ಈ ಜಗತ್ತಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನು ಮಾಡಲು ಹುಟ್ಟಿಲ್ಲ. ಯಜಮಾನರಾಗಲು ಕೆಲವರು, ನೌಕರರಾಗಿ ಕೆಲವರು-ಹೀಗೆ ಈ ಪ್ರಪಂಚದ ಎಲ್ಲ ಪ್ರಕ್ರಿಯೆಗಳೂ ಸುಸೂತ್ರವಾಗಿ ಮುಂದುವರಿಯಲು ಬೇರೆ ಬೇರೆ ಕೆಲಸಗಳಿಗೆ ಸೂಕ್ತವಾದವರ ಸೃಷ್ಟಿಯಾಗಿದೆ. ಈ ವ್ಯವಸ್ಥೆಯಲ್ಲಿ ನಿಮ್ಮ ಜಾಯಮಾನಕ್ಕೆ ಹೊಂದುವ ಸ್ಥಾನ ಯಾವುದೆಂದು ನೀವೇ ನಿರ್ಧರಿಸಿಕೊಳ್ಳಬೇಕು.
ಕೃತಜ್ಞತೆ ಪದವನ್ನು ಚೆನ್ನಾಗಿ ಅರ್ಥೈಸಿಕೊಳ್ಳಿ. ಅದು ತೀರಿಸಲಾಗದ ಸಾಲ. ನಾವು ಯಾರಿಂದ ಏನನ್ನೇ ಪಡೆದಿದ್ದರೂ ಅದಕ್ಕಿಂತ ಹೆಚ್ಚಿನದನ್ನು ಹಿಂತಿರುಗಿಸಲು ಪ್ರಯತ್ನಿಸಬೇಕು. ಮನುಷ್ಯ ತಾನು ಕೊಟ್ಟದ್ದನ್ನು ಮಾತ್ರ ಲೆಕ್ಕ ಇಟ್ಟುಕೊಂಡಿರುತ್ತಾನೆಯೇ ಹೊರತು ತೆಗೆದುಕೊಂಡಿದ್ದನ್ನು ಮರೆತೇ ಹೋಗುತ್ತಾನೆ. ಆದ್ದರಿಂದ ಪಡೆದಿದ್ದನ್ನೂ, ಕೊಟ್ಟಿದ್ದನ್ನೂ ಬರೆದಿಡಿ.
ಪ್ಲಾಸ್ಟಿಕ್ ಮೋಲ್ಡಿಂಗ್ ಟೂಲ್ ಮೇಕರ್ ಒಬ್ಬರು ತಿಂಗಳಿಗೆ -ಠಿ; 4,500 ಸಂಬಳ ಕೇಳಿಕೊಂಡು ಬಂದರು, ಕೆಲಸ ಕೊಟ್ಟೆ. ಅವರನ್ನು ಪ್ರೋತ್ಸಾಹಿಸಿ ಬೆಳೆಸಿದೆ. ಅವರೇ ಸ್ವಂತ ಉದ್ಯಮ ನಡೆಸಲೆಂದು ನನ್ನಲ್ಲಿದ್ದ ಮೋಲ್ಡಿಂಗ್ ಮಶಿನ್ಗಳನ್ನು ಅವರಿಗೆ ಸಾಲವಾಗಿ ಕೊಟ್ಟು ಜಾಗವನ್ನೂ ನೀಡಿದೆ. ಕೆಲವು ವರ್ಷ ಬಾಡಿಗೆಯನ್ನೂ ತೆಗೆದುಕೊಂಡಿರಲಿಲ್ಲ. ನನ್ನ ಉದ್ದೇಶ ಅವರ ಬೆಳವಣಿಗೆ ಮಾತ್ರವಾಗಿತ್ತು. ಅವರು ಎಷ್ಟು ಬೆಳೆದರೆಂದರೆ ಈಗ ಸಾಲವನ್ನೆಲ್ಲ ತೀರಿಸಿ ಶ್ರೀಮಂತರಾಗಿದ್ದಾರೆ.
ಇತ್ತೀಚೆಗೆ ಅವರೊಡನೆ ಸ್ವಲ್ಪ ಮನಸ್ತಾಪ ಬಂತು. ಕಾರಣ ಏನೆಂದರೆ, ನಾನು ಅವರಿಗೆ ಮಾರದೇ ಇದ್ದ ಕೆಲವು ಯಂತ್ರಗಳನ್ನು ಅವರ ಕೆಲಸಗಳಿಗೂ ಉಪಯೋಗಿಸುತ್ತಿದ್ದರು. ನನ್ನ ಕೆಲಸಗಳಿಗಾಗಿ ಅವುಗಳನ್ನು ಬಳಸಿದಲ್ಲಿ ವಿದ್ಯುತ್ ಖರ್ಚನ್ನೋ ಅಥವಾ ಬಾಡಿಗೆಯನ್ನೋ ಕೊಡಬೇಕೆಂದು ನನ್ನ ಕೆಲಸಗಾರರೊಂದಿಗೆ ತಕರಾರು ಎತ್ತಿದರು. ವರ್ಷಾನುಗಟ್ಟಲೆ ನನ್ನ ಯಂತ್ರಗಳನ್ನು ಪುಗಸಟ್ಟೆ ಉಪಯೋಗಿಸಿ ನನ್ನ ಸಣ್ಣಪುಟ್ಟ ಕೆಲಸಗಳಿಗೆ ಹಣವನ್ನು ಕೇಳುವುದು ಎಷ್ಟು ಸರಿ?
ನನ್ನ ಮಾತನಾಡುವ ಗೊಂಬೆಯನ್ನು ಮೈಸೂರಿನ ಮೌಲ್ಡರ್ ಒಬ್ಬರು ಮಾಡಿಕೊಟ್ಟಿದ್ದರು. ವೃದ್ಧಾಪ್ಯದಲ್ಲಿ ಅವರ ಏಳೂ ಗಂಡು ಮಕ್ಕಳು ಅವರನ್ನು ಅವರದ್ದೇ ಸ್ವಂತ ಮನೆಯಿಂದ ಹೊರಹಾಕಿದ್ದರು. ನಿರ್ಗತಿಕರಾದ ಅವರಿಗೆ ಖರ್ಚಿಗೆಂದು ತಿಂಗಳಿಗೆ -ಠಿ; 2 ಸಾವಿರ ಕೊಡುತ್ತಿದ್ದೆ. ಅವರು ಕೆಲವಾರು ವರ್ಷಗಳ ನಂತರ ತೀರಿಕೊಂಡ ಕೆಲವು ದಿನಗಳಲ್ಲಿ ಅವರ ಮಗ ನನ್ನ ಬಳಿ ಬಂದು, ‘ನೀವು ಅಪ್ಪನಿಗೆ ಪ್ರತಿ ತಿಂಗಳು ಬಡ್ಡಿಯನ್ನೇನೋ ಸರಿಯಾಗಿ ಕೊಡುತ್ತಿದ್ರಿ. ಆದ್ರೆ ಈಗ ಸಾಲದ ಅಸಲು ಹಣ ನಂಗೆ ವಾಪಾಸು ಕೊಡಿ’ ಅಂತ ಕೇಳೋದೇ? 2 ಸಾವಿರ ಕೊಡುತ್ತಿದ್ದುದು ಬಹುಶಃ ಆತನ ತಂದೆಯಿಂದ ನಾನು ಸಾಲ ಪಡೆದಿರಬೇಕು ಅಂದುಕೊಂಡು ಅಸಲು ಕೀಳಲು ಬಂದಿದ್ದ. ಕೃತಘ್ನತೆಗೆ ಬೇರೆ ಉದಾಹರಣೆ ಬೇಕೆ?
ಕೃತಜ್ಞತೆಯ ಪಾಠ ಇಲ್ಲಿಗೆ ಸಾಕು. ಈಗ ಬಿಸಿನೆಸ್ ಹೇಗೆ ಮಾಡಬೇಕು ಅಂತ ನೋಡೋಣ.
ನಿಮಗೆ ಯಾವುದೊ ಬಹುಮುಖ್ಯ ಕೆಲಸಕ್ಕಾಗಿ ಅನೇಕರ ನೆರವು ಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ನಿಮ್ಮ ಸಂಬಂಧಿಕರಿಂದ ಕೆಲಸ ಮಾಡಿಸಿದರೆ ಹಣ ಉಳಿಯಬಹುದು ಎಂದು ಹೋಗಬೇಡಿ. ಕೆಲಸ ಕೊಟ್ಟಿರೋ ಶುರುವಾಗುತ್ತದೆ ಅವರ ‘ಬಿಜಿ’ನೆಸ್. ಇವತ್ತು ಬಿಜಿ, ನಾಳೆ ಮಾಡುತ್ತೇನೆ ಅಂತನೋ, ಮದುವೆ ಇದೆ ಪುರುಸೊತ್ತು ಇಲ್ಲ, ಎರಡು ದಿನದ ನಂತ್ರ ಕೊಡುತ್ತೇನೆ ಅಂತನೋ ಮುಂದೂಡುತ್ತಲೇ ಇರುತ್ತಾರೆ. ಅವರು ಏನಾದರೂ ಕೈಕೊಟ್ಟರೆ ನೀವು ಜೋರಾಗಿ ಕೇಳುವಂತೆಯೂ ಇಲ್ಲ, ಯಾಕೆಂದರೆ ಸಂಬಂಧ ಹಾಳಾಗುವ ಸಂಭವ ಇರುವುದರಿಂದ. ಒಮ್ಮೆ ಹೀಗೇ ಆಯ್ತು, ತಿಪಟೂರಿನಲ್ಲಿ ಮ್ಯಾಜಿಕ್ ಶೋ ಕ್ಯಾಂಪನ್ನು ಬುಕ್ ಮಾಡಿದ್ದೆ. ನನ್ನ ಸಂಬಂಧಿಕರ ಪ್ರೆಸ್ನಲ್ಲಿ ಪೋಸ್ಟರ್ ಪ್ರಿಂಟ್ಗೆ ಕೊಟ್ಟಿದ್ದೆ. ಆರ್ಡರ್ ತಗೊಳ್ತಾ, ‘ನೀನೇನು ಯೋಚ್ನೆ ಮಾಡ್ಬೇಡಾ, ಹೇಳಿದ ಟೈಮಿಗೆ ಮಾಡಿ ಕೊಡ್ತೇನೆ’ ಅಂತ ಹೇಳಿದ್ದರು. ಶೋ ದಿನ ಹತ್ತಿರ ಬರ್ತಿದ್ದ ಹಾಗೆ ಪ್ರಚಾರ ಶುರು ಮಾಡ್ಬೇಕು, ಪ್ರಿಂಟರ್ ಹತ್ರ ಹೋದ್ರೆ ‘ಮಾಡ್ತೀನಪ್ಪಾ, ಅದ್ಯಾಕೆ ಅಷ್ಟೊಂದು ಟೆನ್ಶನ್ ಮಾಡ್ಕೋತೀಯಾ, ಅದೆಲ್ಲ ಅರ್ಧಗಂಟೆ ಕೆಲ್ಸ ನನ್ ಮಷೀನಿಗೆ’ ಅಂತ ಹೇಳಿ ಪ್ರತಿ ಸಾರಿ ನನ್ನನ್ನು ಸಾಗ ಹಾಕುತ್ತಿದ್ದರು. ಕೊನೆಗೆ ಸಾಕಾಗಿ ನಾನು ರೇಗಿದ್ದಕ್ಕೆ ಅರ್ಧಗಂಟೆ ಕೆಲಸವನ್ನು 72 ಗಂಟೆಯ ನಂತರ ಮಾಡಿಕೊಟ್ಟರು! ಇದರಿಂದಾಗಿ ಪ್ರದರ್ಶನ ಮುಂದೂಡಬೇಕಾಯ್ತು.
ಈ ಜಗತ್ತಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನು ಮಾಡಲು ಹುಟ್ಟಿಲ್ಲ. ಯಜಮಾನರಾಗಲು ಕೆಲವರು, ನೌಕರರಾಗಿ ಕೆಲವರು, ಕೂಲಿಯಾಳುಗಳಾಗಿ ಕೆಲವರು-ಹೀಗೆ ಈ ಪ್ರಪಂಚದ ಎಲ್ಲ ಪ್ರಕ್ರಿಯೆಗಳೂ ಸುಸೂತ್ರವಾಗಿ ಮುಂದುವರಿಯಲು ಬೇರೆ ಬೇರೆ ಕೆಲಸಗಳಿಗೆ ಸೂಕ್ತವಾದವರ ಸೃಷ್ಟಿಯಾಗಿದೆ. ಈ ವ್ಯವಸ್ಥೆಯಲ್ಲಿ ನಿಮ್ಮ ಜಾಯಮಾನಕ್ಕೆ ಹೊಂದುವ ಸ್ಥಾನ ಯಾವುದೆಂದು ನೀವೇ ನಿರ್ಧರಿಸಿಕೊಳ್ಳಬೇಕು. ಕೆಲಸಗಾರ ಯಜಮಾನನಾಗುವುದು ಕಷ್ಟಸಾಧ್ಯ. ಹಾಗೆಯೇ ಯಜಮಾನ ಕೆಲಸ ಮಾಡಲು ಹೊರಟರೆ ಅದು ಅಸಾಧ್ಯ. ‘ಸಬ್ ಹುಯೀ ರಾಣಿ, ಕೌನ್ ಭರೇಗಾ ಪಾನಿ’ ಅನ್ನೋ ಥರ ಎಲ್ಲರೂ ರಾಣಿಯರಾದ್ರೆ ನೀರು ತುಂಬೋರು ಯಾರು? ಕೆಲವರು ಇರುತ್ತಾರೆ, ಸಾಕಷ್ಟು ದುಡೀತಾ ನೆಮ್ಮದಿಯ ಜೀವನ ನಡೆಸುತ್ತಿರುತ್ತಾರೆ. ಆದರೆ ಕಂಪನಿ ಯಜಮಾನರ ಒತ್ತಡಕ್ಕೋ ಅಥವಾ ಸಂಪಾದನೆ ಸಾಲದೆಂಬ ಹೆಂಡತಿಯ ಕಿರಿಕಿರಿಗೋ ಸ್ವಂತ ಉದ್ಯಮ ಮಾಡಲು ಹೋಗಿ ಜೀವಮಾನದ ಉಳಿತಾಯದ ದುಡ್ಡನ್ನೆಲ್ಲ ಕಳೆದುಕೊಂಡವರನ್ನೂ ನೋಡಿದ್ದೇನೆ.
ನೀವು ಯಾವುದಾದ್ರೂ ಸಾಹಸ ಮಾಡೋದಾದರೆ ಚಿಕ್ಕ ವಯಸ್ಸಲ್ಲೇ ಮಾಡಿ, ಏಕೆಂದರೆ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ಇರುತ್ತದೆ. ನಿಮ್ಮಲ್ಲಿ ಯಾರಿಗಾದರೂ ಬಿಜಿನೆಸ್ ಶುರು ಮಾಡಬೇಕು ಅಂತ ಇದ್ದರೆ ಕೆಲವು ಸಲಹೆ ಕೊಡುತ್ತೇನೆ. ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತ ಆಂದೋಲನಕ್ಕೆ ಕರೆಕೊಟ್ಟಿದ್ದಾರೆ. ಇದರಿಂದ ಸ್ಪೂರ್ತಿಗೊಂಡು ನೀವೂ ಬಿಜಿನೆಸ್ ಮಾಡಲು ಹೊರಟಿರಿ ಎಂದಿಟ್ಟುಕೊಳ್ಳೋಣ. ಇದಕ್ಕೆ ನೀವು ಮಾಡುವ ಮೊದಲ ಕೆಲಸ ಏನೆಂದು ನನಗೆ ಗೊತ್ತು. ಒಂದು ಜಾಗವನ್ನು ಬಾಡಿಗೆಗೆ ತೆಗೆದುಕೊಳ್ಳುವುದು. ಇದನ್ನು ಖಂಡಿತ ಮಾಡಬೇಡಿ, ಆದರೆ ಸೂಕ್ತ ಜಾಗ ಹುಡುಕುತ್ತ ಇರಿ. ಬಿಸಿನೆಸ್ಸೇ ಶುರು ಮಾಡದೆ ಆಫೀಸ್ ಬಾಡಿಗೆಗೆ ಪಡೆದರೆ ಕೆಲವು ತಿಂಗಳು ಸುಮ್ಮನೆ ಬಾಡಿಗೆ ಕಟ್ಟುವ ಪ್ರಮೇಯ ಬರಬಹುದು. ಆದಾಯ ಬರೋ ಮುಂಚೆನೇ ಖರ್ಚು ಪ್ರಾರಂಭವಾಗಿ ಬಿಡುತ್ತದೆ. ಖರ್ಚನ್ನು ಕಡಿಮೆ ಮಾಡುವುದೇ ವ್ಯಾಪಾರದ ಮೂಲಮಂತ್ರ. ಯಾವ ಬಿಜಿನೆಸ್ ಮಾಡಬೇಕೆಂದು ಮೊದಲು ನಿರ್ಧರಿಸಬೇಕು. ಯಾವುದೇ ವಸ್ತುವನ್ನು ನೀವು ಉತ್ಪಾದಿಸಿ ಮಾರುತ್ತೀರಿ ಎಂದಾದರೆ ಆ ವಸ್ತುವಿನ ಖರೀದಿದಾರರನ್ನು ಹುಡುಕಬೇಕು.
ನಿಮ್ಮ ವಸ್ತು ಹಂಚಿಕೆದಾರನ ಮೂಲಕ ಹೋಲ್ಸೇಲ್ ಮಾರಾಟಗಾರನಿಗೆ ಹೋಗಿ ನಂತರ ರೀಟೈಲ್ ಮಾರಾಟಗಾರನಿಗೆ ತಲುಪಿ ಕೊನೆಗೆ ಗ್ರಾಹಕನನ್ನು ತಲಪುತ್ತದೆಯೋ ಅಥವಾ ಆನ್ಲೈನ್ನಲ್ಲಿ ನೇರವಾಗಿ ಗ್ರಾಹಕನಿಗೇ ಮಾರುತ್ತೀರಾ? ನಿರ್ಧರಿಸಿ. ಆನ್ಲೈನ್ನಲ್ಲಾದರೆ ಪ್ಯಾಕಿಂಗಿಗೆ ಖರ್ಚು ಕಮ್ಮಿ, ಒಳ್ಳೆ ಜಾಗದಲ್ಲಿ ಶೋರೂಂ ಕೂಡ ಬೇಕಾಗಿಲ್ಲ. ಆದರೆ ವೆಬ್ಸೈಟ್ ಬೇಕು, ಮಾರ್ಕೆಟಿಂಗ್ಗೆ ಜನ ಬೇಕು, ಇವರನ್ನು ಹೇಗೆ ಹುಡುಕುತ್ತೀರಿ? ನಿಮ್ಮ ಹತ್ತಿರ ಬಂಡವಾಳ ಎಷ್ಟಿದೆ, ಕಮ್ಮಿಯಾದಲ್ಲಿ ಎಲ್ಲಿಂದ ತರುತ್ತೀರಿ ಎಂಬಿತ್ಯಾದಿಗಳನ್ನು ಮೊದಲು ನಿರ್ಧರಿಸಬೇಕು. ಇದಕ್ಕೆ ಮೊದಲು ಹೋಂವರ್ಕ್ ಮಾಡಬೇಕಾದ ಅವಶ್ಯಕತೆ ಇದೆ. ಬೆಳಗ್ಗೆ ಬೇಗ ಎದ್ದು ನಿಮ್ಮ ಬಿಜಿನೆಸ್ಗೆ ಸಂಬಂಧಪಟ್ಟಂತೆ ಆದಿನ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಮಾತ್ರವಲ್ಲ ಆ ಎಲ್ಲ ಕೆಲಸಗಳನ್ನು ಅಂದೇ ಮಾಡಿ ಮುಗಿಸಬೇಕು. ರಾತ್ರಿ ಮಲಗುವಾಗ ಯಾವುದಾದರೂ ಕೆಲಸ ಬಾಕಿ ಇದೆಯಾ ಎಂದು ಪರಿಶೀಲಿಸಿ ಮರುದಿನಕ್ಕೆ ಬರೆದಿಟ್ಟುಕೊಳ್ಳಬೇಕು. ಜೋಕು: ಇದ್ದಕ್ಕಿದ್ದಂತೆ ಕರೆಂಟ್ ಹೋಯ್ತು. ವ್ಯಾಪಾರಿ ಗ್ರಾಹಕನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ‘ಇವತ್ತು ನಮ್ಮ ಮನೆಯಲ್ಲೇ ರಾತ್ರಿ ಊಟ ಮಾಡಿಯೇ ಹೋಗ್ಬೇಕು’ ಎಂದ. ಗ್ರಾಹಕ ಎಷ್ಟೇ ಥರದ ನೆಪಗಳನ್ನು ಹೇಳಿದರೂ ಕೈ ಬಿಡದ ವ್ಯಾಪಾರಿ ಕರೆಂಟ್ ಬಂದ ಕೂಡಲೇ ‘ಸರಿ, ಹಾಗಾದರೆ ಹೋಗಿ, ನಾನು ಹೆಚ್ಚು ಒತ್ತಾಯ ಮಾಡೊಲ್ಲಾ’ ಅಂತ ಹೇಳಿ ಗಲ್ಲಾಪೆಟ್ಟಿಗೆಯನ್ನು ಮುಚ್ಚಿ ನಿಟ್ಟುಸಿರು ಬಿಟ್ಟ. ಗ್ರಾಹಕ ಕತ್ತಲಲ್ಲಿ ತನ್ನ ಗಲ್ಲಾಪೆಟ್ಟಿಗೆಗೆ ಕೈಹಾಕದಂತೆ ಮಾಡಿದ ತನ್ನ ಜಾಣ್ಮೆಗೆ ತಾನೇ ಬೆನ್ನು ತಟ್ಟಿಕೊಂಡ.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)