ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸೈಕಲ್ಲಿನಲ್ಲಿ ಶಾಲೆಗೆ ಹೋಗುತ್ತಿದ್ದೆ. ಮಧ್ಯಾಹ್ನ ಊಟಕ್ಕೆ ಮನೆಗೆ ಬರುವ ರಸ್ತೆಯಲ್ಲಿ ಕೆಲ ಹೋಟೆಲ್ಲುಗಳಿದ್ದವು. ಒಂದು ಶಾಖಾಹಾರಿ ಮಿಲಿಟರಿ ಹೋಟೆಲ್ ಆಗಿದ್ದರೆ ಇನ್ನೊಂದು ಪಕ್ಕಾ ಸಸ್ಯಾಹಾರಿ ಉಡುಪಿ ಹೋಟೆಲ್ಲು. ಇದರ ನಡುವೆ ಕೆಲ ತಳ್ಳುಗಾಡಿಯ ಬಡವರ ಬಂಧು ಕ್ಯಾಂಟೀನುಗಳು ಬೇರೆ. ಪ್ರತಿಯೊಂದು ಹೋಟೆಲ್ಲಿನದ್ದು ಒಂದೊಂದು ವಿಶೇಷತೆ. ಒಬ್ಬನ ಬಿರ್ಯಾನಿ ಜನಪ್ರಿಯವಾಗಿದ್ದರೆ, ಇನ್ನೊಬ್ಬನದ್ದು ಬನ್ಸ್ ಭಾಜಿ, ಮತ್ತೊಬ್ಬನದ್ದು ಖಾಲಿ ದೋಸೆ. ನನ್ನ ಸೈಕಲ್ಲು ಒಂದೊಂದು ಅಂಗಡಿಯ ಮುಂದೆ ಹಾದು ಹೋಗುತ್ತಿದ್ದರೆ ಒಂದೊಂದು ಹೋಟೆಲ್ಲುಗಳ ರಸಪಾಕಗಳ ಪರಿಮಳಗಳು ಹೊಟ್ಟೆಯ ತಾಳದ ಜೊತೆಗೆ ಮನೆಯತ್ತ ತುಳಿಯುತ್ತಿದ್ದ ನನ್ನ ಪೆಡಲ್ಲಿನ ವೇಗವನ್ನು ಹೆಚ್ಚಿಸುತ್ತಿದ್ದವು. ಇದು ಪ್ರತಿದಿನದ ಪ್ರಕ್ರಿಯೆಯಾದ ಕಾರಣಕ್ಕೆ ಆ ಪಕ್ವಾನ್ನಗಳ ಪರಿಮಳಗಳು ಎಷ್ಟು ಚೆನ್ನಾಗಿ ಮನದಲ್ಲಿ ಅಚ್ಚಾಗಿದ್ದವೆಂದರೆ ಇಂದಿಗೂ ನನಗೆ ಬನ್ಸ್ ಭಾಜಿ, ಖಾಲಿ ದೋಸೆಯ ವಾಸನೆ ಹೈಸ್ಕೂಲಿನ ಆ ದಿನಗಳನ್ನು ನೆನಪಿಸುತ್ತವೆ.
ಇದು ನನ್ನದೊಬ್ಬನ ಅನುಭವವೇನಲ್ಲ. ವಾಸನೆಗಳು ನಮ್ಮ ಜೀವನದ ಅಮೂಲ್ಯಕ್ಷಣಗಳ ನೆನಪುಗಳೂ ಹೌದು, ನಮ್ಮತನದ ಕುರುಹುಗಳೂ ಹೌದು. ಬರಹಗಾರನೊಬ್ಬನಿಗೆ ಕೇಳಿ ನೋಡಿ ಆತನ ಮೊದಲ ಪುಸ್ತಕದ ಶಾಯಿಯ ತಾಜಾತನವನ್ನು ಅದೆಷ್ಟು ಬಾರಿ ಆಘ್ರಾಣಿಸಿ ಆನಂದಿಸಿರುತ್ತಾನೆ ಎಂದು. ನೀವು ಮಲೆನಾಡಿನವರಾಗಿದ್ದು ಶಹರದಲ್ಲಿ ಕೆಲಸ ಮಾಡುವವರಾಗಿದ್ದಲ್ಲಿ ಊರಿಗೆ ಬಂದಾಗ ತಾಮ್ರದ ಹಂಡೆಯ ನೀರನ್ನು ಕಾಯಿಸಲು ಸುಡುವ ಒಣ ಅಡಕೆಯ ಸಿಪ್ಪೆಗಳ ವಾಸನೆ ಬಾಲ್ಯದ ಅದೆಷ್ಟು ಮರೆಯಲಾಗದ ನೆನಪುಗಳನ್ನು ಹೊತ್ತು ತರುತ್ತವೆ ಎಂಬುದು ಅದನ್ನನುಭವಿಸಿದವರೇ ಹೇಳಬಲ್ಲರು. ಊರಿನಿಂದ ಕರ್ಮಭೂಮಿ ಕಾರವಾರಕ್ಕೆ ಬರುವಾಗ ಬಸ್ಸಿನ ಕಿಟಕಿಯ ಗ್ಲಾಸಿಗೆ ತಲೆಕೊಟ್ಟು ನಿದ್ದೆಹೋಗುವ ನನಗೆ ಗಾಳಿಯಲ್ಲಿ ತೇಲಿಬರುವ ಉಪ್ಪುಮಿಶ್ರಿತ ಮತ್ಸ ್ಯಂಧ ಕಾರವಾರದ ಆಗಮನವನ್ನು ಹೇಳಿ ಎಚ್ಚರಿಸುತ್ತಿತ್ತು. ಹೊಸಬರಿಗೆ ಇದು ಮೊದಲಿಗೆ ಕಷ್ಟವೆನಿಸಿದರೂ ನೀವೂ ನನ್ನಂತೆ ಮೀನುಮೈಂಡೆಡ್ ಆಗಿದ್ದಲ್ಲಿ ಖಂಡಿತ ಇದನ್ನು ಆನಂದಿಸುವಿರಿ.
ಅಷ್ಟಕ್ಕೂ ನಾವುಗಳು ಅದ್ಹೇಗೆ ವಾಸನೆಗಳನ್ನು ಆಘ್ರಾಣಿಸುತ್ತೇವೆ? ಅಸಲಿಗೆ ಈ ವಾಸನೆಯನ್ನುಂಟು ಮಾಡುವ ಅಣುಗಳು ತಮ್ಮ ಮೂಲದಿಂದ ಗಾಳಿಯ ಮೂಲಕ ತೇಲಿಬಂದು ನಮ್ಮ ಮೂಗಿನೊಳಗೆ ಪ್ರವೇಶಿಸುತ್ತವೆ. ಹೀಗೆ ನಮ್ಮ ಮೂಗನ್ನು ಪ್ರವೇಶಿಸಿದ ಅಣುಗಳು ಮೂಗಿನ ಹೊರಳೆಯ ದ್ವಾರದಲ್ಲಿರುವ ಕೂದಲುಗಳ ಮೂಲಕ ಹಾದು ಬರುವಾಗ ತಮ್ಮ ಜೊತೆ ತೇಲಿಬರುವ ಧೂಳು ಮತ್ತು ಕಲ್ಮಶಗಳನ್ನು ಅಲ್ಲೇ ಬಿಟ್ಟು ಬರುತ್ತವೆ. ಇಲ್ಲಿಂದ ಒಳಗೆ ಮೂಗಿನ ಒಳಭಾಗದಲ್ಲಿರುವ ಅಂಗಾಂಶದ ಸಂಪರ್ಕಕ್ಕೆ ಬರುತ್ತವೆ. ಆಲ್ಪಾಕ್ಟರಿ ಎಪಿಥೇಲಿಯಮ್ ಎಂದು ಹೇಳಲ್ಪಡುವ ಈ ಅಂಗಾಂಶದಲ್ಲಿ ಕೋಟಿಗಟ್ಟಲೇ ಸಂವೇದಕ ನ್ಯೂರಾನ್ನುಗಳಿವೆ. ಈ ಸಂವೇದಕಗಳು ವಾಸನೆಯನ್ನುಂಟು ಮಾಡುವ ಅಣುಗಳಿಂದ ವಾಸನೆಯನ್ನು ಗ್ರಹಿಸಿ ಅವುಗಳನ್ನು ಸಂದೇಶಗಳನ್ನಾಗಿ ಪರಿವರ್ತಿಸಿ ಮಿದುಳಿಗೆ ರವಾನಿಸುತ್ತವೆ. ಹೀಗೆ ಬಂದ ಸಂದೇಶಗಳನ್ನು ಮಿದುಳು ಸಂಸ್ಕರಿಸಿ ಆರ್ಥೈಸಿಕೊಳ್ಳುವ ಜೊತೆಗೆ ಅದು ಸಂದೇಶಗಳ ಭಿನ್ನತೆಯನ್ನು ತಿಳಿದುಕೊಂಡು ಅದು ಯಾವ ವಾಸನೆಯೆಂಬುದನ್ನೂ ಅರಿತುಕೊಳ್ಳುತ್ತವೆ. ಅಲ್ಲಿಗೆ ನಾವು ಆಘ್ರಾಣಿಸುವ ವಾಸನೆಗಳು ಸ್ಥಳೀಯವಾಗಿ ಜರುಗುತ್ತಿರುವ ಚಟುವಟಿಕೆಗಳ ಮೇಲೆ ನಿರ್ಭರವಾಗಿರುತ್ತದೆ ಎಂದಾಯಿತಲ್ಲವೇ. ಹೀಗಾಗಿಯೇ ದೂರದಲ್ಲೆಲ್ಲೋ ಕಡಲಿನ ಮರಳಿನ ಮೇಲೆ ಸನ್ ಬಾತ್ ಮಾಡುತ್ತಿರುವ ಒಣಮೀನುಗಳು ಆ ಊರಿನ ಇನ್ಯಾವುದೋ ಮೂಲೆಯ ರಸ್ತೆಯವರೆಗೆ ತಮ್ಮ ಮತ್ಸ ್ಯಂಧವನ್ನು ಹರಡುತ್ತವೆ. ಮತ್ಯಾವುದೋ ಊರಿನ ಹೂವಿನ ಮಾರುಕಟ್ಟೆಯಲ್ಲಿ ಮಾರಲಿಟ್ಟಿರುವ ಹೂವುಗಳ ಘಮ ಆ ಊರಿನ ತುಂಬ ತಮ್ಮ ಸುವಾಸನೆಯನ್ನು ಪಸರಿಸಿರುತ್ತವೆ. ಇನ್ಯಾವುದೋ ಊರಿನಲ್ಲಿ ಜರುಗುತ್ತಿರುವ ಕಬ್ಬಿನ ಕಟಾವು, ಬೆಲ್ಲದ ಗಾಣಗಳು ಆ ಊರಿಗೆ ಸಕ್ಕರೆಯ ನಾಡೆಂಬ ಬಿರುದನ್ನು ತಂದುಕೊಡುತ್ತವೆ.
ಇವೆಲ್ಲವುದರ ಜೊತೆಗೆ ಇಲ್ಲಿ ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ವಾಸನೆಯನ್ನು ಉಂಟುಮಾಡುವ ಅಣುವೊಂದು ತನ್ನ ಸುತ್ತಮುತ್ತಲಿನಲ್ಲಿ ಇರುವ ವಾತಾವರಣದ ಶುಷ್ಕತೆ, ಒತ್ತಡ, ಜೊತೆಗೆ ಗಾಳಿಯಲ್ಲಿರುವ ಇತರ ರಾಸಾಯನಿಕಗಳ ಲಭ್ಯತೆ ಬದಲಾದಂತೆ ಬೇರೆ ರೀತಿಯ ಕಂಪು ಸೂಸುತ್ತದೆ. ಅಂದರೆ ನಾವು ಆಘ್ರಾಣಿಸುವ ಕಂಪನ್ನು ನಾವುಗಳು ಅನುಭವಿಸುವ ರೀತಿ ನಮ್ಮ ಸುತ್ತಮುತ್ತಲಿನ ವಾತಾವರಣದ ಮೇಲೆಯೂ ಹೆಚ್ಚು ನಿರ್ಭರವಾಗಿದೆ.
ಕಾಲ ಬದಲಾಗುತ್ತಿದ್ದಂತೆಲ್ಲ ನಮ್ಮ ಚಟುವಟಿಕೆಗಳೂ ಬದಲಾಗುತ್ತಿವೆ. ಈ ಬದಲಾಗುತ್ತಿರುವ ಚಟುವಟಿಕೆಗಳ ಜೊತೆಗೆ ಹೊಂದಿಕೊಂಡಿದ್ದ ವಾಸನೆಗಳು ಕಾಣೆಯಾಗುತ್ತಿವೆ ಎಂಬುದು ಪರಿಣತರ ಅಂಬೋಣ. ಇಂತಹ ಅಪೂರ್ವ ವಾಸನೆಗಳನ್ನು ಕಾಪಿಟ್ಟುಕೊಳ್ಳುವ ಪ್ರಯತ್ನವೊಂದು ಇದೀಗ ನಡೆಯುತ್ತಿದೆ. ಲಂಡನ್ ಮೂಲದ UCL institute of cultural heritage ಅಂದರೆ ಸುಸ್ಥಿರ ಪರಂಪರೆ ವಿದ್ಯಾಲಯದ ಸಂಶೋಧಕರ ತಂಡವೊಂದು ಕಣ್ಮರೆಯಾಗುತ್ತಿರುವ ಅಪರೂಪದ ವಾಸನೆಗಳನ್ನು ಸಂರಕ್ಷಿಸಲು ಶ್ರಮಿಸುತ್ತಿದೆ.
ಆ ತಂಡವೇ ಹೇಳುವಂತೆ ನಾವುಗಳು ದೃಶ್ಯ ಮಾಧ್ಯಮಕ್ಕೆ ಕೊಡುವಷ್ಟು ಪ್ರಾಮುಖ್ಯ ಉಳಿದ ಮಾಧ್ಯಮಗಳಿಗೆ ಕೊಡುತ್ತಿಲ್ಲ. ಉದಾಹರಣೆಗೆ, ನಮ್ಮ ವಾಚನಾಲಯದ ಕಪಾಟುಗಳಿಂದ ಹಳೆಯ ಪುಸ್ತಕಗಳು ಹೊರತೆಗೆದಾಗ ಸೂಸುತ್ತಿದ್ದ ಧೂಳುಮಿಶ್ರಿತ ತೇವದ ವಾಸನೆ ಹೊಸಜಮಾನಾದ ಹವಾನಿಯಂತ್ರಿತ ವಾಚನಾಲಯದಲ್ಲಿ ಕಂಡುಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಆದ ಮೇಲಂತೂ ಇಂತಹ ವಾಸನೆಗಳ ಅಸ್ತಿತ್ವದ ಬಗ್ಗೆ ಹೊಸಪೀಳಿಗೆಗೆ ಗೊತ್ತೇ ಇರುವುದಿಲ್ಲ. ನಾವು ಹಳೆಯ ಕೋಟೆಯೊಂದನ್ನು ‘ಪಾರಂಪರಿಕ ತಾಣ’ವೆಂದು ಕಾಪಿಡಲು ಸಾಕಷ್ಟು ವೆಚ್ಚ ಮತ್ತು ಶ್ರಮವನ್ನು ತೊಡಗಿಸುತ್ತೇವೆ. ಅದೇ ನಮ್ಮ ನೆನಪಿನಿಂದ ಜಾರುತ್ತಿರುವ ಇಂತಹ ಅಪೂರ್ವ ವಾಸನೆಗಳನ್ನೂ ಕಾಪಿಟ್ಟುಕೊಳ್ಳುವ ಕುರಿತು ಯಾರೂ ಯೋಚಿಸುತ್ತಿಲ್ಲ ಎಂಬುದು ಅವರ ಅಭಿಪ್ರಾಯ.
ಕಣ್ಮರೆಯಾಗುತ್ತಿರುವ ವಾಸನೆಗಳನ್ನು ಕಾಪಿಟ್ಟುಕೊಳ್ಳಲು UCL ಸುಸ್ಥಿರ ಪರಂಪರೆಯ ವಿದ್ಯಾಲಯದ ಸಂಶೋಧಕರ ತಂಡವೀಗ ಎರಡು ಮುಖ್ಯ ವಿಧಾನಗಳನ್ನು ಬಳಸುತ್ತಿದೆ. ಮೊದಲನೇಯದು ಪಾಲಿಮರ್ ಫೈಬರ್ಗಳನ್ನು ಬಳಸಿ ಇಂತಹ ವಾಸನೆಗಳು ಅವುಗಳ ಮೇಲೆ ಅಂಟಿಕೊಳ್ಳುವಂತೆ ಮಾಡುವುದು. ಆನಂತರ ಹೀಗೆ ಅಂಟಿಕೊಂಡಿರುವ ವಾಸನೆಯ ಅಣುಗಳನ್ನು ಪ್ರಯೋಗಾಲಯದಲ್ಲಿ ಪ್ರತ್ಯೇಕಿಸಿ ಅವುಗಳ ರಾಸಾಯನಿಕ ರಚನೆಯನ್ನು ಅರಿತುಕೊಂಡು ಅದರಿಂದ ಆ ವಾಸನೆಯನ್ನು ಹೊರಸೂಸುವ ರಾಸಾಯನಿಕ ಆಧಾರಿತ ಸುಗಂಧ ದ್ರವ್ಯಗಳನ್ನು ತಯಾರಿಸುವುದು.
ಎರಡನೇ ವಿಧಾನದಲ್ಲಿ ನೇರವಾಗಿ ಆ ವಾಸನೆಯನ್ನು ಸೂಸುವ ಅಣುಕಣಗಳಿರುವ ಗಾಳಿಯ ಮಾದರಿಯನ್ನು ಸಂಗ್ರಹಿಸಿ ಅದರಿಂದ ವಾಸನೆಯ ಅಣುಗಳನ್ನು ಹೊರತೆಗೆದು ಅವುಗಳ ಬದಲಿ ರಾಸಾಯನಿಕಗಳನ್ನು ತಯಾರಿಸುವುದು. ಈ ವಿಧಾನದ ಅನುಕೂಲತೆಯೆಂದರೆ ಇಲ್ಲಿ ಬಲುಬೇಗ ಆವಿಯಾಗುವ ಅಣುಗಳ ಬದಲಿ ರಾಸಾಯನಿಕಗಳನ್ನು ತಯಾರಿಸಬಹುದು.
ಸಿಸಿಲಿಯಾ ಬೆಂಬಿಬ್ರೆ ಎಂಬ ಸಂಶೋಧಕಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ‘ವಾಸನೆ ಬಚಾವೋ’ ಕಾರ್ಯದಲ್ಲಿ ತಂಡವು ಈಗಾಗಲೇ ಒಂದುಮುಕ್ಕಾಲು ಸಾವಿರದಷ್ಟು ಸ್ಥಳೀಯ ಅಡುಗೆಗಳ ಸುವಾಸನೆಗಳನ್ನು ಹೊರಸೂಸುವ ಬದಲಿ ರಾಸಾಯನಿಕಗಳನ್ನು ತಯಾರಿಸಿದೆ. ಇದೀಗ ಈ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆಯೂ ಎಂಟ್ರಿ ಕೊಟ್ಟಿದೆ. ನಾರ್ವೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಇದೀಗ ಸ್ಥಳೀಯವಾಗಿ ಲಭ್ಯವಿರುವ ವಾಸನೆಗಳನ್ನು ಕೃತಕವಾಗಿ ರಾಸಾಯನಿಕಗಳ ಮೂಲಕ ತಯಾರಿಸುವ ವಿಧಾನಗಳ ದತ್ತಾಂಶವನ್ನು ರಚಿಸುತ್ತಿದೆ. ನಂತರ ಕೃತಕ ಬುದ್ಧಿಮತ್ತೆಯನ್ನು ಬಳಸಿ ವಾಸನೆಗಳನ್ನು ಪತ್ತೆಹಚ್ಚಿ ಹಾಗೂ ಪುನರ್ ರಚಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಸ್ಥಳೀಯ ವಾಸನೆಗಳ ಮಹತ್ವ ನಿಧಾನವಾಗಿ ಜನರಿಗೆ ಮನದಟ್ಟಾಗುತ್ತಿದೆ. ಜಪಾನಿನಲ್ಲಿ ಈಗಾಗಲೇ ಅತ್ಯುತ್ತಮ ನೈಸರ್ಗಿಕ ಸುವಾಸನೆಗಳನ್ನು ಹೊರಸೂಸುವ ನೂರು ವಿಹಾರತಾಣಗಳನ್ನು ಪಟ್ಟಿಮಾಡಿ ಅಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುತ್ತಿದೆ. ಡಾ.ಕೇಟಿ ಮಕ್ಲೀನ್ ಎಂಬ ಸಂಶೋಧಕಿಯಂತೂ ವಾಸನೆಯ ಭೂಪಟದ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ವರ್ಷಗಳ ನಿರಂತರ ಸಂಶೋಧನೆಯಲ್ಲಿ ಕೇಟ್ ಕಂಡುಕೊಂಡಂತೆ ಭೂಮಂಡಲದಲ್ಲಿ ಪ್ರಾದೇಶಿಕವಾಗಿ ಸ್ಥಳೀಯ ಸೊಗಡು ಎನ್ನಬಹುದಾದಂಥ ಸುವಾಸನೆಗಳು ಇವೆ. ಇವುಗಳು ಹಗಲು, ಸಂಜೆ ಮತ್ತು ರಾತ್ರಿಗೆ ಬದಲಾಗುತ್ತಲೇ ಇರುತ್ತವೆ. ಇಂಥವುಗಳಲ್ಲಿ ಹಲವು ವಾಸನೆಗಳು ಕಣ್ಮರೆಯಾಗಿದ್ದು ಇನ್ನೂ ಹೊಸದು ಸೇರ್ಪಡೆಯಾಗುತ್ತಿವೆ. ನಗರಗಳಲ್ಲಿ ಓಡಾಡುತ್ತ ಅಲ್ಲಿ ತಾನು ಗಮನಿಸಿರುವ ವಾಸನೆಗಳ ಆಧಾರದ ಮೇಲೆ ವಾಸನಾ ಭೂಪಟಗಳನ್ನು ರಚಿಸುವುದು ಕೇಟ್ ಯೋಚನೆ.
ಒಂದೆಡೆ ಭೂಮಿಯಲ್ಲಿನ ವಾಸನೆಗಳನ್ನು ಉಳಿಸಿಕೊಳ್ಳುವ, ಪುನರ್ ಸೃಷ್ಟಿಸುವ ಯೋಜನೆಗಳು ಜಾರಿಯಲ್ಲಿದ್ದರೆ ಇನ್ನೊಂದೆಡೆ ಅಂತರಿಕ್ಷದಲ್ಲಿ ವಾಸನೆಗಳು ಹೇಗಿರಬಹುದೆಂದು ಅರಿತುಕೊಳ್ಳಲು ವಿಜ್ಞಾನಿಗಳ ತಂಡಗಳು ಉತ್ಸುಕವಾಗಿವೆ. ಇದರಿಂದ ಬ್ರಹ್ಮಾಂಡ ಸೃಷ್ಟಿಯ ಕುರಿತು ಮತ್ತಷ್ಟು ಮಾಹಿತಿಗಳು ಸಿಗಲಿವೆ ಎಂಬುದು ಅವರ ಅಂಬೋಣ. ಈ ಕುರಿತು ಅವರುಗಳ ಅವಲೋಕನಗಳು ಕುತೂಹಲಕಾರಿಯಾಗಿವೆ. ಗುರುಗ್ರಹದ ಸುತ್ತ ಕಂಡುಬರುವ ಸುಂದರ ಉಂಗುರಗಳು ವಿಜ್ಞಾನಿಗಳ ಪ್ರಕಾರ ಅಮೋನಿಯಾ ಮತ್ತು ಫಾಸ್ಪರಸ್ಗಳಿಂದ ರಚಿತವಾಗಿದ್ದು, ಹೊರ ಉಂಗುರವು ಸಂಪೂರ್ಣವಾಗಿ ಅತಿಶೀತಲ ಸ್ಥಿತಿಯಲ್ಲಿರುವ ಅಮೋನಿಯಾ ಮಂಜುಗಡ್ಡೆಯಾಗಿದೆ. ಆ ಕಾರಣಕ್ಕೆ ಅಲ್ಲಿ ಬೆಕ್ಕಿನ ಮೂತ್ರದಂತಹ ಕೆಟ್ಟ ವಾಸನೆಯಿರುವ ಸಾಧ್ಯತೆಯಿದೆ. ಶನಿಗ್ರಹದ ಸುತ್ತ ಸುತ್ತುವ ನೈಸರ್ಗಿಕ ಉಪಗ್ರಹ ಟೈಟನ್ನ ವಾತಾವರಣದಲ್ಲಿನ ರಾಸಾಯನಿಕ ವಿಶ್ಲೇಷಣೆಯ ಪ್ರಕಾರ ಅಲ್ಲಿ ತಾಜಾ ಬಾದಾಮಿಯ ವಾಸನೆಯಿದೆಯಂತೆ.
ಅಂತರಿಕ್ಷಯಾನಕ್ಕೆ ಹೋಗಿರುವ ಗಗನಯಾನಿಗಳು ಅಂತರಿಕ್ಷ ನಡಿಗೆಗೆ ಹೋದಾಗ ಅವರಿಗಾಗಿರುವ ಅನುಭವದ ಪ್ರಕಾರ ಅಲ್ಲಿ ಯಾವತ್ತೂ ವೆಲ್ಡಿಂಗ್ ನಡೆಯುತ್ತಿರುವ ಮತ್ತು ವಿದ್ಯುತ್ ಕೇಬಲ್ ಸುಟ್ಟ ರೀತಿಯ ವಾಸನೆ ಸೂಸುತ್ತಿರುತ್ತದೆ. ಅಂದಹಾಗೆ ಅವರುಗಳು ಮನೆಯಿಂದ ತೆಗೆದುಕೊಂಡು ಹೋಗಿರುವ ತಿಂಡಿಯ ಡಬ್ಬ ತೆರೆದಾಗ ಗುರುತ್ವಾಕರ್ಷಣೆ ರಹಿತ ವಾತಾವರಣದಲ್ಲಿ ವಾಸನೆಯನ್ನುಂಟು ಮಾಡುವ ಅಣುಗಳು ಮೂಗಿನವರೆಗೆ ತಲುಪದ ಕಾರಣ ಯಾವ ವಾಸನೆಯೂ ಅನುಭವಕ್ಕೆ ಬಾರದು.
ಅಗಾಧ ಪರಿಮಿತಿಯನ್ನು ಹೊಂದಿರುವ ಕಾರಣಕ್ಕೆ ಅಂತರಿಕ್ಷದಲ್ಲಿ ನಮ್ಮ ಉಹೆಗೂ ನಿಲುಕದಷ್ಟು ಅನಿಲಗಳು, ರಾಸಾಯನಿಕಗಳಿವೆ. ಇವುಗಳ ಸಮ್ಮಿಲನ ಇದುವರೆಗೂ ನಾವೆಂದೂ ಅನುಭವಿಸಿರದ ಅತ್ಯಂತ ವೈವಿಧ್ಯಮಯ ವಾಸನೆಗಳ ಭಂಡಾರವನ್ನಲ್ಲಿ ಸೃಷ್ಟಿಸಿರುವುದಂತೂ ಹೌದು. ಆದರೆ ಸದ್ಯಕ್ಕೆ ನಾವು ಮನೆಯ ಹಜಾರದ ಮೇಲೆ ಕುಳಿತಾಗ ಬೀಸುವ ಆಹ್ಲಾದಕರ ಗಾಳಿಯು ಹೊತ್ತು ತರುವ ಸುಗಂಧಗಳನ್ನು ಅನುಭವಿಸಿ ಹಗುರಾಗೋಣ. ಮುಂದೆ ಇದೂ ಸಿಗದ ದಿನಗಳು ಬಂದು ರಾಸಾಯನಿಕಗಳನ್ನು ಮೂಸಿ ಹಳೆಯ ನೆನಪುಗಳನ್ನು ಮೆಲಕು ಹಾಕುವ ಪರಿಸ್ಥಿತಿ ಉಂಟಾಗಬಹುದು.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)