ಅಂಕಣ

ಬಂಗಾರವಾಗಲಿ ಮುಂಗಾರು...

| ಡಾ. ಕೆ.ಪಿ.ರಘುಪ್ರಸಾದ್

ಕೃಷಿ ವೈವಿಧ್ಯತೆಯ ನಾಡು ಕರ್ನಾಟಕ. ರಾಜ್ಯದ ಒಟ್ಟು 190.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.65 ಅಂದರೆ 123.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಪ್ರತಿಶತ 30 ನೀರಾವರಿ ಪ್ರದೇಶ ಹೊಂದಿರುವ ಕರ್ನಾಟಕವು ರಾಜಸ್ಥಾನದ ನಂತರ ಅತ್ಯಂತ ಹೆಚ್ಚು ಮಳೆಯಾಶ್ರಿತ ಪ್ರದೇಶ ಹೊಂದಿದ್ದರೂ ರಾಜ್ಯಕ್ಕೆ ತನ್ನದೇ ಆದ ನೈಸರ್ಗಿಕ ವರದಾನಗಳೂ ಇವೆ. ವಿಶೇಷವಾಗಿ ನೈಋತ್ಯ ಹಾಗೂ ಈಶಾನ್ಯ ಮಾರುತಗಳು ನಮ್ಮ ಕೃಷಿಗೆ ಆಸರೆಯಾಗಿದ್ದರೆ ನಿತ್ಯಹರಿದ್ವರ್ಣದ ಅರಣ್ಯ ಸಂಪತ್ತು, ಜೀವ ನದಿಗಳು, ವಿಶಾಲವಾದ ಕಡಲತೀರ, ಅಣೆಕಟ್ಟುಗಳು, ವೈವಿಧ್ಯಮಯ ಮಣ್ಣು ರಾಜ್ಯದ ನೈಸರ್ಗಿಕ ವೈವಿಧ್ಯತೆಗೆ ಹಿಡಿದ ಕನ್ನಡಿಯಾಗಿವೆ. ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಆರಂಭವಾಗಿದೆ. ಸಾಮನ್ಯವಾಗಿ ಜೂನ್ ತಿಂಗಳ ಮೊದಲ ವಾರ ಆಗಮಿಸುವ ಈ ಮಾರುತದ ಮೇಲೆಯೇ ರಾಜ್ಯದ ಶೇ.70 ಕೃಷಿ ಚಟುವಟಿಕೆಗಳು ಅವಲಂಬಿತವಾಗಿವೆ. ಹಾಗಾಗಿ ಕೃಷಿಕರು ಮುಂಗಾರಿಗೆ ಸೂಕ್ತವಾದ ಯೋಜಿತ ಚಟುವಟಿಕೆಗಳನ್ನು ಕೈಗೊಂಡಿದ್ದೇ ಆದಲ್ಲಿ ಉತ್ತಮ ಫಸಲು ಪಡೆಯಬಹುದು. ಆದಾಗ್ಯೂ ರಾಜ್ಯದಲ್ಲಿ ಪೂರ್ವ ಮುಂಗಾರು ಸೇರಿ ಈಗಾಗಲೆ ವಾಡಿಕೆಗಿಂತ ಶೇ.40 ಅಧಿಕ ಮಳೆ ಆಗಿದ್ದು, ದಕ್ಷಿಣ ಒಳನಾಡು (+ಶೇ.92), ಉತ್ತರ ಒಳನಾಡು (+ಶೇ.42), ಮಲೆನಾಡು (+ಶೇ.26) ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರೆ, ಕರಾವಳಿಯಲ್ಲಿ ಕೊಂಚ ಹಿನ್ನಡೆಯಾಗಿದ್ದು (-ಶೇ. 12) ಮಳೆ ಕೊರತೆಯಾಗಿದೆ. ಇದನ್ನೆಲ್ಲ ಗಮನಿಸಿದಲ್ಲಿ ಹವಾಮಾನ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ರೀತಿಯ ಹವಾಮಾನ ನಮಗೆ ಹೊಂದಿಕೊಳ್ಳುವುದು ಕಷ್ಟ ಸಾಧ್ಯವಾಗಿದ್ದು, ನಾವೇ ಬದಲಾವಣೆಗಳಿಗೆ ಹೊಂದಿಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ. ಹಾಗಾಗಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಪೂರ್ವ ಮುಂಗಾರು, ಮುಂಗಾರು ಆರಂಭವಾದ ನಂತರ ಕೆಲವೊಮ್ಮೆ ಅನಿರೀಕ್ಷಿತ ಒಣ ಹವೆ ಸಾಮಾನ್ಯವಾಗುತ್ತಿದ್ದು, ಇದನ್ನು ಗಮನದಲ್ಲಿರಿಸಿಕೊಂಡು ಕೃಷಿ ಚಟುವಟಿಕೆ ನಿರ್ಧರಿಸಿಕೊಳ್ಳಬೇಕಿದೆ. ಇದನ್ನೇ ನಾವು ಇತ್ತೀಚಿನ ದಿನಗಳಲ್ಲಿ ಹವಮಾನ ಚತುರ ಕೃಷಿ ಎಂದು ವ್ಯಾಖ್ಯಾನಿಸಲಾಗಿದೆ. ಇವುಗಳ ಮಧ್ಯದಲ್ಲೂ ನಮ್ಮ ರಾಜ್ಯದ ಕೃಷಿ ಕ್ಷೇತ್ರ ಹಲವು ಸವಾಲು ಎದುರಿಸುತ್ತಿದ್ದು, ಮಣ್ಣಿನಲ್ಲಿ ಕ್ಷೀಣಿಸುತ್ತಿರುವ ಸಾವಯವ ಇಂಗಾಲದ ಪ್ರಮಾಣ ಎಲ್ಲರ ಗಮನ ಸೆಳೆಯುತ್ತಿದೆ. ಯಾವುದೇ ಒಂದು ಆರೋಗ್ಯಯುತ ಮಣ್ಣಿನಲ್ಲಿ ಶೇ.0.5-3.0 ಸಾವಯವ ಇಂಗಾಲ ಹೊಂದಿರಬೇಕಾಗಿದ್ದು ಪ್ರಸ್ತುತ ಸಂಕೀರ್ಣ ಮತ್ತು ಅವೈಜ್ಞಾನಿಕ ಕೃಷಿ ಚಟುವಟಿಕೆಗಳಿಂದ ರಾಜ್ಯದ ಮಣ್ಣಿನಲ್ಲಿ ಇದರ ಪ್ರಮಾಣ ಶೇ. 0.5ಗಿಂತ ಕಡಿಮೆಯಾಗಿರುವುದರಿಂದ ಮಣ್ಣು ತನ್ನ ಸತ್ವ ಮತ್ತು ಜೀವಂತಿಕೆ ಕಳೆದುಕೊಳ್ಳುತ್ತಿದೆ. ಆದ್ದರಿಂದ ಪ್ರಸ್ತುತ ಮುಂಗಾರಿನ ಹೊಸ್ತಿಲಲ್ಲಿರುವ ಕೃಷಿಕರು ಆದಷ್ಟು ಮಣ್ಣಿಗೆ ಹಸಿರೆಲೆ ಗೊಬ್ಬರ ಹಾಗೂ ಸಾವಯವ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವುದು ಅತ್ಯವಶ್ಯಕ. ಈಗಾಗಲೆ ಉತ್ತಮ ಮಳೆಯಾಗಿರುವ, ಸ್ವಲ್ಪ ತಡವಾಗಿ ಬಿತ್ತನೆ ಮಾಡುವ ಕೃಷಿಕರು ಲಭ್ಯವಿರುವ ತೇವಾಂಶ ಬಳಸಿಕೊಂಡು ಹಸಿರೆಲೆ ಬೆಳೆಗಳಾದ ಡಯಂಚಾ, ಸೆಣಬು, ಹುರುಳಿ, ಮಕುನಾ ಅಥವಾ ಯಾವುದೇ ದ್ವಿದಳ ಧಾನ್ಯಗಳನ್ನು ಬೆಳೆದು ಮಣ್ಣಿಗೆ ಸೇರಿಸುವುದರ ಮೂಲಕ ಸಾವಯವ ಅಂಶವನ್ನು ಕಾಪಾಡಿಕೊಳ್ಳಬಹುದಾಗಿದೆ.

ಮುಂಗಾರಿಗೆ ಪಂಚ ಸೂತ್ರಗಳು

1. ಸೂಕ್ತ ಬೆಳೆ ಮತ್ತು ಬೆಳೆ ಪದ್ಧತಿಗಳ ಆಯ್ಕೆ: ಮುಂಗಾರು ಮಳೆ ಆಧರಿಸಿ ಅದಕ್ಕೆ ಸೂಕ್ತವಾದ ಬೆಳೆ ಹಾಗೂ ಬೆಳೆ ಪದ್ಧತಿಗಳ ಆಯ್ಕೆ ಮೂಲಕ ಉತ್ತಮ ಇಳುವರಿ ಪಡೆಯಬಹುದು. ಇದಕ್ಕೆ ಪೂರಕವಾಗಿ ಏಕ ಬೆಳೆ ಪದ್ಧತಿ ಮೇಲೆ ಅವಲಂಬಿತವಾಗದೆ 2 ಬೆಳೆ ಪದ್ಧತಿ (ಒಂದು ಬೆಳೆ ಕೋಯ್ಲಾದ ನಂತರ ಇನ್ನೊಂದು ಬೆಳೆ) ಅಥವಾ ಮಿಶ್ರ ಬೆಳೆ ಪದ್ಧತಿ (ರಾಗಿ + ತೊಗರಿ, ನೆಲಗಡಲೆ + ತೊಗರಿ, ಮುಸುಕಿನಜೋಳ + ತೊಗರಿ, ಆಲೂಗಡ್ಡೆ + ತೊಗರಿ, ಹತ್ತಿ + ಮೆಣಸಿನಕಾಯಿ + ಈರುಳ್ಳಿ) ಯನ್ನು ಅನುಸರಿಸುವುದರಿಂದ ಸುಸ್ಥಿರ ಆದಾಯ ಪಡೆಯಬಹುದು. ಜತೆಗೆ ಮಳೆ ಆಧರಿಸಿ ದೀರ್ಘಾವಧಿ, ಮಧ್ಯಮಾವಧಿ, ಅಲ್ಪಾವಧಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

2. ನೀರು ಮತ್ತು ಮಣ್ಣು ಸಂರಕ್ಷಣೆ: ಹೊಲದಲ್ಲಿ ಬಿದ್ದ ಪ್ರತಿ ಹನಿ ನೀರನ್ನು ಹಿಡಿದಿಟ್ಟುಕೊಳ್ಳುವ ದೋಣಿ ಸಾಲು, ಸಾಲು ಬೋದು, ಚೌಕಮಡಿ, ಮುಂತಾದವುಗಳ ಮೂಲಕ ಮಣ್ಣಿನ ತೇವಾಂಶ ಕಾಪಾಡಿಕೊಂಡು ಹೆಚ್ಚುವರಿ ನೀರನ್ನು ಕೃಷಿ ಹೊಂಡ ಅಥವಾ ಇತರ ನೀರು ಸಂಗ್ರಹಣಾ ವ್ಯವಸ್ಥೆಯಲ್ಲಿ ಶೇಖರಿಸಿ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಬೆಳೆ ಸಂರಕ್ಷಣೆಗೆ ಮುಂದಾಗಬೇಕಿದೆ.

3. ಪೋಷಕಾಂಶಗಳ ನಿರ್ವಹಣೆ: ಕೇವಲ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೋಟ್ಯಾಷ್​ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸದೆ ಯಾವುದೇ ಬೆಳೆಗೆ ಬೇಕಾದ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಸಹ ಒದಗಿಸಿದ್ದೇ ಆದಲ್ಲಿ ಅಧಿಕ ಹಾಗೂ ಗುಣಮಟ್ಟದ ಇಳುವರಿ ಪಡೆಯಬಹುದು. ಆದಗ್ಯೂ ಅವಶ್ಯಕತೆಗನುಗುಣವಾಗಿ ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳ ಪೂರೈಕೆ ಸೂಕ್ತ. ಇದಲ್ಲದೆ, ಮಣ್ಣಿನ ಚಲನಶೀಲತೆ ಹೆಚ್ಚಿಸಲು ಜೈವಿಕ ಗೊಬ್ಬರ ಬಳಸುವುದು ಅಗತ್ಯ.

4. ಕಳೆ ನಿರ್ವಹಣೆ: ಕೃಷಿ ಬೆಳೆಗಳನ್ನು ಕಾಡುವ ಕಳೆಗಳ ನಿರ್ವಹಣೆ ಬಗ್ಗೆ ವಿಶೇಷ ಒತ್ತು ನೀಡ ಬೇಕಾಗಿದ್ದು, ಅಗತ್ಯತೆ ಅನುಸಾರ ಉದಯಪೂರ್ವ ಕಳೆನಾಶಕಗಳ ಬಳಕೆ, ನಂತರ ಸರಳ ಕಳೆ ನಿರ್ವಹಣಾ ಸಾಧನವಾದ ಸೈಕಲ್ ವೀಡರ್ಸ್ ಬಳಕೆ, ನೈಸರ್ಗಿಕ ಹೊದಿಕೆ ಬಳಕೆಗೆ ಒತ್ತು ನೀಡಬೇಕು.

5. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ: ಸಕಾಲಿಕ ಕೃಷಿ ಚಟುವಟಿಕೆ ಕೈಗೊಳ್ಳುವ ನಿಟ್ಟಿನಲ್ಲಿ ಕೃಷಿ ಕಾರ್ವಿುಕರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಬಿತ್ತನೆಯಿಂದ ಕಟಾವಿನವರೆವಿಗೂ ಎಲ್ಲ ಕೃಷಿ ಚಟುವಟಿಕೆಗಳಿಗೂ ಈಗಾಗಲೆ ಲಭ್ಯವಿರುವ ಯಂತ್ರೋಪಕರಣಗಳನ್ನು ತಾವೇ ಹೊಂದುವ ಮೂಲಕ ಅಥವಾ ಬಾಡಿಗೆ ಆಧಾರಿತ ಸೇವೆಗಳ ಮೂಲಕ ಪಡೆದು ಕೃಷಿಯಲ್ಲಿ ಬಳಸಿ ಕಾರ್ಯಕ್ಷಮತೆ ಹೆಚ್ಚಿಸಿ, ಅನಗತ್ಯ ವೆಚ್ಚಗಳನ್ನು ತಪ್ಪಿಸಬಹುದಾಗಿದೆ. ಒಟ್ಟಾರೆ, ಈ ಎಲ್ಲ ಸೂತ್ರಗಳನ್ನು ಕೃಷಿಕರು ಅನುಸರಿಸುವ ಮೂಲಕ ಉತ್ಪಾದನೆ, ಉತ್ಪಾದಕತೆ ಹೆಚ್ಚಿಸುವುದರ ಜತೆಗೆ ಆದಾಯವನ್ನೂ ದ್ವಿಗುಣಗೊಳಿಸಬೇಕಾಗಿದೆ. ಇದೇ ಕೇಂದ್ರ ಸರ್ಕಾರದ ಆಶಯವೂ ಆಗಿದೆ.

(ಲೇಖಕರು- ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ಕೃಷಿ ವಿವಿ, ಬೆಂಗಳೂರು)