‘ಕಸವರಮೆಂಬುದು ನೆರೆ ಸೈ / ರಿಸಲಾರ್ಪೆಡೆ ಪರ ವಿಚಾರಮಂ, ಧರ್ಮಮುಮಂ’ ಇದು ಕನ್ನಡ ಮನಸ್ಸು ಕ್ರಿ ಶ 850ರ ವೇಳೆಗೇ ಚಿಂತಿಸಿದ ಕ್ರಮ. ಕಸವರವೆಂದರೆ ಸಂಪತ್ತು. ನಿಜವಾದ ಸಂಪತ್ತೆಂದರೆ ಅನ್ಯ ಧರ್ಮ ಹಾಗೂ ಅನ್ಯರ ವಿಚಾರಗಳನ್ನು ಗೌರವಿಸುವುದು. ಇದು ಸಹಬಾಳ್ವೆಯ ಬದುಕಿನಲ್ಲಿ ಅತ್ಯಗತ್ಯವಾಗಿ ನಾವೆಲ್ಲರೂ
ಯಾವ ಮನುಷ್ಯನೇ ಆಗಲಿ ಆತ ಏನೇ ಮಾಡುತ್ತಿರಲಿ, ಎಲ್ಲಿಯೇ ಮಾತನಾಡುತ್ತಿರಲಿ, ಯಾವ ಕೆಲಸದಲ್ಲಿಯೇ ತೊಡಗಿರಲಿ ತಾನು ಏನು ಮಾಡುತ್ತಿದ್ದೇನೆಂಬ ಅರಿವು ಮನಸ್ಸಿನ ಒಂದು ಮೂಲೆಯಲ್ಲಿ ಇದ್ದೇ ಇರುತ್ತದೆ. ನಮ್ಮ ಮಾತು ಕ್ರಿಯೆಗಳನ್ನು ಮನಸ್ಸಿನ ಆಳದಲ್ಲಿರುವ ‘ಅಂತಃಪ್ರಜ್ಞೆ’ ಗಮನಿಸುತ್ತಲೇ ಇರುತ್ತದೆ. ನಮ್ಮೊಳಗಿನ ಈ ‘ಒಳದನಿ’ಯೇ ನಮ್ಮನ್ನು ಕಾಪಾಡುವ ಶಕ್ತಿ. ನಾವು ಮಾಡುವುದು ಸರಿಯೋ ತಪ್ಪೋ ಎಂಬುದು ಬೇರೆಯವರಿಗಿಂತ ಮೊದಲು ನಮಗೇ ಗೊತ್ತಿರುತ್ತದೆ. ಗೊತ್ತಿದ್ದೂ ತಪು್ಪಗಳು ಯಾಕೆ ಸಂಭವಿಸುತ್ತವೆ? ಏಕೆಂದರೆ ಮನುಷ್ಯ ಮೂಲತಃ ‘ಭಾವನಾವಶ’ನಾದುದರಿಂದ ಈ ಸದಸದ್ವಿವೇಕ ಬುದ್ಧಿಯ ಪ್ರಜ್ಞೆಗೆ ಮಂಕು ಕವಿಯುತ್ತದೆ. ರಾಗದ್ವೇಷಗಳಿಗೆ ಒಳಗಾದ ಮನಸ್ಸು ಉದ್ವಿಗ್ನತೆಗೆ ಒಳಗಾಗಿ ವಿವೇಕ ಕಳೆದುಕೊಂಡಾಗ ಅತಿರೇಕದ ವರ್ತನೆಗೆ ಹಾದಿ ಮಾಡಿಕೊಡುತ್ತದೆ. ‘ನಾನು ಹೀಗೆ ಮಾಡಬಾರದಿತ್ತು’, ‘ನಾನು ಹೀಗೆ ಮಾತನಾಡಬಾರದಿತ್ತು’ ಎಂದು ನಾವೇ ನಂತರ ಪಶ್ಚಾತ್ತಾಪ ಪಡುವುದುಂಟು. ಆದರೆ ಆ ವೇಳೆಗೆ ಆಗಬಾರದ ಅನಾಹುತ ಆಗಿಹೋಗಿರುತ್ತದೆ. ಇದನ್ನು ತಡೆಯುವುದು ಹೇಗೆ?
ನಮ್ಮ ನಡವಳಿಕೆಯಲ್ಲಿ ಕಾಯಾ(ಕ್ರಿಯೆ), ವಾಚಾ(ಮಾತು), ಮನಸಾ(ಭಾವ) ಎಂಬ ಮೂರು ಹಂತಗಳಿರುತ್ತವೆ. ಯಾವುದೇ ಕ್ರಿಯೆಗೆ ಮುನ್ನ ಆ ಭಾವ ಮನಸ್ಸಿನಲ್ಲಿ ಮೂಡುತ್ತದೆ; ನಂತರ ಅದು ಮಾತಿನ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತದೆ; ಆ ನಂತರದಲ್ಲಿ ಅದು ಕ್ರಿಯೆಯಾಗಿ ಮಾರ್ಪಡುತ್ತದೆ. ಇದು ಈ ಕ್ರಮದಲ್ಲಿಯೇ ಇರುತ್ತದೆಂದು ಭಾವಿಸಬೇಕಾಗಿಲ್ಲ. ಭಾವಾವೇಶದ ಸಂದರ್ಭದಲ್ಲಿ ಕೆಲವೊಮ್ಮೆ ಕ್ರಿಯೆಯೇ ಮೊದಲು ಸಂಭವಿಸಿಬಿಡಬಹುದು. ಆವೇಶದ ಕ್ಷಣಗಳಲ್ಲಿ ಮೊದಲು ಕ್ರಿಯೆಯನ್ನು ನಿಯಂತ್ರಿಸಬೇಕು. ದ್ವೇಷ, ಅಸಹನೆಯ ಸಂದರ್ಭದಲ್ಲಿ ಮೊದಲು ಹಲ್ಲೆಗೆ ಮುಂದಾಗಬಾರದು; ಆವೇಶದಲ್ಲಿ ಹಲ್ಲೆ ಮಾಡಿದರೆ ಪ್ರಾಣಾಪಾಯವೇ ಸಂಭವಿಸಿಬಿಡಬಹುದು. ಕ್ರಿಯೆಯನ್ನು ನಿಯಂತ್ರಿಸಿದರೆ ಅನಾಹುತದ ಪ್ರಮಾಣ ತಗ್ಗುತ್ತದೆ. ನಂತರದಲ್ಲಿ ಆಡುವ ಮಾತಿನ ಬಗ್ಗೆ ಎಚ್ಚರವಿರಬೇಕು. ಅನೇಕ ವೇಳೆ ನಾವಾಡುವ ಮಾತುಗಳೇ ಅನಾಹುತಗಳಿಗೆ ಹಾದಿ ಮಾಡಿಕೊಡುತ್ತವೆ. ‘ಮಾತಿಂದ ನಗೆ ನುಡಿಯು ಮಾತಿಂದ ಕೊಲೆ ಹಗೆಯು / ಮಾತಿಂದ ಸರ್ವರಿಗೆ ಉಪಚಾರ ಲೋಕಕ್ಕೆ / ಮಾತೆ ಮಾಣಿಕವು ಸರ್ವಜ್ಞ’. (1023ನೇ ವಚನ, ಸರ್ವಜ್ಞನ ವಚನಗಳು, ಸಂ. ರಾಗೌ) ಇದು ಲೋಕಾನುಭವದ ಮಾತು. ಇತ್ತೀಚೆಗೆ ನಮ್ಮಲ್ಲಿ ಅನೇಕರು ದುಡುಕಿನಿಂದ ಏನೆಲ್ಲ ಮಾತನಾಡಿ, ಆನಂತರದಲ್ಲಿ ಅದರ ಪರಿಣಾಮ ಎದುರಿಸಲಾರದೆ ಪರಿತಾಪ ಪಟ್ಟಿದ್ದನ್ನು ಗಮನಿಸುತ್ತಿದ್ದೇವೆ. ‘ಏನು ಬಂದಿರಿ, ಹದುಳವಿದ್ದಿರೆ? ಎಂದರೆ / ನಿಮ್ಮ ಮೈಸಿರಿ ಹಾರಿಹೋಹುದೇ? / ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?/ ಒಡನೆ ನುಡಿದರೆ ಸಿರ-ಹೊಟ್ಟೆಯೊಡೆವುದೆ? / ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದಡೆ/ ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲ ಸಂಗಮದೇವನು?’ (ವಚನ ಕಮ್ಮಟ, 242). ಇದು ಕೇವಲ ವ್ಯಾವಹಾರಿಕ ನೆಲೆಯ ನಿಲುವಲ್ಲ; ಸಂಸ್ಕೃತಿಯನ್ನೂ ಸೂಚಿಸುವಂಥದು. ಬಸವಣ್ಣ ಮುಂದೆ ಸಾಮಾಜಿಕ ಮೌಲ್ಯಗಳನ್ನೇ ಧಾರ್ವಿುಕ ಮೌಲ್ಯವಾಗಿ ರೂಪಾಂತರಿಸುತ್ತಾನೆ. ಕಳ್ಳತನ ಮಾಡದಿರುವುದು, ಸುಳ್ಳು ಹೇಳದಿರುವುದು, ಅನ್ಯರಿಗೆ ಅಸಹ್ಯ ಪಡದಿರುವುದು, ತನ್ನ ಬಣ್ಣಿಸಿ ಇತರರನ್ನು ಹಳಿಯುವುದು- ಈ ಸಾಮಾಜಿಕ ನಡವಳಿಕೆಯೇ ಕೂಡಲಸಂಗಮನನ್ನು ಒಲಿಸುವ ಪರಿ ಎಂಬಲ್ಲಿ ಇದನ್ನು ಗುರ್ತಿಸಬಹುದು. ಸಮಾಜ, ಸಂಸ್ಕೃತಿ ಹಾಗೂ ಧರ್ಮ ಇವುಗಳಿಗೆ ಪರಸ್ಪರ ನಿಕಟ ಸಂಬಂಧವಿದೆ.
ಯಾರ ಮೇಲಾದರೂ ನಮಗೆ ಅಸಮಾಧಾನ ಹಾಗೂ ದ್ವೇಷವಿದ್ದು ಅವರ ಮೇಲೆ ಹಲ್ಲೆ ಮಾಡುವ ಮನಸ್ಸಿದ್ದರೆ ಮೊದಲು ಹಲ್ಲೆಯಾಗದಂತೆ ನಮ್ಮ ಕ್ರಿಯೆಯನ್ನು ನಿಯಂತ್ರಿಸಿಕೊಳ್ಳಬೇಕು. ನಂತರದಲ್ಲಿ ಅವರ ಬಗ್ಗೆ ಅಸಹನೆಯ ಮಾತುಗಳನ್ನು ಆಡುವುದನ್ನು ನಿಲ್ಲಿಸಬೇಕು; ನಿಂದನೆಯ ಮಾತುಗಳೇ ದುಷ್ಪರಿಣಾಮಕ್ಕೆ ಅನುವು ಮಾಡಿಕೊಡಬಹುದು. ಮೂರನೆಯ ಹಂತದಲ್ಲಿ ನಮ್ಮ ಮನಸ್ಸಿನಲ್ಲಿಯೇ ಅಂತಹ ಭಾವ ಮೂಡದಂತೆ ಎಚ್ಚರ ವಹಿಸಬೇಕು. ಆಗ ಸಾಮಾಜಿಕವಾಗಿ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ. ಸಹಬಾಳ್ವೆಯ ಬದುಕಿನಲ್ಲಿ ಈ ಬಗೆಯ ‘ಸಹಿಷ್ಣುತೆ’ಯೇ ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಪ್ರಮುಖ ಮೌಲ್ಯ. ಇದು ಸಾಧ್ಯವಾಗಬೇಕಾದರೆ ಎರಡು ಶಕ್ತಿಗಳನ್ನು ನಾವು ಬೆಳೆಸಿಕೊಳ್ಳಬೇಕು. ಮೊದಲನೆಯದು ಯಾವುದು ಸರಿ, ಯಾವುದು ತಪು್ಪ ಎಂದು ನಿಷ್ಪಕ್ಷಪಾತವಾಗಿ ಅರಿಯುವ ‘ವಿಮರ್ಶಾವಿವೇಕ’; ಮತ್ತೊಂದು ನಮ್ಮನ್ನೇ ನಾವು ಪ್ರಾಮಾಣಿಕವಾಗಿ ಒಳಹೊಕ್ಕು ನೋಡಿಕೊಳ್ಳುವ ‘ಆತ್ಮಾವಲೋಕನ’. ಇವೆರಡೂ ಇಂದು ನಮ್ಮ ಸಾಮಾಜಿಕ ಬದುಕಿನಿಂದಲೇ ಮರೆಯಾಗಿಬಿಟ್ಟಿವೆ.
ಆಧುನಿಕ ಬದುಕು ನಮಗೆ ಅನೇಕ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿರುವುದು ನಿಜ; ಜೊತೆಜೊತೆಗೇ ಅನೇಕ ವಿಕೃತಿಗಳಿಗೂ ಅದು ಕಾರಣವಾಗಿದೆ. ನಾಗರಿಕ ಜಗತ್ತು ನಮ್ಮಲ್ಲಿ ಸ್ಪರ್ಧಾಕಣವನ್ನು ಸೃಷ್ಟಿಸಿ ಅಸೂಯೆ, ದ್ವೇಷ, ಹಿಂಸೆಗಳನ್ನು ಬೆಳೆಸಿ, ಜಗತ್ತನ್ನು ಸದಾ ಯುದ್ಧಸನ್ನದ್ಧವಾಗಿಟ್ಟಿದೆ. ಮನುಷ್ಯನ ದುರಾಸೆಗಳನ್ನು ಪೋಷಿಸಿ ಸರಕುಸಂಸ್ಕೃತಿಯ ದಾಸನನ್ನಾಗಿ ಮಾಡುವುದರ ಮೂಲಕ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿದೆ. ಅಧಿಕಾರ ಹಾಗೂ ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವುದರ ಮೂಲಕ ಬಹುಸಂಖ್ಯಾತ ಸಾಮಾನ್ಯರ ಬದುಕು ಅಸಹನೀಯವಾಗಿದೆ. ಸರಳ ಜೀವನದ ತತ್ತ್ವಗಳು ತಾತ್ಸಾರಕ್ಕೊಳಗಾಗಿ ವಿಲಾಸೀ ಬದುಕು ವಿಜೃಂಭಿಸತೊಡಗಿದೆ. ಪರಿಣಾಮವಾಗಿ ಜೀವನಾವಶ್ಯಕ ಸಂಗತಿಗಳ ಬೆಲೆಯೂ ಗಗನಕ್ಕೇರುವುದರ ಮೂಲಕ ಸಾಮಾನ್ಯರ ಬದುಕು ದುರ್ಭರವಾಗತೊಡಗಿದೆ. ಭೋಗಸಂಸ್ಕೃತಿಯ ಮೋಹ ಅಕ್ರಮ ಸಂಪಾದನೆಗೆ ಹಾದಿಮಾಡಿಕೊಟ್ಟಿದೆ. ‘ಹೇಗಾದರೂ ಸರಿ, ಹಣ ಮಾಡು’ ಎಂಬುದು ಬಹುತೇಕರ ಧ್ಯೇಯವಾಕ್ಯವಾದಂತಿದೆ.
ಈ ಎಲ್ಲವನ್ನೂ ಚಿಂತಿಸಿ, ಸಮಾಧಾನವಾಗಿ ವಿಚಾರ ಮಾಡಿ, ಪರಿಹಾರದ ಸಾಧ್ಯತೆಗಳನ್ನು ಹುಡುಕುವ ಮೇಧಾವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅಬ್ಬರದ ಮಾತುಗಳ ನಡುವೆ ಮೌನಚಿಂತನೆ ಹಿಂದೆ ಸರಿದಿದೆ. ಅಧ್ಯಯನದಿಂದ ಮೂಡಿದ ವಿಚಾರ, ಆ ವಿಚಾರಕ್ಕೆ ತಕ್ಕ ಮಾತು, ಮಾತಿಗೆ ತಕ್ಕಂತೆ ಕೃತಿ- ಇವುಗಳ ನಡುವಿನ ಸಾವಯವ ಸಂಬಂಧ ಕಣ್ಮರೆಯಾಗಿದೆ. ಸಮಯಕ್ಕೆ ತಕ್ಕಂತೆ ಮಾತನಾಡುವವರೇ ಮೇಧಾವಿಗಳ ಪಟ್ಟದಲ್ಲಿ ಅಲಂಕೃತರಾಗುತ್ತಿದ್ದಾರೆ.
ಯಾವುದೇ ಸಮಾಜದಲ್ಲಿ ನಿಸ್ಸಂದೇಹವಾಗಿ ರಾಜಕೀಯ ಹಾಗೂ ಧರ್ಮ ಅಧಿಕಾರ ಕೇಂದ್ರಗಳು. ಅಧೀನ ಸಂಸ್ಕೃತಿಯನ್ನು ಪೋಷಿಸುವ ಇವರಿಗೆ ವಿಮರ್ಶೆ ಬೇಕಾಗಿಲ್ಲ. ಇವರದು ‘ಜೀ ಹುಜೂರ್’ ಸಂಸ್ಕೃತಿ. ಇಂಥಲ್ಲಿ ಯಾವುದೇ ರೀತಿಯ ಅರ್ಥಪೂರ್ಣ ಸಂವಾದ ಸಾಧ್ಯವಿಲ್ಲ. ಕಮೂ ಹೇಳುತ್ತಾನೆ: ‘ನನ್ನ ಮುಂದೆ ಹೋಗಬೇಡ, ನಿನ್ನನ್ನು ನಾನು ಅನುಸರಿಸಲಾರೆ; ನನ್ನ ಹಿಂದೆಯೂ ಬರಬೇಡ, ನಿನಗೆ ಮಾರ್ಗದರ್ಶನ ಮಾಡಲಾರೆ, ಜೊತೆಯಾಗಿ ಹೋಗೋಣ, ಗೆಳೆಯರಾಗಿರೋಣ’ ಇದು ಸಾಹಿತ್ಯದ ನಿಲವು. ಹೀಗಾಗಿ ಸಾಹಿತ್ಯ ‘ಸ್ವಾಯತ್ತಪ್ರಜ್ಞೆ’ಯನ್ನು ಬೆಳೆಸುವ ಅತ್ಯುತ್ತಮ ಸಾಧನ. ನಮ್ಮ ಮನಸ್ಸನ್ನು ಆವರಿಸಿರುವ ಜಡತೆ, ದಣಿವನ್ನು, ಮಂಕನ್ನು ಸಾಹಿತ್ಯ ಉಚ್ಛಾಟಿಸುತ್ತದೆ ಎಂದು ನೆರುಡಾ ನಂಬಿದ್ದ.
ನಮ್ಮ ಬದುಕು ಅನೇಕ ಗೊಂದಲಗಳಿಂದ ಕೂಡಿದೆ, ಸಂದಿಗ್ಧಮಯವಾಗಿದೆ ಎಂದು ಪ್ರತಿಕ್ಷಣವೂ ಭಾಸವಾಗುತ್ತಿದೆ. ಈ ಗೊಂದಲ ಹೊರಗೆ ಮಾತ್ರವಲ್ಲ, ನಮ್ಮೆಲ್ಲರ ಮನಸ್ಸನ್ನೂ ಆವರಿಸಿದೆ. ಎಲ್ಲೆಲ್ಲೂ ವಿನಾಶವೇ ಕಣ್ಣಿಗೆ ಕಟ್ಟುತ್ತಿದೆ. ಎಲ್ಲ ಮೌಲ್ಯಗಳೂ ನಾಶವಾಗುತ್ತಿವೆ. ಪರಸ್ಪರ ಗೌರವವಿಲ್ಲ, ಯಾರಿಗೂ ಯಾವುದರಲ್ಲೂ ವಿಶ್ವಾಸವಿಲ್ಲ; ಸಹಬಾಳ್ವೆಯ ಸಮಾಧಾನದಿಂದ ಬದುಕಬೇಕಾಗಿದ್ದ ನಮ್ಮ ಸಾಮಾಜಿಕ ಬದುಕು ಅಪನಂಬಿಕೆ, ಹಿಂಸೆಯಿಂದ ಅಸಹನೀಯವಾಗಿದೆ. ಇಂತಹ ಹೊತ್ತಿನಲ್ಲಿ ಮಾರ್ಗದರ್ಶನ ಮಾಡಬಲ್ಲಂತಹ ಎಲ್ಲ ಬಗೆಯ ಸಿದ್ಧಾಂತಗಳೂ, ಧರ್ಮಗಳೂ, ಐಡಿಯಾಲಜಿಗಳೂ, ಸಾಮಾಜಿಕ ವ್ಯವಸ್ಥೆಗಳೂ ಸತ್ವಹೀನವಾಗಿವೆ. ಈಗ ಪ್ರತಿಯೊಬ್ಬರೂ ತಾವು ತಮ್ಮ ಬದುಕನ್ನು ಹೇಗೆ ಚಂದ ಮಾಡಿಕೊಳ್ಳಬೇಕು ಎಂಬುದನ್ನು ತಮ್ಮಷ್ಟಕ್ಕೆ ತಾವೇ ಕಂಡುಕೊಳ್ಳಬೇಕಾಗಿದೆ. ‘ಆತ್ಮಾವಲೋಕನ’ವೊಂದೇ ಪರಿಹಾರದ ಸೂತ್ರ; ನಮ್ಮ ಮನಸ್ಸು ಇತರರ ಉಪದೇಶಗಳ ಹೆಣಭಾರದಿಂದ ನರಳುತ್ತಿದೆ; ಅದೊಂದು ರೀತಿ ಕೊರಳಿಗೆ ಕಟ್ಟಿದ ರುಬ್ಬುಗುಂಡಾಗಿ ನಮ್ಮ ಆಲೋಚನಾ ಕ್ರಮವನ್ನು, ನಮ್ಮ ಭಾವಜಗತ್ತನ್ನು ನಿಯಂತ್ರಿಸುತ್ತಿದೆ. ಸಂಸ್ಕೃತಿ, ಧರ್ಮ, ಪರಂಪರೆಯ ಹೆಸರಿನಲ್ಲಿ ನಮ್ಮ ಮನೋಭೂಮಿಯಲ್ಲಿ ಬಿತ್ತುತ್ತಿರುವ ಇಂತಹ ಉಚಿತ ಉಪದೇಶಗಳನ್ನು ‘ವಿಮಶಿಸಿ ಸ್ವೀಕರಿಸುವ’ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಯಾರದೋ ಆಶಯಕ್ಕೆ ನಮ್ಮ ಬದುಕನ್ನು ಬಲಿಕೊಡಬೇಕಾಗುತ್ತದೆ. ಆಧುನಿಕ ಬದುಕಿನಲ್ಲಿ ಸಂವಹನ ಬೆರಳ ತುದಿಯಲ್ಲಿದೆ; ಹೀಗಾಗಿ ‘ಸಂದೇಶ’ಗಳು ಅತಿವೇಗವಾಗಿ ಮನಸ್ಸನ್ನು ಆವರಿಸುತ್ತಿವೆ; ಸರಿಯೋ ತಪ್ಪೋ, ಅಧಿಕೃತವೋ ಸುಳ್ಳುಸುದ್ದಿಯೋ ಎಂದು ಅರಿವಾಗುವ ಮೊದಲೇ ನಮ್ಮ ಭಾವಜಗತ್ತಿನ ಮೇಲೆ ಅವುಗಳ ಆಕ್ರಮಣವಾಗಿಬಿಟ್ಟಿರುತ್ತದೆ. ನಮ್ಮ ಮನಸ್ಸನ್ನು ಆವರಿಸುವ ಇಂತಹ ‘ಬಿಂಬ’ಗಳಿಂದ ಬಿಡುಗಡೆ ಪಡೆದು ‘ಸ್ವತಂತ್ರ’ವಾಗಿಟ್ಟುಕೊಳ್ಳುವುದು ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಅಗತ್ಯ. ‘ಆತ್ಮಾವಲೋಕನ’ದಿಂದ ಇದು ಸಾಧ್ಯ.
ಜಾನಪದ ಕತೆಯೊಂದು ನೆನಪಿಗೆ ಬರುತ್ತಿದೆ: ಒಬ್ಬ ಸಂತನಿಗೆ ಹಲವಾರು ಮಂದಿ ಶಿಷ್ಯರಿದ್ದರು. ‘ದೇವರು ಸರ್ವಾಂತರ್ಯಾಮಿ, ಅವನು ಎಲ್ಲೆಲ್ಲಿಯೂ ಇದ್ದಾನೆ, ಆದುದರಿಂದ ನೀವು ಸಕಲ ವಸ್ತು, ಪ್ರಾಣಿ, ಜೀವಿಗಳನ್ನೂ ದೇವರೆಂದು ತಿಳಿದು ಭಾವಿಸಿ ಗೌರವಿಸಬೇಕು’ ಎಂದು ಅವನು ತಾನು ನಂಬಿದ ಸತ್ಯವನ್ನು ಬೋಧಿಸಿದ. ಒಂದು ದಿನ ಒಬ್ಬ ಶಿಷ್ಯ ಹೀಗೇ ಮಾರುಕಟ್ಟೆಯಲ್ಲಿ ಹೋಗುತ್ತಿದ್ದಾಗ ಮದವೇರಿದ ಆನೆಯೊಂದು ಅತ್ತ ಬಂತು. ‘ದಾರಿಬಿಡಿ, ದಾರಿಬಿಡಿ, ಇದು ಮದವೇರಿದ ಆನೆ’ ಎಂದು ಮಾವುತ ಕೂಗಿಕೊಳ್ಳುತ್ತಿದ್ದ. ಶಿಷ್ಯ ಗುರುಗಳ ಮಾತನ್ನು ಸ್ಮರಿಸಿಕೊಂಡು, ಆನೆಯಲ್ಲಿಯೂ ದೇವರಿದ್ದಾನೆ, ದೇವರನ್ನು ನಂಬಿದ ತನಗೆ ದೇವರಿಂದ ತೊಂದರೆಯಾಗದು ಎಂದು ನಿರಾತಂಕವಾಗಿ ಭಕ್ತಿಭಾವದಿಂದ ತನ್ನ ಪಾಡಿಗೆ ತಾನು ಹೋಗುತ್ತಿದ್ದ. ಅವನನ್ನು ಗಮನಿಸಿದ ಮಾವುತ ಮತ್ತೆ ಮತ್ತೆ ಅವನನ್ನು ಕೂಗಿ ಎಚ್ಚರಿಸಿದ. ಆದರೆ ಶಿಷ್ಯ ಮಿಸುಕಾಡಲಿಲ್ಲ. ಮದವೇರಿದ ಆನೆ ಅವನನ್ನು ಸೊಂಡಿಲಿನಿಂದೆತ್ತಿ ಗರಗರ ತಿರುಗಿಸಿ ದೂರ ಎಸೆಯಿತು. ಕೈಕಾಲು ಮುರಿದುಕೊಂಡು ನರಳುತ್ತಿದ್ದ ಆತನನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಲು ಬಂದ ಗುರುಗಳನ್ನು ಕುರಿತು ಆತ ‘ಗುರುಗಳೇ, ದೇವರು ಸರ್ವಾಂತರ್ಯಾಮಿ ಎಂದು ಹೇಳಿದಿರಿ, ನಿಮ್ಮ ಮಾತನ್ನು ನಂಬಿದ ನನಗೆ ಆನೆ ಏನು ಮಾಡಿತು ನೋಡಿರಿ’ ಎಂದು ಅಲವತ್ತುಕೊಂಡ. ಆಗ ಗುರುಗಳು, ‘ದೇವರು ಎಲ್ಲೆಡೆಯೂ ಇದ್ದಾನೆಂಬುದು ನಿಜ, ಆನೆಯೂ ದೇವರೇ, ಮಾವುತನೂ ದೇವರೇ; ‘ದಾರಿಬಿಡು’ ಎಂದು ಮಾವುತನೊಳಗಿನ ದೇವರು ಕೂಗಿ ಎಚ್ಚರಿಸಿದಾಗ ನೀನೇಕೆ ಅವನ ಮಾತಿಗೆ ಕಿವಿಗೊಡಲಿಲ್ಲ’ ಎಂದರು. ವ್ಯಾಖ್ಯಾನ ಅನಗತ್ಯ.
(ಲೇಖಕರು ಖ್ಯಾತ ವಿಮರ್ಶಕರು)