ಲಾಕ್ಡೌನ್ ಬೇಗ ಮುಗಿಯಬೇಕಾದರೆ ಜನರ ಜವಾಬ್ದಾರಿ ಹೆಚ್ಚುವುದು. ಪ್ರತಿಯೊಬ್ಬ ನಾಗರಿಕನೂ ಪ್ರಜ್ಞಾವಂತ ಸ್ವಯಂಸೇವಕನಂತೆ ಕೆಲಸ ಮಾಡಬೇಕಾಗುತ್ತದೆ. ಸರ್ಕಾರವು ನಮ್ಮ ಒಳಿತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ನಾವು ಸಹಕರಿಸಬೇಕು.
ಕರೊನಾ ರೋಗದ ಲಕ್ಷಣಗಳು ಕಂಡುಬಂದಿದ್ದರೆ, ಅಂದರೆ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ ಅಥವಾ ಇತ್ತೀಚೆಗೆ ಬೇರೆ ದೇಶದಿಂದ ಆಗಮಿಸಿದ್ದರೆ ಅಥವಾ ವಿದೇಶದಿಂದ ಆಗಮಿಸಿದವರ ಜೊತೆಗೆ ಯಾವುದೇ ರೀತಿ ಸಂಪರ್ಕವಾಗಿದ್ದರೆ, ತಕ್ಷಣ ಆರೋಗ್ಯ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆ ಮಾಡಿ ತಿಳಿಸಬೇಕು. ಈ ಒಂದೇ ಒಂದು ಕ್ರಮದಿಂದ ಮುಂದಿನ ದಿನಗಳಲ್ಲಿ ಸೋಂಕು ಹರಡುವ ಪ್ರಕರಣಗಳು ಕಡಿಮೆ ಮಾಡಬಹುದು. ಅಲ್ಲದೆ, ಆರೋಗ್ಯವಾಗಿರುವವರು ಸಹ ಈ ಕೆಲ ಕ್ರಮಗಳನ್ನು ಕೈಗೊಳ್ಳಬೇಕು.
ಮಾಸ್ಕ್ಗಳ ಕಡ್ಡಾಯ ಬಳಕೆ: ಎಲ್ಲರೂ ಮಾಸ್ಕ್ಗಳನ್ನು ಧರಿಸಬೇಕು. ಪ್ರತೀ ವ್ಯಕ್ತಿಗೆ ಎರಡರಂತೆ ಮರುಬಳಕೆಯ ಮಾಸ್ಕ್ಗಳು ಇರುವುದು ಅನಿವಾರ್ಯ. ಮನೆಯಲ್ಲಿ ಇರುವ ಸ್ವಚ್ಛ ಬಟ್ಟೆಯಿಂದಲೇ ಮಾಸ್ಕ್ ತಯಾರಿಸಬಹುದಾಗಿದೆ. ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಲೇಬೇಕು. ಪ್ರತಿಯೊಬ್ಬರಿಗೆ ಎನ್-95 ಮಾಸ್ಕ್ಗಳನ್ನು ತಯಾರಿಸಿ, ವಿತರಿಸಲು ಬೇಕಾಗುವ ಉತ್ಪಾದಕತೆ ಸಾಮರ್ಥ್ಯ ಯಾವ ದೇಶದಲ್ಲಿಯೂ ಇರುವುದಿಲ್ಲ. ಎಲ್ಲರೂ ಎನ್-95 ಮಾಸ್ಕ್ ಧರಿಸುವ ಅವಶ್ಯಕತೆಯೂ ಇಲ್ಲ. ರೋಗಿಗಳ ನಿಕಟ ಸಂಪರ್ಕದಲ್ಲಿ ಇರುವವರು ಮಾತ್ರ ಎನ್-95 ಮಾಸ್ಕ್ಗಳನ್ನು ಧರಿಸಬೇಕು. ಹಾಗಾಗಿ, ಉಳಿದವರು ಇದನ್ನು ವ್ಯರ್ಥಗೊಳಿಸಬಾರದು ಅಥವಾ ಅನವಶ್ಯಕ ಸಂಗ್ರಹ ಮಾಡಬಾರದು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು: ಒಬ್ಬ ಸೋಂಕಿತ ವ್ಯಕ್ತಿಯಿಂದ 500 ಜನರಿಗೆ ಸೋಂಕು ಹರಡಬಹುದು. ಆದುದರಿಂದ ಪರಿಸ್ಥಿತಿಯ ತೀವ್ರತೆಯನ್ನು ಅರಿತು ಜನತೆಯೇ ತಮ್ಮ ಮಧ್ಯೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ. ಮಾರುಕಟ್ಟೆಗಳು, ಸಾರ್ವಜನಿಕ ರಸ್ತೆಗಳು, ಬಸ್ನಿಲ್ದಾಣ, ರೈಲ್ವೆನಿಲ್ದಾಣ ಮುಂತಾದ ಹೆಚ್ಚಿನ ಜನಸಾಂದ್ರತೆಯುಳ್ಳ ಪ್ರದೇಶಗಳನ್ನು ಗ್ರಾಮ ಪಂಚಾಯ್ತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜತೆಗೆ ಸಮಾಲೋಚಿಸಿ, ಪೊಲೀಸ್ ಇಲಾಖೆ ಗುರುತಿಸಿದೆ. ಪೊಲೀಸ್ ಇಲಾಖೆಗೆ ಸಹಕರಿಸಲು ಸ್ಥಳೀಯ ಸ್ವಯಂಸೇವಕರು ಕೂಡ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನತೆಯಲ್ಲಿ ಅರಿವು ಮೂಡಿಸಬೇಕಿದೆ.
ಜನಸಾಂದ್ರತೆ ಹೆಚ್ಚಿರುವ ಜಾಗಗಳಲ್ಲಿ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಆದುದರಿಂದ ತಪ್ಪು ಮಾಡುವವರು ಸಿಕ್ಕಿಬಿದ್ದು ಶಿಕ್ಷೆ ಅನುಭವಿಸುವ ಬದಲು ತಮ್ಮನ್ನು ತಾವೇ ಶಿಸ್ತಿನಲ್ಲಿ ಇಟ್ಟುಕೊಂಡು ಚಟುವಟಿಕೆಗಳನ್ನು ಎಚ್ಚರದಿಂದ ನಡೆಸಿದರೆ ಪೊಲೀಸರ ಕೆಲಸ ಸುಲಭ ಮಾಡಲು ಸಹಕಾರ ನೀಡಿದಂತಾಗುತ್ತದೆ.
ಕಾನೂನು ಸುವ್ಯವಸ್ಥೆ: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಇನ್ನು ಮುಂದೆ ಜನರು ಸ್ವಶಿಸ್ತನ್ನು ಪ್ರದರ್ಶಿಸಬೇಕು, ಇಲ್ಲವಾದಲ್ಲಿ ಅದರ ದುಷ್ಪರಿಣಾಮ ಅನುಭವಿಸಬೇಕು. ಈಗಾಗಲೇ ಗ್ರಾಮ ಮಟ್ಟದಲ್ಲಿ ವಿಚಕ್ಷಣಾ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ವಿುಕ ಕಾರ್ಯಕ್ರಮಗಳನ್ನು ನಿಯಂತ್ರಿಸುತ್ತವೆ. ಸಾಮಾಜಿಕ ಅಂತರದ ಅರಿವು ಮೂಡಿಸಲು ನಿಯೋಜಿಸಲ್ಪಟ ್ಟ
ಸ್ವಯಂಸೇವಕರು ಮನೆ-ಮನೆಗೆ ತೆರಳಿ ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡುವರು.
ಗ್ರಾಮಾಂತರ ಸ್ಥಳೀಯ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ವಾರ್ಡ್ವಾರು ಸ್ವಯಂಸೇವಕರನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡಿ, ವಾಟ್ಸ್ಆಪ್ ಗುಂಪುಗಳ ಮೂಲಕ ಹರಡುವ ಮಾಹಿತಿಗಳನ್ನು, ಸುಳ್ಳುಸುದ್ದಿಗಳನ್ನು ತಡೆಯಲು ಮತ್ತು ಗಮನಿಸಲು ಅವರಿಗೆ ನೀಡಿರುವ ಚೆಕ್ಲಿಸ್ಟ್ ಪ್ರಕಾರ ಕ್ರಮ ವಹಿಸುವಂತೆ ಮಾಡಬೇಕಾಗಿದೆ.
ಆರ್ಥಿಕ ಸಮೀಕ್ಷೆ ಆಧಾರದ ಮೇಲೆ ಅವಶ್ಯಕ ವಸ್ತುಗಳ ಸಂಬಂಧಿತ ಮುಖ್ಯ ಉದ್ಯಮಗಳು, ಉತ್ಪಾದಕಾ ಘಟಕಗಳು, ಸಣ್ಣ ಕೈಗಾರಿಕೆಗಳನ್ನು ಗುರುತಿಸಿ ಹಾಗೂ ಈ ಸಂಸ್ಥೆಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಉತ್ಪಾದನಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವಶ್ಯಕವಾದ ಕಚ್ಚಾ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಈ ಪ್ರಕ್ರಿಯೆಯಲ್ಲಿ ಉದ್ಯಮಿಗಳು ಹಾಗೂ ಕಾರ್ವಿುಕರನ್ನು ಸಮನ್ವಯಗೊಳಿಸಿ, ಪರಸ್ಪರ ಸಮಸ್ಯೆಗಳನ್ನು ಬಗೆಹರಿಸಿ, ಆರ್ಥಿಕ ಅಭಿವೃದ್ಧಿಗಾಗಿ ದುಡಿಯಬೇಕಿದೆ. ಯಾವ ಉದ್ಯಮ ಮನೆಯಿಂದಲೇ ನಡೆಸಲು ಸಾಧ್ಯವಿದೆ ಅದನ್ನು ಇನ್ನು ಸ್ವಯಂಪ್ರೇರಣೆಯಿಂದ ಮುಂದುವರಿಸುವುದು ಉತ್ತಮ.
ವೈದ್ಯಕೀಯ ವ್ಯವಸ್ಥೆಗಳು: ಮಾನವ ಸಂಪನ್ಮೂಲ, ಮೂಲಸೌಕರ್ಯ ಹಾಗೂ ವೈದ್ಯಕೀಯ ಸಲಕರಣೆಗಳ ಪೂರೈಕೆಯೊಂದಿಗೆ ಆರೋಗ್ಯ ಇಲಾಖೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಪ್ರತೀ ಜಿಲ್ಲೆಯ ಅವಶ್ಯಕತೆ ಮತ್ತು ಬೇಡಿಕೆಗೆ ಅನುಗುಣವಾಗಿ ಆಯವ್ಯಯ ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಆದರೆ ಜನರು ಆದಷ್ಟು ಆಸ್ಪತ್ರೆಗೆ ಹೋಗದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಕ್ರಮ ವಹಿಸುವುದು ಸೂಕ್ತ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬದಲಿ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಾದ ಆರ್ಯುವೇದ, ಹೋಮಿಯೋಪಥಿ, ಇತ್ಯಾದಿ ಪದ್ಧತಿಗಳನ್ನು ಅನುಸರಿಸುವುದು.
ಆಗಾಗ ಬಿಸಿನೀರನ್ನು ಕುಡಿಯುವುದು.
ಐಸ್ಕ್ರೀಂ, ಕೋಲ್ಡ್ಡ್ರಿಂಕ್ ಮತ್ತು ಜಂಕ್ಫುಡ್ನಿಂದ ದೂರ ಇರುವುದು.
ಬಿಸಿಹವೆ ತೆಗೆದುಕೊಂಡು ಮೂಗು ಮತ್ತು ಗಂಟಲನ್ನು ಸ್ವಚ್ಛ ಮಾಡಿಕೊಳ್ಳುವುದು.
ಆಯುಷ್ ಇಲಾಖೆ ಸಹಾಯದಿಂದ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಪ್ರತೀ ವಾರ್ಡ್ಗಳಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಪೌಷ್ಠಿಕತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಸಂಬಂಧವಾಗಿ ಸ್ಥಳೀಯ ಕೇಬಲ್ ಟಿ.ವಿ., ರೇಡಿಯೋಗಳು ಪ್ರಚಾರ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲು ಸಹಕಾರ ನೀಡತಕ್ಕದ್ದು.
ಲಾಕ್ಡೌನ್ ಬೇಗ ಮುಗಿಯಬೇಕು ಎಂದರೆ ಜನರ ಜವಾಬ್ದಾರಿ ಹೆಚ್ಚುವುದು. ಪ್ರತಿಯೊಬ್ಬ ನಾಗರಿಕನೂ ಪ್ರಜ್ಞಾವಂತ ಸ್ವಯಂಸೇವಕನಂತೆ ಕೆಲಸ ಮಾಡಬೇಕಾಗುತ್ತದೆ. ಸರ್ಕಾರವು ನಮ್ಮ ಒಳಿತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದಕ್ಕೆ ನಾವು ಸಹಕರಿಸಬೇಕು. ಪ್ರಕೃತಿಯಲ್ಲಿ ಎಲ್ಲರ ಅಗತ್ಯಕ್ಕಾಗಿ ಸಾಕಷ್ಟು ಸಂಪನ್ಮೂಲಗಳಿವೆ. ಆದರೆ ದುರಾಸೆಗಾಗಿ ಯಾವತ್ತೂ ಸಾಲುವುದಿಲ್ಲ. ಏನು ಇದೆಯೋ ಅದರಲ್ಲೇ ಸಂತೋಷ ಪಡಬೇಕು. ಇದೇ ಮಾನಸಿಕತೆ ಮುಂದುವರಿಸಿಕೊಂಡು ಹೋದರೆ ಯಾವುದೇ ಸಂಕಷ್ಟ ಎದುರಿಸಲು ನಾವು ಸಶಕ್ತರಾಗುತ್ತೇವೆ. ಜನತಾ ಕರ್ಫ್ಯೂವನ್ನು ಶಿಸ್ತಿನಿಂದ ಪಾಲಿಸಿದ್ದೇವೆ, ಅದೇ ರೀತಿ ಜನತಾ ಸ್ವಚ್ಛತೆ, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ವಯಂಸೇವಾ ಪ್ರವೃತ್ತಿ, ಆರೋಗ್ಯಕರ ಜೀವನಶೈಲಿ, ಕಾನೂನು ಹಾಗೂ ಶಿಸ್ತಿನ ಪಾಲನೆ, ಇತ್ಯಾದಿಗಳನ್ನು ಸ್ವಯಂಪ್ರೇರಣೆಯಿಂದ ಪಾಲಿಸಲು, ಬನ್ನಿ, ನಾವೆಲ್ಲರೂ ಸಿದ್ಧರಾಗೋಣ.
(ಲೇಖಕರು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ)