ಮಾನವ ಸಂತತಿಗೆ ಶೀಲ ಚಾರಿತ್ರ್ಯಗಳ ಆದರ್ಶಗಳ ಬಗ್ಗೆ ಭರವಸೆ ಬದ್ಧತೆಗಳು ಮೂಡುವುದೇ ಶೀಲವಂತ ಶಿಕ್ಷಕರ ಒಡನಾಟದಿಂದ. ‘ತನ್ನ ಜೀವನ ಇತರರಿಗೆ ಜೀವದಾನ ನೀಡಲು’ ಎಂಬುದು ಶಿಕ್ಷಕನ ಜೀವನದ ಮೇಲ್ಪಂಕ್ತಿ ಆಗಬೇಕು. ಶಿಕ್ಷಕನು ಪಾಠವನ್ನಷ್ಟೇ ಕಲಿಸಿದರೆ ಸಾಲದು; ಜೀವನವನ್ನು ಕಲಿಸಬೇಕು.
ಗುರುವಿನ ಸ್ಥಾನವನ್ನು ವಿಶ್ವಸಾರತಂತ್ರವು ಗುರ್ತಿಸಿದ ಬಗೆ ಮನೋಜ್ಞ.
ನ ಗುರೋದಧಿಕಂ ತತ್ತ್ವಂ ನ ಗುರೋರಧಿಕಂ ತಪಃ|
ತತ್ತ್ವಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರುವೇ ನಮಃ||
‘ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದುದು ಯಾವುದೂ ಇಲ್ಲ, ಆದುದರಿಂದ ಶ್ರೀ ಗುರುವನ್ನು ನಮಿಸುತ್ತೇನೆ.’
ನಮ್ಮ ಭವ್ಯ ಪರಂಪರೆಯ ನಿರ್ವತೃ ನಮ್ಮ ಗುರು. ವ್ಯಕ್ತಿಗೆ ಸತ್ಯದ ಪರಿಚಯವನ್ನು ಮಾಡಿ, ಅದನ್ನು ಶಿಷ್ಯನ ವ್ಯಾವಹಾರಿಕ ಬದುಕಿನಾಚರಣೆಯಲ್ಲಿ ತರುವಂತೆ ಮಾಡುವ ಶ್ರೀಗುರುವು ವ್ಯಕ್ತಿಯೂ ಹೌದು, ತತ್ತ್ವದ ಪ್ರತಿನಿಧಿಯೂ ಹೌದು. ಮಹೋನ್ನತ ಮೌಲ್ಯಗಳು ಶಾಶ್ವತ ಗುಣವಿಶೇಷಗಳೇ ಆದರೂ ಕಾಲದ ಪ್ರಭಾವದಿಂದ ಕಳೆಗುಂದಿದಾಗ ಅವುಗಳು ಮತ್ತೆ ನಳನಳಿಸುವಂತೆ ಮಾಡುವ ಮಹಾತ್ಮ ಶಿಕ್ಷಕನೇ. ವಿಕಾಸದ ಸುದೀರ್ಘ ಪಯಣದಲ್ಲಿ ಜನ್ಮಜನ್ಮಗಳ ನೂರಾರು ಹಂತಗಳಲ್ಲಿ ನಮ್ಮ ಕೈಹಿಡಿದು ಮುನ್ನಡೆಸುವ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಅಷ್ಟೇಕೆ ಪರಬ್ರಹ್ಮವೆಂದು ಪೂಜ್ಯತೆಯಲ್ಲಿ ಗುರ್ತಿಸಿರುವುದು ಆಲೋಚನೀಯ ಸಂಗತಿ.
ಬದುಕನ್ನು ಕೇವಲ ಅಸ್ತಿತ್ವವೆಂದೇ ಬಿಂಬಿಸಿದರೆ ಏನು ಲಾಭ? ಅದಕ್ಕೆ ಜೀವವಿದೆ, ಜೀವಂತಿಕೆಯು ನಮ್ಮಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗುತ್ತದೆ. ಶ್ರದ್ಧೆ ಮತ್ತು ವಿಶ್ವಾಸಗಳು ಬದುಕನ್ನು ನಳನಳಿಸುವಂತೆ ಮಾಡುತ್ತವೆ. ‘ಜೀವನ ಬದುಕುವುದಕ್ಕಾಗಿ ಇರುವಂಥದ್ದು, ಸಾಯುವುದಕ್ಕಲ್ಲ’ ಎಂಬ ವಿವೇಕ ಮೂಡಿದಾಗ ನಾವು ದಿನನಿತ್ಯದಲ್ಲಿ ಎದುರಾಗುವ ಕಷ್ಟಕೋಟಲೆಗಳನ್ನು ‘ಅವಕಾಶ’ಗಳೆಂದೇ ಭಾವಿಸಿ ಹೋರಾಡುತ್ತೇವೆ, ಪುಣ್ಯಕೋಟಿಗಳಾಗುತ್ತೇವೆ. ಒಟ್ಟಾರೆ ಉಪನಿಷತ್ತುಗಳು ಉದ್ಘೋಷಿಸಿರುವಂತೆ ‘ಯಸ್ಯ ಛಾಯಾ ಅಮೃತಾ, ಯಸ್ಯ ಮೃತ್ಯು’. ಅಂದರೆ ಸತ್ಯವೆಂದರೆ, ‘ಯಾವುದರ ನೆರಳು ಜೀವನ ಮರಣಗಳೋ ಅದು’ ಎಂಬ ವಾಸ್ತವಿಕತೆಗೆ ತಲೆಬಾಗಿ ಹೋರಾಡುತ್ತೇವೆ. ‘ಜೀವನ ಸುಲಭವಲ್ಲ, ಆರಾಮ ವಲ್ಲ, ಅದೊಂದು ಅನ್ವೇಷಣೆ’ ಎಂಬುದು ನಮ್ಮ ಬದುಕಿನ ಶೀರ್ಷಿಕೆ ಆಗುತ್ತದೆ.
ಜೀವನದ ವಾಸ್ತವ ಅರಿಯಲು ಮಾನವನಿಗೆ ಮಾತಾಪಿತೃಗಳು, ಗುರುಹಿರಿಯರು ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಪ್ರಭಾವವಿರುತ್ತದೆ. ಪ್ರತಿಯೊಬ್ಬರಲ್ಲೂ ಆಸೆ ಇರುವುದು ವಾಸ್ತವವೇ. ಆದರೆ ಅದನ್ನು ಸಾಕಾರಗೊಳಿಸಿಕೊಳ್ಳಲು ಇಚ್ಛಾಶಕ್ತಿ ಇರುವುದಂತೂ ಕೆಲವರಲ್ಲಿ ಮಾತ್ರ. ಮನುಷ್ಯ ಪ್ರಪಂಚದ ನಾವು ಕಾಣುವುದಾದರೂ ಏನು? ಕಾರ್ಯಸಾಧನೆಗೆ ಪ್ರಯತ್ನವನ್ನೇ ಮಾಡದವರು, ಅರೆಮನಸ್ಸಿನಿಂದ ಕಾರ್ಯರಂಗಕ್ಕೆ ಧುಮುಕಿದವರು, ಮಾರ್ಗಮಧ್ಯೆ ಕೈಚೆಲ್ಲಿ ಓಡಿದವರು, ಸಾವಿಗಿಂತಲೂ ಬದುಕಿಗೇ ಹೆದರಿದವರು ಇತ್ಯಾದಿ ಇತ್ಯಾದಿ. ಆದರೆ ಇವರೆಲ್ಲರ ನಡುವೆ, ‘ಸೋಲುವುದು ಅವಮಾನವಲ್ಲ, ಸಣ್ಣಗುರಿ ಇರಿಸಿಕೊಳ್ಳುವುದು ಅಪರಾಧ’, ‘ಬಲವಾದ ನೂರು ಕೈಗಳಿಗಿಂತ ಚುರುಕಾದ ಒಂದು ಮಿದುಳು ಶ್ರೇಷ್ಠ; ಹೊಟ್ಟೆ ಬೆಳೆದಷ್ಟು ಸುಲಭವಲ್ಲ ತಲೆ ಬೆಳೆಯುವುದು...’ ಇವೇ ಮೊದಲಾದ ಲೋಕಾನುಭವಗಳ ನುಡಿಯನ್ನು ದಿಟ್ಟಿಸಿಯೇ ನೋಡಬೇಕಲ್ಲವೇ? ಒಟ್ಟಾರೆ ದುರ್ಬಲರನ್ನು ಬಲಿಷ್ಠರನ್ನಾಗಿಸುವುದಾಗಲಿ, ಮೂರ್ಖರನ್ನು ಅಕ್ಷರಸ್ಥರನ್ನಾಗಿಸಿದರೂ ವಿಚಾರವಂತರನ್ನಾಗಿಸುವುದಾಗಲಿ ಸುಲಭದ ಮಾತಲ್ಲ!
ಮಾತಾಪಿತೃಗಳ ಪಾತ್ರ: ಜನ್ಮ ನೀಡಿದ ತಾಯಿತಂದೆಯರು ನಿಜಕ್ಕೂ ಪೂಜನೀಯರೇ. ಮಕ್ಕಳನ್ನು ಐದನೇ ವರ್ಷದವರೆಗೆ ಮುದ್ದಿಸಬೇಕು, ಹದಿನಾರರವರೆಗೆ ದಂಡಿಸಬೇಕು, ಹದಿನಾರರ ನಂತರ ಅವರೊಂದಿಗೆ ಸ್ನೇಹಭಾವದಿಂದ ವ್ಯವಹರಿಸಬೇಕೆಂಬುದು ಅನುಭಾವಿಗಳ ಹಿತನುಡಿ. ಔಷಧ ಕಹಿಯಾದರೂ ಒತ್ತಾಯಪೂರ್ವಕವಾಗಿಯಾದರೂ ರೋಗಿ ಅದನ್ನು ಸೇವಿಸಿ ರೋಗಮುಕ್ತನಾಗುವಂತೆ, ಮಕ್ಕಳ ಬಾಲಬುದ್ಧಿಗೆ ಸರಿ-ತಪ್ಪುಗಳ ಅರಿವು ಮೂಡುವುದರ ಮೊದಲೇ ಈ ಮಹತ್ತರ ವಿಚಾರಗಳನ್ನು ಅವರ ಅಂತರಂಗದ ಕುಲುಮೆಗೆ ಹಾಕಬೇಕು. ವ್ಯಕ್ತಿಗೆ ವ್ಯಕ್ತಿಗತ ಸ್ವಭಾವ ಹಾಗೂ ಜೀವಿಸುವ ವಾತಾವರಣದ ಪ್ರಭಾವಗಳು ಒದಗಿಬಂದಿರುತ್ತವೆ. ಸಾಮಾನ್ಯನಾದವನು ಪರಿಸರದ ಪ್ರಭಾವಕ್ಕೆ ಒಳಗಾದರೆ, ಚತುರನು ಪರಿಸರದಿಂದ ಲಾಭಗಳಿಸಿ ಬೀಗಿದರೆ ಸಮರ್ಥನು ಪರಿಸರದ ಮೇಲೆಯೇ ತನ್ನ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತಾನೆ.
ಮಾನವನು ಅದೆಷ್ಟು ಚತುರನಾದರೂ ವ್ಯಕ್ತಿತ್ವ ನಿರ್ವಣಗೊಳ್ಳುವುದು, ಸಂಸಾರ-ಸಮಾಜ ಅಷ್ಟೇಕೆ ರಾಷ್ಟ್ರಗಳು ಬದುಕಿ ಉಳಿಯುವುದು ಶೀಲಶಕ್ತಿಯ ಮೇಲೆ. ಶಿಕ್ಷಣವು ವ್ಯಕ್ತಿತ್ವ ನಿರ್ವಣಕ್ಕೆ ಒತ್ತಾಸೆಯಿತ್ತರೆ ವ್ಯಕ್ತಿತ್ವವೆಂಬುದು ನಿರ್ವಣಗೊಳ್ಳುವುದು ಚಾರಿತ್ರ್ಯಶಕ್ತಿಯಿಂದ! ಆದ್ದರಿಂದಲೇ ಜಗತ್ತಿನಲ್ಲಿ ಸದ್ಗುಣಿಯೂ, ಶೀಲವಂತರೂ ಪೂಜನೀಯರೆನಿಸುತ್ತಾರೆ. ಶೀಲವಂತನಿಗೆ ಶಿಲೆ ಒಲಿಯಿತಂತೆ! ಜೀವನದ ಅನ್ವೇಷಣೆಯಲ್ಲಿ ಸತ್ಯಕ್ಕಾಗಿ, ಒಳಿತಿಗಾಗಿ, ಉನ್ನತಿಗಾಗಿ ಮತ್ತು ಸೌಂದರ್ಯಕ್ಕಾಗಿ ಹೋರಾಟವಿದೆಯೆಂಬ ನಿಷ್ಠೆಯ ತತ್ತ್ವವನ್ನು ಮಕ್ಕಳಿಗೆ ಅರುಹಿ ಇವೆಲ್ಲವನ್ನೂ ನಮ್ಮದಾಗಿಸಿಕೊಳ್ಳಲು ಶೀಲಚಾರಿತ್ರ್ಯಗಳು ಅನಿವಾರ್ಯ ಎಂಬ ಪಾಠ ದೊರೆಯಬೇಕಾದ್ದು ಮಾತಾಪಿತೃಗಳ ಮಡಿಲಿನಲ್ಲಿಯೇ. ಶಂಕರ-ವಿವೇಕಾನಂದರಂಥ ಯತಿಗಳನ್ನು, ಶಿವಾಜಿ-ನರೇಂದ್ರ ಮೋದಿ ಅವರಂಥ ಪ್ರಜಾಪ್ರಭುಗಳನ್ನು, ಥಾಮಸ್ ಆಲ್ವಾ ಎಡಿಸನ್-ಅಬ್ದುಲ್ ಕಲಾಂರಂಥ ವಿಜ್ಞಾನಿಗಳನ್ನು ರೂಪಿಸಿದ ಪೂಜ್ಯ ಮಾತೆಯರ ಅವಿಶ್ರಾಂತ ಪರಿಶ್ರಮಗಳು ಸದಾ ಸ್ಮರಣೀಯ.
‘ವ್ಯಕ್ತಿಯೊಳಗೆ ತಾನಾಗಿಯೇ ಹುಟ್ಟಿಬಂದ ದೈವತ್ವದ ಮರ್ಮವನ್ನು ಧರ್ಮ’ ಎಂದಿದೆ ಸನಾತನವಾಣಿ. ವ್ಯಕ್ತಿತ್ವದ ದೈವತ್ವವೇ ಧರ್ಮವೆಂದಾದ ಮೇಲೆ ಅದು ಮಾನವೀಯತೆ, ಸರ್ವಜನರ ಹಿತ, ಕರುಣೆ ಮೊದಲಾದ ಶ್ರೇಷ್ಠ ಗುಣಗಳನ್ನು ಮಾನವನಲ್ಲಿ ಮೈದಾಳುವಂತೆ ಮಾಡಿಯೇ ತೀರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಮೇಲೆ ತಾಯಿತಂದೆಯರು ಬೀರಬಹುದಾದ ಪ್ರಭಾವವು ಊಹೆಗೂ ಮೀರಿದ್ದು.
ಶಿಕ್ಷಕ-ಉಪನ್ಯಾಸಕ: ಮಾನವ ಸಂತತಿಗೆ ಶೀಲ ಚಾರಿತ್ರ್ಯಗಳ ಆದರ್ಶಗಳ ಬಗ್ಗೆ ಭರವಸೆ ಬದ್ಧತೆಗಳು ಮೂಡುವುದೇ ಶೀಲವಂತ ಶಿಕ್ಷಕರ ಒಡನಾಟದಿಂದ. ಮಾಂಸದ ಮುದ್ದೆಗಳಾದ ಜೀವಿಗಳಿಗೆ ಮನುಷ್ಯತ್ವವನ್ನು ಪರಿಚಯಿಸಿ, ಸಂಸ್ಕಾರವನ್ನು ಎರಕ ಹೊಯ್ಯುವ ಗುರುವು ತನ್ನ ವ್ಯಕ್ತಿತ್ವವನ್ನು ವೈಯಕ್ತಿಕತೆಗಿಂತ ಹಿರಿದಾದ ಆಯಾಮದಲ್ಲೇ ಗುರ್ತಿಸಿ ವ್ಯವಹರಿಸಬೇಕಾಗುತ್ತದೆ. ‘ತನ್ನ ಜೀವನ ಇತರರಿಗೆ ಜೀವದಾನ ನೀಡಲು’ ಎಂಬುದು ಶಿಕ್ಷಕನ ಜೀವನದ ಮೇಲ್ಪಂಕ್ತಿ ಆಗಬೇಕು. ಶಿಕ್ಷಕನು ಪಾಠವನ್ನಷ್ಟೇ ಕಲಿಸಿದರೆ ಸಾಲದು; ಜೀವನವನ್ನು ಕಲಿಸಬೇಕು! ಕಲಿಯಲು ಆಸಕ್ತಿ ಉಳ್ಳವನೇ ಕಲಿಸಲು ಯೋಗ್ಯ.
ರಾಮಕೃಷ್ಣ ಮಹಾಸಂಘದ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ಉದ್ಗಾರವಿದು: ‘ಉತ್ತಮ ರಾಷ್ಟ್ರ ನಿರ್ವಣಕ್ಕಿರುವ ಉತ್ಕೃಷ್ಟ ಮಾರ್ಗವೆಂದರೆ ಅಲ್ಲಿನ ಶಾಲಾಕಾಲೇಜುಗಳನ್ನು ರಾಷ್ಟ್ರೀಯ ಆದರ್ಶಕ್ಕೆ ತಕ್ಕಂತೆ ರೂಪಿಸುವುದು. ಉತ್ತಮ ಶಿಕ್ಷಕರ ಆಯ್ಕೆಯಿಂದಷ್ಟೇ ಶಾಲಾ ಕಾಲೇಜುಗಳು ಉತ್ತಮಗೊಳ್ಳಲು ಸಾಧ್ಯ. ಅಂತಹ ಸಮರ್ಥರೂ ಶೀಲವಂತರೂ ಆದ ಶಿಕ್ಷಕರಿಂದಷ್ಟೇ ಉತ್ತಮ ಪ್ರಜೆಗಳ ನಿರ್ಮಾಣ ಸಾಧ್ಯ. ರಾಷ್ಟ್ರೀಯ ಆದರ್ಶಗಳನ್ನು ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಾಗ ಮಾತ್ರವೇ ವ್ಯಕ್ತಿಗಳು ‘ಪ್ರಜೆಗಳು’ ಎನ್ನಿಸುತ್ತಾರೆ, ಇಲ್ಲದಿದ್ದರೆ ಅವರು ‘ಜನ’ ಮಾತ್ರ!’
ಪ್ರಸ್ತುತ ಸಮಾಜದಲ್ಲಿ ಶಿಕ್ಷಕರಲ್ಲಿ ಅಧ್ಯಯನಶೀಲತೆ ಕ್ಷೀಣಿಸಿದೆ, ವೃತ್ತಿಗೌರವ ಕಡಿಮೆ ಆಗುತ್ತಿದೆ, ವೃತ್ತಿಯಲ್ಲಿ ಅತೃಪ್ತಿ ಬೃಹದಾಕಾರವಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳನ್ನು ಅವರ ಚಾರಿತ್ರ್ಯದ ಅಂಕದಿಂದ ಗುರ್ತಿಸಿ ಶ್ಲಾಘಿಸುವ ಸಂಪ್ರದಾಯ ತೆರೆಮರೆಗೆ ಸರಿದಿದ್ದಾಗಿದೆ. ವಿದ್ಯಾರ್ಥಿ ಜೀವನದ ಯಾವುದೇ ವಿಷಯ ಕುರಿತಾದ ಹೋರಾಟಕ್ಕೆ ಅಧರ್ಮ ಮಾರ್ಗ, ಅನ್ಯಾಯ ವೈಖರಿಗೆ ಶಿಕ್ಷಕನಿಂದಲೇ ಪ್ರಚೋದನೆ ದೊರೆಯುತ್ತಾ ಸಾಗಿದೆ. ಒಟ್ಟಾರೆ ವಿದ್ಯಾರ್ಥಿಯು ‘ನಕಲಿ ಪ್ರಜೆ’ ಆಗಲು ಶಿಕ್ಷಕನೇ ಬಹುಮಟ್ಟಿಗೆ ಕಾರಣವಾಗುತ್ತಿದ್ದಾನೆ. ಈಗ ಶಿಕ್ಷಕನು ಯಥೋಕ್ತಲಿಪಿಯಂತ್ರ (ಟೇಪ್ ರೆಕಾರ್ಡರ್) ದಂತೆ ಕಾರ್ಯನಿರ್ವಹಿಸುತ್ತಿದ್ದಾನೆ.
1952ನೇ ಇಸವಿ. ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ಮಾಡಿದ ಭಾಷಣ: ‘ಎಲ್ಲದಕ್ಕೂ ನೋಟ್ಸು ಬಂದರೆ ನೋಟ್ಸಾನುಸಂಧಾನ ಮಾತ್ರ ಆಗುತ್ತದೆ. ನಮ್ಮ ಉದಂಥಗಳನ್ನು ಒಮ್ಮೆಯಾದರೂ ನಮ್ಮ ವಿದ್ಯಾರ್ಥಿಗಳು ಕಣ್ಣಿಂದಲಾದರೂ ನೋಡುತ್ತಾರೆಂಬ ನಂಬಿಕೆ ನನಗಿಲ್ಲ. ನಾಳೆ ಅವರೇ ಅಧ್ಯಾಪಕರಾಗುತ್ತಾರೆ. ತಾವು ಓದಿದ ನೋಟ್ಸಿಗೆ ಮತ್ತಷ್ಟು ನೀರು ಬೆರೆಸಿ ಇದೇ ಅಪ್ಪಟ ಹಾಲೆಂದು ಕೊಡುತ್ತಾರೆ. ಮುಂದಿನ ತಲೆಮಾರಿನವರು ಇಂತಹ ನಿಸ್ಸಾರ ಹಾಲನ್ನು ಕುಡಿದು ಎಷ್ಟು ಪರಿಪುಷ್ಟವಾದಾರು? ನಮ್ಮ ಸರ್ಕಾರ, ಶಿಕ್ಷಣತಜ್ಞರು, ವಿದ್ವಾಂಸರು ಮಾಡಬೇಕಾದ ಕೆಲಸ ಬಹಳ ಇದೆ. ನಮ್ಮ ಅಧ್ಯಾಪಕರು ಸ್ವಯಂಪ್ರೇರಿತರಾಗಿ ಸಮೃದ್ಧ ಅಭ್ಯಾಸ ಮಾಡಬೇಕು. ಕೆಚ್ಚಲು ತುಂಬಿಕೊಂಡು, ‘ಅಂಬಾ’ ಎಂದು ಅರಸುತ್ತ ಓಡಿ ಬಂದ ತನ್ನ ಕಂದನಿಗೆ ಹಾಲುಣಿಸುವ ಪುಣ್ಯಕೋಟಿಗಳಾಗಬೇಕು.’ ಇಲ್ಲಿ ಕರು ತಪ್ಪು ಮಾಡುವುದಿಲ್ಲ. ಅಮ್ಮನಿಗಾಗಿ ಹಾತೊರೆಯುತ್ತ ಎದುರು ನೋಡುತ್ತಿದೆ. ಹೊಣೆ ಅಮ್ಮನದು. ಆ ಬಗೆಯ ಚಿಂತನೆ ಮತ್ತು ಸ್ವಯಂಸಿದ್ಧತೆ ಈಗ ಹೆಚ್ಚು ಅಗತ್ಯವಿದೆ. ಒಳ್ಳೆಯದನ್ನು ಮಾಡುವ ಆಸೆಯಿಟ್ಟುಕೊಳ್ಳೋಣ. ಆದರೆ ಆಸೆಯೊಂದೇ ಸಾಲದು, ಪೂರಕವಾದ ಪ್ರಯತ್ನ ಎಲ್ಲ ದಿಕ್ಕುಗಳಿಂದ ನಡೆಯಬೇಕು. ಶಿಕ್ಷಕರ ಆತ್ಮಾವಲೋಕನಕ್ಕೆ ಇಷ್ಟು ಸಾಕು.
ಆಡಳಿತಾಧಿಕಾರಿಗಳು: ಬಡಜನರಿಗೊಂದಿಷ್ಟು ಅನ್ನ ಬಟ್ಟೆಗಳನ್ನಿತ್ತು, ನೆರವು ನೀಡಿ ‘ಪ್ರಜಾಸೇವಕ’ ಎಂಬ ಬಿರುದಾಂಕಿತರಾಗುವುದು ಪ್ರಜಾಪ್ರತಿನಿಧಿಗಳಿಗೆ ಕಷ್ಟದ ಕೆಲಸವೇನಲ್ಲ; ಆದರೆ ವಿದ್ಯಾರ್ಥಿ-ಯುವಕರ ಚಾರಿತ್ರ್ಯವನ್ನು ರೂಪಿಸಿ ಅವರುಗಳನ್ನು ಸತ್ಪ್ರಜೆಗಳಾಗಿ ನಿರ್ವಿುಸುವ ಕಾರ್ಯ ಅವರ ಮನಃಪಟಲದಿಂದ ದೂರವಾಗಿ ಅದೆಷ್ಟೋ ಕಾಲವಾಗಿದೆ. ದುರ್ಬಲ ಆಡಳಿತ ಪ್ರಜೆಗಳನ್ನು ಮತ್ತೂ ದುರ್ಬಲಗೊಳಿಸುತ್ತಾ ಸಾಗಿದೆ. ಇದರ ವಾಸ್ತವಿಕತೆಯನ್ನು ಡಿವಿಜಿಯವರು ಚಿತ್ರಿಸಿದ್ದು ಹೀಗೆ: ‘ಸ್ವಾತಂತ್ರ್ಯವೆಂಬ ಫಲ ಈಗ ನಮ್ಮ ಕೈವಶವಾಗಿದ್ದರೂ ಅದು ಇನ್ನೂ ಪಕ್ವವಾಗಬೇಕಿದೆ. ಅದು ಮಾಗಲು ಬೇಕಾದ ಕಾವನ್ನು ಒದಗಿಸುವುದು ರಾಷ್ಟ್ರದ ಮಹಾಜನರ ಮೇಲಿರುವ ಕರ್ತವ್ಯಭಾರ. ಪ್ರಜಾಜನರು ರಾಜ್ಯವು ತಮ್ಮ ಸ್ವಂತ ಕಾರ್ಯವೆಂದು ಭಾವಿಸಿ, ಅದರ ಜವಾಬ್ದಾರಿಯ ವಿಷಯದಲ್ಲಿ ಎಚ್ಚರಗೊಂಡಿರಬೇಕೆಂಬುದು ಪ್ರಜಾರಾಜ್ಯಕ್ಕಿರುವ ಪ್ರಥಮ ನಿಬಂಧನೆ. ಆ ಮನೋಭಾವ ನಮ್ಮ ದೇಶದ ಜನಕ್ಕೆ ಇನ್ನೂ ಬಂದಿಲ್ಲ. ಜನರ ಮನಸ್ಸು ಬ್ರಿಟೀಷರ ಕಾಲದಲ್ಲಿದ್ದಂತೆಯೇ, ಸಾವಿರಾರು ವರ್ಷಗಳ ಹಿಂದಿನಿಂದ ಇದ್ದಂತೆಯೇ, ಇನ್ನೂ ಉಳಿದುಕೊಂಡಿದೆ. ‘ಸರ್ಕಾರವೆಂಬುದು ನಾವಲ್ಲದೆ ಬೇರೆ ಇನ್ನಾರೋ ಹೊರಬೇಕಾದ ಹೊಣೆ. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಕೆಲಸವೇನಿದ್ದರೂ ಗೊಣಗಾಡುವುದು, ದಂಡ ತೆರುವುದು; ಇಷ್ಟೇ. ಮಿಕ್ಕಿದ್ದನ್ನು ಇನ್ನಾರೋ ನಡೆಸಿಕೊಂಡು ಹೋಗಲಿ. ಅವರು ಚೆನ್ನಾಗಿ ನಡೆಸದಿದ್ದರೆ ಅದು ನಮ್ಮ ದುರ್ದೈವ’ - ಹೀಗೆಂಬುದು ಅನೇಕ ಶತಮಾನಗಳಿಂದ ರೂಢಿಯಾಗಿರುವ ಮನೋವೃತ್ತಿ. ಎಂದಿನವರೆಗೂ ನಮ್ಮ ಜನರ ಮನೋವೃತ್ತಿ ಹಾಗಿರುತ್ತದೆಯೋ ಅಂದಿನವರೆಗೂ ಸ್ವಾತಂತ್ರ್ಯದ ಕಾಯಿ ನಮ್ಮ ಬಾಯಿಗೆ ಮಾಗಿದ ಹಣ್ಣಾಗದು’.
ಪರೀಕ್ಷೆಗಳ ಪವಿತ್ರತೆ ಬಗ್ಗೆ ಡಿವಿಜಿ ಹೇಳುತ್ತಾರೆ: ‘ಮಂದಿಯ ಕೂಗಿಗೆ ಹೆದರಿ ಪರೀಕ್ಷೆಗಳ ಮಟ್ಟವನ್ನು ಇಳಿಸಿದರೆ ಕಡೆಗೆ ಕೆಡುವವರು ಮಂದಿಯ ಮಕ್ಕಳೇ. ಎಲ್ಲ ಪರೀಕ್ಷೆಗಳು ನ್ಯಾಯವಾದಷ್ಟು ಕಠಿಣವಾಗಿರಲೇಬೇಕು, ಪರೀಕ್ಷೆಗಳು ಪ್ರಾಮಾಣಿಕ ರೀತಿಯಲ್ಲಿ ನಡೆಯಬೇಕು. ರಾಜಕೀಯ ಕಾರಣಗಳಿಗೋಸ್ಕರ ವಿದ್ಯಾಶಿಖರಕ್ಕೆ ಮಸಿ ಬಳಿಯಬಾರದು’. ಸಹೃದಯರೇ, ವಿಚಾರಗಳೆಲ್ಲ self explanatory. ಶಿಕ್ಷಕರ ದಿನಾಚರಣೆಯಂದು ಮಾತಾಪಿತೃಗಳಿಗೆ, ಶಿಕ್ಷಕರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಆತ್ಮಾವಲೋಕನಕ್ಕೊಂದು ವಿಚಾರ:
ಶೀಲವಂತನೇ ಶ್ರೇಷ್ಠನು/ ಸಕಲ ರತ್ನಗಳ ಗಣಿಯು/ ಮೂಲೋಕದ ಸಿರಿಸಂಪದವೆಲ್ಲ ಶೀಲದೊಳಗೆ ಇಹುದು|| ಎಂಬ ಸಂತ ಕಬೀರರ ವಾಣಿ ಶಕ್ತಿಶಾಲಿಗಳೂ ಹಾಗೂ ಚಾರಿತ್ರ್ಯವಂತರೂ ಆದ ತಲೆಮಾರನ್ನು ನಿರ್ವಿುಸಲು ಪ್ರೇರಣೆ ಆಗಲಿ.
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)