ಅಂಕಣ

ಪ್ರೇರಣೆ| ಹರಕೆಯಿಂದಷ್ಟೇ ಇಷ್ಟಾರ್ಥ ಸಿದ್ಧಿಯೇ?

‘ಮಗಾ, ಈ ಬಾರಿ ನೀನು ಪರೀಕ್ಷೆಯಲ್ಲಿ ಪಾಸಾದರೆ, ನಿನ್ನಿಂದ ಉರುಳು ಸೇವೆ ಮಾಡಿಸುತ್ತೇನೆಂದು ಊರ ದೇವರಿಗೆ ಹರಕೆ ಹೊತ್ತಿದ್ದೇನೆ. ಹರಕೆ ಹೊತ್ತವರನ್ನು ಕೈ ಬಿಡದ ಈ ನಮ್ಮ ದೇವರ ಕೃಪೆಯಿಂದ ಖಂಡಿತಾ ನೀನು ಪಾಸಾಗುವೆ. ಪಾಸಾದ ಮೇಲೆ ಉರುಳು ಸೇವೆ ಮಾಡುವಿ ತಾನೆ?’ ಎಂಬುದಾಗಿ ಮಗನನ್ನು ಅವನ ತಾಯಿ ಒತ್ತಾಯಿಸುತ್ತಿದ್ದಳು. ಅಮ್ಮನ ಒತ್ತಾಯಕ್ಕೆ ಕಟ್ಟು ಬಿದ್ದು ಹಾಗೂ ಕಷ್ಟಪಡದೆ ಪಾಸಾಗಲು ಇದು ಸಿಕ್ಕಿರುವ ಸುಲಭೋಪಾಯವೆಂದು ತಿಳಿದು ಮಗ ಒಪ್ಪಿದ. ಅಮ್ಮನ ಹರಕೆಯನ್ನು ನಂಬಿ ಆತ ಪರೀಕ್ಷೆಗೆ ಅಷ್ಟಾಗಿ ಓದಲಿಲ್ಲ. ರಿಸಲ್ಟ್ ಬಂದಾಗ ಫೇಲ್ ಆದ. ಹೇಳಿಕೊಂಡ ಹರಕೆಯ ಒಪ್ಪಂದದಂತೆ ತನ್ನನ್ನು ಪಾಸು ಮಾಡದ ಆ ದೇವರಿಗೆ ಉರುಳು ಸೇವೆಯನ್ನೂ ಈತ ಮಾಡಲಿಲ್ಲ; ಪಾಸಾಗಲು ಮರಳಿ ಪ್ರಯತ್ನವನ್ನೂ ಮಾಡಲಿಲ್ಲ. ಅಮ್ಮನ ಹರಕೆಯೂ ಫಲಕೊಡದೆ ವ್ಯರ್ಥವಾಯಿತು; ಇವನ ನಂಬಿಕೆಯೂ ಹುಸಿಯಾಯಿತು. ಇದರ ಬದಲಿಗೆ ಚೆನ್ನಾಗಿ ಓದು; ಪ್ರಾಮಾಣಿಕವಾಗಿ ಪ್ರಯತ್ನ ಪಡು; ಜಯ ನಿನ್ನದೇ ಎಂಬುದಾಗಿ, ಅಮ್ಮ ಹುರಿದುಂಬಿಸುತ್ತಿದ್ದರೆ, ಆತ ಖಂಡಿತವಾಗಿ ಪಾಸಾಗುತ್ತಿದ್ದ. ಬರೇ ಹರಕೆಗಳಿಂದ ನಮ್ಮ ಇಷ್ಟಾರ್ಥಗಳು ಈಡೇರುವಂತಿದ್ದರೆ, ಯಾರೂ ಏನೂ ಪ್ರಯತ್ನಗಳನ್ನೇ ಮಾಡುತ್ತಿರಲಿಲ್ಲ; ಪರಿಶ್ರಮ ಪಡುತ್ತಿರಲಿಲ್ಲ.

ಇಷ್ಟಕ್ಕೂ ಹರಕೆ ಎಂದರೆ ‘ಹೇ ದೇವ ನೀನು ನನಗೆ ಬೇಕಾದುದನ್ನು ನೆರವೇರಿಸಿಕೊಟ್ಟರೆ, ಪ್ರತಿಯಾಗಿ ನಾನು ನಿನಗೆ ಒಂದಷ್ಟನ್ನು ಕೊಡುತ್ತೇನೆ/ಮಾಡುತ್ತೇನೆ’ ಎಂಬ ದೇವರ ಒಪ್ಪಿಗೆ ಇಲ್ಲದ, ಏಕ ಮುಖಿಯಾಗಿ ನಾವು ನಾವೇ ಮಾಡಿಕೊಂಡ ಒಪ್ಪಂದ ಹಾಗೂ ನಮ್ಮ ಬೇಡಿಕೆಗೆ ಶಕ್ತಿ ಬರಲಿ ಎಂದು ನಾವು ನಾವೇ ಮಾಡಿಕೊಂಡ ಒಂದು ಅಛ್ಜ್ಠಠಿಞಛ್ಞಿಠಿ ಚ್ಞಛ ಅ್ಟ್ಞಛಿಞಛ್ಞಿಠಿ. ಈ ಸಲ ನಾನು ಪಾಸಾದರೆ ಗಣೇಶನಿಗೊಂದು ಕಾಯಿ ಒಡೆಸುತ್ತೇನೆ ಇಲ್ಲವೇ, ತಿರುಪತಿ ತಿಮ್ಮಪ್ಪನಿಗೆ ತಲೆಕೂದಲು ಕೊಡುತ್ತೇನೆ ಎಂಬ ವಿದ್ಯಾರ್ಥಿಗಳ ಹರಕೆಗಳಾಗಲೀ, ಈ ಸಲ ನನ್ನನ್ನು ಎಲೆಕ್ಷನ್​ನಲ್ಲಿ ಗೆಲ್ಲಿಸಿದರೆ, ನಿನ್ನ ತಲೆಗೊಂದು ಬೆಳ್ಳಿ ಕಿರೀಟ ಎಂಬ ರಾಜಕಾರಣಿಗಳ ಬೇಡಿಕೆಗಳಾಗಲೀ, ನನ್ನ ಕಷ್ಟ ಪರಿಹಾರ ಮಾಡಿಕೊಟ್ಟರೆ, ನಿನಗೆ ಇಂತಿಷ್ಟು ಕಾಣಿಕೆ ಕೊಡುತ್ತೇನೆ, ನಿನಗೊಂದು ಒಳ್ಳೆಯ ಸೀರೆ ಕೊಡಿಸುತ್ತೇನೆ; ಒಡವೆ ಮಾಡಿಸಿಕೊಡುತ್ತೇನೆ, ನಿನ್ನ ಗುಡಿಯಲ್ಲಿ ತುಪ್ಪದ ದೀಪ ಹಚ್ಚುತ್ತೇನೆ, ಕುರಿ ಕೋಳಿ ಬಲಿ ಕೊಡುತ್ತೇನೆ ಎಂಬೆಲ್ಲ ಹರಕೆಗಳು, ಷರತ್ತು ಬದ್ಧವಾದ ಬೇಡಿಕೆಗಳಿಗೆ ಕೆಲವು ಉದಾಹರಣೆಗಳು. ಹೀಗೆ ಒಂದೊಂದು ವಿಚಾರಗಳಿಗೆ, ಒಂದೊಂದು ರೀತಿಯ ಹರಕೆ ಹೊರುವವರು ಇದ್ದಾರೆ. ಹರಕೆಗಳೆಂದರೆ, ದೇವರಿಗೆ ನಾವು ನೀಡುವ ಒಂದು ರೀತಿಯ ಆಮಿಷಗಳು, ಲಂಚಗಳು ಎನ್ನಬಹುದು. ಅಂದಮೇಲೆ, ನಮ್ಮ ದೇವರನ್ನು ನಾವು ಭ್ರಷ್ಟರ ಸಾಲಿಗೆ ಸೇರಿಸಿದಂತಾಯಿತು. ಹರಕೆ ಹೊತ್ತುಕೊಳ್ಳೋದೆಂದರೆ ಲಂಚಕೋರರಿಗೆ ಮುಂಗಡ ಹಣಕೊಟ್ಟ ಹಾಗೆ ಎಂಬ ಅರ್ಥ ಬರುತ್ತದೆ. ಇಷ್ಟಕ್ಕೂ ನಾವು ಅಷ್ಟು ಕೊಟ್ಟರೆ, ನಾವು ಕೇಳಿಕೊಂಡಿದ್ದನ್ನೆಲ್ಲಾ ನೆರವೇರಿಸಿಕೊಡಲು ನಮ್ಮ ದೇವರು ಲಂಚಕೋರನೇ? ಭ್ರಷ್ಟನೇ? ವಿದ್ಯಾರ್ಥಿಯು ಒಡೆಯುವ (ಒಡೆದು ಮತ್ತೆ ತಾನೇ ತಿನ್ನುವ!) ಒಂದು ತೆಂಗಿನಕಾಯಿಗೆ, ದೇವರು ಅವನನ್ನು ಪಾಸು ಮಾಡಿ ಬಿಡುತ್ತಾನೆಯೇ? ಇಲ್ಲವೇ ಸರ್ವಾಂಗ ಸುಂದರನಾದ ತಿರುಪತಿ ತಿಮ್ಮಪ್ಪನಿಗೆ ನಮ್ಮ ಕೂದಲು ಏಕೆ ಬೇಕು? ಈ ವಿಶ್ವದ ಅಧಿಪತಿಯಾಗಿರುವ ಆತನಿಗೆ ಯಾವುದರ ಅವಶ್ಯಕತೆ ಇದೆ? ಮೇಲಾಗಿ, ಹರಕೆ ಹೊತ್ತವರ ಕೆಲಸಗಳು ಮಾತ್ರ ಆಗಿ ಹೋದವೆ? ಏನೂ ಹರಕೆ ಹೊರದವರ ಕೆಲಸಗಳೇ ಆಗಿಲ್ಲವೇ? ಕೆಲವೊಮ್ಮೆ ಕಾಕತಾಳೀಯವಾಗಿ ನಡೆಯುವ ಸಂಗತಿಗಳನ್ನು ಬಿಟ್ಟರೆ, ಹರಕೆಗಳಿಗೂ, ಫಲಿತಾಂಶಗಳಿಗೂ ಯಾವ ಸಂಬಂಧವೂ ಇಲ್ಲ. ಹರಕೆಗಳ ಮೇಲೆ ಅವಲಂಬಿತವಾಗಿರೋದು ಮೂಢನಂಬಿಕೆ ಹಾಗೂ ಅವೈಜ್ಞಾನಿಕ. ಮಗುವಿಗೆ ಕಾಯಿಲೆ ಬಂದಾಗ ಹರಕೆ ಹೊತ್ತು ಸುಮ್ಮನೆ ಕೂರುವ ಬದಲು, ತಕ್ಷಣ ಒಳ್ಳೆಯ ವೈದ್ಯರಿಗೆ ತೋರಿಸುವುದು ಸೂಕ್ತವಲ್ಲವೇ? ಬರೇ ಹರಕೆಗಳಿಂದ ಯಾವ ಕೆಲಸವೂ ನೆರವೇರದು. ಅಂದುಕೊಂಡ ಯಾವುದೇ ಕೆಲಸ ಸಂಪನ್ನಗೊಳ್ಳಬೇಕಾದರೆ, ಮೊದಲು ಬೇಕಾದುದು ಪ್ರಾಮಾಣಿಕ ಪರಿಶ್ರಮ. ಎಷ್ಟು ಶ್ರಮ ಪಡುತ್ತೇವೆಯೋ ಅಷ್ಟು ಮಾತ್ರ ಪ್ರತಿಫಲ ನಮಗೆ. ನಾವು ದೇವರ ಎದುರು ನೂರಾ ಒಂದು ಕಾಯಿ ಒಡೆದರೂ, ಸಾವಿರ ಸಲ ಪ್ರದಕ್ಷಿಣೆ ಹಾಕಿದರೂ, ಪ್ರಯತ್ನ ಪಡದೆ ಜಯವಿಲ್ಲ. ನಮ್ಮ ಸ್ವಾರ್ಥಕ್ಕಾಗಿ ಕುರಿ ಕೋಳಿ ಬಲಿಕೊಟ್ಟರೆ, ಪಾಪವೇ ಹೊರತು ಪುಣ್ಯವೆಲ್ಲಿಂದ ಬಂದೀತು? ಆ ನಿಸ್ಸಹಾಯಕ ಪ್ರಾಣಿಗಳ ಆತ್ಮ ನಮ್ಮನ್ನು ಶಪಿಸದೆ ಇದ್ದೀತೇ? ಅಂತೆಯೇ ಎಲ್ಲವೂ ಅವನೇ ಆಗಿರುವಾಗ, ಎಲ್ಲವೂ ಅವನದೇ ಆಗಿರುವಾಗ, ಭಗವಂತನಿಗೆ ನಾವು ನೀಡುವ ಕ್ಷುಲ್ಲಕ ವಸ್ತುಗಳ ಅವಶ್ಯಕತೆಯಾದರೂ ಎಲ್ಲಿದೆ? ನಾವು ದೇವರೆಂದು ನಂಬಿರುವ ಆ ಕಲ್ಲಿನ ವಿಗ್ರಹದ ಕುತ್ತಿಗೆಗೆ ನಮ್ಮಿಂದ ಹಾಕಿಸಿಕೊಳ್ಳುವ ಚಿನ್ನದ ಹಾರದಿಂದ ಅವನೇನು ಮೆರೆಯಬೇಕಾಗಿದೆಯೇ? ಅದೇ ಕಾಣಿಕೆ ಹಣದಿಂದ ದೀನ ದಲಿತರಿಗೆ ಸಹಾಯ ಮಾಡಿದರೆ, ಆಗ ಅದು ಪುಣ್ಯದ ಕೆಲಸವಾದೀತು; ಮಾತ್ರವೇ ಅಲ್ಲ ದೇವರಿಗೆ ಅದು ಪ್ರಿಯವಾಗಿ, ಆತ ನಮ್ಮ ಇಷ್ಟಾರ್ಥಗಳನ್ನು ಪೂರೈಸಬಹುದೇನೋ. ಈ ರೀತಿಯಲ್ಲಿ ನೋಡಿದರೆ, ಸತ್ಕಾರ್ಯ, ಸಮಾಜ ಸೇವೆಗಳೇ, ನಾವು ಭಗವಂತನ ಹುಂಡಿಗೆ ಹಾಕಬೇಕಾದ ಕಾಣಿಕೆಗಳಲ್ಲವೇ?

ಹಾಗಂತ ಹರಕೆ ಬೇರೆ; ಪ್ರಾರ್ಥನೆ ಬೇರೆ. ಪ್ರಾರ್ಥನೆಗೆ ಶಕ್ತಿ ಇದೆ. ಹರಕೆ ವ್ಯಾವಹಾರಿಕ; ಪ್ರಾರ್ಥನೆ ಆಧ್ಯಾತ್ಮಿಕ. ಅಂಚೆಯ ಸಹಾಯವಿಲ್ಲದೆ ದೇವರಿಗೆ ಯಾವುದೇ ಷರತ್ತುಗಳನ್ನು ಹೊರಿಸದೆ, ನಮ್ಮ ಮನವಿಯನ್ನು ಸಲ್ಲಿಸುವ ವಿಧಾನವೇ ಪ್ರಾರ್ಥನೆ. ಶ್ರೀಕೃಷ್ಣ ಗೀತೆಯಲ್ಲಿ ‘ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಶು ಕದಾಚನ’ ಎಂದಂತೆ ಕರ್ಮ ಗೈಯುವಷ್ಟೇ ಮಾತ್ರ ಹಕ್ಕು ನಿನ್ನದು. ಅದರ ಫಲಾಫಲಗಳನ್ನು ನನಗೆ ಬಿಟ್ಟು ಬಿಡು ಎಂಬುದೇ ಅವನ ಸಂದೇಶ. ಅಂದ ಮೇಲೆ, ನಮ್ಮ ಕೆಲಸವನ್ನು ದೃಢಚಿತ್ತದಿಂದ, ನಿಷ್ಠೆಯಿಂದ ಮಾಡಬೇಕು. ಫಲಿತಾಂಶವನ್ನು ಭಗವಂತನಿಗೇ ಬಿಟ್ಟು ಬಿಡಬೇಕು.

ದೇವರು ಎಂದರೆ, ಸೃಷ್ಟಿಗೆ ಕಾರಣವಾದ, ಯಾರಿಗೂ ತಾರತಮ್ಯ ಮಾಡದ, ಯಾವ ವ್ಯಾಮೋಹವೂ ಇಲ್ಲದ, ಎಲ್ಲವನ್ನೂ, ಎಲ್ಲರನ್ನೂ ನಡೆಸಿಕೊಂಡು ಹೋಗುವ, ಅವರವರು ಗೈಯುವ ಪಾಪ-ಪುಣ್ಯ-ಪ್ರಯತ್ನಕ್ಕೆ ಅನುಸಾರವಾಗಿ ಫಲವನ್ನು ನೀಡುವ, ಕಣ್ಣಿಗೆ ಕಾಣದ ಆದರೆ ಕ್ಷಣಕ್ಷಣಕ್ಕೂ ಅನುಭವಕ್ಕೆ ಬರುವ ಒಂದು ಅದ್ಭುತ ಶಕ್ತಿಯಲ್ಲವೇ? ಆದುದರಿಂದ, ಹರಕೆಗಳಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಒಂದು ಭ್ರಮೆ ಅಷ್ಟೆ! ಗಛಿ ಠಜಟ್ಠ್ಝ ಚಿಛಿ ಎಟಛ ್ಝಡಜ್ಞಿಜ, ್ಞಠಿ ಎಟಛ ್ಛಚ್ಟಜ್ಞಿಜ!

ಹರಕೆ ಹೊರುವವರು ಯಾರು?

ಸಾಮಾನ್ಯವಾಗಿ, ತಮ್ಮ ಸಾಮರ್ಥ್ಯದ ಮೇಲೆ ತಮಗೇ ನಂಬಿಕೆ ಇಲ್ಲದವರು, ಸೋಮಾರಿಗಳು, ಆತ್ಮ ವಿಶ್ವಾಸವಿಲ್ಲದ ದುರ್ಬಲ ಮನಸ್ಸಿನವರು, ಅಸಹಾಯಕ ಸ್ಥಿತಿಯನ್ನು ಎದುರಿಸುವವರು ಹರಕೆ ಹೊರುತ್ತಾರೆ. ಆತ್ಮ ವಿಶ್ವಾಸಿಗಳು, ಕಾರ್ಯತತ್ಪರರು, ಮಾಡಬೇಕಾದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಂದುವರಿಯುತ್ತಿರುತ್ತಾರೆ. ಅಜ್ಞಾನ-ಅಸಹಾಯಕತೆ, ದುರ್ಬಲ ಮನಸ್ಸು - ಎಲ್ಲವೂ ಕತ್ತಲೆ ಇದ್ದಂತೆ. ಇದನ್ನು ನಾಶಗೊಳಿಸುವ ಶಕ್ತಿ ಇರೋದು ಜ್ಞಾನವೆಂಬ, ಆತ್ಮವಿಶ್ವಾಸವೆಂಬ ಶಕ್ತಿಗೆ ಮಾತ್ರ. ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿ, ಕೈ ತೊಳೆದುಕೊಳ್ಳುವ ಪರಿ ತರವಲ್ಲ. ಆತನ ಜತೆ ನಾವು ಕೈ ಜೋಡಿಸದಿದ್ದರೆ, ದೇವರಾದರೂ ಏನು ತಾನೆ ಮಾಡಲು ಸಾಧ್ಯ? ಅಂತೆಯೇ, ಹರಕೆ ಹೊತ್ತು ಅದನ್ನು ಪೂರೈಸದಿದ್ದರೆ, ಮತ್ತೆ ದೇವರು ನಮಗೆಲ್ಲಿ ತೊಂದರೆ ಕೊಟ್ಟಾನೋ ಎಂಬ ಭಯ ಕೂಡ ಅಜ್ಞಾನವೇ. ಅವನ ಅನುಗ್ರಹ ನಮ್ಮ ಹರಕೆಗಳಿಂದ ರೂಪಿತವಾಗೋದಿಲ್ಲ; ನಿರ್ಧಾರವಾಗೋದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಶ್ರದ್ಧೆ-ಶುದ್ಧ ಮನಸ್ಸಿನಿಂದ ಮಾಡಿ ನನ್ನ ಪ್ರಯತ್ನದ ಮೇಲೆ ನಿನ್ನ ಪೂರ್ಣಾನುಗ್ರಹವಿರಲಿ ಎಂಬ ಪ್ರಾರ್ಥನೆಯೊಂದೇ ಸಾಕು. ಯಾವ ಹರಕೆಯೂ ಬೇಕಿಲ್ಲ.

(ಪ್ರತಿಕ್ರಿಯಿಸಿ: drputhuraya@yahoo.co.in)