ಅಂಕಣ

ವಿಠ್ಠಲ ಬಡವರ ಭಗವಂತ ಆತ್ಮಸಖನೂ ಹೌದು!

ಮಕ್ಕಳಿಗೆ ಪ್ರೀತಿ, ಮಮತೆಯನ್ನು ನೀಡಿ ಕಾರುಣ್ಯದಿಂದ ಬೆಳೆಸುವವಳು ತಾಯಿ. ವಾತ್ಸಲ್ಯದಿಂದ ಪೋಷಿಸುವ ಶಕ್ತಿ ಇರುವುದು ಅಮ್ಮನಿಗೆ. ಹಾಗಾಗಿಯೇ, ಭಕ್ತರು ವಿಠ್ಠಲನನ್ನು ‘ಮಾವುಲಿ’-ತಾಯಿ ಎಂದು ಸಂಬೋಧಿಸುತ್ತಾರೆ. ಆ ವಿಠ್ಠಲ ತನ್ನ ಮಕ್ಕಳ ಕೈ ಬಿಡದೆ, ಹೆಜ್ಜೆಹೆಜ್ಜೆಗೂ ರಕ್ಷಿಸಿ ಭಕ್ತಿಲೋಕದಲ್ಲಿ ಬದುಕು ಪಾವನವಾಗುವಂತೆ ಮಾಡುತ್ತಾನೆ.

ಭಕ್ತಿಯ ಮತ್ತೊಂದು ಕುಂಭಮೇಳ ಆರಂಭವಾಗಿದೆ. ಪ್ರಯಾಗರಾಜ್​ನ ಕುಂಭಮೇಳ ಮೊನ್ನೆ ತಾನೇ ಮುಗಿಯಿತು, ಈಗ ಯಾವ ಕುಂಭಮೇಳ ಎಂಬ ಅಚ್ಚರಿಯೆ? ಇದು ಪ್ರತಿವರ್ಷ ನಡೆಯುವ ಕುಂಭಮೇಳ. ಮುಂಗಾರು ಪ್ರವೇಶಿಸಿ, ಮಳೆರಾಯನ ಆಗಮನವಾಗುತ್ತಿದ್ದಂತೆ ಲಕ್ಷಾಂತರ ಜನರ ಮನಸ್ಸು ಈ ಕುಂಭಮೇಳಕ್ಕಾಗಿ ತುಡಿಯಲು ಆರಂಭಿಸುತ್ತದೆ.

ಕೃಷಿ ಕೆಲಸದ ದಿನಗೂಲಿಯಲ್ಲಿ ಬರುವ ಸಣ್ಣ ಮೊತ್ತದಲ್ಲೇ ದಿನವೂ ಹತ್ತೋ-ಇಪ್ಪತ್ತೋ ರೂಪಾಯಿ ಸಾಸಿವೆ ಡಬ್ಬಿಗೆ ಹಾಕುತ್ತ, ಮಳೆಗಾಲ ಬರುತ್ತಿದ್ದಂತೆ ಅದನ್ನೆಲ್ಲ ಜೋಡಿಸಿ ‘ಈ ಬಾರಿ ವಾರಿ (ಯಾತ್ರೆ)ಗೆ ಹೋಗುವುದೇ’ ಅಂತ ನಿಶ್ಚಯಿಸುವ ಮಹಿಳೆ, ಕೃಷಿ ಕೆಲಸಗಳನ್ನೆಲ್ಲ ಲಗುಬಗೆಯಲ್ಲಿ ಮುಗಿಸಿ, ಪಲ್ಲಕ್ಕಿ (ದಿಂಡಿ)ಜತೆ ಸಾಗುತ್ತ ಅಭಂಗ (ಭಜನೆ) ಹಾಡಬೇಕು ಎಂಬ ಸಂತೋಷದಲ್ಲೇ ವರ್ಷದ ದಣಿವನ್ನು ಮರೆಯುವ ರೈತ, ವ್ಯಾಪಾರದ ಜಂಜಾಟವನ್ನು ಕೆಲದಿನದ ಮಟ್ಟಿಗೆ ಕುಟುಂಬ ಸದಸ್ಯರಿಗೆ ವಹಿಸಿ ವಿಠ್ಠಲ ನಾಮಸ್ಮರಣೆಗೆ ಹಾತೊರೆಯುವ ಉದ್ಯಮಿ, ಇವರ ಸೇವೆ ಮಾಡಿ ಸಾರ್ಥಕತೆ ಅನುಭವಿಸಬೇಕು ಎಂಬ ಹಂಬಲದಿಂದ ಓಡೋಡಿ ಬರುವ ಯುವ ಮನಸ್ಸುಗಳು... ಹೀಗೆ ಈ ಕುಂಭಮೇಳದ ಹೆಸರೇ ವಾರಿ, ವಿಠ್ಠಲನ ವಾರಿ ಎಂದೇ ಪ್ರಸಿದ್ಧ.

ಧೋ ಎಂದು ಸುರಿಯುವ ಆಷಾಢದ ಮಳೆ, ಜೋರಾಗಿ ಬೀಸುವ ಗಾಳಿ ಇದ್ಯಾವುದೂ ಅಡ್ಡಿ ಆಗುವುದಿಲ್ಲ, ಬದಲಾಗಿ ಇದನ್ನೆಲ್ಲ ಆನಂದಿಸುತ್ತ ಹೆಜ್ಜೆ ಹಾಕುತ್ತಿದ್ದರೆ ಅವರಿಗೆ ವಿಠ್ಠಲನೇ ಲೋಕ, ವಿಠ್ಠಲನ ನಾಮಸ್ಮರಣೆಯೇ ಪುಳಕ, ವಿಠ್ಠಲನ ಭಜನೆಯೇ ಧನ್ಯತೆಯ ಭಾವ. ಹೌದು, ಪಂಢರಪುರ (ಮಹಾರಾಷ್ಟ್ರದ ಸೋಲಾಪುರದಿಂದ 75 ಕಿ.ಮೀ. ಅಂತರದಲ್ಲಿದೆ) ಭೂಲೋಕದ ವೈಕುಂಠ ಎಂದೇ ಪ್ರಸಿದ್ಧ. ಋಷಿಯೊಬ್ಬರ ಜೀವನದಿಂದ ಪ್ರೇರಿತನಾಗಿ ಪುಂಡಲೀಕ ಎಂಬ ಯುವಕ ತನ್ನ ತಂದೆ-ತಾಯಿಯ ಸೇವೆಯನ್ನು ಅತೀವ ಶ್ರದ್ಧೆಯಿಂದ ಮಾಡುತ್ತಿದ್ದ. ಆತನ ಗಾಢಭಕ್ತಿಯನ್ನು ಮೆಚ್ಚಿ ಶ್ರೀಕೃಷ್ಣ ಪರಮಾತ್ಮನೇ ಪುಂಡಲೀಕನ ಭೇಟಿಗೆ ಬಂದ. ತನ್ನ ಮನೆಗೇ ಭಗವಂತನ ಆಗಮನವಾಗಿದ್ದರಿಂದ ಆನಂದವಾದರೂ ಮಾತಾ-ಪಿತೃವಿನ ಸೇವೆಯಲ್ಲಿ ನಿರತನಾಗಿದ್ದ ಪುಂಡಲೀಕನ ಮನಸ್ಸು ಒಂದು ಕ್ಷಣವೂ ವಿಚಲಿತವಾಗಲಿಲ್ಲ.

‘ಅಪ್ಪ-ಅಮ್ಮನ ಸೇವೆ ಪೂರ್ಣಗೊಳಿಸಿ ನಿನ್ನ ಭೇಟಿಗೆ ಬರುತ್ತೇನೆ’ ಎಂದು ಹೇಳಿ ಭಗವಂತನಿಗೆ ನಿಲ್ಲಲು ಇಟ್ಟಿಗೆ ನೀಡಿದ. ಶ್ರೀಕೃಷ್ಣ ಇಟ್ಟಿಗೆಯ ಮೇಲೆ ನಿಂತು ಪುಂಡಲೀಕನಿಗಾಗಿ ಸ್ವಲ್ಪ ಹೊತ್ತು ಪ್ರತೀಕ್ಷೆ ಮಾಡಿದ ಮತ್ತು ಆತನ ಮಾತಾ-ಪಿತೃ ಭಕ್ತಿಯನ್ನು ಕಂಡು ಹರ್ಷಿತನಾಗಿ, ‘ಏನು ವರ ಬೇಕು? ಕೇಳು’ ಎಂದಾಗ, ‘ಸಾಕ್ಷಾತ್ ಪರಮಾತ್ಮನಾದ ನೀನು ನನಗಾಗಿ ಪ್ರತೀಕ್ಷೆ ಮಾಡಿ, ದರ್ಶನಭಾಗ್ಯ ಕಲ್ಪಿಸಿದೆಯಲ್ಲ, ಅಷ್ಟೇ ಸಾಕು’ ಎಂದು ವಿನಯದಿಂದ ನುಡಿದ ಪುಂಡಲೀಕ. ಏನಾದರೂ ಕೇಳಲು ಶ್ರೀಕೃಷ್ಣನು ಮತ್ತೊಂದು ಅವಕಾಶ ನೀಡಿದ. ಆಗ ಪುಂಡಲೀಕನು, ‘ನೀನು ಭೂಲೋಕದಲ್ಲಿಯೇ ನೆಲೆಸಿ, ಭಕ್ತರನ್ನು ಉದ್ಧರಿಸು. ನಿನ್ನ ಕೃಪಾದೃಷ್ಟಿ ಸದಾ ಅವರ ಮೇಲಿರಲಿ.

ಕರುಣೆಯಿಂದ ಅವರನ್ನು ಉದ್ಧರಿಸು’ ಎಂದು ಬಿನ್ನವಿಸಿಕೊಂಡ. ಆಗಿನಿಂದಲೇ ಶ್ರೀಕೃಷ್ಣ ವಿಠ್ಠಲನ ರೂಪದಲ್ಲಿ ಪಂಢರಪುರದಲ್ಲಿ ನೆಲೆನಿಂತು, ಮನುಕುಲವನ್ನು ಪೊರೆಯುತ್ತಿದ್ದಾನೆ. ಇಟ್ಟಿಗೆಗೆ ಮರಾಠಿಯಲ್ಲಿ ವಿಟ ಎನ್ನುತ್ತಾರೆ. ‘ವಿಟೇವರಿ ಉಭಾ ದೇವ’ (ಇಟ್ಟಿಗೆಯ ಮೇಲೆ ನಿಂತ ಪರಮಾತ್ಮ) ವಿಠೋಬಾ. ಪಂಢರಪುರದಲ್ಲಿರುವ ವಿಠ್ಠಲನ ಮೂರ್ತಿ ಸ್ವಯಂಭೂವಾಗಿದೆ.

ಇದೆಲ್ಲ ನಡೆದು ಶತ-ಶತಮಾನಗಳೇ ಉರುಳಿವೆ. ಆದರೆ, ಆ ವಿಠ್ಠಲ ಅದೇ ಇಟ್ಟಿಗೆಯ ಮೇಲೆ ನಿಂತು, ಸೊಂಟದ ಮೇಲೆ ಕೈ ಇಟ್ಟುಕೊಂಡು ಭಕ್ತರನ್ನು ಕರುಣೆಯಿಂದ ಪೊರೆಯುತ್ತಿದ್ದಾನೆ. ಹಾಗಾಗಿಯೇ ವಿಠ್ಠಲ ಎಂಬುದು ಬರೀ ದೇವರ ಹೆಸರಾಗಿ ಉಳಿದಿಲ್ಲ. ವಿಠ್ಠಲ ಎಂದರೆ ಅದೊಂದು ಪರಂಪರೆ, ಭಕ್ತಿಯ ಚೈತನ್ಯಪ್ರವಾಹ, ಅಧ್ಯಾತ್ಮದ ದಿವ್ಯ ಸಂಸ್ಕೃತಿ, ಮಹಾರಾಷ್ಟ್ರದ ಅಸ್ಮಿತೆಯಾಗಿ ಬೆಳೆದುಬಂದಿದೆ. ಈ ವಿಠ್ಠಲ ಭಕ್ತಿ ಎಂಬುದು ಜಗದ ಕಣ್ಣಿಗೆ ವಿಸ್ಮಯವಾಗಿ, ಭಾವಲೋಕದ ಮಹಾಸಂಭ್ರಮವಾಗಿ ಕಂಡರೆ ಅಚ್ಚರಿಯೇನಿಲ್ಲ. ಈ ವಿಠ್ಠಲನನ್ನು ನೋಡಲು ಜನರು ಸಂತರ ಪಾದುಕೆಗಳನ್ನು ಹೊಂದಿರುವ ಪಲ್ಲಕ್ಕಿ ಸಮೇತ ಕಾಲ್ನಡಿಗೆಯಲ್ಲಿ ಪಂಢರಪುರಕ್ಕೆ ಬರುವ ಯಾತ್ರೆಯೇ ವಾರಿ.

ಇದರಲ್ಲಿ ಪಾಲ್ಗೊಳ್ಳುವವರು ವಾರಕರಿಗಳು. ಸಂತ ಜ್ಞಾನೇಶ್ವರ ಮಹಾರಾಜರ ತಂದೆ ವಿಠೋಬಾಪಂತ್ ಕಾಲದಿಂದಲೂ (11ನೇ ಶತಮಾನ) ವಾರಿ ಪರಂಪರೆ ಚಾಲ್ತಿಯಲ್ಲಿದೆ. ಆದರೆ, ಸಂತ ಶಿಕ್ಷಣ ಹಾಗೂ ಭಕ್ತಿ ಆಂದೋಲನದ ಮೂಲಕ ಲೋಕಕಲ್ಯಾಣದ ಆಶಯದಿಂದ ಸಂತ ಜ್ಞಾನೇಶ್ವರರು ವಾರಿಯನ್ನು ಮಾನವೀಯತೆಯ ಯಾತ್ರೆಯನ್ನಾಗಿಸಿದರು. ಮುಂದೆ ಸಂತ ತುಕಾರಾಮ ಮಹಾರಾಜ್ ಸೇರಿದಂತೆ ಹಲವು ಸಂತರು ಈ ಪರಂಪರೆ ಮುಂದುವರಿಸಿಕೊಂಡು ಬಂದಿದ್ದೂ 10 ಶತಮಾನಗಳ ಬಳಿಕವೂ ಮೂಲ ಅಂತಃಸತ್ವವನ್ನು ಕಳೆದುಕೊಳ್ಳದೆ ವಾರಿ ಇನ್ನಷ್ಟು ದೇದಿಪ್ಯಮಾನವಾಗಿ ಸಮಾಜದ ಕತ್ತಲೆಯನ್ನು ಕಳೆಯುತ್ತಿದೆ. ನಾಮದೇವ ಮಹಾರಾಜ್, ಚೋಖಾಮೇಳಾ, ಜನಾಬಾಯಿ, ಸಖುಬಾಯಿ, ಕಾನ್ಹೊಪಾತ್ರಾ, ಗೋರಾಕುಂಭಾರ, ದಾಮಾಜಿ, ಸಾವತಾಮಾಳಿ, ಭಾನುದಾಸ್ ಹೀಗೆ ಈ ಎಲ್ಲ ಸಂತರು ವಾರಿ ಪರಂಪರೆಯ ಶಕ್ತಿಯನ್ನು ಹೆಚ್ಚಿಸಿದ್ದಾರೆ.

ಈ ವರ್ಷದ ಆಷಾಢ ವಾರಿ ಸಂತ ತುಕಾರಾಮ ಮಹಾರಾಜ್ ಅವರ ಸಮಾಧಿಸ್ಥಳ ದೇಹುವಿನಿಂದ ನಿನ್ನೆಯಿಂದ (ಜೂನ್ 18) ಆರಂಭಗೊಂಡಿದ್ದರೆ, ಸಂತ ಜ್ಞಾನೇಶ್ವರ ಮಹಾರಾಜರ ಸಮಾಧಿಸ್ಥಳ ಆಳಂದಿಯಿಂದ ಇಂದು (ಜೂನ್ 19) ಆರಂಭಗೊಳ್ಳಲಿದೆ. ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ವಿಠ್ಠಲನ ನಾಮಸ್ಮರಣೆಯೊಂದಿಗೆ ಸಾಗುತ್ತ ಆಷಾಢ ಏಕಾದಶಿಯ ದಿನ ಅಥವಾ ಮುನ್ನಾ ದಿನ ಪಂಢರಪುರಕ್ಕೆ ತಲುಪುತ್ತಾರೆ. ಸರಾಸರಿ 250 ಕಿ.ಮೀ.ಗಳ ಈ ಪ್ರವಾಸ ಎಂದರೆ ಭಕ್ತಿಯ ಚೈತನ್ಯದ ದರ್ಶನ. ಪುಣೆ, ಸಾತಾರಾ, ಸೋಲಾಪುರ ಈ ಮೂರು ಜಿಲ್ಲೆಗಳ ಮುಖೇನ ಯಾತ್ರೆ ಸಾಗುತ್ತದೆ. ಪ್ರತಿ ಹಳ್ಳಿಗೂ ಪಲ್ಲಕ್ಕಿಗಳು ಆಗಮಿಸಿದಾಗ ವಾರಕರಿಗಳನ್ನು ದೇವರ ಪ್ರತಿನಿಧಿಯೆಂದೇ ಗೌರವಿಸಿ, ಸ್ವಾಗತಿಸಲಾಗುತ್ತದೆ. ಅವರಿಗೆ ತಿಂಡಿ, ಊಟದ ವ್ಯವಸ್ಥೆ ಆಗುತ್ತದೆ. ಗೋಲ್ ರಿಂಗಣ್, ಉಭೆ ರಿಂಗಣ್ ಅಂದರೆ ಸಂತರ ಪಲ್ಲಕ್ಕಿಗಳಿಗೆ ವೃತಾಕಾರದಲ್ಲಿ ಹಾಕುವ ಪ್ರದಕ್ಷಿಣೆ ಮತ್ತು ನಿಂತಲ್ಲೇ ಹಾಕುವ ಪ್ರದಕ್ಷಿಣೆಯ ದೃಶ್ಯಗಳು ನಯನಮನೋಹರ.

ಮಳೆ, ಚಳಿ ಏನೇ ಇರಲಿ ವಾರಿ ನಿಲ್ಲುವುದಿಲ್ಲ. ಧಾರಾಕಾರ ಮಳೆಯಲ್ಲೂ ವಾರಕರಿಗಳು ವಿಠ್ಠಲನ ನಾಮಸ್ಮರಣೆಯಲ್ಲಿ ದಾರಿ ಸವೆಸುತ್ತಾರೆ. ವರ್ಷದಲ್ಲಿ ನಾಲ್ಕು ಬಾರಿ ವಾರಿ ನಡೆದರೂ ಆಷಾಢ ಹಾಗೂ ಕಾರ್ತಿಕ ಮಾಸದ ವಾರಿಗಳಿಗೆ ವಿಶೇಷ ಮಹತ್ವವಿದೆ. ಮಹಾರಾಷ್ಟ್ರದ ಶ್ರೀಸಾಮಾನ್ಯನಿಂದ ಹಿಡಿದು ದೊಡ್ಡ ಉದ್ಯಮಿ, ರಾಜಕಾರಣಿಗಳು ಸೇರಿದಂತೆ ಸಮಾಜದ ಎಲ್ಲ ರಂಗದವರು ವಾರಿಯಲ್ಲಿ ಸ್ವಯಂಸ್ಪೂರ್ತಿಯಿಂದ ಪಾಲ್ಗೊಳ್ಳುತ್ತಾರೆ. ವಾರಿಯ ನಿರ್ವಹಣೆಯೇ ಅಮೋಘವಾಗಿದ್ದು, ಈ ಕುರಿತಂತೆ ಮ್ಯಾನೆಜ್​ವೆುಂಟ್ ಗುರುಗಳೂ ಅಧ್ಯಯನ ನಡೆಸಿದ್ದಾರೆ.

ಜರ್ಮನಿ, ಜಪಾನ್​ಗಳಿಂದ ವಿದೇಶಿಯರೂ ಈ ಭಕ್ತಿಪ್ರವಾಹದಲ್ಲಿ ಒಂದಾಗುತ್ತಿದ್ದಾರೆ. ಒಟ್ಟು 21 ದಿನಗಳ ಯಾತ್ರೆಯಲ್ಲಿ ನಸುಕಿನ ಜಾವದ ಭಜನೆಯಿಂದ ಹಿಡಿದು, ರಾತ್ರಿಯ ಆರತಿಯವರೆಗೆ ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯುತ್ತದೆ. ಎಲ್ಲಿಯೂ ವಿಳಂಬ ಇಲ್ಲ, ಯಾರಿಗೂ ರಿಮೈಂಡರ್ ಮಾಡುವ ಅಗತ್ಯ ಬೀಳುವುದಿಲ್ಲ. ಅಂಥ ಶಿಸ್ತು, ಬದ್ಧತೆ. ಯುವಕರು, ಮಧ್ಯವಯಸ್ಕರು, ಬದುಕಿನ ಸಂಧ್ಯಾಕಾಲದಲ್ಲಿ ಇರುವವರು ಹೀಗೆ ಎಲ್ಲರೂ ‘ವಿಠ್ಠಲ ವಿಠ್ಠಲ ಜಯ ಹರಿ ವಿಠ್ಠಲ’, ಜಯ ಜಯ ರಾಮಕೃಷ್ಣ ಹರಿ’, ‘ಜ್ಞಾನೇಶ್ವರ ಮಾವುಲಿ, ಜ್ಞಾನರಾಜ ಮಾವುಲಿ ತುಕಾರಾಮ...’ ಎಂದು ಜಯಘೋಷ ಹಾಕುತ್ತ ಸಾಗುತ್ತಿದ್ದರೆ ಆ ನಿಸರ್ಗವೂ ಭಕ್ತಿರಸದಲ್ಲಿ ಒಂದಾಗುತ್ತದೆ.

ಹೊಸಬರು ಪರಸ್ಪರ ಪರಿಚಯವಾದರೆ. ಸ್ವಾಭಾವಿಕವಾಗಿ ಮೊದಲು ಕೇಳುವುದೇ ‘ನಿಮ್ಮ ಹೆಸರೇನು?, ಊರು ಯಾವುದು?’ ಅಂತ. ಆದರೆ, ವಾರಿಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಜನರು ಯಾರು ಯಾರಿಗೂ ಹೆಸರು, ಊರು ಕೇಳುವುದಿಲ್ಲ. ಇನ್ನು ಅಚ್ಚರಿ ಎಂದರೆ ಅವರು ಪರಸ್ಪರರು ಸಂಬೋಧಿಸುವುದು ‘ಮಾವುಲಿ’ (ತಾಯಿ) ಎಂದು.

ಅಂದರೆ ಉನ್ನತ ಮೌಲ್ಯದ ಸಾಕ್ಷಾತ್ಕಾರವನ್ನು ನಾವು ಇಲ್ಲಿ ಕಾಣಬಹುದು. ಸ್ವಾರ್ಥ, ಸಂಕುಚಿತತೆ, ಸ್ವಪ್ರತಿಷ್ಠೆ, ಅಹಂ ತುಂಬಿಕೊಂಡಿರುವ ಸಮಾಜದಲ್ಲಿ ಈ ಕಲ್ಮಶವನ್ನೆಲ್ಲ ಕಳೆದು ಪ್ರತೀ ವ್ಯಕ್ತಿಯನ್ನು ತಾಯಿಯ ಸ್ವರೂಪಿಯಾಗಿ, ಆ ಮೂಲಕ ಶಕ್ತಿಯ ಅಂಶವಾಗಿ ಕಾಣುವುದು ಭಾರತದ ಅಧ್ಯಾತ್ಮಕ್ಕೆ ಮತ್ತು ವಾರಿಯ ಪರಂಪರೆಗೆ ಮಾತ್ರ ಸಾಧ್ಯ. ‘ಪ್ರತೀ ಮನುಷ್ಯನಲ್ಲಿ ಭಗವಂತನ ಅಂಶ ಇದೆ. ಆತನನ್ನು ಹಾಗೇ ಕಾಣಬೇಕು’ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಪರಸ್ಪರರು ತಾಯಿಯ ರೂಪದಲ್ಲಿ, ಆ ವಿಠ್ಠಲನನ್ನೇ ಶ್ರೀಸಾಮಾನ್ಯನಲ್ಲೂ ಕಾಣುವ ಭಾವ ನಿಜಕ್ಕೂ ಅಸಾಧಾರಣ. ಹಾಗಾಗಿಯೇ, ಈ ಮಾವುಲಿಗಳ ಲೋಕವೇ ವಿಶಿಷ್ಟ.

ಇವರೆಲ್ಲ ಯಾತ್ರೆಯಲ್ಲಿ ಆತ್ಮೀಯರಾಗುತ್ತಾರೆ, ವಿಠ್ಠಲ ನಾಮಸ್ಮರಣೆಯಲ್ಲಿ ಎಲ್ಲ ಜಂಜಾಟ ಮರೆಯುತ್ತಾರೆ, ಭಜನೆಗಳಿಗೆ ಹೆಜ್ಜೆ ಹಾಕುತ್ತ, ಸಂಭ್ರಮಿಸುತ್ತಾರೆ. ಮುಂದಿನ ವರ್ಷ ಮತ್ತೆ ಭೇಟಿಯಾಗೋಣ, ಅಷ್ಟರೊಳಗೆ ಒಮ್ಮೆ ಊರಿಗೆ ಬನ್ನಿ ಎಂದು ಆಹ್ವಾನ ನೀಡಿ ಮರಳುತ್ತಾರೆ. ಜಾತಿ-ಮತಗಳ ಹಂಗಿಲ್ಲದ, ಶ್ರೀಮಂತ-ಬಡವ ಎಂಬ ಭೇದವಿಲ್ಲದ ಈ ಯಾತ್ರೆಯಲ್ಲಿ ಮನುಜ ದೈವತ್ವಕ್ಕೆ ಏರುತ್ತಾನೆ, ದೇವರು ಮಗುವಿನಂತಾಗಿ ಹರಸುತ್ತಾನೆ. ಯಾತ್ರಾರ್ಥಿಗಳು ಕಾಲ್ನಡಿಗೆಯಲ್ಲಿ ಸಾಗಿ ಬಂದು ಪಂಢರಪುರಕ್ಕೆ ತಲುಪಿದ ಮೇಲೂ ವಿಠ್ಠಲನ ದರ್ಶನಕ್ಕೆ ಅವಸರ ಮಾಡುವುದಿಲ್ಲ.

ಏಕೆಂದರೆ, ಆ ಹೊತ್ತಿಗಾಗಲೇ ಲಕ್ಷಾಂತರ ಜನರು ಅಲ್ಲಿ ತಲುಪಿ, ಮಂದಿರದಿಂದ ಹಲವು ಕಿಲೋಮೀಟರ್ ದೂರದವರೆಗೂ ಸರದಿಸಾಲು ಏರ್ಪಟ್ಟಿರುತ್ತದೆ. ಕೆಲ ವಾರಕರಿಗಳು ಮಂದಿರ ಕಳಶದ ದರ್ಶನ ಮಾಡಿ, ಊರುಗಳಿಗೆ ಮರಳಿದರೆ, ಬಹುತೇಕರು ತಾಳ್ಮೆಯಿಂದ ಕಾದು, ವಿಠ್ಠಲನ ಪಾದಕ್ಕೆ ಹಣೆ ಇಟ್ಟು, ಸಂಸಾರದ ವರ್ಷದ ವರದಿಯನ್ನು ಆತನಿಗೆ ಒಪ್ಪಿಸಿ, ಮುಂದಿನ ಸವಾಲುಗಳು, ಜವಾಬ್ದಾರಿಗಳ ಭಾರವನ್ನೆಲ್ಲ ಆತನ ಮೇಲೆ ಹಾಕಿ ನಗುಮೊಗದಿಂದ ಹೊರಡುತ್ತಾರೆ. ‘ಏನಾದರೂ ನಮ್ಮನ್ನು ರಕ್ಷಿಸಲು ಆ ವಿಠ್ಠಲನಿದ್ದಾನಲ್ಲ’ ಎಂಬ ನಿರುಮ್ಮಳ ಭಾವದಲ್ಲಿ, ಮನದ ಚಿಂತೆಯನ್ನು ಮರೆಯುತ್ತಾರೆ. ಪಂಢರಪುರದಿಂದ ಮನೆಗಳಿಗೆ ಮರಳಿದಾಗ ವಾರಕರಿಗಳನ್ನು ಸುಂದರವಾದ ರಂಗೋಲಿ, ಹೂಮಳೆಯೊಂದಿಗೆ ಸ್ವಾಗತಿಸಿ, ಆ ಹಳ್ಳಿಯವರು, ಸುತ್ತಮುತ್ತಲಿನವರು ಗೌರವಿಸುವ ಕ್ಷಣವಿದೆಯಲ್ಲ, ಅದು ಎಂಥ ನಾಸ್ತಿಕನಲ್ಲೂ ಭಾವ ಅರಳಿಸುತ್ತದೆ.

ಈ ವರ್ಷ ಜುಲೈ 6ರಂದು (ಆದಿತ್ಯವಾರ) ಆಷಾಢ ಏಕಾದಶಿ ಸಂಪನ್ನಗೊಳ್ಳಲಿದೆ. ವಿಠ್ಠಲನ ಮಹಾಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ಮುಖ್ಯಮಂತ್ರಿ ದಂಪತಿ ಜತೆಗೆ ವಾರಕರಿ ದಂಪತಿಗೂ ದೊರೆಯುತ್ತದೆ. ಇಂಥ ಸಮಾನತೆ ವಿಠ್ಠಲನ ಭಕ್ತಿಸಾಮ್ರಾಜ್ಯದಲ್ಲಿ ಮಾತ್ರ ಕಾಣಲು ಸಾಧ್ಯ. ಅಂದಹಾಗೆ, ನಮ್ಮ ವಿಠ್ಠಲ ಬಡವರ ದೇವರು. ಆತನಿಗೆ ಬಂಗಾರ, ಬೆಳ್ಳಿ, ಒಡವೆ ಬೇಕಿಲ್ಲ. ಭಕ್ತರು ತಂದು ಅರ್ಪಿಸುವ ತುಳಸಿಯ ಒಂದು ದಳ ಅಥವಾ ತುಳಸಿಮಾಲೆಗೆ ಅವನು ಸಂತೃಪ್ತನಾಗುತ್ತಾನೆ. ಮಾತ್ರವಲ್ಲ, ಭಕ್ತರ ಆಗಮನಕ್ಕೆ ವಿಠ್ಠಲನೂ ಕಾತರದಿಂದ ಕಾದಿರುತ್ತಾನೆ. ಏಕೆಂದರೆ ಆತ ಭಕ್ತಪ್ರಿಯ. ವಿಠ್ಠಲನ ಆ ಮೂರ್ತಿಯ ಸುಂದರ ರೂಪವಂತೂ ಸಂತಸಾಹಿತ್ಯದಲ್ಲಿ ಅಜರಾಮರವಾಗಿದೆ. ಅದಕ್ಕೆಂದೆ, ಲಕ್ಷಾಂತರ ಯಾತ್ರಿಕರು ನಡಿಗೆಯ ಆಯಾಸವನ್ನು ವಿಠ್ಠಲನ ದರ್ಶನದಿಂದ ಕ್ಷಣಮಾತ್ರದಲ್ಲಿ ಮರೆತು ಬಿಡುತ್ತಾರೆ.

ಒಂದು ಆಧ್ಯಾತ್ಮಿಕ ಯಾತ್ರೆ- ನಮ್ಮ ಬದುಕು ಹೇಗಿರಬೇಕು ಎಂಬ ಸಂದೇಶವನ್ನು ನೀಡುತ್ತದೆ. ಮಾನವೀಯತೆಯ ಪಾಠವನ್ನು ಕಲಿಸುತ್ತದೆ, ದಿವ್ಯತೆಯ ಅನುಭೂತಿ ನೀಡುತ್ತದೆ. ನಿಷ್ಕಲ್ಮಶವಾಗಿ ಪ್ರೀತಿಸುವುದನ್ನು ಕಲಿಸುತ್ತದೆ. ಮನಸ್ಸುಗಳನ್ನು ಬೆಸೆಯುತ್ತದೆ, ಹೃದಯದಲ್ಲಿ ಭಕ್ತಿ ಮತ್ತು ಆನಂದದ ಅಮೃತಕಲಶವನ್ನು ಪ್ರತಿಷ್ಠಾಪಿಸುತ್ತದೆ.

ಭಗವಂತನನ್ನು ಇನ್ನೂ ಆಪ್ತವಾಗಿಸುತ್ತದೆ. ಮಾನಸಿಕ ತೊಳಲಾಟವನ್ನು ನಿವಾರಿಸಿ, ನವಚೈತನ್ಯವನ್ನು ಪ್ರದಾನಿಸುತ್ತದೆ. ಅದಕ್ಕೆಂದೆ, ವರ್ಷದಿಂದ ವರ್ಷಕ್ಕೆ ವಾರಿಯ ಪ್ರಭಾವಳಿ ಹೆಚ್ಚುತ್ತಲೇ ಸಾಗುತ್ತಿದೆ. ವಾರಿ ಎಂದರೆ ಸಮಾಜದರ್ಶನ ಹಾಗೂ ಆತ್ಮದರ್ಶನದ ಸಂಗಮ. ಸಂತರು ಇದೇ ಕಾರಣಕ್ಕಾಗಿ ‘ಏಕ್ದಾ ತರೀ ವಾರಿ ಅನುಭವಾವಿ’ (ಒಮ್ಮೆಯಾದರೂ ವಾರಿ ಅನುಭವಿಸಬೇಕು) ಎಂದಿದ್ದಾರೆ. ವಾರಿಯಲ್ಲಿ ಸಂತಸ, ನೆಮ್ಮದಿ, ಆತ್ಮಸಂತೃಪ್ತಿ, ಪ್ರೀತಿ, ವಾತ್ಸಲ್ಯ ಇದೆಲ್ಲದರ ಹದವಾದ ಮಿಶ್ರಣವಿದೆ. ಆ ವಿಠ್ಠಲ ಬಯಸೋದು ಇದನ್ನೇ.

ವಿಠ್ಠಲನೇ ನಿನ್ನ ಅದಮ್ಯ ಶಕ್ತಿಗೆ, ನಿನ್ನನ್ನು ಬೆಸೆದುಕೊಂಡಿರುವ ಲಕ್ಷಾಂತರ ಮನಸುಗಳಿಗೆ ಶರಣು! ಜಗತ್ತಿನಲ್ಲಿ ದುಃಖದ ಕಣ್ಣೀರು ಕಡಿಮೆಯಾಗಲಿ, ಖುಷಿಯ ಕಣ್ಣೀರು ಹೆಚ್ಚಾಗಲಿ, ಎಲ್ಲರ ಹೃದಯಗಳಲ್ಲಿ ನಿನ್ನ ಭಕ್ತಿ, ಪ್ರೇಮ ಆವರಿಸಿಕೊಳ್ಳಲಿ ಸಾಕು! (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)