾರಿಯಾದ ರಾಷ್ಟ್ರೀಯ ಯೋಗ್ಯತಾ ಪರೀಕ್ಷೆ ಅರ್ಥಾತ್ ನೆಟ್​ನಲ್ಲೂ ತೇರ್ಗಡೆಯಾಗಿರುವ ಈಕೆಗೆ ಉದ್ಯೋಗ ಪಡೆದುಕೊಳ್ಳುವುದೇನೂ ಕಷ್ಟವಾಗಿರಲಿಲ್ಲ. ಈಕೆಯ ನಿರುದ್ಯೋಗ ಸ್ವಇಚ್ಛೆಯಿಂದಾದದ್ದು. ಅಷ್ಟೆಲ್ಲ ಯೋಗ್ಯತೆಗಳನ್ನು ಗಳಿಸಿಕೊಂಡಿದ್ದರೂ ಈಕೆ ತಥಾಕಥಿತ ಕಿಸಾನ್ ಆಂದೋಲನದಿಂದ ಹಿಡಿದು ಜಂತರ್​ವುಂತರ್​ನಲ್ಲಿ ಪೈಲ್ವಾನರ ಮುಷ್ಕರದವರೆಗೆ ವಿವಿಧ ಆಂದೋಲನಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ, ಭಾಷಣ ನೀಡುವುದರಲ್ಲಿ ಆಸಕ್ತಿ ತೋರಿದ್ದರು. ಜತೆಗೆ ಕಾಂಗ್ರೆಸ್ ಪರವಾಗಿ ಮತಯಾಚನೆಯಲ್ಲೂ ತೊಡಗಿದ್ದರ ಸಾಕ್ಷ್ಯಗಳೂ ಹೊರಬಿದ್ದಿವೆ. ಅಲ್ಲದೆ ಮೂರು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಇವರಿಗೆ ಆದಾಯಕ್ಕಾಗಿ ನಿಶ್ಚಿತ ಉದ್ಯೋಗದ ಅಗತ್ಯವೂ ಇದ್ದಿರಲಾರದೇನೋ. ಇಂತಹದೇ ಸ್ವಇಚ್ಛಾಪೂರ್ಣ ‘ನಿರುದ್ಯೋಗ’ಕ್ಕೆ ಮತ್ತೊಂದು ಉದಾಹರಣೆ ಇಡೀ ಕಾರಸ್ಥಾನದ ಮುಖ್ಯ ವ್ಯಕ್ತಿ ಎಂದು ಈಗ ಬಿಂಬಿತವಾಗುತ್ತಿರುವ ಡಿ. ಮನೋರಂಜನ್. ಸಾಫ್ಟ್​ವೇರ್ ಉದ್ಯೋಗಿಯಾಗಿದ್ದು 80,000 ರೂಪಾಯಿಗಳಷ್ಟು ಸಂಬಳ ಪಡೆಯುತ್ತಿದ್ದ ಇವನು ಅದನ್ನು ಒದ್ದು ಸರಿಸಿದ್ದಾನಂತೆ. ಅಂದರೆ ರಾಹುಲ್ ಗಾಂಧಿಯವರು ಬಣ್ಣಿಸುವ ಇವರ ನಿರುದ್ಯೋಗವೂ ಸ್ವಇಚ್ಛೆಯದೇ. ಅಲ್ಲದೆ, ಈ ಸಂಚಿನ ಎಲ್ಲರೂ ದೇಶದೊಳಗೇ ವಿವಿಧೆಡೆಗೆ ಮತ್ತೆಮತ್ತೆ ಪಯಣಿಸಿರುವುದು ಮತ್ತು ಕೆಲವರು ಕೆಲವಾರು ವಿದೇಶಯಾತ್ರೆಗಳನ್ನೂ ಕೈಗೊಂಡಿರುವುದು ಇವರು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರೇ ಎಂದೂ ತೋರಿಸುತ್ತದೆ. ಆದರೆ ಈ ಬಗೆಯ ಸ್ವಇಚ್ಛಾ ನಿರುದ್ಯೋಗ ಅಥವಾ ಕಾನೂನುಬಾಹಿರ ‘ಉದ್ಯೋಗ’ವನ್ನು ಮೋದಿಯವರ ತಲೆಗೆ ಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಹುಲ್ ಗಾಂಧಿ ಮತ್ತವರ ಸಹವರ್ತಿಗಳು ಪ್ರಯತ್ನಿಸುತ್ತಿರುವುದು ಏಕೆ?

(ಮುಂದುವರಿಯುವುದು) (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)