ಪ್ರಧಾನಿ ನರೇಂದ್ರ ಮೋದಿಯವರ ಕುರಿತಂತೆ ಹೆಚ್ಚು ದ್ವೇಷ ಹಬ್ಬಿಸಲು ಯತ್ನಿಸಿದಷ್ಟೂ ಜನ ಮೋದಿಯವರನ್ನು ಹೆಚ್ಚು-ಹೆಚ್ಚು ಪ್ರೀತಿಸುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿರಬೇಕಲ್ಲ. ಕೆಲ ಮಾಧ್ಯಮಗಳು, ರಾಜಕಾರಣಿಗಳು, ಸಮಾಜದಲ್ಲಿ ಇಷ್ಟೂ ದಿನಗಳ ಕಾಲ ಸಾಕಷ್ಟು ಹೆಸರು ಮಾಡಿ ಮೆರೆಯುತ್ತಿದ್ದವರು ಮೋದಿಯನ್ನು ಎಷ್ಟರಮಟ್ಟಿಗೆ ವಿರೋಧಿಸುತ್ತಿದ್ದಾರೆಂದರೆ ಆ ವಿರೋಧದ ಭಾವನೆಯೇ ಮಧ್ಯದಲ್ಲಿದ್ದವರನ್ನು ಮೋದಿಯ ಪಾಳಯಕ್ಕೆ ಎಳೆದು ತರುತ್ತಿದೆ. ಗುಜರಾತಿನಲ್ಲಿದ್ದಾಗ ಮೋದಿಯನ್ನು ನರಹಂತಕನೆಂದು ಜರಿದರು. ಆನಂತರ ಪುಣ್ಯಾತ್ಮ ಹನ್ನೆರಡು ವರ್ಷಗಳ ಕಾಲ ಆಳಿ ಇನ್ನೂ ಕೂಡ ಬಲವಾದ ಬೇರುಗಳನ್ನು ಅಲ್ಲಿ ಬಿಟ್ಟುಕೊಂಡೇ ನಿಂತಿದ್ದಾರೆ. ಉತ್ತರಪ್ರದೇಶದ ಚುನಾವಣೆಗೆ ಮುನ್ನ ಮೋದಿ ಬಗ್ಗೆ ಇವರು ಪ್ರಯೋಗಿಸದ ಪದಗಳಿಲ್ಲ. ಯೋಗಿ ಆದಿತ್ಯನಾಥರು ಮತ್ತೆ ಅಧಿಕಾರ ಹಿಡಿದರು. ಈಗ 2024ರ ಚುನಾವಣೆಗೂ ಮುನ್ನ ಇಂಥದ್ದೇ ದ್ವೇಷ ಹಬ್ಬಿಸುವ ಪ್ರಯತ್ನದಲ್ಲಿ ನಿರತರಾಗಿರುವ ಈ ಮಂದಿ ಮೋದಿಯ ಆರಾಧಕರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ನಡೆದಿದ್ದಾರೆ.
ಹಾಗೆ ಸುಮ್ಮನೆ ಕೆಲ ಪತ್ರಕರ್ತರ ವರಸೆಯನ್ನು ಗಮನಿಸಿ. ಕರೊನಾ ಕಾಲಘಟ್ಟ ಕೆಟ್ಟ ಸಮಯವಾಗಿತ್ತು. ಇದು ಇಡಿಯ ರಾಷ್ಟ್ರ ಒಟ್ಟಿಗಿದ್ದು ವೈರಸ್ಸನ್ನು ಎದುರಿಸಬೇಕಾಗಿದ್ದ ಸಂದರ್ಭ. ಹಾಗೆ ನೋಡಿದರೆ ಕರೊನಾ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವುದಕ್ಕಿಂತ ವಿರೋಧ ಪಕ್ಷದಲ್ಲಿರುವುದೇ ಸಲೀಸಾದ ಆಯ್ಕೆಯಾಗಿತ್ತು. ಮಾಡಬೇಕಾದ್ದೇನೂ ಇಲ್ಲ. ಮಾಡಿದ್ದೆಲ್ಲವನ್ನೂ ತಪ್ಪು ಎಂದರಾಯ್ತು. ಕಾಂಗ್ರೆಸ್ಸು ಸಕಾರಾತ್ಮಕ ಟೀಕೆಗಳ ಅವಕಾಶವನ್ನು ಕಳೆದುಕೊಂಡುಬಿಟ್ಟಿತು. ರಾಷ್ಟ್ರೀಯ ಮಾಧ್ಯಮಗಳನ್ನಂತೂ ಕೇಳಲೇಬೇಡಿ. ಭಾರತಕ್ಕಿಂತ ನ್ಯೂಜಿಲೆಂಡ್ ತನ್ನ ಜನರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದು ಹೇಳಲೂ ಅವರು ಹಿಂಜರಿಯಲಿಲ್ಲ. ಮೋದಿಯ ಕಾರ್ಯಶೈಲಿಯನ್ನು ಗಮನಿಸಿದಾಗ ಅವರು ಆರಂಭಿಕ ಹಿನ್ನಡೆಗಳನ್ನು ಎದುರಿಸಿ ಆನಂತರ ಇಡಿಯ ವೈರಸ್ ವಿರುದ್ಧದ ಹೋರಾಟವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳುತ್ತಾರೆಂಬುದು ಎಂಥವನಿಗೂ ಗೊತ್ತಾಗುವಂತಿತ್ತು. ಹಾಗೆ ಅವರು ಹಿಡಿತಕ್ಕೆ ತಂದುಕೊಂಡ ಮೇಲೆ ನ್ಯೂಜಿಲೆಂಡ್ ಬಿಡಿ, ಅಮೆರಿಕ, ಚೀನಾಗಳೂ ನಾಚುವಂತೆ ಪರಿಸ್ಥಿತಿ ನಿಭಾಯಿಸಿದರು. ಆದರೂ ಸಿಕ್ಕ ಅವಕಾಶವನ್ನು ಬಿಡದೇ ಉಪಯೋಗಿಸಿಕೊಳ್ಳುವ ಧಾವಂತದಲ್ಲಿ ಮೋದಿಯ ಟೀಕೆಗೆ ನಿಂತರು. ಆಕ್ಸಿಜನ್ ಕೊರತೆಗೆ ಕಾರಣ ಮೋದಿ, ರೆಮ್ಡೆಸಿವಿರ್ ಕೊರತೆಗೆ ಕಾರಣ ಮೋದಿ, ವೈದ್ಯರ ಕೊರತೆಗೆ ಕಾರಣ ಮೋದಿ, ಶವಸಂಸ್ಕಾರಗಳ ಸಮಸ್ಯೆಗೆ ಕಾರಣ ಮೋದಿ, ರೋಗಿಗೆ ಬೆಡ್ ಸಿಗಲಿಲ್ಲವೆಂದರೂ ಮೋದಿ, ಸಿಕ್ಕು ಆತ ತೀರಿಕೊಂಡರೂ ಮೋದಿ. ಇಷ್ಟಕ್ಕೇ ನಿಲ್ಲಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಭಾಜಪವನ್ನು ಮುಗಿಸಿಯೇ ಬಿಡಬೇಕೆಂದು ನಿಶ್ಚಯಿಸಿದ ಕೆಲ ಮಾಧ್ಯಮಗಳು ಉತ್ತರ ಪ್ರದೇಶವನ್ನೇ ಕೇಂದ್ರವಾಗಿರಿಸಿಕೊಂಡು ಆರೋಗ್ಯ ನಿರ್ವಹಣೆಯಲ್ಲಿ ಆ ರಾಜ್ಯ ಸೋತಿರುವ ಕುರಿತಂತೆ ಪುಂಖಾನುಪುಂಖವಾಗಿ ವರದಿ ಮಾಡಲಾರಂಭಿಸಿದವು. ಕೊನೆಗೆ ಗಂಗೆಯಲ್ಲಿ ಹೆಣಗಳು ತೇಲುತ್ತಿವೆ ಎಂಬ ಸುಳ್ಳು ಹೇಳಲೂ ಹಿಂಜರಿಯಲಿಲ್ಲ. ಅದು ಸುಳ್ಳೆಂದು ಸಾಬೀತಾದ ನಂತರವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸುಳ್ಳಿಗೆ ವೇದಿಕೆ ಕೊಡಿಸುವಲ್ಲಿ ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ!
ಪಶ್ಚಿಮ ಬಂಗಾಳ ಇನ್ನೂ ಕೆಟ್ಟದ್ದಾಗಿ ಈ ಕರೊನಾ ಆಕ್ರಮಣಕ್ಕೆ ತುತ್ತಾಗಿತ್ತು. ಮಹಾರಾಷ್ಟ್ರದ ಕಥೆ ಕೇಳಲೇಬೇಡಿ. ದಕ್ಷಿಣದಲ್ಲಿ ತಮಿಳುನಾಡು ಸಾಕಷ್ಟು ಹೆಣಗಾಡಿತು. ಕೇರಳವಂತೂ ಮಳೆ ನಿಂತ ಮೇಲೂ ಹನಿ ಬೀಳುವಂತೆ ಉಳಿದೆಲ್ಲ ರಾಜ್ಯಗಳು ಕರೊನಾ ಗೆದ್ದ ನಂತರವೂ ತಾನಿನ್ನೂ ಹೋರಾಡುತ್ತಲೇ ಇತ್ತು. ಮಾಧ್ಯಮಗಳಿಗೆ ಇದೊಂದು ವಿಷಯವೇ ಆಗಿರಲಿಲ್ಲ. ಅವರಿಗೆ ಯೋಗಿ ಆದಿತ್ಯನಾಥರನ್ನು ಚುನಾವಣೆಯಲ್ಲಿ ಸೋಲಿಸಬೇಕಿತ್ತು ಅಷ್ಟೇ. ಆದರೆ ಜನ ಮೊದಲಿನಷ್ಟು ದಡ್ಡರಲ್ಲವಲ್ಲ. ಈ ಏಕಪಕ್ಷೀಯ ವರದಿಗಳನ್ನು ಹತ್ತಿರದಿಂದ ಗಮನಿಸುತ್ತಿದ್ದ ಇವರೆಲ್ಲ ಮೋದಿಗೆ, ಯೋಗಿಗೆ ಹೆಚ್ಚು ಹತ್ತಿರವಾದರೆ ಹೊರತು ದೂರವಾಗಲಿಲ್ಲ. ಹಾಗೆ ನೆನಪಿಸಿಕೊಳ್ಳಿ. ಕಾರ್ವಿುಕರು ವಲಸೆ ಹೋಗುತ್ತಿದ್ದರಲ್ಲ ಆಗ ಬಿಹಾರ ಮತ್ತು ಉತ್ತರ ಪ್ರದೇಶದ ಹೆಸರನ್ನು ಬಿಟ್ಟರೆ ಎಂದಾದರೂ ಪಶ್ಚಿಮ ಬಂಗಾಳದ ಮಾತನಾಡಿದ್ದು ಕೇಳಿದ್ದೀರಾ? ಪಶ್ಚಿಮ ಬಂಗಾಳದವರು ಬೇರೆಡೆ ನೌಕರಿಗಳಲ್ಲಿ ಇಲ್ಲವೆಂದುಕೊಂಡಿದ್ದೀರೇನು? ಆದರೆ ಅಲ್ಲಿನ ದೀದಿ ಸರ್ಕಾರಕ್ಕೆ ತೊಂದರೆಯಾಗಬಾರದೆಂದು ಮಾಧ್ಯಮಗಳ ಗುರಿ. ಜನ ಇದನ್ನು ಗಮನಿಸಿದರು. ಹೀಗಾಗಿಯೇ ಚುನಾವಣೆಗಳು ನಡೆದಾಗ ಯೋಗಿಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಈ ಚುನಾವಣೆಯ ಹೊತ್ತಲ್ಲಿ ಜನರ ಮುಂದೆ ಮೈಕು ಹಿಡಿದು ನಿಂತಿರುತ್ತಿದ್ದ ಪತ್ರಕರ್ತರು ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸೋತಿತೇ ಎಂದು ಕೇಳಿದರೆ, ಅಮೆರಿಕವೇ ಸೋತಿದೆಯಂತೆ ನಮ್ಮದೇನು ಬಿಡಿ ಎಂದು ಮೂದಲಿಸುತ್ತಿದ್ದುದು ಈ ಕಾರಣಕ್ಕೇ. ವಿರೋಧ ಹೆಚ್ಚಿದಷ್ಟೂ ಪ್ರೀತಿಸುವವರು ಬಲವಾಗುತ್ತಾರೆ ಎನ್ನುವ ಮಾನಸಿಕ ಸಂಗತಿ ಈ ಮುಖ್ಯವಾಹಿನಿಯ ಮಂದಿಗಳಿಗೆ ಅರ್ಥವೇ ಆಗಲಿಲ್ಲ. ಹೀಗಾಗಿಯೇ ಯೂಕ್ರೇನ್-ರಷ್ಯಾ ಯುದ್ಧದ ನಡುವೆ ಯೂಕ್ರೇನ್ನಲ್ಲಿ ಸಿಕ್ಕುಹಾಕಿಕೊಂಡಿದ್ದ ಭಾರತೀಯರನ್ನು ಬಿಡಿಸುವ ವಿಚಾರದಲ್ಲಿ ರಾದ್ಧಾಂತವೆಬ್ಬಿಸಿದ ಮಾಧ್ಯಮಗಳ ಮಾತಿಗೆ ಯಾರೂ ಕಿವಿಗೊಡಲೇ ಇಲ್ಲ. ಅನ್ಯ ರಾಷ್ಟ್ರಗಳಿಗೆ ಹೋಗಿರುವ ಜನರ ಜವಾಬ್ದಾರಿ ಯಾವ ರಾಷ್ಟ್ರಕ್ಕೂ ಇಲ್ಲ. ಯೂಕ್ರೇನಿನಲ್ಲಿ ಸಿಲುಕಿಕೊಂಡಿದ್ದ ಅಮೆರಿಕನ್ ಪ್ರಜೆಗಳ ಕುರಿತಂತೆ ಅಮೆರಿಕ, ಚೀನೀ ಮಂದಿಯ ಕುರಿತಂತೆ ಚೀನಾ ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಮೋದಿ ಹಠಕ್ಕೆ ಬಿದ್ದರು. ಅವರು ಎಲ್ಲರಿಗೂ ಗ್ರೀನ್ ಕಾರಿಡಾರ್ನ ವ್ಯವಸ್ಥೆ ಮಾಡುವವರೆಗೂ ಪ್ರಯತ್ನಿಸಿ ಹೆಚ್ಚು-ಕಡಿಮೆ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಮರಳಿ ತಂದರು. ಕೆಲ ಮಾಧ್ಯಮಗಳ ಕಣ್ಣೀರು ಹೇಳತೀರದು. ಅವರೇನು ಮಾಡಿದರು ಗೊತ್ತೇ? ವಿದ್ಯಾರ್ಥಿಗಳನ್ನು ಪ್ರಚೋದಿಸಿ ಮಾತಿಗೆಳೆದರು. ಒಬ್ಬನಂತೂ ‘ಬಸ್ಸು ನಾನಿರುವ ಮನೆಯವರೆಗೂ ಬರಲೇ ಇಲ್ಲ’ ಎಂದ. ಮತ್ತೊಬ್ಬ ‘ರೈಲು ಜನಜಂಗುಳಿಯಿಂದ ಕೂಡಿತ್ತು’ ಎಂದ. ಒಬ್ಬಳಂತೂ ಪುಣ್ಯಾತಿಗಿತ್ತಿ ‘ನಮಗೆ ಮಾಡಿಕೊಟ್ಟಿದ್ದ ವ್ಯವಸ್ಥೆಯಲ್ಲಿ ನಮ್ಮ ಬಳಿಯೇ ಶೌಚಾಲಯಗಳನ್ನು ತೊಳಿಸಿದರು’ ಎಂದು ಅಲವತ್ತುಕೊಂಡಳು. ಇವನ್ನೆಲ್ಲ ಪದೇಪದೆ ತೋರಿಸಿದ ಮಾಧ್ಯಮಗಳು ಜನ ಮೋದಿಯನ್ನು ಬೈಯ್ಯುತ್ತಾರೆಂದುಕೊಂಡರೆ ಉಲ್ಟಾ ಈ ವಿದ್ಯಾರ್ಥಿಗಳ ಧೋರಣೆಯನ್ನೇ ಟೀಕಿಸಿದರು. ಹೀಗೆ ರಂಪಾಟ ಮಾಡಿದವರ ಜನ್ಮ ಜಾಲಾಡಿದಾಗ ಬಹುತೇಕರು ವಿರೋಧ ಪಕ್ಷಗಳ ನಾಯಕರ ಮನೆಗಳವರು ಎಂಬ ಸುದ್ದಿಯೂ ಹೊರಗೆ ಬಂತು. ಅಲ್ಲಿಗೆ ಮಾಧ್ಯಮಗಳು ಮಾಡಿದ ಪ್ರಯತ್ನವೆಲ್ಲವೂ ನೀರಿನಲ್ಲಿ ಹುಣಸೆ ತೊಳೆದಂತಾಯ್ತು. ಇಲ್ಲಿಯೂ ಹಿನ್ನಡೆಯೇ.
ಸುದೀರ್ಘ ಕಾಲ ಮುಸಲ್ಮಾನರ ಪರವಾಗಿ ನಿಂತು ಹಿಂದೂಗಳನ್ನು ಅವಹೇಳನ ಮಾಡುವ ಕೆಲ ಮಾಧ್ಯಮಗಳು ಈ ಕಾರಣಕ್ಕೇ ಮೋದಿಯ ವಿರೋಧಕ್ಕೆ ನಿಂತಂಥವು. ದೇಶದಲ್ಲಾಗುವ ಎಲ್ಲ ಹಿಂದೂ-ಮುಸ್ಲಿಂ ಕದನಗಳಿಗೂ ಮೋದಿಯೇ ಕಾರಣ ಎಂದು ಬಿಂಬಿಸುವ ಪ್ರಯತ್ನ ಅವರು ಮಾಡುತ್ತಲೇ ಇರುತ್ತಾರೆ. ನೆನಪು ಮಾಡಿಕೊಳ್ಳಿ. ಮೋದಿ ಅಧಿಕಾರಕ್ಕೆ ಬಂದ ವರ್ಷದಲ್ಲಿ ಬಿಹಾರದ ಚುನಾವಣೆ ನಡೆಯುವಾಗ ಕ್ಷುಲ್ಲಕ ಕಾರಣವೊಂದನ್ನಿಟ್ಟುಕೊಂಡು ಬುದ್ಧಿಜೀವಿಗಳೆಲ್ಲ ‘ಅವಾರ್ಡ್ ವಾಪ್ಸಿ’ ಮಾಡಿದ್ದರು. ಆಗಿನ್ನೂ ಹಿಂದೂಗಳು ಪಕ್ವವಾಗಿರಲಿಲ್ಲ. ಮಾಧ್ಯಮಗಳು ಸೃಷ್ಟಿಸಿದ್ದ ಸೆಕ್ಯುಲರ್ ಹ್ಯಾಂಗ್ಓವರ್ನಿಂದ ಹೊರಬಂದಿರಲಿಲ್ಲ ಕೂಡ. ಹೀಗಾಗಿಯೇ ಇಂಥ ಆರೋಪಗಳಿಗೆ ಸೆಕ್ಯುಲರ್ ಭಾಷೆಯಲ್ಲಿಯೇ ಪ್ರತಿಕ್ರಿಯಿಸುತ್ತಿದ್ದರು. ಅದಾದ ನಂತರ ಗಂಗೆಯಲ್ಲಿ ಸಾಕಷ್ಟು ನೀರು ಹರಿದಿದೆ. ಹಿಂದೂಗಳ ಬುದ್ಧಿಯನ್ನು ಆವರಿಸಿಕೊಂಡಿದ್ದ ಸೆಕ್ಯುಲರಿಸಂ ಭೂತ ಬಿಟ್ಟುಹೋಗಿದೆ. ಆತ ಈಗ ಪ್ರಶ್ನಿಸಲಾರಂಭಿಸಿದ್ದಾನೆ. ಮುಸಲ್ಮಾನನೊಬ್ಬ ಭಯೋತ್ಪಾದಕನಾಗುವ ಹಿನ್ನೆಲೆಯಲ್ಲಿ ಸಾಕಷ್ಟು ಭಾವನಾತ್ಮಕ ಕಾರಣಗಳನ್ನು ಕೊಟ್ಟು ಅದನ್ನು ಸಮರ್ಥಿಸಿಕೊಳ್ಳುವ ಮಾಧ್ಯಮಗಳು ಸತ್ಯಕಥೆ ಆಧಾರಿತ ‘ಕಶ್ಮೀರ್ ಫೈಲ್ಸ್’ ಚಿತ್ರವನ್ನು ವಿರೋಧಿಸಿದ್ದೇಕೆ? ಈ ಪ್ರಶ್ನೆ ಆತ ಮೌನವಾಗಿಯೇ ಕೇಳಿಕೊಂಡ. ಪರಿವಾರ ಸಮೇತ ಈ ಚಿತ್ರ ನೋಡುವ ಹಠ ಹಿಡಿದು ನಿರ್ವಪಕರು 250 ಕೋಟಿ ರೂಪಾಯಿಯ ಗಡಿ ದಾಟುವವರೆಗೂ ಸುಮ್ಮನಾಗಲಿಲ್ಲ. ಉಡುಪಿಯ ಕಾಲೇಜೊಂದು ತನ್ನ ಒಂದು ಸಾವಿರ ವಿದ್ಯಾರ್ಥಿಗಳಿಗೆ ಈ ಚಿತ್ರವನ್ನು ತೋರಿಸಿ ನೈಜ ಇತಿಹಾಸದ ಪುಟವೊಂದರ ಪರಿಚಯ ಮಾಡಿಕೊಡುವ ಯತ್ನ ಮಾಡಿತು. ಬಹಿರಂಗವಾಗಿ ಎಂದೂ ಕಾಣಿಸಿಕೊಳ್ಳದಿದ್ದ ಸಾಧು-ಸಂತರೂ ಸಿನಿಮಾ ಮಂದಿರದಲ್ಲಿ ಕುಳಿತು ಚಿತ್ರ ವೀಕ್ಷಿಸಿದರು. ಈ ಚಿತ್ರದ ಕಥೆ ಮುಗಿಸಲು ಪ್ರಯತ್ನಿಸಿದವರೆಲ್ಲ ಮುಖ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿಗೆ ಬಂದರು. ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ಪ್ರತಿಕ್ರಿಯೆ ಭಿನ್ನವೇ ಆಯ್ತು. ಸ್ವತಃ ಸಾಧುಗಳು ಮನೆಗೆ ಬಂದು ಸಾಂತ್ವನ ಹೇಳಿದರು. ಹಿಜಾಬ್ನ ಗಲಾಟೆಗೆ ಯಾವ ಸಂಘಟನೆಗಳ ಪ್ರಯತ್ನವೂ ಇಲ್ಲದೇ ಹೆಣ್ಣುಮಕ್ಕಳು ತಾವೇ ತಾವಾಗಿ ಕೇಸರಿ ಶಾಲಿನ ಪ್ರತಿಕ್ರಿಯೆ ನೀಡಿದ್ದು ಇತಿಹಾಸದಲ್ಲಿ ಹಿಂದೆಂದೂ ನಡೆಯದಿದ್ದ ಸಂಗತಿ. ಹಿಜಾಬ್ನ ವಿವಾದ ಹಲಾಲ್ಗೆ ತಿರುಗಿ ಆರ್ಥಿಕ ಬಹಿಷ್ಕಾರದ ಸ್ವರೂಪವನ್ನು ಪಡೆದುಕೊಂಡಿದ್ದಂತೂ ಊಹಿಸಿಯೂ ಇರದಿದ್ದ ಸಂಗತಿ. ಹೇಳಿದೆನಲ್ಲ, ಇವರುಗಳೆಲ್ಲ ಸೇರಿಕೊಂಡು ಮೋದಿಯನ್ನು ತೆಗಳಿದಷ್ಟೂ, ಹಿಂದೂಧರ್ಮವನ್ನು ಜರಿದಷ್ಟೂ ಸನಾತನಿಗಳ ಒಗ್ಗಟ್ಟು ಹೆಚ್ಚುತ್ತಲೇ ನಡೆದಿದೆ!
ಎಷ್ಟರಮಟ್ಟಿಗೆ ಜನ ಇಂಗ್ಲಿಷ್ ಮಾಧ್ಯಮಗಳನ್ನು ನಂಬುವುದನ್ನು ಬಿಟ್ಟಿದ್ದಾರೆಂದರೆ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ ಎಂದು ಮಾಧ್ಯಮಗಳು, ಕಾಂಗ್ರೆಸ್ನ ರಾಜಕಾರಣಿಗಳು ಹೇಳಿದರೂ, ಜನರಿಂದ ತಣ್ಣನೆ ಪ್ರತಿಕ್ರಿಯೆ. ಏಕೆಂದರೆ ಬೆಲೆ ಏರಿಕೆಯ ವಿಚಾರದಲ್ಲಿ ಮೋದಿ ವಿರುದ್ಧ ಅರಚಾಡುತ್ತಿರುವ ಈ ಮಂದಿ ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬುಗಳಲ್ಲೆಲ್ಲ ಪೆಟ್ರೋಲ್ ಬೆಲೆ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಸಾಕಷ್ಟು ಹೆಚ್ಚಾಗಿದೆ ಎಂಬ ಸಂಗತಿಯನ್ನು ಮರೆಮಾಚುತ್ತಿದ್ದಾರೆ ಎಂಬುದನ್ನು ಅರಿತಿದ್ದಾರೆ. ಬಿಜೆಪಿ ರಾಜ್ಯಗಳು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಜನರ ಮೇಲಿನ ಹೊರೆ ಇಳಿಸಲು ಯತ್ನಿಸಿದರೆ ಕಾಂಗ್ರೆಸ್ ಶಾಸಿತ ರಾಜ್ಯಗಳು ಈ ಕುರಿತು ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ.
ಕಾಂಗ್ರೆಸ್ಸಿಗರ ಹೊಟ್ಟೆಯುರಿಗೆ ಇನ್ನೊಂದಷ್ಟು ತುಪ್ಪ ಸುರಿಯುವಂತೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನ ಬಡತನದ ಕುರಿತಾದ ವರದಿ ಬಂದಿದೆ. ಕರೊನಾ ಸಂದರ್ಭದಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಅತೀವ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಹೆಚ್ಚಿದ್ದರೆ, ಭಾರತದಲ್ಲಿ ಆ ಪ್ರಮಾಣ ಕಡಿಮೆಯಾಗಿದೆ! ಇದಕ್ಕೆ ಕಾರಣ ಮೋದಿಯ ಆಹಾರ ಸುರಕ್ಷತೆಯ ಯೋಜನೆಗಳು. ಪ್ರತಿಯೊಬ್ಬ ವ್ಯಕ್ತಿಗೂ ಸೂಕ್ತವಾಗಿ ಸರ್ಕಾರದಿಂದ ತಲುಪಿಸಬೇಕಾದ ಧಾನ್ಯ ತಲುಪಿಸುವಲ್ಲಿ ಮತ್ತು ನೇರವಾಗಿ ಸೌಲಭ್ಯಗಳನ್ನು ತಲುಪಿಸುವಲ್ಲಿ ತೆಗೆದುಕೊಂಡ ಕ್ರಮಗಳು ಅಚ್ಚರಿ ಹುಟ್ಟಿಸುವಂಥವಾಗಿದ್ದವು. ಹಾಗೆಂದು ವರದಿ ಹೇಳುತ್ತದೆ. ಕೊನೆಯ ವ್ಯಕ್ತಿಯವರೆಗೂ ತಲುಪಬೇಕಾದ ಧಾನ್ಯ ತಲುಪಿ ಆತ ಬಡತನಮುಕ್ತನಾಗಿದ್ದಾನೆ ಎಂದೆಲ್ಲ ಹೇಳಿರುವ ವರದಿ ಇನ್ನುಮುಂದೆ ಭಾರತದ ಬಡತನ ರೇಖೆಯನ್ನು ತಿಂಗಳಿಗೆ ಒಬ್ಬ ವ್ಯಕ್ತಿಗೆ 860 ರೂಪಾಯಿಯಿಂದ ಮೇಲೇರಿಸಿ 1500ರ ಆಸುಪಾಸಿಗೆ ತರಲು ನಿಶ್ಚಯಿಸಿದೆ. ಪೆಟ್ರೋಲ್ ಬೆಲೆ ಹೆಚ್ಚಿರಬಹುದು, ಆದರೆ ಬಡತನ ಕಡಿಮೆಯಾಗಿದೆಯಲ್ಲ. ‘ಬಡತನ ತೊಲಗಿಸಿ’ ಎಂದು ಘೊಷಣೆ ಮಾಡಿಕೊಂಡೇ ತಿರುಗಾಡುತ್ತಿದ್ದ ಕಾಂಗ್ರೆಸ್ಸಿಗರು ಬಡವರ ನಾಶವನ್ನೇ ಮಾಡಿದ್ದರು. ಮೋದಿ ಉದ್ಯೋಗವನ್ನು ಕೊಟ್ಟಿದ್ದಾರೆ, ನೇರವಾಗಿ ಅವರ ಕೈಗೆ ಹಣ ಸಿಗುವಂತೆ ಮಾಡಿದ್ದಾರೆ, ಮನೆ ಕಟ್ಟಿಕೊಟ್ಟಿದ್ದಾರೆ, ಶೌಚಗೃಹಗಳ ನಿರ್ಮಾಣ ಮಾಡಿಕೊಟ್ಟಿದ್ದಾರೆ, ಅಡುಗೆಮನೆಗೆ ನೀರು ತಲುಪಿಸಿದ್ದಾರೆ ಮತ್ತು ಅಡುಗೆಗೆ ಸಿಲಿಂಡರ್ ಕೊಟ್ಟಿದ್ದಾರೆ. ಮತ್ತೇನು ಬೇಕು ಹೇಳಿ? ಐಎಮ್ಫ್ನ ವರದಿ ಇವೆಲ್ಲವನ್ನೂ ಗಮನಿಸಿ ಮೋದಿಗೆ ಶಹಭಾಷ್ಗಿರಿ ಕೊಟ್ಟಿದೆ. ಮಾಧ್ಯಮಗಳು ಮೋದಿಯನ್ನು ತೆಗಳುವ ವೇಳೆಗೆ ಅವರನ್ನು ಕಾಣಲು ಬರುವ ಇಂಗ್ಲೆಂಡು, ರಷ್ಯಾ, ಜಪಾನ್, ಚೀನಾ, ಫ್ರಾನ್ಸ್, ಜರ್ಮನಿ ಮೊದಲಾದ ರಾಷ್ಟ್ರಗಳ ಪ್ರಮುಖರನ್ನು ನೋಡುವ ಜನ ಅಂತರಂಗವನ್ನು ಅರಿತುಕೊಳ್ಳದೇ ಇರುವುದಿಲ್ಲ. ಹೀಗಾಗಿ 2024ರಲ್ಲೂ ಜನರ ಹೃದಯದಿಂದ ಅವರನ್ನು ದೂರ ಮಾಡುವುದು ಮಾಧ್ಯಮಗಳಿಗೆ ಸುಲಭವಿಲ್ಲ. ಚುನಾವಣೆಗೂ ಮುನ್ನ ಒಂದಷ್ಟು ಸುಳ್ಳುಸುದ್ದಿ ಹರಡಿಸಿ ಫಲಿತಾಂಶದ ದಿನ ಸೂತಕದ ಮನೆಯಲ್ಲಿ ಕುಳಿತವರಂತೆ ಕೂರುವುದಷ್ಟೇ ಅವರ ಕೆಲಸ.
ನೆನಪಿಡಿ, ಭಾರತ ಪುನರ್ನಿರ್ಮಾಣವಾಗುತ್ತಿದೆ. ಶತ್ರುಗಳನ್ನು ಎದುರಿಸಿ ಗೆಲ್ಲಲು ನಾವು ಸಜ್ಜಾಗಬೇಕಿದೆ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)