ಏಪ್ರಿಲ್ ತಿಂಗಳಲ್ಲಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಎರಡು ವರದಿಗಳನ್ನು ಕೊಟ್ಟಿದೆ. ಈ ಎರಡೂ ವರದಿಗಳು ಭಾರತದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿತ್ತು. ಆದರೆ ನಮ್ಮೆಲ್ಲ ಪ್ರಮುಖ ಮಾಧ್ಯಮಗಳು ಅದನ್ನು ಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಭಾರತದ ಪ್ರಗತಿಯ ವೇಗ ಅಂದಾಜಿಸುವಲ್ಲಿ ಜಾಣಕುರುಡುತನ ತೋರಿಸಿವೆ. ಮೂರ್ನಾಲ್ಕು ದಿನಗಳ ಹಿಂದೆ ಐಎಂಎಫ್ನ ಜಾಗತಿಕ ಆರ್ಥಿಕ ಪ್ರಗತಿಯ ಕುರಿತಂತಹ ವರದಿ ಹೊರಗೆ ಬಂತು. ಈ ವರದಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಈ ವರದಿಯ ಆಧಾರದ ಮೇಲೆ ಜಾಗತಿಕ ಹೂಡಿಕೆಗಳು, ಅಭಿವೃದ್ಧಿಯ ಕಲ್ಪನೆಗಳು ಸ್ವರೂಪ ಪಡೆದುಕೊಳ್ಳುತ್ತವೆ. ಗಾಬರಿ ಹುಟ್ಟಿಸುವ ಸಂಗತಿ ಏನೆಂದರೆ ಜಾಗತಿಕ ಆರ್ಥಿಕ ವೃದ್ಧಿ ದರ ಈ ಹಿಂದಿನ ವರದಿಯ ಪ್ರಕಾರ 2021ರಲ್ಲಿ ಶೇಕಡಾ 6.6ರಷ್ಟಿತ್ತು. ಕಳೆದ ಜನವರಿಗೆ ವರದಿ ಬಂದಾಗ ಅದನ್ನು ಶೇಕಡಾ 4.4ಕ್ಕೆ ಇಳಿಸಲಾಗಿತ್ತು. ಈಗ ಬಂದಿರುವ ವರದಿ ಮತ್ತೂ ಹೆಚ್ಚು ಗಾಬರಿ ಹುಟ್ಟಿಸುವಂತಿದೆ. ಏಕೆಂದರೆ ಜಾಗತಿಕ ಆರ್ಥಿಕ ವೃದ್ಧಿಯನ್ನು ಶೇಕಡಾ 3.6 ಎಂದು ಹೇಳಲಾಗುತ್ತಿದೆ. ಅಂದರೆ 2021ರಲ್ಲಿ ಶೇಕಡಾ 7ರ ಹತ್ತಿರವಿದ್ದ ಆರ್ಥಿಕ ಬೆಳವಣಿಗೆ ಈ ವರ್ಷ ಹೆಚ್ಚು-ಕಡಿಮೆ ಅದರ ಅರ್ಧಕ್ಕಿಳಿಯಲಿದೆ! ಸಹಜವಾಗಿಯೇ ಜಗತ್ತಿನ ಅನೇಕ ರಾಷ್ಟ್ರಗಳು ಪತರಗುಟ್ಟಲಿವೆ. ಬಡ ರಾಷ್ಟ್ರಗಳಿಗೆ ಹೂಡಿಕೆ ಕಡಿಮೆಯಾಗಲಿದೆ, ಅಭಿವೃದ್ಧಿಶೀಲ ದೇಶಗಳ ಆಮದು ಹೆಚ್ಚಿ ರಫ್ತು ಕಡಿಮೆಯಾಗಲಿದೆ, ಸಾಲ ಹಿಂದೆಂದಿಗಿಂತಲೂ ಹೆಚ್ಚಲಿದೆ. ಅದನ್ನು ತೀರಿಸಲಾಗದೇ ದಿವಾಳಿಯಾಗುವ ರಾಷ್ಟ್ರಗಳಿಗೂ ಕೊರತೆಯಿಲ್ಲ. ಬರಲಿರುವ ದಿನಗಳು ಜಗತ್ತಿನ ದೃಷ್ಟಿಯಿಂದ ತಲೆಯಮೇಲೆ ಕೈ ಇಡಬೇಕಾದಂಥದ್ದೇ!
ಹಾಗಿದ್ದರೆ ಭಾರತದ ಕಥೆ ಏನು? ಜನವರಿಯಲ್ಲಿ ಪ್ರಕಟಗೊಂಡ ಐಎಂಎಫ್ನ ವರದಿ ಭಾರತ ಶೇಕಡಾ 8.9ರಷ್ಟು ಆರ್ಥಿಕ ವೃದ್ಧಿ ದಾಖಲಿಸಲಿದೆ ಎಂದಿತ್ತು. ಜಾಗತಿಕ ಕುಸಿತದ ಈ ಹೊತ್ತಿನಲ್ಲಿ ನಾವು ಕೂಡ ಆರ್ಥಿಕ ಕುಸಿತವನ್ನು ದಾಖಲಿಸಿದರೂ ಅದು ತೀರಾ ಕಡಿಮೆಯಾಗದೇ ಶೇಕಡಾ 8.2ಕ್ಕೆ ಇಳಿಯಲಿದೆ ಎಂಬುದು ಹೊಸ ವರದಿಯ ಅಭಿಪ್ರಾಯ. ಅನೇಕ ಮೋದಿ-ವಿರೋಧಿ ಪತ್ರಿಕೆಗಳು ಇದನ್ನು ಆತಂಕವೆಂಬಂತೆ ಬಿಂಬಿಸಿ ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಹಿಂದೆ ಉಳಿಯಲಿದೆ ಎಂಬಂತೆ ತೋರಿಸುವ ಪ್ರಯತ್ನ ಮಾಡುತ್ತಿವೆ. ಆದರೆ ಅಚ್ಚರಿ ಏನು ಗೊತ್ತೇ? ಹಿಂದಿನ ವರದಿಯಲ್ಲಿ ಶೇಕಡಾ 5.7ರಷ್ಟಿದ್ದ ಅಮೆರಿಕಾದ ಬೆಳವಣಿಗೆ ಈ ವರದಿಯ ಪ್ರಕಾರ 3.7ಕ್ಕಿಳಿಯಲಿದೆ. ಚೀನಾ ಶೇಕಡಾ 8.1ರಿಂದ 4.4ಕ್ಕಿಳಿಯಲಿದೆ. ರಷ್ಯಾ ಕಥೆ ಕೇಳಲೇಬೇಡಿ, 4.7ರಿಂದ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿ ಶೇಕಡಾ 8.5ಕ್ಕೆ ಕುಸಿಯಲಿದೆ. ವರದಿಯಲ್ಲಿ ಪ್ರಕಟಗೊಂಡಿರುವ ಎಲ್ಲಾ ರಾಷ್ಟ್ರಗಳ ಆರ್ಥಿಕ ವೃದ್ಧಿಯನ್ನು ಗಮನಿಸಿದರೆ ಈ ಕಷ್ಟಕಾಲದಲ್ಲೂ ಅತ್ಯಂತ ವೇಗವಾದ ಬೆಳವಣಿಗೆಯನ್ನು ತೋರಿಸಿರುವ ರಾಷ್ಟ್ರ ಭಾರತವೇ. ಯಾಕೋ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಇದು ಮಹತ್ವದ ಸುದ್ದಿ ಎನಿಸಲೇ ಇಲ್ಲ. ಬರೀ ಐಎಂಎಫ್ ಮಾತ್ರವಲ್ಲ, ವಿಶ್ವ ಬ್ಯಾಂಕ್ ಕೂಡ ನಮ್ಮ ಆರ್ಥಿಕ ವೃದ್ಧಿಯನ್ನು ಶೇಕಡಾ 8ಕ್ಕೆ ಒಯ್ದರೆ ಏಷ್ಯಾ ಡೆವಲಪ್ಮೆಂಟ್ ಬ್ಯಾಂಕ್ ಶೇಕಡಾ 7.5ರಷ್ಟು ಆರ್ಥಿಕ ವೃದ್ಧಿಯನ್ನು ಭಾರತ ದಾಖಲಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಸಹಜವಾಗಿಯೇ ಈ ಕುಸಿತಕ್ಕೆ ಕಾರಣವಿದೆ. ಒಂದೆಡೆ ಕರೊನಾ ಮಹಾಮಾರಿ ಒಟ್ಟಾರೆ ಜಗತ್ತಿನ ಬೆಳವಣಿಗೆಯನ್ನು ತಡೆದು ನಿಲ್ಲಿಸಿದರೆ ಮತ್ತೆ ವಿಕಾಸದ ಓಟದಲ್ಲಿ ಓಡುವ ವೇಳೆಗೆ ರಷ್ಯಾ-ಯೂಕ್ರೇನ್ ಕಿರಿಕಿರಿ ಆರಂಭವಾಯ್ತು. ಈ ಕದನವನ್ನು ಎರಡು ರಾಷ್ಟ್ರಗಳ ನಡುವಣ ಗಲಾಟೆ ಎಂದು ಸುಮ್ಮನಿರುವಂತಿಲ್ಲ. ಏಕೆಂದರೆ ಜಗತ್ತಿನ ಆರ್ಥಿಕತೆಯ ಅಡಿಪಾಯವಾಗಿರುವ ಇಂಧನ ಸುರಕ್ಷತೆಗೆ ರಷ್ಯಾ ಬಲುದೊಡ್ಡ ಕೊಡುಗೆ ನೀಡುತ್ತದೆ. ಯುದ್ಧದೊಡನೆ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳೂ ಏರಿವೆ. ಪೆಟ್ರೋಲ್-ಡೀಸೆಲ್ ಬೆಲೆ ಏರುವುದೆಂದರೆ ಇತರ ಅಗತ್ಯ ವಸ್ತುಗಳ ಬೆಲೆಯೂ ಏರಿದಂತೆ. ಅಂದರೆ ಹಣದುಬ್ಬರ ಪ್ರಮಾಣ ನಿಸ್ಸಂಶಯವಾಗಿ ಹೆಚ್ಚುವುದು. ಸಹಜವಾಗಿಯೇ ಭಾರತದಂತಹ ರಾಷ್ಟ್ರಗಳ ಆಂತರಿಕ ಬೇಡಿಕೆ ಕುಸಿದುಹೋಗುತ್ತದೆ. ಜನರ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವುದು ಒಟ್ಟಾರೆ ಆರ್ಥಿಕ ವಹಿವಾಟನ್ನು ಕಳೆಗುಂದಿಸಲು ಸಾಕು. ಜಪಾನ್ ಮತ್ತು ಭಾರತ ಈ ರೀತಿಯ ಆರ್ಥಿಕ ಹಿನ್ನಡೆಯನ್ನು ಈ ಬಾರಿ ದಾಖಲಿಸಲಿವೆ ಎಂಬುದು ವರದಿಯ ಅಂಶವಾದರೂ ಇದರ ಪ್ರಮಾಣವೂ ಬಲುದೊಡ್ಡದ್ದೇನಲ್ಲ ಎಂಬುದು ಗಮನಿಸಲೇಬೇಕಾದ ಅಂಶ. ನಮ್ಮ ಆರ್ಥಿಕ ಬೆಳವಣಿಗೆಯ ಕುಸಿತಕ್ಕೆ ರಫ್ತು ಕಡಿಮೆಯಾಗುವುದೂ ಒಂದು ಕಾರಣ. ವಿಶ್ವ ವ್ಯಾಪಾರ ಒಕ್ಕೂಟದ ವರದಿಯ ಪ್ರಕಾರ ಜಾಗತಿಕ ಆರ್ಥಿಕ ವಹಿವಾಟು ಶೇಕಡಾ 4.7ರಿಂದ ಶೇಕಡಾ 3ಕ್ಕೆ ಕುಸಿಯಲಿದೆ. ಕಳೆದ ವರ್ಷ 420 ಬಿಲಿಯನ್ ಡಾಲರ್ಗಳಷ್ಟು ಮರ್ಚಂಡೈಸ್ ರಫ್ತಿನಲ್ಲಿ ಸಾಧನೆ ಮಾಡಿದ್ದ ಭಾರತ ಈ ಬಾರಿ ಹಿನ್ನಡೆ ಅನುಭವಿಸಲಿದೆ. ಇದಕ್ಕೆ ಕಾರಣ ಜಾಗತಿಕ ಕುಸಿತವೇ ವಿನಾ ನಾವಲ್ಲ ಎನ್ನುವುದನ್ನು ನೆನಪಿಡಬೇಕು. ಇವೆಲ್ಲವುಗಳ ಪರಿಣಾಮವಾಗಿ ನಾವು ಸ್ವಲ್ಪಮಟ್ಟಿಗೆ ಹಿನ್ನಡೆ ಕಾಣುವುದಂತೂ ನಿಶ್ಚಿತ. ಈ ಹಿನ್ನಡೆಯ ವೇಳೆ ನಮಗಾಗಬಹುದಾಗಿರುವ ದೊಡ್ಡ ಸಮಸ್ಯೆ ಹಣದುಬ್ಬರ ನಿಯಂತ್ರಣದ್ದು. ಭಾರತೀಯ ರಿಸರ್ವ್ ಬ್ಯಾಂಕು ಸಾಕಷ್ಟು ಹಣವನ್ನು ಹರಿಸಿ ಇದನ್ನು ನಿಯಂತ್ರಣ ಮಾಡಬೇಕಿದೆ. ಅದಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಬಡ್ಡಿಗೆ ಸಾಲವನ್ನು ತರಬೇಕು. ಅದು ನಮ್ಮನ್ನು ಹೆಚ್ಚು ಸಾಲಗಾರರ ರಾಷ್ಟ್ರವನ್ನಾಗಿಸಿ ಶ್ರೀಲಂಕಾದಂತಹ ಸ್ಥಿತಿ ನಿರ್ವಣವಾಗಿಬಿಡಲು ಕಾರಣವಾಗುತ್ತದೆ. ಹೀಗಾಗಿಯೇ ಇಂಧನಗಳ ಬೆಲೆ ಏರದಂತೆ ತಡೆಯಲು ಮೋದಿ ಹರಸಾಹಸ ಮಾಡುತ್ತಿದ್ದಾರೆ. ರಷ್ಯಾದೊಂದಿಗೆ ಭಿನ್ನ-ಭಿನ್ನ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾ ನಮ್ಮ ಇಂಧನ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ನಿರತವಾಗಿದ್ದಾರೆ. ಆರಂಭದಲ್ಲಿ ಭಾರತದ ಈ ಪ್ರಯಾಸವನ್ನು ಕಟಕಿಯಾಡಿದ್ದ ಅಮೆರಿಕಾವು ನಮ್ಮ ವಿದೇಶಾಂಗ ಸಚಿವರು ಕೊಟ್ಟ ಬಲವಾದ ಉತ್ತರಕ್ಕೆ ತೆಪ್ಪಗಾಗಿದೆ. ಇತ್ತೀಚೆಗೆ ಭಾರತಕ್ಕೆ ಭೇಟಿಕೊಟ್ಟ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತದ ಈ ಪ್ರಯಾಸವನ್ನು ತಾನು ವಿರೋಧಿಸಲಾರೆ ಎಂದು ಹೇಳುವ ಮೂಲಕ ಪಶ್ಚಿಮದ ರಾಷ್ಟ್ರಗಳು ಹುಬ್ಬೇರಿಸುವಂತೆ ಮಾಡಿಬಿಟ್ಟಿದ್ದಾರೆ.
ರಷ್ಯಾ-ಯೂಕ್ರೇನ್ನ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ಇಂಧನ ಸುರಕ್ಷತೆ ಮತ್ತು ಪೂರೈಕೆ ಜಾಲ ಅಸ್ತವ್ಯಸ್ತಗೊಂಡಿರುವುದರ ಸಮಸ್ಯೆ ಎಲ್ಲರಿಗೂ ಗೊತ್ತಿರುವಂಥದ್ದೇ. ಇದನ್ನು ಸೂಕ್ತವಾಗಿ ಎದುರಿಸಲು ಭಾರತದ ಸಹಕಾರ ಎಲ್ಲರಿಗೂ ಬೇಕೇ ಬೇಕಾಗಿದೆ. ಈ ಕಾರಣಕ್ಕಾಗಿಯೇ ಜಗತ್ತಿನ ಪ್ರಮುಖ ರಾಷ್ಟ್ರಗಳ ಮಂದಿಯೆಲ್ಲ ಕಳೆದ ಕೆಲವಾರು ದಿನಗಳಲ್ಲಿ ಭಾರತಕ್ಕೆ ಬಂದು ಹೋಗುತ್ತಲೇ ಇದ್ದಾರೆ. ಫ್ರಾನ್ಸ್, ಜರ್ಮನಿ, ಅಮೆರಿಕಾ, ರಷ್ಯಾ, ಚೀನಾ, ಇಂಗ್ಲೆಂಡು ಆದಿಯಾಗಿ ಎಲ್ಲ ಪ್ರಮುಖ ರಾಷ್ಟ್ರಗಳು ಭಾರತದೊಂದಿಗೆ ಬಲವಾದ ಬಾಂಧವ್ಯ ಹೊಂದಿವೆ. ಐಎಂಎಫ್ನ ಪ್ರತಿನಿಧಿಯಾಗಿ ಭಾರತದಲ್ಲಿರುವ ಲೂಯಿಸ್ ಬ್ರೂ್ಯರ್ ಕಳೆದ ವರ್ಷವೇ ಈ ಕುರಿತಂತೆ ಹೇಳಿಕೊಂಡಿದ್ದರು. ಭಾರತ ಜಾಗತಿಕ ಸಮುದಾಯದ ಬಹುಮುಖ್ಯ ರಾಷ್ಟ್ರ. ಇಲ್ಲಿ ಆಗುವ ಸಣ್ಣ ಬದಲಾವಣೆಯೂ ಜಗತ್ತನ್ನು ಪ್ರಭಾವಿಸುತ್ತದೆ. ಜಗತ್ತಿನ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇಕಡಾ 7ರಷ್ಟಿದೆ. ಜನಸಂಖ್ಯೆಯಲ್ಲಿ ಶೇಕಡಾ 20ರಷ್ಟಿದೆ. ಇಷ್ಟು ಜನಸಂಖ್ಯೆಯುಳ್ಳಂತಹ ಈ ರಾಷ್ಟ್ರವನ್ನು ಜಗತ್ತು ಕಡೆಗಣಿಸುವುದು ಸಾಧ್ಯವೇ ಇಲ್ಲ ಎಂಬ ಸೂಕ್ಷ್ಮವನ್ನು ಅವರು ಹಂಚಿಕೊಂಡಿದ್ದರು. ಆದರೆ ಮೋದಿ ಭಾರತವನ್ನು ಜಗತ್ತಿನ ಮಾರುಕಟ್ಟೆಯಾಗಿ ರೂಪಿಸಿಲ್ಲ. ಬದಲಿಗೆ ಜಗತ್ತಿಗೆ ಅನಿವಾರ್ಯವಾಗಿ ಬೇಕಾಗಿರುವ ರಾಷ್ಟ್ರವಾಗಿ ರೂಪಿಸಿರುವುದರಿಂದಲೇ ಜಗತ್ತು ಇತ್ತ ಧಾವಿಸಿ ಬರುತ್ತಿದೆ. ಜಗತ್ತಿನ ಪ್ರಮುಖ ಹಣಕಾಸು ಸಚಿವರೊಂದಿಗೆ ಚರ್ಚೆಗೆ ಕುಳಿತ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾವು ಸಹಾಯಕ್ಕಾಗಿ ಅಂಗಲಾಚುವ ರಾಷ್ಟ್ರವಾಗಿರಲು ಬಯಸುವುದಿಲ್ಲ ಎಂದು ಹೇಳಿರುವುದು ಬಲುದೊಡ್ಡ ಸಂದೇಶವನ್ನು ರವಾನಿಸಿದೆ. ಈಗ ಭಾರತದ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು ಜಾಗತಿಕ ವೇದಿಕೆಗಳಲ್ಲಿ ಮುಲಾಜಿಲ್ಲದೇ ಮಾತನಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಭಾರತದ ವಿದೇಶೀ ವಿನಿಮಯ ಉಳಿಕೆ 2016ರಲ್ಲಿ 370 ಬಿಲಿಯನ್ ಡಾಲರ್ಗಳಷ್ಟಿದ್ದರೆ ಈಗ 600 ಬಿಲಿಯನ್ ಡಾಲರ್ಗಳಿಗೆ ಏರಿದೆ. ಹೇಗೆ ವ್ಯಕ್ತಿಗೆ ಕೊಳ್ಳುವ ಶಕ್ತಿ ಇರುವುದೋ ಹಾಗೆ ರಾಷ್ಟ್ರಕ್ಕಿರುವ ಕೊಳ್ಳುವ ಶಕ್ತಿಯನ್ನು ಈ ವಿದೇಶೀ ವಿನಿಮಯದ ಮೂಲಕವೇ ಅಳೆಯಲಾಗುತ್ತದೆ. ಮೋದಿ ಅದನ್ನು ಹೆಚ್ಚು-ಹೆಚ್ಚು ವೃದ್ಧಿಸುವ ಪ್ರಯತ್ನ ಮಾಡಿ ಭಾರತದ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ಹೀಗಾಗಿಯೇ ಮುಂದುವರಿದ ರಾಷ್ಟ್ರಗಳು ಯಾವ ಧಿಮಾಕಿನಿಂದ ಮಾತನಾಡುತ್ತವೆಯೋ ಅದೇ ಧಿಮಾಕನ್ನು ಭಾರತವೂ ತೋರ್ಪಡಿಸುತ್ತಿದೆ. ಅಷ್ಟೇ ಅಲ್ಲ, ಮುಂದುವರಿದ ರಾಷ್ಟ್ರಗಳು ಜಗತ್ತಿಗೆಲ್ಲ ಗ್ರೀನ್ ಎನರ್ಜಿಯ ಬಗ್ಗೆ ಸಿಕ್ಕಾಪಟ್ಟೆ ಪಾಠ ಮಾಡುತ್ತವೆ. ಭಾರತ ಆ ದಿಕ್ಕಿನಲ್ಲಿ ಬಲವಾದ ಹೆಜ್ಜೆಯಿಟ್ಟು ಈ ರಾಷ್ಟ್ರಗಳಿಗೆ ಸವಾಲೆಸೆದಿದೆ. ಕಳೆದ ಒಂದೇ ವರ್ಷದಲ್ಲಿ ನಾವು ಶೇಕಡಾ 128ರಷ್ಟು ನವೀಕರಿಸಬಹುದಾದ ಇಂಧನಗಳ ಯುನಿಟ್ಗಳನ್ನು ಹೆಚ್ಚಿಸಿದ್ದೇವೆ. ಇವುಗಳಲ್ಲಿ 10 ಗಿಗಾವಾಟ್ಗಳಷ್ಟು ಗ್ರಿಡ್ ಸೌರಶಕ್ತಿ, 1 ಗಿಗಾವಾಟ್ನಷ್ಟು ಪವನಶಕ್ತಿ, 2 ಗಿಗಾವಾಟ್ನಷ್ಟು ಛಾವಣಿಯ ಮೇಲಿನ ಸೌರಶಕ್ತಿಯ ಯುನಿಟ್ಗಳು ಸೇರಿಕೊಂಡು ಭಾರತದತ್ತ ಯಾರೂ ಬೆರಳು ತೋರಿಸದಂತಾಗಿದೆ!
ಇಷ್ಟೇ ಅಲ್ಲ, ಭಾರತದ ವಿದೇಶಾಂಗ ಸಚಿವರು ಅಮೆರಿಕಾದಲ್ಲಿದ್ದಾಗ ಅಲ್ಲಿನ ಕಾರ್ಯದರ್ಶಿ ಭಾರತದಲ್ಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ ಎಂದು ಹೇಳಿದ್ದರು. ವಿದೇಶಾಂಗ ಸಚಿವರು ತಿರುಗೇಟು ನೀಡಿ ಭಾರತವೂ ಅಮೆರಿಕಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಂತೆ ದನಿ ಎತ್ತಲಿದೆ ಎಂದುಬಿಟ್ಟಿದ್ದರು. ಅಮೆರಿಕಾ ಆನಂತರ ತೇಪೆ ಹಚ್ಚುವ ವೇಳೆಗೆ ಮುಖಭಂಗವನ್ನಂತೂ ಅನುಭವಿಸಿತ್ತು. ನಾವು ನಿಜಕ್ಕೂ ಯಾರ ಮುಂದೆಯೂ ತಲೆತಗ್ಗಿಸಬೇಕಾಗಿಲ್ಲ ಏಕೆಂದರೆ ಏಪ್ರಿಲ್ ಮೊದಲ ವಾರದಲ್ಲಿ ಐಎಂಎಫ್ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತ ಕಡು ಬಡತನವನ್ನು ಪೂರಾ ನಿಮೂಲನೆಗೊಳಿಸಿದೆ ಎಂದಿತ್ತು. ಕರೊನಾ ಹೊತ್ತಿನಲ್ಲಿ ಜಗತ್ತೆಲ್ಲ ಬಡತನದ ಬೇಗೆಯಲ್ಲಿ ನರಳುತ್ತಿದ್ದರೆ ಭಾರತ ಮಾತ್ರ ಆಹಾರ ಸುರಕ್ಷತೆಯ ಕುರಿತಂತೆ ಗಮನಹರಿಸಿ ದೇಶದ ಕೊನೆಯ ವ್ಯಕ್ತಿಯವರೆಗೂ ಅದು ತಲುಪುವಂತೆ ನೋಡಿಕೊಂಡು ಬಡತನ ನಿಮೂಲನೆಗೆ ಹೆಜ್ಜೆ ಇಟ್ಟಿತ್ತು ಎಂದಿದೆ. ಅಚ್ಚರಿಯೇನು ಗೊತ್ತೇ? ಈ ಕುರಿತಂತೆ ಕಾಂಗ್ರೆಸ್ಸು ಚಕಾರವೆತ್ತಲಿಲ್ಲ. ಕೊನೆಯ ಪಕ್ಷ ವರದಿಯಲ್ಲಿ ಹುರುಳಿಲ್ಲವೆಂದಾದರೂ ಹೇಳಬೇಕಿತ್ತಲ್ಲ, ಅದನ್ನೂ ಮಾಡಲಿಲ್ಲ. ಏಕೆಂದರೆ ವರದಿ ಕೊಟ್ಟಿರುವ ಸಂಸ್ಥೆ ಐಎಂಎಫ್ ಎನ್ನುವುದು ಮೊದಲ ಸಂಗತಿಯಾದರೆ ಈ ವರದಿಯನ್ನು ಬರೆದಿರುವ ಲೇಖಕರಲ್ಲಿ ಅರವಿಂದ ವೀರಮಣಿ ಅವರೂ ಇದ್ದರು ಎನ್ನುವುದು. ಈ ಅರವಿಂದ ಮನಮೋಹನ ಸಿಂಗರ ಕಾಲಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರಲ್ಲದೇ ಯುಪಿಎ ಸರ್ಕಾರವೇ ಅವರನ್ನು ಐಎಂಎಫ್ಗೆ ಭಾರತದ ಪ್ರತಿನಿಧಿಯಾಗಿ ನೇಮಿಸಿತ್ತು.
ಮೋದಿ ಸದ್ದಿಲ್ಲದೇ ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಬಲಗೊಳಿಸುತ್ತಿದ್ದಾರೆ. ಈ ರಾಷ್ಟ್ರ ಕಳೆದ ಆರೇಳು ದಶಕಗಳಿಂದ ಯಾವ ಸ್ಥಾನದಿಂದ ವಂಚಿತವಾಗಿತ್ತೋ ಅಲ್ಲಿಗೊಯ್ದು ಅದನ್ನು ನಿಲ್ಲಿಸುತ್ತಿದ್ದಾರೆ. ಉತ್ತರ ಪ್ರದೇಶದ ಗೆಲುವು ಆಂತರಿಕವಾಗಿ ಅವರಿಗೆ ಬಲ ತುಂಬಿದೆ. ನಾವೀಗ ಸಿರಿವಂತ ರಾಷ್ಟ್ರಗಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಸಾಮರ್ಥ್ಯ ಪಡೆದಿದ್ದೇವೆ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)