ಅಂಕಣ

ನಮೋ ಕಾಶ್ಮೀರ ಈಗ ಹೇಗಿದೆ ಗೊತ್ತಾ?

Webdesk - Ravikanth
ಪ್ರವಾಸೋದ್ಯಮ, ಜಲವಿದ್ಯುತ್ತು, ಆರೋಗ್ಯ, ಶಿಕ್ಷಣವೂ ಸೇರಿದಂತೆ 14 ಕ್ಷೇತ್ರಗಳನ್ನು ಗುರುತಿಸಿದ ಕೇಂದ್ರ ಸರ್ಕಾರ 2021ರಲ್ಲಿ 456 ಎಂಒಯುಗಳ ಮೂಲಕ 23 ಸಾವಿರ ಕೋಟಿ ರೂ.ಗಳನ್ನು ರಾಜ್ಯಕ್ಕೆ ಹರಿಸಿತು. ಏಳು ಮೆಡಿಕಲ್ ಕಾಲೇಜುಗಳನ್ನು ನಿರ್ವಿುಸುವ ಭರವಸೆ ಕೊಟ್ಟಿದ್ದ ಮೋದಿ 3 ವರ್ಷಗಳಲ್ಲಿ ಅದಾಗಲೇ 4 ಕಾಲೇಜುಗಳ ನಿರ್ಮಾಣ ಮಾಡಿಯೂಬಿಟ್ಟಿದ್ದಾರೆ.

ಆರ್ಟಿಕಲ್ 370 ತೆಗೆಯುವುದು ಕನಸಿನ ಮಾತಾಗಿತ್ತು. ಒಲ್ಲದ ಮನಸ್ಸಿನಿಂದಲೇ ಸಂವಿಧಾನ ರಚಿಸಿದವರು ಈ ಅವಕಾಶವನ್ನು ನೀಡಿದರು. ಹೀಗಾಗಿಯೇ ಇದೊಂದು ತಾತ್ಕಾಲಿಕ ಕೊಡುಗೆ ಎಂಬುದನ್ನು ಅವರು ಸೇರಿಸಲು ಮರೆಯಲಿಲ್ಲ. ಆದರೇನು? ಕಾಶ್ಮೀರದ ನಾಯಕರಿಗೆ ಬಿಟ್ಟಿ ಉಣ್ಣುವ ಮತ್ತು ಅವರನ್ನು ಬಲವಾಗಿ ಹಿಡಿದಿಟ್ಟುಕೊಳ್ಳುವ ಅಭ್ಯಾಸ ನಮ್ಮವರಿಗೆ ಆಗಿಹೋಗಿದೆ. ಹೀಗಾಗಿಯೇ ಅದನ್ನು ಬದಲಾಯಿಸುವ ಧೈರ್ಯವನ್ನು ಯಾರೂ ತೋರಲೇ ಇಲ್ಲ. ಆರ್ಟಿಕಲ್ 370ರೊಂದಿಗೆ ಜಮ್ಮು-ಕಾಶ್ಮೀರ ಭಾರತದೊಳಗೇ ಇದ್ದೂ ಪ್ರತ್ಯೇಕ ರಾಷ್ಟ್ರವಾಗಿತ್ತು. ಅಲ್ಲಿನ ಮುಖ್ಯಮಂತ್ರಿ ‘ಪ್ರಧಾನಮಂತ್ರಿ’ ಎಂದು ಕರೆಸಿಕೊಳ್ಳಲ್ಪಡುತ್ತಿದ್ದರು. ಅವರಿಗೊಂದು ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಧ್ವಜವೂ ಇತ್ತು! ಅಲ್ಲಿನ ನಾಯಕರು ದೆಹಲಿಗೆ ಬಂದಾಗ ‘ಹಿಂದೂಸ್ಥಾನಕ್ಕೆ ಜೈ’ ಎಂತಲೂ ಕಾಶ್ಮೀರಕ್ಕೆ ಹೋದೊಡನೇ ‘ಪಾಕಿಸ್ತಾನಕ್ಕೆ ಜೈ’ ಎಂತಲೂ ಹೇಳುತ್ತಿದ್ದರು. 70ರ ದಶಕದಲ್ಲಿ ಕಾಂಗ್ರೆಸ್ಸಿಗರೇ ಜಮ್ಮುವಿನಲ್ಲಿ ಪ್ರತ್ಯೇಕತಾವಾದಿಗಳ ಬಿಸಿಯನ್ನು ಅನುಭವಿಸಿದ್ದುಂಟು. ಆದರೆ ಜನಸಾಮಾನ್ಯರು ಏನೂ ಮಾಡುವಂತಿರಲಿಲ್ಲ. ರಾಜಾ ಹರಿಸಿಂಗನ ಪರಿವಾರದವರು ಕಾಂಗ್ರೆಸ್ ಸೇರಿಕೊಂಡುಬಿಟ್ಟಿದ್ದರು ಮತ್ತು ಶೇಖ್ ಕುಟುಂಬ ಕಾಂಗ್ರೆಸ್ಸಿನ ಕುಟುಂಬಕ್ಕೆ ಬಹಳ ಹತ್ತಿರವಾಗಿತ್ತು. ಜನಸಾಮಾನ್ಯರ ದನಿಗೆ ಬೆಂಬಲ ಕೊಡುವವರು ಯಾರಾದರೂ ಬೇಕಿತ್ತಲ್ಲ, ಒಂದರ್ಥದಲ್ಲಿ ಜನರ ದನಿಗೆ ಜೊತೆಯಾದವರು ನರೇಂದ್ರ ಮೋದಿಯೇ. ಪ್ರವಾಹ ಪೀಡಿತ ಕಾಶ್ಮೀರಕ್ಕೆ ಅವರು ಸ್ಪಂದಿಸಿದ ರೀತಿ, ಅಲ್ಲಿನ ತರುಣರಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟಂಥ ರೀತಿ, ಇವೆಲ್ಲವೂ ಜನರ ಮನಸೂರೆಗೊಂಡಿತು.

ಶ್ರೀನಗರದಲ್ಲಿ ಅಧಿಕಾರದ ಪಡಸಾಲೆಯಲ್ಲೇ ತಿರುಗಾಡಿಕೊಂಡಿದ್ದು ತಿಂದು ಕೊಬ್ಬಿದ್ದ ಕೆಲವು ಮಂದಿ ಮಾತ್ರ ಸೇನೆಯ ವಿರುದ್ಧ ಕೂಗಾಡುವ, ಮೋದಿಯ ವಿರುದ್ಧ ಅರಚಾಡುವ ಕೆಲಸ ಮಾಡುತ್ತಿದ್ದರು. ಮೋದಿ ಯಾರಿಗೂ ಸೊಪ್ಪು ಹಾಕಲಿಲ್ಲ. ಎರಡನೇ ಬಾರಿಗೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪೂರ್ಣ ತಯಾರಿಯೊಂದಿಗೆ ಆರ್ಟಿಕಲ್ 370ನ್ನು ತೆಗೆದು ಹಾಕಿದರು. ಆರ್ಟಿಕಲ್ 370 ತೆಗೆದ ಮೂರು ವರ್ಷಗಳ ನಂತರ ಕಳೆದ ವಾರವಷ್ಟೇ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ಕೊಟ್ಟರು. ಅಲ್ಲಿನ ಪಲ್ಲಿ ಗ್ರಾಮ ಪಂಚಾಯಿತಿ ದೇಶದ ಮೊದಲ ಕಾರ್ಬನ್ ನ್ಯೂಟ್ರಲ್ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ದ್ದನ್ನು ಸಂಭ್ರಮಿಸಲೆಂದೇ ಅವರು ಅಲ್ಲಿಗೆ ಹೋಗಿದ್ದು. ಇಷ್ಟೂ ದಿನಗಳ ಕಾಲ ದೇಶದ ತೆರಿಗೆದಾರರ ಹಣವನ್ನುಂಡು ಬೆಳೆದಿದ್ದ ಕಾಶ್ಮೀರ ಈಗ ದೇಶದ ಮೊದಲ ಸೌರಶಕ್ತಿ ಬಳಕೆಯ ಗ್ರಾಮದ ನಿರ್ಮಾಣ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆರ್ಟಿಕಲ್ 370 ತೆಗೆದ ನಂತರ ಬದಲಾವಣೆ ಏನು ಬಂತು ಎಂದು ಅಳೆಯಲು ಇದೊಂದು ಮಾನದಂಡವೇ ಸಾಕು. ಆದರೂ ಬಂದಿರುವ ಬದಲಾವಣೆಗಳ ಪಟ್ಟಿಯೆಡೆಗೆ ಗಮನ ಹರಿಸಿದರೆ ನೀವು ಅಚ್ಚರಿಯಾಗುವುದು ಖಾತ್ರಿ!

2019ರಲ್ಲಿ ಈ ವಿಧಿಯನ್ನು ಹಿಂಪಡೆಯಲಾಯಿತಲ್ಲವೇ? ಅದಾದ ಒಂದು ವರ್ಷದಲ್ಲೇ ಭಯೋತ್ಪಾದಕ ದಾಳಿ ಶೇಕಡ 60ರಷ್ಟು ಕಡಿಮೆಯಾಯ್ತು. ಮುಂದಿನ ವರ್ಷದ ವೇಳೆಗೆ ಅದು ಮತ್ತೂ 32 ಪ್ರತಿಶತದಷ್ಟು ಕುಂಠಿತಗೊಂಡಿತು. ಒಟ್ಟಾರೆ ಲೆಕ್ಕ ಹಾಕಿದರೆ ಸುಮಾರು ಮುಕ್ಕಾಲು ಭಾಗದಷ್ಟು ಭಯೋತ್ಪಾದಕ ಚಟುವಟಿಕೆಗಳು ಈಗ ಇಲ್ಲವಾದಂತೆ. ಈ ಎರಡು ವರ್ಷಗಳಲ್ಲಿ ಭಯೋತ್ಪಾದಕ ದಾಳಿಗೆ ತೀರಿ ಕೊಂಡವರ ಸಂಖ್ಯೆ 60ನ್ನೂ ದಾಟಲಿಲ್ಲ. ಜಮ್ಮು-ಕಾಶ್ಮೀರ ಪೊಲೀಸರ ಸಾವಿನಲ್ಲಿ 33 ಪ್ರತಿಶತ ಕಡಿತ ಕಂಡುಬಂತು. ಪಾಕಿಸ್ತಾನದ ಅಪ್ರಚೋದಿತ ದಾಳಿ ಶೇ.90ರಷ್ಟು ಇಳಿಮುಖವಾಯ್ತು. ಎನ್​ಐಎ ಭಯೋತ್ಪಾದಕರ ಹಣದ ಮೂಲವನ್ನು ಅರಸುತ್ತ ಹೊರಟಮೇಲೆ ಅನೇಕರು ಬಲೆಗೆ ಬಿದ್ದುದರ ಪರಿಣಾಮವಾಗಿ ಸ್ಥಳೀಯ ಪುಂಡರ ಕಾಟ ಈಗ ಇಲ್ಲವಾಗಿದೆ. ಮೆಹಬೂಬ ಮುಫ್ತಿಯ ಆಪ್ತನಾಗಿದ್ದ ವಹೀರ್- ಉರ್-ರೆಹಮಾನ್ ಎನ್​ಐಎ ಕೈಗೆ ಸಿಕ್ಕುಬಿದ್ದು ಕಲ್ಲೆಸೆಯುವವರಿಗೆ ಹಣ ಒದಗಿಸುತ್ತಿದ್ದುದು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಶಸ್ತ್ರ ತಲುಪಿಸುತ್ತಿದ್ದುದು ಆತನೇ ಎಂಬುದು ಬೆಳಕಿಗೆ ಬಂತು. ಅಲ್ಲಿಗೆ ಸಪ್ಲೆ ೖ ಲೈನ್ ತುಂಡರಿಸಿದ್ದುದರಿಂದಾಗಿ ಅಸ್ತವ್ಯಸ್ತಗೊಂಡ ಭಯೋತ್ಪಾದಕ ಚಟುವಟಿಕೆ ತಲೆ ಎತ್ತಲಾಗದಂತೆ ಮಲಗಿಕೊಂಡಿತು. ಪೊಲೀಸರಂತೂ ಕಲ್ಲೆಸೆಯುವ ಕೇಸಿನಲ್ಲಿ ಸಿಕ್ಕುಬಿದ್ದ ತರುಣನಿಗೆ ಪಾಸ್​ಪೋರ್ಟ್ ನಿರಾಕರಿಸುವ ಮಾಡುವ ಮೂಲಕ ಅವನ ವಿದೇಶದ ಕನಸಿಗೆ ತಣ್ಣೀರೆರೆಚ ಲಾರಂಭಿಸಿದರು. ಹೀಗಾಗಿ ಧೈರ್ಯವಾಗಿ ಕಲ್ಲೆಸೆಯಲೂ ಈಗ ಯಾರೂ ಬರುತ್ತಿಲ್ಲ!

ಕಠೋರ ನಿಯಮಗಳ ಮೂಲಕ ಜನರನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಿದ ಮೋದಿ ವಿಕಾಸದ ದಾಪುಗಾಲನ್ನಿಡುವ ಮೂಲಕ ಜನರ ವಿಶ್ವಾಸವನ್ನೂ ಗಳಿಸಿಬಿಟ್ಟರು. ಆರ್ಟಿಕಲ್ 370ನ್ನು ತೆಗೆದೊಡನೆ ಜಮ್ಮು-ಕಾಶ್ಮೀರ್ ಇನ್ಪ್ರಾ ಡೆವಲಪ್​ವೆುಂಟ್ ಫೈನಾನ್ಸ್ ಕಾರ್ಪೆರೇಷನ್ ಆರಂಭಿಸಿದ ಸರ್ಕಾರ ಶೇಕಡ 27ರಷ್ಟಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಶೇ.54ಕ್ಕೇರಿಸಿತು. ಶ್ರೀನಗರದ ಫ್ಲೈ ಓವರ್​ಗಳು, ರಸ್ತೆಗಳು ವೇಗವಾಗಿ ನಿರ್ಮಾಣ ಗೊಂಡವು. ಜಮ್ಮು-ಅಖ್​ನೂರ್, ಚೆನಾನಿ-ಸುದ್​ವುಹಾದೇವ್ ರಸ್ತೆಗಳ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಪ್ರವಾಸೋದ್ಯಮ, ಜಲವಿದ್ಯುತ್ತು, ಆರೋಗ್ಯ, ಶಿಕ್ಷಣವೂ ಸೇರಿದಂತೆ 14 ಕ್ಷೇತ್ರಗಳನ್ನು ಗುರುತಿಸಿದ ಸರ್ಕಾರ 2021ರಲ್ಲಿ 456 ಎಂಒಯುಗಳ ಮೂಲಕ 23 ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ಹರಿಸಿತು. ಏಳು ಮೆಡಿಕಲ್ ಕಾಲೇಜುಗಳನ್ನು ನಿರ್ವಿುಸುವ ಭರವಸೆ ಕೊಟ್ಟಿದ್ದ ಮೋದಿ ಮೂರು ವರ್ಷಗಳಲ್ಲಿ ಅದಾಗಲೇ ನಾಲ್ಕು ಕಾಲೇಜುಗಳ ನಿರ್ಮಾಣ ಮಾಡಿಯೂಬಿಟ್ಟಿದ್ದಾರೆ, 500ಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳನ್ನು ಜನರಿಗೆ ಮುಕ್ತವಾಗಿಸಿದ್ದಾರೆ. 25 ಸಾವಿರ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಹೆಚ್ಚುವರಿಯಾಗಿ ದೊರೆಯುವಂತೆ ನೋಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ 40 ಸಾವಿರಕ್ಕೂ ಹೆಚ್ಚು ಯೋಜನೆಗಳು ಪೂರ್ಣ ಕಾರ್ಯಗತಗೊಂಡಿವೆ.

ಆರ್ಟಿಕಲ್ 370 ತೆಗೆಯುವ ಮುನ್ನ ಸ್ವತಃ ಮೋದಿ ಸರ್ಕಾರ ಹತ್ತು ಸಾವಿರ ಯೋಜನೆಗಳನ್ನು ಪೂರೈಸುವಲ್ಲಿ ಸೋತಿತ್ತು. ಏಕೆ ಗೊತ್ತೇ? ಯೋಜನೆಗಳನ್ನು ನಿರ್ವಹಿಸಬಲ್ಲ ಸಮರ್ಥ ಅಧಿಕಾರಿಗಳ ಕೊರತೆ. ಒಂದೆಡೆ ಮೆಹಬೂಬ ಮತ್ತು ಅಬ್ದುಲ್ಲ ಪರಿವಾರಗಳ ಆಪ್ತರೇ ನೌಕರಿಯಲ್ಲಿರುವುದು, ಮತ್ತೊಂದು ಐಎಎಸ್, ಐಪಿಎಸ್ ಅಧಿಕಾರಿಗಳ ಅನುಪಾತ ಬೇರೆ ರಾಜ್ಯಗಳಿಗಿಂತ ಭಿನ್ನವಾಗಿರುವಂತೆ ಕಾಂಗ್ರೆಸ್ಸು ನಿಯಮ ತಂದಿರುವುದು. ಇತರ ರಾಜ್ಯಗಳಲ್ಲಿ ಶೇ.33ರಷ್ಟು ಸ್ಥಳೀಯರಿರಬೇಕು ಎನ್ನುವ ನಿಯಮವಾದರೆ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಇದನ್ನು ಶೇ.50ಕ್ಕೆ ಕಾಂಗ್ರೆಸ್ಸು ಏರಿಸಿತ್ತು. ಮೋದಿ ಇತರ ರಾಜ್ಯಗಳಂತೆ ಇಲ್ಲೂ ನಿಯಮವನ್ನು ರೂಪಿಸಿ ಅರುಣಾಚಲ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಇಲ್ಲಿ ಬಂದು ಕೆಲಸ ಮಾಡುವಂತೆ ವ್ಯವಸ್ಥೆ ಮಾಡಿದರು. ಅಲ್ಲಿಗೆ ರೂಪಿಸಲ್ಪಟ್ಟ ಯೋಜನೆಗಳು ಕೊನೆಯ ವ್ಯಕ್ತಿಯವರೆಗೂ ಮುಟ್ಟುವ ವಾತಾವರಣ ನಿರ್ವಣವಾಯ್ತು!

ಹೆಚ್ಚು-ಹೆಚ್ಚು ರಾಷ್ಟ್ರೀಯತೆಯೆಡೆಗೆ ಹೋದಂತೆ ಲಾಭವಾಗುವುದು ಮುಸ್ಲಿಂ ಹೆಣ್ಣುಮಕ್ಕಳಿಗೇ. ಆರ್ಟಿಕಲ್ 370 ಹೋಗುತ್ತಿದ್ದಂತೆ ಕಾಶ್ಮೀರದ ಹೆಣ್ಣುಮಗಳ ಅಧಿಕಾರ ಹೆಚ್ಚು ಗಟ್ಟಿಯಾಯ್ತು. ಆಕೆ ಮದುವೆಯಾಗಿ ಹೊರರಾಜ್ಯಕ್ಕೆ ಹೋದರೆ ಕಾಶ್ಮೀರದ ಮೇಲಿನ ಮತ್ತು ತನ್ನ ಪರಿವಾರದ ಮೇಲಿನ ಎಲ್ಲ ಹಕ್ಕುಗಳನ್ನೂ ಕಳೆದುಕೊಳ್ಳುತ್ತಿದ್ದಳು. ಈಗ ಅವೆಲ್ಲವೂ ಮರಳಿ ಬಂತು. ಜೊತೆಗೆ ಜಮ್ಮು-ಕಾಶ್ಮೀರದಲ್ಲೇ ಇದ್ದು ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಿಂದ ಬಂದಿದ್ದ ದಲಿತರನ್ನು ನಾಗರಿಕತೆಯನ್ನೂ ಕೊಡದೇ ಹೀನಾಯವಾಗಿ ಕಾಣಲಾಗುತ್ತಿತ್ತಲ್ಲ, ಅವರಿಗೆಲ್ಲ ಏಕಾಕಿ ನಾಗರಿಕ ಹಕ್ಕುಗಳು ದೊರೆತವು. ಸಹಜವಾಗಿ ಇದು ಬಹುಸಂಖ್ಯಾತರೆಂದು ಬೀಗುತ್ತಿದ್ದ ಮುಸಲ್ಮಾನರ ಶಕ್ತಿಯನ್ನು ಕುಂದಿಸಿತಲ್ಲದೆ, ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು. ಒಂದೆಡೆ ಭಯೋತ್ಪಾದಕ ದಾಳಿ ತೀವ್ರ ಪ್ರಮಾಣದಲ್ಲಿ ಕಡಿಮೆಯಾದರೆ ಮತ್ತೊಂದೆಡೆ ಅಭಿವೃದ್ಧಿ ಕಾರ್ಯಗಳಿಂದಾಗಿ ಜಮ್ಮು-ಕಾಶ್ಮೀರದ ಚಹರೆ ಬದಲಾಯ್ತು. ಇದರ ಪರಿಣಾಮವಾಗಿಯೇ 2021ರ ಅಕ್ಟೋಬರ್​ನಿಂದ 2022ರ ಜನವರಿಯವರೆಗೂ 50 ಲಕ್ಷ ಜನ ಯಾತ್ರಿಕರು ಕಾಶ್ಮೀರಕ್ಕೆ ಬಂದರು. ಇದು ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದುಬಿಟ್ಟಿತು. ದುಡ್ಡು ಸಂಪಾದಿಸಲು ಕಲ್ಲೆಸೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಕಾಶ್ಮೀರದ ಯುವಕ ಈಗ ದುಡಿದು ಸಂಪಾದಿಸಿ ಗೌರವದ ಬದುಕು ಆರಂಭಿಸಿದ್ದಾನೆ. ಸದಾ ಪ್ರಚೋದಿಸುವ ಕೆಲಸ ಮಾಡುತ್ತಿದ್ದ ಪಾಕಿಸ್ತಾನವು ಸಿಂಧ್, ಬಲೂಚ್​ಗಳಲ್ಲಿ ಪ್ರತ್ಯೇಕತಾವಾದಿಗಳು ಸೃಷ್ಟಿಸಿದ್ದ ಕಿರಿಕಿರಿಯನ್ನು ತಾಳಲಾರದೇ ಹೈರಾಣಾಗಿಹೋಗಿತ್ತು. ತನ್ನೊಳಗೇ ಉಂಟಾದ ರಾಜಕೀಯ ಸ್ಥಿತ್ಯಂತರದ ತಾಪದಲ್ಲಿ ಬೇಯುತ್ತಿರುವ ಪಾಕಿಸ್ತಾನ ಕಾಶ್ಮೀರಕ್ಕೆ ಸಹಾಯ ಮಾಡುವುದಿರಲಿ ಕಣ್ಣೆತ್ತಿ ನೋಡಲಾಗದ ಸ್ಥಿತಿಗೆ ತಲುಪಿತು.

ಇವೆಲ್ಲದರ ನೇರ ಲಾಭ ಪಂಡಿತರಿಗೇ. ಅದಾಗಲೇ ಸುಮಾರು 4600 ಪಂಡಿತರ ಖಾಲಿ ಹುದ್ದೆಗಳನ್ನು ತುಂಬಲಾಗಿದೆ. ಸಾವಿರಕ್ಕೂ ಹೆಚ್ಚು ಜನರಿಗೆ ಉಳಿದುಕೊಳ್ಳುವ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗಿದೆ. ಪ್ರಾಮಾಣಿಕವಾದ ಮಾರ್ಗದ ಮೂಲಕ ಸುಮಾರು ಹನ್ನೊಂದು ಸಾವಿರ ಜನರಿಗೆ ಉದ್ಯೋಗ ಕೊಡಿಸಿದುದರ ಪರಿಣಾಮವಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ. ಈವರೆಗೂ 3800ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ಕುಟುಂಬಗಳು ಮರಳಿವೆ. 35 ಲಕ್ಷ ಮಂದಿ ಡೊಮಿಸೈಲ್ ಬೇಕೆಂದು ಅರ್ಜಿ ಸಲ್ಲಿಸಿದ್ದು ಹೆಚ್ಚು-ಕಡಿಮೆ 32 ಲಕ್ಷ ಜನರಿಗೆ ಅದು ಸಿಕ್ಕಿದೆ! ಇವೆಲ್ಲ ಸದ್ದಿಲ್ಲದೇ ನಡೆದ ಕ್ರಾಂತಿ. ದೂರದಲ್ಲಿ ಕುಳಿತ ನಮಗೆ ಕಾಶ್ಮೀರಕ್ಕೆ ಪಂಡಿತರು ವಲಸೆ ಹೋಗಿಬಿಡಬೇಕು ಎಂಬ ಧಾವಂತವಿದೆ. ಮೋದಿ ನೋಡಿಕೊಳ್ಳುತ್ತಾರಲ್ಲ ಎಂದು ಭರವಸೆಯನ್ನೂ ಕೊಟ್ಟುಬಿಡುತ್ತೇವೆ. ಆದರೆ, ಪಕ್ಕದ ಮನೆಯ ಗಂಜು ಅಕ್ಕಿಯ ಡಬ್ಬಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ಮುಸಲ್ಮಾನನೇ ಭಯೋತ್ಪಾದಕನಿಗೆ ಕಣ್ಸನ್ನೆ ಮಾಡಿದ್ದು, ಜೊತೆಯಲ್ಲಿ ಕೆಲಸ ಮಾಡುವ ಗಿರಿಜಾ ಟಿಕೂವನ್ನು ಸಹೋದ್ಯೋಗಿ ಮುಸಲ್ಮಾನನೇ ಅಪಹರಿಸಿ ಬಲಾತ್ಕಾರ ಮಾಡಿದ್ದು, ಸಹೋದ್ಯೋಗಿಯೇ ಕಚೇರಿಯಿಂದ ಹೊರಟ ಲಸ್ಸಾ ಕೌಲ್​ರ ವಿವರ ಕೊಟ್ಟು ಕೊಲ್ಲಿಸಿದ್ದು ಇವೆಲ್ಲವೂ ಇನ್ನೂ ಹಚ್ಚ ಹಸಿರಾಗಿರುವಾಗ ಯಾವ ಪಂಡಿತ ತಾನೇ ಮರಳಿ ಹೋಗುವ ಧೈರ್ಯ ಮಾಡುತ್ತಾನೆ!

ಮೋದಿ ಭಿನ್ನ-ಭಿನ್ನ ಬೆತ್ತಗಳನ್ನು ಬಳಸಿ ಅಲ್ಲಿನ ಮಂದಿಯನ್ನು ತೆಪ್ಪಗಾಗಿಸಿದ್ದಾರೆ. ಪಾಕಿಸ್ತಾನ ತಮ್ಮ ಸಹಕಾರಕ್ಕೆ ಬರುತ್ತದೆಂಬ ಅವರ ನಂಬಿಕೆ ಈಗ ಹುಸಿಯಾಗಿದೆ. ತನಗೇ ತಿನ್ನಲು ಗತಿಯಿಲ್ಲದ ಪಾಕಿಸ್ತಾನ ಎಂತಹ ಸಹಕಾರ ಕೊಡಬಲ್ಲದು ಹೇಳಿ? ಚೀನಾ ಕಥೆಯೂ ಈಗ ಹಾಗೆಯೇ ಆಗಿದೆ. ಇನ್ನು ಆಂತರಿಕವಾಗಿ ಸಹಕಾರ ಮಾಡಬಹುದಾಗಿದ್ದ ಪ್ರತಿಪಕ್ಷದ ನಾಯಕರು ಸಿಬಿಐ, ಇಡಿಗಳಿಗೆ ಹೆದರಿ ಬಾಯ್ಮುಚ್ಚಿ ಕುಳಿತಿದ್ದಾರೆ. ಆದರೂ ಪಂಡಿತರು ಮರಳಿ ಹೋಗುವ ಕಾಲ ಇನ್ನೂ ಕೂಡಿಬಂದಿಲ್ಲ. ಮತ್ತೆ ಅವರನ್ನು ಕೊಲ್ಲಲಾಗುವುದಿಲ್ಲ ಎಂಬ ಭರವಸೆ ಬರುವವರೆಗೂ ಅವರು ಹೋಗುವುದು ಸಾಧ್ಯವೂ ಇಲ್ಲ. ಆದರೆ ಒಂದಂತೂ ಸತ್ಯ. ತಮ್ಮ ಕಾಲಾವಧಿಯಲ್ಲಿ ನರೇಂದ್ರ ಮೋದಿ ಪಂಡಿತರನ್ನು ಅಲ್ಲಿ ನೆಲೆಗೊಳಿಸುವಂತೆ ಮಾಡಿಯೇ ಮಾಡುತ್ತಾರೆ. ಅವರ ಹಠ ಸಾಮಾನ್ಯವಾದದ್ದಲ್ಲ. ಕಾಶ್ಮೀರಿ ಪಂಡಿತರು ತಮ್ಮ ರಾಜ್ಯ ಬಿಟ್ಟೋಡಿದ್ದು ಇದೇ ಮೊದಲ ಬಾರಿಯಲ್ಲ. ಇದು ಏಳನೇ ನರಸಂಹಾರ ಮತ್ತು ಪಲಾಯನ. ಪ್ರತೀಬಾರಿ ಹೀಗೆ ಕಾಶ್ಮೀರ ಬಿಟ್ಟೋಡಿದವರು ಸಮರ್ಥ ರಾಜನ ಕಾಲದಲ್ಲಿ ಮರಳಿ ಬಂದು ನೆಲೆನಿಂತ ಉದಾಹರಣೆಗಳಿವೆ. ಇತಿಹಾಸದ ಪುಟದಲ್ಲಿ ಮೋದಿಯೂ ಅಂಥದ್ದೇ ಸಮರ್ಥ ರಾಜರಾಗಿ ನೆನಪಿನಲ್ಲಿ ಉಳಿದುಬಿಡುತ್ತಾರೆ. ಈ ವ್ಯಕ್ತಿಗೆ ನಾವು ಅದೆಷ್ಟೇ ಋಣಿಯಾಗಿದ್ದರೂ ಕಡಿಮೆಯೇ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)