ಈ ಭೂಮಿಯ ಅಳಿದುಳಿದ ನೀರಿನ ಸಂಪತ್ತು ನಾಳಿನ ಪೀಳಿಗೆಗೂ ಉಳಿಯುವಂತಾಗಲು ಅನುದಿನವೂ ಜಲ ನಿರ್ವಹಣೆ ಅಗತ್ಯ. ಸುಸ್ಥಿರ ಅಭಿವೃದ್ಧಿಗೆ ಅದೇ ಪೂರಕ. ಆ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲ ಪ್ರಯತ್ನಗಳ ಪರಿಚಯ ಇಲ್ಲಿದೆ. ಇಂತಹ ಜಾಣ್ಮೆಗಳ ಅಳವಡಿಕೆ ಜತೆಗೆ ನೀರಿನ ಅನವಶ್ಯಕ ದುಂದುಗಾರಿಕೆ, ಮರಳು ಗಣಿಗಾರಿಕೆ, ಅರಣ್ಯ ಧ್ವಂಸ, ನದಿ-ಹಳ್ಳಗಳ ಒತ್ತುವರಿಗೆ ಕಡಿವಾಣ ಹಾಕಲೇಬೇಕಿದೆ. ಹಾಗೆ ಮಾಡಿದಲ್ಲಿ ಮಾತ್ರ ಈ ಭೂಗ್ರಹವೆಂಬ ‘ಹೋಮ್ ಉಳಿಯುತ್ತದೆ. ಇದು ನಮ್ಮ ಮಕ್ಕಳಿಗಾಗಿ ನಾವು ಮಾಡಬಹುದಾದ ಬಹುದೊಡ್ಡ ‘ಹೋಮ್ ವರ್ಕ್’.
ಕೂಡ್ಲಿಗಿ ತಾಲ್ಲೂಕಿನ ಅಂಕಮ್ಮನಾಳ್ ಗ್ರಾಮದ ನಾಗರಾಜು ಅವರಿಗೆ ಈಗ ಕೈತುಂಬಾ ಕೆಲಸ. ದಿನದ 24 ಗಂಟೆಗಳೂ, ವರ್ಷದ 365 ದಿನಗಳೂ ಸಾಕಾಗದು. ಕಳೆದ ಆರು ವರ್ಷಗಳಲ್ಲಿ ಅವರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ವರ್ಷದಲ್ಲಿ ಮಳೆಗಾಲದಲ್ಲಿ ಮಾತ್ರ ಜಮೀನಿಗೆ ಬರುತ್ತಿದ್ದವರು ಈಗ ವರ್ಷಪೂರ್ತಿ ಇಲ್ಲೇ ಇರುತ್ತಾರೆ. ವರ್ಷಕ್ಕೆ ಒಂದೇ ಬೆಳೆ ತೆಗೆಯುತ್ತಿದ್ದ ಜಮೀನಿನಲ್ಲಿ ಈಗ ಬಹುವಾರ್ಷಿಕ ಮಾವು, ಸಪೋಟಾ, ಬಾಳೆ ಇತ್ಯಾದಿ ಬೆಳೆಗಳು ತಲೆ ಎತ್ತಿವೆ. ಬೋಳು ಬದುಗಳ ಮೇಲೆ ಹೆಬ್ಬೇವು, ತೇಗದ ಮರಗಳ ಸಾಲು. ಬಯಲಾಗಿದ್ದ ಭೂಮಿಗೆ ಈಗ ಕಾಡಿನ ಕಳೆ ಬಂದಿದೆ. ಮಳೆ ನಂಬಿಕೊಂಡಿದ್ದವರಿಗೆ ಈಗ ಕೊಳವೆ ಬಾವಿಯ ನೀರಿನಾಸರೆ ದೊರಕಿದೆ.
2014ರಲ್ಲಿ ಸಂಕಲ್ಪ ಸಂಸ್ಥೆಯ ಸಿಬ್ಬಂದಿ, ಗ್ರಾಮ ಸಭೆ ಮಾಡಿ ನಬಾರ್ಡ್ ಯೋಜನೆಯಲ್ಲಿ ವಾಡಿ (ತೋಟಕ್ಕೆ ವಾಡಿ ಎಂದು ಹೆಸರು) ಅಭಿವೃದ್ಧಿಪಡಿಸಿಕೊಳ್ಳುವ ರೈತರಿಗೆ ಅಗತ್ಯ ಸಹಕಾರ ನೀಡುವುದಾಗಿ ಮಾಹಿತಿ ನೀಡಿದರು. ಆದರೆ ನೀರಿನ ಅಭಾವದಿಂದ ಬಹುತೇಕ ರೈತರ ಹಿಂಜರಿಕೆ. ಆದರೆ ಹೊಸತನ್ನೇನಾದರೂ ಮಾಡುವ ಇಚ್ಛೆಯಿದ್ದ ನಾಗರಾಜು ಒಪ್ಪಿದರು. ಅವರಂತೆಯೇ ಇನ್ನೂ ಕೆಲ ರೈತರು ಮುಂದೆಬಂದರು.
ಯೋಜನೆಯ ಮಾರ್ಗದರ್ಶನದಂತೆ 3 ಎಕರೆ ಜಮೀನಿನಲ್ಲಿ 52 ಮಾವು, 60 ಸಪೋಟಾ ನೆಟ್ಟರು. ಬದುಗಳ ಮೇಲೆ ತಲಾ 200 ಹೆಬ್ಬೇವು, ತೇಗ ಮತ್ತು ಸಿಲ್ವರ್ ಓಕ್ ಅರಣ್ಯ ಸಸಿಗಳನ್ನೂ ನೆಡಲಾಯಿತು. ಗುಂಡಿ ತೆಗೆಯುವುದು ಹಾಗೂ ನೆಡುವುದನ್ನು ನಾಗರಾಜು ಮನೆಯವರೇ ಮಾಡಿಕೊಂಡರು. ಕೂಡ್ಲಿಗಿ ಬರಗಾಲದ ಪ್ರದೇಶ. ಇಲ್ಲಿ ಮಳೆ ಆಶ್ರಯದಲ್ಲಿ ತೋಟ ಮಾಡುವುದು ದುಸ್ತರ. ಅದೇ ಅನುಭವ ಮೊದಲ ವರ್ಷವೇ ಇವರಿಗಾಯಿತು. ತೋಟ ಉಳಿಸಿಕೊಳ್ಳಲು ಹಲವು ಮಾರ್ಗಗಳನ್ನು ಅನುಸರಿಸಿದರು. ನೀರಿನ ಅಭಾವವಾದಾಗ ಟ್ಯಾಂಕರುಗಳಿಂದ ನೀರು ಪೂರೈಸಲಾಯಿತು. ಹೊಲದಲ್ಲಿ ನೀರು ಸಂಗ್ರಹಿಸಿಕೊಳ್ಳಲು ಸಿಮೆಂಟ್ ರಿಂಗುಗಳ ತೊಟ್ಟಿ ನಿರ್ವಿುಸಿದ್ದು ಇವರ ಕಷ್ಟವನ್ನು ನೀಗಿಸಿತು. ಅಲ್ಲದೆ ಪ್ರತಿಯೊಂದು ಗಿಡದ ಬುಡದಲ್ಲೂ ಒಂದು ಮಣ್ಣಿನ ಗುಂಭವನ್ನು ಹೂಳಿ ಅದಕ್ಕೆ ಒಂದು ಸಣ್ಣ ರಂಧ್ರ ಮಾಡಿ ನೀರು ಹಾಕುವ ಮೂಲಕ ಗಿಡಗಳಿಗೆ ಉಣಿಸಿದರು. ಮೊದಲ ಮೂರು ವರ್ಷ ಇವುಗಳನ್ನು ಬಳಸಿ ಗಿಡಗಳು ಬೆಳೆದ ನಂತರ ಗುಂಭಗಳನ್ನು ತೆಗೆದಿದ್ದಾರೆ. ಈಗ ಕೊಳವೆ ಬಾವಿ ಇರುವುದರಿಂದ ಹನಿ ನೀರಾವರಿ ಅಳವಡಿಸಲಾಗಿದೆ. ಆದರೆ ಎಳೆ ಸಸಿಗಳಿದ್ದಾಗ ಅವುಗಳನ್ನು ಕಾಪಾಡಿರುವುದೇ ಮಣ್ಣಿನ ಗುಂಭಗಳು.
ವಾಡಿ ಅಳವಡಿಸಿದ ಮೇಲೆ ನೀರಿಗಾಗಿ ತುಂಬಾ ಪರದಾಡಿದರು. ಬೇಸಿಗೆಯಲ್ಲೇನೋ ಟ್ಯಾಂಕರ್ ನೀರು ಯೋಜನೆಯಿಂದ ದೊರೆಯುತ್ತಿತ್ತು. ಆದರೆ ಉಳಿದ ಸಮಯದಲ್ಲಿ ಪರದಾಟ. ಈ ಸಮಸ್ಯೆಯಿಂದ ಪಾರಾಗಲು ಗಂಗಾ ಕಲ್ಯಾಣ ಯೋಜನೆಯಡಿ 2017ರಲ್ಲಿ ಕೊಳವೆಬಾವಿ ತೆಗೆಸಿದರು.
ಒಳ್ಳೆಯ ನೀರು ಲಭಿಸಿತು. ಆದರೆ ಇವರ ಹೊಲದ ಹತ್ತಿರದಲ್ಲಿ ವಿದ್ಯುತ್ ಕಂಬಗಳೇ ಇರಲಿಲ್ಲ. 7 ಕಿಲೋಮೀಟರ್ ದೂರದ ಸೋಮಲಾಪುರದಿಂದ 126 ಕಂಬಗಳನ್ನು ಹಾಕಿ ವಿದ್ಯುತ್ ಸಂಪರ್ಕ ತೆಗೆದುಕೊಂಡರು. ಮೊದಲ ಸಲ ಕೊಳವೆಬಾವಿ ನೀರು ಬಂದಾಗ ಇವರ ಕುಟುಂಬಕ್ಕಾದ ಸಂತೋಷ ವರ್ಣಿಸಲಸದಳ. ‘‘ನಮ್ಮ ಜಮೀನಿಗೆ ಕರೆಂಟ್ ಬರುತ್ತೆ ಅಂತ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ’’ ಎನ್ನುತ್ತಾರೆ.
ನೀರು ಹಂಚಿದ ನಾಗರಾಜು: ಇದು ಇವರ ದೊಡ್ಡ ಮನಸ್ಸಿಗೆ ಉದಾಹರಣೆ. ತಮ್ಮ ಕೊಳವೆಬಾವಿಗೆ ನೀರು ಬಂದ ತಕ್ಷಣ ತಾವಷ್ಟೇ ಬಳಸಿಕೊಂಡು ಸ್ವಾರ್ಥಿಗಳಾಗಲಿಲ್ಲ. ನೀರಿನ ಕೊರತೆ ಅನುಭವಿಸುತ್ತಿದ್ದ ಸುತ್ತಮುತ್ತಲ ಇತರ ರೈತರ ತೋಟಗಳಿಗೂ ಹಂಚಿದರು. ಮಳೆ ಕೊರತೆಯಾಗಿ ಊರಿನ ಕೆರೆಯಲ್ಲಿ ನೀರು ಬತ್ತಿ ಹೋದಾಗ ಯೋಜನೆಯ ಟ್ಯಾಂಕರುಗಳಿಗೆ ತಮ್ಮ ಕೊಳವೆಬಾವಿಯಿಂದಲೇ ನೀರು ತುಂಬಿಸಿಕೊಟ್ಟರು. ಎರಡು ವರ್ಷಗಳ ಕಾಲ ಸುಮಾರು 300 ವಾಡಿಗಳಿಗೆ ಇವರ ಕೊಳವೆಬಾವಿಯ ನೀರೇ ಆಧಾರವಾಯಿತು.
ಇವರ ಶ್ರಮಕ್ಕೆ ಪ್ರತಿಫಲ ಶುರುವಾಗಿದೆ. 2019ರಲ್ಲಿ 12 ಕ್ವಿಂಟಾಲ್ನಷ್ಟು ಮಾವಿನ ಫಸಲು ಬಂದಿದೆ. ಕಿಲೋ ಒಂದಕ್ಕೆ 36 ರೂ.ಗಳಂತೆ ಮಾರಾಟ ಮಾಡಿ 43200 ರೂ. ಆದಾಯ ಪಡೆದಿದ್ದಾರೆ. ಈಗ ನಾಗರಾಜು ತೋಟದಲ್ಲೇ ವಾಸ್ತವ್ಯ ಹೂಡಿದ್ದಾರೆ. ಇಲ್ಲೇ ಇದ್ದು ವಾಡಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇನ್ನುವುದು ಇವರ ಮನದಾಸೆ.
ಮಳೆ ನೀರಿಗೇ ಭತ್ತದ ಬೆಳೆ: ಇದು ನಾಗರಾಜು ವೈಶಿಷ್ಟ್ಯ. ತಮ್ಮ ಹೊಲದ ಇಳಿಜಾರಿನಲ್ಲಿ ಮಳೆಗಾಲಕ್ಕೆ ಅರ್ಧ ಎಕರೆಯಷ್ಟು ಭತ್ತ ಹಾಕುತ್ತಾರೆ. ಅದೂ ಮಳೆ ಆಶ್ರಯದಲ್ಲಿ. ಈ ರೀತಿ ಒಣಭೂಮಿ ಭತ್ತ ಬಿತ್ತನೆ ವಿಧಾನ ರಾಜ್ಯದ ಅನೇಕ ಭಾಗಗಳಲ್ಲಿ ಚಾಲ್ತಿಯಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ಕಣ್ಮರೆಯಾಗಿದೆ. ಅದನ್ನು ಈಗಲೂ ಜೀವಂತ ಇಟ್ಟಿದ್ದಾರೆ ಇವರು. ಹೆಚ್ಚಿನ ಖರ್ಚಿಲ್ಲದೆ 5-6 ಕ್ವಿಂಟಾಲ್ ಭತ್ತ ಸಿಗುತ್ತದೆ. ವರ್ಷವಿಡೀ ಮನೆ ಅಕ್ಕಿ ಉಣ್ಣುವ ಅವಕಾಶ. ಮೊದಲು ಕಾಡಿಗೆದೊಡ್ಡಿ ಎಂಬ ದೇಸೀ ತಳಿ ಹಾಕುತ್ತಿದ್ದರು ಈಗೀಗ ಹಂಸ, ಸೋನಾ ತಳಿಗಳನ್ನು ಬಳಸುತ್ತಿದ್ದಾರೆ.