ಅಂಕಣ

ನೀರು ನಿರ್ವಹಣೆ ಜಾಣ್ಮೆ; ಹವಾಮಾನ ವೈಪರೀತ್ಯ ಎದುರಿಸುವ ಪ್ರಯೋಗ

ಈ ಭೂಮಿಯ ಅಳಿದುಳಿದ ನೀರಿನ ಸಂಪತ್ತು ನಾಳಿನ ಪೀಳಿಗೆಗೂ ಉಳಿಯುವಂತಾಗಲು ಅನುದಿನವೂ ಜಲ ನಿರ್ವಹಣೆ ಅಗತ್ಯ. ಸುಸ್ಥಿರ ಅಭಿವೃದ್ಧಿಗೆ ಅದೇ ಪೂರಕ. ಆ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲ ಪ್ರಯತ್ನಗಳ ಪರಿಚಯ ಇಲ್ಲಿದೆ. ಇಂತಹ ಜಾಣ್ಮೆಗಳ ಅಳವಡಿಕೆ ಜತೆಗೆ ನೀರಿನ ಅನವಶ್ಯಕ ದುಂದುಗಾರಿಕೆ, ಮರಳು ಗಣಿಗಾರಿಕೆ, ಅರಣ್ಯ ಧ್ವಂಸ, ನದಿ-ಹಳ್ಳಗಳ ಒತ್ತುವರಿಗೆ ಕಡಿವಾಣ ಹಾಕಲೇಬೇಕಿದೆ. ಹಾಗೆ ಮಾಡಿದಲ್ಲಿ ಮಾತ್ರ ಈ ಭೂಗ್ರಹವೆಂಬ ‘ಹೋಮ್ ಉಳಿಯುತ್ತದೆ. ಇದು ನಮ್ಮ ಮಕ್ಕಳಿಗಾಗಿ ನಾವು ಮಾಡಬಹುದಾದ ಬಹುದೊಡ್ಡ ‘ಹೋಮ್ ವರ್ಕ್’.

ಕೊರಟಗೆರೆ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಹತ್ತಾರು ತೆರೆದ ಬಾವಿಗಳಲ್ಲಿ ಈಗ ಸಮೃದ್ಧ ನೀರು. ಬತ್ತಿ ಹೋಗಿದ್ದ ಹಾಗೂ ಅರೆ-ಬರೆ ಉಸಿರಾಡುತ್ತಿದ್ದ ಕೊಳವೆಬಾವಿಗಳಲ್ಲಿಯೂ ನಿರಂತರ ನೀರಿನ ಸೆಲೆ. ಇದರಿಂದ ಇಡೀ ಗ್ರಾಮದ ಸೂಕ್ಷ್ಮ ಪರಿಸರದಲ್ಲಿ ಆಗಿರುವ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಅನುಷ್ಠಾನಗೊಳಿಸುತ್ತಿರುವ ಹವಾಮಾನ ವೈಪರೀತ್ಯ ಸೈರಣೆ ಕೃಷಿ ಯೋಜನೆಯಿಂದ ಇದು ಸಾಧ್ಯವಾಗಿದೆ. ಹವಾಮಾನ ಬದಲಾವಣೆಯಿಂದ ಕೃಷಿ ಮತ್ತು ಸಂಬಂಧಿತ ವಲಯಗಳ ಮೇಲೆ ಆಗುವ ಪರಿಣಾಮವನ್ನು ಎದುರಿಸಲು ರೈತರನ್ನು ಸಜ್ಜುಗೊಳಿಸುವುದು ಇದರ ಉದ್ದೇಶ.

ಹಳ್ಳಿಯ ಸುಮಾರು 350 ಹೆಕ್ಟೇರ್ ಪ್ರದೇಶದಲ್ಲಿ ಒಂದಲ್ಲಾ ಒಂದು ನೀರಿನ ರಚನೆಗಳನ್ನು ಮಾಡಿ ಮಳೆ ನೀರನ್ನು ‘ಬಂಧಿಸ’ಲಾಗಿದೆ. ಆಯಾ ಭೂವಿನ್ಯಾಸದ ಅಗತ್ಯಕ್ಕೆ ಅನುಗುಣವಾಗಿ, ರೈತರ ಸಲಹೆಯ ಮೇರೆಗೆ ಇಂತಹ ರಚನೆಗಳನ್ನು ಆಯ್ಕೆ ಮಾಡಿರುವುದು ವಿಶೇಷ. ಇಳಿಜಾರನ್ನು ಗಮನಿಸಿ 96 ಕೃಷಿ ಹೊಂಡಗಳನ್ನು ನಿರ್ವಿುಸಲಾಗಿದೆ, ಹಳ್ಳಗಳಿಗೆ 5 ಹೊಸ ಚೆಕ್ ಡ್ಯಾಮ್ ಕಟ್ಟಿರುವುದಲ್ಲದೆ 9 ಹಳೆಯ ಚೆಕ್ ಡ್ಯಾಮ್ಳನ್ನು ರಿಪೇರಿಗೊಳಿಸಿ ನೀರು ನಿಲ್ಲುವಂತೆ ಮಾಡಲಾಗಿದೆ. ವಿವಿಧ ರೈತರ ಹೊಲಗಳಲ್ಲಿ ನಿರುಪಯುಕ್ತವಾಗಿದ್ದ 26 ತೆರೆದ ಬಾವಿಗಳನ್ನು ಗುರುತಿಸಿ ವ್ಯರ್ಥ ನೀರು ಹರಿದು ಹೋಗುವಂತೆ ಮಾಡಿರುವುದರಿಂದ ಕಸ-ಕಡ್ಡಿ ತುಂಬಿ ಹಾಳು ಬಿದ್ದಿದ್ದ ಬಾವಿಗಳಲ್ಲಿ ನೀರು ತುಂಬಿದೆ.