ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಣಪತಿಯ ಜನ್ಮ ನಕ್ಷತ್ರ ‘ಹಸ್ತ’. ಹಾಗೆಂದರೆ ಸೊಂಡಿಲು ಹೊಂದಿರುವ ಪ್ರಾಣಿ. ಸೊಂಡಿಲು ಹೊಂದಿರುವುದು ಆನೆ ಮಾತ್ರ. ಈ ಆನೆಯ ಮುಖ ಹೊಂದಿರುವವನು ಗಣಪತಿ. ‘ಹಸ್ತ’ ನಕ್ಷತ್ರ ಬರುವುದು ಕನ್ಯಾರಾಶಿಯಲ್ಲಿ. ಇದರ ಅಧಿಪತಿ ಬುಧಗ್ರಹ. ‘ಬುಧ’ ಎಂದರೆ ‘ಪಂಡಿತ’ ಎಂದು. ವಿನಾಯಕನು ಮಹಾಪಂಡಿತ ಹಾಗೂ ಬುದ್ಧಿವಂತ. ಈ ಕಾರಣದಿಂದಲೇ ಯಾವುದೇ ಕಾರ್ಯಸಿದ್ಧಿ ಆಗಬೇಕಾದರೆ ಬುದ್ಧಿಶಕ್ತಿಯನ್ನು ಪೂಜಿಸಬೇಕು.
| ಪ್ರಕಾಶಬಾಬು ಕೆ.ಆರ್. ಮಂಡಗದ್ದೆ
ಗಣಪತಿ ಹಬ್ಬದ ಸಮಯದಲ್ಲಿ ಖಗೋಳ ದೃಷ್ಟಿಯಿಂದ ಆಕಾಶವನ್ನು ನೋಡಿದರೆ ನಕ್ಷತ್ರ ರಾಶಿಯಲ್ಲಿ ಗಣೇಶನ ರೂಪ ಕಾಣಬಹುದು. ಈಶಾನ್ಯ ದಿಕ್ಕಿನಲ್ಲಿ ನಕ್ಷತ್ರಗಳೆಲ್ಲಾ ಹೆಡೆ ಎತ್ತಿದ ಹಾವಿನಂತೆ ಇರುತ್ತದೆ. ಆ ನಕ್ಷತ್ರಗಳು ನೈಋತ್ಯದವರೆಗೂ ಯಜ್ಞೋಪವೀತದ (ಜನಿವಾರ) ರೀತಿಯಲ್ಲಿ ಕಾಣುತ್ತದೆ. ವಿಶಾಲ ಆಕಾಶ ಆತನ ದೊಡ್ಡ ಹೊಟ್ಟೆಯ ರೀತಿಯಲ್ಲಿ ಕಾಣುತ್ತದೆ. ಚಂದ್ರನು ಚೌತಿ ದಿನ ಸಣ್ಣದಾಗಿ ಕಾಣುವನು. ಅದು ಗಣಪತಿಯ ಹಣೆಬಟ್ಟು. ಪಾದಗಳ ಬಳಿ ಇರುವ ಚಿಕ್ಕ ನಕ್ಷತ್ರಗಳ ಗುಂಪು ಮೂಷಿಕ (ಇಲಿ) ಇದ್ದಂತೆ ಕಾಣಿಸುತ್ತದೆ. ಈ ರೀತಿ ಗಣಪತಿಯನ್ನು ಖಗೋಳದಲ್ಲಿ ಕಾಣಬಹುದು.
ಬಣ್ಣಗಳಲ್ಲಿ ಗಣಪತಿ: ಗಣಪತಿಯು ರಕ್ತವರ್ಣ ಶರೀರದವನು. ಅಂದರೆ ಕುಜನ ಅಂಶ ಹೆಚ್ಚು ಇರುವನು? ಕುಜನು ಕೆಂಪು ಬಣ್ಣಕ್ಕೆ ಅಧಿಪತಿ. ಆದ್ದರಿಂದ ಗಣಪತಿಗೆ ಕೆಂಪುಬಣ್ಣ ಎಂದರೆ ಬಲುಪ್ರೀತಿ. ಆದ್ದರಿಂದ ಇವನನ್ನು ‘ರಕ್ತಗಂಧ ನುಲಿಪ್ತಾಂಗಂ ರಕ್ತಪುರ್ಸ್ಟೆಸ್ಸು ಪೂಜಿತಂ’ ಎಂದು ಹೇಳಿರುವುದು. ಈತನಿಗೆ ಕೆಂಪುಬಣ್ಣದ ಹೂ, ಅಕ್ಷತೆ ಮತ್ತು ಕೆಂಪು ಬಟ್ಟೆಯಿಂದ ಪೂಜಿಸಬೇಕು.
ಅಧಿಪತಿ ರವಿ: ವಿನಾಯಕ ಎಂದರೆ ನಾಯಕ ಇಲ್ಲದವನು ಎಂದು. ಈ ವಿನಾಯಕನಿಗೆ ನಾಯಕನೇ ಇಲ್ಲ. ಅವನಿಗೆ ಅವನೇ ನಾಯಕ. ಪ್ರಥಮ ಗಣಗಳಿಗೆ ಅಧಿಪತಿಯಾಗಿದ್ದಾನೆ. ನಾಯಕನ ಅಧಿಪತಿ ರವಿಗ್ರಹ.
ಗಣಪತಿಗೆ ಯಾವ ಮಾಸ ಶ್ರೇಷ್ಠ: ಭಾದ್ರಪದ ಮಾಸದಲ್ಲಿ ಶುಕ್ಷಪಕ್ಷದಲ್ಲಿ ಚೌತಿ ದಿನ ಪೂಜಿಸಿದರೆ ಅಪನಿಂದನೆಗಳು ದೂರ ಆಗುವುದು. ಫಾಲ್ಗುಣ ಮಾಸದಲ್ಲಿ ಪೂಜಿಸಿದರೆ ಧನಲಾಭ, ಚೈತ್ರ ಮಾಸದಲ್ಲಿ ವಾಹನದಿಂದ ಆಗುವ ಅಪಾಯ ತಪ್ಪುವುದು, ಪ್ರತಿ ಮಾಸದ ಕೃಷ್ಣಪಕ್ಷದ ಚೌತಿದಿನ ಪೂಜಿಸಿದರೆ ಎಲ್ಲ ಸಂಕಟಗಳು, ಸಂಕಷ್ಟಗಳು ನಿವಾರಣೆಯಾಗುವುದು. ಇದಕ್ಕೆ ‘ಸಂಕಷ್ಟಹರ’ ಗಣಪತಿ ಎನ್ನುವುದು.
ಪತ್ರೆ, ಗರಿಕೆ: 21 ಏಕೆ?
ಗಣಪತಿಯ ರಾಶಿ ‘ಕನ್ಯಾ’. ಈತನ ಅಧಿಪತಿ ಬುಧ. ಬುಧನು ಹಸಿರು ಬಣ್ಣದಲ್ಲಿರುವುದರಿಂದ ಗಣಪತಿಗೆ ಹಸಿರು ಪತ್ರೆಗಳಿಂದ ಪೂಜಿಸಬೇಕು ಹಾಗೂ 21 ಪತ್ರೆಗಳಿಂದ ಹಾಗೂ 21 ಗರಿಕೆಗಳಿಂದ ಪೂಜಿಸಬೇಕು. 21 ಎಂದರೇನು? 2+1 = 3. ಸಂಸ್ಕೃತದಲ್ಲಿ ‘ಓಂ’ ಆಗುವುದು. ಅಂದರೆ ಸೊಂಡಿಲಿನಾಕಾರ. ಪಂಚೇಂದ್ರಿಯ, ಪಂಚಭೂತಗಳು, ಪಂಚಕಮೇಂದ್ರಿಯ, ಪಂಚತತ್ತ್ವಗಳಿಂದ ಮನಸ್ಸು ಸೇರಿ 21 ಆಗುವುದು. ಇವು ನಮ್ಮ ಹತೋಟಿಗೆ ಬರಲಿ ಎಂದು ಗಣಪತಿಯನ್ನು ಪೂಜಿಸಬೇಕು.
(ಲೇಖಕರು ಆಧ್ಯಾತ್ಮ ಚಿಂತಕರು, ಹವ್ಯಾಸಿ ಬರಹಗಾರರು)