ಅಂಕಣ

ಬೇವು ಬೆಲ್ಲದೊಳಿದ್ದೇನು ಫಲ?: ಆ ಕ್ಷಣ..

ಮಧ್ಯವಯಸ್ಕ ಮಹಿಳೆಯೊಬ್ಬಳು 2019ರ ಅಕ್ಟೋಬರ್ 17ರಂದು ಸಾಮಾಜಿಕ ಜಾಲತಾಣವೊಂದರಲ್ಲಿ ಒಂದು ವಿಡಿಯೋ ಹಾಕಿ ಅದರಲ್ಲಿ ಹೀಗೆ ಹೇಳಿದ್ದಳ- ‘ಈ ದಿನ ಮುಂಜಾನೆ 7.30 ಗಂಟೆಗೆ ನಾನು ಮಹಾನಗರದಲ್ಲಿರುವ ನನ್ನ ಬಡಾವಣೆಯಲ್ಲಿ ಎಂದಿನಂತೆ ಸೈಕ್ಲಿಂಗ್ ಮಾಡುತ್ತಿದ್ದೆ. ಹಿಂದಿನಿಂದ ಒಂದು ವಾಹನ ಬಂದಾಗ ನಾನು ರಸ್ತೆಯ ಎಡಬದಿಗೆ ಹೋಗಿ ದಾರಿ ಮಾಡಿಕೊಟ್ಟೆ. ಆದರೆ ಆ ವಾಹನ ನನ್ನ ತೀರಾ ಸನಿಹಕ್ಕೇ ಬಂದುನಿಂತು ಹಾರನ್ ಬಾರಿಸಿದಾಗ ಸೈಕಲನ್ನು ನಿಲ್ಲಿಸಿ ಕಾರಿನ ಚಾಲಕನತ್ತ ನೋಡಿದೆ.

ಸುಮಾರು 40-45 ವರ್ಷದವನಾಗಿದ್ದು ಟೀ ಷರ್ಟ್ ಧರಿಸಿದ್ದ ಆತ ನನ್ನನ್ನು ಹಾದಿ ಕೇಳುವಂತೆ ಏನನ್ನೋ ಬಡಬಡಿಸಿ ಇದ್ದಕ್ಕಿದ್ದಂತೆ ತನ್ನ ಪ್ಯಾಂಟ್​ನ ಜಿಪ್ ಕಳಚಿ ಜನನಾಂಗವನ್ನು ತೋರಿಸಿದ. ಗಾಬರಿಯಾದ ನಾನು ಪೊಲೀಸ್ ಕಂಟ್ರೋಲ್ ರೂಮಿಗೆ ಕಾಲ್ ಮಾಡುತ್ತೇನೆ ಎಂದು ಮೊಬೈಲ್ ಹೊರತೆಗೆದೆ. ಆದರೂ ಆತ ಕಾರನ್ನು ನನ್ನ ಸನಿಹಕ್ಕೇ ತಂದು ಅಶ್ಲೀಲ ಭಾಷೆಯಲ್ಲಿ ಬೈಯ್ಯತೊಡಗಿದಾಗ ಯಾರಾದರೂ ಸಹಾಯಮಾಡಿ ಎಂದು ಅರಚತೊಡಗಿದೆ. ಆ ಸಮಯದಲ್ಲಿ ರಸ್ತೆ ನಿರ್ಜನವಾಗಿದ್ದ ಕಾರಣ ಸಹಾಯ ಸಿಗಲಿಲ್ಲ. ನಾನು ಕಾರಿನ ಫೋಟೋಗಳನ್ನು ತೆಗೆಯಲಾರಂಭಿಸಿದಾಗ ಆತ ಅಲ್ಲಿಂದ ಪರಾರಿಯಾದ. ಆ ಕಾರು ಬೂದು ಬಣ್ಣದ ಮಾರುತಿ ಸ್ವಿಫ್ಟ್ ಆಗಿದ್ದು, ಹಿಂದಿನ ನಂಬರ್ ಪ್ಲೇಟ್ ಮುರಿದಿದೆ. ಅದರ ಹಿಂದಿನ ಗಾಜಿನ ಮೇಲೆ ಹನುಮಾನ್ ಚಿತ್ರವಿದೆ. ಕಾರಿನಲ್ಲಿ ಚಾಲಕನೊಬ್ಬನೇ ಇದ್ದ. ಈ ವಿಕೃತ ವ್ಯಕ್ತಿಯ ಬಗ್ಗೆ ಎಚ್ಚರದಿಂದಿದ್ದು ಅವನನ್ನು ಹಿಡಿಯಲು ಸಹಾಯ ಮಾಡಿ.’

ಈ ವಿಡಿಯೋವನ್ನು ನೆಟ್ಟಿಗರು ಕೂಡಲೇ ವೈರಲ್ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದರು. ಆ ವ್ಯಕ್ತಿಯನ್ನು ಕೂಡಲೇ ಪತ್ತೆಮಾಡಿ ದಸ್ತಗಿರಿ ಮಾಡಬೇಕೆಂದು ಆಗ್ರಹಿಸಿದರು. ಪೊಲೀಸರು ವಿಡಿಯೋ ಹಾಕಿದ್ದ ಮಹಿಳೆಯನ್ನು ಪತ್ತೆಮಾಡಿ ಅವಳಿಂದ ಘಟನೆಯ ಹೆಚ್ಚಿನ ವಿವರಗಳನ್ನು ಪಡೆದು ಪ್ರಕರಣ ದಾಖಲಿಸಿದರು. ಫಿರ್ಯಾದಿಯು ಸೈಕ್ಲಿಂಗ್ ಮಾಡಿದ್ದ ರಸ್ತೆಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಫುಟೇಜ್ ಪರಿಶೀಲಿಸಿದರು. ಆದರೆ ಯಾವ ಸುಳಿವೂ ಸಿಗಲಿಲ್ಲ.

ಮೂರು ದಿನಗಳ ನಂತರ ಅದೇ ಮಹಾನಗರದ ಕಾಲೇಜ್ ಯುವತಿಯೊಬ್ಬಳು ವಿಡಿಯೋವನ್ನು ವಾಟ್ಸ್ ಆಪ್​ನಲ್ಲಿ ಪೋಸ್ಟ್ ಮಾಡಿ ಹೀಗೆ ಹೇಳಿದಳು- ‘ಪಿಯುಸಿ ವಿದ್ಯಾರ್ಥಿನಿಯಾದ ನಾನು ಇಂದು ಬೆಳಗ್ಗೆ 7 ಗಂಟೆಗೆ ಎಂದಿನಂತೆ ಟ್ಯೂಷನ್ ಕ್ಲಾಸ್​ಗೆಂದು ಮನೆಯಿಂದ ನಡೆದುಕೊಂಡು ಹೋಗುತ್ತಿದ್ದೆ. ಆ ಸಮಯದಲ್ಲಿ ಒಂದು ಕಾರ್ ಬಂದು ನನ್ನ ಪಕ್ಕದಲ್ಲಿ ನಿಂತಿತು. ಕಾರಿನ ಚಾಲಕ ಮಧ್ಯವಯಸ್ಕನಾಗಿದ್ದು ಬಿಳಿಯ ಬಣ್ಣದ ಟೀ ಶರ್ಟ್ ಧರಿಸಿ ಟ್ರಾಕ್ ಪ್ಯಾಂಟ್ ಧರಿಸಿದ್ದ. ಆತ ಏನನ್ನೋ ಕೇಳಬಯಸಿದ್ದಾನೆಂದು ಊಹಿಸಿ ನಾನು ನಿಂತೆ. ಆತ ನನ್ನ ಬಳಿಗೆ ಬಂದ. ಏನು ಬೇಕು ಎಂದು ಕೇಳಿದಾಗ ‘ನೀನೇ ಬೇಕು’ ಎಂದು ತನ್ನ ಟ್ರಾಕ್ ಪ್ಯಾಂಟ್ ಕಳಚಿದ. ನಾನು ಗಾಬರಿಯಿಂದ ಓಡತೊಡಗಿದೆ. ಆತ ಮತ್ತೆ ಕಾರಿನೊಳಗೆ ಕುಳಿತು ನನ್ನ ಹಿಂದೆ ನಿಧಾನವಾಗಿ ಡ್ರೖೆವ್ ಮಾಡುತ್ತ ಬಂದ. ಎದುರಿಗೆ ಬೆಳಗಿನ ವಾಕಿಂಗ್ ಮಾಡುತ್ತಿದ್ದ ಕೆಲವರು ಕಂಡರು. ನಾನು ಅವರ ಬಳಿ ಹೋಗಿ ಹೇಳುವಷ್ಟರಲ್ಲಿ ಆತ ಸ್ಪೀಡಾಗಿ ವಾಹನ ಚಲಾಯಿಸಿಕೊಂಡು ಹೊರಟುಹೋದ. ವಾಕಿಂಗ್ ಮಾಡುತ್ತಿದ್ದ ಜನ ಅಲ್ಲಿಗೆ ಬಂದ ಮೋಟರ್ ಸೈಕಲೊಂದನ್ನು ನಿಲ್ಲಿಸಿ ಕಾರನ್ನು ಫಾಲೋ ಮಾಡಲು ಹೇಳಿದರು. ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಕಾರ್ ಸಿಗಲಿಲ್ಲವೆಂದು ವಾಪಸಾದ. ಅದೊಂದು ಹಳೆಯ ಬೂದು ಬಣ್ಣದ ಸುಜುಕಿ ಸ್ವಿಫ್ಟ್ ಕಾರಾಗಿದ್ದು ಅದರ ಹಿಂಬದಿ ನಂಬರ್ ಪ್ಲೇಟ್ ಒಡೆದಿತ್ತು.’

ಈ ವಿಡಿಯೋ ಸಹ ವೈರಲ್ ಆದಾಗ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದರು. ದೂರುದಾರರಿಬ್ಬರನ್ನೂ ಒಟ್ಟಿಗೆ ಭೇಟಿ ಮಾಡಿದ ತನಿಖಾಧಿಕಾರಿ ಅವರ ವಿವರಣೆಯಂತೆ ಶಂಕಿತನ ಚಿತ್ರವೊಂದನ್ನು ತಯಾರು ಮಾಡಿಸಿ ತಮ್ಮ ಕಡತಗಳಲ್ಲಿದ್ದ ರೌಡಿಗಳ ಜತೆಗೆ ಅದನ್ನು ಹೋಲಿಸತೊಡಗಿದರು. ಘಟನೆಗಳು ನಡೆದಿದ್ದ ಬಡಾವಣೆಗಳಲ್ಲಿ ದಾಖಲಾಗಿರುವ ಸುಜುಕಿ ಸ್ವಿಫ್ಟ್ ಕಾರುಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದರು. ಏತನ್ಮಧ್ಯೆ ವಾರದ ನಂತರ, ಹೋಟೆಲೊಂದರಲ್ಲಿ ಸ್ವಾಗತಕಾರಿಣಿಯಾಗಿದ್ದ ಮಹಿಳೆ ವಿಡಿಯೋವನ್ನು ಜಾಲತಾಣಗಳಿಗೆ ಹಾಕಿದಳು. ‘ಆ ದಿನ ಬೆಳಗ್ಗೆ 6.30ಕ್ಕೆ ನಾನು ಸ್ಕೂಟರ್​ನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ರಸ್ತೆಯಲ್ಲಿ ಅಡ್ಡಹಾಕಿ ತನ್ನ ಜನನಾಂಗವನ್ನು ತೋರಿಸಿ ಅತ್ಯಾಚಾರ ಮಾಡುವುದಾಗಿ ಹೆದರಿಸಿದ. ಆತ ಮಧ್ಯವಯಸ್ಕನಾಗಿದ್ದು ಐದೂವರೆ ಅಡಿ ಎತ್ತರವಿದ್ದ, ಹಸಿರು ಟೀ ಶರ್ಟ್ ಧರಿಸಿದ್ದ’ ಎಂದು ಹೇಳಿದಳು. ಪೊಲೀಸರು ಆಕೆಯನ್ನು ಭೇಟಿಯಾಗಿ ಕಂಪ್ಯೂಟರ್ ಚಿತ್ರವನ್ನು ತೋರಿಸಿದಾಗ ಆತ ಚಿತ್ರವನ್ನು ಹೋಲುತ್ತಿದ್ದ ಎಂದಳು. ಘಟನೆಯ ಸ್ಥಳದಲ್ಲಿ ಸ್ವಿಫ್ಟ್ ಕಾರೊಂದು ನಿಂತಿತ್ತು. ಇನ್ನೊಂದು ಕೇಸು ದಾಖಲಾಯಿತು.

ವಿಕೃತ ವ್ಯಕ್ತಿ ಬೆಳಗಿನ 6ರಿಂದ 8ರ ಅವಧಿಯಲ್ಲಿಯೇ ಕೃತ್ಯವನ್ನೆಸಗುತ್ತಿದ್ದ ಕಾರಣ ಸಮವಸ್ತ್ರದಲ್ಲಿರದ ಮಹಿಳಾ ಪೊಲೀಸರನ್ನು ಅದೇ ಸಮಯದಲ್ಲಿ ಆ ಬಡಾವಣೆಗಳಲ್ಲಿ ಒಂಟಿಯಾಗಿ ನಡೆದೇ ಇಲ್ಲವೇ ದ್ವಿಚಕ್ರವಾಹನದಲ್ಲಿ ಓಡಾಡಲು ಸೂಚಿಸಲಾಯಿತು. ಇದಲ್ಲದೆ ತನಿಖಾ ತಂಡವು ಆ ಬಡಾವಣೆಯಿಂದ ಸಂಪರ್ಕ ಕಲ್ಪಿಸುವ ಕೂಡುದಾರಿಗಳ ಟ್ರಾಫಿಕ್ ಸಿಗ್ನಲ್​ಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ, ಅಲ್ಲಿ ಸಾಮಾನ್ಯವಾಗಿ ಓಡಾಡುವ ಬೂದು ಬಣ್ಣದ ಸ್ವಿಫ್ಟ್ ಕಾರುಗಳನ್ನು ಪರಿಶೀಲಿಸಿತು. ಅನುಮಾನ ಬಂದ 10 ಕಾರುಗಳ ಮಾಲೀಕರ ಮನೆಗಳಿಗೆ ಪೊಲೀಸರನ್ನು ಕಳಿಸಲಾಯಿತು.

ಇಂತಹ ಕಾರುಗಳಲ್ಲೊಂದು ಹೋಟೆಲ್ ಸ್ವಾಗತಕಾರಿಣಿ ವಾಸಿಸುತ್ತಿದ್ದ ಬಡಾವಣೆಯ ಒಂದು ಮನೆಯ ಕಾಂಪೌಂಡಿನಲ್ಲಿ ನಿಂತಿತ್ತು. ಆ ಕಾರಿನ ಹಿಂಬದಿಯ ನಂಬರ್ ಪ್ಲೇಟ್ ಮುರಿದಿದ್ದು ಅದರ ಹೊರಬದಿಯ ಗಾಜಿನ ಮೇಲೆ ಆಂಜನೇಯನ ಚಿತ್ರವನ್ನು ಕಂಡ ಪೊಲೀಸರು ತಮಗೆ ಬೇಕಾದ ಕಾರು ಸಿಕ್ಕಿತೆಂದು ಮನೆಯ ಕಾಲ್ ಬೆಲ್ ಬಾರಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಬಾಗಿಲು ತೆರೆದ ಸಂಜನಾ ಎನ್ನುವ ಮಹಿಳೆ ಕಾಂಪೌಂಡಿನಲ್ಲಿರುವ ಕಾರು ತನ್ನ ಹೆಸರಿನಲ್ಲಿದ್ದು ತಾನು ಶಾಲೆಯಲ್ಲಿ ಟೀಚರ್ ಎಂದಳು. ಅದನ್ನು ತಾನೇ ಉಪಯೋಗಿಸುತ್ತೇನೆಂದು ತಿಳಿಸಿದ ಆಕೆ ತನ್ನ ಗಂಡ ಕುಮಾರ್ ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಆಗಿದ್ದು ಡಿಸಿಪಿ ಕಚೇರಿಯಲ್ಲಿ ಕೆಲಸಮಾಡುತ್ತಿದ್ದಾನೆ ಎಂದಳು.

ಗೊಂದಲಕ್ಕೀಡಾದ ಪೊಲೀಸರು ಅಲ್ಲಿಂದ ವಾಪಸಾದರು. ಬೇರೆ ಯಾವುದೋ ಕಾರು ನಕಲಿ ನಂಬರ್ ಪ್ಲೇಟುಗಳನ್ನು ಉಪಯೋಗಿಸಿರಬಹುದೇ ಎಂದು ಯೋಚಿಸಿದರು. ಆದರೆ ಸಂಜನಾಳ ಮನೆಯಲ್ಲಿದ್ದ ಕಾರು ದೂರುದಾರರಿತ್ತಿದ್ದ ವಿವರಣೆಯನ್ನು ಹೋಲುತ್ತಿತ್ತು. ಆಗ ತನಿಖಾಧಿಕಾರಿ ಪಿ.ಎಸ್.ಐ ಕುಮಾರ್​ನ ಬಗ್ಗೆ ಗುಪ್ತವಾಗಿ ವಿಚಾರಣೆ ಮಾಡಿದರು. ಆತ ಡಿಸಿಪಿಯೊಬ್ಬರ ವಿಶೇಷ ದಳದಲ್ಲಿದ್ದು ಸೂಕ್ಷ್ಮ ಅಪರಾಧಗಳ ಪತ್ತೆಗಾಗಿ ನೇಮಿಸಿರುವ ತನಿಖಾ ದಳದ ಪ್ರಮುಖ ಸದಸ್ಯನೆಂದು ತಿಳಿಯಿತು. 40 ವರ್ಷ ವಯಸ್ಸಿನ ಕುಮಾರ್, 8 ವರ್ಷಗಳ ಹಿಂದೆ ನೇರ ನೇಮಕಾತಿ ಹೊಂದಿ ಎಲ್ಲ ಹಿರಿಯ ಅಧಿಕಾರಿಗಳಿಗೂ ಸಮೀಪದಲ್ಲಿರುವುದಾಗಿ ತಿಳಿಯಿತು. ಆದರೂ ತನಿಖಾಧಿಕಾರಿ ಕಂಪ್ಯೂಟರ್ ಮೂಲಕ ರಚಿಸಿದ್ದ ಚಿತ್ರವನ್ನು ಇಲಾಖಾ ಕಡತದಲ್ಲಿದ್ದ ಕುಮಾರ್​ನ ಫೋಟೋದೊಡನೆ ಹೋಲಿಸಿದರು. ಉತ್ತಮ ಹೋಲಿಕೆ ಕಂಡುಬಂದಾಗ ಅವರು ಕುಮಾರ್​ನ ಫೋಟೋವನ್ನು ಮೂರೂ ದೂರುದಾರರಿಗೆ ತೋರಿಸಿದರು. ನಿಸ್ಸಂದೇಹವಾಗಿ ಇದೇ ವ್ಯಕ್ತಿಯೇ ನಮಗೆ ತೊಂದರೆ ಕೊಟ್ಟವನು ಎಂದು ಅವರೆಲ್ಲರೂ ಹೇಳಿದಾಗ ಕುಮಾರ್​ನನ್ನು ವಿಚಾರಣೆಗೆ ಕರೆಸಿದರು. ‘ನಾನು ನನ್ನ ಪತ್ನಿಯ ಕಾರನ್ನು ಉಪಯೋಗಿಸುವುದೇ ಇಲ್ಲ, ನನ್ನ ಬಳಿ ಹೊಸ ಫಾರ್ಚುನರ್ ವಾಹನವಿದೆ, ಬೇಕಾದರೆ ಪತ್ನಿಯನ್ನೇ ಕೇಳಿ’ ಎಂದ. ತನಿಖಾಧಿಕಾರಿ ಅವನೆದುರಿಗೇ ಸಂಜನಾಳಿಗೆ ಫೋನ್ ಮಾಡಿ, ‘ಗಂಡ ನಿನ್ನ ಕಾರನ್ನು ಯಾವಾಗಲಾದರೂ ಉಪಯೋಗಿಸುತ್ತಾನೆಯೇ’ ಎಂದು ಕೇಳಿದಾಗ, ‘ಬೆಳಗ್ಗೆ ಜಿಮ್ೆ ಹೋಗಿಬರಲು ಅದನ್ನೇ ಉಪಯೋಗಿಸುತ್ತಾನೆ’ ಎಂದಳು. ಮೂರೂ ಜನ ದೂರುದಾರರನ್ನು ಕುಮಾರ್​ನ ಜತೆಗೆ ಮುಖಾಮುಖಿ ಮಾಡಿಸಿದಾಗ ಆತ ತಪ್ಪೊಪ್ಪಿಕೊಂಡು ಹೇಗಾದರೂ ಮಾಡಿ ತನ್ನನ್ನು ರಕ್ಷಿಸುವಂತೆ ಅವರನ್ನು ಕೋರಿದ.

ಕುಮಾರ್ ಪೊಲೀಸ್ ಅಧಿಕಾರಿಯೆಂದು ತಿಳಿದ ದೂರುದಾರರು ಹೆದರಿ ದೂರನ್ನು ವಾಪಸ್ ಪಡೆಯುವುದಾಗಿ ತಿಳಿಸಿದರು. ಅವರನ್ನು ಹಿರಿಯ ಅಧಿಕಾರಿಗಳ ಬಳಿ ಕರೆದೊಯ್ದು, ಆರೋಪಿ ತೊಂದರೆ ಕೊಡದಂತೆ ರಕ್ಷಣೆ ನೀಡುವುದಾಗಿ ಆಶ್ವಾಸನೆ ಕೊಡಿಸಿದಾಗ ಕುಮಾರನ ವಿರುದ್ಧ ಸಾಕ್ಷ್ಯ ನೀಡಲೊಪ್ಪಿದರು.

ಕುಮಾರ್​ನನ್ನು ಬಂಧಿಸಿ ಅವನ ಸೆಲ್​ಫೋನ್ ಲೊಕೇಷನ್​ಗಳ ಮೂಲಕ ಆತ ಸದರಿ ದಿನಗಳು ಮತ್ತು ವೇಳೆಯಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಹಾಜರಿದ್ದನೆಂದು ಗುರುತಿಸಲಾಯಿತು. ಮೂರೂ ಫಿರ್ಯಾದುದಾರರು ನ್ಯಾಯಾಧೀಶರೊಬ್ಬರ ಮುಂದೆ ಗುರುತು ಹಿಡಿಯುವ ಪರೇಡಿನಲ್ಲಿ ಅವನನ್ನು ಗುರುತಿಸಿದರು. ಕುಮಾರನ ವಿರುದ್ಧ ದಂಡಸಂಹಿತೆ ಕಲಂ 294, 354, 354 ಡಿ ಮತ್ತು ಪೋಕ್ಸೋ ಕಾಯ್ದೆಗಳನ್ವಯ ಆರೋಪಪಟ್ಟಿಗಳನ್ನು ಸಲ್ಲಿಸಲಾಯಿತು. ನ್ಯಾಯಾಲಯದಲ್ಲಿನ ಪ್ರಕರಣಗಳ ವಿಚಾರಣೆ ಮುಗಿಯುವ ಮೊದಲೇ, ಇಲಾಖೆಗೆ ಕೆಟ್ಟ ಹೆಸರನ್ನು ತಂದ ಆರೋಪದ ಮೇರೆಗೆ ಕುಮಾರ್​ನನ್ನು ಸೇವೆಯಿಂದ ವಜಾ ಮಾಡಲಾಯಿತು. ‘ಬೇವು ಬೆಲ್ಲದೊಳಗಿದ್ದೇನು ಫಲ, ಹಾವಿಗೆ ಹಾಲೆರೆದರೇನು ಫಲ’ ಎಂದು ಪುರಂದರದಾಸರು ಹೇಳುವಂತೆ ಎಂತಹ ಸ್ಥಾನಕೊಟ್ಟರೂ ವಿಕೃತ ಮನವಿದ್ದವ ಬದಲಾಗಲಾರ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)