(ಕರೊನಾ ಸೋಂಕಿನ ತೀವ್ರ ಹರಡುವಿಕೆಯ ಪರಿಣಾಮವಾಗಿ ಪ್ರತಿಯೊಬ್ಬರೂ ಈಗ ಅಭದ್ರತೆಯ ಭಯದಲ್ಲಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ವ್ಯಾಪಾರಸ್ಥರು, ರೈತರು ಹೀಗೆ ಎಲ್ಲರಿಗೂ ಭವಿಷ್ಯದ ದಿನಗಳ ಬಗ್ಗೆ ಅಸ್ಪಷ್ಟತೆ ಕಾಡುತ್ತಿದೆ. ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಜನರು ಮಾನಸಿಕವಾಗಿ ಕುಗ್ಗಿಹೋಗುವುದು ಸಹಜ. ಅದಕ್ಕೆ ಪರಿಹಾರ ಹೊರಗೆಲ್ಲೋ ಇಲ್ಲ. ನಮ್ಮೊಳಗೇ ಇದೆ.)
ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಕರೊನಾ ಜತೆಯಲ್ಲಿ ಸಂಕಷ್ಟದ ಸರಮಾಲೆಗಳು ತಾಂಡವವಾಡುತ್ತಿವೆ. ಅಭದ್ರತೆಯ ಭಯ ಎಲ್ಲರನ್ನೂ ಕಾಡುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಅನೇಕ ಗೊಂದಲಗಳಿವೆ. ಆನ್ಲೈನ್ ವಿದ್ಯಾಭ್ಯಾಸ ನಡೆಯುತ್ತಿದ್ದರೂ, ವಾರ್ಷಿಕ ಪರೀಕ್ಷೆ ನಡೆಯುವುದೋ ಇಲ್ಲವೋ ಎಂಬ ಭಯವಿದೆ. ಇನ್ನು ಕೆಲಸಕ್ಕೆ ಹೋಗುವವರ ಗತಿಯಂತೂ ಹೇಳತೀರದು. ಕಡಿಮೆಯಾದ ಸಂಬಳ, ಕೆಲಸವೇ ಹೋಗುವ ಭಯ, ವರ್ಕ್ ಫ್ರಮ್ ಹೋಂ ಅವಾಂತರಗಳು, ಇವುಗಳ ಮಧ್ಯೆ, ನೆಟ್ವರ್ಕ್ ಇಲ್ಲದೆ ನೆಟ್ಟಗೆ ಕೆಲಸ ಮಾಡಲಾಗುತ್ತಿಲ್ಲ ಎಂಬ ಆತಂಕ. ಇನ್ನು ವ್ಯಾಪಾರಸ್ಥರು ವ್ಯಾಪಾರವಿಲ್ಲದೆ, ಲಾಭವಿಲ್ಲದೆ, ಮುಚ್ಚಿದ ಅಂಗಡಿಗಳ ಸಂಖ್ಯೆ ಅಧಿಕವಾಗಿದೆ. ‘ಕರೊನಾ ಹೀಗೆಯೇ ಮುಂದುವರೆದರೆ, ಇದೇ ವ್ಯಾಪಾರದಲ್ಲಿ ಮುಂದುವರೆಯಲು ಸಾಧ್ಯವೇ’ ಎಂಬ ಭಯ ಕಾಡಿದೆ. ಒಟ್ಟಾರೆ, ಎಲ್ಲರಲ್ಲೂ ಈ ರೋಗ ಅಸ್ಥಿರತೆ, ಭಯ, ಆತಂಕ ಸೃಷ್ಟಿಸಿದೆ. ಚರಿತ್ರೆಯಲ್ಲಿ ಪ್ರತಿಯೊಂದು ದೊಡ್ಡ ಸಾಮ್ರಾಜ್ಯವೂ ಕೊನೆಗಾಣುತ್ತದೆ, ಅಂತೆಯೇ ಪ್ರತಿಯೊಂದು ವ್ಯಾಪಾರವೂ; ಪ್ರತಿಯೊಂದು ಕೆಲಸವೂ. ಆದರೆ ಒಂದು ಕೆಲಸ ಹೋದರೆ ಮತ್ತೊಂದು ಬರುತ್ತದೆ, ಒಂದು ಸಾಮ್ರಾಜ್ಯ ಹೋದರೆ ಮತ್ತೊಂದು ಬರುತ್ತದೆ. ವೃತ್ತಿ, ಮನೆ, ಸ್ಥಾನ ಪದವಿಗಳು ಬದಲಾ ಗುತ್ತವೆ ಅಷ್ಟೇ. ಆಡಳಿತ ಪಲ್ಲಟವಾದರೂ ಜನಜೀವನ ನಡೆಯುತ್ತದೆ. ಕೆಲಸ ಬದಲಾದರೂ ನಾವು ಇರುತ್ತೇವೆ; ಅಂಗಡಿ ಬದಲಾದರೂ, ಯಜಮಾನ ಮುಂದುವರೆಯುತ್ತಾನೆ. ಶರೀರ ಹೋದರೂ ಜೀವ ಮುಂದುವರೆಯುತ್ತಾನೆ ಎಂಬುದು ಋಷಿಗಳ ದೀರ್ಘದೃಷ್ಟಿ.
ಸಂಯಮವೇ ಶ್ರೀರಕ್ಷೆ: ಮಹಾಭಾರತದಲ್ಲಿ ನಡೆದ ರೋಚಕ ಪ್ರಸಂಗವೊಂದನ್ನು ಗಮನಿಸೋಣ. ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ಎಲ್ಲರಿಗೂ ತೀವ್ರವಾದ ಬಾಯಾರಿಕೆಯಾಗಿತ್ತು. ಅಲ್ಲಿಯೇ ಇದ್ದ ಮರವನ್ನೇರಿದ ನಕುಲ ಅನತಿ ದೂರದಲ್ಲಿ ನೀರಿನ ಸರೋವರವನ್ನು ಕಂಡ. ಧರ್ಮರಾಜ ಅವನಿಗೆ ಅಲ್ಲಿಂದ ನೀರನ್ನು ತರಲು ಕಳುಹಿಸಿದ. ನಕುಲ ಅಲ್ಲಿಗೆ ಹೋಗಿ ನೀರು ಕುಡಿಯಬೇಕು ಎನ್ನುವಷ್ಟರಲ್ಲಿ ‘‘ಬೇಡಪ್ಪ! ಸಾಹಸ ಕಾರ್ಯ ಮಾಡಬೇಡ! ಇದು ನನ್ನ ಸ್ವಾಮ್ಯಕ್ಕೆ ಒಳಪಟ್ಟಿದೆ. ನೀರು ಬೇಕಾದರೆ, ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಕುಡಿ!’’ ಎಂದು ಅಶರೀರವಾಣಿಯಾಯಿತು. ಅದನ್ನು ನಿರ್ಲಕ್ಷಿಸಿ ನೀರು ಕುಡಿದ ನಕುಲ ಗತಪ್ರಾಣನಾಗಿ ಕೆಳಗೆ ಬಿದ್ದ. ಇತ್ತ, ಎಷ್ಟು ಹೊತ್ತಾದರೂ ನಕುಲ ಬರಲಿಲ್ಲವಾಗಿ ಯುಧಿಷ್ಠಿರ ತನ್ನ ಇನ್ನೊಬ್ಬ ಸೋದರ ಸಹದೇವನನ್ನು ಕಳುಹಿಸಿದ. ಅವನಿಗೂ ಇದೇ ಅಶರೀರವಾಣಿ ಮರುಕಳಿಸಿತು. ಇವನಿಗೂ ತೀವ್ರ ಬಾಯಾರಿಕೆ ಇದ್ದುದರಿಂದ, ಅದನ್ನು ಅಲಕ್ಷಿಸಿ ನೀರು ಕುಡಿಯಲು ಹೋಗಿ ಸತ್ತುಬಿದ್ದ. ಆಮೇಲೆ ಅರ್ಜುನ, ಭೀಮರೂ ಒಬ್ಬೊಬ್ಬರಾಗಿ ಬಂದು ಅಶರೀರವಾಣಿಯನ್ನು ಅಲಕ್ಷಿಸಿ ನೀರು ಕುಡಿಯಲು ಹೋಗಿ ಸತ್ತುಬಿದ್ದರು. ಕಡೆಗೆ ಯುಧಿಷ್ಠಿರ ಅಲ್ಲಿಗೆ ಬಂದು ನೋಡಿದಾಗ ನಾಲ್ಕು ತಮ್ಮಂದಿರು ಸತ್ತು ಬಿದ್ದಿರುತ್ತಾರೆ. ಪರಮಾಶ್ಚರ್ಯ! ಯಾರ ಮೇಲೂ ಗಾಯವಾಗಲಿ, ಆಯುಧದ ಗುರುತಾಗಲಿ ಇಲ್ಲ. ಹಾಗಾದರೆ ನೀರಿನಲ್ಲಿ ವಿಷವಿದೆಯೇ ಎಂದರೆ ಮೀನುಗಳು ಹಾಗೂ ಬಕಗಳು ಆರಾಮವಾಗಿವೆ. ನೀರಿನಲ್ಲಿ ಇಳಿದಾಗ ಇವನಿಗೂ ಹಾಗೆಯೇ ಅಶರೀರವಾಣಿ. ‘‘ಇದು ನನ್ನ ಕೊಳ. ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನೀರನ್ನು ಕುಡಿ. ನಾನು ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿದರೆ ನಿನಗೂ ನಿನ್ನ ತಮ್ಮಂದಿರಿಗಾದ ಗತಿಯೇ ಆಗುತ್ತದೆ.’’ ಆಗ ಯುಧಿಷ್ಠಿರ ವಿನಮ್ರನಾಗಿ ಕೈಮುಗಿದು ‘‘ನೀನು ಯಾರು? ನಿನ್ನ ಅಪೇಕ್ಷೆಯಂತೆ ನಿನ್ನ ಪ್ರಶ್ನೆಗೆ ಉತ್ತರಿಸುವೆ. ನಂತರ ನಿನ್ನ ಅಪ್ಪಣೆಯನ್ನು ಪಡೆದೇ ನೀರನ್ನು ಕುಡಿಯುವೆ’’ ಎಂದಾಗ ‘ನಾನು ಯಕ್ಷ’ ಎಂದು ತನ್ನ ಪರಿಚಯ ಹೇಳಿ ಹಲವು ಬಹಳ ಅಮೂಲ್ಯವಾದ ಪ್ರಶ್ನೆಗಳನ್ನು ಕೇಳುತ್ತಾನೆ. ಧರ್ವತ್ಮನಾದ ಯುಧಿಷ್ಠಿರ ಸಾವಧಾನಚಿತ್ತನಾಗಿ ಎಲ್ಲಾ ಪ್ರಶ್ನೆಗಳಿಗೂ ಸಮಂಜಸವಾದ ಉತ್ತರ ಕೊಡುತ್ತಾನೆ. ಯಕ್ಷ ಸಂತೋಷಗೊಂಡು ಧರ್ಮಜ ಬೇಡಿದಂತೆ ಅವನ ತಮ್ಮಂದಿರನ್ನೆಲ್ಲಾ ಪುನಃ ಜೀವಿತಗೊಳಿಸುತ್ತಾನೆ. ಇದು ಮಹಾಭಾರತದಲ್ಲಿ ಬರುವ ಯಕ್ಷಪ್ರಶ್ನೆ ಎಂದೇ ಪ್ರಸಿದ್ಧವಾಗಿರುವ ಕಥಾನಕ. ಮೇಲಿನ ಕತೆಯು ಇಂದಿಗೂ ನಮಗೆ ಹಲವು ನೀತಿಗಳನ್ನು ತಿಳಿಸುತ್ತದೆ. ನಾಲ್ವರು ಪಾಂಡವರು ಕೊಳದ ಯಜಮಾನನ ಮಾತನ್ನು ಅಲಕ್ಷಿಸಿದ್ದು ಆತುರದ ನಿರ್ಧಾರ. ಎಷ್ಟೇ ಬಾಯಾರಿಕೆಯಾದರೂ ಅಲ್ಲಿ ಇಂದ್ರಿಯ ಸಂಯಮ ಇರಬೇಕಾಗಿತ್ತು. ಯಕ್ಷನ ಎಚ್ಚರಿಕೆಯ ನಂತರವೂ ತಮ್ಮ ಬಗೆಗಿನ ಅತಿಯಾದ ಅಭಿಮಾನ ಅವರ ಜೀವಕ್ಕೇ ಹಾನಿ ಮಾಡಿತು. ಯುಧಿಷ್ಠಿರ ತನಗೆಷ್ಟೇ ಬಾಯಾರಿಕೆಯಾದರೂ ಸಮಯಪ್ರಜ್ಞೆ
ಯಿಂದ, ಸಂಯಮದಿಂದ ಪರಿಸ್ಥಿತಿ ನಿಭಾಯಿಸಿದ ಕಾರಣ ಯಕ್ಷನ ನೆಪದಲ್ಲಿ ಲೋಕವನ್ನೇ ಕಾಡುತ್ತಿದ್ದ ಪ್ರಶ್ನೆಗಳಿಗೂ ಉತ್ತರಿಸಿ ಮಾರ್ಗದರ್ಶಕನಾದ. ತಾನು ಗೆದ್ದು ಗತಪ್ರಾಣರಾಗಿದ್ದ ತಮ್ಮಂದಿರನ್ನೂ ಉಳಿಸಿಕೊಂಡ! ಹಾಗೆಯೇ ಕರೊನಾದಿಂದ ಕಂಗಾಲಾದ ಮನಃಸ್ಥಿತಿಯಿಂದ ಹೊರಬಂದು ನೆಮ್ಮದಿಯ ಬದುಕನ್ನು ನಡೆಸಲು ಧರ್ಮಜನ ಈ ನಡೆ ನಮಗೆ ಮಾರ್ಗದರ್ಶಿ.
ಕಷ್ಟಗಳು ಬರುವುದೇ ಎದುರಿಸಲು: ಸುಖದಂತೆಯೇ ಕಷ್ಟಗಳೂ ಭಗವಂತನ ಪ್ರಸಾದವೇ ಎಂಬಂತೆ ತೆಗೆದುಕೊಳ್ಳಬೇಕು. ಕಷ್ಟಗಳು ಬಂದಾಗ ನಾವು ಗಟ್ಟಿಯಾಗುತ್ತೇವೆ. ಭಗವಂತನ ಸ್ಮರಣೆ ಮಾಡುತ್ತೇವೆ. ಜೀವನವನ್ನು ಯಶಸ್ವಿಯಾಗಿ ನಿಭಾಯಿಸುವುದನ್ನು ಕಲಿಯುತ್ತೇವೆ. ಕೆಲವು ಸಹಜವಾಗಿ ಬರುವಂತಹ ಕಷ್ಟಗಳಾದರೆ, ಇನ್ನು ಕೆಲವು ನಾವಾಗಿಯೇ ಕಲ್ಪಿಸಿಕೊಳ್ಳುವಂತಹವು. ದೇಶದಲ್ಲಿ ನಿಜವಾಗಿ ಸಂಕಷ್ಟಕ್ಕೆ ಸಿಲುಕಿರುವವರು ಕೆಲವರಾದರೆ, ರೋಗಭಯದಿಂದ ನರಳುವವರು ಎಷ್ಟೋ ಮಂದಿ ಇದ್ದಾರೆ. ಭಯಗ್ರಸ್ತರಿಗೆ ಔಷಧಕ್ಕಿಂತ ಹೆಚ್ಚಾಗಿ ಧೈರ್ಯದಿಂದ ಕಷ್ಟಗಳನ್ನು ಎದುರಿಸುವ ಮನಃಪ್ರವೃತ್ತಿಯನ್ನು ಉಂಟು ಮಾಡುವುದು ಮುಖ್ಯ. ಅರ್ಜುನನು ಮಹಾವೀರನಾಗಿದ್ದರೂ, ಬಂಧುಮಿತ್ರರನ್ನು ಕೊಲ್ಲುವಂತಹ ಕಷ್ಟ ಬಂದಿತಲ್ಲ ಎಂದು ದುಃಖಿಸುತ್ತಾನೆ. ಅವನ ಗಾಂಡೀವ ಧನುಸ್ಸೇ ಕೈಯಿಂದ ಜಾರಿಬಿಡುತ್ತದೆ. ಧರ್ಮವನ್ನು ರಕ್ಷಿಸಲು ಯುದ್ಧ ಅಗತ್ಯವೆಂಬ ತಿಳಿವಳಿಕೆಯನ್ನು ಶ್ರೀಕೃಷ್ಣ ಕೊಟ್ಟಾಗಲಷ್ಟೆ ಅರ್ಜುನ ಭಯಮುಕ್ತನಾಗುತ್ತಾನೆ. ಅವನು ಯುದ್ಧದಲ್ಲಿ ಹೋರಾಡಿ, ಕೊನೆಗೆ ಪಾಂಡವರು ಜಯಶೀಲರಾಗುತ್ತಾರೆ. ಅರ್ಜುನನಿಗೆ ಕೃಷ್ಣ ಕಷ್ಟದಲ್ಲಿ ಮಾರ್ಗದರ್ಶನ ಮಾಡಿದ್ದಾನೆ. ಶಿವಾಜಿಗೆ ಸಮರ್ಥ ರಾಮದಾಸರು, ಚಂದ್ರಗುಪ್ತನಿಗೆ ಚಾಣಕ್ಯ, ಹಕ್ಕ-ಬುಕ್ಕರಿಗೆ ವಿದ್ಯಾರಣ್ಯರು ಹೀಗೆ ಪಟ್ಟಿ ಬೆಳೆಯುತ್ತದೆ. ಅಂಥವರ ಕಥೆಗಳನ್ನು ಮತ್ತೊಮ್ಮೆ ಅವಲೋಕಿಸಿದರೆ, ಇಂದು ನಮ್ಮನ್ನು ಆವರಿಸಿರುವ ಭೀತಿಯಿಂದ ಹೊರಗೆ ಬರಬಹುದು. ಈ ಸಾಧು ಸಂತರು ಯಾರೂ ಕಷ್ಟದಿಂದ ತಪ್ಪಿಸಿಕೊಂಡು ಕಾಡಿಗೆ ಹೋಗುವಂತೆ ಬೋಧಿಸಿಲ್ಲ. ಧೈರ್ಯವಾಗಿ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗುವ ಮಾರ್ಗವನ್ನೇ ಬೋಧಿಸಿದ್ದಾರೆ. ಕರೊನಾ ಮಾದರಿಯ ಹಲವಾರು ರೋಗ-ರುಜಿನಗಳನ್ನು ಈ ಲೋಕ ಕಂಡಿದೆ. ಕಷ್ಟಗಳು ಬಂದಾಗ ಎದೆಗುಂದದೆ ಧೈರ್ಯವಾಗಿ ಎದುರಿಸುತ್ತಾ ನಮ್ಮ ಋಷಿಗಳಂತೆ ಉದಾತ್ತವಾದ ಜೀವನಲಕ್ಷ್ಯದ ಕಡೆಗೆ ಹೆಜ್ಜೆ ಹಾಕುವಂತಹ ಮನಸ್ಸನ್ನು ಭಗವಂತ ನಮಗೆಲ್ಲಾ ಕರುಣಿಸಲಿ.
ಜೀವನಲಕ್ಷ್ಯ ಕಡೆ ಹೆಜ್ಜೆ
ಕರೊನಾ ಸೋಂಕಿನ ಈ ಕಷ್ಟ ಕಾಲದಲ್ಲಿ ತಮ್ಮ ಆಪ್ತೇಷ್ಟರು ಮರಣ ಹೊಂದಿದರೆ, ಜೀವನವೇ ನೀರಸವೆಂದು ಕೆಲವರು ಭಾವಿಸುವುದುಂಟು. ಆದರೆ ಜೀವನ ನೀರಸವೆನಿಸಲು ಮೂಲ ಕಾರಣವೇನೆಂದು ಶ್ರೀರಂಗ ಮಹಾಗುರುಗಳು ಹೇಳಿದ ಮಾತುಗಳು ಸ್ಮರಣೀಯ. ‘‘ಜೀವನಕ್ಕೆ ಮೂಲರೂಪನಾಗಿ, ಬೇರಾಗಿ, ಜೀವನವನ್ನು ಧರಿಸಿರುವವನು ಭಗವಂತ. ಅವನನ್ನು ಮರೆಯಬೇಡಿ. ಬೇರನ್ನು ಕಾಪಾಡಿಕೊಳ್ಳಿ. ಬೇರು ಹುಳ ಕಡಿದು, ಮರವು ಬೇರಿನ ಸಂಬಂಧದಿಂದ ಬೇರ್ಪಟ್ಟರೆ ಒಣಮರವಾಗುತ್ತೆ. ಆದ್ದರಿಂದ ಅದನ್ನು ಕೆಡಿಸಿಕೊಳ್ಳಬೇಡಿ. ರಸರೂಪಿಯಾದ ಅವನ ಸಂಬಂಧವಿಲ್ಲದಿದ್ದಾಗ ಜೀವನ ನೀರಸವಾಗುತ್ತೆ.’’
ಸಮಾಹಿತ ಮನಸ್ಸಿನಿಂದ ಸಾಧ್ಯ
ಭಾರತೀಯ ಮಹರ್ಷಿಗಳು ಜೀವನಕ್ಕೊಂದು ಸಹಜವಾದ, ಹಿರಿದಾದ ಗುರಿಯನ್ನು ಕಂಡುಕೊಂಡರು. ಅದು ನಮ್ಮೊಳಗೇ ಬೆಳಗುವ ಜೀವಮೂಲವಾದ ಪರಂಜ್ಯೋತಿಯನ್ನು ಅನುಭವಿಸುವ ಗುರಿ. ಅಲ್ಲಿನ ನೆಮ್ಮದಿ, ಸುಖ ಇನ್ನೆಲ್ಲಿಯೂ ಇಲ್ಲದಿರುವುದು ಅವರ ಅನುಭವವಾಗಿತ್ತು. ಆ ನೆಮ್ಮದಿಯನ್ನು ಪಡೆಯುವ ಸಾಧನೆಗೆ ಅವರು ಜೀವನವನ್ನು ಮುಡುಪಿಟ್ಟರು. ಆ ಮಹಾ ಸಾಧನೆಯ ದಾರಿಯಲ್ಲಿ ಬರುವ ಕಷ್ಟ ಸುಖಗಳನ್ನೆಲ್ಲಾ ಗೌಣವಾಗಿ ಕಂಡರು. ಹಾಗೆಯೇ ಜೀವಲೋಕವೂ ಆ ಆತ್ಯಂತಿಕ ಸುಖವನ್ನು ಹೊಂದುವಂತಾಗಲೆಂದು ಇಲ್ಲಿ ಜೀವನಪದ್ಧತಿಯನ್ನು ರೂಪಿಸಿಕೊಟ್ಟರು. ಈ ಹಿರಿದಾದ ಜೀವನಲಕ್ಷ್ಯವನ್ನು ನಾವು ಇಟ್ಟುಕೊಂಡಾಗ ಅದರ ಹಾದಿಯಲ್ಲಿ ಬರುವ ಕಷ್ಟಗಳೆಲ್ಲವನ್ನು ಸಮಾಹಿತ ಮನಸ್ಸಿನಿಂದ ದಾಟಬಹುದಾಗಿದೆ.