ಕೈ ಮೇಲೆ ಕುಳಿತಿದ್ದ ಕಪ್ಪು ಹದ್ದು ಆದೇಶಕ್ಕಾಗಿ ಕಾಯುತ್ತಿತ್ತು. ಸೂಚನೆ ಬಂದ ತಕ್ಷಣ ಹಾರಿಯೇಬಿಟ್ಟಿತು. ತನ್ನ ಬೇಟೆಯನ್ನು ಬಲಿ ಹಾಕಲು ಆಕಾಶದ ಕಡೆಗೆ ನುಗ್ಗಿತು. ನಂತರ ಕೆಳಗಿಳಿಯಿತು. ಈ ಹದ್ದಿನ ಗುರಿ ಕ್ವಾಡ್ಕಾಪ್ಟರ್ ಡ್ರೋನ್. ಈ ಡ್ರೋನನ್ನು ಕೆಳಗೆಳೆದ ನಂತರ, ಅದು ತನ್ನ ಉಳಿದರ್ಧ ಕಾರ್ಯ ಮುಂದುವರಿಸಲು ಮತ್ತೊಮ್ಮೆ ಹಾರಿತು. ಕಣ್ಗಾವಲು ಕಾರ್ಯದಲ್ಲಿ ತೊಡಗಿತು.
ಉತ್ತರಾಖಂಡ್ನ ಔಲಿಯಲ್ಲಿ ಈಚೆಗೆ ನಡೆದ ಭಾರತ-ಅಮೆರಿಕ ಸೇನಾ ಸಮರಾಭ್ಯಾಸದಲ್ಲಿ ಕಂಡುಬಂದ ದೃಶ್ಯವಿದು. ಶತ್ರು ಡ್ರೋನ್ಗಳ ಕಾಟ ಮತ್ತು ವೈರಿಗಳಿಂದ ಪತ್ತೆಗೆ ಒಳಗಾಗುವ ಚಿಂತೆಯಿಲ್ಲದೆ ಕಣ್ಗಾವಲು ನಡೆಸುವ ಅಗತ್ಯವನ್ನು ಎದುರಿಸುತ್ತಿರುವ ಸೇನೆಯು ತರಬೇತಿ ಶಿಬಿರದಲ್ಲಿ ಪಕ್ಷಿಗಳ ಹಿಂಡುಗಳನ್ನು ಕಲೆಹಾಕುತ್ತಿದೆ.
ವಿಶಿಷ್ಟ ತರಬೇತಿ: ಮೀರತ್ನಲ್ಲಿರುವ ರಿಮೌಂಟ್ ವೆಟರ್ನರಿ ಕೋರ್ (ಆರ್ವಿಸಿ) ಕೇಂದ್ರವು ಕ್ವಾಡ್ಕಾಪ್ಟರ್ ಡ್ರೋನ್ಗಳನ್ನು ಕೆಳಗಿಳಿಸಲು ಕಪ್ಪು ಹದ್ದುಗಳು ಮತ್ತು ರಣಹದ್ದುಗಳಿಗೆ ಸದ್ದಿಲ್ಲದೆ ತರಬೇತಿ ನೀಡುತ್ತಿದೆ. ತರಬೇತಿ ಅವಧಿಯಲ್ಲಿ ಹದ್ದುಗಳು ನೂರಾರು ಡ್ರೋನ್ಗಳನ್ನು ಕೆಳಗಿಳಿಸಿವೆ. ಕೆಲವೊಮ್ಮೆ ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಇವು ಕ್ವಾಡ್ಕಾಪ್ಟರ್ಗಳಾಗಿರುವುದರಿಂದ ಇದುವರೆಗೆ ಯಾವುದೇ ಹದ್ದುಗಳಿಗೆ ಗಾಯವಾಗಿಲ್ಲ ಎಂದು ರಕ್ಷಣಾ ಸಂಸ್ಥೆ ಸಿಬ್ಬಂದಿ ಹೇಳುತ್ತಾರೆ. ಈ ಪಕ್ಷಿಗಳ ಪೈಕಿ ಬಹುತೇಕವು ರಕ್ಷಣೆ ಮಾಡಲ್ಪಟ್ಟವುಗಳಾಗಿದ್ದು, ರಣಹದ್ದು ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದಲ್ಲಿ ಬೀಡುಬಿಟ್ಟಿವೆ. 2020ರಿಂದ ಗೂಢಚರ್ಯು ಮತ್ತು ಡ್ರೋನ್ ಕೆಳಗಿಳಿಸುವ ಕಾರ್ಯಾಚರಣೆಗಾಗಿ ಹಲವು ಪಕ್ಷಿಗಳಿಗೆ ತರಬೇತಿ ನೀಡಲಾಗುತ್ತಿದೆ.
ತೆಲಂಗಾಣ ವಿಶಿಷ್ಟ ಪ್ರಯತ್ನ: ಡ್ರೋನ್ಗಳನ್ನು ಕೆಳಗಿಳಿಸಲು ಹಕ್ಕಿಗಳನ್ನು ಬಳಸಿಕೊಂಡ ಮೊದಲ ಭಾರತೀಯ ಸಂಸ್ಥೆ ಸೇನೆಯಲ್ಲ. 2020ರ ಜುಲೈನಲ್ಲಿ ತೆಲಂಗಾಣ ಸರ್ಕಾರ ವಿಐಪಿ ಕಾರ್ಯಕ್ರಮಗಳಲ್ಲಿ ಅಕ್ರಮ ಡ್ರೋನ್ಗಳನ್ನು ಕೆಳಗಿಳಿಸಲು ಹದ್ದುಗಳ ಸ್ಕಾ್ವಡ್ಗೆ ತರಬೇತಿ ನೀಡುವಂತೆ ರಾಜ್ಯ ಗೃಹ ಇಲಾಖೆಗೆ ಆದೇಶಿಸಿತ್ತು. ಗೃಹ ಇಲಾಖೆ ಮೊಯಿನಾಬಾದ್ನಲ್ಲಿರುವ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ಇಂತಹ ಪಕ್ಷಿಗಳಿಗೆ ಗರುಡ ಸ್ಕಾ ್ವ್ ಎಂದು ನಾಮಕರಣ ಮಾಡುವುದಾಗಿ ವರದಿಯಾಗಿತ್ತು. ಇದಕ್ಕಾಗಿ ತರಬೇತುದಾರರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿತ್ತು.
ಪಕ್ಷಿನೋಟ: ಮಿಲಿಟರಿ ಸಂವಹನದ ಅತ್ಯಂತ ಹಳೆಯ ಸಾಧನಗಳಲ್ಲಿ ಒಂದಾದ ಪಕ್ಷಿಗಳು ವೇಗ ಮತ್ತು ಪ್ರವೇಶದ ಸಾಮರ್ಥ್ಯದಿಂದಾಗಿ ಮಿಲಿಟರಿ ಮತ್ತು ಗುಪ್ತಚರ ಕಾರ್ಯಾಚರಣೆಗಳಲ್ಲಿ ಬಳಸಲ್ಪಟ್ಟ ದೀರ್ಘ ಇತಿಹಾಸವನ್ನು ಹೊಂದಿವೆ. ಎರಡನೇ ವಿಶ್ವ ಯುದ್ಧದಲ್ಲಿ ಹಕ್ಕಿಗಳನ್ನು ವ್ಯಾಪಕವಾಗಿ ನಿಯೋಜಿಸಲಾಯಿತು. ಬ್ರಿಟಿಷ್ ಸೈನ್ಯವು ಯುದ್ಧದ ಉದ್ದಕ್ಕೂ ನೂರಾರು ಪಾರಿವಾಳಗಳನ್ನು ಗುಪ್ತಚರ ಸಂಗತಿ ಪ್ರಸಾರ ಮಾಡಲು ಮತ್ತು ಯುದ್ಧಭೂಮಿಯಿಂದ ಸುದ್ದಿಗಳನ್ನು ತಿಳಿಸಲು ಬಳಸಿತು. ಗೂಢಚಾರಿಕೆಗೆ ಪ್ರತಿತಂತ್ರವಾಗಿಯೂ ಇವುಗಳನ್ನು ಬಳಸಲಾಗಿದೆ. ಜರ್ಮನ್ನರು ತಮ್ಮ ಪಾರಿವಾಳಗಳಿಗೆ ಮಿತ್ರರಾಷ್ಟ್ರಗಳ ಪಾರಿವಾಳಗಳಂತೆ ಕಾಣುವಂತೆ ವೇಷ ಧರಿಸಿ ಪ್ಯಾರಾಚೂಟ್ ಮೂಲಕ ಫ್ರಾನ್ಸ್ನಲ್ಲಿ ಇಳಿಸಲು ಪ್ರಯತ್ನಿಸಿದ್ದರು. ಈಗ, ಆಧುನಿಕ ಯುದ್ಧ ಪರಿಕರಗಳ ಆಗಮನದೊಂದಿಗೆ, ಪಕ್ಷಿಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆಲೋಚನೆಗಳು ಸಾಗಿವೆ. ಡ್ರೋನ್ಗಳನ್ನು ಉರುಳಿಸಲು ಪಕ್ಷಿಗಳ ಬಳಕೆಯಾಗುತ್ತಿರುವುದು ಇಂತಹ ಒಂದು ಸಾಧ್ಯತೆಯಾಗಿದೆ. 1941ರಲ್ಲಿ ಅಮೆರಿಕದ ಪ್ರಮುಖರೊಬ್ಬರು ಹೀಗೆ ಹೇಳಿದ್ದರು- ‘ಪಾರಿವಾಳಗಳು ಯುದ್ಧಗಳನ್ನು ಗೆಲ್ಲಬಲ್ಲವು’.
ಅತ್ಯಂತ ಎತ್ತರದ ತಳಿ ಸಂವರ್ಧನೆ ಕೇಂದ್ರ: ಲಡಾಖ್ನಲ್ಲಿ ಝುನಿಸ್ಕರಿ ಕುದುರೆ ಮರಿ ತಳಿ ಮತ್ತು ತರಬೇತಿ ಕೇಂದ್ರವನ್ನು ಆರ್ವಿಸಿಯಿಂದ ಸ್ಥಾಪಿಸಲಾಗಿದೆ. ಇದು ಸಮುದ್ರ ಮಟ್ಟದಿಂದ 3146 ಮೀಟರ್ ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ಪ್ರಾಣಿ ತಳಿ ಸಂವರ್ಧನೆ ಕೇಂದ್ರವಾಗಿದೆ. ಝುನಿಸ್ಕರಿ ಕುದುರೆ ತಳಿಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ನೆದರ್ಲೆಂಡ್ನಿಂದ ಮೊದಲ ಬಳಕೆ: ಶತ್ರುಗಳ ಮೇಲೆ ಕಾವಲಿಗೆ ಹಾಗೂ ದಾಳಿ ನಡೆಸಲು ಡ್ರೋನ್ ತಂತ್ರಜ್ಞಾನದ ಬಳಕೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಡ್ರೋನ್ಗಳನ್ನು ಕೆಳಗಿಳಿಸಲು ಹದ್ದುಗಳನ್ನು ಮೊದಲು ಪರಿಣಾಮಕಾರಿಯಾಗಿ ಬಳಸಿದ ದೇಶ ನೆದರಲೆಂಡ್. 2016ರಲ್ಲಿ ಹದ್ದುಗಳಿಗೆ ತರಬೇತಿ ನೀಡುವ ಡ್ರೋನ್ ಸಂಹರಿಸುವ ತಂತ್ರವನ್ನು ಬಳಸಿದ ನೆದರ್ಲೆಂಡ್, ‘ಹೈಟೆಕ್ ಸಮಸ್ಯೆಗೆ ಕಡಿಮೆ ತಂತ್ರಜ್ಞಾನದ ಪರಿಹಾರ’ ಎಂದು ಹೇಳಿಕೊಂಡಿತ್ತು.
ಏನಿದು ಆರ್ವಿಸಿ?: ರಿಮೌಂಟ್ ವೆಟರ್ನರಿ ಕೋರ್ (ಆರ್ವಿಸಿ) ಭಾರತೀಯ ಸೇನೆಯ ಒಂದು ಶಾಖೆಯಾಗಿದೆ. ಸೈನ್ಯದಲ್ಲಿ ಬಳಸುವ ಎಲ್ಲಾ ಪ್ರಾಣಿಗಳ ಸಂತಾನೋತ್ಪತ್ತಿ, ಪಾಲನೆ ಮತ್ತು ತರಬೇತಿಯ ಜವಾಬ್ದಾರಿಯನ್ನು ಇದು ನಿರ್ವಹಿಸುತ್ತದೆ. 1920 ಡಿಸೆಂಬರ್ 14ರಂದು ಇದನ್ನು ಸ್ಥಾಪಿಸಲಾಯಿತು.
ಮುಧೋಳ ತಳಿ ನಾಯಿಗಳಿಗೆ ತರಬೇತಿ: ಕರ್ನಾಟಕದ ಮುಧೋಳ ಬೇಟೆನಾಯಿ ತಳಿಯನ್ನು ಭಾರತೀಯ ಸೇನೆಯ ಸೇವೆಗೆ ಬಳಸಿಕೊಳ್ಳಲು ಆರ್ವಿಸಿ ತರಬೇತಿ ನೀಡುತ್ತದೆ. ಮುಧೋಳ ನಾಯಿಯು ಸೇನಾ ಕರ್ತವ್ಯಕ್ಕಾಗಿ ತರಬೇತಿ ಪಡೆದ ಮೊದಲ ಭಾರತೀಯ ಶ್ವಾನ ತಳಿಯಾಗಿದೆ. ಭಾರತೀಯ ಸೇನೆಯ ಶ್ವಾನ ಘಟಕಗಳಲ್ಲಿ ಲ್ಯಾಬ್ರಡಾರ್ಗಳು, ಜರ್ಮನ್ ಶೆಫರ್ಡ್ಸ್, ಬೆಲ್ಜಿಯನ್ ಮಾಲಿನೋಯಿಸ್ ಮತ್ತು ಗ್ರೇಟ್ ಮೌಂಟೇನ್ ಸ್ವಿಸ್ ಡಾಗ್ಸ್ ಸೇರಿವೆ. 2019 ರಲ್ಲಿ ಸಂಸತ್ತಿನಲ್ಲಿ ನೀಡಿದ ಹೇಳಿಕೆ ಪ್ರಕಾರ, ಸೇನೆಯು 25 ಪೂರ್ಣ ನಾಯಿ ಘಟಕಗಳು ಮತ್ತು ಎರಡು ಅರ್ಧ ಘಟಕಗಳನ್ನು ಹೊಂದಿದೆ. ಪೂರ್ಣ ಘಟಕವು 24 ನಾಯಿಗಳನ್ನು ಹೊಂದಿದ್ದರೆ, ಅರ್ಧ ಘಟಕವು 12 ನಾಯಿಗಳನ್ನು ಒಳಗೊಂಡಿರುತ್ತದೆ. ಮಿಲಿಟರಿ ನಾಯಿಗಳನ್ನು ಗಾರ್ಡ್ ಡ್ಯೂಟಿ, ಗಸ್ತು ತಿರುಗುವುದು, ಸ್ಪೋಟಕಗಳನ್ನು ಪತ್ತೆ ಮಾಡುವುದು, ಗಣಿಗಳನ್ನು ಪತ್ತೆ ಮಾಡುವುದು, ಮಾದಕ ದ್ರವ್ಯಗಳು ಸೇರಿದಂತೆ ನಿಷಿದ್ಧ ಪದಾರ್ಥಗಳನ್ನು ಪತ್ತೆ, ಸಂಭಾವ್ಯ ಗುರಿಗಳ ಮೇಲೆ ದಾಳಿ, ಪರಾರಿಯಾಗಿರುವವರನ್ನು ಮತ್ತು ಭಯೋತ್ಪಾದಕರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ.
ಕಣ್ಗಾವಲಿಗೂ ಸೈ: ಈಗ ಡ್ರೋನ್ಗಳ ಗಾತ್ರ ದೊಡ್ಡದಾಗುತ್ತಿದೆ. ಬೃಹತ್ ಡ್ರೋನ್ಗಳನ್ನು ಕೆಳಗಿಳಿಸುವುದು ಪಕ್ಷಿಗಳಿಗೆ ಸುಲಭವಲ್ಲ. ಹೀಗಾಗಿ, ಆರ್ವಿಸಿ ತರಬೇತುದಾರರು ಪಕ್ಷಿಗಳಿಗೆ ಕಣ್ಗಾವಲು ತರಬೇತಿ ಕೂಡ ನೀಡುತ್ತಿದ್ದಾರೆ. ಸರಹದ್ದು ಪ್ರದೇಶಗಳಲ್ಲಿ ಹಾಗೂ ವೈರಿಗಳ ಚಲನವಲನ ಹಾಗೂ ಕಾರ್ಯಾಚರಣೆಗಳ ಮೇಲೆ ನಿಗಾ ವಹಿಸಲು ಈ ಪಕ್ಷಿಗಳನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಇದಕ್ಕಾಗಿ, ಕಣ್ಗಾವಲು ಪ್ರದೇಶದಲ್ಲಿ ಪಕ್ಷಿಗಳು ಹಾರಾಡುವಾಗ ವಿಡಿಯೋಗಳನ್ನು ರೆಕಾರ್ಡ್ ಆಗುವಂತೆ ಅವುಗಳ ತಲೆಯ ಮೇಲೆ ಕ್ಯಾಮರಾ ಅಳವಡಿಸಲಾಗುತ್ತದೆ. ಅವು ಕಣ್ಗಾವಲು ಪ್ರದೇಶದಲ್ಲಿ ಹಾರಾಟ ನಡೆಸಿ ವಾಪಸಾದಾಗ ವಿಡಿಯೋದಲ್ಲಿ ಸೆರೆಯಾದ ದೃಶ್ಯಗಳನ್ನು ಸೇನಾ ಸಿಬ್ಬಂದಿ ಪರಿಶೀಲಿಸುತ್ತಾರೆ. ಹೀಗೆ, ಯಾವುದೇ ಅಪಾಯವಿಲ್ಲದಂತೆ ಕಣ್ಗಾವಲನ್ನು ನಡೆಸುವ ವಿಶಿಷ್ಟ ತಂತ್ರ ಇದಾಗಿದೆ. ಪ್ರಸ್ತುತ ಪಕ್ಷಿಗಳಿಗೆ ಅಳವಡಿಸುವ ಈ ಕ್ಯಾಮರಾಗಳು ನೇರ ಪ್ರಸಾರ ಒದಗಿಸಲು ಸಾಧ್ಯವಾಗುವಷ್ಟು ದೊಡ್ಡದಾಗಿಲ್ಲ. ಕ್ರಮೇಣ ಈ ಕ್ಯಾಮರಾಗಳ ಗಾತ್ರ ಹಾಗೂ ಸಾಮರ್ಥ್ಯ ಹೆಚ್ಚಿಸುವ ಮೂಲಕ ವಿಡಿಯೋದ ನೇರ ಪ್ರಸಾರ ಪಡೆದುಕೊಳ್ಳುವ ಆಲೋಚನೆಯೂ ಇದೆ.
‘ಈ ಪಕ್ಷಿಗಳು ಪ್ರದೇಶ ವ್ಯಾಪ್ತಿಗೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತವೆ. ಮೊದಲ ಬಾರಿಗೆ ಕಾರ್ಯಾಚರಣೆಗೆ ಬಿಟ್ಟಾಗ ಅವು ತಮ್ಮದೇ ಆದ ಪ್ರದೇಶದ ವಲಯವನ್ನು ಗುರುತಿಸಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಈ ಪ್ರದೇಶ ವ್ಯಾಪ್ತಿ ಹೆಚ್ಚುತ್ತ, ಪಕ್ಷಿಯು ದೊಡ್ಡ ಪ್ರದೇಶದ ಕಣ್ಗಾವಲು ಮಾಡಲು ಸಾಧ್ಯವಾಗುತ್ತದೆ’ ಎಂದು ತರಬೇತುದಾರರು ಹೇಳುತ್ತಾರೆ. ಪ್ರತಿ ಹಕ್ಕಿ ನಿರ್ವಹಣೆಗೆ ಒಬ್ಬ ಹ್ಯಾಂಡ್ಲರ್ ನಿಯೋಜಿಸಲಾಗಿದೆ. ತರಬೇತಿ ನೀಡಿದ ಮೇಲೆ, ಪಕ್ಷಿಗಳ ಕಾರ್ಯಕ್ಷಮತೆ ಸಂಪೂರ್ಣವಾಗಿ ತೃಪ್ತಿಕರ ಎಂದು ಕಂಡುಬಂದ ನಂತರವೇ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ. ಸಶಸ್ತ್ರ ಪಡೆಗಳಲ್ಲಿ ನಾಯಿಗಳ ತರಬೇತಿ ಮತ್ತು ನಿಯೋಜನೆಗೆ ಹೆಸರುವಾಸಿಯಾಗಿರುವ ಆರ್ವಿಸಿ, ಹದ್ದುಗಳ ಕಣ್ಗಾವಲು ವ್ಯವಸ್ಥೆಯಲ್ಲಿ ಯಶ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ.