ಅಂಕಣ

ಜೇನಿನ ಹೊಳೆ ಬಿದಿರಿನ ಮೆಳೆ..

ಕೃಷಿ ಕ್ಷೇತ್ರದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಆಧುನಿಕತೆ, ತಾಂತ್ರಿಕತೆ ಬೆಳೆದಂತೆ ಅನ್ನದಾತರೂ ಬದಲಾಗುತ್ತಿದ್ದಾರೆ. ನೂತನ ವಿಧಾನಗಳನ್ನು ಅಳವಡಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಸರ್ಕಾರಗಳೂ ರೈತರ ಎಲ್ಲ ಕಾರ್ಯಗಳಿಗೆ ನೆರವಾಗುತ್ತಿದೆ. ಈ ವಾರ ಜೇನು, ಸೇಬು ಕುರಿತ ವಿಶೇಷ ವರದಿಗಳು ನಿಮಗಾಗಿ...

| ಪಿ.ನಾಗರಾಜು ಮಹದೇಶ್ವರಬೆಟ್ಟ

ಮಲೆ ಮಹದೇಶ್ವರಬೆಟ್ಟದ ತಪ್ಪಲಿನ ಗ್ರಾಮಗಳಲ್ಲಿ ಜೇನಿನ ಹೊಳೆ ಹರಿಸುವ ಮತ್ತು ಬಿದಿರಿನ ಮೆಳೆ ಬೆಳೆಸುವ ಪ್ರಯತ್ನಕ್ಕೆ ಅರಣ್ಯ ಇಲಾಖೆ ಕೈಹಾಕಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ವತಿಯಿಂದ ಕೊಂಬುಡಿಕ್ಕಿಯಲ್ಲಿ ಜೇನು ಸಂಗ್ರಹಣಾ ಘಟಕ, ಜೇನು ಪೆಟ್ಟಿಗೆ ನಿರ್ಮಾಣ ಘಟಕ ಮಾಡಲು ಚಿಂತನೆ ನಡೆದಿದೆ. ಈ ಗ್ರಾಮದಲ್ಲಿ ಈಗಾಗಲೆ ಡಿಯರ್ ಹನಿ ಫೌಂಡೇಷನ್​ನಿಂದ ರೈತರಿಗೆ ಜೇನು ಸಾಕಣೆ ತರಬೇತಿ ನೀಡಲಾಗಿದ್ದು, ಹಲವರು ಜೇನುಕೃಷಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಕೊಂಬುಡಿಕ್ಕಿಯನ್ನು ಅರಣ್ಯ ಇಲಾಖೆ ಆಯ್ಕೆ ಮಾಡಿಕೊಂಡು ಸುತ್ತಮುತ್ತಲಿನ ಗ್ರಾಮಗಳ ರೈತರನ್ನು ಒಗ್ಗೂಡಿಸಿ ಜೇನು ಸಾಕಣೆ ಕಲಿಸಿ, ನಂತರ ಅದನ್ನು ಸಂಗ್ರಹಣೆ ಮಾಡಿ ಮಾರುಕಟ್ಟೆ ಒದಗಿಸಲಾಗುತ್ತದೆ. ಇದಲ್ಲದೆ, ರೈತರಿಗೆ ಬಿದಿರು ಬೆಳೆಯಲು ಉತ್ತೇಜನ ನೀಡಿ, ಇದಕ್ಕೂ ಮಾರುಕಟ್ಟೆ ಕಲ್ಪಿಸಿ ಆರ್ಥಿಕ ಮಟ್ಟ ಸುಧಾರಣೆಗೆ ಕ್ರಮವಹಿಸಲು ಈ ಪ್ರಯತ್ನ ಮಾಡಲಾಗುತ್ತಿದೆ.

ಕೈ ಹಿಡಿದ ಜೇನುಕೃಷಿ: ಡಿಯರ್ ಹನಿ ಫೌಂಡೇಷನ್ ಸಂಸ್ಥೆಯಿಂದ ಕೊಂಬುಡಿಕ್ಕಿ, ಅಣೆಹೊಲ, ಕೊಕ್ಕಬರೆ, ದೊಡ್ಡಾಣೆ, ತೋಕರೆ ಗ್ರಾಮದಲ್ಲಿನ ಗುಡ್ಡಗಾಡಿನ ಜನರಿಗೆ ಜೇನು ಸಾಕಣೆ ಮಾಹಿತಿ ನೀಡುತ್ತಿದೆ. ತರಬೇತಿ ಪಡೆದವರು ಜೇನುಕೃಷಿಯಲ್ಲಿ ತೊಡಗಿ ಯಶಸ್ವಿಯಾಗಿದ್ದಾರೆ. ಈ ಭಾಗದಲ್ಲಿ ದೊರೆಯುವ ಜೇನು ತುಪ್ಪವು ಅರಣ್ಯದಲ್ಲಿ ಬೆಳೆಯುವ ಹೂವು ಹಾಗೂ ಸಾವಯವ ಕೃಷಿ ಭೂಮಿಯಲ್ಲಿನ ನೈಜ ಪ್ರಕೃತಿಯ ಮಕರಂದದಿಂದಾಗಿ ಹೆಚ್ಚು ಸಿಹಿ ಹಾಗೂ ಔಷಧೀಯ ಗುಣ ಹೊಂದಿದೆ. ಹಾಗಾಗಿ, ಈ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಂಡು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಜೇನು ಸಂಗ್ರಹ ಘಟಕ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ.

ಬಿದಿರು ಬೇಸಾಯ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಬಿದಿರು ಸಮೃದ್ಧವಾಗಿ ಬೆಳೆದಿದ್ದು, ಇಲ್ಲಿನ ಮಣ್ಣು ಮತ್ತು ವಾತಾವರಣ ಬಿದಿರು ಬೆಳೆಯಲು ಸೂಕ್ತವಾಗಿದೆ. ಈ ಅನುಕೂಲ ಬಳಸಿಕೊಂಡು ರೈತರಿಂದ ಬಿದಿರು ಬೆಳೆಸುವುದಕ್ಕೆ ಅರಣ್ಯ ಇಲಾಖೆ ತೀರ್ವನಿಸಿದೆ. ಪೊನ್ನಾಚಿಯಲ್ಲಿ ಬಿದಿರಿನ ಘಟಕ ಸ್ಥಾಪನೆ ಮಾಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ಮಹದೇಶ್ವರಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜೇನು ಸಾಕಣೆ ಘಟಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಬಿದಿರು ಘಟಕ ಪೊನ್ನಾಚಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ. | ಏಡುಕೊಂಡಲು ಡಿಎಫ್​ಒ, ಮಲೆ ಮಹದೇಶ್ವರ ವನ್ಯಜೀವಿಧಾಮ, ಕೊಳ್ಳೇಗಾಲ

ಜೇನು ಕೃಷಿಯಲ್ಲಿ ಯಶಸ್ವಿ: ಜೇನು ಕೃಷಿಯಲ್ಲಿ ಕೊಂಬಡ್ಕಿ ಗ್ರಾಮದ ಮಹೇಶ್ ಯಶಸ್ವಿಯಾಗಿದ್ದಾರೆ. ಡಿಯರ್ ಹನಿ ಫೌಂಡೇಷನ್​ನಿಂದ ತರಬೇತಿ ಪಡೆದು ಕೇವಲ 5 ಪೆಟ್ಟಿಗೆಯಿಂದ ಪ್ರಾರಂಭ ಮಾಡಿ ಸದ್ಯ 50ಕ್ಕೂ ಹೆಚ್ಚು ಪಟ್ಟಿಗೆಯಲ್ಲಿ ಸಾಕಣೆ ಮಾಡುತ್ತಿದ್ದಾರೆ. ವಾರ್ಷಿಕವಾಗಿ 30,000ರಿಂದ 40,000 ರೂ. ಆದಾಯ ಗಳಿಸುತ್ತಿದ್ದಾರೆ. ಪೆಟ್ಟಿಗೆಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವ ಇರಾದೆ ಹೊಂದಿದ್ದಾರೆ.

ಕಳೆ ಸಸ್ಯಗಳಿಂದಲೇ ಪೆಟ್ಟಿಗೆ ತಯಾರು: ಲಂಟಾನಾ ಮತ್ತು ಸೀಮೆತಂಗಡಿ ಕಳೆ ಸಸ್ಯಗಳನ್ನು ಬಳಕೆ ಮಾಡಿಕೊಂಡು ಜೇನು ಪೆಟ್ಟಿಗೆ ತಯಾರಿಸುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ. ಒಂದು ಜೇನುಪೆಟ್ಟಿಗೆಗೆ 2500 ರೂ. ಖರ್ಚು ಮಾಡಬೇಕಿದ್ದು, ಕಳೆ ಸಸ್ಯಗಳಿಂದಲೇ ಪೆಟ್ಟಿಗೆ ತಯಾರಿಸಿದರೆ ಸ್ಥಳೀಯರಿಗೆ ಖರ್ಚು ಕಡಿಮೆಯಾಗಿ ಆದಾಯವೂ ಹೆಚ್ಚಾಗುತ್ತದೆ.