ಅಂಕಣ

ವಿಷ್ಣುಸಹಸ್ರನಾಮ ಪಾರಾಯಣ ಆಧುನಿಕ ಯುಗಕ್ಕೆ ಭೀಷ್ಮರ ವರ...

ಸನಾತನಧರ್ಮದ ಸ್ತೋತ್ರ ಸಾಹಿತ್ಯದಲ್ಲಿ ಸಹಸ್ರನಾಮಗಳಿಗೆ ವಿಶಿಷ್ಟ ಸ್ಥಾನವಿದೆ. ಲಲಿತಾ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇವೆಲ್ಲ ಬಹಳ ಪ್ರಸಿದ್ಧವಾದ ಸಹಸ್ರನಾಮಗಳು. ಈ ಎಲ್ಲ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನಗಳನ್ನು ಹೊಂದಿರುವ, ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾದ ಪ್ರಸಿದ್ಧ ಸಹಸ್ರನಾಮ ಭಗವಂತನ ಗುಣಗಳನ್ನು ವರ್ಣಿಸುವ ವಿಷ್ಣು ಸಹಸ್ರನಾಮ. ಮಹಾಭಾರತ ಯುದ್ಧ ಮುಗಿದ ಬಳಿಕ ಶರಶಯ್ಯೆಯಲ್ಲಿದ್ದ ಭೀಷ್ಮರು ಮೊಮ್ಮಗ ಯುಧಿಷ್ಠಿರನಿಗೆ ಧರ್ಮಬೋಧೆ ಮಾಡುತ್ತಾರೆ. ಈ ಧರ್ವೇಪದೇಶದ ಕೊನೆಯ ಅಪೂರ್ವ ಭಾಗವೇ ಈ ವಿಷ್ಣುಸಹಸ್ರನಾಮ ಸ್ತೋತ್ರ.

‘ನಾಮಸ್ಮರಣೆ’ಯೊಂದೇ ಕಲಿಯುಗದ ಅಮೃತ. ಪಾಪ ಪರಿಹಾರ ಮಾಡಲು ಪರಮಾತ್ಮನ ನಾಮಸ್ಮರಣೆಯೊಂದಕ್ಕೇ ಎಷ್ಟು ಸಾಮರ್ಥ್ಯವಿದೆಯೆಂದರೆ, ಅಷ್ಟು ಪಾಪಗಳನ್ನು ಮಾಡಲು ಎಂತಹ ಪಾಪಿಗಳಿಗೂ ಸಾಮರ್ಥ್ಯವಿಲ್ಲ. ಶಾಸ್ತ್ರಜ್ಞಾನವಿಲ್ಲದ ಸಾಮಾನ್ಯರನ್ನು ನಾಮಸ್ಮರಣೆಯು ಭಕ್ತಿರಥದಲ್ಲಿ ಹತ್ತಿಸುತ್ತದೆ. ಆ ಮೂಲಕ ಮುಕ್ತಿಪಥವನ್ನು ಹಿಡಿಸುತ್ತದೆ. ಕಲಿಯುಗದಲ್ಲಿ ತಪಸ್ಸು ಮಾಡುವುದು ಸಾಧ್ಯವೇ? ಸಾಧ್ಯವಿದೆ ಎನ್ನುತ್ತಾರೆ ಹಿರಿಯರು. ಅದೇ ವಿಷ್ಣುಸಹಸ್ರನಾಮ ಪಾರಾಯಣ.

ನಮ್ಮ ಎಲ್ಲ ಸಮಸ್ಯೆಗಳಿಗೆ ರಾಮಬಾಣದಂತೆ ಅಂತಿಮ ಪರಿಹಾರವನ್ನು ಒದಗಿಸಿಕೊಡುವುದೇ ವಿಷ್ಣುಸಹಸ್ರನಾಮ. ಪ್ರಾಚೀನ ಋಷಿವೈದ್ಯರಾದ ಚರಕನ ದೃಷ್ಟಿಯಲ್ಲಿ ವಿಷ್ಣುಸಹಸ್ರನಾಮ ಹೇಳುವವರು ಎಲ್ಲ ವಿಧವಾದ ರೋಗರುಜಿನಗಳಿಂದ ಆಧಿವ್ಯಾಧಿಗಳಿಂದ ಪಾರಾಗುತ್ತಾರೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರಿಗೆ ಸಾಡೇಸಾತಿ ಅಥವಾ ಶನಿಕಾಟ ಇರುವುದಿಲ್ಲ. ಏಕೆಂದರೆ ಶನಿಗ್ರಹಕ್ಕೆ ವಿಷ್ಣುವೇ ದೇವತೆ. ಸಹಸ್ರನಾಮದಿಂದ ವಿಷ್ಣುವೇ ಪ್ರೀತನಾಗುವನು. ಹಾಗಾಗಿ ಸಹಜವಾಗಿಯೇ ಶನಿಮಹಾತ್ಮನೂ ಸುಪ್ರೀತನಾಗುವನು.

ವಿಷ್ಣುಸಹಸ್ರನಾಮವು ಮಹಾಭಾರತದ ಅನುಶಾಸನಿಕ ಪರ್ವದ 149ನೇ ಅಧ್ಯಾಯದಲ್ಲಿ ಭೀಷ್ಮ-ಯುಧಿಷ್ಠಿರ ಸಂವಾದವಾಗಿ ಬಂದಿದೆ. ಯಜ್ಞಗಳಲ್ಲಿ ಜಪಯಜ್ಞವೇ ಶ್ರೇಷ್ಠವೆಂದು ಕೃಷ್ಣಪರಮಾತ್ಮ ಸಾರಿದರೆ, ಜಪಗಳಲ್ಲಿ ವಿಷ್ಣುಸಹಸ್ರನಾಮದ ಜಪವೇ ಶ್ರೇಷ್ಠ ಎಂದು ಭೀಷ್ಮರು ಸಾರಿದ್ದಾರೆ. ಎಲ್ಲ ಶಾಸ್ತ್ರಗಳಲ್ಲಿ ಮಹಾಭಾರತ ಶ್ರೇಷ್ಠವೆಂದು ಕೂರ್ಮಪುರಾಣ ಹೇಳುತ್ತದೆ. ಮಹಾಭಾರತ ಎನ್ನುವ ಪರ್ವತ ಯಾಕೆ ಶ್ರೇಷ್ಠವೆಂದರೆ ಅದರಲ್ಲಿ ಶಿಖರಪ್ರಾಯವಾಗಿರುವುದು ಗೀತೆ ಹಾಗೂ ವಿಷ್ಣುಸಹಸ್ರನಾಮದಿಂದಾಗಿ ಎಂದು ಪುರಾಣ ನಿರೂಪಿಸುತ್ತಿದೆ. ವೇದದ ಪ್ರತಿ ಮಾತಿಗೆ ಮೂರು ರೀತಿಯ ಅರ್ಥಗಳಿರುತ್ತವೆ. ಮಹಾಭಾರತದ ಮಾತುಗಳಿಗೆ ಹತ್ತು ರೀತಿಯ ಅರ್ಥಗಳಿರುತ್ತವೆ. ವಿಷ್ಣುಸಹಸ್ರನಾಮದ ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳಿವೆ. ಅದನ್ನು ಭಕ್ತಿಯಿಂದ ಪಾರಾಯಣ ಮಾಡಿದರೆ ಪವಿತ್ರವಾದ ಒಂದು ಸಹಸ್ರ ವಿಷ್ಣುದೇವಾಲಯಗಳನ್ನು ಸಂದರ್ಶನ ಮಾಡುವುದರಿಂದ ದೊರಕುವ ಪುಣ್ಯಫಲ ಲಭಿಸುತ್ತದೆ.

‘ವಿಷ್ಣುಸಹಸ್ರನಾಮ ಚಕ್ರ’ ಎಂದರೆ ಕನಿಷ್ಠ ಹನ್ನೊಂದು ಕುಟುಂಬಗಳು ಹನ್ನೊಂದು ದಿನಗಳ ಕಾಲ ಒಂದು ನಿಗದಿತ ಸಮಯದಲ್ಲಿ, ಪ್ರತಿದಿನ ಹನ್ನೊಂದು ಬಾರಿ ಭಕ್ತಿಯಿಂದ ವಿಷ್ಣುಸಹಸ್ರನಾಮ ಪಾರಾಯಣ ಮಾಡುವುದು. ಹೀಗೆ ಹನ್ನೊಂದು ದಿನ ವೈಭವದಿಂದ, ವಿಧಿವತ್ತಾಗಿ ಇದು ನಡೆದು ಯಶಸ್ವಿಯಾದರೆ ಅದು ಒಂದು ಚಕ್ರ. ಹೀಗೆ ಹನ್ನೊಂದು ಚಕ್ರಗಳು ಸಂಪೂರ್ಣವಾದರೆ ಅದು ‘ಮಹಾನಾರಾಯಣ ಚಕ್ರ’ ಸಂಪನ್ನವಾದಂತೆ. ಹನ್ನೊಂದು ಚಕ್ರ ಮುಗಿದ ಮೇಲೆ ಮತ್ತೆ ಮುಂದುವರಿಸುವ ಚಕ್ರಕ್ಕೆ ‘ಮಹಾನಾರಾಯಣ ಚಕ್ರ’ ಎನ್ನುತ್ತಾರೆ.

ಸಂತ ತುಕಾರಾಮ್ ಹೇಳುತ್ತಾರೆ, ‘ವಿಷ್ಣುಸಹಸ್ರನಾಮದ ಒಂದೊಂದು ನಾಮವನ್ನು ಹೇಳಿದಾಗಲೂ ಒಂದೊಂದು ಶಾಸ್ತ್ರದ ಅಧ್ಯಯನದ ಫಲ ಬರುತ್ತದೆ.’ ಶ್ರೀ ಆದಿಶಂಕರಾಚಾರ್ಯರ ದೃಷ್ಟಿಯಲ್ಲಿ ‘ಗೇಯಂ ಗೀತಾ ನಾಮಸಹಸ್ರಂ’ ವಿವೇಕಿಗಳಾದವರು ಭಗವದ್ಗೀತೆ ಹಾಗೂ ವಿಷ್ಣುಸಹಸ್ರನಾಮವನ್ನು ಹೇಳಿಕೊಳ್ಳಲೇಬೇಕು. ‘ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವುವೋ ರಂಗ’ ಎಂದರು ದಾಸರು.

ಮನುಷ್ಯ ಇಂದು ವಿಚಿತ್ರವಾಗಿ ಒದ್ದಾಡುತ್ತಿರುವುದಕ್ಕೆ ಅನಾರೋಗ್ಯ, ಬಡತನ, ಅವಿವೇಕ ದುಃಖ ದುಮ್ಮಾನಗಳೇ ಕಾರಣ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುತ್ತಿರುವ ಪಾಪ ವಿಪರೀತವಾಗುತ್ತಿದೆ. ಅದರ ಫಲವೂ ಭೀಕರವಾಗಿಯೇ ಇರುತ್ತದೆ. ಹಾಗಾಗಿ ನಮ್ಮ ಪಾಪಗಳು ಪರಿಹಾರವಾಗಬೇಕಾದರೆ, ಚಿಂತಾಸಂತಾಪಗಳಿಂದ ನಾವು ಮುಕ್ತರಾಗಬೇಕಾದರೆ, ಏನು ಮಾಡಬೇಕು ಎನ್ನುವುದನ್ನು ಭೀಷ್ಮಾಚಾರ್ಯರು ಹೀಗೆ ಹೇಳುತ್ತಾರೆ, ‘ವಿಲಯಂ ಯಾಂತಿ ಪಾಪಾನಿ ಚಾನ್ಯ ಪಾಪಸ್ಯ ಕಾಕಥಾಃ| ಸರ್ವಪಾಪ ವಿನಿಮುಕ್ತೋ ವಿಷ್ಣುಲೋಕಂ ಸಗಚ್ಛತಿ ||

ನಿರಂತರವಾಗಿ ವಿಷ್ಣುಸಹಸ್ರನಾಮವನ್ನು ಹೇಳುತ್ತಿರುವವರಿಗೆ ಮನಸ್ಸು ನಿರಾಳ ಹಾಗೂ ಪ್ರಫುಲ್ಲವಾಗಿರುತ್ತದೆ. ಯಾವುದೇ ಭಯ ಆತಂಕಗಳು ಇರುವುದಿಲ್ಲ. ಮುಗುಳ್ನಗೆ, ಹಸನ್ಮುಖ, ಮನಶ್ಶಾಂತಿ, ನೆಮ್ಮದಿ ತಾನಾಗಿ ಲಭ್ಯವಾಗುತ್ತದೆ. ಮಾತು ಮಧುರವಾಗುತ್ತದೆ. ದುಗುಡ ನೀಗುತ್ತದೆ. ಬೇಸರ ಹೋಗುತ್ತದೆ. ಜೀವ ಧನ್ಯತೆಯಿಂದ ಬಾಗುತ್ತದೆ. ಚೇತನ ಅನುಭವದಿಂದ ಮಾಗುತ್ತದೆ. ನಿಧಾನವಾಗಿ ಎಲ್ಲ ಬಂಧನಗಳು ಬಿಡಿಸಿಕೊಳ್ಳುತ್ತವೆ. ಜನನ-ಮರಣಗಳ ಚಕ್ರ ಕಳಚುತ್ತದೆ. ಭವಸಾಗರ ದಾಟುವ ನೌಕೆ ಕಾಣುತ್ತದೆ.

ವಿಷ್ಣುಸಹಸ್ರನಾಮ ಪಾರಾಯಣ ಅತ್ಯಂತ ಶ್ರೇಷ್ಠ. ಅದರಲ್ಲೂ ಗೋವರ್ಧನ ಗಿರಿಧಾರಿಯ ಸನ್ನಿಧಾನದಲ್ಲಿ ಸಹಸ್ರಾರು ಭಕ್ತಜನಸ್ತೋಮದೊಡನೆ ಪಾರಾಯಣ ಮಾಡುವುದು ಜೀವನ ಭಾಗ್ಯ. ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ್ ಫೆಡರೇಷನ್ನಿನ ಸಹಯೋಗದಲ್ಲಿ ನಮ್ಮ ಶ್ರೀಮಠದ ಮೂಲ ಸನ್ನಿಧಾನದಲ್ಲಿ, ಗೋವುಗಳ ಸುಂದರ ಪರಿಸರದಲ್ಲಿ ಈ ಪಾರಾಯಣದ ಪುಣ್ಯಕಾರ್ಯ ‘ಕೃಷ್ಣಾರ್ಪಣಮ್ ಮಾರ್ಚ್ 4ರಂದು ನಡೆಯುತ್ತಿದೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವ ಎಲ್ಲ ಭಕ್ತಜನ ಬಂಧುಗಳೂ ಅಂದು ಹೊಸನಗರಕ್ಕೆ ಆಗಮಿಸಿ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ ಧನ್ಯರಾಗಿ. | ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಶ್ರೀ ರಾಮಚಂದ್ರಾಪುರಮಠ
ಕೃಷ್ಣಾರ್ಪಣಮ್

ಹೊಸನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದ ಗೋವರ್ಧನಗಿರಿಧಾರಿಯ ಸನ್ನಿಧಿಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ಸತ್ಸಂಗದ ಅವಕಾಶ ಮಾರ್ಚ್ 4ರಂದು ಮತ್ತೊಮ್ಮೆ ಸಿಕ್ಕಿದೆ. ಕೃಷ್ಣಾರ್ಪಣಮ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಸಂರ್ಪಸಬೇಕಾದ ದೂರವಾಣಿ ಸಂಖ್ಯೆ: 73488-57507 / 90089-79866 / 78928-00937

| ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ