ಅಂಕಣ

ಅಫ್ಘನ್ ವಿದ್ಯಮಾನದಿಂದ ಕಲಿಯಬೇಕಾದ ಪಾಠ: ಜನಮತ

Webdesk - Ravikanth
ಸರ್ಕಾರಕ್ಕೆ ನಿಷ್ಠ ಮೂರು ಲಕ್ಷದಷ್ಟಿದ್ದ ಸೇನೆಯನ್ನು ಪರಾಭವಗೊಳಿಸಿ, ರಾಜಧಾನಿ ಕಾಬುಲ್ ಸಹಿತ ದೇಶದೆಲ್ಲೆಡೆ ಕೊಲೆ, ಸುಲಿಗೆ, ಅತ್ಯಾಚಾರದ ತಾಂಡವ ನಡೆಸುತ್ತಿರುವ ಮತಾಂಧ ಎಪ್ಪತ್ತು-ಎಂಬತ್ತು ಸಾವಿರ ತಾಲಿಬಾನಿಗಳು ಸೃಷ್ಟಿಸಿರುವ ಅರಾಜಕತೆಯಿಂದ ಇಡೀ ಅಫ್ಘಾನಿಸ್ತಾನ ಹತಾಶೆ-ನಿರಾಶೆಯ ಕೂಪದಲ್ಲಿದೆ. ಮಿಲಿಟರಿ-ಪೊಲೀಸ್ ಅಧಿಕಾರಿಗಳನ್ನು, ಸರ್ಕಾರಕ್ಕೆ ನಿಷ್ಠರಾಗಿದ್ದವರನ್ನು ಹುಡುಕಿ ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ, ಮಹಿಳೆಯರ-ಮಕ್ಕಳ ದಾರುಣ ಆಕ್ರಂದನ ಮನಕಲಕುವಂತಹದು. ಬದುಕುವ ಉತ್ಕಟ ಇಚ್ಛೆಯಿಂದ ಹೇಗಾದರೂ ಸರಿ ಎಲ್ಲಾದರೂ ಸರಿ ಎಂದು ಉಟ್ಟಬಟ್ಟೆಯಲ್ಲಿ ಓಡುತ್ತಿರುವ ಅಫ್ಘನ್ನರ ದಯನೀಯ ಸ್ಥಿತಿ ನಿಜಕ್ಕೂ ಶೋಚನೀಯ. 75 ವರ್ಷಗಳ ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ನೆರಳಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ನಾವು ಭಾರತೀಯರು ಇದರಿಂದ ಪಾಠ ಕಲಿತುಕೊಳ್ಳಬೇಕಾಗಿದೆ.
  • ಸರ್ಕಾರವನ್ನು ವಿರೋಧಿಸುವ ಭರದಲ್ಲಿ ನಮ್ಮ ಭವ್ಯ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಆಘಾತ ಉಂಟು ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದು ಬೇಡ. ಭಾರತದ ಪ್ರಜಾಪ್ರಭುತ್ವದಲ್ಲಿ ಕೆಲ ನ್ಯೂನತೆಗಳು ಕಾಣಿಸುತ್ತಿದ್ದರೂ ಅದು ಇಂದು ಅಫ್ಘಾನಿಸ್ತಾನದ ಅರಾಜಕತೆಗಿಂತ, ಶರಿಯಾ ಅಥವಾ ಇನ್ನಾವುದೋ ಮತೀಯ ಆಧಾರದ ಕಾನೂನಿನ ಹೆಸರಿನಲ್ಲಿ ನಡೆಯುವ ಶಾಸನಕ್ಕಿಂತ, ಪ್ರಜಾಪ್ರಭುತ್ವದ ಹೆಸರಲ್ಲಿ ಕೈಗೊಂಬೆ ಸರ್ಕಾರಗಳು ನಡೆಸುತ್ತಿರುವ ಶಾಸನಕ್ಕಿಂತ ಸಾವಿರ ಸಾವಿರ ಪಟ್ಟು ಉತ್ತಮ.
  • ವೇತನ, ಪಿಂಚಣಿ, ಸಾಮಾಜಿಕ ಸುರಕ್ಷತೆಯ ಕಲ್ಯಾಣಕಾರಿ ಯೋಜನೆಗಳ ಲಾಭ, ನಮ್ಮ ಫ್ಲಾಟ್, ಆಸ್ತಿ-ಸಂಪತ್ತು ಮತ್ತು ಬದುಕಿನ ಮುಸ್ಸಂಜೆಯ ನೆಮ್ಮದಿ ಎಲ್ಲವೂ ಪ್ರಜಾಪ್ರಭುತ್ವದ ಬಳುವಳಿ. ದೇಶ-ಸರ್ಕಾರವೇ ಇಲ್ಲದಿದ್ದರೆ ನಿಮಿಷಾರ್ಧದಲ್ಲಿ ನಮ್ಮ ನೆಲದಲ್ಲೇ ನಾವು ನಿರ್ಗತಿಕರಾಗಬಹುದು. ಮೊನ್ನೆ ಕಾಬೂಲಿನ ವಿಮಾನ ನಿಲ್ದಾಣದಲ್ಲಿ ಜೀವಭಯದಿಂದ ಓಡುತ್ತಿದ್ದವರಲ್ಲಿ ಬಡವರು-ಶ್ರೀಮಂತರು ಎಲ್ಲರೂ ಇದ್ದರಲ್ಲ; ಅವರ ಆಸ್ತಿ-ಐಶ್ವರ್ಯಗಳು ಕೆಲಸಕ್ಕೆ ಬಂದವೇ? ಸುಭದ್ರ ವ್ಯವಸ್ಥೆ ಇದ್ದರೆ, ದೇಶ ಇದ್ದರೆ ಮಾತ್ರ ನಮ್ಮ ಬದುಕು ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳೋಣ.
  • ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ದೇಶದ ವಿರುದ್ಧ ಘೊಷಣೆ ಕೂಗುವವರು, ‘ಭಾರತ್ ತೇರೆ ಟುಕ್ಡೇ ಹೋಂಗೇ’ ಎನ್ನುವ ಗ್ಯಾಂಗಿನವರು ನಮ್ಮ ನೆಮ್ಮದಿಯ ಬದುಕಿಗೆ ಕೊಡಲಿ ಇಡುವವರು ಎಂದು ತಿಳಿಯೋಣ. ತಿಂದುಂಡು ಸುಖದ ಸುಪತ್ತಿಗೆಯಲ್ಲಿರುವ ಬಹುತೇಕ ರಾಜಕಾರಣಿಗಳು, ಕೆಲ ಬುದ್ಧಿಜೀವಿಗಳು ನಮಗೆ ಒಳಿತಿಗಿಂತ ಕೆಡುಕೇ ಮಾಡುತ್ತಿದ್ದಾರೆ ಎನ್ನುವ ಸತ್ಯವನ್ನು ಅರಿಯೋಣ ಮತ್ತು ಅಂಥವರಿಂದ ನಮ್ಮ ಮಕ್ಕಳನ್ನು ದೂರವಿಡೋಣ.
  • ಸೇನೆಗೆ ಮಾಡುವ ಖರ್ಚು ವ್ಯರ್ಥ’ ಎನ್ನುವ ಬುದ್ಧಿಜೀವಿಗಳ ದೊಡ್ಡ ವರ್ಗ ನಮ್ಮಲ್ಲಿದೆ. ಸೇನೆಯನ್ನು ದೂಷಿಸುವ ವ್ಯವಸ್ಥಿತ ಸಂಚು ಬಹಳ ಕಾಲದಿಂದ ನಮ್ಮಲ್ಲಿ ನಡೆಯುತ್ತಿದೆ. ಸೇನೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸುವ, ತ್ಯಾಗ-ಬಲಿದಾನಗಳ ಕುರಿತು ವ್ಯಂಗ್ಯವಾಡುವ ಕುಹಕಿಗಳು ಯೋಧರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಆಗಾಗ್ಗೆ ನಡೆಸುತ್ತಲೇ ಬಂದಿದ್ದಾರೆ. ಆತ್ಮವಿಶ್ವಾಸವಿಲ್ಲದ, ಮಾನಸಿಕವಾಗಿ ಕುಗ್ಗಿದ ಸೇನೆ ದೇಶವನ್ನು ಚೀನಾ-ಪಾಕ್ ಕುತಂತ್ರಿಗಳಿಂದ, ಮಾನವೀಯತೆಯೇ ಇಲ್ಲದ ಉಗ್ರವಾದಿಗಳಿಂದ ರಕ್ಷಿಸಬಹುದೇ? ಸೇನೆ, ರಾಷ್ಟ್ರಧ್ವಜದ ಅಪಮಾನ ದೇಶದ ಅಪಮಾನ. ಅಂಥವರನ್ನು ದೇಶದ್ರೋಹಿಗಳೆಂದು ಶಿಕ್ಷಿಸಲು ಒತ್ತಾಯಿಸೋಣ.
  • ತನ್ನ ಪ್ರಾಣ ಉಳಿಸಿಕೊಳ್ಳಲು ಪರಾರಿಯಾದ ಅಫ್ಘನ್ ನಾಯಕತ್ವದ ಕರಾಳ ಪರಿಣಾಮ ನಮ್ಮ ಮುಂದಿದೆ. ದೇಶ ಸದಾ ಸುರಕ್ಷಿತ ಮತ್ತು ಬಲಿಷ್ಠ ನೇತೃತ್ವದಲ್ಲಿ ಇರುವಂತೆ ನೋಡಿಕೊಳ್ಳೋಣ. ಉಚಿತ ಕೊಡುಗೆಗಳನ್ನು ಕೊಡುವವರಿಗಿಂತ ದೇಶಹಿತ ಕಾಯುವ ನಾಯಕತ್ವ ಶ್ರೇಷ್ಠ. ಸರ್ಕಾರವನ್ನು ಚುನಾಯಿಸುವ ನಮ್ಮ ಅಧಿಕಾರವನ್ನು ಪವಿತ್ರ ಕರ್ತವ್ಯ ಎಂದು ತಿಳಿಯೋಣ ಮತ್ತು ದೇಶಹಿತದಲ್ಲಿ ಮತದಾನ ಮಾಡೋಣ.

| ಚಂದ್ರಶೇಖರ ನಾವಡ ನಿವೃತ್ತ ಸೈನಿಕ, ಬೈಂದೂರು