ಬಹುತೇಕರಿಗೆ ಸಾಧನೆ ಮಾಡಬೇಕೆಂಬ ಹಸಿವು ಇರುತ್ತದೆ. ಈ ದಾರಿಯಲ್ಲಿ ಸಾಗುವಾಗ ಒಂದೆರಡು ಸೋಲುಗಳು ಬಂದಪ್ಪಳಿಸಿದರೂ, ಕನಸುಗಳೆಲ್ಲ ಮೂಲೆ ಸೇರುತ್ತವೆ. ಆದರೆ, ರಸ್ತೆಯಲ್ಲಿ ಮಲಗಿದರೂ ಮುಂದೊಂದು ದಿನ ನಕ್ಷತ್ರಗಳಿಂದ ಸಾಧನೆಯ ತೋರಣ ಕಟ್ಟುತ್ತೇನೆ ಎಂದು ಸಂಕಲ್ಪಿಸಿದ ಒಬ್ಬ ಸೀದಾಸಾದಾ ಯುವಕ ಅದೆಷ್ಟು ಬಾರಿ ಸೋಲು, ಅವಮಾನಗಳಿಗೆ ಜಬರ್ದಸ್ತ್ ತಪರಾಕಿ ನೀಡಿದ್ದಾರೆಂದರೆ ಬದುಕು ಭರ್ಜರಿ ಯೂ ಟರ್ನ್ ಪಡೆದುಕೊಂಡಿದೆ. ಅವಕಾಶಗಳೇ ಇಲ್ಲ ಎಂದು ಇಂದಿನ ಯುವಕರು ವ್ಯವಸ್ಥೆಯನ್ನು ದೂಷಿಸುತ್ತಿರುವಾಗ, ಅಪರೂಪದ ಕ್ಷೇತ್ರದಲ್ಲಿ ಇವರು ಅವಕಾಶಗಳನ್ನು ಸೃಷ್ಟಿಸಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್, ಮತ್ತಿತರ ಉನ್ನತ ವಿದ್ಯಾಭ್ಯಾಸ ಮಾಡಿ, ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ ದೊಡ್ಡದಿದೆ.
ಆದರೆ, ಬಾಚಣಿಗೆ, ಕತ್ತರಿ ಹಿಡಿದುಕೊಂಡು ಹೊರದೇಶಕ್ಕೆ ಹೋದ ಕ್ಷೌರಿಕ, ಹಾಲಿವುಡ್ ಸೆಲೆಬ್ರಿಟಿಗಳನ್ನು ಮೋಡಿ ಮಾಡಲು, ಕೇಶವಿನ್ಯಾಸ ಕ್ಷೇತ್ರಕ್ಕೆ ಹೊಸ ಘನತೆ, ಉದ್ಯಮದ ಸ್ವರೂಪ ನೀಡಲು ಸಾಧ್ಯವೇ? ಇದೆಲ್ಲ ಸಿನಿಮಾಗಳಲ್ಲಿ ಮಾತ್ರ ಸಾಧ್ಯ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದು, ಬದುಕಿನ ಹೋರಾಟದಲ್ಲಿ ಬೆಂಗಳೂರಿನ ಫುಟ್ಪಾತ್ಗಳಲ್ಲಿ ರಾತ್ರಿ ಕಳೆದ, ಮಣಿಪಾಲ, ಮಂಗಳೂರು ಮತ್ತಿತರ ಊರುಗಳಲ್ಲಿ ದಣಿವರಿಯದೆ ಕೆಲಸ ಮಾಡಿ ಕನಸಿನ ಬೆನ್ನು ಹತ್ತಿದ ಕಿರಣ್ ಶ್ರೀನಿವಾಸ್ ಈಗ ಬದುಕಿನ ಹಲವು ಸಾಧ್ಯತೆ, ಬೆರಗುಗಳಿಗೆ ಸಾಕ್ಷಿಯಾಗಿದ್ದಾರೆ; ಸಾಧನೆ ಮಾಡಬೇಕು ಎಂಬ ಬೆಂಕಿ ಆಂತರ್ಯದಲ್ಲಿ ಸದಾ ಧಗಧಗಿಸುತ್ತಿದ್ದರೆ, ಪರಾಭವ, ಅಪಮಾನಗಳೂ ಈ ಅಗ್ನಿಗೆ ತುಪ್ಪ ಸುರಿದು, ಬೆಳಕಿನ ಕಿರಣ ಸೃಷ್ಟಿಸುತ್ತವೆ ಎಂಬುದನ್ನು ದರ್ಶಿಸಿ ಕೊಟ್ಟಿದ್ದಾರೆ.
ಮಲೆನಾಡಿನ ಮಡಿಲು ಶಿವಮೊಗ್ಗದಲ್ಲಿ ಕಿರಣ್ ಹುಟ್ಟಿದ್ದು 1982 ಫೆಬ್ರವರಿ 4ರಂದು. ತಂದೆ ಶ್ರೀನಿವಾಸರದ್ದು ಹೇರ್ ಸಲೂನ್ ಅಂಗಡಿಯಿತ್ತು. ಭಾವಜೀವಿಯಾದ ಕಿರಣ್ ತಾಯಿಯನ್ನು ತುಂಬ ಹಚ್ಚಿಕೊಂಡಿದ್ದರು. ಕಿರಣ್ ನಾಲ್ಕನೇ ತರಗತಿ ಓದುತ್ತಿದ್ದಾಗಲೇ ವಿಧಿ ತಾಯಿಯನ್ನು ಕಸಿದುಕೊಂಡಿತು. ಈ ಆಘಾತ ಬಾಲ್ಯದ ತುಂಟಾಟ, ಉತ್ಸಾಹ ಎಲ್ಲ ಕಿತ್ತುಕೊಂಡಿತ್ತು. ಪುಟಾಣಿ ತಮ್ಮ ಸಂತೋಷನನ್ನು ಸಂಭಾಳಿಸುತ್ತ, ಮುಂದಡಿ ಇಡಬೇಕಿತ್ತು. ಓದಲು ಕುಳಿತರೆ ತಾಯಿಯ ನೆನಪೇ. ಶಾಲೆ ಬಿಟ್ಟೊಡನೆ ಬೆಟ್ಟದ ಬಳಿ ನಿಂತು ಮನಸ್ಸು ಹಗುರವಾಗುವವರೆಗೆ ಅಳುತ್ತಿದ್ದರು ಕಿರಣ್. ಓದಿನಲ್ಲಿ ಆಸಕ್ತಿ ಕಡಿಮೆಯಾಯಿತು. ಹತ್ತನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಬಾಕಿ ಉಳಿದಿದ್ದ ಎರಡು ವಿಷಯಗಳನ್ನು ಪಾಸ್ ಮಾಡಿ ದೂರದ ಕುಷ್ಟಗಿಯಲ್ಲಿ ಡಿಪ್ಲೊಮಾ ಪ್ರವೇಶ ಪಡೆದರು. ಎರಡು ವರ್ಷ ಅಷ್ಟೇ, ಮುಂದೆ ಓದಬೇಕು ಎಂದೆನಿಸಲಿಲ್ಲ. ವಾಪಸ್ ಶಿವಮೊಗ್ಗಕ್ಕೆ ಬಂದರು. ಸೋದರ ಸಂತೋಷ್ ಕೂಡ ಹತ್ತನೇ ತರಗತಿ ಪರೀಕ್ಷೆಯಲ್ಲಿ ಫೇಲಾಗಿದ್ದ. ತಂದೆ ‘ಮುಂದೇನು ಮಾಡ್ತೀರಿ? ಹೇರ್ ಕಟಿಂಗ್ ಅಂಗಡಿ ನೋಡಿಕೊಂಡರೆ ಮಾತ್ರ ಮನೆಯಲ್ಲಿ ಜಾಗ’ ಎಂದು ಖಡಕ್ ಆಗಿ ಹೇಳಿಬಿಟ್ಟರು. ಈ ಕೆಲಸ ಮಾಡಲು ಇಬ್ಬರಿಗೂ ಇಷ್ಟವಿರಲಿಲ್ಲ. ಮುಂದಿನ ದಾರಿಯೂ ಗೊತ್ತಿರಲಿಲ್ಲ.
ತಾಯಿಯ ಸಮಾಧಿಗೆ ನಮಿಸಿದ ಬಳಿಕ, ಮನೆಯಲ್ಲಿ ಹೇಳದೆ ಇಬ್ಬರೂ ಬೆಂಗಳೂರು ಸೇರಿದರು. ಕೆಲ ದಿನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದ ಬಳಿಕ ಅವರೂ ‘ಇಲ್ಲಿಂದ ಹೊರಡಿ’ ಎಂದರು. ಉಳಿದುಕೊಳ್ಳಲು ಎಲ್ಲೂ ಜಾಗ ಇರಲಿಲ್ಲ. ಬ್ಯಾಂಕ್ ಕಾಲನಿಯಲ್ಲಿ ಒಂದು ಸಣ್ಣ ಕೆಲಸ ಮಾಡುತ್ತ, ಫುಟ್ಪಾತ್ನಲ್ಲೇ ಇರತೊಡಗಿದರು. ಹ್ಯಾಂಡ್ ಬೊರವೆಲ್ನಲ್ಲಿ ಸ್ನಾನ. ದಿನಕ್ಕೆ ಒಂದು ಹೊತ್ತು ಊಟ ಸಿಕ್ಕರೆ ಅದೃಷ್ಟ ಎಂಬಂತಿತ್ತು. ಎಷ್ಟೋ ಬಾರಿ ಹಸಿವು ತಾಳಲಾರದೆ ಮದುವೆ ಛತ್ರಗಳಿಗೆ ಹೋಗಿ ಊಟ ಮಾಡಿದ್ದುಂಟು. ಒಮ್ಮೆ ಅಲ್ಲಿ, ಸಿಕ್ಕಿ ಬಿದ್ದು, ಹೊರಗೆ ಹಾಕಿದಾಗ ನೊಂದ ಮನಸ್ಸಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಹೀಗೆ ಕಷ್ಟದ ದಿನಗಳನ್ನು ಕಳೆಯುತ್ತಿರಬೇಕಾದರೆ ಕಿರಣ್ರಲ್ಲಿ ಸಾಧನೆಯ ಛಲ ಹುಟ್ಟಿತು. ‘ಹೀಗೆ ಬದುಕಬಾರದು. ಏನಾದರೂ ಎತ್ತರದ ಸಾಧನೆ ಮಾಡಬೇಕು’ ಎಂದು ಸಂಕಲ್ಪಿಸಿದರು. ಮತ್ತೊಂದು ಕೆಲಸ ಹಿಡಿದು, ಕಷ್ಟಪಟ್ಟು ದುಡಿಯತೊಡಗಿದರು. ಜಗತ್ತಿನ ಒಳ್ಳೆತನ, ಕರಾಳತೆ ಎಲ್ಲವೂ ಅನುಭವಕ್ಕೆ ಬರುತ್ತಿತ್ತು.
ಒಂದು ವರ್ಷದ ಈ ವನವಾಸದ ಬಳಿಕ ಅಪ್ಪ ಮತ್ತೆ ಇವರನ್ನು ಶಿವಮೊಗ್ಗಕ್ಕೆ ಕರೆಯಿಸಿಕೊಂಡರು. ಅಲ್ಲಿನ ಹಲವು ಸ್ವಯಂಸೇವಾ ಸಂಸ್ಥೆ, ವೃದ್ಧಾಶ್ರಮಗಳಿಗೆ ಹೋಗಿ ಕಿರಣ್ ಸೇವೆ ರೂಪದಲ್ಲಿ ಹೇರ್ ಕಟಿಂಗ್ ಮಾಡತೊಡಗಿದರು. ಹಲವು ತಿಂಗಳುಗಳಿಂದ ಕಟಿಂಗ್, ಶೇವಿಂಗ್ ಆಗಿರದ 85 ವರ್ಷದ ವೃದ್ಧರೊಬ್ಬರಿಗೆ ಕ್ಷೌರ ಮಾಡಿ, ಅವರ ಆಶೀರ್ವಾದ ಪಡೆದಾಗ ಕೆಲಸದಲ್ಲೇ ದೇವರನ್ನು ಕಂಡಂತಾಯಿತು ಎಂದು ಭಾವುಕರಾಗುತ್ತಾರೆ ಕಿರಣ್. ಈ ಸಂತೃಪ್ತಿಯೇ ಅವರನ್ನು ಕ್ಷೌರಿಕ ವೃತ್ತಿ ಪ್ರೀತಿಸಲು ಪ್ರೇರಣೆಯಾಯಿತು.
ಈ ವೃತ್ತಿಯಲ್ಲಿ ಮತ್ತಷ್ಟು ಪಳಗಬೇಕು ಎಂದುಕೊಂಡು ಮಂಗಳೂರಿಗೆ ಬಂದರು. ಯಾರದೂ ಗುರುತು, ಪರಿಚಯ ಇರಲಿಲ್ಲ. ತಾವೇ ಕ್ಷೌರದಂಗಡಿಗಳಿಗೆ ಹೋಗಿ, ‘ಹೀಗೀಗೆ ಕೆಲಸ ಮಾಡುತ್ತೇನೆ, ಯಾವ ಹೇರ್ಸ್ಟೈಲ್ ಬೇಕಾದರೂ ಮಾಡುತ್ತೇನೆ’ ಎಂದು ವಿವರಿಸಿ, ಕೆಲಸ ಗಿಟ್ಟಿಸುತ್ತಿದ್ದರು. ಹಂಪನಕಟ್ಟೆ ಬಳಿಯ ಸೆಂಟ್ರಲ್ ಸಲೂನ್ನಲ್ಲಿ ಎರಡೂವರೆ ವರ್ಷ ಕೆಲಸ ಮಾಡಿದರು. ಹೊರದೇಶಗಳಲ್ಲಿ ಈ ವೃತ್ತಿಗೆ ಒಳ್ಳೆಯ ಅವಕಾಶ ಇದೆ ಎಂದು ತಿಳಿದು ಆಸ್ಟ್ರೇಲಿಯಾಕ್ಕೆ ಹೋಗುವ ಕನಸು ಕಾಣತೊಡಗಿದರು. ಇವರ ಮಿತ್ರ ವಿಜಯ್, ‘ಅದಕ್ಕೆ ಬೇಕಾದ ಕೌಶಲಗಳನ್ನು ಪಡೆದು, ಸೂಕ್ತ ಸಿದ್ಧತೆಗಳನ್ನು ಮಾಡಿಕೋ’ ಎಂದರು. ಇಂಗ್ಲಿಷ್ ನಿರರ್ಗಳವಾಗಿ ಮಾತನಾಡುವ, ಬರೆಯುವ ಮತ್ತು ಇತರ ಕೌಶಲಗಳಿಗಾಗಿ ಪರೀಕ್ಷೆ ಇರುತ್ತಿತ್ತು. ಕೆಲಸ ಬಿಟ್ಟು, ವಿಜಯ್ ರೂಮನಲ್ಲೇ ಉಳಿದು, ಉಳಿತಾಯದ ಹಣ ಏಳೂವರೆ ಸಾವಿರವನ್ನು ಪರೀಕ್ಷಾ ಶುಲ್ಕವಾಗಿ ಕಟ್ಟಿದರು. ಮೊದಲನೇ ಪ್ರಯತ್ನದಲ್ಲಿ ಕಡಿಮೆ ಅಂಕ ಬಂದು, ಆಸೆ ಕಮರಿತು. ಎರಡನೇ ಪ್ರಯತ್ನವೂ ಕೈಗೂಡಲಿಲ್ಲ. ಇದ್ದ ದುಡ್ಡು ಖಾಲಿಯಾಗಿತ್ತು. ಆಗ ಇಂಡಿಯನ್ ಆಯಿಲ್ ಕಾಪೋರೇಷನ್ನ ಟ್ಯಾಂಕರ್ಗಳಲ್ಲಿ ಹಲವು ತಿಂಗಳುಗಳ ಕಾಲ ಕ್ಲಿನರ್ ಆಗಿ ಕೆಲಸ ಮಾಡಿದರು. ಪ್ರತೀ ಅವಮಾನ, ಸೋಲಿನಿಂದ ಪಾಠ ಕಲಿತರೆ ಹೊರತು ಹತಾಶರಾಗಿ ಕೈಚೆಲ್ಲಲಿಲ್ಲ. ‘ಬದುಕು ನನಗೆ ಭಾರಿ ಅನ್ಯಾಯ ಮಾಡಿತು’ ಎಂದು ಗೋಳಾಡಲಿಲ್ಲ. ಬದಲಾಗಿ, ನ್ಯೂನತೆಗಳನ್ನು ಸರಿಪಡಿಸಿಕೊಂಡು, ಮತ್ತಷ್ಟು ಆತ್ಮವಿಶ್ವಾಸದಿಂದ ಹೊಸ ಸವಾಲಿಗೆ ಅಣಿಯಾಗುತ್ತಿದ್ದರು.
ಮಣಿಪಾಲಗೆ ಬಂದು ಹೇರ್ ಸಲೂನ್ಗೆ ಕೆಲಸಕ್ಕೆ ಸೇರಿದರು. ಅಲ್ಲಿ ಬರುತ್ತಿದ್ದ ಹೆಚ್ಚಿನ ಗ್ರಾಹಕರು ವೈದ್ಯರು, ಎನ್ಆರ್ಐಗಳೇ ಆಗಿದ್ದರು. ಕಿರಣರ ಕೆಲಸದಲ್ಲಿನ ಬದ್ಧತೆ, ಶಿಸ್ತು, ಪ್ರಾಮಾಣಿಕತೆ ಇದನ್ನೆಲ್ಲ ಕಂಡು ಅವರೂ ಹುರಿದುಂಬಿಸಿ, ‘ಮುಂದೆ ದೊಡ್ಡ ಮನುಷ್ಯ ಆಗುತ್ತಿ ಬಿಡು’ ಎನ್ನುತ್ತಿದ್ದರು. ಈ ನಡುವೆ ಪ್ರೀತಿಸಿದ ಹುಡುಗಿಯೂ ಸಿಗಲಿಲ್ಲ. ಆ ನೋವನ್ನೆಲ್ಲ ನಗಾಡಿಕೊಂಡೇ ನುಂಗಿಬಿಡುತ್ತಿದ್ದ ಅವರು ಶಿವಮೊಗ್ಗಕ್ಕೆ ಬಂದು ತಂದೆ ತೋರಿಸಿದ ಹುಡುಗಿಯೊಂದಿಗೆ ವಿವಾಹವಾದರು.
ಒಂಬತ್ತು ತಿಂಗಳ ಶಿವಮೊಗ್ಗ ವಾಸದಲ್ಲಿ ಮತ್ತೆ ಹಲವು ಕಹಿ ಅನುಭವಗಳಾದವು. ಅಲ್ಲಿಂದ ಮತ್ತೆ ಮಣಿಪಾಲ್ನ ಹೇರ್ ಸಲೂನ್ನಲ್ಲಿ ತಿಂಗಳಿಗೆ ಐದೂವರೆ ಸಾವಿರದ ಕೆಲಸಕ್ಕೆ ಸೇರಿಕೊಂಡರು. ಈ ಮಧ್ಯೆ ಸೋದರ ಸಂತೋಷ್ ಮುಂಬೈನಲ್ಲಿ ಕ್ಷೌರವೃತ್ತಿಗೆ ಸಂಬಂಧಿಸಿದ ಮಹತ್ವದ ಕೋರ್ಸ್ ಮುಗಿಸಿ, ಅದಕ್ಕೆ ಉದ್ಯಮದ ಸ್ವರೂಪ ನೀಡಲು ಮಂಗಳೂರಿಗೆ ಬಂದರು. ಅಣ್ಣನಿಗೂ ಮಂಗಳೂರಿಗೇ ಬರಲು ಹೇಳಿದರು. ಕಿರಣ್ ಕುಡ್ಲಕ್ಕೆ ಬಂದಾಗ ಪತ್ನಿ ಗರ್ಭಿಣಿ, ಸ್ಕಾ್ಯನಿಂಗ್ನಲ್ಲಿ ಅವಳಿ ಮಕ್ಕಳಿವೆ ಎಂದು ಗೊತ್ತಾಯಿತು. ಹೆರಿಗೆ ಮಾಡಿಸಲೂ ದುಡ್ಡಿರಲಿಲ್ಲ. ಬ್ರೖೆಡಲ್ ಮೇಕಪ್ ಕಲಾವಿದೆ ಶಿಫಾಲಿ ಬಲ್ಲಾಳರನ್ನು ಭೇಟಿ ಮಾಡಿದಾಗ, ಸಲೂನ್ನಲ್ಲಿ ಹದಿನಾರು ಸಾವಿರ ರೂ. ಸಂಬಳದ ಕೆಲಸ ಸಿಕ್ಕಿತು. ಮುಜುಗರದಿಂದಲೇ ಪತ್ನಿ ಹೆರಿಗೆಗೆ ಐದು ಸಾವಿರ ಮುಂಗಡ ಪಡೆದರು. ಅದಾದ ಮೂರ್ನಾಲ್ಕು ದಿನಗಳಲ್ಲೇ ಕೆಲಸಕ್ಕೆ ಸೇರಿದರು. ಸಣ್ಣ ಬಾಡಿಗೆ ಮನೆ. ಮಕ್ಕಳ ಔಷಧ ತರಲು ದುಡ್ಡಿರುತ್ತಿರಲಿಲ್ಲ. ಆ ಕಷ್ಟಗಳೇ ಮತ್ತಷ್ಟು ಹೋರಾಟಕ್ಕೆ ಪ್ರೇರೇಪಿಸಿದವು.
ಆಗ ‘ನ್ಯೂಜಿಲ್ಯಾಂಡ್ನಲ್ಲಿ ಕೆಲಸ ಇದೆ’ ಎಂಬ ಜಾಹೀರಾತು ನೋಡಿ, ಸಂದರ್ಶನಕ್ಕೆ ಹಾಜರಾದರೆ ಆ ಮೋಸದ ಕಂಪನಿ 15 ಲಕ್ಷ ರೂ. ಕೇಳಿತ್ತು. ಮನಸ್ಸಿಗೆ ಭಾರಿ ಪೆಟ್ಟಾಗಿತ್ತು. ಸೈಬರ್ ಸೆಂಟರ್ಗೆ ಹೋಗಿ ‘ನ್ಯೂಜಿಲ್ಯಾಂಡಿನ ಟಾಪ್ ಹೇರ್ಸಲೂನ್ ಸಂಸ್ಥೆಗಳು’ ಎಂದು ಸರ್ಚ್ ಕೊಟ್ಟು, ಐದು ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಕೆಲಸಕ್ಕೆ ಅರ್ಜಿ ಹಾಕಿದರು. ಈ ನಡುವೆ ಹಲವು ಬಾರಿ ಸಹಾಯಕ್ಕೆ ನಿಂತಿದ್ದ ಗೆಳೆಯ ವಿಜಯ್ ಬಾರದ ಲೋಕಕ್ಕೆ ತೆರಳಿದ್ದ. ಅದರ ನೋವೂ ಬಾಧಿಸುತ್ತಿತ್ತು. ಅರ್ಜಿ ಹಾಕಿ ಸುಮ್ಮನೆ ಕುಳಿತುಕೊಳ್ಳದ ಕಿರಣ್, ಅಲ್ಲಿನ ಹೇರ್ ಡ್ರೆಸಿಂಗ್ ವೃತ್ತಿಯ ಸೂಕ್ಷ್ಮತೆ ಮತ್ತು ವಿಶೇಷತೆಗಳನ್ನು ಅಭ್ಯಸಿಸತೊಡಗಿದರು. ಅದೊಂದು ದಿನ ಪ್ರತಿಷ್ಠಿತ
Rodney Wayne ಕಂಪನಿಯಿಂದ ಪ್ರತಿಕ್ರಿಯೆ ಬಂತು. ಸ್ಕೈಪ್ ಮೂಲಕ ಸಂದರ್ಶನ ನಡೆಸಿ, ಕೆಲಸಕ್ಕೆ ಆಯ್ಕೆ ಮಾಡಿದರು! ಕೆಲ ತಿಂಗಳಲ್ಲಿ ವೀಸಾ ಬಂದರೂ, ಪ್ರಯಾಣವೆಚ್ಚ ಭರಿಸುವಷ್ಟು ದುಡ್ಡಿರಲಿಲ್ಲ. ಮಿತ್ರರು, ಆತ್ಮೀಯರು, ಸಹೋದರ ಎಲ್ಲರೂ ಸಹಾಯ ಮಾಡಿದ ಪರಿಣಾಮ, ಜೀವನದಲ್ಲಿ ಮೊದಲ ಬಾರಿ ವಿಮಾನ ಹತ್ತಿದರು ಕಿರಣ್.
2016ರಲ್ಲಿ Rodney Wayne ಕಂಪನಿಯ ಆಕ್ಲೆಂಡ್ (Auckland) ನಗರದ ಶಾಖೆಯಲ್ಲಿ ಕೆಲಸಕ್ಕೆ ಸೇರಿದರು. ಹಲವಾರು ವರ್ಷಗಳ ಕನಸು ನನಸಾಗಿತ್ತಲ್ಲದೆ, ಅವಮಾನಗಳ ಸರಮಾಲೆ ಮುಗಿದು, ವಿಜಯಮಾಲೆ ಪ್ರಾಪ್ತವಾಯಿತು. ಕೆಲಸದ ನೈಪುಣ್ಯದಿಂದ ಬಹುಬೇಗ ಗ್ರಾಹಕರ ಪ್ರೀತಿಗೆ ಪಾತ್ರರಾದರು. ವಿಭಿನ್ನ ಕ್ಷೇತ್ರದ ದೊಡ್ಡ ಸೆಲೆಬ್ರಿಟಿ, ತಾರೆಗಳಿಗೆ ಕೇಶವಿನ್ಯಾಸ ಮಾಡಿ, ಜನಪ್ರಿಯರಾದರು. ನಾವು ಎತ್ತರಕ್ಕೆ ಹೋಗಬೇಕು ಎಂದರೆ ವೃತ್ತಿಯನ್ನು ಹೇಗೆ ಪ್ರೀತಿಸಬೇಕು ಎಂಬುದಕ್ಕೆ ಕಿರಣ್ ಸಾಕ್ಷಿ. ಆಕ್ಲೆಂಡ್ ನಗರದಲ್ಲೇ salon management in commercial barber ವಿಷಯದಲ್ಲಿ ಪದವಿ ಪಡೆದು, ಸೈ ಎನಿಸಿಕೊಂಡರು. ಆಸ್ಟ್ರೇಲಿಯಾಕ್ಕೆ ಬರುವಂತೆ ದಿಗ್ಗಜ ಕಂಪನಿಯಿಂದ ಆಹ್ವಾನ ಬಂತು. ಆಸ್ಟ್ರೇಲಿಯಾದ ಖ್ಯಾತ ಹೇರ್ಸ್ಟೈಲಿಸ್ಟ್ Richard Kavanagh ಜತೆ ಕೆಲಸ ಮಾಡುವ ಅವಕಾಶ. 2018ರಿಂದ ಆಸ್ಟ್ರೇಲಿಯಾದ ಕ್ಯಾನ್ಬೆರಾ ನಗರದ Men’s biz ಕಂಪನಿಯಲ್ಲಿ senior head Men’s session stylist ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿಯ ಕಂಪನಿಯೊಂದರಲ್ಲಿ ಪಾಲುದಾರಿಕೆ ಪಡೆಯಲು ಮುಂದಾಗಿದ್ದಾರೆ. ಈ ಸುದೀರ್ಘ ಹೋರಾಟದ ಮೂಲಕ ಆತ್ಮಸ್ಥೈರ್ಯದ ಬಲ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಶ್ರೇಷ್ಠ ಕೇಶವಿನ್ಯಾಸಕರಾಗಿ ಖ್ಯಾತಿ ಗಳಿಸಿರುವ ಕಿರಣ್ ಬಂದ ಹಾದಿಯನ್ನು ಮರೆತಿಲ್ಲ. ಕರ್ನಾಟಕದಲ್ಲಿ ತಮಗೆ ಸಹಾಯ ಮಾಡಿದವರಿಗೆ ಕರೊನಾ ಸಂಕಟದ ಹೊತ್ತಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ಬಾಲತ್ರಿಪುರಸುಂದರಿ ದೇವಿ, ಶ್ರೀರಾಘವೇಂದ್ರ ಸ್ವಾಮಿ ಅವರ ಆರಾಧನೆ ಮೂಲಕ ಅಧ್ಯಾತ್ಮದ ನಂಟು ಹೊಂದಿರುವುದರಿಂದ ಅದೇ ವಿನಯ ಉಳಿಸಿಕೊಂಡಿರುವ ಅವರು, ಕರ್ನಾಟಕದಲ್ಲೂ ಉದ್ಯಮ ಆರಂಭಿಸಿ, ಯುವಕರಿಗೆ ಕೆಲಸ ನೀಡುವ ಆಶಯ ಹೊಂದಿದ್ದಾರೆ.
ಬೆಂಗಳೂರಿನ ಫುಟ್ಪಾತ್ನಿಂದ ಆರಂಭವಾದ ಹೋರಾಟ ದೂರದ ಆಸ್ಟ್ರೇಲಿಯಾವರೆಗೂ ತಲುಪಿ, ಗೆಲುವಿನ ನಗೆ ಬೀರಿದೆ ಎಂದರೆ ಅದು ಬೇರೆ ಏನೂ ಅಲ್ಲ ಆಂತರ್ಯದ ಶಕ್ತಿ, ನೋವನ್ನು ಮರೆತು ಮುಂದಡಿ ಇಡುವ ಇಚ್ಛಾಶಕ್ತಿ. ಈಗಲೂ ಕ್ಷೌರಿಕವೃತ್ತಿ ಎಂದೊಡನೆ ಮೂಗು ಮುರಿಯುವ ಅದೆಷ್ಟೋ ಜನರಿಗೆ ಕಿರಣ್ (kiranpavitwin@gmail.com) ಬದುಕು ವಿಶ್ವಾಸದ ಬೆಳಕು ತೋರಿಸುವಂತಾಗಲಿ. ಕನಸು, ಛಲದ ವೋಲ್ಟೇಜ್ ಕಡಿಮೆ ಆಗಲು ಬಿಡದೆ ಮುನ್ನಡೆದರೆ ಕಿರಣ್ರಂಥ ಸಾರ್ಥಕ ಬದುಕು ಅದೆಷ್ಟೋ ಯುವಕರಿಗೆ ಸಿಗಬಲ್ಲದು.
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)