ಅಂಕಣ

ಉಪ್ಪು ಜಾಸ್ತಿ ಆದರೆ ಏನು ಮಾಡಬೇಕು..?; ಆರೋಗ್ಯ-ಸೌಂದರ್ಯ ಸಲಹೆ..

rashmirhebbur

‘ರುಚಿಗೆ ತಕ್ಕಂತೆ ಉಪ್ಪು’ ಎಂಬಂತೆ ಅಡುಗೆಯಲ್ಲಿ ಉಪ್ಪು ಸರಿಯಾಗಿದ್ದರೆ ಅದಕ್ಕೊಂದು ರುಚಿ. ಎಷ್ಟೇ ಚೆನ್ನಾಗಿ ಅಡುಗೆ ಮಾಡಿ ಕೊನೆಗೆ ಉಪ್ಪು ಹಾಕದಿದ್ದರೆ ಅದಕ್ಕೆ ಸ್ವಾದವೇ ಇರುವುದಿಲ್ಲ. ಅಡುಗೆಗೆ ಉಪ್ಪು ಹಾಕುವುದೂ ಒಂದು ಕಲೆ. ಎಲ್ಲರೂ ಅದರಲ್ಲಿ ಪರಿಣಿತರೆನಿಸುವುದಿಲ್ಲ. ಕೆಲವರು ಅಡುಗೆ ಚೆನ್ನಾಗಿ ಬಲ್ಲವರಾಗಿದ್ದರೂ ಕೊನೆಯಲ್ಲಿ ಉಪ್ಪು ಹಾಕಲು ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಕೆಲ ಮನೆಗಳಲ್ಲಿ ಗಂಡಂದಿರು ಅಡುಗೆ ಮಾಡುತ್ತಾರಾದರೂ ಉಪ್ಪು ಹಾಕಲು ಹೆಂಡತಿ ಬೇಕೇ ಬೇಕು. ಆದರೆ ಕೆಲ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಅಡುಗೆ ಮಾಡಿ ಉಪ್ಪು ಹಾಕುವುದು ಗಂಡಸರೇ..ಅಡುಗೆಗೆ ಉಪ್ಪು ಸರಿಯಾದ ಪ್ರಮಾಣದಲ್ಲಿ ಬಿದ್ದರೆ ಬಾಯಿ ಚಪ್ಪರಿಸಿಕೊಂಡು ಸವಿಯಬಹುದು. ಕಡಿಮೆಯಾದರೆ ಮತ್ತೆ ಸೇರಿಸಬಹುದು. ಒಂದು ವೇಳೆ ಜಾಸ್ತಿಯಾದರೆ ಏನು ಮಾಡೋದು? ಇಲ್ಲಿವೆ ಕೆಲವು ಟಿಪ್ಸ್...

  • ಸಾರು, ಸಾಂಬಾರ್​ಗಳಲ್ಲಿ ಉಪ್ಪು ಹೆಚ್ಚಾದರೆ ಸ್ವಲ್ಪ ಬಿಸಿ ನೀರು ಕುದಿಸಿ ಹಾಕಬಹುದು.
  • 2-3 ಆಲೂಗಡ್ಡೆ ಹಾಕಿ ಬೇಯಿಸಿ ತೆಗೆಯಬಹುದು.
  • ಬ್ರೆಡ್ ಹಾಕಿ 1ರಿಂದ 2 ನಿಮಿಷ ಬಿಟ್ಟು ತೆಗೆದರೆ ಅದು ಉಪ್ಪನ್ನು ಹೀರಿಕೊಳ್ಳುತ್ತದೆ.
  • ಅಕ್ಕಿ ಹಿಟ್ಟು ಹಾಕಿ 4-5 ನಿಮಿಷ ಕುದಿಸಬೇಕು.
  • ಎರಡು ಚಮಚ ಕಡಲೆ ಹಿಟ್ಟನ್ನು ಹುರಿದು ಪದಾರ್ಥಕ್ಕೆ ಹಾಕಬಹುದು.
  • ಕೆಲವು ಪದಾರ್ಥಗಳಿಗೆ ನಿಂಬೆರಸ ಸೇರಿಸಿದರೆ ರುಚಿ ಸಮತೋಲನಕ್ಕೆ ಬರುತ್ತದೆ.
  • ಹಸಿ ಈರುಳ್ಳಿ ಹಾಕಿ ಮತ್ತೆ ತೆಗೆಯಬಹುದು.