| ಉಮೇಶ್ ಕುಮಾರ್ ಶಿಮ್ಲಡ್ಕ
ಸ್ಪರ್ಧಾತ್ಮಕವಾದ ರೀತಿಯಲ್ಲಿ ಜಗತ್ತು ಬದಲಾಗುತ್ತಿದೆ. ಸುಧಾರಿತ ತಂತ್ರಜ್ಞಾನಗಳು ಸಮಯ ಉಳಿತಾಯ ಮಾಡಿದ್ದಲ್ಲದೆ, ಬದುಕಿನ ವೇಗವನ್ನು ಹೆಚ್ಚಿಸಿವೆ. ಈಗ ಏನಿದ್ದರೂ ಡಿಜಿಟಲ್ ಸಾಕ್ಷರತೆಗೆ ಒತ್ತು. ಬೆರಳ ತುದಿಯಿಂದಲೇ ಎಲ್ಲ ಕೆಲಸಗಳನ್ನೂ ಮಾಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಬದುಕಿನೊಳಗೆ ಸೇರಿದೆ. ಅರಿವಿದ್ದೋ ಇಲ್ಲದೆಯೋ ಮಷಿನ್ ಲರ್ನಿಂಗ್ ಮೂಲಕವೇ ಬಹುತೇಕವನ್ನು ಎಲ್ಲರೂ ಕಲಿತುಕೊಳ್ಳುತ್ತಿದ್ದಾರೆ. ಇಷ್ಟಾಗ್ಯೂ ಅನೇಕ ಡಿಜಿಟಲ್ ಕೌಶಲಗಳನ್ನು ಕಲಿಸಲು/ಕಲಿಯಲು ತರಬೇತಿ ಅವಶ್ಯ.
ಬಹಳ ಜನಪ್ರಿಯವಾಗಿರುವ ವಾಟ್ಸ್ಆಪ್ ಈಗ ಬಿಜಿನೆಸ್ ಉಪಯೋಗದ ಪ್ರತ್ಯೇಕ ವಿಭಾಗವನ್ನು ಹೊಂದಿದೆ. ಅದನ್ನು ಬಳಸುವುದಕ್ಕೆ ಹೆಚ್ಚುವರಿ ಡಿಜಿಟಲ್ ಕೌಶಲಗಳ ಅಗತ್ಯವಿದೆ. ಹೀಗಾಗಿ ವಾಟ್ಸ್ಆಪ್ ಡಿಜಿಟಲ್ ಸ್ಕಿಲ್ಸ್ ಅಕಾಡೆಮಿಯನ್ನು ಸ್ಥಾಪಿಸಿದೆ. ಯುವಜನರಿಗೆ ಆ ಕೌಶಲಗಳನ್ನು ಕಲಿಸುವುದಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಸ್ಥಾಪಿಸಿರುವ ಎನ್ಎಸ್ಡಿಸಿ ಜತೆ ಸೇರಿ ‘ಡಿಜಿಟಲ್ ಸ್ಕಿಲ್ ಚಾಂಪಿಯನ್ಸ್ ಪ್ರೋಗ್ರಾಂ’ ಅನ್ನು ರೂಪಿಸಿದೆ. ದೇಶದ ಯುವಜನರನ್ನು ಉದ್ಯೋಗಕ್ಕೆ ಸಿದ್ಧರಾಗುವಂತೆ ಕೌಶಲಗಳನ್ನು ಕಲಿಸುವುದು ಈ ಕಾರ್ಯಕ್ರಮದ ಉದ್ದೇಶ.
ಏನಿದು ಪ್ರೋಗ್ರಾಂ?: ಡಿಜಿಟಲ್ ಸ್ಕಿಲ್ ಚಾಂಪಿಯನ್ಸ್ ಪ್ರೋಗ್ರಾಂ ಎಂಬುದು ಎರಡು ವಿಸõತ ವ್ಯಾಪ್ತಿಯ ಪಾಲುದಾರಿಕೆಯಾಗಿದೆ. ಇದರಲ್ಲಿ ವಾಟ್ಸ್ಆಪ್ ಡಿಜಿಟಲ್ ಸ್ಕಿಲ್ಸ್ ಅಕಾಡೆಮಿ ಮತ್ತು ಪ್ರಧಾನ ಮಂತ್ರಿ ಕೌಶಲ್ ಕೇಂದ್ರ (ಪಿಎಂಕೆಕೆ) ಕೌಶಲಾಭಿವೃದ್ಧಿ ಪಾಲುದಾರಿಕೆ ಒಂದು, ಹಾಗೂ ವಾಟ್ಸ್ಆಪ್ ಬಿಜಿನೆಸ್ ಆಪ್ ಟ್ರೇನಿಂಗ್ ಇನ್ನೊಂದು.
ತರಬೇತಿ ಹೇಗೆ?: ವಾಟ್ಸ್ಆಪ್ ಈ ಡಿಜಿಟಲ್ ಸ್ಕಿಲ್ ಚಾಂಪಿಯನ್ ಪ್ರೋಗ್ರಾಂ ಅನ್ನು ತನ್ನ ಪ್ರಾಜೆಕ್ಟ್ ಅನುಷ್ಠಾನ ಪಾಲುದಾರ ಕಂಪನಿ ಇನ್ಫಿಸ್ಪಾರ್ಕ್ ಮೂಲಕ ಜಾರಿಗೊಳಿಸಲಿದೆ. ಪಿಎಂಕೆಕೆ ಮತ್ತು ವಾಟ್ಸ್ಆಪ್ ಬಿಜಿನೆಸ್ ಆಪ್ ಟ್ರೇನಿಂಗ್ ಪಾಲುದಾರಿಕೆಯಲ್ಲಿ ಪ್ರಧಾನ ಮಂತ್ರಿ ಕೌಶಲ ಕೇಂದ್ರದ ತರಬೇತುದಾರರಿಗೆ ವಾಟ್ಸ್ ಆಪ್ ಬಿಜಿನೆಸ್ ಆಪ್ ಮೂಲಕವೇ ತರಬೇತಿ ನೀಡಲಾಗುತ್ತದೆ. ಅವರನ್ನು ವಿದ್ಯಾರ್ಥಿ-ಯುವಜನರಿಗೆ ತರಬೇತಿ ನೀಡಲು ಸಜ್ಜುಗೊಳಿಸಲಾಗುತ್ತದೆ.
ಐದು ರಾಜ್ಯಗಳು: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಡಿಜಿಟಲ್ ಸ್ಕಿಲ್ ಚಾಂಪಿಯನ್ ಪ್ರೋಗ್ರಾಂ ಆರಂಭಿಕ ಹಂತದಲ್ಲಿ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪ್ರಾಯೋಗಿಕ ವಾಗಿ ಆರಂಭವಾಗಲಿದೆ. ಈ ರಾಜ್ಯಗಳ 50 ಕ್ಯಾಂಪಸ್ಗಳಲ್ಲಿ ಈ ಕೋರ್ಸ್ ಲಭ್ಯವಾಗಲಿದೆ.
ಕಲಿಸುವುದೇನನ್ನು?: ಡಿಜಿಟಲ್ ಜಗತ್ತಿನಲ್ಲಿ ಹೇಗಿರಬೇಕು? ಉತ್ತಮ ಸುರಕ್ಷಿತ ಡಿಜಿಟಲ್ ಪರಿಸರ ಸೃಷ್ಟಿಸುವಲ್ಲಿ ಪ್ರತಿಯೊ ಬ್ಬರ ಹೊಣೆಗಾರಿಕೆ ಏನು? ಡಿಜಿಟಲ್ ಸುರಕ್ಷತೆ ಮತ್ತು ಆನ್ಲೈನ್ ಪ್ರೖೆವೆಸಿ ಮುಂತಾದ ನಿರ್ಣಾಯಕ ಅಂಶಗಳ ಕುರಿತು ಯುವಜನರಿಗೆ ಈ ಕೋರ್ಸ್ನಲ್ಲಿ ಕಲಿಸಲಾಗುತ್ತದೆ.
ಇವರೆಲ್ಲ ಫಲಾನುಭವಿಗಳು: ದೇಶದ ಮೂರು ಮತ್ತು ನಾಲ್ಕನೇ ಸ್ತರದ ನಗರಗಳ/ಪಟ್ಟಣಗಳ ಶಾಲಾ ಮತ್ತು ಯೂನಿವರ್ಸಿಟಿ ಹಂತದ ವಿದ್ಯಾರ್ಥಿಗಳು ವಾಟ್ಸ್ಆಪ್ ಮತ್ತು ಎನ್ಎಸ್ಡಿಸಿ ಪಾಲುದಾರಿಕೆಯ ಈ ಡಿಜಿಟಲ್ ಸ್ಕಿಲ್ ಚಾಂಪಿಯನ್ಸ್ ಪ್ರೋಗ್ರಾಂನ ಫಲಾನುಭವಿಗಳು. ಡಿಜಿಟಲ್ ಮತ್ತು ಆನ್ಲೈನ್ ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಅವರಿಗೆ ತರಬೇತಿ ಸಿಗಲಿದೆ. ಅಷ್ಟೇ ಅಲ್ಲ, ಡಿಜಿಟಲ್ ಸ್ಕಿಲ್ ಚಾಂಪಿಯನ್ಸ್ ಪ್ರಮಾಣಪತ್ರವೂ ಅವರ ಪಾಲಾಗಲಿದೆ. ಆನ್ಲೈನ್ ವ್ಯವಸ್ಥೆಯ ಎಲ್ಲ ಪ್ರಮುಖ ಅಂಶಗಳ ಬಗ್ಗೆ ತೀವ್ರತರವಾದ ಮತ್ತು ಸಮಗ್ರವಾದ ಜ್ಞಾನವನ್ನು ನೀಡುವಂತಹ ಮಾಡ್ಯೂಲ್ ಸ್ವರೂಪದಲ್ಲಿ ಈ ಕೋರ್ಸ್ ಇದೆ.