| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ಪರದಾಡಬೇಕಾದ ಸ್ಥಿತಿಯ ಜತೆಗೆ ಕೇಂದ್ರದ ಸಹಾಯಾನುದಾನ ಕಡಿಮೆಯಾಗಿರುವುದು ಆರ್ಥಿಕತೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮವನ್ನುಂಟು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ತೆರಿಗೆ ಸಂಗ್ರಹದ ಬೆಳವಣಿಗೆ ದರ ಐದು ತಿಂಗಳಿಗೆ ಶೇ.28.2 ಬೆಳವಣಿಗೆ ಆಗಿದೆ. ಹಾಗೆಂದ ಮಾತ್ರಕ್ಕೆ ಸಂತೋಷದಿಂದ ಕುಣಿದಾಡುವ ಸ್ಥಿತಿ ಏನೂ ಇಲ್ಲ. ಏಕೆಂದರೆೆ ಅದೇ ಕಾಲಕ್ಕೆ ಸಾಲವನ್ನೊಳಗೊಂಡ ಒಟ್ಟು ವೆಚ್ಚ ಶೇ.15.3 ಜಾಸ್ತಿಯಾಗಿದೆ. ಸಾಲ, ಸಾಲದ ಮೇಲಿನ ಬಡ್ಡಿ ಮರುಪಾವತಿ ಹೆಚ್ಚಾಗುತ್ತಿದೆ. ವೇತನ, ಸಾಲ ಮರುಪಾವತಿ ಯಂತಹ ರಾಜಸ್ವ ವೆಚ್ಚಗಳ ಪ್ರಮಾಣ ದಿನೇದಿನೆ ಮಿತಿ ಮೀರುತ್ತಿದೆ. ಮುಂದಿನ ದಿನಗಳಲ್ಲಿ ವೇತನ ಪರಿಷ್ಕರಣೆ ಸೇರಿ ಅನೇಕ ಹೊರೆಗಳು ಸರ್ಕಾರದ ಮೇಲೆ ಬೀಳಲಿವೆ.
ತೆರಿಗೆ ಹೆಚ್ಚಳ: ಕಳೆದ ವರ್ಷಾರಂಭದ ಐದು ತಿಂಗಳಿಗೆ ಹೋಲಿಕೆ ಮಾಡಿದರೆ, ತೆರಿಗೆ ಸಂಗ್ರಹಣೆಯ ಬೆಳವಣಿಗೆ ಶೇ.28.2 ಜಾಸ್ತಿಯಾಗಿದೆ. 1,26,883 ಕೋಟಿ ರೂ.ಗಳ ತೆರಿಗೆ ಸಂಗ್ರಹಣೆಯ ಗುರಿಗೆ ಆಗಸ್ಟ್ ಅಂತ್ಯಕ್ಕೆ 55,652 ಕೋಟಿ ರೂ. ಸಂಗ್ರಹಿಸಲಾಗಿದೆ. ಒಟ್ಟಾರೆ ಗುರಿಯ ಶೇ.43.9 ತೆರಿಗೆ ವಸೂಲಿಯಾಗಿದೆ.
ಕಾರಣವೇನು?: ತೆರಿಗೆ ಸಂಗ್ರಹಣೆ ಹೆಚ್ಚಾಗಲು ಜಿಎಸ್ಟಿ ದರಗಳಲ್ಲಿ ಆಗಿರುವ ಪರಿಷ್ಕರಣೆ ಪ್ರಮುಖ ಕಾರಣವಾಗಿದೆ. ಸರ್ಕಾರ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಿಲ್ಲ, ಜಿಎಸ್ಟಿ ದರಗಳು ಹೆಚ್ಚಾಗಿದ್ದು, ಸಹಜವಾಗಿಯೇ ತೆರಿಗೆ ಸಂಗ್ರಹಣೆ ಹೆಚ್ಚಾಗಿದೆ. ಸೋರಿಕೆ ತಡೆಗಟ್ಟುವ ಪ್ರಯತ್ನಗಳು ಪರಿಣಾಮಕಾರಿಯಾಗಿ ನಡೆದಿಲ್ಲವೆಂದು ಸರ್ಕಾರದ ಮೂಲಗಳು ಹೇಳುತ್ತವೆ. ಕೇಂದ್ರದ ಸಹಾಯಾನುದಾನ ಕಡಿಮೆಯಾಗಿದೆ. ಜಿಎಸ್ಟಿ ಪರಿಹಾರ ನಿಲ್ಲದೆ ಇದ್ದರೆ ಈ ವರ್ಷ ಬಜೆಟ್ ಗಾತ್ರದ ಮೇಲಿನ ಅಂದಾಜಿನಂತೆ ಸುಮಾರು 35 ಸಾವಿರ ಕೋಟಿ ರೂ. ರಾಜ್ಯಕ್ಕೆ ಬರಬೇಕಾಗಿತ್ತು. ಕಳೆದ ವರ್ಷವೇ 28,246 ಕೋಟಿ ರೂ. ಬಂದಿತ್ತು. ಈ ವರ್ಷ ನಿಗದಿ ಮಾಡಿರುವ ಮೊತ್ತವೇ 22,281 ಕೋಟಿ ರೂ.ಗಳು. ಕಳೆದ ವರ್ಷಕ್ಕಿಂತ 6 ಸಾವಿರ ಕೋಟಿ ರೂ. ಕಡಿಮೆ ಮಾಡಲಾಗಿದೆ. ಬಜೆಟ್ ಗಾತ್ರದ ಲೆಕ್ಕ ತೆಗೆದುಕೊಂಡರೆ ಕಳೆದ ವರ್ಷಕ್ಕಿಂತ 13 ಸಾವಿರ ಕೋಟಿ ರೂ. ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ರಾಜ್ಯದಿಂದ ಜಿಎಸ್ಟಿ ಹಾಗೂ ಎಲ್ಲ ರೀತಿಯ ತೆರಿಗೆಗಳು ಸೇರಿ ಸುಮಾರು 3 ಲಕ್ಷ ಕೋಟಿ ರೂ.ಗಳು ಕೇಂದ್ರಕ್ಕೆ ಹೋಗುತ್ತದೆ. ಅದರಲ್ಲಿ ಶೇ.43 ರಾಜ್ಯಕ್ಕೆ ವಾಪಸ್ ಬರಬೇಕು. ಆದರೆ ಅಷ್ಟು ಪ್ರಮಾಣದಲ್ಲಿ ವಾಪಸ್ ಬರುತ್ತಿಲ್ಲ. ರಾಜ್ಯ ಸರ್ಕಾರಕ್ಕೆ 2019ರಲ್ಲಿ ಕೇಂದ್ರದಿಂದ ತೆರಿಗೆ ಪಾಲು ಹಂಚಿಕೆ 37 ಸಾವಿರ ಕೋಟಿ ರೂ.ಗಳಿತ್ತು, ಆದರೆ ಆ ಪ್ರಮಾಣ ಈ ವರ್ಷಕ್ಕೆ 29 ಸಾವಿರ ಕೋಟಿ ರೂ.ಗಳಿಗೆ ಇಳಿದಿದೆ.
ಜಿಎಸ್ಟಿ ಪರಿಹಾರ: ಈ ವರ್ಷದ ಜೂನ್ಗೆ ಜಿಎಸ್ಟಿ ಪರಿಹಾರ ನಿಂತು ಹೋಗಿದೆ. ಹಣಕಾಸು ವರ್ಷದಲ್ಲಿ ಬಂದಿರುವ ಪರಿಹಾರದ ಮೊತ್ತ ಕೇವಲ 2000 ಕೋಟಿ ರೂ. ಮಾತ್ರ. 2021ರಲ್ಲಿ ಸಾಲ ಕೊಟ್ಟರೆ ಹೊರತು ಜಿಎಸ್ಟಿ ಪರಿಹಾರ ನೀಡಲಿಲ್ಲ.
ಸೆಸ್ನಲ್ಲಿ ಪಾಲಿಲ್ಲ: ಕೇಂದ್ರ 2026ರ ತನಕ ಜಿಎಸ್ಟಿ ಸೆಸ್ ಹಾಕುತ್ತದೆ. ಆದರೆ ರಾಜ್ಯಗಳಿಗೆ ಆ ಮೊತ್ತದಲ್ಲಿ ಪಾಲು ಕೊಡುತ್ತಿಲ್ಲ. ಪರಿಣಾಮ ರಾಜ್ಯದ ಮೇಲಾಗುತ್ತಿದೆ.
ಉಚಿತ ಕೊಡುಗೆಗಳ ಮರು ಚಿಂತನೆ: ಕೇಂದ್ರ ಸರ್ಕಾರ ಉಚಿತ ಕೊಡುಗೆಗಳ ಮರುಚಿಂತನೆ ಬಗ್ಗೆ ಮಾತನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಉಚಿತ ಕೊಡುಗೆಗಳು ತೆರಿಗೆದಾರರಿಗೆ ಹೊರೆ ಎಂಬ ಮಾತನ್ನು ಇತ್ತೀಚಿಗೆ ಹೇಳಿದ್ದರು. ರಾಜ್ಯದಲ್ಲಿಯೂ ಅದೇ ನಿಟ್ಟಿನಲ್ಲಿ ಸಾಗಬೇಕೆಂಬ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿದ್ದರೂ ಮುಂದಿನ ವರ್ಷ ರಾಜ್ಯ ವಿಧಾನಸಭೆಯ ಚುನಾವಣೆ ಇರುವುದರಿಂದ ಹೆಚ್ಚಿನ ಒತ್ತು ನೀಡುತ್ತಿಲ್ಲ. ವಿವಿಧ ಸಬ್ಸಿಡಿಗಳಿಗೆ ವರ್ಷಕ್ಕೆ ಸುಮಾರು 23 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಪಡಿತರ, ವಸತಿ, ವಿದ್ಯುತ್, ನೀರು, ಕೃಷಿ ಹೀಗೆ ವಿವಿಧ ವಲಯಗಳಿಗೆ ಸಬ್ಸಿಡಿಗಳನ್ನು ನೀಡ ಲಾಗುತ್ತದೆ.