ಇತ್ತೀಚೆಗೆ ಬಿಜೆಪಿಯ ಚಿಂತನಾ ಬೈಠಕ್ನಲ್ಲಿ ಮುಸಲ್ಮಾನರಲ್ಲಿ ದೊಡ್ಡ ಪ್ರಮಾಣದಲ್ಲಿರುವ ಪಸ್ಮಂಡಾಗಳ ಕುರಿತಂತೆ ವಿಶೇಷ ಗಮನವೀಯುವ ಮಾತಾಡಲಾಯಿತು. ಇದಾದಮೇಲೆ ಅನೇಕ ಮಾಧ್ಯಮಗಳು ಪಸ್ಮಂಡಾಗಳ ಕುರಿತಂತೆ ಆಲೋಚಿಸಲಾರಂಭಿಸಿದವಲ್ಲದೇ ವಿಶೇಷ ವರದಿಗಳನ್ನು ಪ್ರಕಟಿಸಿದವು. ಸುಮಾರು ನೂರು ವರ್ಷಗಳ ಹೋರಾಟದ ನಂತರ, ಮುಸಲ್ಮಾನರಲ್ಲೇ ಹಿಂದುಳಿದ ದಲಿತ ವರ್ಗಕ್ಕೆ ಸೇರಿದ ಪಸ್ಮಂಡಾಗಳ ಕುರಿತ ಚರ್ಚೆ ಈಗ ವ್ಯಾಪಕವಾಗಿ ನಡೆಯುತ್ತಿದೆ. ಸಂತಸದ ಸಂಗತಿಯೇ. ತುಳಿತಕ್ಕೊಳಗಾದವರು ಯಾರೇ ಆಗಲಿ, ಎಲ್ಲೇ ಇರಲಿ, ಅವರ ಕುರಿತಂತೆ ಸಹಾನುಭೂತಿ, ಪ್ರೇಮ ಅತ್ಯಗತ್ಯ.
ಮುಸಲ್ಮಾನರಲ್ಲಿ ಜಾತಿಗಳೇ ಇಲ್ಲ ಎಂದು ಹೇಗೋ ನಮ್ಮನ್ನು ನಂಬಿಸಿಬಿಟ್ಟಿದ್ದಾರೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರರು ಈ ಮಾತನ್ನು ಒಪ್ಪಿರಲಿಲ್ಲ. ಮುಸಲ್ಮಾನರಲ್ಲಿನ ಸಹೋದರತ್ವದ ಕುರಿತಂತೆ ಅವರಿಗೆ ಅನುಮಾನ ಇದ್ದೇ ಇತ್ತು. ಒಂದೆಡೆಯಂತೂ ‘ಜೀತ ಮತ್ತು ಜಾತಿ ಇವೆರಡೂ ಅನಿಷ್ಟಗಳು. ಸರ್ಕಾರಗಳು ಕಾನೂನು ತಂದು ಜೀತವನ್ನೇನೋ ಮಟ್ಟಹಾಕಿವೆ. ಆದರೆ ಮುಸಲ್ಮಾನರಲ್ಲಿ ಜಾತಿ ಇನ್ನೂ ಹಾಗೆಯೇ ಉಳಿದುಕೊಂಡಿದೆ’ ಎಂದಿದ್ದರು. ಒಂದು ರೀತಿಯಲ್ಲಿ ದಲಿತರ ಪಾಲಿಗೆ ಮಸೀಹ ಆಗಿ ಕಂಡುಬಂದ ಕಾಂಶಿರಾಮ್ ‘ಮುಸಲ್ಮಾನರ ಐವತ್ತಕ್ಕೂ ಹೆಚ್ಚು ನಾಯಕರನ್ನು ಭೇಟಿಯಾದ ಮೇಲೆ ಭ್ರಮನಿರಸನವಾಯ್ತು, ಏಕೆಂದರೆ ಮೇಲ್ವರ್ಗದ ಸೈಯ್ಯದ್, ಶೇಖ್, ಮುಘಲ್, ಪಠಾನ್ಗಳು ಕೆಳವರ್ಗದ ಅನ್ಸಾರಿ, ಧುನಿಯಾ, ಖುರೇಷಿಗಳನ್ನು ಮುಂದೆ ಬರಲು ಬಿಡಲಾರರು. ನಾನು ದಲಿತ ವರ್ಗದಿಂದ ಮತಾಂತರಗೊಂಡವರಿಗಾಗಿ ಇನ್ನುಮುಂದೆ ಕೆಲಸ ಮಾಡುವೆ’ ಎಂದಿದ್ದರು. ಮುಸಲ್ಮಾನರಲ್ಲಿರುವ ಮೇಲ್ವರ್ಗ, ಕೆಳವರ್ಗದ ಈ ಗೊಂದಲ ಇಂದು ನಿನ್ನೆಯದಲ್ಲ. ಅರಬ್ಬರು, ತುರ್ಕರು ಆಕ್ರಮಣಕಾರಿಗಳಾಗಿ ಬಂದು ಇಲ್ಲಿ ನೆಲೆಸಿದರಲ್ಲ, ಅವರು ಸಹಜವಾಗಿಯೇ ಮೂಲ ಇಸ್ಲಾಂ ನೆಲೆಯಿಂದ ಬಂದವರಾದ್ದರಿಂದ ತಮ್ಮನ್ನು ಅಪ್ಪಟ ಮುಸಲ್ಮಾನರೆಂದು ಕರೆದುಕೊಂಡರು. ಇಲ್ಲಿ ಮತಾಂತರಗೊಂಡವರೆಲ್ಲ ಅವರಿಗಿಂತ ಕೆಳವರ್ಗದವರಾದರು. ಇಲ್ಲಿಯೂ ಎರಡು ವರ್ಗಗಳು ನಿರ್ವಣಗೊಂಡವು. ಮೇಲ್ವರ್ಗದಿಂದ ಮತಾಂತರಗೊಂಡವರು ತಮ್ಮದ್ದೇ ಬೇರೆ ಪಂಗಡವೆಂದುಕೊಂಡರೆ ದಲಿತರಿಂದ ಮತಾಂತರಗೊಂಡವರು ಅಲ್ಲಿಯೂ ಬಹಿಷ್ಕೃತರಾಗಿಯೇ ಉಳಿದರು. ವಿದೇಶದಿಂದ ಬಂದ ಮುಸಲ್ಮಾನರನ್ನು ಅಶ್ರಫ್ಗಳು ಎನ್ನಲಾಯ್ತು. ಪ್ರವಾದಿಯವರ ನೇರ ಪರಂಪರೆಗೆ ಸೇರಿದವರಿವರು ಎಂಬುದು ಅವರ ಹೆಗ್ಗಳಿಕೆ. ಸೈಯ್ಯದ್, ಸಿದ್ಧಿಖಿ, ಫಾರುಖಿ, ಪಠಾನ್, ಶೇಖ್ ಇವರೆಲ್ಲ ಸತ್ಕುಲ ಪ್ರಸೂತರೆನಿಸಿದರು. ಇನ್ನು ಭಾರತದಲ್ಲಿ ಮೇಲ್ವರ್ಗದಿಂದ ಮತಾಂತರಗೊಂಡವರು ಅಜ್ಲಫ್ಗಳಾದರೆ ದಲಿತ ವರ್ಗಕ್ಕೆ ಸೇರಿದವರನ್ನು ಅರ್ಜಾಲ್ಗಳೆಂದು ಕರೆಯಲಾಯ್ತು. ಇಷ್ಟಕ್ಕೇ ಮುಗಿಯದೇ ಇವರುಗಳಲ್ಲೂ ಅನೇಕ ಬಿರಾದರಿಗಳನ್ನು ಗುರುತಿಸಲಾಯ್ತು. ಈ ಬಿರಾದರಿಗಳು ಥೇಟು ನಮ್ಮಲ್ಲಿನ ಜಾತಿಗಳಿದ್ದಂತೆ. ನೇಕಾರರು ಅನ್ಸಾರಿಗಳಾದರೆ, ಕಟುಕರು ಖುರೇಷಿಗಳೆನಿಸಿದರು.
ಹಿಂದೂಧರ್ಮದಿಂದ ಇಸ್ಲಾಂ ಸ್ವೀಕಾರ ಮಾಡಿದ್ದರಷ್ಟೆ. ಆದರೆ ಇಲ್ಲಿಯೂ ವೃತ್ತಿ ಆಧಾರಿತ ಜಾತಿ ಮುಂದುವರಿಯಿತು. ಅಜ್ಲಫ್ಗಳು ಅರ್ಜಾಲ್ಗಳು ಸೇರಿದರೆ ಈ ದೇಶದ ಶೇಕಡಾ 85ರಷ್ಟು ಮುಸ್ಲಿಂ ಜನಸಂಖ್ಯೆ. ಅಶ್ರಫ್ಗಳು 15ರಷ್ಟು ಮಾತ್ರ. ಅಶ್ರಫ್ಗಳು ಅಜ್ಲಫ್ ಮತ್ತು ಅರ್ಜಾಲ್ಗಳನ್ನು, ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಸ್ಮಂಡಾಗಳನ್ನು ಶತಶತಮಾನಗಳಿಂದಲೂ ತಮ್ಮ ಅಂಕೆಯಲ್ಲಿಟ್ಟುಕೊಂಡೇ ಬಂದಿದ್ದಾರೆ. ಬಿಜೆಪಿ ತನ್ನ ಸಭೆಯಲ್ಲಿ ಈ 85 ಪ್ರತಿಶತ ಪಸ್ಮಂಡಾಗಳ ಕುರಿತಂತೆಯೇ ಚರ್ಚೆ ನಡೆಸಿದ್ದು. ಇಷ್ಟಕ್ಕೂ ಪಸ್ಮಂಡಾ ಪರ್ಷಿಯನ್ ಪದವಾಗಿದ್ದು ಹಿಂದುಳಿದವರು ಎಂಬುದೇ ಅದರ ಅರ್ಥ. ಪಸ್ಮಂಡಾಗಳಲ್ಲಿ ಕೆಲವರು ತಮ್ಮೊಳಗೆ ವಿವಾಹ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಅತ್ತ ಅಶ್ರಫ್ಗಳಲ್ಲೂ ಅವರೊಳಗೇ ವಿವಾಹ ಸಂಬಂಧಗಳು ನಡೆಯುತ್ತವೆ. ಆದರೆ ಇವರೀರ್ವರ ನಡುವೆ ಸಂಬಂಧಗಳೇರ್ಪಡುವುದು ಹೆಚ್ಚು-ಕಡಿಮೆ ಅಸಾಧ್ಯ. ಇಸ್ಲಾಂನಲ್ಲಿ ‘ಕುಫು’ ಎಂದರೆ ಮದುವೆಯಾಗಲು ಇರುವ ಸಮಾನ ನಿಯಮಗಳ ಕಂತೆ. ಇದರ ಪ್ರಕಾರ ಮದುವೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇರುವವರ ನಡುವೆಯೇ ಆಗಬೇಕು. ಮನೆತನ, ವಂಶಗಳು ಸಮಕ್ಕಿರಬೇಕು. ಅಂದರೆ ಸೈಯ್ಯದ್ ವಂಶಕ್ಕೆ ಸೇರಿದವ ಸಿದ್ಧಿಖಿ, ಫಾರುಖಿ ಇಂಥವರನ್ನು ಮಾತ್ರ ಮದುವೆಯಾಗಬಹುದು. ಮುಘಲ್, ಪಠಾನರೂ ಕೆಳವರ್ಗದವರಾಗುತ್ತಾರೆ. ಸಮಾನ ಮನೆತನ ಎಂದರೆ ಜಾತಿಯ ಸಮಾನತೆಯ ಕುರಿತಂತೆಯೇ ಅವರು ಮಾತನಾಡೋದು. ಹೀಗಾಗಿ ಮೇಲ್ಜಾತಿಯವರು ಕೆಳಜಾತಿಯವರನ್ನು ಮದುವೆಯಾಗುವಂತೆಯೇ ಇಲ್ಲ. ಅಲ್ಲಲ್ಲಿ ಅಪವಾದಗಳು ಕಾಣಬಹುದೇನೋ. ಆದರೆ ಸಾಮಾನ್ಯವಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಕುಫು ಪ್ರಕಾರ, ಮದುವೆಯಾಗುವ ಗಂಡು-ಹೆಣ್ಣು ಇಬ್ಬರೂ ಇಸ್ಲಾಮಿಗೆ ಮತಾಂತರಗೊಂಡಿರಲೇಬೇಕು. ಅದರಲ್ಲೂ ಆಗತಾನೇ ಮತಾಂತರಗೊಂಡ ಹುಡುಗಿಗಿಂತ ತಂದೆ-ತಾಯಿಯೂ ಮುಸಲ್ಮಾನರಾದವರೇ ಶ್ರೇಷ್ಠ ಎಂಬ ನಿಯಮವೂ ಇದೆ. ಇದನ್ನು ವಿಸ್ತಾರಗೊಳಿಸುವ ಅಗತ್ಯವಿಲ್ಲವೆನಿಸುತ್ತದೆ. ಇನ್ನು ಸಂಪತ್ತು ಮತ್ತು ವೃತ್ತಿಗಳಲ್ಲೂ ಈ ನಿಯಮಗಳು ಸಮಾನತೆಯನ್ನು ಬಯಸುತ್ತವೆ!
ಈ ರೀತಿಯ ಅಸಮಾನತೆಯನ್ನು ಮುಸಲ್ಮಾನರು ವಿರೋಧಿಸಲಿಲ್ಲವೇ? ಖಂಡಿತ ವಿರೋಧಿಸಿದ್ದಾರೆ. 1914ರಲ್ಲಿ ಕಲ್ಕತ್ತಾದಲ್ಲಿ ಫಲಾ-ಉಲ್ ಮೊಮಿನೀನ್ ಚಳವಳಿ ಆರಂಭವಾಗಿತ್ತು. ಇದರ ಆಧಾರದ ಮೇಲೆಯೇ 1926ರಲ್ಲಿ ಕಲ್ಕತ್ತಾದಲ್ಲಿ ಅಖಿಲ ಭಾರತ ಮೊಮಿನ್ ಸಮ್ಮೇಳನ ನಡೆದಿತ್ತು. ಅಶ್ರಫ್ಗಳಿಗೆ ಇದರಿಂದ ಬೆಂಕಿ ಬಿದ್ದಂತಾಯ್ತು. ಅವರು ಮುಸ್ಲಿಂ ಲೀಗ್ ಕಟ್ಟಿಕೊಂಡರು. ಇವರ ಪಾಕಿಸ್ತಾನ ನೀತಿಯ ವಿರುದ್ಧ ಪಸ್ಮಂಡಾಗಳು ಸೇರಿಕೊಂಡು 1940ರ ಮೇ ತಿಂಗಳಲ್ಲಿ ದೆಹಲಿಯಲ್ಲಿ ನಲವತ್ತು ಸಾವಿರ ಜನ ಬೀದಿಗಿಳಿದರು. ಇವರೆಲ್ಲರೂ ಅನ್ಸಾರಿ ಬಿರಾದರಿಗೆ ಸೇರಿದವರಾಗಿದ್ದರು. ಮೇಲ್ವರ್ಗದವರಿಗೆ ತಮ್ಮ ಮನಸ್ಸಿಗೆ ಬಂದಂತೆ ಪಸ್ಮಂಡಾಗಳನ್ನು ದುಡಿಸಿಕೊಳ್ಳುವ ಚಾಕಚಕ್ಯತೆ ಇತ್ತು. ಮತದ ಅಫೀಮು ಕುಡಿಸಿ ಕಾಂಗ್ರೆಸ್ಸಿನ ವಿರುದ್ಧ ಭಡಕಾಯಿಸಿ ಕೊನೆಗೂ ಪ್ರತ್ಯೇಕ ರಾಷ್ಟ್ರವನ್ನು ತಾವು ಪಡೆದುಕೊಂಡೇ ಬಿಟ್ಟರು. ಮತ್ತೆ ಪಸ್ಮಂಡಾಗಳು ಇಲ್ಲಿಯೇ ಉಳಿದರು. ಅವರ ಶೋಷಣೆ ಮಾಡಲೆಂದೇ ಒಂದಷ್ಟು ಮೇಲ್ವರ್ಗದ ಮುಸಲ್ಮಾನರು ಇಲ್ಲಿಯೇ ಇದ್ದರು. ಈ ಹಿನ್ನೆಲೆಯಲ್ಲಿಯೇ 1955ರಲ್ಲಿ ಕಾಕಾ ಸಾಹೇಬ್ ಕಾಳೇಕರ್ ಕಮಿಟಿ ಮುಸಲ್ಮಾನರಲ್ಲಿ ದಲಿತ ಶೋಷಣೆ ವ್ಯಾಪಕವಾಗಿದೆ ಎಂದಿತ್ತು. ಈ ಪರಿಸ್ಥಿತಿ ಹಿಂದೂಗಳಲ್ಲಿತ್ತಾದರೂ ಅವರು ಹೋರಾಟ ಮಾಡಿ ಹಿಂದುಳಿದ ವರ್ಗಕ್ಕೆ ವಿಶೇಷ ಸವಲತ್ತನ್ನು ಪಡೆದುಕೊಂಡಿದ್ದರು. ಆದರೆ ಮುಸಲ್ಮಾನರಲ್ಲಿ ಅಶ್ರಫ್ಗಳು ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯನ್ನು ಮುಂದಿಟ್ಟುಕೊಂಡು ಹಿಂದುಳಿದವರನ್ನು ತುಳಿದು ತಾವು ಎಲ್ಲ ಸೌಲಭ್ಯ ಪಡೆದುಕೊಂಡರು. 1980ರಲ್ಲಿ ರೂಪುಗೊಂಡ ಮಂಡಲ್ ಕಮಿಷನ್ ಶೇ.90ರಷ್ಟು ಮುಸಲ್ಮಾನರು ಹಿಂದುಳಿದವರಾಗಿದ್ದು ಕನಿಷ್ಠ 82 ಜಾತಿಗಳಿವೆ ಎಂದು ಗುರುತಿಸಿತ್ತು. ಇಂದಿರಾ ಗಾಂಧಿಯವರು ಗೋಪಾಲ್ಸಿಂಗ್ ಕಮಿಷನ್ ರಚಿಸಿದರು. ಎಲ್ಲ ವರದಿಗಳನ್ನು ಮುಂದಿಟ್ಟುಕೊಂಡರೂ ಯಾವ ಸರ್ಕಾರವೂ ಸ್ಪಷ್ಟ ನಿರ್ಣಯ ಕೊಡಲು ಸೋಲುತ್ತಿತ್ತು. ಏಕೆಂದರೆ ಅಧಿಕಾರದ ಮುಖ್ಯಭೂಮಿಕೆಯಲ್ಲಿದ್ದಿದ್ದು ಮೇಲ್ವರ್ಗದ ಮುಸಲ್ಮಾನರೇ!
ಈ ಕುದಿ ಕೆಳವರ್ಗದ ಮುಸಲ್ಮಾನರನ್ನು ಆವರಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ ಹಿಂದುಳಿದ ಮುಸಲ್ಮಾನರ ಸಂಘಟನೆ ಆರಂಭಗೊಂಡಿತಲ್ಲದೇ ಅವರು ಧರ್ಮವನ್ನು ಪಕ್ಕಕ್ಕಿಟ್ಟು ಶಿಕ್ಷಣ, ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯುವತ್ತ ಗಮನ ನೀಡಲಾರಂಭಿಸಿದರು. ಬಹುಶಃ ಇಸ್ಲಾಮಿನ ಇತಿಹಾಸದಲ್ಲಿ ಧರ್ಮವನ್ನು ಬದಿಗಿಟ್ಟು ವಿಕಾಸದ ಕುರಿತಂತೆ ಆಲೋಚನೆ ಮಾಡಿದ ಮೊದಲ ದಾಖಲೆ ಇದು. ಉತ್ತರ ಪ್ರದೇಶ, ಬಂಗಾಳಗಳಲ್ಲೂ ಇದು ವೇಗ ಪಡೆದುಕೊಂಡಿತು. ಆದರೆ ನಿಜವಾದ ಹೋರಾಟದ ಭೂಮಿಕೆ ರೂಪುಗೊಂಡಿದ್ದು ಬಿಹಾರದಲ್ಲಿ. ಇಲ್ಲಿ ಶೇಕಡಾ 16.5ರಷ್ಟು ಮುಸಲ್ಮಾನರೇ ಇದ್ದರು. ಅವರಲ್ಲಿ ಶೇಕಡಾ 90ರಷ್ಟು ಕೆಳವರ್ಗದವರು. ಆದರೆ ಮುಸ್ಲಿಂ ರಾಜಕೀಯ ನಾಯಕರೆಲ್ಲ ಮೇಲ್ವರ್ಗದ ಅಶ್ರಫ್ಗಳೇ ಆಗಿದ್ದರು. 1998ರಲ್ಲಿ ಅಖಿಲ ಭಾರತ ಪಸ್ಮಂಡಾ ಮುಸ್ಲಿಂ ಸಂಘಟನೆ ಆರಂಭಗೊಂಡಿತು. 2002ರಲ್ಲಿ ಪಸ್ಮಂಡಾ ಜಾಗೃತಗೊಳಿಸಿ-ದೇಶವುಳಿಸಿ ಆಂದೋಲನ ಶುರುವಾಯಿತು. 2004ರಲ್ಲಿ ದೆಹಲಿಯಲ್ಲಿ ದಲಿತ-ಮುಸ್ಲಿಂ ಮಹಾ ಪಂಚಾಯತ್ ನಡೆಯಿತು. ಇಲ್ಲಿನ ಚರ್ಚೆಗಳ ಕುರಿತಂತೆ ಕೆ. ಎ. ಅನ್ಸಾರಿ ತಮ್ಮ ‘ಡಿಬೆಟಿಂಗ್ ಮುಸ್ಲಿಂ ರಿಸರ್ವೆಶನ್’ ಪುಸ್ತಕದಲ್ಲಿ ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಮೇಲ್ವರ್ಗದ ಮುಸಲ್ಮಾನರು ದಲಿತ ಮುಸ್ಲಿಮರನ್ನು ಧುಲಿಯಾ, ಜುಲಾಹ, ಕಲಾಲ್, ಕಸಾಯಿ ಅಂತೆಲ್ಲ ಅವಹೇಳನಕಾರಿ ಜಾತಿಸೂಚಕ ಪದಗಳಿಂದ ನಿಂದಿಸುತ್ತಾರೆ ಮತ್ತು ಪಸ್ಮಂಡಾಗಳನ್ನು ನಮಾಜಿಗೆ ಮುಂದಿನ ಸಾಲಿನಲ್ಲಿ ಕೂರಲು ಬಿಡುವುದಿಲ್ಲ ಎಂದೆಲ್ಲಾ ಹೇಳಲಾಗಿತ್ತು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಚನೆಯಾದ ಸಾಚಾರ್ ಕಮಿಟಿಯೂ ಮುಸಲ್ಮಾನರಲ್ಲಿನ ದಲಿತರ ಸ್ಥಿತಿಗತಿ ಬಗ್ಗೆ ಬೆಳಕು ಚೆಲ್ಲಿತ್ತು. ಗಮನಿಸಬೇಕಾದ್ದೆಂದರೆ, ಈ ಎಲ್ಲ ಪಸ್ಮಂಡಾಗಳ ಹೋರಾಟದ ಮೂಲ ನೆಲೆಗಟ್ಟು ಸಾಮಾಜಿಕ ನ್ಯಾಯದ ಪರವಾದ ಮತ್ತು ಅಸಮಾನತೆಯ ವಿರುದ್ಧದ ಚಿಂತನೆಯಾಗಿತ್ತು. ಅವರೆಲ್ಲಿಯೂ ‘ಅಲ್ಪಸಂಖ್ಯಾತ’ ಎನ್ನುವ ಪಟ್ಟವನ್ನು ಬಯಸಲಿಲ್ಲ. ಅಲಿ ಅನ್ವರ್ರಂತೂ ಭಾಷಣವೊಂದರಲ್ಲಿ ‘ಪಸ್ಮಂಡಾಗಳು ತಮ್ಮ ಗುರುತನ್ನು ಮರಳಿ ಪಡೆಯುವ ಕಾಲ ಬಂದಿದೆ. ಇಷ್ಟು ದಿನಗಳ ಕಾಲ ‘ಅಲ್ಪಸಂಖ್ಯಾತ’ ಎನ್ನುವ ಹೆಸರಿನಡಿ ಪಸ್ಮಂಡಾಗಳು ಕಳೆದುಹೋಗಿದ್ದರು. ಇನ್ನು ಈ ಸುಳ್ಳುಪದದ ಕುರಿತಂತೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅಲ್ಪಸಂಖ್ಯಾತ ಎನ್ನುವ ಹೆಸರಿನಲ್ಲಿ ಕೆಲವರು ನಮ್ಮನ್ನು ಭಯಭೀತಗೊಳಿಸುತ್ತಾರೆ. ಮತ್ತೂ ಕೆಲವರು ನಮ್ಮ ಹಕ್ಕನ್ನು ಕಸಿಯುತ್ತಾರೆ. ನಿಜ ಹೇಳಬೇಕೆಂದರೆ ಇವರ ಸಮಾಜದಲ್ಲಿ ನಾವು ಅಲ್ಪಸಂಖ್ಯಾತರಲ್ಲ, ನಾವೇ ಬಹುಸಂಖ್ಯಾತರು’ ಎಂದಿದ್ದರು. 2005ರಲ್ಲಿ ಪಸ್ಮಂಡಾ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಂಡಿತು. ‘ನಮ್ಮ ವೋಟು ನಿಮ್ಮ ಫತ್ವಾ ಇನ್ನು ನಡೆಯುವುದಿಲ್ಲ’ ಎಂಬ ಘೊಷಣೆ ಬಿಹಾರದುದ್ದಕ್ಕೂ ಮೊಳಗಿತ್ತು. ಆದರೇನು? ಅಶ್ರಫ್ಗಳಿಗೆ ತಮ್ಮ ತಾಳಕ್ಕೆ ತಕ್ಕಂತೆ ಎಲ್ಲರನ್ನೂ ಕುಣಿಸುವ ಕಲೆ ಗೊತ್ತಿದೆ. ಹೀಗಾಗಿಯೇ ಇಷ್ಟು ಹೋರಾಟಗಳ ನಂತರವೂ ದಲಿತ ಮುಸಲ್ಮಾನರ ಬದುಕಿನಲ್ಲಿ ಬದಲಾವಣೆ ಕಾಣಲಿಲ್ಲ. ಖಾಲಿದ್ ಅನೀಜ್ ಅನ್ಸಾರಿ ‘ಪ್ರಿಂಟ್’ಗೆ ಬರೆದ ಲೇಖನದಲ್ಲಿ, 2019ರ ಲೋಕಸಭಾ ಚುನಾವಣೆಗೆ 7500 ಜನ ಸ್ಪರ್ಧಿಗಳಾಗಿದ್ದರೆ, ಅದರಲ್ಲಿ 400 ಜನ ಮುಸ್ಲಿಮರು, 340 ಜನ ಅಶ್ರಫ್ಗಳೇ ಆಗಿದ್ದರು. 60 ಜನ ಮಾತ್ರ ಪಸ್ಮಂಡಾ. ಭಾರತದ ಜನಸಂಖ್ಯೆಯಲ್ಲಿ 14 ಪ್ರತಿಶತದಷ್ಟು ಮುಸಲ್ಮಾನರಿದ್ದಾರಲ್ಲ, ಅದರಲ್ಲಿ ಶೇ. 2ರಷ್ಟು ಮಾತ್ರ ಅಶ್ರಫ್ಗಳು. ಅವರಿಗೆ ಚುನಾವಣೆಯಲ್ಲಿ ಸುಮಾರು 5 ಪ್ರತಿಶತ ಸೀಟುಗಳು ದಕ್ಕಿದ್ದವು. ಪಸ್ಮಂಡಾಗಳು ಶೇ. 12ರಷ್ಟು ಜನಸಂಖ್ಯೆ ಹೊಂದಿದ್ದರೂ ಅವರಿಗೆ ಒಂದು ಪ್ರತಿಶತದಷ್ಟೂ ಸೀಟು ದಕ್ಕಿರಲಿಲ್ಲ ಎಂದಿದ್ದರು. ಉತ್ತರ ಪ್ರದೇಶದಲ್ಲಂತೂ ಕಥೆ ಭಿನ್ನ. ಯೋಗಿ ಆದಿತ್ಯನಾಥರು ಚುನಾವಣೆ ಗೆದ್ದನಂತರ ಮೊಹಮ್ಮದ್ ಬಾಬರ್ ಅಲಿ ಸಂಭ್ರಮಿಸಿದ್ದ ಎನ್ನುವ ಕಾರಣಕ್ಕೆ ಅವನ ಹತ್ಯೆ ನಡೆದಿತ್ತು. ಅವನು ಮಾಡಿದ ತಪ್ಪೇನು ಗೊತ್ತೇ? ಅಖಿಲೇಶ್ಗೆ ಮತ ಚಲಾಯಿಸಿರೆಂದು ಮೇಲ್ವರ್ಗದ ಅಶ್ರಫ್ಗಳು ಹೊರಡಿಸಿದ್ದ ಫತ್ವಾವನ್ನು ಆತ ಧಿಕ್ಕರಿಸಿದ್ದ ಅಷ್ಟೇ. ನೂಪುರ್ ಶರ್ವರನ್ನು ಬೆಂಬಲಿಸಿದ ಮುಸಲ್ಮಾನ ಹುಡುಗನೊಬ್ಬ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಏಕೆ ಗೊತ್ತೇ? ಅವನ ಹೆಸರು ಸಾದ್ ಅನ್ಸಾರಿ. ಅಲಿಗಢ ಮುಸ್ಲಿಂ ಯುನಿವರ್ಸಿಟಿ ಇರಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾವೇ ಇರಲಿ, ಹಮ್ರ್ದ್ ವಿಶ್ವ ವಿದ್ಯಾಲಯ, ಅಂಜುಮನ್-ಎ-ಇಸ್ಲಾಂ, ಮುಸ್ಲಿಂ ಎಜುಕೇಷನ್ ಸೊಸೈಟಿ ಇವೆಲ್ಲವೂ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯ ಸವಲತ್ತುಗಳನ್ನು ಪಡೆದುಕೊಂಡೇ ಬೆಳೆದವು. ಹಿಡಿತವೆಲ್ಲ ಮೇಲ್ವರ್ಗದವರದ್ದೇ, ಇಲ್ಲೆಲ್ಲೂ ಪಸ್ಮಂಡಾಗಳಿಗೆ ಮಿಸಲಾತಿಯೂ ಇಲ್ಲ. ಪರಿಣಾಮ ಈ ಪಸ್ಮಂಡಾಗಳು ಉಚಿತ ಶಿಕ್ಷಣ ನೀಡುವ ಮದರಸಾಗಳಿಗೇ ತಮ್ಮ ಮಕ್ಕಳನ್ನು ಕಳಿಸಬೇಕು. ಅದರರ್ಥ ಮೇಲ್ವರ್ಗದವರು ಚೆನ್ನಾಗಿ ಕಲಿತು ವಿದೇಶಕ್ಕೆ ಹೋಗಲಿ, ಪಸ್ಮಂಡಾಗಳು ಆಧುನಿಕ ಶಿಕ್ಷಣವನ್ನು ಬಿಟ್ಟು ಮದರಸಾ ಶಿಕ್ಷಣ ಪಡೆದು ಕಟ್ಟರ್ಗಳಾಗಿ ಭಾರತವಿರೋಧಿಯಾಗಲಿ ಅಂತ. ಆಲಂ ಮತ್ತು ಕುಮಾರ್ 2019ರಲ್ಲಿ ಅಲಿಗಢ ಮುಸ್ಲಿಂ ಯುನಿವರ್ಸಿಟಿಯಲ್ಲಿ ಅಧ್ಯಯನ ನಡೆಸಿ ಸುಮಾರು 90ರಷ್ಟು ಶಿಕ್ಷಕರು ಮೇಲ್ವರ್ಗದವರು ಎಂಬ ಸ್ಪೋಟಕ ಮಾಹಿತಿಯನ್ನು ಹೊರಹಾಕಿದ್ದರು. ಆದರೇನು? ಪಸ್ಮಂಡಾಗಳ ಪರವಾಗಿ ಮಾತನಾಡಲು ಯಾರೂ ಮುಂದೆ ಬರಲಿಲ್ಲ. ಹಿಂದೂ-ಮುಸ್ಲಿಂ ಗಲಾಟೆಗಳು ನಡೆದಾಗ ಸಾಯುವುದು ಅದೇ ದಾದ್ರಿಯ ಅಖಲಾಖ್, ಹಾಪುರ್ನ ಕಾಸಿಂ ಖುರೇಷಿ, ರಾಜಸ್ಥಾನದ ರಾಖಸ್ಖಾನ್. ಇವರ ಶವಯಾತ್ರೆ ಮಾಡಿ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವುದು ಮಾತ್ರ ಮೇಲ್ವರ್ಗದವರು. ಹಿಂದೂಗಳಲ್ಲಿ ಶೋಷಣೆಗೊಳ ಗಾದವರಿಗೆ ಮೀಸಲಾತಿಯಾದರೂ ಸಿಕ್ಕಿದೆ. ಆದರೆ ಮುಸಲ್ಮಾನರಲ್ಲಿ ಇಂದಿಗೂ ಶೋಷಣೆಗೊಳಗಾಗುತ್ತಿದ್ದರೂ ಮೀಸಲಾತಿ ಇರಲಿ, ಕಡೆಪಕ್ಷ ಆತ್ಮಗೌರವವೂ ಇಲ್ಲ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)