ರಾಜ್ಯದ ರೈತರ ಪಾಲಿಗೆ ಈ ವರ್ಷದ ಮುಂಗಾರು ತುಸು ಆಶಾದಾಯಕವಾಗಿತ್ತು. ಅಗತ್ಯಕ್ಕೆ ತಕ್ಕಂತೆ ಮಳೆ ಸುರಿದಿದ್ದರಿಂದ ನಿಗದಿತ ಗುರಿಗಿಂತ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಇದೀಗ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಭತ್ತ, ರಾಗಿ, ಜೋಳ ಕಟಾವಿಗೆ ಬಂದಿದ್ದು, ಇನ್ನೇನು ಕೆಲದಿನಗಳಲ್ಲೇ ಒಕ್ಕಣೆ ಕಾರ್ಯ ಆರಂಭವಾಗಬೇಕಿದೆ. ಅಕ್ಟೋಬರ್ ತಿಂಗಳ ದಾಖಲೆ ಮಳೆಯಿಂದಾಗಿ ಫಸಲು ಕೈಸೇರುವ ಹಂತದಲ್ಲಿ ರೈತರು ಕಂಗಾಲಾಗಿದ್ದಾರೆ. ಆದರೆ ಬಿತ್ತನೆ ಚಟುವಟಿಕೆಗಳಿಗೆ ಹಿಂಗಾರು ಮಳೆ ಪೂರಕವಾಗಿದ್ದು, ಬಿರುಸಿನಿಂದ ಕೃಷಿ ಚಟುವಟಿಕೆ ನಡೆದಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿದ್ದರಿಂದ ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಸರ್ಕಾರದಿಂದ ಒಟ್ಟು 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿತ್ತು. ಆದರೆ, 78.20 ಲಕ್ಷ ಹೆಕ್ಟೇರ್ ಬಿತ್ತನೆಯಾಗುವ ಮೂಲಕ ಶೇ.102 ಸಾಧನೆಯಾಗಿತ್ತು.
ಹಿಂಗಾರು ಮಳೆ ನಿರೀಕ್ಷೆಗಿಂತ ಅಧಿಕವಾಗಿ ಸುರಿಯುತ್ತಿದೆ. ಈಗಾಗಲೆ ಶೇ.15 ಹಿಂಗಾರು ಬಿತ್ತನೆಯೂ ಪೂರ್ಣಗೊಂಡಿದೆ. ರಾಜ್ಯದಲ್ಲಿ ವಾರ್ಷಿಕ ಹಿಂಗಾರು ಬಿತ್ತನೆ ಗುರಿಯನ್ನು 28 ಲಕ್ಷ ಹೆಕ್ಟೇರ್ ಎಂದು ಅಂದಾಜು ಮಾಡಲಾಗಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ತುಮಕೂರು, ಮಂಡ್ಯ, ಮೈಸೂರು, ಕರಾವಳಿ ತೀರ ಪ್ರದೇಶಗಳಲ್ಲಿ ಬಿತ್ತನೆ ಚಟುವಟಿಕೆ ಆರಂಭವಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಬೆಳೆಗಳ ಕಟಾವು ಮತ್ತು ಒಕ್ಕಲು ಕಾರ್ಯ ಚುರುಕಾಗಿ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ಬಿತ್ತನೆ ಚಟುವಟಿಕೆಗೆ ವೇಗ ಸಿಗಲಿದೆ. ಹಿಂಗಾರು ಬಿತ್ತನೆ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ.
ಮುಂಗಾರು ಆರಂಭದಲ್ಲಿ ಅಬ್ಬರಿಸಿತ್ತಾದರೂ ಆ ಬಳಿಕ ಎಲ್ಲೂ ಹಾನಿ ಉಂಟುಮಾಡುವಂಥ ಮಳೆಯಾಗಲಿಲ್ಲ. ಆದರೆ ಹಿಂಗಾರು ಆರಂಭವಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ 2.74 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಾಶವಾಗಿವೆ. ಜತೆಗೆ ಬಹುತೇಕ ಕಡೆಗಳಲ್ಲಿ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಬೆಳೆಗಳು ಕಟಾವಿನ ಹಂತಕ್ಕೆ ಬಂದಿದ್ದು, ಮಳೆ ಹೀಗೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗುತ್ತದೆ. ಅದರಲ್ಲೂ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ನೆಲಗಡಲೆ, ರಾಗಿ ಬೆಳೆದಿರುವ ರೈತರಿಗೆ ಆತಂಕ ಕಾಡುತ್ತಿದೆ. ಬಿಳಿಜೋಳ ಮಳೆಗೆ ಸಿಕ್ಕು ಕಪ್ಪಾಗುತ್ತಿದ್ದು, ಬೆಲೆ ಕಸಿತದ ಭೀತಿ ಎದುರಾಗಿದೆ. ಕೆಲವೆಡೆ ಭತ್ತ ಕಟಾವಿಗೆ ಬಂದಿದ್ದರೂ, ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ದ್ವಿದಳ ಧಾನ್ಯ ಬೆಳೆಗಳು, ಕಡಲೆ, ಅಡಕೆ, ಕಾಳುಮೆಣಸು ಸೇರಿ ಹಲವು ಬೆಳೆಗಳು ರೋಗ ಬಾಧೆಯಿಂದ ನಾಶವಾಗಿವೆ.
- ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಗುರಿ ಮೀರಿ 3.38 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ 57 ಹೆಕ್ಟೇರ್ ಗುರಿ ಇದೆ.
- ತುಮಕೂರು ಜಿಲ್ಲೆಯಲ್ಲಿ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ನೆಲಗಡಲೆ ಬಿತ್ತನೆ ಮಾಡಲಾಗಿದೆ.
- ಕೋಲಾರ ಜಿಲ್ಲೆಯಾದ್ಯಂತ 97,900 ಹೆಕ್ಟೇರ್ ಗುರಿಗೆ 89,490 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ 8,000 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಶ್ರೀನಿವಾಸಪುರ ತಾಲೂಕಿನ ಕೆಲ ಭಾಗದಲ್ಲಿ ಹುರುಳಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಕೋಟ್ಯಂತರ ರೂ. ಬೆಳೆ ನಷ್ಟ ಉಂಟಾಗಿದೆ. ಹಿಂಗಾರಿನಲ್ಲಿ ತರಕಾರಿ, ಹೂವು, ಹಣ್ಣು ಇತರ ಕೃಷಿ ಆಹಾರ ಬೆಳೆಗಳ ಬಿತ್ತನೆ ಚುರುಕಾಗಿದೆ.
- ಶಿವಮೊಗ್ಗ ಜಿಲ್ಲೆಯಲ್ಲಿ 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಆಗಸ್ಟ್ ಅಂತ್ಯದೊಳಗೆ 73 ಸಾವಿರ ಹೆಕ್ಟೇರ್ ಭತ್ತ, ಏಪ್ರಿಲ್ ಅಂತ್ಯದೊಳಗೆ 6,735 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆಯಾಗಿದೆ. 850 ಹೆಕ್ಟೇರ್ ಕಬ್ಬು, 334 ಹೆಕ್ಟೇರ್ ಹತ್ತಿ, 92 ಹೆಕ್ಟೇರ್ ಅಲಸಂಧೆ, 63 ಹೆಕ್ಟೇರ್ ರಾಗಿ, 52 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಗೊಂಡಿದೆ.
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆಗೆ ಸಾವಿರಾರು ಹೆಕ್ಟೇರ್ ಪ್ರದೇಶದ ಕಾಫಿ, ಅಡಕೆ, ಕಾಳು ಮೆಣಸಿಗೆ ಕೊಳೆ ರೋಗ ಆವರಿಸಿದೆ. ಮುಂಗಾರಿನಲ್ಲಿ 11 ಸಾವಿರ ಹೆಕ್ಟೇರ್ ಈರುಳ್ಳಿ ಬಿತ್ತನೆಯಾಗಿದೆ. 5,500 ಹೆಕ್ಟೇರ್ನಲ್ಲಿ ಈರುಳ್ಳಿ, ಹಸಿಮೆಣಸು ಬಿತ್ತನೆಯಾಗಿದೆ.
- ಬೆಳಗಾವಿ ಜಿಲ್ಲೆಯಲ್ಲಿ ಹಿಂಗಾರುಪೂರ್ವ ಮಳೆ ಆಗಿದ್ದರಿಂದ 3,14,285 ಹೆ. ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹಾಕಿಕೊಂಡಿದೆ. 4-5 ದಿನದ ಅವಧಿಯಲ್ಲಿ 1.40 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ.
- ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.11 ಹೆಚ್ಚಾಗಿದೆ. 2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು, 2.35 ಲಕ್ಷ ಹೆಕ್ಟೇರ್ ಸಾಧನೆಯಾಗಿದೆ (ಶೇ.96).
- ಬಾಗಲಕೋಟೆ ಜಿಲ್ಲೆಯಲ್ಲಿ ಜೋಳ, ಗೋಧಿ, ಕಡಲೆ, ಹುರುಳಿ, ಅಲಸಂದಿ, ಹತ್ತಿ ಸೇರಿ 3,10,000 ಹೆಕ್ಟೇರ್ ಪ್ರದೇಶ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.
- ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 6.49 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 6.43 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ.
- ಗದಗ ಜಿಲ್ಲೆಯಲ್ಲಿ ಹೆಸರು 1,27,800 ಹೆಕ್ಟೇರ್, ಮೆಕ್ಕೆಜೋಳ 5,590 ಹೆಕ್ಟೇರ್, ಶೇಂಗಾ 2,043 ಹೆಕ್ಟೇರ್ ಮತ್ತು ಹತ್ತಿ 2,970 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೆ ಬಿತ್ತನೆಯಾಗಿದೆ.
- ಉಡುಪಿ ಜಿಲ್ಲೆಯಲ್ಲಿ 35,726 ಹೆಕ್ಟೇರ್ನಲ್ಲಿ ಭತ್ತ ಬಿತ್ತನೆಯಾಗಿದ್ದು, ಕಟಾವು ಹಂತಕ್ಕೆ ಬಂದಿದೆ. ಮಳೆ ಪರಿಣಾಮ ಗದ್ದೆಯಲ್ಲಿ ನೀರು ನಿಂತಿದ್ದು, ಕೋಯ್ಲು ಸಾಧ್ಯವಾಗುತ್ತಿಲ್ಲ.
- ಯಾದಗಿರಿ ಜಿಲ್ಲೆಯಲ್ಲಿ ಸೆಪ್ಟಂಬರ್ ಮಳೆಗೆ ತೊಗರಿ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಹಿಂಗಾರು ಮಳೆ ಉತ್ತಮವಾಗಿದೆ.
- ಕಲಬುರಗಿ ಜಿಲ್ಲೆಯಲ್ಲಿ 7.48 ಲಕ್ಷ ಹೆಕ್ಟೇರ್ನಲ್ಲಿ ಮುಂಗಾರು ಬಿತ್ತನೆಯಾಗಿದ್ದು, ಬೆಳೆ ಉತ್ತಮವಾಗಿ ಬಂದಿದ್ದು ಕಟಾವು ನಡೆಯುತ್ತಿದೆ. ಇನ್ನು ತೊಗರಿ ಬಂಪರ್ ಫಸಲಿನ ನಿರೀಕ್ಷೆಯಿದೆ.
- ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹಿಂಗಾರು ಬಿತ್ತನೆ ವಿಳಂಬವಾಗಲಿದೆ. ಹಿಂಗಾರಿನಲ್ಲಿ 1.08 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
- ರಾಯಚೂರು ಜಿಲ್ಲೆಯಲ್ಲಿ ಒಟ್ಟು 4,76,388 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹತ್ತಿ, ತೊಗರಿ, ಸೂರ್ಯಕಾಂತಿ, ಸಜ್ಜೆ ಬೆಳೆಯಲಾಗಿದೆ. 1,59,655 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಈಗ ಕೇವಲ 16,583 ಹೆಕ್ಟೇರ್ ಬಿತ್ತನೆಯಾಗಿದೆ.
- ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ನಿಗದಿಗಿಂತ ಹೆಚ್ಚಾಗಿ 4.28 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಹಿಂಗಾರು ಅವಧಿಯಲ್ಲಿ 1,73,875 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಈಗಾಗಲೆ 8,775 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
- ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾದರೂ ಆಗಸ್ಟ್ನಲ್ಲಿ ಕಾರಟಗಿ, ಕುಕನೂರು, ಕನಕಗಿರಿ ತಾಲೂಕಿನಲ್ಲಿ ಶೇ.50 ಮಳೆ ಕೊರತೆಯಾಗಿದೆ. ಮುಂಗಾರಿನಲ್ಲಿ 2.52 ಲಕ್ಷ ಹೆಕ್ಟರ್ (ಶೇ.100) ಬಿತ್ತನೆಯಾಗಿದೆ. ಹಿಂಗಾರಿನಲ್ಲಿ ಈವರೆಗೆ 86,090 (ಶೇ.55.47) ಹೆಕ್ಟೇರ್ ಬಿತ್ತನೆಯಾಗಿದೆ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 10,073 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬಿತ್ತನೆ ಮಾಡಲಾಗಿತ್ತು. ಪ್ರಸ್ತುತ ಕಟಾವಿಗೆ ಸಿದ್ಧಗೊಂಡಿದೆ.
- ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರಿನಲ್ಲಿ 71 ಸಾವಿರ ಹೆಕ್ಟೇರ್ ಭತ್ತ ಬಿತ್ತನೆಯಾಗಿದೆ. ಜೋಳ, ಹತ್ತಿ ಕಡಿಮೆ ಬಿತ್ತನೆಯಾಗಿದೆ. ಹಿಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿವೆ.
- ಧಾರವಾಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟು 1,75,047 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
- ಹಾವೇರಿ ಜಿಲ್ಲೆಯಲ್ಲಿ ಶೇ.90 ಬಿತ್ತನೆ ಗುರಿ ಸಾಧನೆಯಾಗಿದೆ. ಪ್ರಮುಖವಾಗಿ ಮೆಕ್ಕೆಜೋಳ 1,63,318 ಹೆಕ್ಟೇರ್, ಹತ್ತಿ 77,565 ಹೆಕ್ಟೇರ್, ಭತ್ತ 40,235 ಹೆಕ್ಟೇರ್, ಶೇಂಗಾ 19,840 ಹೆಕ್ಟೇರ್ ಹಾಗೂ ಸೋಯಾಬಿನ್ 11,360 ಹೆಕ್ಟೇರ್ ಬಿತ್ತನೆಯಾಗಿದೆ.
- ರಾಮನಗರ ಜಿಲ್ಲೆಯಲ್ಲಿ ಶೇ.92 ಬಿತ್ತನೆ ಆಗಿದೆ. ರಾಗಿ 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, 63 ಸಾವಿರ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು ನಷ್ಟ?
ಬೀದರ್ 1.6 ಲಕ್ಷ ಹೆಕ್ಟೇರ್, ತುಮಕೂರು 50 ಸಾವಿರ, ವಿಜಯಪುರ 40 ಸಾವಿರ, ಶಿವಮೊಗ್ಗ 6 ಸಾವಿರ, ಯಾದಗಿರಿ 3 ಸಾವಿರ, ಉತ್ತರ ಕನ್ನಡ 2,700, ಹಾವೇರಿ 2 ಸಾವಿರ, ಬೆಳಗಾವಿ 2,550, ದಾವಣಗೆರೆ 2,162, ದಕ್ಷಿಣ ಕನ್ನಡ 1,500, ಬಳ್ಳಾರಿ 338, ಚಿತ್ರದುರ್ಗ 310 ಹಾಗೂ ಕೊಪ್ಪಳ 202 ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಇನ್ನಷ್ಟೇ ನಷ್ಟದ ಸಮಿಕ್ಷೆ ಕಾರ್ಯ ಆರಂಭವಾಗಬೇಕಿದ್ದು, ಪ್ರಮಾಣ ಇನ್ನೂ ಅಧಿಕವಾಗುವ ಮುನ್ಸೂಚನೆಯಿದೆ.
ಹಾಸನ ಜಿಲ್ಲೆಯಲ್ಲಿ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಂಡಿದ್ದು, ಶೇ.111 ಸಾಧನೆಯಾಗಿದೆ. ಸಕಲೇಶಪುರ, ಅರಕಲಗೂಡು ತಾಲೂಕುಗಳಲ್ಲಿ ಕಾಫಿ, ಮೆಣಸು, ಹೊಗೆಸೊಪ್ಪು, ಬಾಳೆ ಬೆಳೆಗಳಿಗೆ ಹಿಂಗಾರು ಮಳೆ ಕಂಟಕವಾಗಿದೆ. ಮಂಡ್ಯ ಜಿಲ್ಲೆಯ ಕೆಲವೆಡೆ ಟೊಮಾಟೋ ಸೇರಿ ತರಕಾರಿ ಬೆಳೆಗೆ ನೀರು ತುಂಬಿಕೊಂಡಿದೆ. ಭತ್ತ ಕಾಳುಕಟ್ಟುವ ಸಮಯವಾದ್ದರಿಂದ ಸಮಸ್ಯೆಯಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆಶಾದಾಯಕವಾಗಿದೆ. ಶೇ.90ಕ್ಕಿಂತ ಅಧಿಕ ಬಿತ್ತನೆಯಾಗಿದೆ. ಭತ್ತ, ರಾಗಿ, ಮುಸುಕಿನ ಜೋಳ, ಹತ್ತಿ, ಹೊಗೆಸೊಪ್ಪು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದ್ದು, ಕೊಡಗು ಜಿಲ್ಲೆಯ 20,000 ಹೆಕ್ಟೇರ್ನಲ್ಲಿ ಭತ್ತ, 2,000 ಹೆಕ್ಟೇರ್ನಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ.