ಅಂಕಣ

ರವಿ ಬೆಳಗೆರೆ ನಮ್ಮನಮ್ಮಲ್ಲಿ ಅಂಕಣ: ಮಲಗಿ ಕಳೆದ ಬಡವನೆದುರು ಸಮಯ ಬಳಸಿ ಬೆಳೆದವನಿದ್ದಾನೆ!

ಬಡವ ಮಲಗಿ ಕಳೆದ. ಬುದ್ಧಿವಂತ ಸಮಯ ಉಪಯೋಗಿಸಿಕೊಂಡು ಶ್ರೀಮಂತನಾಗಿ ಬೆಳೆದ- ಎಂಬುದು ನನಗೆ ಬಂದ ಮೆಸೇಜೊಂದರ ಸಾರಾಂಶ. ಬಡವ-ಶ್ರೀಮಂತರ ನಡುವಿನ ಕಂದರದ ಬಗ್ಗೆ ಯೋಚಿಸುತ್ತಾ, ಓದುತ್ತಾ, ಹೋರಾಟಗಳಲ್ಲಿ ಭಾಗಿಯಾಗುತ್ತಾ ಸುಮಾರು ಇಪ್ಪತ್ತು ವರ್ಷ ಕಳೆದವನು ನಾನು. ಒಂದಲ್ಲ ಒಂದು ದಿನ ಉಳ್ಳವರ ಮತ್ತು ಇಲ್ಲದವರ ನಡುವಿನ ವ್ಯತ್ಯಾಸ ಅಳಿದು, ಸಮಾನತೆಯ ಸಮಾಜ ನಿರ್ವಣವಾಗುತ್ತದೆ ಎಂಬ ಕಮ್ಯುನಿಸ್ಟ್ ಸಿದ್ಧಾಂತವನ್ನು ತುಂಬ ಚಿಕ್ಕವಯಸ್ಸಿನಲ್ಲಿ ಒಪ್ಪಿಕೊಂಡವನು ನಾನು. I just bought it.

ಹಾಗೆ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವಂಥ ವಯಸ್ಸು ಅದು. ಮೊದಲು ಕಬಡ್ಡಿ ಆಡಲು ಹೋಗಿ ಆರೆಸ್ಸೆಸ್ಸು ಸೇರಿಕೊಂಡು ಭಯಂಕರ ಉಗ್ರ-ವ್ಯಗ್ರ ಹಿಂದುತ್ವವಾದಿಗಳಾಗುತ್ತೇವೆ. ಬೆಳೆಯುತ್ತ ಬೆಳೆಯುತ್ತ ಅದು ತೀರ ಸಂಕುಚಿತ ಅನ್ನಿಸಿ ಕಮ್ಯುನಿಸಮ್ ಓದತೊಡಗುತ್ತೇವೆ. ಒಂದು ಕ್ರಾಂತಿಕಾರಿ ಹಂತ. ಅದೂ ಮುಗಿಯುತ್ತದೆ. ಆ ನಂತರ ಮದುವೆ-ಮಕ್ಕಳು ಇತ್ಯಾದಿಗಳಾಗಿ, ಬದುಕು ಬೇರೂರುತ್ತಿದ್ದಂತೆಯೇ ಕಾಂಗ್ರೆಸ್ ಪರವಾಗಿ ಯೋಚಿಸತೊಡಗುತ್ತೇವೆ. ಕಡೆಗೆ ಯಾವುದೋ ಘಳಿಗೆಯಲ್ಲಿ ‘ಜ್ಞಾನೋದಯ’ವಾದಂತಾಗಿ ರಿಲಿಜಿಯಸ್ ಆಗಿಬಿಡುತ್ತೇವೆ. ಮಠ, ಆಶ್ರಮ, ವೇದಾಂತ, ಇಳಿಗಾಲದ ನಿರಾಸಕ್ತಿಯಿಂದಾಗಿ ಬ್ರಹ್ಮಚರ್ಯ! ಇವು ಸಹಜ ಜೀವನದ,normal ಮನುಷ್ಯನ ಅಗತ್ಯ ಹಂತಗಳು. ಅಕಸ್ಮಾತ್ ಅವರ್ಯಾರೋ ಇನ್ನೂ ಕಬಡ್ಡಿ ಆಡುತ್ತಲೇ ಇದ್ದಾರೆ ಅಂದರೆ, ಅವರಿನ್ನೂ ಬೌದ್ಧಿಕವಾಗಿ ಬೆಳೆದಿಲ್ಲ ಅಥವಾ ಬೆಳೆಯದಿರಲು ನಿರ್ಧರಿಸಿದ್ದಾರೆ! ಹೀಗಂತ ನಮ್ಮಲ್ಲಿ ನಾವೇ ಗೆಳೆಯರು ಮಾತನಾಡಿಕೊಳ್ಳುತ್ತಿದ್ದೆವು. ಇವುಗಳ ಪೈಕಿ ‘ನಾವು ಶ್ರೀಮಂತರಾಗಬೇಕು’ ಎಂದು ಯೋಚಿಸಿದ, ಪ್ಲಾನ್ ಮಾಡಿದ ಅಥವಾ ಪ್ರಯತ್ನಿಸಿದ ಹಂತವೇ ಇರಲಿಲ್ಲ. ಶ್ರೀಮಂತರಾಗಲು ಸಾಧ್ಯ ಅಂತಲೂ ಅಂದುಕೊಂಡಿರಲಿಲ್ಲ. ಲೆಕ್ಚರರ್ ನೌಕರಿ, ಸಬ್ ಇನ್​ಸ್ಪೆಕ್ಟರ್ ಹುದ್ದೆ, ರಾಜ್ಯಮಟ್ಟದ ಪತ್ರಿಕೆಯಲ್ಲಿ ವರದಿಗಾರನಾಗೋದು-ಬರೀ ಇಂಥವೇ ಕನಸು. ಹೆಚ್ಚೆಂದರೆ, ಐಎಎಸ್ಸು ಮಾಡುತ್ತೇವೆಂಬ ಕನವರಿಕೆ. ಅಂಥ ನಮ್ಮ ‘ಕನಸಿನ ನೌಕರಿ’ಗಳ ಸಂಬಳ ಆ ಕಾಲಕ್ಕೆ ಗಿರಕಿ ಹೊಡೆಯುತ್ತಿದ್ದುದು ಮೂರು ಸಾವಿರದಿಂದ-ಹತ್ತು ಸಾವಿರದ ತನಕ. ಅಷ್ಟೆ.

ಆದರೆ ಹಿಡಿದ ಮೂರು ಸಾವಿರ ರುಪಾಯಿಗಳ ನೌಕರಿಯಲ್ಲೇ ‘ಪ್ರಗತಿ’ ಸಾಧಿಸಿ ನಾವು ಎಂಟೊಂಬತ್ತು ಸಾವಿರಕ್ಕೆ ತಲುಪುವ ಹೊತ್ತಿಗೆ ಜಾಗತೀಕರಣದ ತಿಜೋರಿಯ ಬಾಗಿಲು ತೆರೆದುಕೊಂಡಿತಲ್ಲ? ನಮ್ಮ ಅಕ್ಕಪಕ್ಕದವರು ಶ್ರೀಮಂತರಾಗತೊಡಗಿದರು. ಮೊದಲೆಲ್ಲ ಅಮೆರಿಕಕ್ಕೆ ಹೋದ ಹುಡುಗ ಊರಿಗೆ ಒಬ್ಬನಿರುತ್ತಿದ್ದ. ಈಗ ಕೇರಿಗಿಬ್ಬರಾದರು. ಕಾರು ಶ್ರೀಮಂತರದೇನಲ್ಲ: ಸಂಬಳ ದಿವಿನಾಗಿದ್ದರೆ ಸಾಕು ಎಂಬುದು ಮನವರಿಕೆಯಾಯಿತು. ಅವರಿವರೆಲ್ಲ ಶ್ರೀಮಂತರಾದದ್ದು ನೋಡಿದ ಮೇಲೆ ‘ನಾವೂ ಆಗಬಹುದಲ್ಲವೆ’ ಅನ್ನಿಸತೊಡಗಿತು. ‘ಎಂತೆಂಥವರೋ ದುಡ್ಡು ಮಾಡಿದ್ದಾರಂತೆ’ ಎಂಬ ಮಾತು ಕೇಳಿಸತೊಡಗಿತು. ‘ಬಂಗಲೆಗಳ ವಿರುದ್ಧ ಗುಡಿಸಲುಗಳು ಗುಡುಗಬೇಕ್!’ ಅಂತ ಕ್ರಾಂತಿಕಾರಿ ಕರೆ ಕೊಟ್ಟು ಕವಿತೆ ಬರೆಯುತ್ತಿದ್ದವರೆಲ್ಲ ಬಂಗಲೆಗಳಿಗೆ ಷಿಫ್ಟ್ ಆದದ್ದು ನೋಡಿದೆವು. ‘ಉಳಿದದ್ದು ಹಾಳುಬಿದ್ದು ಹೋಗಲಿ, ನಾವು ಜೀವನದಲ್ಲಿ ಬೆಳೀಬೇಕು’ ಎಂಬ ಸಿದ್ಧಾಂತ ಮನಸ್ಸಿಗೆ ಬಂದುಬಿಟ್ಟಿತು. ಅಲ್ಲಿಂದ ಶುರುವಾಯಿತು ನೋಡಿ ಪರ್ಸನಾಲಿಟಿ ಡೆವಲಪ್​ವೆುಂಟಿನ ಹಂಬಲ. ಕೆಲವರು ಅದರ ಬಗ್ಗೆಯೇ ಪುಸ್ತಕ ಬರೆದರು. ವಿಜಯಕ್ಕೆ ಐದೇ ಮೆಟ್ಟಿಲು ಅಂದರು. ಓದಿದವರು ದುಡ್ಡು ಮಾಡಿದರೋ ಇಲ್ಲವೋ; ಬರೆದವರು ವಿಜಯ ಸಾಧಿಸಿದರು. ಒಟ್ಟಾರೆಯಾಗಿ ಎಲ್ಲರೂ ಕನ್ವಿನ್ಸ್ ಆದಂತೆ ಕಂಡದ್ದೆಂದರೆ, ‘ನಾವು ಶ್ರೀಮಂತರಾಗ ಬೇಕು’ ಎಂಬ ಸಿದ್ಧಾಂತದ ಬಗ್ಗೆ. ಜಾಗತೀಕರಣದ ಪರಿಣಾಮವಾಗಿ, ಶ್ರೀಮಂತರಾಗುವುದು ಸಾಧ್ಯವೂ ಆಯಿತು; ಕೆಲವರಿಗೆ. ಕೆಲವರಿಗೇನು ಬಂತು? ಅನೇಕರಿಗೆ ಅದು ಸಾಧ್ಯವಾಯಿತು. ಸಾಧ್ಯವಾಗದೆ ಇದ್ದವರು ಹಾಡು ಗುನುಗಿಕೊಂಡರು- ಲೈಫು ಇಷ್ಟೇನೇ.

ಇವತ್ತಿನ ಸಮಾಜದಲ್ಲಿ ಕೆಲವರು ಇದ್ದಕ್ಕಿದ್ದಂತೆ ಶ್ರೀಮಂತರಾಗಿರುವುದು ನಿಜ. ಸಡನ್ನಾಗಿ ಸಾವಿರಾರು ಕೋಟಿಗೆ ಬಾಳುವಂತಾದವರೂ ಇದ್ದಾರೆ. ಅವರು ಅದೃಷ್ಟವಂತರು ಅನ್ನುತ್ತೀರಾ? ನನ್ನ ಅಭ್ಯಂತರವಿಲ್ಲ. ಆದರೆ ಸದ್ಯಕ್ಕೆ ಅವರನ್ನು ಬದಿಗಿಟ್ಟು ಯೋಚನೆ ಮಾಡಿ. ನೋಡುತ್ತ ಹೋದಂತೆಲ್ಲ, ‘ಎಂತೆಂಥವರೋ’ ಶ್ರೀಮಂತರಾದರು ಅಂತ ನಾವು ಅಂದುಕೊಂಡಿದ್ದೆವಲ್ಲ? ಅವರು ‘ಎಂತೆಂಥವರೋ’ ಆಗಿರಲಿಲ್ಲ. ತಮ್ಮವೃತ್ತಿಯಲ್ಲಿ, ಪ್ರಯತ್ನದಲ್ಲಿ ಅವರು ತುಂಬ ಶ್ರದ್ಧಾವಂತರಾಗಿದ್ದರು. ಬೇರೆ ವಿಷಯಗಳಲ್ಲಿ ಅವರು ಸ್ಟುಪಿಡ್ ಅನ್ನಿಸಬಹುದು. ಆದರೆ ಅವರ ಶ್ರದ್ಧೆ, ಪರಿಶ್ರಮ, ಪ್ರಯತ್ನಶೀಲತೆಗಳನ್ನು ನೀವು ತಳ್ಳಿಹಾಕಲಾರಿರಿ. ರಸ್ತೆ ಪಕ್ಕದಲ್ಲಿ ಕಟ್ಟಿಗೆ ಕಡಿಯುವವನು, ಜಲ್ಲಿ ಒಡೆಯುವವನು ಉಳಿದೆಲ್ಲರಿಗಿಂತ ಹೆಚ್ಚಿನ ಶ್ರಮಜೀವಿ ಎಂಬ ಮಾತು ನಿಜ. ಆದರೆ ಒಡೆದ ಕಟ್ಟಿಗೆ ಮತ್ತು ಜಲ್ಲಿ ಮಾರುವವನು ಅವನಿಗಿಂತ ಹೆಚ್ಚು ಬುದ್ಧಿವಂತ.

ಹೆಚ್ಚು focussed ಮತ್ತು ಅವನು ತನ್ನದೇ ಆದ ರೀತಿಯಲ್ಲಿ ಶ್ರಮಪಟ್ಟಿರುತ್ತಾನೆ. ಅವನಿಗಿಂತ ಬುದ್ಧಿವಂತನಾದವನು ಜಲ್ಲಿ ಒಡೆಯುವ ಕ್ರಷರ್ ತಂದು ಹಾಕಿರುತ್ತಾನೆ. ಅವನು ಶ್ರಮಪಟ್ಟೇ ಇಲ್ಲವಾ? ನೀವು ಹಾಗಂತ ನಿರ್ಧರಿಸಲಾರಿರಿ. ಗಮನಿಸುವುದು, ಅಭ್ಯಸಿಸುವುದು, ಹುಡುಕುವುದು, ಓಡಾಡುವುದು, ಹಣ ಹೊಂಚುವುದು, ಮಾರುಕಟ್ಟೆ ಸೃಷ್ಟಿಸುವುದು-ಎಲ್ಲವೂ ಶ್ರಮಗಳೇ. ಪ್ರತಿ ಕೆಲಸಕ್ಕೂ ಅದರ ಕಿಮ್ಮತ್ತಿದೆ.

ಈ ವಿಷಯ ಅರ್ಥವಾದ ನಂತರ ನಿಮಗೆ ಕೆಲಸವೆಂದರೇನು ಎಂಬುದಕ್ಕಿಂತ ಸೋಮಾರಿತನವೆಂದರೇನು ಎಂಬುದು ಹೆಚ್ಚು ನಿಚ್ಚಳವಾಗುತ್ತದೆ. ‘ಎಷ್ಟು ದುಡ್ಡು ಮಾಡಿದರೂ, ತಿನ್ನೋದು ಅನ್ನವೇ ತಾನೇ? ನಾವೇನು ಬಂಗಾರ ತಿನ್ನುತ್ತೀವಾ? ನೀವೇನೇ ಅನ್ನಿ, ಮನುಷ್ಯ ಹೊಟ್ಟೆ ತುಂಬ ತಿನ್ನಬೇಕು. ಕಣ್ತುಂಬ ನಿದ್ದೆ ಮಾಡಬೇಕು. ಲೈಫ್ ಎಂಜಾಯ್ ಮಾಡದೆ ಇದ್ಮೇಲೆ ಎಷ್ಟು ದುಡಿದು ಏನುಪಯೋಗ?’ ಇಂಥ ಮಾತುಗಳನ್ನು ನಿತ್ಯ ಆಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಆದರೆ ಕೆಲವು ಸಂದರ್ಭಗಳಿಗಷ್ಟೆ ಅನ್ವಯವಾಗುವಂಥ ಇಂಥ ನೆಗೆಟಿವ್ ಧೋರಣೆಗಳ ಮಾತುಗಳನ್ನು ನೀವು ಒಪ್ಪಿಕೊಂಡು ಬಿಡಬಾರದು. ಬದುಕಿನಲ್ಲಿ ತಮ್ಮ ಸೋಮಾರಿತನದಿಂದಾಗಿ, ಬೇಜವಾಬ್ದಾರಿತನದಿಂದಾಗಿ defeat ಆದ ಅನೇಕರು ಇಂಥ ಮಾತುಗಳನ್ನು ಹುಟ್ಟು ಹಾಕುವ ಪಡಪೋಶಿ ಫಿಲಾಸಪರ್​ಗಳಾಗಿರುತ್ತಾರೆ. ತಿನ್ನೋದು, ನಿದ್ರೆ ಮಾಡೋದು-ಇದಷ್ಟೆ ಜೀವನವಲ್ಲ. ಲೈಫ್ ಎಂಜಾಯ್ ಮಾಡೋದು ಅಂದರೆ ಏನು ಅಂತ ನೀವು ಮೊದಲು ನಿರ್ಧರಿಸಿ. ಕುಡಿತ, ಊಟ, ನಿದ್ರೆ, ಸಿನೆಮಾ-ಎಲ್ಲವೂ ಸಂತೋಷದಾಯಕವೇ. ಆದರೆ ಇವು ಕೂಡ ಆರೆಸ್ಸೆಸ್ಸು, ಕಮ್ಯುನಿಸ್ಟ್ ಪಾರ್ಟಿ, ಕಾಂಗ್ರೆಸ್ಸು ಹಾಗೂ ಪಾರಮಾರ್ಥಿಕ ಬದುಕಿನಂಥವೇ. ಇವುಗಳನ್ನು ನಾವು ದಾಟಲೇಬೇಕು. ಹೈಸ್ಕೂಲು ಮುಗಿಸಿ ಹೊರಬೀಳಲೇಬೇಕು. ಕಬಡ್ಡಿಯಲ್ಲೇ ಉಳಿದು ಬಿಡಬಾರದು.

ಈ ಮಾತು ಏಕೆ ಹೇಳಿದೆನೆಂದರೆ, ಹೀಗೆ ತಿನ್ನುವ-ಕುಡಿಯುವ-ಲೈಫು ಎಂಜಾಯ್ ಮಾಡುವ ಪ್ರವೃತ್ತಿಗಳೇ ನಮ್ಮನ್ನು ಕ್ರಮೇಣ ಸೋಮಾರಿಗಳನ್ನಾಗಿ, ವಿಲಾಸಿಗಳನ್ನಾಗಿ, focus ಕಳೆದುಕೊಂಡವರನ್ನಾಗಿ ಮಾಡಿ ಕಡೆಗೆ ಸೋಲಿಗೆ ಈಡಾಗುವವರನ್ನಾಗಿಸಿ ಬಿಡುತ್ತವೆ. ಇಂಥ ಬಲಹೀನತೆ ಆರಂಭವಾದಾಗ ಮೊಟ್ಟ ಮೊದಲಿಗೆ ಕಾಣಿಸಿಕೊಳ್ಳುವ ಲಕ್ಷಣವೆಂದರೆ, ಮುಗಿಸಬೇಕಾದ ಕೆಲಸವನ್ನು ಪೋಸ್ ್ಟೋನ್ ಮಾಡಲಾರಂಭಿಸುವುದು. ಮಾಡೋಣ ಬಿಡು, ಮಾಡಿದರಾಯ್ತು ಬಿಡು, ಮಾಡೋನು ನಾನೇ ಅಲ್ವಾ-ಹೀಗೆ ಅಂದುಕೊಳ್ಳುತ್ತಲೇ ಕೆಲಸ ಮುಂದೂಡುತ್ತಾ ಹೋಗುತ್ತೇವೆ. ಮಾಡಬೇಕಾದ್ದನ್ನು ಪಕ್ಕಕ್ಕಿಟ್ಟು ಮತ್ತೇನನ್ನೋ ಮಾಡುತ್ತ ಕೂಡುತ್ತೇವೆ. ಇದು ಮೊದಲಿನದ್ದಕ್ಕಿಂತ ಮುಖ್ಯವಾದದ್ದು ಅಂತ ಅವರಿವರನ್ನು ನಂಬಿಸುವುದಷ್ಟೇ ಅಲ್ಲ, ನಾವು ಕೂಡ ನಂಬತೊಡಗುತ್ತೇವೆ. ಕ್ರಮೇಣ ‘ಮಾಡಿದರಾಯ್ತು ಬಿಡು’ ಎಂಬುದು ಬದುಕಿನ ಸ್ಲೋಗನ್ನೇ ಆಗಿಬಿಡುತ್ತದೆ. ತೀರ ಕೊನೆಯ ಘಳಿಗೆಯ ತನಕ ಮುಂದೂಡುತ್ತ ಬಂದು, ಕೊನೆಯ ಘಳಿಗೆಯಲ್ಲಿ ಮಾಡಲೇಬೇಕಾದ ಒತ್ತಡ ಬಂದಾಗ-ಮಾಡೇಬಿಡೋಣ ಅಂತ ತೀರ್ವನಿಸಿ ಎದ್ದೇಳುತ್ತೇವೆ. ಆದರೆ ನಮ್ಮ ಸಾಮರ್ಥ್ಯ, ಪರ್​ಫಾರ್ಮೆನ್ಸ್ ತುಂಬ ಕಳಪೆಯಾಗಿರುತ್ತದೆ.

ಬುದ್ಧಿವಂತ ವಿದ್ಯಾರ್ಥಿಗಳು, ಜಾಣ ಉದ್ಯೋಗಿಗಳು, ಅಬ್ಬರದಿಂದ ಆರಂಭಗೊಂಡ ವ್ಯಾಪಾರಸ್ಥ ದೊರೆಗಳು-ಇವರೆಲ್ಲ ಫೇಲಾಗಲಿಕ್ಕೆ ಕಾರಣವೇ ಇದು. ‘ಒಬ್ಬ ಬಡವ ತಾನು ತಿನ್ನುವ ಅನ್ನ’ ದುಡಿಯುವುದಕ್ಕಾಗಿ ಮೈಲುಗಟ್ಟಲೆ ನಡೆಯುತ್ತಾನೆ. ಆದರೆ ತಾನು ತಿಂದ ಅನ್ನ ಅರಗಲಿಕ್ಕಾಗಿ ಒಬ್ಬ ಶ್ರೀಮಂತ ಮೈಲುಗಟ್ಟಲೆ ನಡೆಯುತ್ತಾನೆ. "Strange but true' ಎಂಬಂಥ ಮೆಸೇಜ್ ಫಾರ್ವರ್ಡ್ ಮಾಡುವವನು ಮೈಲಿ ಮೈಲಿ ನಡೆಯುವ ಬಡವನೂ ಆಗಿರುವುದಿಲ್ಲ; ನಡೆದು ನಡೆದು ಅನ್ನ ಕರಗಿಸುವ ಶ್ರೀಮಂತನೂ ಆಗಿರುವುದಿಲ್ಲ. ಅವನು ಮೊಬೈಲು ಹಿಡಿದು ಕೂತು ಕೂತೇ ನಾಶವಾಗಿಬಿಡುತ್ತಾನೆ. ಸಮಯವೆಂಬುದು ಇಬ್ಬರಿಗೂ ಸಮನಾಗಿಯೇ ಸಿಕ್ಕುತ್ತದೆ. ಬಡವ ಸದುಪಯೋಗಪಡಿಸಿಕೊಳ್ಳದೆ ಬಡವನಾಗೇ ಉಳಿಯುತ್ತಾನೆ. ಸರಿಯಾಗಿ ಉಪಯೋಗಿಸಿ ಕೊಂಡವನು ಶ್ರೀಮಂತನಾದರೂ ಆಗುತ್ತಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಯೋದಕ್ಕಿಂತ, ಬೆಂಝå್ ಕಾರಿನಲ್ಲಿ ಪ್ರಾಣಬಿಡುವುದು ಒಳ್ಳೆಯ ಅಭಿರುಚಿಯೇನೋ? ಜಾಗತೀಕರಣ ನಮಗೆ ಕಲಿಸಿರುವ ಪಾಠಗಳ ಪೈಕಿ ಇದೂ ಒಂದು.

(ಲೇಖಕರು ಹಿರಿಯ ಪತ್ರಕರ್ತರು)