ನವದೆಹಲಿ: ವಿಶೇಷಾಧಿಕಾರ ನೀಡಲಾಗಿದ್ದ ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರದ ನಿಲುವು ಸಂವಿಧಾನಬದ್ಧ ಎಂದು ಹೇಳಿದ ಸುಪ್ರೀಂ ಕೋರ್ಟ್ ತೀರ್ಪಿಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ತೀರ್ಪಿನಿಂದ ನಿರಾಶೆಗೊಂಡಿಲ್ಲ. ಹೋರಾಟ ಮುಂದುವರಿಯುತ್ತದೆ. ಬಿಜೆಪಿ ಇಲ್ಲಿಗೆ ತಲುಪಲು ದಶಕಗಳನ್ನು ತೆಗೆದುಕೊಂಡಿತು. ನಾವು ಕೂಡ ದೀರ್ಘಾವಧಿಗೆ ಸಿದ್ಧರಿದ್ದೇವೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್, ತೀರ್ಪನ್ನು "ದುಃಖದಾಯಕ ಮತ್ತು ದುರದೃಷ್ಟಕರ" ಎಂದಿದ್ದು, ಈ ಭಾಗದ ಜನರಿಗೆ ತೀರ್ಪಿನಿಂದ ಸಂತಸವಾಗಿಲ್ಲ, ಆದರೆ ನಾವು ನ್ಯಾಯಾಲಯ ತೀರ್ಪನ್ನು ಒಪ್ಪಿಕೊಳ್ಳಬೇಕಿದೆ ಎಂದಿದ್ದಾರೆ.
ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿ, ಜಮ್ಮು ಮತ್ತು ಕಾಶ್ಮೀರದ ಜನರು ಭರವಸೆ ಕಳೆದುಕೊಳ್ಳುವುದಿಲ್ಲ, ಗೌರವ ಮತ್ತು ಘನತೆಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ಇದು ನಮಗೆ ಅಂತ್ಯ ಹಾಗೂ ಅಂತಿಮ ಮಾರ್ಗವಲ್ಲ. ಸಮಗ್ರ ಭಾರತದ ಕಲ್ಪನೆಗೆ ಆದ ನಷ್ಟ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ತೀರ್ಪು ನಿರಾಶಾದಾಯಕವಾಗಿದೆ. ಮತ್ತೊಮ್ಮೆ ಜಮ್ಮು ಮತ್ತು ಕಾಶ್ಮೀರದ ಜನರಿಗೆ ನ್ಯಾಯ ಸಿಕ್ಕಿಲ್ಲ. 370 ನೇ ವಿಧಿಯನ್ನು ಕಾನೂನುಬದ್ಧವಾಗಿ ಅಳಿಸಿಹಾಕಿರಬಹುದು, ಆದರೆ ಯಾವಾಗಲೂ ಅದು ನಮ್ಮ ರಾಜಕೀಯ ಆಕಾಂಕ್ಷೆಗಳ ಭಾಗವಾಗಿ ಉಳಿಯುತ್ತದೆ. ಎಂದು ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್ ಹೇಳಿದರು.