ವಿಶೇಷ ಅಂಕಣ  
ಅಂಕಣ

ಪ್ರಜೆಗಳ ಕಲ್ಯಾಣವೇ ಪ್ರಜಾಪ್ರಭುತ್ವದ ಆಶಯ

(ಲೇಖಕರು ನಿವೃತ್ತ ಐಎಎಸ್ ಅಧಿಕಾರಿ)

ಈ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರ ಪ್ರಜಾಸೇವೆಗೆ ಒಂದು ಇಲಾಖೆ ಸ್ಥಾಪನೆ ಮಾಡುವ ಮೂಲಕ ಸಚಿವರೊಬ್ಬರಿಗೆ ಈ ಬಗ್ಗೆ ಹೊಣೆಗಾರಿಕೆ ನೀಡಿ ಇದಕ್ಕೆ ಉಸ್ತುವಾರಿ ವಹಿಸಲು ಒಬ್ಬ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸುವಂತಹ ಸಲಹೆ ಬಹಳ ಉತ್ತಮವಾದದ್ದು. ಸಾಮಾನ್ಯವಾಗಿ ಸರ್ಕಾರಗಳು ಅಂದರೆ ಒಂದು ರೀತಿಯ ಅಲರ್ಜಿ ಎಂದು ಜನರು ಭಾವಿಸಿರುವ ಸಂದರ್ಭ ಇತ್ತೀಚೆಗೆ ಮೂಡಿ ಬಂದಿರುವುದು ನೋವಿನ ಸಂಗತಿ. ‘ಒಳ್ಳೆಯ ಸರ್ಕಾರ ಎಂದರೆ ಜನರನ್ನು ಆಳುವ ಸರ್ಕಾರವಲ್ಲ, ಜನರಿಗೆ ಸೇವೆ ಮಾಡುವ ಸರ್ಕಾರ’ ಎಂಬ ಮಾತು ಉಂಟು. ಅಷ್ಟೇ ಅಲ್ಲ, ಜನರ ಕಲ್ಯಾಣವೇ ಸರ್ಕಾರದ ಮೊದಲ ಮತ್ತು ಮುಖ್ಯ ಕರ್ತವ್ಯ ಎನ್ನುವ ಸಂದೇಶವನ್ನು ಪ್ರಸ್ತುತ ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದು ಅಭಿನಂದನಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಸರ್ಕಾರ ಮತ್ತು ಸಮಾಜ ಪರಸ್ಪರ ಸಹಕಾರದಿಂದ ತಮ್ಮ ತಮ್ಮ ಹೊಣೆಗಾರಿಕೆ ನಿರ್ವಹಿಸಿದಾಗ ಮಾತ್ರ ಒಂದು ಕಲ್ಯಾಣ ರಾಜ್ಯದ ಸೃಷ್ಟಿ ಸಾಧ್ಯ.

ಮಹಾತ್ಮ ಗಾಂಧೀಜಿ ಹೇಳುವಂತೆ ಜನರ ಜೀವನದಲ್ಲಿ ಅತಿ ಕಡಿಮೆ ಹಸ್ತಕ್ಷೇಪ ಮಾಡುವಂತಹ ಸರ್ಕಾರವೇ ಉತ್ತಮ ಸರ್ಕಾರ. ಯಾವುದೇ ಸರ್ಕಾರ ಜನರ ಬದುಕನ್ನು ಸರಳಗೊಳಿಸಬೇಕೇ ವಿನಃ ಅವರ ಬದುಕನ್ನು ಸಂಕೀರ್ಣ ಗೊಳಿಸಬಾರದು. ಸರ್ಕಾರ ಜನರ ನೋವು ನಲಿವುಗಳಿಗೆ ದುಃಖ ದುಮ್ಮಾನಗಳಿಗೆ ಸ್ಪಂದಿಸಿದಾಗ ಮಾತ್ರ ಆ ಸರ್ಕಾರದ ಬಗ್ಗೆ ಜನರಲ್ಲಿ ಒಂದು ರೀತಿಯ ವಿಶ್ವಾಸ ಮತ್ತು ಗೌರವ ಮೂಡುತ್ತದೆ. ಥಾಮಸ್ ಜೆಫರ್ಸನ್ ಹೇಳುವಂತೆ ಮಾನವ ಜೀವನ ಮತ್ತು ಸಂತೋಷದ ಕಾಳಜಿಯೇ ಉತ್ತಮ ಸರ್ಕಾರದ ಮುಖ್ಯ ಉದ್ದೇಶವಾಗಬೇಕು. ಪ್ರಸ್ತುತ ಸರ್ಕಾರ ಪ್ರಜಾಸೇವೆಗೆ ಒಂದು ಇಲಾಖೆಯನ್ನು ನೇಮಿಸುವ ಸಂದರ್ಭದಲ್ಲಿ ಪೂರಕವಾದ ಕೆಲವು ಕ್ರಮಗಳನ್ನೂ ಕೈಗೊಳ್ಳುವುದು ಬಹಳ ಮುಖ್ಯ.

ಈ ಹಿಂದಿನ ಸರ್ಕಾರ ಪ್ರತಿ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ನಾನು ತುಮಕೂರು ಜಿಲ್ಲಾಧಿಕಾರಿಯಾಗಿದ್ದಾಗ ಇಂತಹ ಹತ್ತಾರು ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದುಂಟು.ಈ ಸಭೆಗಳಲ್ಲಿ ಜನರ ಅರ್ಜಿಗಳನ್ನು ಸಿದ್ಧಪಡಿಸುವಲ್ಲಿ ಅಧಿಕಾರಿಗಳೇ ಸಹಕರಿಸುತ್ತಿದ್ದರು. ಇಂತಹ ಹಲವು ಸಭೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಳ್ಳುತ್ತಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರೂ ಕೆಲವು ಸಭೆಗಳಲ್ಲಿ ಭಾಗವಹಿಸಿದ್ದರು. ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಜನಪರ ಆಡಳಿತದ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸುತ್ತಿರುವ ಪ್ರಜಾಸೇವಾ ಇಲಾಖೆಗೆ ಪೂರಕವಾದ ಈ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾದುದು ಮುಖ್ಯ.

1. ಜನಸ್ಪಂದನ ಸಭೆಗಳಲ್ಲಿ ಸ್ವೀಕರಿಸುವ ಅರ್ಜಿಗಳ ವಿಲೇವಾರಿಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಪ್ರತಿ 2 ವಾರಕ್ಕೊಮ್ಮೆ ಪರಾಮಶಿಸುವ ವ್ಯವಸ್ಥೆ ಜಾರಿಗೆ ಬರಬೇಕು.

2. ಪ್ರತಿ ಹಂತದಲ್ಲಿ ಜನಸ್ಪಂದನ ಸಭೆ ಮಾಡುವ ಮುನ್ನ ತಾಲೂಕು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳು ಮೊದಲೇ ಜನರಿಗೆ ತಿಳಿಸಿದ ದಿನ ನಿರ್ದಿಷ್ಟ ಹಳ್ಳಿಗಳಿಗೆ ಭೇಟಿ ನೀಡಿ ಜನರ ಅರ್ಜಿಗಳನ್ನು ಸ್ವೀಕರಿಸಿ ವಿಷಯವಾರು ವಿಂಗಡಿಸಿ ಅವುಗಳ ವಿಷಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಟಿಪ್ಪಣಿ ಸಿದ್ಧಪಡಿಸಿ ಅವುಗಳನ್ನು ಜನಸ್ಪಂದನ ಸಭೆಗಳಲ್ಲಿ ಮಂಡಿಸಬೇಕು.

3. ಪ್ರತಿಯೊಬ್ಬ ಅಧಿಕಾರಿಯೂ ಸಾರ್ವಜನಿಕರ ಭೇಟಿಗೆ ಪ್ರತಿ ದಿನ ನಿರ್ದಿಷ್ಟ ಸಮಯ ನಿಗದಿಪಡಿಸಬೇಕು.

4. ಸರ್ಕಾರ ಜನರ ಅಹವಾಲುಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಉಪ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಗೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್​ಗೆ ನೀಡಬೇಕು.

5. ಜನರಿಂದ ಬಂದ ಅರ್ಜಿಗಳ ಪರಾಮರ್ಶೆ ಪ್ರತಿ ತಿಂಗಳು ಒಂದು ನಿರ್ದಿಷ್ಟ ದಿನದಂದು ಉಸ್ತುವಾರಿ ಸಚಿವರು ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಕಡ್ಡಾಯವಾಗಿ ನಡೆಯಬೇಕು. ಅರ್ಜಿಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಿದ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಹಾಗೂ ಅರ್ಜಿ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು. ಈ ವಿಷಯದಲ್ಲಿ ತೋರುವ ನಿರಾಸಕ್ತಿ ಬಗ್ಗೆ ಅವರ ಗುಪ್ತ ವರದಿಗಳಲ್ಲಿ (ಪರ್ಫಾರ್ವೆನ್ಸ್ ರಿಪೋರ್ಟ್) ನಮೂದಿಸಬೇಕು.

6. ಸಾಮಾನ್ಯವಾಗಿ ಗ್ರಾಮ ಮಟ್ಟದಲ್ಲಿನ ಕುಂದು ಕೊರತೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆಯೇ ಇರುತ್ತವೆ. ವಿಶೇಷವಾಗಿ ಪೋಡಿ ಬಗ್ಗೆ, ಖಾತೆ ವರ್ಗಾವಣೆ ಬಗ್ಗೆ ಭೂಮಿ ಸರ್ವೆ ಮಾಡುವಂತಹ ಕಾರ್ಯಗಳು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಅರ್ಜಿಗಳು ಹತ್ತಾರು ವರ್ಷಗಳಿಂದ ಹಾಗೆಯೇ ಉಳಿದಿವೆ. ವಿಶೇಷವಾಗಿ ಪೋಡಿ ವಿಷಯದಲ್ಲಿ ಜನರು ರೊಚ್ಚಿಗೇಳುವ ಸಂದರ್ಭಗಳು ದೂರ ಉಳಿದಿಲ್ಲ. ಅಂತೆಯೇ ಮಾಸಾಶನ, ವೃದ್ಧಾಪ್ಯ ವೇತನಗಳ ಅರ್ಜಿಗಳನ್ನು ಒಂದು ವಾರದೊಳಗೆ ಇತ್ಯರ್ಥ ಪಡಿಸುವ ಕೆಲಸ ಆಗಬೇಕು.

7. ಕಚೇರಿಗೆ ಬಂದವರನ್ನು ಸೌಜನ್ಯದಿಂದ ಮಾತನಾಡಿಸುವ ಸಂಸ್ಕೃತಿಯನ್ನು ಎಲ್ಲ ಹಂತಗಳ ಅಧಿಕಾರಿಗಳು ರೂಢಿಸಿಕೊಳ್ಳಬೇಕು. ಸಮಾಜ ಸುಧಾರಕ ಬಸವಣ್ಣ ಅವರು ಬಿಜ್ಜಳನ ಅಸ್ಥಾನದಲ್ಲಿ ಮಂತ್ರಿಯಾಗಿದ್ದವರು. ಅವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ. ‘ಏನು ಬಂದಿರಿ, ಹದುಳವಿದ್ದಿರೆ ಎಂದರೆ ನಿಮ್ಮ ಮೈಸಿರಿ ಹಾರಿ ಹೋಗುವುದೇ? ಕುಳ್ಳಿರಿ ಎಂದರೆ ನೆಲ ಕುಳಿ ಹೋಗುವುದೇ? ಒಡನೆ ನುಡಿದರೆ ಶಿರ ಹೊಟ್ಟೆ ಒಡೆಯುವುದೇ?’ ನಮ್ಮ ಕಚೇರಿಗೆ ಬರುವವರಿಗೆ ಕನಿಷ್ಠ ಗೌರವ ಹಾಗೂ ಸೌಜನ್ಯ ತೋರಬೇಕೆಂಬುದೇ ಈ ವಚನದ ಆಶಯ.

8. ಮೂರು ತಿಂಗಳಿಗೊಮ್ಮೆಯಾದರೂ ಮುಖ್ಯಮಂತ್ರಿಗಳೇ ಪ್ರಜಾಸೇವಾ ಇಲಾಖೆಯ ಕಾರ್ಯವನ್ನು ವಿಮಶಿಸಬೇಕು. ಶಾಸಕರೂ ಒಳಗೊಂಡಂತೆ ಎಲ್ಲರೂ ಪ್ರಸ್ತುತ ಸರ್ಕಾರದ ಪ್ರಜಾಸೇವಾ ಇಲಾಖೆಯ ಆಶಯವನ್ನು ಸಾಕಾರಗೊಳಿಸಬೇಕು.

9. ಸರ್ಕಾರದ ಅಧಿಕಾರಿಗಳು ಹಾಗೂ ಪ್ರಜಾ ಪ್ರತಿನಿಧಿಗಳು ಪರಸ್ಪರ ಗೌರವ ಹಾಗೂ ಸಹಕಾರದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು.

10. ಅಧಿಕಾರ ಇರುವುದು ಸೇವೆಗೆ ಇರುವ ಒಂದು ಅಪೂರ್ವ ಅವಕಾಶ ಎಂಬ ವಿನಮ್ರ ಭಾವ ಎಲ್ಲರಲ್ಲೂ ಮೂಡಬೇಕು. ಅಧಿಕಾರಿಗಳಲ್ಲಿ ಹಾಗೂ ಪ್ರಜಾಪ್ರತಿನಿಧಿಗಳಲ್ಲಿ ಪ್ರಾಮಾಣಿಕತೆ, ದಕ್ಷತೆ ಜತೆಗೆ ಜನರ ಬಗ್ಗೆ ಪ್ರೀತಿ ಹಾಗೂ ಮಾನವೀಯ ಸ್ಪರ್ಶವೂ ಇರಬೇಕು.

ದಾರ್ಶನಿಕ ಕವಿ ಡಿವಿಜಿ ಅವರ ಒಂದು ಕವನ ಇಲ್ಲಿ ಬಹಳ ಪ್ರಸ್ತುತ. ‘ಸರ್ಕಾರ ಹರಿಗೋಲು, ತೆರೆ ಸುಳಿಗಳು ಅತ್ತಿತ್ತ, ಸುರೆ ಕುಡಿದ ಕೆಲವರು ಹುಟ್ಟು ಹಾಕುತಿಹರು. ಬಿರುಗಾಳಿ ಬೀಸುತಿಹುದು, ಜನರೆದ್ದು ಕುಣಿಯುತಿಹರು, ಉರುಳದಿರುವುದು ಅಚ್ಚರಿಯೋ ಮಂಕುತಿಮ್ಮ’. ಕವಿಯ ಈ ಆತಂಕ ಸರ್ಕಾರ ನಡೆಸುವವರಿಗೆ ಒಂದು ಎಚ್ಚರಿಕೆಯ ಸಂದೇಶ.

ಅಬ್ರಹಾಂ ಲಿಂಕನ್ ಹೇಳುವಂತೆ ಪ್ರಜಾಪ್ರಭುತ್ವ ಇರುವುದೇ ಜನರಿಂದ ಜನರಿಗಾಗಿ. ಜನರ ಕಲ್ಯಾಣವೇ ಪ್ರಜಾಪ್ರಭುತ್ವದ ಮೂಲ ಆಶಯ. ಈ ಹಿನ್ನೆಲೆಯಲ್ಲಿ ಪ್ರಜಾಸೇವೆಗೇ ಒಂದು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವ ಪ್ರಸ್ತುತ ಸರ್ಕಾರದ ಆಶಯ ಸಾಕಾರಗೊಳ್ಳಲಿ.