ಅಂಕಣ

ರಾಮನಿರುವಲ್ಲಿ ರಾವಣನಿರಲು ಸಾಧ್ಯವಿಲ್ಲ; ರಾಮನಿರುವಲ್ಲಿ ಕಾಮವಿರಲು ಸಾಧ್ಯವಿಲ್ಲ

ನಮ್ಮ ಹೃದಯದಲ್ಲಿ ಶ್ರೀರಾಮನಿಗೆ ಅವತಾರವನ್ನು ತಾಳಲು ನಾವು ಅವಕಾಶ ನೀಡಬೇಕು. ಆಗ ನಮ್ಮಲ್ಲಿರುವ ರಾವಣನು ಅಂತ್ಯವಾಗುತ್ತಾನೆ. ರಾಮನಿರುವಲ್ಲಿ ರಾವಣನಿರಲು ಸಾಧ್ಯವಿಲ್ಲ. ರಾಮನಿರುವಲ್ಲಿ ಕಾಮವಿರಲು ಸಾಧ್ಯವಿಲ್ಲ. ಇತರರು ನಮ್ಮನ್ನು ಎಷ್ಟು ಬದಲಾಯಿಸಲು ಪ್ರಯತ್ನಿಸಿದರೂ ನಾವುಗಳು ಬದಲಾಗುವುದಿಲ್ಲ.

ಧರ್ಮ ಎಂಬ ಶಬ್ದಕ್ಕೆ ಹಲವಾರು ಅರ್ಥಗಳಿವೆ. ಈ ಶಬ್ದವನ್ನು ನಾವು ಇಂದು ಜಾತಿ ಸೂಚಕವಾಗಿಯೇ ಹೆಚ್ಚಾಗಿ ಬಳಸುತ್ತೇವೆ. ಮಹಾಭಾರತದಲ್ಲಿ ಬರುವ ಶ್ರೀವಿಷ್ಣುಸಹಸ್ರನಾಮದಲ್ಲಿ ವಿಷ್ಣುವಿನ ಒಂದು ಹೆಸರು ಧರ್ಮ ಎಂಬುದಾಗಿದೆ. ಎಲ್ಲೆಡೆ ವ್ಯಾಪಿಸಿರುವುದರಿಂದ ಆತನನ್ನು ವಿಷ್ಣು ಎಂದು ಕರೆಯುತ್ತೇವೆ. ದೇವರು ಪ್ರತಿಯೊಬ್ಬರ ಹೃದಯದಲ್ಲಿ ವಾಸಿಸುತ್ತಿದ್ದಾನೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಬೈಬಲ್ ಸಹ ‘ದೇವನು ನಮ್ಮ ಹೃದಯ ಸಾಮ್ರಾಜ್ಯದಲ್ಲಿ ಇದ್ದಾನೆ’ ಎಂದು ಬೋಧಿಸುತ್ತದೆ. ಹೀಗಾಗಿ ಧರ್ಮವೆಂದರೆ ನಮ್ಮ ಚೈತನ್ಯವೆಂದಾಗುತ್ತದೆ. ನಾವುಗಳು ‘ನಾನು, ನಾನು’ ಎಂದು ಸಂಬೋಧಿಸುವುದೇ ‘ಆತ್ಮಾ’ ಎಂದು ಸಂಸ್ಕೃತದಲ್ಲಿ ಕರೆಯಲಾಗಿದೆ. ಆತ್ಮನನ್ನು ಅರಿತವನು ಸರ್ವವನ್ನು ಅರಿಯುತ್ತಾನೆ ಎಂಬುದು ಉಪನಿಷತ್ತಿನ ಉಪದೇಶವಾಗಿದೆ.

ರಾಮಾಯಣದಲ್ಲಿ ಲಂಕೆಯಲ್ಲಿ ನಡೆದ ಯುದ್ಧ ಪ್ರತಿಯೊಬ್ಬರಿಗೂ ತಿಳಿದಿರುವಂಥದ್ದೇ ಆಗಿದೆ. ಕುಂಭಕರ್ಣನನ್ನು ರಾವಣನು ಯುದ್ಧಕ್ಕಾಗಿ ಎಬ್ಬಿಸಿ, ತನ್ನ ಬಳಿ ಕರೆಸಿಕೊಂಡ. ರಾವಣನು, ‘ಲಂಕೆಯ ಮೇಲೆ ಶ್ರೀರಾಮನು ದಾಳಿ ಮಾಡಿರುವನು. ಈಗ ನೀನು ಶ್ರೀರಾಮನ ಮೇಲೆ ಯುದ್ಧಕ್ಕೆ ಹೋಗಬೇಕು’ ಎಂದಾಗ, ಕುಂಭಕರ್ಣನು ‘ಶ್ರೀರಾಮನು ಏಕೆ ನಮ್ಮ ಮೇಲೆ ಯುದ್ಧಕ್ಕೆ ಬಂದಿರುವನು?’ ಎಂದು ಪ್ರಶ್ನಿಸಿದ. ಆಗ ರಾವಣನು ಸೀತೆಯನ್ನು ಅಪಹರಿಸಿದ ವೃತ್ತಾಂತವನ್ನು ಹೇಳಿದ. ಕುಂಭಕರ್ಣನು ‘ನಿನಗೆ ಸೀತೆಯು ಒಲಿದಳೆ?’ ಎಂದು ಪ್ರಶ್ನಿಸಿದಾಗ ರಾವಣನು, ‘ಇಲ್ಲ’ ಎಂದು ಉತ್ತರಿಸಲು, ಕುಂಭಕರ್ಣನು, ‘ನೀನು ಪ್ರಯತ್ನವನ್ನು ಪಡಲಿಲ್ಲವೆ?’ ಎಂದಾಗ ರಾವಣನು, ‘ನಾನು ಸಾಕಷ್ಟು ರೀತಿಯಲ್ಲಿ ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ’ ಎಂದ. ಆಗ ಕುಂಭಕರ್ಣನು ‘ನೀನು ರಾಮನ ಶರೀರವನ್ನು ತಾಳಿ ಆಕೆಯ ಬಳಿ ಸಾಗಿದೆಯಾ?’ ಎನ್ನಲು ರಾವಣನು, ‘ಅಯ್ಯಾ, ನಾನು ರಾಮನನ್ನು ನನ್ನಲ್ಲಿ ಆಹ್ವಾನಿಸಿಕೊಂಡರೆ, ನನ್ನಲ್ಲಿರುವ ರಾವಣನು ಇಲ್ಲವಾಗುತ್ತಾನೆ. ರಾವಣನಿಗೆ ಸೀತೆ ಬೇಕು, ರಾಮನಿಗಲ್ಲ. ಹೀಗಾಗಿ ನಾನು ರಾಮನಂತೆ ದೇಹವನ್ನು ಹೊಂದಿದರೆ ಸೀತೆಯ ಬಗ್ಗೆ ಕಾಮನೆಯೆ ಇಲ್ಲವಾಗುತ್ತದೆ’ ಎಂದ. ಇದು ನಮ್ಮ ಹೃದಯದಲ್ಲಿ ರಾಮನ ಅವತಾರಕ್ಕೆ ಸರಿಯಾದ ಉದಾಹರಣೆಯಾಗುತ್ತದೆ.

ಕುಂಭಕರ್ಣನು ಸತ್ತ ನಂತರ ರಾವಣನು ಇಂದ್ರಜಿತ್ತನನ್ನು ಯುದ್ಧಕ್ಕೆ ಕಳುಹಿಸಿದ. ಲಕ್ಷ್ಮಣನು ರಾವಣನ ಮಗನಾದ ಇಂದ್ರಜಿತ್ತನನ್ನು ಕೊಂದನು. ಇಂದ್ರಜಿತ್ತಿನ ಬಲಗೈ ಆತನ ಪತ್ನಿಯಾದ ಸುಲೋಚನೆಯ ಬಳಿ ಬಿದ್ದಿತು. ಆ ಇಂದ್ರಜಿತ್ತಿನ ಕೈ ಅಲ್ಲಿಯವರೆಗೆ ನಡೆದ ವೃತ್ತಾಂತವನ್ನು ನೆಲದ ಮೇಲೆ ಬರೆದು, ತನ್ನ ಮೃತ್ಯುವು ಲಕ್ಷ್ಮಣನಿಂದ ಆಯಿತು ಎಂದು ಬರೆದು ಸುಮ್ಮನಾಯಿತು. ಆಗ ಸುಲೋಚನೆ ತಾನು ತನ್ನ ಪತಿಯೊಡನೆ ಚಿತೆಯನ್ನು ಏರಲು ನಿರ್ಧರಿಸಿದಳು. ತನ್ನ ಮಾವನಾದ ರಾವಣನ ಬಳಿ ಸಾಗಿ, ‘ನನ್ನ ಪತಿಯ ಮರಣವಾಗಿದೆ. ಆತನ ಶರೀರ ಈಗ ರಾಮನ ಬಳಿ ಇದೆ. ತಾವು ಅದನ್ನು ತರಿಸಿಕೊಟ್ಟರೆ, ನಾನು ಪತಿಯೊಡನೆ ಸಹಗಮನ ಮಾಡುವೆ’ ಎಂದಳು. ಆಗ ರಾವಣನು, ‘ನೀನೇ ಹೋಗಿ ನಿನ್ನ ಪತಿಯ ಶರೀರವನ್ನು ರಾಮನಿಂದ ಪಡೆದುಕೋ’ ಎಂದ. ರಾವಣನ ಸಭೆಯಲ್ಲಿದ್ದ ಎಲ್ಲ ಮಂತ್ರಿಗಳೂ ‘ಹೇ ಪ್ರಭು, ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸೊಸೆಯನ್ನು ರಾಮನ ಬಿಡಾರಕ್ಕೆ ಕಳುಹಿಸುತ್ತಿದ್ದೀರಲ್ಲ! ಆತನು ನಿಮ್ಮ ಶತ್ರು. ನೀವು ಆತನ ಪತ್ನಿಯನ್ನು ನಿಮ್ಮ ಬಳಿ ಇಟ್ಟುಕೊಂಡು, ನಿಮ್ಮ ಸೊಸೆಯನ್ನು ಆತನ ಬಳಿ ಮಗನ ಶವಕ್ಕಾಗಿ ಕಳುಹಿಸುವುದು ಎಷ್ಟು ಸೂಕ್ತ?’ ಎಂದರು. ಆಗ ರಾವಣನು-‘ನಾನು ಶ್ರೀರಾಮನನ್ನು ನಂಬುತ್ತೇನೆ. ಇತರರ ಮನೆಯ ಸೊಸೆಯನ್ನು ಬಂಧಿಯಾಗಿ ಇಡಲು ಆತನು ರಾವಣನಲ್ಲ. ಆತ ಶ್ರೀರಾಮಚಂದ್ರ. ನೀವು ಬಹುಶಃ ನಿಮ್ಮ ಆಲೋಚನಾ ಸಾಮರ್ಥ್ಯವನ್ನು ಕಳೆದುಕೊಂಡಿರಬೇಕು. ರಾವಣನು ಇತರರ ಪತ್ನಿಯನ್ನು ಅಪಹರಿಸುವ ಬುದ್ಧಿಯುಳ್ಳವನು. ಈ ಸ್ವಭಾವ ರಾಮನದ್ದಲ್ಲ’ ಎಂದ.

ನಾವುಗಳು ನಮ್ಮ ಹೃದಯದಲ್ಲಿ ರಾಮ ರಾವಣರಿಗೆ ಆಶ್ರಯವನ್ನು ಕೊಟ್ಟಿದ್ದೇವೆ. ಪ್ರತಿಯೊಬ್ಬರ ಹೃದಯದಲ್ಲಿ ರಾಮ ರಾವಣರು ಇದ್ದಾರೆ. ಇದೇ ವಿಷಯವನ್ನು ಡಿ.ವಿ.ಜಿ. ಯವರು ಮಂಕುತಿಮ್ಮನ ಕಗ್ಗದಲ್ಲಿ ಹೀಗೆಂದಿದ್ದಾರೆ.

ದೇವ ದಾನವರ ರಣರಂಗ ಮಾನವಹೃದಯ

ಭಾವರಾಗಹಠಂಗಳವರ ಸೇನೆಗಳು |

ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು

ಜೀವಾಮೃತವನವರು- ಮಂಕುತಿಮ್ಮ ||192||

ನಮ್ಮ ಹೃದಯದಲ್ಲಿ ಶ್ರೀರಾಮನಿಗೆ ಅವತಾರವನ್ನು ತಾಳಲು ನಾವು ಅವಕಾಶ ನೀಡಬೇಕು. ಆಗ ನಮ್ಮಲ್ಲಿರುವ ರಾವಣನು ಅಂತ್ಯವಾಗುತ್ತಾನೆ. ರಾಮನಿರುವಲ್ಲಿ ರಾವಣನಿರಲು ಸಾಧ್ಯವಿಲ್ಲ. ರಾಮನಿರುವಲ್ಲಿ ಕಾಮವಿರಲು ಸಾಧ್ಯವಿಲ್ಲ. ಇತರರು ನಮ್ಮನ್ನು ಎಷ್ಟು ಬದಲಾಯಿಸಲು ಪ್ರಯತ್ನಿಸಿದರೂ ನಾವುಗಳು ಬದಲಾಗುವುದಿಲ್ಲ. ಹೀಗಾಗಿ ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ರಾವಣನು ನಮ್ಮ ಸಹಜ ಸ್ವರೂಪವಾಗಿದ್ದಾನೆ. ಆತನನ್ನು ಅಳಿಸಿ ಅದೇ ಜಾಗದಲ್ಲಿ ಶ್ರೀರಾಮನನ್ನು ಸ್ಥಾಪಿಸಬೇಕಾದರೆ ನಾವು ಸಾಧನೆ ಮಾಡಬೇಕು. ಹಿರಿಯರ ಉಪದೇಶವನ್ನು ಕೇಳುವುದು ಲಾಭಕರ. ಆ ಉಪದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು ನಾವು. ನಮ್ಮ ಮನಸ್ಸು ಅಷ್ಟು ಬೇಗ ಯಾವುದನ್ನೂ ಒಪ್ಪುವುದಿಲ್ಲ. ನಿರಂತರವಾದ ಚಿಂತನೆ ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುತ್ತದೆ.

ಭಗವದ್ಗೀತೆಯ ನಾಲ್ಕನೆಯ ಅಧ್ಯಾಯದಲ್ಲಿ ಅವತಾರದ ವಿಚಾರವನ್ನು ಹೇಳಲಾಗಿದೆ. ನಿಜವಾಗಿ ಅವತಾರವೆಂದರೇನು? ಎಂಬುದನ್ನು ನಾವು ಚಿಂತಿಸಬೇಕಾಗಿದೆ. ಹಿಂದೆ ಹೇಳಿದಂತೆ ಧರ್ಮವೆಂಬುದು ಶುದ್ಧ ಚೈತನ್ಯನ ಹೆಸರಾಗಿದೆ. ಹಿಂದೂಗಳು ಕೋಟ್ಯಂತರ ನಾಮಗಳಿಂದ ಆ ಚೈತನ್ಯವನ್ನು ಕಾಣುತ್ತಾರೆ. ಇಸ್ಲಾಂ ಧರ್ಮದವರು ಅದೇ ಚೈತನ್ಯವನ್ನು ಅಲ್ಲಾ ಎಂದರೆ, ಕ್ರಿಶ್ಚಿಯನ್ನರು ಯೇಸು ಎನ್ನುತ್ತಾರೆ. ಪ್ರತಿಯೊಂದು ಧರ್ಮದವರು ಆ ಚೈತನ್ಯವನ್ನು ಯಾವುದೋ ಒಂದು ಹೆಸರಿನಿಂದ ಕರೆಯುತ್ತಾರೆ.

ಒಮ್ಮೆ ಒಬ್ಬ ಸಾಧಕ ಸ್ವಾಮೀ ಚಿನ್ಮಯಾನಂದರನ್ನು ‘ಹಿಂದೂ ಧರ್ಮದಲ್ಲಿ ಮೂವತ್ತಮೂರು ಕೋಟಿ ದೇವತೆಗಳು ಇದ್ದಾರೆ ಎಂದು ನಂಬುತ್ತಾರಲ್ಲ, ಅದು ನಿಜವಾಗಿಯೂ ಸತ್ಯವೆ?’ ಎಂದು ಪ್ರಶ್ನಿಸಲು ಸ್ವಾಮೀಜಿಯವರು, ‘ಬಹುಶಃ ಈ ಪ್ರಶ್ನೆಯನ್ನು ಕೇಳಿದ ಸಂದರ್ಭದಲ್ಲಿ ಹಿಂದೂಗಳ ಜನಸಂಖ್ಯೆ ಮೂವತ್ತಮೂರು ಕೋಟಿಯಲ್ಲಿ ಇದ್ದಿರಬಹುದು’ ಎಂದರು. ನಾವುಗಳೆಲ್ಲ ಚೈತನ್ಯ ಸ್ವರೂಪದವರಾಗಿದ್ದೇವೆ. ಪರಮಾತ್ಮ ನಮ್ಮೆಲ್ಲರ ಹೃದಯವಾಸಿಯಾಗಿದ್ದಾನೆ. ಈ ನೈಜ ತಿಳಿವಳಿಕೆಯನ್ನು ಧರ್ಮ ಎನ್ನಬಹುದು. ಈ ಸತ್ಯವನ್ನು ತಿಳಿಯದವನು ಅಧರ್ವಿುಯಾಗುತ್ತಾನೆ. ಯಾವಾಗ ಧರ್ಮವು ಎಂದರೆ ವ್ಯಕ್ತಿಯು ತಾನು ಚೈತನ್ಯ ಸ್ವರೂಪ ಎಂಬುದನ್ನು ಮರೆಯುತ್ತಾನೋ, ಆಗ ಆತನು ಅಧರ್ವಿುಯಾಗುತ್ತಾನೆ. ಅದನ್ನೇ ಧರ್ಮದ ಗ್ಲಾನಿ ಅಂದರೆ ಹಾನಿ ಎನ್ನಬಹುದು. ವ್ಯಕ್ತಿ ಅಧರ್ವಿುಯಾಗುವುದು ಎಂದರೆ ಕಣ್ಣಿಗೆ ಕಾಣುವ ಶರೀರ, ನಾಮ ಹಾಗೂ ರೂಪಗಳನ್ನು ನಿಜವೆಂದು ನಂಬುವುದಾಗಿದೆ. ಯಾವಾಗ ನಮ್ಮ ಹೃದಯದಲ್ಲಿ ಜ್ಞಾನದ ಅವತಾರವು ಹುಟ್ಟುವುದೋ, ಅಂದರೆ ನಾನು ಅಧರ್ವಿುಯಲ್ಲ, ನಾನು ವಾಸ್ತವದಲ್ಲಿ ಧರ್ಮರೂಪವಾದ ಚೈತನ್ಯವೆಂದು ಅರಿಯಲ್ಪಡುವುದೋ, ಆಗ ಆತನಿಗೆ ಎಲ್ಲೆಲ್ಲೂ ಚೈತನ್ಯ ನರ್ತನೆಯೇ ಕಾಣುತ್ತದೆ. ವೇದಾಂತದಲ್ಲಿ ಈ ಚೈತನ್ಯವನ್ನು ‘ಬ್ರಹ್ಮ’ ಎಂದು ಕರೆದಿದ್ದಾರೆ. ಈ ವಾಸ್ತವ ಅರಿವಾದಾಗ ದುಷ್ಟರು ಹೊರಗಿಲ್ಲ ಎಂಬುದು ಅರಿವಾಗುತ್ತದೆ. ಆ ಕ್ಷಣದಲ್ಲಿ ಆತನಲ್ಲಿದ್ದ ರಾಕ್ಷಸನು ನಾಶವಾಗಿ, ಒಳಗೆ ಅವಿತಿದ್ದ ಸಾಧುವು ಪ್ರಕಟವಾಗುತ್ತಾನೆ. ಇದು ನಿಜವಾಗಿಯೂ ಅವತಾರದ ರಹಸ್ಯವೆನ್ನಬಹುದು.

ಒಬ್ಬ ಸುಭಾಷಿತಕಾರ, ‘ಭಗವಂತನು ಸಾಧಕರನ್ನು ಕೈಯಲ್ಲಿ ಕೋಲು ಹಿಡಿದು ಪ್ರತಿಕ್ಷಣವೂ ರಕ್ಷಿಸುವುದಿಲ್ಲ. ಒಂದು ವೇಳೆ ಆತನನ್ನು ರಕ್ಷಿಸಬೇಕೆಂದು ಬಯಸಿದರೆ, ಅಂತಹ ಸಾಧಕನಿಗೆ ಸುಬುದ್ಧಿಯನ್ನು ನೀಡುತ್ತಾನೆ’ ಎಂದಿದ್ದಾನೆ. ನಾವು ಈ ಪ್ರಪಂಚದಲ್ಲಿ ಜೀವಿಸುವಾಗ, ಪ್ರತಿಯೊಬ್ಬನೂ ನಮ್ಮ ಆತ್ಮಸ್ವರೂಪವೆ ಎಂದು ಅರಿತರೆ ಈ ಭೂಮಿಯೆ ಸ್ವರ್ಗವಾಗುತ್ತದೆ. ಒಬ್ಬ ಜ್ಞಾನಿ ಈ ಜಗತ್ತಿನಲ್ಲಿ ಹೇಗೆ ಜೀವಿಸುತ್ತಾನೆ ಎಂಬುದನ್ನು ಡಿ.ವಿ.ಜಿ. ಹೀಗೆ ವಿವರಿಸಿದ್ದಾರೆ.

ಬ್ರಹ್ಮಾನುಸಂಧಾನ ಲೋಕಸಂಧಾನದಲಿ

ಬ್ರಹ್ಮದರ್ಶನವೆಲ್ಲ ಜೀವರೂಪದಲಿ |

ಬ್ರಹ್ಮಾನುಭವ ದೇಹ ಕರಣಾನುಭವಗಳಲಿ

ಮರ್ಮವಿದು ಮುಕ್ತಿಗೆಲೊ- ಮಂಕುತಿಮ್ಮ || 753 ||

ನಾವು ಆ ಚೈತನ್ಯವನ್ನು ಪ್ರತಿಯೊಬ್ಬರಲ್ಲಿ ಕಾಣಬೇಕು. ನಮ್ಮ ದೇಹ ಇಂದ್ರಿಯಗಳ ಮುಖಾಂತರ ಅನುಭವಿಸುವ ಎಲ್ಲ ಅನುಭವಗಳನ್ನು ಆ ಚೈತನ್ಯದನುಭವವೆಂದು ಅರಿತರೆ ಅದೇ ಮುಕ್ತಿ. ನಮ್ಮಲ್ಲಿ ನಾವು ಬದಲಾಗುವ ಪ್ರಯತ್ನವನ್ನು ಮಾಡಬೇಕು. ಯಾವ ಪ್ರಧಾನಮಂತ್ರಿಯಾಗಲಿ, ಮುಖ್ಯಮಂತ್ರಿಯಾಗಲಿ ಅಥವಾ ಪೊಲೀಸಾಗಲಿ ನಮ್ಮನ್ನು ತಿದ್ದಲು ಪ್ರಯತ್ನಿಸಿದರೂ ನಾವು ಬದಲಾಗಲು ಸಿದ್ಧವಾಗಿಲ್ಲದ ಪಕ್ಷದಲ್ಲಿ ಅವರ ಪ್ರಯತ್ನಗಳು ವ್ಯರ್ಥವಾಗುತ್ತವೆ. ನಾವು ನಮ್ಮನ್ನು ಸರಿಪಡಿಸಿಕೊಂಡರೆ ಜಗತ್ತಿನಲ್ಲಿ ಉದ್ಭವಿಪ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ರಾಮನನ್ನು ಹೃದಯದಲ್ಲಿ ಅವತರಿಸಿಕೊಂಡು ನಮ್ಮಲ್ಲಿರುವ ರಾವಣನನ್ನು ಕೊಲ್ಲೋಣ! ಜಗತ್ತಿಗೆ ಹಿತವನ್ನು ಬಯಸೋಣ!!

(ಲೇಖಕರು ಮಂಡ್ಯ ಚಿನ್ಮಯ ಮಿಷನ್ ಅಧ್ಯಕ್ಷರು)