2018ರ ಫೆಬ್ರವರಿ 13. ಬೆಂಗಳೂರಿನ ಕೆಲವು ಯುವಕರ ವರ್ಷಗಳ ಕನಸು ನನಸಾದ ದಿನವದು. ಹಳ್ಳಿಗಳಿಂದಲೇ ಸದೃಢ ಆರ್ಥಿಕತೆಯನ್ನು ಸೃಷ್ಟಿಸಬಹುದು ಎಂಬ ಸತ್ಯದರ್ಶನವನ್ನು ಮಾಡಿಕೊಟ್ಟ ಸಂದರ್ಭವಿದು. ಆಧುನಿಕ ಜೀವನಶೈಲಿಯ ಹುಡುಕಾಟದಲ್ಲಿ ಅಥವಾ ಹಳ್ಳಿಯಲ್ಲಿ ಏನು ಉಳಿದುಕೊಂಡಿದೆ ಎಂಬ ತಾತ್ಸಾರ ಮನೋಭಾವದಲ್ಲಿ ಇಂದಿನ ಹಲವಾರು ಯುವಕ, ಯುವತಿಯರು ತಮ್ಮ ಹಳ್ಳಿಯಿಂದ ಪಟ್ಟಗಳ ಕಡೆಗೆ ವಲಸೆ ಹೋಗುತ್ತಿರುವ ಈ ಸಮಯದಲ್ಲಿ ಅದಕ್ಕೆ ವಿರುದ್ಧವಾಗಿ ಪಟ್ಟಣಗಳಿಂದ ಹಳ್ಳಿಯ ಕಡೆಗೆ, ಪಟ್ಟಣ ಕೇಂದ್ರೀಕೃತ ಕಾರ್ಪೆರೇಟ್ ಜೀವನದಿಂದ ಹಳ್ಳಿಗಳ ರೈತರ ಕಡೆಗೆ ಹೊರಟಿತ್ತು ಈ ಗುಂಪು.
ಹಳ್ಳಿಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ, ದೇಸಿ ಎತ್ತುಗಳ ಉಳಿಸುವಿಕೆ ಮತ್ತು ಬೆಳವಣಿಗೆ, ರಾಸಾಯನಿಕ ರಹಿತ ಕೃಷಿಗೆ ಉತ್ತೇಜನ, ರೈತನ ಬೆಳೆಗೆ ಮೌಲ್ಯಯುತ ದರ ಕೊಡುವ ಮೂಲಕ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಹಾಗೂ ರಾಸಾಯನಿಕ ರಹಿತ ಅಡುಗೆ ಎಣ್ಣೆಗಳು ದೊಡ್ಡ ಸಮುದಾಯಕ್ಕೆ ತಲುಪಿಸಿ ರೋಗರಹಿತ ಸಮಾಜದ ನಿರ್ವಣಕ್ಕೆ ಅಮೂಲ್ಯ ಕಾಣಿಕೆ ನೀಡುವ ಉದ್ದೇಶದಿಂದ ‘ದೇಸಿರಿ’ ಎಂಬ ಉದ್ಯಮವನ್ನು ಆರಂಭಿಸಿದ ಈ ಯುವಕರು ಅಂದು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು.
ರಾಸಾಯನಿಕ ರಹಿತ ಊಟದ ತಟ್ಟೆಯ ಮುನ್ನೋಟದೊಂದಿಗೆ ದೇಸಿರಿಯನ್ನು ಸ್ಥಾಪಿಸಿದವರು ಬೆಂಗಳೂರಿನ ಟೆಕಿಗಳಾದ ಯೋಗೇಶ್ ಎನ್, ಮಹೇಶ್ ಮತ್ತು ನವೀನ್. 2016ರಲ್ಲಿ ಆರಂಭಿಸಿದ ‘ದೇಸಿರಿ’ಯ ಉತ್ಪನ್ನಗಳು ಕೇವಲ ಎರಡು ವರ್ಷಗಳಲ್ಲಿಯೇ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು. ‘ಪಟ್ಟಣದ ಹಣ ಹಳ್ಳಿಗೆ ಹರಿದುಬರಲಿದ್ದು ಹಳ್ಳಿಗಳು ಸ್ವಾವಲಂಬಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ನಾವು ಅರಿತುಕೊಂಡಿದ್ದು, ಈ ನಿಟ್ಟಿನಲ್ಲಿ ದೇಸಿರಿ ಉದ್ಯಮ ಸ್ಥಾಪಿಸಿದೆವು’ ಎನ್ನುತ್ತಾರೆ ಯೋಗೇಶ್.
25 ಕುಟುಂಬಗಳಿಗೆ ಉದ್ಯೋಗ: ದೇಸಿರಿಯು ಕೆ.ಆರ್.ನಗರದ ಅಡಗನಹಳ್ಳಿಯಲ್ಲಿ ತನ್ನ ಮೊದಲನೇ (ರಾಜ್ಯದಲ್ಲಿಯೂ ಮೊದಲನೇ) ಘಟಕವನ್ನು ಹೊಂದಿದ್ದು ಹಳ್ಳಿಯ 25 ಕುಟುಂಬಗಳಿಗೆ ಉದ್ಯೋಗಾವಕಾಶ ಸೃಷ್ಟಿಸಿದೆ. ಕಸಾಯಿಖಾನೆಯಿಂದ ಸಂರಕ್ಷಿಸಲ್ಪಟ್ಟ 18 ಎತ್ತುಗಳು ತಮ್ಮ ಆಹಾರವನ್ನು ತಾವೇ ಸಂಪಾದಿಸುತ್ತಿವೆ. ಇದು ದೇಸಿ ಎತ್ತುಗಳಿಂದ ನಿರ್ವಿುತವಾದ ದೇಸಿರಿಯು ಸಾಬೀತು ಮಾಡಿರುವ ಆರ್ಥಿಕತೆ.
‘ಈ ಉದ್ಯಮ ಸ್ಥಾಪಿಸಿದ ಪ್ರಾರಂಭದಲ್ಲಿ ನಮ್ಮ ಮಹತ್ವಾಕಾಂಕ್ಷೆಯ ಕಾರ್ಯಕ್ಕೆ ನೀರೆರೆದಿದ್ದು ಮಾಲೂರಿನಲ್ಲಿರುವ ಶ್ರೀ ರಾಘವೇಂದ್ರ ಗೋ ಆಶ್ರಮ. ನಮ್ಮ ಪ್ರಾರ್ಥನೆಗೆ ಓಗೊಟ್ಟು ಒಂದು ಜೋಡಿ ದೇವನಿ ತಳಿಯನ್ನು ನಮಗೆ ನೀಡಿ ಪ್ರೋತ್ಸಾಹ ನೀಡಿದರು. ಆ ಜೋಡಿಗೆ ಕೃಷ್ಣ- ಬಲರಾಮ ಎಂದು ನಾಮಕರಣ ಮಾಡಿದೆವು. ನಂತರದ ದಿನಗಳಲ್ಲಿ ತುಮಕೂರಿನ ಶ್ರೀ ಕೃಷ್ಣ ಗೋಶಾಲೆ ನಮಗೆ ಕಸಾಯಿ ಖಾನೆಯಿಂದ ರಕ್ಷಿಸಲ್ಪಟ್ಟ ಹಳ್ಳಿಕಾರ್, ಮಲೆನಾಡು ಗಿಡ್ಡ, ಖಿಲ್ಲಾರಿ, ಅಮೃತ್ ಮಹಲ್ ತಳಿಗಳು ಸೇರಿದಂತೆ ಏಳು ಜೋಡಿ ಎತ್ತುಗಳನ್ನು ನೀಡಿದರು. ಈ ಅತ್ಯಮೂಲ್ಯ ಬಳುವಳಿಗಳಿಂದಲೇ ನಮ್ಮ ಸಾಂಪ್ರದಾಯಿಕ ಎತ್ತಿನ ಗಾಣದ ಪುನರುಜ್ಜೀವನಕ್ಕೆ ಹಲವು ದಶಕಗಳ ನಂತರ ಕರ್ನಾಟಕದಲ್ಲಿ ಮುನ್ನುಡಿ ಬರೆಯಲಾಯಿತು. ಇದರಿಂದಾಗಿಯೇ ದೇಸಿರಿಯು ತನ್ನ ಪ್ರಮುಖ ಉದ್ದೇಶಗಳಲ್ಲಿ ದೇಸಿ ತಳಿಯ ಎತ್ತುಗಳ ಸಂರಕ್ಷಣೆ ಮತ್ತು ಬೆಳವಣಿಗೆ ಯನ್ನು ಮುಖ್ಯವಾಗಿ ಅಳವಡಿಸಿಕೊಂಡಿದೆ’ ಎನ್ನುತ್ತಾರೆ ನವೀನ್.
ವಿವಿಧೆಡೆ ಶಾಖೆಗಳು: ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ ಮತ್ತು ತೆಲಂಗಾಣದ 17 ಸ್ಥಳಗಳಲ್ಲಿ 20 ಕ್ಕೂ ಹೆಚ್ಚು ಎತ್ತಿನ ಗಾಣಗಳನ್ನು ಸ್ಥಾಪಿಸಲು ಅಗತ್ಯ ಸಹಕಾರ ತರಬೇತಿ ನೀಡಿದೆ. ಮಲೇಷ್ಯಾ, ಸಿಂಗಾಪುರ, ಅರಬ್ ದೇಶಗಳು ಹಾಗೂ ಅಮೆರಿಕದಿಂದಲೂ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ದೇಸಿರಿಯ ಎರಡನೇ ಮತ್ತು ಮೂರನೇ ಘಟಕಗಳು ಬೆಂಗಳೂರು ಸಮೀಪದ ಮಾಗಡಿ ಮತ್ತು ನಂಜನಗೂಡು ಸಮೀಪದ ನಂದಿ ಗ್ರಾಮ ದಲ್ಲಿ ತೆರೆಯಲು ಸಕಲ ತಯಾರಿ ನಡೆಸಲಾಗುತ್ತಿದೆ.
‘ದೇಸಿರಿಯ ಯಾವುದೇ ಕಾರ್ಯಾಚರಣೆಯಲ್ಲಿ ತ್ಯಾಜ್ಯ ರಹಿತ ವಾಗಿರುವುದು, ವಿದ್ಯುಚ್ಛಕ್ತಿ ರಹಿತ, ರಾಸಾಯನಿಕ ರಹಿತ ಮತ್ತು ಶೂನ್ಯ ತ್ಯಾಜ್ಯ ವಿಧಾನಗಳನ್ನು ಕೈಗೊಳ್ಳುತ್ತಿದ್ದೇವೆ. ಫೋಟೋ ಕೆಮಿಕಲ್ ರಿಯಾಕ್ಷನ್ ತಪ್ಪಿಸಲು ಡಾ. ಖಾದರ್ ಅವರ ಮಾರ್ಗದರ್ಶನದಂತೆ, ಕಂದು ಬಣ್ಣದ ಗಾಜಿನ ಬಾಟಲ್ಗಳಲ್ಲಿ (ಮರುಬಳಕೆ ಮಾಡಬಹುದಾದ ಬಾಟಲ್ಗಳು) ಮತ್ತು ಸ್ಟೀಲ್ ಪಾತ್ರೆಗಳಲ್ಲಿ ಸರಬರಾಜು ಮಾಡುವ ವಿಧಾನವನ್ನು ಪ್ರಾರಂಭಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ವಿನೂತನ ಮಾದರಿಯ ಸರಬರಾಜಿನಿಂದಾಗಿ ದೇಸಿರಿಯು ಅಂದಾಜು 400 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಅನ್ನು ಭೂತಾಯಿಯ ಒಡಲನ್ನು ಸೇರುವುದನ್ನು ತಪ್ಪಿಸಿದೆ’ ಎನ್ನುತ್ತಾರೆ ಮಹೇಶ್.
ದೇಸಿರಿಯ ನೈಸರ್ಗಿಕ ಉತ್ಪನ್ನಗಳ ಪಟ್ಟಿಗೆ ಹೊಸ ಸೇರ್ಪಡೆ ಪಶು ಗ್ರಾಸ. ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುಪಾಲು ಪಶು ಆಹಾರದಲ್ಲಿ ಯೂರಿಯಾ ಮತ್ತಿತರ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಇವುಗಳಿಂದ ಗೋವುಗಳು ಪ್ರಾರಂಭದಲ್ಲಿ ಅತೀ ಹೆಚ್ಚು ಹಾಲು ನೀಡಿದರೂ ದೀರ್ಘಾವಧಿಯಲ್ಲಿ ಗೋವುಗಳ, ಎತ್ತುಗಳ ದೈಹಿಕ ಶಕ್ತಿ ಕುಂದಿಸುತ್ತದೆ. ಹಾಲಿನ ಗುಣಮಟ್ಟವೂ ಹಾಳಾಗಿ ಮನುಷ್ಯರ ಆರೋಗ್ಯವನ್ನೂ ಹಾಳುಮಾಡುತ್ತದೆ. ಇದನ್ನು ಮನಗಂಡು ದೇಸಿರಿಯು ದೇಸಿ ಹಸುಗಳ ಆರೋಗ್ಯ ರಕ್ಷಣೆಗಾಗಿ ಮತ್ತು ಅವುಗಳು ನೀಡುವ ಹಾಲಿನ ಗುಣಮಟ್ಟ ಮತ್ತು ಹಾಲು ನೀಡುವ ಪ್ರಮಾಣವನ್ನು ವೃದ್ಧಿಗೊಳಿಸಲು ದೇಸಿರಿಯು ನೈಸರ್ಗಿಕವಾಗಿ ತಯಾರಿಸಲಾಗಿರುವ ಪೌಷ್ಟಿಕವಾಗಿರುವ ಎತ್ತಿನ ಗಾಣದ ಹಿಂಡಿಯನ್ನು ಬಳಸಿಕೊಂಡು ನಾರು, ಕೊಬ್ಬು ಮತ್ತು ಪೋಷಕಾಂಶ ಭರಿತ ಪಶು ಗ್ರಾಸವನ್ನು ಶೀಘ್ರದಲ್ಲಿಯೇ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಹೊರ ತರುತ್ತಿದೆ.
34 ಲಕ್ಷ ಉದ್ಯೋಗ ಸೃಷ್ಟಿ!: ಗಾಣದಿಂದ ಎಣ್ಣೆ ತೆಗೆಯುವ ಉದ್ಯಮದಿಂದ ಬೃಹತ್ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಈ ಯುವಕರ ಮಾತು. ‘ಭಾರತದ ಜನಸಂಖ್ಯೆ ಸುಮಾರು 135 ಕೋಟಿ. ಒಂದು ಕುಟುಂಬದಲ್ಲಿ 4 ಜನರೆಂದು ಪರಿಗಣಿಸಿದರೆ ಒಟ್ಟು ಕುಟುಂಬಗಳು 33 ಕೋಟಿ. ಈ ಪ್ರತಿ ಕುಟುಂಬದ ಸರಾಸರಿ ಅಡುಗೆ ಎಣ್ಣೆಯ ಬಳಕೆ 2 ಲೀಟರ್ ಎಂದುಕೊಂಡರೆ ಪ್ರತಿ ತಿಂಗಳಿಗೆ 67 ಕೋಟಿ ಲೀಟರ್ ಅವಶ್ಯಕತೆಯಿದೆ. ಗಾಣದಿಂದ ದಿನಕ್ಕೆ ಸುಮಾರು 20 ಲೀಟರ್ ಎಣ್ಣೆಯನ್ನು ತೆಗೆಯಬಹುದು. ಅಂದರೆ 67 ಕೋಟಿ ಲೀಟರ್ ಎಣ್ಣೆಗೆ ಸುಮಾರು 11. 25 ಲಕ್ಷ ಎತ್ತಿನ ಗಾಣಗಳು ಬೇಕು. ಭಾರತದಲ್ಲಿ 6.51 ಲಕ್ಷ ಗ್ರಾಮಗಳಿವೆ, ಪ್ರತಿ ಗ್ರಾಮದಲ್ಲೂ ಎರಡು ಗಾಣಗಳನ್ನು ಸ್ಥಾಪಿಸಿದ್ದೇ ಆದಲ್ಲಿ ನಮ್ಮ ದೇಶದ ಅಡುಗೆ ಎಣ್ಣೆಯ ಸಂಪೂರ್ಣ ಅಗತ್ಯವನ್ನು ಪೂರೈಸಬಹುದಾಗಿದೆ. ಒಂದು ಗಾಣದ ಕಾರ್ಯಾಚರಣೆಗೆ ಕನಿಷ್ಠ ಮೂರು ಜನರು ಮತ್ತು ಎರಡು ದೇಸಿ ಎತ್ತುಗಳ ಅವಶ್ಯಕತೆಯಿದೆ. ಅಂದರೆ 11 ಲಕ್ಷ ಮತ್ತು 25 ಸಾವಿರ ಎತ್ತಿನ ಗಾಣಗಳ ಸ್ಥಾಪನೆಯಿಂದ ಸುಮಾರು 33 ಲಕ್ಷ 75 ಸಾವಿರ ನೇರ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಮತ್ತು ಸುಮಾರು 22 ಲಕ್ಷ 50 ಸಾವಿರ ದೇಸಿ ಎತ್ತುಗಳಿಗೆ ಉದ್ಯೋಗ ದೊರೆಯುತ್ತವೆ. ರೈತರು ತಮ್ಮ ಹಳ್ಳಿಗಳಲ್ಲಿಯೂ ಎಣ್ಣೆಕಾಳು, ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಎತ್ತಿನ ಗಾಣದ ಉದ್ಯಮ ಭಾರತದ ಆರ್ಥಿಕತೆಗೆ ಮತ್ತು ಹಳ್ಳಿಗಳ ಸ್ವಾವಲಂಬನೆಗೆ ಹೊಸ ಭಾಷ್ಯವನ್ನೇ ಬರೆಯುವುದರಲ್ಲಿ ಅನುಮಾನವಿಲ್ಲ. ಪ್ರತಿ ತಿಂಗಳ ಸಂಬಳ ಕನಿಷ್ಠ 9 ಸಾವಿರ ಎಂದರೂ ಪ್ರತಿ ತಿಂಗಳು ಸುಮಾರು 3 ಲಕ್ಷ ಕೋಟಿ ರೂಪಾಯಿಗಳು ಹಳ್ಳಿಗೆ ಹರಿದು ಬರುತ್ತವೆೆ. ಇದು ಭಾರತದ ಒಂದು ವರ್ಷದ ರಕ್ಷಣಾ ಬಜೆಟ್ಗೆ ಸಮನಾದುದು ಅಥವಾ 2 ವರ್ಷಗಳ ರೈಲ್ವೆ ಬಜೆಟ್ಗೆ ಸಮನಾದುದು. ಈಗ ಹೇಳಿ, ನಮಗೆ ಹಳ್ಳಿಯಲ್ಲಿ ಉದ್ಯೋಗವಿಲ್ಲ ಎಂದವರು ಯಾರು ? ನಾವು ಯಾಕೆ ಹಳ್ಳಿಗಳಿಂದ ಪಟ್ಟಣಕ್ಕೆ ವಲಸೆ ಹೋಗಬೇಕು ?’ ಎನ್ನುತ್ತಾರೆ ಅವರು.
ನಮ್ಮ ಸಾಂಪ್ರದಾಯಿಕ, ನೈಜ ಆಹಾರ ಪದ್ಧತಿ ಕಳೆದುಹೋಗಿ ಬಿಟ್ಟಿದೆ ಎನ್ನುವುದಕ್ಕೆ ರಾಸಾಯನಿಕ ಆಹಾರ ತಯಾರಿಕಾ ಕಂಪನಿಗಳು, ಆಸ್ಪತ್ರೆಗಳು ಗಳಿಸುತ್ತಿರುವ ಆದಾಯವೇ ಸಾಕ್ಷಿಯಾಗಿದೆ. ಶೀತ, ನೆಗಡಿಯಂತೆ ಸಾಮಾನ್ಯವಾಗಿರುವ ಕ್ಯಾನ್ಸರ್, ಹೃದ್ರೋಗ ಕಾಯಿಲೆಗಳು, ಕಲಬೆರಕೆ, ರಾಸಾಯನಿಕಯುಕ್ತ ಆಹಾರ ಪದ್ಧತಿ, ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ ಇತ್ಯಾದಿಗಳಿಗೆ ಉತ್ತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮೂವರು ಯುವಕರು ಶುರು ಮಾಡಿರುವ ‘ದೇಸಿರಿ’ ಉದ್ಯಮ ಇಂದು ಬೃಹದಾಕಾರವಾಗಿ ಬೆಳೆದು ಗುರಿ ತಲುಪುವತ್ತ ಯಶಸ್ಸಿನ ಹೆಜ್ಜೆ ಇಟ್ಟಿದೆ.
ಹೆಚ್ಚಿನ ಮಾಹಿತಿಗೆ ಯೋಗೇಶ್ : 96869 88887