ಅಂಕಣ

ಚಲನಶೀಲವಾದ ಸಮಾಜಮುಖಿ ಧರ್ಮಯಾನ

ನಾನು ಚಿಕ್ಕವನಿದ್ದಾಗ ನನ್ನ ಹಳ್ಳಿಯ ಅನೇಕರು ಕಾರ್ತಿಕ ಮಾಸ ಬಂದಾಗ ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ಹೋಗುತ್ತಿದ್ದುದು ನೆನಪಿದೆ. ಆಗ ನನ್ನ ತಾಯಿ ಅವರಿಗೆ ಸ್ವಲ್ಪ ಹಣ ಕೊಟ್ಟು ದೇವರ ಹುಂಡಿಗೆ ಹಾಕಲು ಹೇಳುತ್ತಿದ್ದರು. ಆಗೆಲ್ಲ ನನ್ನ ಮನಸ್ಸಿನಲ್ಲಿ ಅವರು ಆ ಹಣವನ್ನು ದೇವರ ಹುಂಡಿಗೆ ಹಾಕದೆ ತಮ್ಮ ದಾರಿಖರ್ಚಿಗೆ ಬಳಸಿಕೊಳ್ಳಬಹುದೆಂಬ ಅನುಮಾನ. ಆದರೆ ಹಾಗೆ ಹೇಳಲು ಧೈರ್ಯವಿರಲಿಲ್ಲ. ಕ್ರಮೇಣ ನನ್ನ ಅಮ್ಮ ಧರ್ಮಸ್ಥಳದ ಮಂಜುನಾಥನಿಗೆ ಕಾಣಿಕೆಯನ್ನು ಮನಿಯಾರ್ಡರ್ ಮಾಡಲು ನನಗೇ ಹೇಳುತ್ತಿದ್ದರು. ಮೊದಲು ಅಲ್ಪ ಮೊತ್ತವಿದ್ದದ್ದು

ನಾವು ಮಕ್ಕಳು ಸಂಪಾದಿಸುವ ವೇಳೆಗೆ ಜಾಸ್ತಿಯಾಗುತ್ತ ಹೋಯಿತು. ಇದು ಪ್ರತಿವರ್ಷವೂ ನಿಯಮಿತವಾಗಿ ನಡೆಯುತ್ತಿತ್ತು. ಇಂತಹ ಒಂದು ಸಂದರ್ಭದಲ್ಲಿ ನಾನು ಅಮ್ಮನನ್ನು ಕೇಳಿದೆ: ‘ನೀನು ಪ್ರತಿವರ್ಷ ಮಂಜುನಾಥನಿಗೆಂದು ಹಣ ಕಳಿಸುತ್ತೀಯೆ, ಆದರೆ ಅದು ಮಂಜುನಾಥನಿಗೆ ಎಲ್ಲಿ ತಲುಪುತ್ತದೆ? ನೀನು ಅಲ್ಲಿಗೆ ಹಣ ಕಳಿಸುವ ಬದಲು ನನಗೇ ಕೊಟ್ಟುಬಿಡು’. ಆಗ ನನ್ನಮ್ಮ ನಸುನಕ್ಕು, ‘ಮಂಜುನಾಥನಿಗೆ ಕಳಿಸು ಎಂದು ನಿನಗೇ ಕೊಡುತ್ತೇನಲ್ಲ, ಬೇಕಿದ್ದಲ್ಲಿ ಅದನ್ನು ನೀನೇ ಇಟ್ಟುಕೋ, ಅಥವಾ ನೀನು ಮನಿಯಾರ್ಡರ್ ಮಾಡಿದಾಗ ಅದನ್ನು ಅಂಚೆಯವನೇ ಬಳಸಿಕೊಳ್ಳಲಿ, ಇಲ್ಲವೇ ಅಲ್ಲಿ ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಬದಲು ಬೇರೆ ಯಾರೋ ಉಪಯೋಗಿಸಿಕೊಳ್ಳಲಿ- ನಾನು ಅದು ಮಂಜುನಾಥನಿಗೇ ತಲುಪಿತು ಎಂದು ನಂಬುತ್ತೇನೆ’ ಎಂದು ಹೇಳಿ ನನ್ನ ಕೈಗೆ ಆ ಕಾಲಕ್ಕೆ ದೊಡ್ಡಮೊತ್ತ ಎನ್ನಬಹುದಾದ ಐವತ್ತು ರೂಪಾಯಿ ನೀಡಿದರು. ನನ್ನ ಅಮ್ಮನಂತಹ ಅನೇಕರ ಈ ‘ನಂಬಿಕೆ’ಯೇ ಧರ್ಮಸ್ಥಳದ ಶಕ್ತಿ. ಎಂಟುನೂರು ವರ್ಷಗಳಿಂದ ಜನಮಾನಸದ ಈ ‘ನಂಬಿಕೆ’ಯನ್ನು ಶ್ರೀಕ್ಷೇತ್ರ ಜತನದಿಂದ ಕಾಪಾಡಿಕೊಂಡು ಬಂದಿದೆ. ನಂಬಿಕೆಯೇ ದೈವ. ತಾವು ನಂಬಿದ ದೈವ ತಮ್ಮನ್ನು ಕಾಪಾಡುತ್ತದೆ ಎಂದು ಜನ ಈಗಲೂ ನಂಬುತ್ತಾರೆ. ಇಂತಹ ನಂಬಿಕೆ ಅವರಲ್ಲಿ ಇತ್ಯಾತ್ಮಕ ಶಕ್ತಿ ತುಂಬುತ್ತದೆ. ದೈವ ಒಂದು ರೀತಿಯಲ್ಲಿ ಸಂಕಟ ಬಂದಾಗ ಬದುಕಿಗೆ ಭರವಸೆ ತುಂಬುವ ಮಾನಸಿಕ ಅಗತ್ಯ. ಜನಮಾನಸದ ಈ ನಂಬಿಕೆಯನ್ನು ಮೌಢ್ಯವಾಗಿಸಿಕೊಂಡು ಅವರ ಶೋಷಣೆ ಮಾಡದೆ ಸಮಾಜಮುಖಿಯಾಗಿ ಜನಕಲ್ಯಾಣದತ್ತ ತೊಡಗಿಸಿಕೊಳ್ಳುವುದೇ ‘ಧರ್ಮ’. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ‘ಧರ್ಮಯಾನ’ ಇಂತಹ ಒಂದು ಅರ್ಥಪೂರ್ಣ ಸಮಾಜಮುಖಿ ಪಯಣ.

ಎಂಟುನೂರು ವರ್ಷಗಳ ಹಿಂದೆ ಕುಡುಮ ಎಂಬ ಪುಟ್ಟ ಹಳ್ಳಿಗೆ ಜೈನ ನಾಯಕರಾಗಿದ್ದ ಬರ್ಮಣ್ಣ ಹಾಗೂ ಅಮ್ಮು ಪೆರ್ಗಡೆಯವರ ಮನೆಗೆ ಧರ್ಮದೇವತೆಗಳು ಮನುಷ್ಯರೂಪದಲ್ಲಿ ಬಂದು ಧರ್ಮಸ್ಥಾಪನೆಗೆ ಸೂಕ್ತ ಸ್ಥಳ ಹುಡುಕುತ್ತ ಆ ಮನೆಯವರ ಮನದ ನಿರ್ಮಲತೆಗೆ ಮೆಚ್ಚಿ ಅಲ್ಲಿಯೇ ನೆಲೆ ನಿಂತರೆಂಬುದು ಪ್ರತೀತಿ. ದೈವಸೂಚನೆಯಂತೆ ಅಣ್ಣಪ್ಪ ಸ್ವಾಮಿಯ ಮೂಲಕ ಕದ್ರಿಯಿಂದ ಮಂಜುನಾಥ ಸ್ವಾಮಿಯ ವಿಗ್ರಹ ತರಿಸಿದ್ದು ಇತಿಹಾಸ. ಹದಿನಾರನೇ ಶತಮಾನದಲ್ಲಿ ದೇವರಾಜ ಹೆಗ್ಗಡೆಯವರು ಉಡುಪಿಯ ವಾದಿರಾಜರನ್ನು ಕರೆಸಿದಾಗ ಅವರು ಮಂಜುನಾಥ ಸ್ವಾಮಿಯ ಪ್ರತಿಷ್ಠಾಪನೆ ಮಾಡಿ ಅದನ್ನು ‘ಧರ್ಮಸ್ಥಳ’ ಎಂದು ಕರೆದರು. ದೇವರು ಮಂಜುನಾಥ; ಪೂಜೆ ಸಲ್ಲಿಸುವವರು ವೈಷ್ಣವರು; ದೇವಸ್ಥಾನದ ಆಗುಹೋಗುಗಳನ್ನು ನೋಡಿಕೊಳ್ಳುವವರು ಜೈನರು. ಇದೊಂದು ರೀತಿ ವಿಶಿಷ್ಟ ಧರ್ಮ ಸಮನ್ವಯ.

ಧರ್ಮಸ್ಥಳ ನಾಡಿನ ಪವಿತ್ರ ಕ್ಷೇತ್ರಗಳಲ್ಲೊಂದು. ಶತಮಾನಗಳ ಇತಿಹಾಸವಿರುವ ಈ ಕ್ಷೇತ್ರದ ಆಗುಹೋಗುಗಳನ್ನು ಈವರೆಗೆ ಇಪ್ಪತ್ತು ಮಂದಿ ಹೆಗ್ಗಡೆಯವರು ನಿರ್ವಹಿಸಿದ್ದಾರೆ. ವೀರೇಂದ್ರ ಹೆಗ್ಗಡೆ ಇಪ್ಪತ್ತೊಂದನೆಯವರು. 1918ರಲ್ಲಿ ಕ್ಷೇತ್ರದ ಆಡಳಿತ ವಹಿಸಿಕೊಂಡ ಮಂಜಯ್ಯ ಹೆಗ್ಗಡೆ ಸಮಾಜಮುಖಿ ಕೆಲಸಗಳ ಮೂಲಕ ಧರ್ಮಕ್ಕೆ ಹೊಸ ವ್ಯಾಖ್ಯಾನ ನೀಡಿದರು. ನಮ್ಮ ಬದುಕನ್ನು ಚಂದ ಮಾಡುವ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಬಗ್ಗೆ ಆಸಕ್ತಿ ವಹಿಸಿ ಉಜಿರೆಯಲ್ಲಿ ಗುರುಕುಲ ಮಾದರಿಯ ಶಾಲೆ ತೆರೆದರು. ಸಾರ್ವಜನಿಕ ಉಚಿತ ಚಿಕಿತ್ಸಾಲಯ ಹಾಗೂ ಸಂಚಾರಿ ಆಸ್ಪತ್ರೆ ಆರಂಭಿಸಿದರು. ಯಾತ್ರಿಕರ ಅನುಕೂಲಕ್ಕಾಗಿ ಧರ್ಮಶಾಲೆ ಕಟ್ಟಿಸಿದರು. ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಸುವುದರ ಮೂಲಕ ಹೊಸ ಪರಿಕ್ರಮಕ್ಕೆ ನಾಂದಿ ಹಾಡಿದರು. ಹೀಗೆ ಧಾರ್ವಿುಕ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡಿ ಸಾರ್ವಜನಿಕ ಬದುಕು ಹಸನುಗೊಳ್ಳಲು ವೇದಿಕೆಯನ್ನಾಗಿ ರೂಪಾಂತರಿಸಿದ್ದು ಮಂಜಯ್ಯ ಹೆಗ್ಗಡೆಯವರ ದೂರದರ್ಶಿತ್ವದ ನೋಟ. ನಂತರದ ರತ್ನವರ್ಮ ಹೆಗ್ಗಡೆ ಇದನ್ನು ಸಮರ್ಥವಾಗಿ ಮುಂದುವರಿಸಿದರೂ ಮಂಜಯ್ಯ ಹೆಗ್ಗಡೆ ಕನಸಿಗೆ ಹೊಸ ಆಯಾಮ ಕಲ್ಪಿಸಿದವರು ವೀರೇಂದ್ರ ಹೆಗ್ಗಡೆಯವರು.

1968 ಅಕ್ಟೋಬರ್ 24 ರಂದು ಶ್ರೀಕ್ಷೇತ್ರದ ಅಧಿಕಾರ ನಿರ್ವಹಣೆ ವಹಿಸಿಕೊಂಡಾಗ ವೀರೇಂದ್ರ ಹೆಗ್ಗಡೆಯವರಿಗೆ ಇಪ್ಪತ್ತರ ಹರಯ (ಜನನ: 1948 ನವೆಂಬರ್ 25 ). ಚಿಕ್ಕಂದಿನಲ್ಲೇ ದೊಡ್ಡ ಜವಾಬ್ದಾರಿ. ತಮ್ಮ ಸ್ಥಾನದ ಅರಿವು ಅವರಿಗೆ ಸ್ಪಷ್ಟವಾಗಿತ್ತು. ಧರ್ವಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಹಿಂದಿನ ದಿವಸ ಸರೀಕ ಆಪ್ತರ ಜೊತೆ ಅವರು ಹೇಳಿದ ಮಾತು-‘ನಿಮ್ಮೊಟ್ಟಿಗೆ ಇಷ್ಟು ದಿವಸ ಏನೊಂದೂ ಜವಾಬ್ದಾರಿ ಇಲ್ಲದೆ ತಮಾಷೆಯಾಗಿ ಕಾಲ ಕಳೆಯುತ್ತಿದ್ದೆ. ನಾಳೆಯಿಂದ ಈ ಕ್ಷೇತ್ರದ ಧರ್ವಧಿಕಾರಿಯಾಗಿ ಗಂಭೀರತೆಯಿಂದ ಇರಬೇಕಾಗುತ್ತದೆ. ಅನಿರೀಕ್ಷಿತವಾಗಿ ಈ ಜವಾಬ್ದಾರಿ ಹೊರಬೇಕಾಗಿದೆ. ಎಷ್ಟರಮಟ್ಟಿಗೆ ನಿರ್ವಹಿಸುತ್ತೇನೋ ಆ ಸ್ವಾಮಿಗೇ ಗೊತ್ತು. ದೇವರ ಮೇಲೆ ಭಾರ ಹಾಕಿ ನನ್ನ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ’. ಈ ಅರಿವು, ಶ್ರದ್ಧೆಯೇ ವೀರೇಂದ್ರ ಹೆಗ್ಗಡೆಯವರ ವ್ಯಕ್ತಿತ್ವದ ಶಕ್ತಿ. ಅಂದಿನಿಂದ ಅರ್ಧ ಶತಮಾನದ ಈ ಅವಧಿಯಲ್ಲಿ ಶ್ರೀಕ್ಷೇತ್ರದ ಘನತೆಯನ್ನು ಅವರು ಎಚ್ಚರದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅವರ ತಾಯಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಒತ್ತಾಸೆ ಅವರಿಗೆ ಸದಾ ದಾರಿದೀಪವಾಗಿದೆ.

ಸುಮಾರು ಏಳುನೂರ ಐವತ್ತು ಪುಟಗಳ ‘ಧರ್ಮಯಾನ’ವನ್ನು ಸಮಗ್ರ ಗಮನಿಸಿದಾಗ ವೀರೇಂದ್ರ ಹೆಗ್ಗಡೆಯವರ ಯಶೋಗಾಥೆಯಲ್ಲಿ ಕೆಲವು ಸಂಗತಿಗಳು ನನ್ನ ಗಮನ ಸೆಳೆದವು: ಮೊದಲನೆಯದು ಪರಂಪರೆ ಹಾಗೂ ಆಧುನಿಕತೆಯ ಅರ್ಥಪೂರ್ಣ ಅನುಸಂಧಾನ. ಅಲ್ಲಮನ ‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎಂಬ ಅರಿವು ಹೆಗ್ಗಡೆಯವರ ಎಲ್ಲ ಚಟುವಟಿಕೆಗಳ ಹಿಂದಿರುವ ತಾತ್ವಿಕ ನಿಲವು. ಸಾವಿರಾರು ವರ್ಷದ ವೈವಿಧ್ಯಮಯ ಭಾರತದ ಪರಂಪರೆಗೆ; ಹಲವು ಬಗೆಯ ಜೀವನಕ್ರಮಗಳಿಗೆ, ಲೋಕದೃಷ್ಟಿಗಳಿಗೆ ತೆರೆದುಕೊಂಡಿದ್ದ ಚರಿತ್ರೆಗೆ ನಾವು ಹಕ್ಕುದಾರರು ಎಂಬ ಎಚ್ಚರದಲ್ಲಿಯೇ ನಾವು ವರ್ತಮಾನವನ್ನು ಅರ್ಥಮಾಡಿಕೊಳ್ಳಬೇಕು. ಹಿಂದಿನದೆಲ್ಲ ಶ್ರೇಷ್ಠವೆಂದಾಗಲೀ, ಅಥವಾ ಅದೆಲ್ಲ ಗೊಡ್ಡು, ಜಡ ಎಂಬ ನಿಲವಾಗಲೀ ಎರಡೂ ಅನರ್ಥಕಾರಿಯಾದಂಥವು. ‘ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ/ಕಂಡೀತು ಗೆರೆಮಿರಿವ ಚಿನ್ನದದಿರು/ಹೊರತೆಗೆದು ಸುಟ್ಟು ಸೋಸುವಪರಂಜಿ ವಿದ್ಯೆಗಳ/ಇನ್ನಾದರೂ ಕೊಂಚ ಕಲಿಯಬೇಕು/ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ/ವಿಗ್ರಹಕ್ಕೊಗ್ಗಿಸುವ ಅಸಲು ಕಸಬು’(ಗೋಪಾಲಕೃಷ್ಣ ಅಡಿಗ). ಈ ಅಸಲು ಕಸುಬಿನ ತಿಳುವಳಿಕೆ ಹೆಗ್ಗಡೆಯವರಿಗೆ ಚಂದ ಇದ್ದಂತಿದೆ. ಎರಡನೆಯದು ಯಾವುದೇ ಯೋಜನೆ ರೂಪಿಸಬೇಕಾದರೂ ಆ ಕ್ಷೇತ್ರದಲ್ಲಿ ತಜ್ಞರಾದವರ ಸಲಹೆ ಸಹಕಾರ ಪಡೆಯುವುದು. ಇದು ಕಾರ್ಯಯೋಜನೆಯಲ್ಲಿ ಅತ್ಯಂತ ಪರಿಣಾಮಕಾರಿ. ಅಧ್ಯಯನ, ಪರಿಶೀಲನದ ನಂತರ ನಿರ್ಧಾರ ತೆಗೆದುಕೊಳ್ಳುವುದು ವೈಜ್ಞಾನಿಕ ಕ್ರಮ. ಹೆಗ್ಗಡೆಯವರು ತಜ್ಞರ ಸಲಹೆ ಪಡೆದು, ವಿಚಾರ ವಿನಿಮಯದ ನಂತರ ಆ ಕೆಲಸಕ್ಕೆ ತೊಡಗುತ್ತಾರೆ. ಯೋಜನೆ ಆರಂಭವಾದ ನಂತರ ಅದರಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ. ಮೂರನೆಯದು ಕಾರ್ಯಯೋಜನೆಗೆ ತಕ್ಕ ಅರ್ಹ ವ್ಯಕ್ತಿಯನ್ನು ಗುರುತಿಸಿ ನಿಯೋಜಿಸುವುದು. ‘ಟೀಂ ವರ್ಕ್’ನಲ್ಲಿ ಹೆಗ್ಗಡೆಯವರಿಗೆ ಅಚಲ ನಂಬಿಕೆ. ಅಂತಹ ಬಳಗ ಅವರ ಬಳಿಯಿದೆ. ಈ ಹಿನ್ನೆಲೆಯಲ್ಲಿ ಅವರು ಸಾಮಾಜಿಕವಾಗಿ ಕೈಗೊಂಡ ಕಾರ್ಯ ಯೋಜನೆಗಳು ನಾಡಿಗೇ ಮಾದರಿಯಾಗಿವೆ. ಕೆಲವನ್ನು ನಿದರ್ಶನಕ್ಕಾಗಿ ಗಮನಿಸುವುದಾದರೆ- ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು; ಗ್ರಾಮವಿಕಾಸದ ಹೊಸ ಮಾದರಿಯ ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ’; ಗ್ರಾಮೀಣದ ನಿರುದ್ಯೋಗಿ ಯುವಕ-ಯುವತಿಯರಿಗೆ ತರಬೇತಿ ನೀಡಿ, ಅವರುಗಳೇ ಸ್ವ-ಉದ್ಯೋಗ ಮಾಡುವಂತೆ ಪ್ರೇರೇಪಿಸುವ ‘ರುಡ್​ಸೆಟ್ ಯೋಜನೆ’; ‘ಧಮೋತ್ಥಾನ ಟ್ರಸ್ಟ್’; ಮಹಿಳೆಯರ ಸ್ವಸಹಾಯ ಗುಂಪುಗಳು; ಸಾಮೂಹಿಕ ವಿವಾಹ; ನಮ್ಮೂರು-ನಮ್ಮ ಕೆರೆ; ಜನಜಾಗೃತಿ ವೇದಿಕೆ; ‘ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ’; ಶಾಂತಿವನ ಟ್ರಸ್ಟ್; ಮಂಜೂಷಾ ವಸ್ತುಸಂಗ್ರಹಾಲಯ; ‘ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಲಿ’; ಅಮೂಲ್ಯ ದಾಖಲೆಗಳ ‘ಪತ್ರಾಗಾರ’... ಇಂತಹ ಅನೇಕ ಯೋಜನೆಗಳು ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರೂಪುಗೊಂಡಿವೆ. ಒಂದು ಧಾರ್ವಿುಕ ಸಂಸ್ಥೆ ಹೀಗೆ ಹಲವು ಬಗೆಯ ಬಹುತ್ವ ಪರಿಕಲ್ಪನೆಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದು ನಾಡಿನಲ್ಲೇ ವಿರಳ. ಧರ್ಮ ಜನಪದ ಸಂಸ್ಕೃತಿಯೊಡನೆ ಸಹಜ ಬೆರೆಯಲು ಸಾಧ್ಯವಾದಾಗ ಇಂತಹ ಪ್ರಗತಿ ಸಾಧ್ಯ.

ಇಲ್ಲಿಯ ‘ನ್ಯಾಯ ನಿರ್ಣಯ’ವೂ ವಿಶಿಷ್ಟ. ‘ನ್ಯಾಯ ಅಂದರೆ ಒಬ್ಬರ ಅಪರಾಧಕ್ಕೆ ಶಿಕ್ಷೆ ಕೊಟ್ಟು ಇನ್ನೊಬ್ಬರಿಗೆ ನ್ಯಾಯ ಕೊಡುವುದಲ್ಲ. ಇಬ್ಬರಲ್ಲಿ ಒಬ್ಬರು ಮಾಡಿದ ತಪ್ಪನ್ನು ತೋರಿಸಿ ಅದನ್ನು ತಿದ್ದಿಕೊಳ್ಳುವಂತೆ ಮಾಡುವುದು ಹಾಗೂ ಇಬ್ಬರೂ ವೈರತ್ವವಿಲ್ಲದಂತೆ ಬಾಳುವುದು’. ಇದು ಗ್ರಾಮೀಣ ಭಾರತದ ನ್ಯಾಯ ಪರಿಕಲ್ಪನೆ. ಈ ಪದ್ಧತಿ ಇಂದು ಹಳ್ಳಿಗಳಲ್ಲಿಯೇ ಮಾಯವಾಗುತ್ತಿದೆ, ನ್ಯಾಯಾಲಯಗಳಿಗೆ ಹೋಗಿ, ‘ಗೆದ್ದವನು ಸೋತ, ಸೋತವನು ಸತ್ತ’ ಎಂಬಂತೆ ನ್ಯಾಯ ದೊರಕುವ ವೇಳೆಗೆ ಜೀವವೇ ಇಲ್ಲವಾಗುವ ಪರಿಸ್ಥಿತಿ ಇದೆ. ಇಂತಹ ಹೊತ್ತಿನಲ್ಲಿ ಧರ್ಮಸ್ಥಳದ ‘ನ್ಯಾಯ ನಿರ್ಣಯ’ ಜನಸಾಮಾನ್ಯರ ಪಾಲಿಗೆ ತಪ್ಪನ್ನು ತಿದ್ದುಕೊಂಡು ಬದುಕು ಕಟ್ಟಿಕೊಳ್ಳುವ ಮಾರ್ಗವಾಗಿದೆ.

ತಮ್ಮ ತಂದೆ ರತ್ನವರ್ಮ ಹೆಗ್ಗಡೆ ಆರಂಭಿಸಿದ್ದ ಬಾಹುಬಲಿ ಕೆತ್ತನೆಯ ಕಾರ್ಯವನ್ನು ಪೂರ್ಣಗೊಳಿಸಿ, ಅದನ್ನು ಪ್ರತಿಷ್ಠಾಪಿಸಿದ್ದು ಒಂದು ಐತಿಹಾಸಿಕ ಘಟನೆ. ‘ಧರ್ಮಯಾನ’ದಲ್ಲಿ ನನಗೆ ಇಷ್ಟವಾದ ಭಾಗ ‘ಮನೆ-ಮನ’. ಉಳಿದ ಭಾಗಗಳಲ್ಲಿ ಹೆಗ್ಗಡೆಯವರ ಸಾಮಾಜಿಕ, ಧಾರ್ವಿುಕ ವ್ಯಕ್ತಿತ್ವದ ನಮಗೆ ಪರಿಚಿತವೆನ್ನಬಹುದಾದ ಸಾಧನೆಯ ವಿವರಗಳಿವೆ. ಆದರೆ ಈ ಭಾಗದಲ್ಲಿ ನಮಗೆ ವಿಸ್ಮಯ ಮೂಡಿಸುವ ಆಪ್ತ ಸಂಗತಿಗಳಿವೆ. ಹೇಮಾವತಿಯವರು ಹೆಗ್ಗಡೆಯವರಲ್ಲಿ ಕಂಡದ್ದು ಜೀವನೋತ್ಸಾಹ; ಕನಸು ಕಾಣುವ ಮನೋಭಾವ; ಎಲ್ಲವನ್ನೂ ತಿಳಿಯುವ ಹಂಬಲ; ಮಕ್ಕಳಂತಹ ಕುತೂಹಲ. ತಮ್ಮಂದಿರಿಗೆ ಅಣ್ಣನ ಆದರ್ಶ, ಕಾರ್ಯತತ್ಪರತೆ, ಸಮಯಪಾಲನೆ ಹಾಗೂ ಎಲ್ಲವನ್ನೂ ಸಮಚಿತ್ತದಿಂದ ಗ್ರಹಿಸುವ ಧೀಮಂತಿಕೆಯ ಬಗ್ಗೆ ವಿಸ್ಮಯ; ಮಗಳು ಶ್ರದ್ಧಾ ಹೇಳುವಂತೆ, ‘ಬಡವರಿಗೆ, ಹಸಿದವರಿಗೆ ಉದಾರವಾಗಿ ದಾನಮಾಡುವ ಅಯ್ಯ ಮನೆಯವರ ವಿಷಯದಲ್ಲಿ ಮಾತ್ರ ಬಹಳ ಕಂಜೂಸು’; ಸಣ್ಣ ವಿಷಯಗಳನ್ನೂ ಗಂಭೀರವಾಗಿ ತೆಗೆದುಕೊಳ್ಳುವುದೇ ಅವರ ಯಶಸ್ಸಿನ ಗುಟ್ಟು; ಮೊಮ್ಮಗಳು ಮಾನ್ಯಳಿಗೆ ಅವಳನ್ನು ಎದೆಯ ಪದಕವಾಗಿಸಿಕೊಂಡು ಕತೆ ಹೇಳುತ್ತ, ಕಷ್ಟದ ಹಾದಿಯೇ ಒಳಿತೆಂದು ತಿಳಿಸಿದ ಮಾರ್ಗದರ್ಶಿ; ಇಂತಹ ಅನೇಕ ಆತ್ಮೀಯ ವಿವರಗಳು ಇಲ್ಲಿವೆ. ಹೆಗ್ಗಡೆಯವರದು ಸೃಜನಶೀಲ ಮನೋಭಾವ; ಫೋಟೋಗ್ರಫಿ ಅವರಿಗೆ ಪ್ರಿಯವಾದ ಹವ್ಯಾಸ; ಅವರು ಪ್ರವಾಸಪ್ರಿಯ; ಮಕ್ಕಳೊಡನೆ ಆಟವಾಡುವುದು ಅವರಿಗೆ ಪ್ರಿಯ; ಅದರಲ್ಲೂ ಬೆಟ್ ಕಟ್ಟಿ ಆಡುವುದರಲ್ಲಿ ಆಸಕ್ತಿ. ಒಮ್ಮೆ ಹಾಗೆ ಬೆಟ್ ಕಟ್ಟಿ ಸೋತು ಆ ಹಣವನ್ನು ಹೆಗ್ಗಡೆಯವರು ಇಂದಿಗೂ ಕೊಟ್ಟಿಲ್ಲವಂತೆ!

‘ಧರ್ಮಯಾನ’ ವಿವೇಕ ರೈ ಅವರ ಪ್ರಧಾನ ಸಂಪಾದಕತ್ವದಲ್ಲಿ ವಿವಿಧ ಕ್ಷೇತ್ರಗಳ ಹೆಸರಾಂತ ವ್ಯಕ್ತಿಗಳ ಲೇಖನಗಳೊಂದಿಗೆ ವಿವರವಾದ ಮಾಹಿತಿಗಳನ್ನೊಳಗೊಂಡು ಪ್ರಮುಖವಾದ ಒಂದು ದಾಖಲೆಯಾಗಿ ಚಂದ ರೂಪುಗೊಂಡಿದೆ.

(ಲೇಖಕರು ಖ್ಯಾತ ವಿಮರ್ಶಕರು)