ಶಿಕ್ಷಕರು ಕುಂಭಕರ್ಣ ಸ್ಥಿತಿಯಿಂದ ಎಚ್ಚರಗೊಳ್ಳಲು ಸ್ವಾಮಿ ವಿವೇಕಾನಂದರ ಶಕ್ತಿಯುತ ಚಿಂತನೆಗಳೆಂಬ ವಿದ್ಯುದಾಘಾತ ನೀಡಬೇಕಾದ ಅವಶ್ಯಕತೆ ಇದೆ. ಆಗ ಮಾತ್ರವೇ ಶಿಕ್ಷಕರು ಕುಂಭಕರ್ಣತನದಿಂದ ಮುಕ್ತರಾಗಿ ಆಂಜನೇಯನ ವ್ಯಕ್ತಿತ್ವಕ್ಕೆ ಹತ್ತಿರವಾಗಬಲ್ಲರು.
‘ಶಿಕ್ಷಣವೆಂಬುದು ಮೃಗಗಳಿಗೆ ನೀಡುವ ತರಬೇತಿಯಲ್ಲ! ಜೀವಿಯಲ್ಲಿ ಸುಪ್ತವಾಗಿರುವ ಮಾನವೀಯತೆಯ ಅನಾವರಣ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ‘ವಿದ್ಯಾ ವಿಹೀನಃ ಪಶುಃ’ ಎಂಬ ರಾಜ ಭರ್ತಹರಿಯ ಮಾತು ಮೃಗಗಳು ಮತ್ತು ಮನುಷ್ಯನ ನಡುವಿನ ವ್ಯತ್ಯಾಸಕ್ಕೆ ಶಿಕ್ಷಣವೇ ಪ್ರಮುಖ ಮಾನದಂಡವೆಂದು ಸಾರಿದೆ.
ಮಾನವನ ನಾಗರಿಕತೆಯು ಕ್ರಮಬದ್ಧವಾಗಿ ಪ್ರಾರಂಭಗೊಂಡು, ನಿರಂಕುಶವಾಗಿ ಬೆಳೆದು ಅವ್ಯವಸ್ಥೆಯಲ್ಲಿ ಪರ್ಯವಸಾನವಾಗುತ್ತದೆ.
ಜ್ಞಾನದ ನೆಲೆವೀಡೆಂದೇ ಪ್ರಸಿದ್ಧವಾದ ಭಾರತವು ತನ್ನ ಆದರ್ಶಗಳ ಔದಾರ್ಯಗಳಿಂದ ವಿಶ್ವಕುಟುಂಬದ ಪರಿಕಲ್ಪನೆಯನ್ನು ಬೆಳೆಸುವ ಕೈಂಕರ್ಯದಲ್ಲಿ ದೃಢಚಿತ್ತದಿಂದ ಮುಂದೆ ಸಾಗಿತ್ತು. ಜಗತ್ತಿನ ಹತ್ತಾರು ನಾಗರಿಕತೆಗಳು ಯುದ್ಧೋಪಕರಣಗಳಲ್ಲಿ ನಾವೀನ್ಯತೆ ಸಾಧಿಸಹೊರಟು, ಖಡ್ಗವೊಂದೇ ಯಾವುದೇ ಹೋರಾಟಕ್ಕೆ ಪರಿಹಾರೋಪಾಯವೆಂಬ ಭ್ರಮೆಯಲ್ಲಿ ಮುಳುಗಿದ್ದರೆ ಅಂತರಂಗದ ಆತ್ಮಶಕ್ತಿಯೇ ಎಲ್ಲ ಶಕ್ತಿಗಳ ಅಧಿಪತ್ಯಕ್ಕೆ ಅರ್ಹವೆಂದು ತಿಳಿದು ಅದನ್ನು ಹಲವಾರು ಸಾಧನ ವಿಧಾನಗಳಿಂದ ಅರಿಯುವ ಆಧ್ಯಾತ್ಮಿಕ ಆವಿಷ್ಕಾರಕ್ಕೆ ಭಾರತ ಕಂಕಣಬದ್ಧವಾಗಿ ಶ್ರಮಿಸುತ್ತ ಸಾಗಿತ್ತು.
ಶಿಕ್ಷಣವು ‘ಬಹುಜನ ಹಿತಾಯ-ಬಹುಜನ ಸುಖಾಯ’ ಎಂಬ ಧ್ಯೇಯಾದರ್ಶಕ್ಕೆ ತಲೆಬಾಗಿ ಮನುಷ್ಯ ಸಂಕುಲವನ್ನು ಬೀಗುವಂತೆ ಪ್ರೇರೇಪಿಸಿತ್ತು. ಶುದ್ಧಜ್ಞಾನದ ಅಧಿದೇವತೆಯಾದ ಸರಸ್ವತಿಯ ಕೃಪೆ ದೊರಕಿಸಿಕೊಂಡು ನಂತರವಷ್ಟೇ ವ್ಯವಹಾರಜ್ಞಾನದ ಅಧಿದೇವತೆಯಾದ ಲಕ್ಷ್ಮಿಗೆ ಮಾನ್ಯತೆ ನೀಡುವುದೇ ಸಮರ್ಪಕ ಜೀವನಮಾರ್ಗವೆಂಬ ವಿಷಯದಲ್ಲಿ ಭಾರತೀಯರು ವಿಶ್ವಾಸವಿರಿಸಿದ್ದರು. ಶಿಕ್ಷಣವು ಯಾವುದೇ ಲೌಕಿಕ ಸುಖಸಂಪದಗಳ ಗಳಿಕೆಗಷ್ಟೇ ಸೀಮಿತವಾಗದೆ ಅದು ಪಾರಮಾರ್ಥಿಕ ಮೌಲ್ಯದ ಅವಶ್ಯಕತೆಯ ಕುರಿತು ಎಚ್ಚರಿಸಿತ್ತು. ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ವ್ಯಾವಹಾರಿಕ ಮೌಲ್ಯಗಳನ್ನು ಶುದ್ಧೀಕರಿಸಿ ಬಳಕೆಗೆ ಅಧಿಕೃತವಾಗಿಸುತ್ತಿದ್ದ ಕಾಲಘಟ್ಟವದು. ಶಿಕ್ಷಣವು ಮಾನವನ ಅಭ್ಯುದಯಕ್ಕೆ ಅನಿವಾರ್ಯವಾದ ಸಂಸ್ಕಾರವೆಂದು ಸಮಾಜವು ನಿಶ್ಚಿತ ಅಭಿಪ್ರಾಯಕ್ಕೆ ಹಣೆಮಣಿದಿದ್ದಿತು. ಕಾರ್ಯಗಳನ್ನು ನಿರ್ವಹಿಸುವಾಗ ಅಲ್ಲಿ ಗುಣಮಟ್ಟ, ಮೌಲ್ಯ, ಪವಿತ್ರ ಉದ್ದೇಶಗಳು ಮುಂಚೂಣಿಯಲ್ಲಿದ್ದವು.
ವ್ಯಕ್ತಿ, ಕುಟುಂಬ ಹಾಗೂ ಸಮಾಜ ನಿರ್ವಣದಲ್ಲಿ ಆಚಾರ್ಯ ಅಥವಾ ಗುರುವಿನ ಪಾತ್ರವು ಉತ್ಕೃಷ್ಟವಾಗಿತ್ತು. ಶಿಕ್ಷಕನು, "simple living but high thinking' ಎಂಬ ಆದಶೋಕ್ತಿಗೆ ಅನ್ವರ್ಥವಾಗಿದ್ದನು. ಕರ್ತವ್ಯನಿಷ್ಠೆ, ವೃತ್ತಿಬದ್ಧತೆ, ಮೌಲ್ಯಗಳಿಂದ ಪರಿಪುಷ್ಟಗೊಂಡ ಸ್ಪಟಿಕಸದೃಶ ವ್ಯಕ್ತಿತ್ವದಿಂದ ಗುರುವು ಚಕ್ರವರ್ತಿಯನ್ನು ಸರಿದಾರಿಯಲ್ಲಿ ನಡೆಸುವಷ್ಟು ಆದರ್ಶಶೀಲನಾಗಿದ್ದನು.
ಶಿಕ್ಷಣವನ್ನು ಸಂಜೀವಿನಿಯೆಂದು ಪರಿಗಣಿಸಿದ್ದ ಸಮಾಜಕ್ಕೆ ಗುರು-ಶಿಕ್ಷಕರೇ ಬೆನ್ನೆಲುಬು, ದಿಕ್ಸೂಚಿ ಆಗಿದ್ದರು. ಶಿಕ್ಷಕರ ಬಹುಮುಖ ವ್ಯಕ್ತಿತ್ವದಲ್ಲಿ ಚಾರಿತ್ರ್ಯವೇ ಮುನ್ನೆಲೆಯಲ್ಲಿತ್ತು. ಆತನು ಆದರ್ಶಗಳ ಸಾಕ್ಷಾತ್ ಸ್ವರೂಪಿ ಎಂದೆನಿಸಿದ್ದನು.
ಸಕಲಗುಣಸಂಪನ್ನನಾದ ಶಿಕ್ಷಕನು ರಾಮಾಯಣದ ಆಂಜನೇಯನ ವ್ಯಕ್ತಿತ್ವಕ್ಕೆ ಸಾಮೀಪ್ಯ ಸಾಧಿಸಿದ್ದನ್ನು ಕಾಣಬಹುದಾಗಿತ್ತು. ಅವನು ಹತ್ತು ಹಲವು ಗುಣಗಳ ಶ್ರೀಮಂತ ವ್ಯಕ್ತಿತ್ವದವನಾದರೂ ಅದರ ಇಣುಕುನೋಟವನ್ನಿಲ್ಲಿ ಹೀಗೆ ಗಮನಿಸಬಹುದು.
ರಾಮಾಯಣದಲ್ಲಿ ಹನುಮಂತ ಪ್ರಥಮತಃ ಸಂಧಿಸುವ ಸಂದರ್ಭದಲ್ಲಿ ಮಾತನಾಡಿದ ಧಾಟಿ ಶ್ರೀರಾಮನಿಗೆ ಅತ್ಯಂತ ಹಿತವೆನಿಸಿ ಹೇಳುತ್ತಾನೆ: ‘ನೋಡು ಲಕ್ಷ್ಮಣ, ಇವನು ವಾಕ್ಯಜ್ಞ, ಚೆನ್ನಾಗಿ ವೇದಾಧ್ಯಯನ ಮಾಡಿ ಸುಶಿಕ್ಷಿತನಾಗದವನಿಗೆ ಹೀಗೆ ಮಾತನಾಡಲು ಸಾಧ್ಯವೇ ಇಲ್ಲ. ಇವನು ವ್ಯಾಕರಣಶಾಸ್ತ್ರವನ್ನು ಹಲವಾರು ಬಾರಿ ಅಧ್ಯಯನ ಮಾಡಿರಬೇಕು. ಏಕೆಂದರೆ ಇಷ್ಟು ದೀರ್ಘವಾಗಿ ಮಾತನಾಡಿದರೂ ಒಂದೇ ಒಂದು ಅಪಶಬ್ದ ಅವನ ಬಾಯಿಂದ ಬರಲಿಲ್ಲ. ಮಾತನಾಡುವಾಗ ಅವನ ಮುಖ, ಹಣೆ, ಹುಬ್ಬುಗಳಲ್ಲಾಗಲೀ ಮತ್ತಾವುದೇ ಅವಯವಗಳಲ್ಲಾಗಲೀ ಯಾವ ವಿಧವಾದ ಅಂಗಚೇಷ್ಟೆಯೂ ಕಂಡುಬರಲಿಲ್ಲ. ತನ್ನ ಮಾತಿನಲ್ಲಿ ಅವನು ವಿಷಯ ನಿರೂಪಣೆಯನ್ನು ಅನವಶ್ಯಕವಾಗಿ ವಿಸ್ತಾರ ಮಾಡಲಿಲ್ಲ. ಸಂದರ್ಭಕ್ಕೆ ಅಗತ್ಯವಾದ್ದನ್ನಷ್ಟೇ ಸ್ಪಷ್ಟವಾಗಿ ಮಾತನಾಡಿದ್ದಾನೆ. ಅವನ ಮಾತುಗಳಲ್ಲಿ ಅಸ್ಪಷ್ಟತೆಯಾಗಲಿ, ಸಂಶಯಕ್ಕೆ ಎಡೆಮಾಡಿಕೊಡುವ ನುಡಿಗಳಾಗಲಿ ಕಾಣಲೇ ಇಲ್ಲ. ಮಾತನ್ನು ಎಳೆದೆಳೆದು ಅಥವಾ ಅವಸರವಾಗಿ ಆಡಲಿಲ್ಲ. ಹೃದಯದಿಂದ ಹೊರಟು ಕಂಠದಿಂದ ಹೊರಬಿದ್ದ ಅವನ ಮಾತುಗಳು ಅತಿ ಗಟ್ಟಿಯೂ ಅಲ್ಲ, ಅತಿ ಮೆಲುಧ್ವನಿಯೂ ಅಲ್ಲ. ವ್ಯಾಕರಣದಿಂದ ಶುದ್ಧವಾದ ಶಬ್ದಗಳಿಂದಲೂ ಸುಸಂಬದ್ಧವಾದ ವಾಕ್ಯಗಳಿಂದಲೂ ಕೂಡಿರುವ ಮತ್ತು ಕೇಳುವವರ ಮನಸ್ಸಿಗೆ ಹರ್ಷವನ್ನುಂಟು ಮಾಡುವ ಶುಭಕರವಾದ ಮಾತುಗಳನ್ನೇ ಆಡಿದ್ದಾನೆ’.
ಪ್ರಾಚೀನ ಭಾರತದ ಶಿಕ್ಷಕರು ಆಂಜನೇಯನಂತೆ ಕ್ರಿಯಾಶೀಲ, ಆದರ್ಶಯುಕ್ತ ವ್ಯಕ್ತಿತ್ವ ತಮ್ಮದಾಗಿಸಿಕೊಂಡಿದ್ದರು. ಇತರರ ಪತ್ನಿಯನ್ನು ತಾಯಿಯಂತೆ, ಅನ್ಯರ ಸಂಪತ್ತನ್ನು ಮಣ್ಣಿನಂತೆ, ಸಮಾಜದ ಸರ್ವರನ್ನೂ ತನ್ನವರಂತೆ ಪರಿಭಾವಿಸುವ ವ್ಯಕ್ತಿತ್ವ ಶಿಕ್ಷಕರದಾಗಿತ್ತು. ಸಮಾಜವನ್ನು ಇದೇ ದಾರಿಯಲ್ಲಿ ಕೊಂಡೊಯ್ಯುವ ಧ್ಯೇಯನಿಷ್ಠರೂ ಅವರುಗಳಾಗಿದ್ದರು. ಮನುಷ್ಯನನ್ನು ಆರ್ಥಿಕ, ರಾಜಕೀಯ, ಸಾಮಾಜಿಕ ಆಯಾಮಗಳನ್ನು ಮೀರಿದ ಆಧ್ಯಾತ್ಮಿಕ ಆಯಾಮದಲ್ಲಿ ಗುರ್ತಿಸುವ ಶ್ರೇಷ್ಠ ಪ್ರಜ್ಞಾವಂತಿಕೆಯ ಪ್ರಭೆ ಸಮಾಜದ್ದಾಗಿತ್ತು.
ಶಿಕ್ಷಣದ ಅಧಃಪತನ: ಕಾಲಚಕ್ರ ಉರುಳಿದಂತೆ ಶಿಕ್ಷಣಕ್ಷೇತ್ರವು ತನ್ನ ಮೂಲಧ್ಯೇಯದಲ್ಲಿ ಪತನ ಕಂಡಿತು. ಖಡ್ಗ ಎಷ್ಟೇ ಹರಿತವಾಗಿದ್ದರೂ ಕಾಲಕಾಲಕ್ಕೆ ಸಾಣೆ ಹಚ್ಚಬೇಕಲ್ಲವೇ? ಆದರೆ ಅದು ತುಕ್ಕು ಹಿಡಿಯುವ ಹಂತಕ್ಕೆ ಹೋಯಿತು. ಸಮಾಜದ ಯಾವುದೇ ಏಳ್ಗೆಯು ವಸ್ತುರೂಪದ, ವ್ಯಾವಹಾರಿಕವಾದ ಲಾಭಕ್ಕಷ್ಟೇ ಸೀಮಿತವಾಯಿತು. ಹಿರಿತನಕ್ಕೆ ಜ್ಞಾನವೂ ಮಾನದಂಡವಾಗಿದ್ದ ಕಾಲ ಸರಿದು ವಯಸ್ಸೇ ಹಿರಿತನದ ದ್ಯೋತಕವಾಯಿತು. ಅತಿಯಾದ ಆಸೆ ಮತ್ತು ದಿಢೀರ್ ನಿರೀಕ್ಷೆಗಳ ಪ್ರವಾಹದಲ್ಲಿ ಜೀವನದಿ ವಿಷಮಯವಾಯಿತು. ‘ರಾಜಾ ಪ್ರತ್ಯಕ್ಷ ದೇವತಾ’ ಎಂಬುದು ಜನಪ್ರತಿನಿಧಿಗಳಿಗೆ ಅಪಥ್ಯವಾಯಿತು. ಗುರು ಮತ್ತು ಚಕ್ರವರ್ತಿಗಳು ವ್ಯಕ್ತಿತ್ವದ ಕೇಂದ್ರಬಿಂದುವಾಗಿದ್ದ ಚಾರಿತ್ರ್ಯವನ್ನು ನೈಜ ಬದುಕಿನ ಪರಿಧಿಯಿಂದ ಅತಿದೂರಕ್ಕೆ ತಳ್ಳಿದರು.
ಹಿಂದೆ ಶಿಕ್ಷಕರು ಸಾಮಾನ್ಯ ವ್ಯಕ್ತಿಗಳಾಗಿದ್ದಾಗ್ಯೂ ಅವರಲ್ಲಿ ವೃತ್ತಿಗೌರವವಿತ್ತು, ತತ್ತ್ವನಿಷ್ಠೆಯಿಂದ ಅವರು ನಿಯತ್ತಿನಿಂದ ಮಾಡುತ್ತ ಸಾಗಿದ್ದ ಕಾರ್ಯಗಳು ಮಾನವ ಅಭ್ಯುದಯಕ್ಕೆ ಅತ್ಯುಪಯುಕ್ತವಾದವು; ಶಿಕ್ಷಕರು ಸಮಾಜದ ದೃಷ್ಟಿಯಲ್ಲಿ ಮಹಾತ್ಮರಾದರು, ಪೂಜನೀಯರಾದರು.
ಕಾಲಕ್ರಮದಲ್ಲಿ ಶಿಕ್ಷಣ ಕ್ಷೇತ್ರವು ಅಪಾಯಕಾರಿಯಾದ ತಿರುವನ್ನು ಪಡೆದದ್ದು ದುರದೃಷ್ಟಕರ! ಶಿಕ್ಷಕರು ತಮ್ಮ ವ್ಯಕ್ತಿತ್ವದಲ್ಲಿ ಇರಬೇಕಾದ ಘನಗಾಂಭೀರ್ಯ ನಡವಳಿಕೆಯನ್ನು ಉಪೇಕ್ಷಿಸಿದರು. ತಮ್ಮನ್ನು ತಾವೇ ಸರ್ವೆಸಾಮಾನ್ಯರ ಗುಂಪಿನಲ್ಲಿ ಗುರುತಿಸಿಕೊಂಡರು. ಅಧ್ಯಯನ, ಸಂಶೋಧನೆ, ಪುನಶ್ಚೇತನ- ಇವೇ ಮೊದಲಾದ ವಿಚಾರಗಳಲ್ಲಿ ಅಸಡ್ಡೆ ತಾಳಿದ್ದರಿಂದ ನಿರ್ವಹಿಸಬೇಕಾಗಿದ್ದ ಕರ್ತವ್ಯಗಳು ಸಹಜ ಸಾಮಾನ್ಯವಾದವುಗಳಾದರೂ, ಅವರ ದುರ್ಬಲ ಮನಸ್ಸುಗಳು ಕೆಲಸಗಳನ್ನು ಮತ್ತೂ ಕಳಪೆ ಆಗಿಸಿದವು!
ಸಮಾಜದ ಜನಸಾಮಾನ್ಯರು ಭ್ರಷ್ಟಾಚಾರದಲ್ಲಿ ಬದುಕುವಂತೆ ಶಿಕ್ಷಕರೂ ಅತಿಸಾಮಾನ್ಯ ಜೀವನಕ್ಕೆ ಮೊರೆಹೋದರು. ಇತರರು ಹಣಸಂಪಾದನೆಗೆ ಗುರುತಿಸಿಕೊಂಡಿದ್ದ ಹಲವಾರು ವಾಮಮಾರ್ಗಗಳು ಶಿಕ್ಷಕರನ್ನು ತಮ್ಮೆಡೆಗೆ ಸೆಳೆದವು. ಒಂದೊಮ್ಮೆ ವಿದ್ಯಾದಾನಕ್ಕೆ ಪೂರಕವಾಗುವಂಥ ಬಾಣಗಳಿಂದ ತುಂಬಿದ್ದ ಶಿಕ್ಷಕರ ಬತ್ತಳಿಕೆಯು ಅತಿವ್ಯಾವಹಾರಿಕ ಆಸೆ, ಆಕಾಂಕ್ಷೆಗಳ ಉದ್ದಿಶ್ಯಗಳ ಬಾಣಗಳಿಂದ ತುಂಬಿ ತುಳುಕಾಡುವಂತಾಯಿತು. ಸಮಾಜಕ್ಕೆ ಪಥದರ್ಶಿಗಳಾಗಬೇಕಿದ್ದ ಶಿಕ್ಷಕರು ಅತಿಸಾಮಾನ್ಯರ ಆಜ್ಞಾನುವರ್ತಿಗಳಾದರು! ಧರ್ಮಕ್ಕೆ ವಿರುದ್ಧವಾದ ಅರ್ಥಕಾಮಗಳನ್ನು ಅಪೇಕ್ಷಿಸಿದಾಗ ಅವು ಲೋಕನಿಂದೆ ತರುವುದಂತೂ ಖಂಡಿತ.
ಸಮಾಜವು ಶಿಕ್ಷಕರಲ್ಲಿ ವಿಶ್ವಾಸವು ಕಳೆದುಕೊಳ್ಳುವುದಕ್ಕೆ ಮೊದಲೇ ಶಿಕ್ಷಕರೇ ತಮ್ಮ ವೃತ್ತಿಯನ್ನು ಉನ್ನತಮಟ್ಟದಿಂದ ಕೆಳಗಿಳಿಸಿಕೊಂಡರು. ಅಷ್ಟೇ ಅಲ್ಲ, ಈ ಹಂತದಲ್ಲಿ ವೃತ್ತಿಯಲ್ಲಿ ತಾವೇ ಶ್ರದ್ಧೆ, ಭರವಸೆಗಳನ್ನು ಕಳೆದುಕೊಂಡದ್ದು ನಾಗರಿಕತೆ ಕಂಡ ಭೀಕರ ಅಧಃಪತನ. ತ್ಯಾಗದ ಮೂರ್ತರೂಪರೆನಿಸಿದ್ದ ಶಿಕ್ಷಕರು ವೃತ್ತಿಜೀವನದಲ್ಲಿ ಸುಲಭರೀತಿಯ ಜೀವನಶೈಲಿಗೆ ಮೊರೆಹೋದರು. ವಿದ್ಯಾರ್ಥಿಗಳಿಗೆ ನಿರ್ದೇಶನ ಕೊಟ್ಟು ವಿಷಯ ಬೋಧನೆ ಮಾಡಬಹುದಾದರೂ, ಅವರ ವ್ಯಕ್ತಿತ್ವದ ಚಾರಿತ್ರ್ಯಶಕ್ತಿಯೇ ವಿದ್ಯಾರ್ಥಿಗಳ ಕಲಿಕೆಗೆ ಅತ್ಯಂತ ಪ್ರಭಾವಶಾಲಿ ಉಪಕರಣವೆಂಬ ಸತ್ಯವು ಶಿಕ್ಷಕರ ಮನಃಪಟಲದಿಂದ ಕಣ್ಮರೆಯಾಯಿತು: "Private life of a teacher is of public importanc' ಎಂಬ ಮಾತನ್ನು ಒಪ್ಪಲು ಶಿಕ್ಷಕರು ಸುತರಾಂ ಸಿದ್ಧರಾಗಲಿಲ್ಲ. ನಿಜಕ್ಕೂ ಇದೊಂದು ಕುಂಭಕರ್ಣನ ಸ್ಥಿತಿಯೇ ಅಲ್ಲವೇ? ಯಾವುದೇ ರಾಷ್ಟ್ರವು ತನ್ನ ಯೋಗ್ಯತೆಯನ್ನು ಅಲ್ಲಿನ ಶಿಕ್ಷಕರ ಯೋಗ್ಯತೆಗಿಂತ ಅಧಿಕವಾಗಿ ಬೆಳೆಸಿಕೊಳ್ಳಲು ಸಾಧ್ಯವೇ ಇಲ್ಲ. "The people of the land are the enlarged replica of their teachers' ಎಂಬ ಮಾತು ಸೂರ್ಯಚಂದ್ರರಷ್ಟೇ ಸತ್ಯ. ರಾಜಕಾರಣದ ಕಣ್ಣುಕೋರೈಸುವ ಬೆಳಕು ಪಟಾಕಿಯ ಹೂವಿನ ಕುಂಡದಂತಾದರೆ ರಾಷ್ಟ್ರವನ್ನು ನೈತಿಕವಾಗಿ ರೂಪಿಸುವ ಶಿಕ್ಷಕನ ಕಾರ್ಯವು ಅನವರತವೂ ಬೆಳಗುವ ನಕ್ಷತ್ರಗಳ ಬೆಳಕಿನ ಸಂಭ್ರಮ-ಇವೆರಡೂ ಅದೆಷ್ಟು ತದ್ವಿರುದ್ಧ ಅನ್ನಿಸದೇ?
ಕುಂಭಕರ್ಣನೂ ಸಾಮರ್ಥ್ಯವಂತನೇ, ಆದರೆ ಅವನ ಕಾರ್ಯಪ್ರಣಾಳಿಕೆಯಲ್ಲಿ ಶಿಸ್ತು, ಕ್ರಮಾಗತ ರೀತಿನೀತಿಗಳಿರಲಿಲ್ಲ! ನಿದ್ರೆಯಲ್ಲೇ ಮುಳುಗಿದ್ದ ಅವನು ರಾವಣನಿಂದ ಎಚ್ಚರಿಸಲ್ಪಟ್ಟಾಗ ಅವನ ಶಕ್ತಿಯೆಲ್ಲ ಅಧರ್ಮಪಾಲನೆಗೆ ಅಪವ್ಯಯವಾಯಿತು, ಇಂದಿನ ಶಿಕ್ಷಕರೂ ಪರೀಕ್ಷೆಗಷ್ಟೇ ಮಕ್ಕಳನ್ನು ದಿಢೀರ್ ಕ್ರಮಗಳಿಂದ ತಯಾರು ಮಾಡುವಂತೆ! "Education is for life but not merely for livelihood' ಎಂಬ ಮಾತು ಶಿಕ್ಷಕರ ದುರ್ಬಲ ಮನೋಸ್ಥಿತಿಗೆ ಎಟುಕದೆ ಹೋಯಿತು.
ಶಿಕ್ಷಕರು ಕುಂಭಕರ್ಣ ಸ್ಥಿತಿಯಿಂದ ಎಚ್ಚರಗೊಳ್ಳಲು ಸ್ವಾಮಿ ವಿವೇಕಾನಂದರ ಶಕ್ತಿಯುತ ಚಿಂತನೆಗಳೆಂಬ ವಿದ್ಯುದಾಘಾತ ನೀಡಬೇಕಾದ ಅವಶ್ಯಕತೆ ಇದೆ. ಆಗ ಮಾತ್ರವೇ ಶಿಕ್ಷಕರು ಕುಂಭಕರ್ಣತನದಿಂದ ಮುಕ್ತರಾಗಿ ಆಂಜನೇಯನ ವ್ಯಕ್ತಿತ್ವಕ್ಕೆ ಹತ್ತಿರವಾಗಬಲ್ಲರು. ಏಕೆಂದರೆ ನಿದ್ರಿಸುತ್ತಿರುವವರನ್ನು ಎಚ್ಚರಿಸಬಹುದೇ ಹೊರತು ನಿದ್ರಿಸುವಂತೆ ನಟಿಸುವವರನ್ನಲ್ಲ.
ಶಿಕ್ಷಕರ ವ್ಯಕ್ತಿತ್ವದಲ್ಲಿ ಚಾರಿತ್ರ್ಯ ಮೇಳೈಸಬೇಕು, ಆಂತರ್ಯದ ದಿವ್ಯತೆಯ ಅರಿವು ಮೂಡಿಸಿಕೊಳ್ಳಬೇಕು. ನೈತಿಕಶಕ್ತಿಯೆಂದರೆ ಕೇವಲ ನಾವು ಅನೈತಿಕ, ಅಯೋಗ್ಯ ಕಾರ್ಯಗಳಿಂದ ದೂರ ಉಳಿದರಷ್ಟೇ ಸಾಲದು; ಯೋಗ್ಯ ಕಾರ್ಯಗಳನ್ನು ಮಾಡುವ ಹಾಗೂ ಬೆಂಬಲಿಸುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕೆಂಬ ಸಂಕಲ್ಪ ತೊಡಬೇಕು.
‘A learned fool is more foolish than an ignorant fool. Ignorance is not innocence, but sin. Ignorance is dangerous but cultural ignorance is more dangerous’, ಎಂಬುದು ಶಿಕ್ಷಕರಿಗೆ ಹೃದ್ಗತವಾಗಬೇಕಿದೆ. ಪ್ರಜ್ಞಾವಂತ ಪ್ರಜೆಗಳನ್ನು ಕಾರ್ಖಾನೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಅವರು ಶ್ರೇಷ್ಠ ಶಿಕ್ಷಣ ವ್ಯವಸ್ಥೆಯಿಂದಲೇ ಮೂಡಿಬರಬೇಕಲ್ಲವೇ?
ಶಿಕ್ಷಕನೇ ನೀನು ಜೀವಂತ ದೇವರು! ನಿನಗೆ ಸರ್ವರೂ ಹಣೆಮಣಿಯುತ್ತಾರೆ! ರಾಷ್ಟ್ರದ ಸಂಜೀವಿನಿ ನೀನು, ಕಾಮಧೇನು ನೀನು. ನಿನ್ನ ದೈವಿಕ ಕರ್ತವ್ಯ ನಿನ್ನ ಹೃದಯ ತಟ್ಟಲಿ. ನಿನ್ನ ಆತ್ಮಸಾಕ್ಷಿ ನಮ್ಮ ಉಸಿರಾಗಲಿ. ನಮಗೆ ಜೀವನದಾನ ಮಾಡುವವನು ನೀನೇ. ಆದ್ದರಿಂದ ದಯವಿಟ್ಟು ನಿನ್ನ ಕುಂಭಕರ್ಣತನದಿಂದ ಮುಕ್ತನಾಗಿ ಆಂಜನೇಯತ್ವಕ್ಕೆ ಮರಳು. ಇದುವೇ ನನ್ನ ಆತ್ಮಸಾಕ್ಷಿಯ ಪ್ರಾರ್ಥನೆ!
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)