ಇವತ್ತು ಮಹಾನ್ ಸಾಧಕರು ಎಂದು ಹೆಸರು ಮಾಡಿರುವ ಇನ್ಪೋಸಿಸ್ ನಾರಾಯಣಮೂರ್ತಿ, ರಾಮೋಜಿ ರಾವ್, ಅಂಬಾನಿ ಇವರ್ಯಾರೂ ಇನ್ನೊಬ್ಬರ ಆಶೀರ್ವಾದಕ್ಕೊ, ಹಾರೈಕೆಗೋ ಕಾದು ಕೂರಲಿಲ್ಲ. ಹಾಗೆಯೇ ಅವರು ಬಹಳಷ್ಟು ಸಂದರ್ಭಗಳಲ್ಲಿ ಯಾರಿಗೂ ಸಹಾಯವನ್ನೂ ಮಾಡಲಿಲ್ಲ, ಬೇರೆಯವರಿಂದ ನಿರೀಕ್ಷೆಯನ್ನೂ ಮಾಡಲಿಲ್ಲ.
ನಮ್ಮಲ್ಲಿ ತುಂಬ ಜನಕ್ಕೆ ಅಂಥದೊಂದು ದೌರ್ಬಲ್ಯವಿರುತ್ತದೆ.
ಸುಳ್ಳಲ್ಲ, ನಮ್ಮಲ್ಲಿ ಅನೇಕರು ಬದುಕುತ್ತಿರುವುದೇ ಹಾಗೆ. ನಿಜ ಹೇಳಬೇಕೆಂದರೆ ಅವರಿಗೆ ಉತ್ಸಾಹವಿರುತ್ತದೆ. ಪ್ರತಿಭೆ ಇರುತ್ತದೆ. ಕೈ ಹಾಕಿದ ಕೆಲಸದಲ್ಲಿ ಗೆಲ್ಲಬೇಕೆಂಬ ಆಸೆಯೂ ಇರುತ್ತದೆ. ತಕ್ಕಮಟ್ಟಿಗಿನ ಕಾರ್ಯಸಿದ್ಧತೆ ಕೂಡ ಆಗಿರುತ್ತದೆ. ಆದರೆ ಯುದ್ಧಕ್ಕೆ ಹೊರಟ ಸಾರಥಿಯ ವೇಷ ಹಾಕಲು ಅವರು ಸಿದ್ಧರಿರುವುದೇ ಇಲ್ಲ. ನಾವೇನಿದ್ರೂ ಮಧ್ಯೆ ನಿಂತು ಫೈಟ್ ಮಾಡ್ತೀವಿ ಎಂದು ಮೊದಲೇ ನಿರ್ಧರಿಸಿ ಬಿಟ್ಟಿರುತ್ತಾರೆ. ಮತ್ತು ಸಾರಥಿಯ ವೇಷ ಹಾಕುವಂತೆ, ಎರಡೇ ಹೆಜ್ಜೆಯ ಮಟ್ಟಿಗಾದರೂ ತನ್ನೊಂದಿಗೆ ನಡೆದುಬರುವಂತೆ ಆಪ್ತರನ್ನು ಕೇಳಿಬಿಡುತ್ತಾರೆ!
ಇಂಥವರ ಮಧ್ಯೆ ನಿಂತು- ‘ಅಲ್ರೀ, ಕನಸು ನಿಮ್ಮದು. ಕಾಂಚಾಣವೂ ನಿಮ್ಮದು. ಶ್ರದ್ಧೆಶ್ರಮ ಎರಡೂ ನಿಮ್ಮದು. ಗೆದ್ದರೆ ಲಾಭ, ಸೋತರೆ ನಷ್ಟ- ಅದೂ ನಿಮ್ಮದು. ಹಾಗಿರುವಾಗ ನಡುವೆ ಇನ್ನೊಬ್ಬರ ನೆರಳೇಕೆ? ಒಂದೇ ಮನಸ್ಸಿಂದ ಕೆಲಸ ಶುರು ಮಾಡಿ’ ಎಂದೇನಾದರೂ ಹೇಳಿನೋಡಿ... ಅವರು ಬಿಲ್ಕುಲ್ ಒಪ್ಪುವುದಿಲ್ಲ. ‘ಇಲ್ಲ ಸಾರ್, ನೀವು ಬರಬೇಕು. ಆಶೀರ್ವದಿಸಬೇಕು, ಗೆಲುವಿನ ಹಾದಿಯಲ್ಲಿ ನಡೆಸಬೇಕು. ಸೋಲಬೇಡಿ ಎಂದು ಒಂದೇ ಒಂದು ಮಾತು ಹೇಳಬೇಕು. ನಿಮ್ಮನ್ನು ಬಿಟ್ಟು ಈ ಕೆಲಸ ಶುರು ಮಾಡಲೇಬಾರ್ದು ಎಂದೆಲ್ಲ ನಾವು ನಿರ್ಧರಿಸಿಬಿಟ್ಟಿದ್ದೇವೆ’ ಅನ್ನುತ್ತಾರೆ! ಅಷ್ಟಾದ ಮೇಲೆ ಬೇರೆ ದಾರಿಯೇ ಇಲ್ಲ. ಅವರು ಹೇಳಿದಂತೆಯೇ ಕೇಳಬೇಕಾಗುತ್ತದೆ. ಆತ್ಮೀಯರು ಎಂಬ ಕಾರಣಕ್ಕೆ ಅವರ ಹೊಸ ಸಾಹಸಕ್ಕೆ ನಾವು ಸಾರಥಿಯಾಗಬೇಕಾಗುತ್ತದೆ.
ಫಜೀತಿ ಶುರುವಾಗುವುದೇ ಇಲ್ಲಿಂದ. ಹಾಗೆ, ಹೊಸದೊಂದು ಕೆಲಸಕ್ಕೆ ಕೈ ಹಾಕಿದವರು ಗೆದ್ದು ಬಿಟ್ಟರೆ ಅವರ ಕ್ರೆಡಿಟ್ನಲ್ಲಿ ನಿಮಗೆ ಸಾಸಿವೆಯಷ್ಟೂ ಸಂದಾಯವಾಗುವುದಿಲ್ಲ. ಬೈ ಚಾನ್ಸ್, ಆತ ಮುಗ್ಗರಿಸಿ ಬಿದ್ದರೆ ಮಾತ್ರ ಮತ್ತೆ ನಿಮ್ಮಲ್ಲಿಗೇ ಬರುತ್ತಾನೆ. ‘ನೋಡೀ ಸಾರ್, ಬಹಳ ಆಸೆಯಿಟ್ಕೊಂಡು ಈ ಕೆಲಸಕ್ಕೆ ಕೈ ಹಾಕಿದೆ. ದೊಡ್ಡ ಯಶಸ್ಸು ನಿರೀಕ್ಷಿಸಿದ್ದೆ. ಆದ್ರೆ ಎಲ್ಲ ಉಲ್ಟಾ ಆಗಿ ಹೋಯ್ತು’ ಎನ್ನುತ್ತಾನೆ. ಗೋಳಾಡುತ್ತಾನೆ. ಗೈಡ್ ಮಾಡಿ ಅನ್ನುತ್ತಾನೆ. ‘ನಿಮ್ಮನ್ನೇ ನಂಬಿದೀನಿ’ ಎಂದು ಸಿಂಪತಿ ಗಿಟ್ಟಿಸಲು ನೋಡುತ್ತಾನೆ. ‘ಹೇಗಿದ್ರೂ ಸೋತು ಬೀದಿಗೆ ಬಿದ್ದಿದೀನಿ ಸಾರ್. ನಿಮ್ಮಿಂದ ಸಹಾಯ ನಿರೀಕ್ಷಿಸ್ತೀನಿ’ ಎಂದೂ ಹೇಳಿಬಿಡುತ್ತಾನೆ.
ಅವನ ಸ್ಥಿತಿಗೆ ಕನಿಕರಿಸಿ ‘ಹೋಗ್ಲಿ ಪಾಪ’ ಎಂದುಕೊಂಡೇ ಒಂದಿಷ್ಟು ಸಹಾಯ ಮಾಡಿದರೆ ಆ ಕ್ಷಣಕ್ಕೆ ಆತ ಖುಷಿಯಾಗುವುದು, ಭಾವುಕನಾಗಿ ಕಣ್ಣೀರಿಡುವುದು, ಕೈ ಜೋಡಿಸಿ ನಿಲ್ಲುವುದು ದಿಟ. ಆದರೆ ಒಮ್ಮೆ ಪಡೆದಂಥದೇ ಸಹಾಯವನ್ನು ಆತ ಪದೇಪದೆ ಬಯಸುತ್ತಾನೆ. ಕ್ರಮೇಣ ಹಾಗೆ ಆಪ್ತರ ಮೇಲೆ ಡಿಪೆಂಡ್ ಆಗುವುದೇ ಅವನಿಗೆ ಅಭ್ಯಾಸವಾಗಿ ಬಿಡುತ್ತದೆ, ತನಗೆ ಸಹಾಯ ಮಾಡಿದವರ ಕುರಿತು ಬರಬರುತ್ತ ಒಂದು ಉಡಾಫೆ, ಒಂದಿಷ್ಟು ತಾತ್ಸಾರ. ಅದು ಹೇಗೋ ಅವನ ಜೊತೆಯಾಗಿ ಬಿಡುತ್ತದೆ. ಅಂಥ ಸಂದರ್ಭದಲ್ಲಿಯೇ ತನ್ನ ಆಪ್ತರು ಅನ್ನಿಸಿಕೊಂಡವರ ಮುಂದೆ ‘ಇವರು ನನಗೆ ಒಂದಿಷ್ಟು ಸಹಾಯ ಮಾಡ್ತಿದಾರೆ ನಿಜ, ಮಾಡಲಿ ಬಿಡ್ರೀ. ನನಗಲ್ಲದೆ ಇನ್ಯಾರಿಗೆ ಮಾಡಬೇಕು? ಅಷ್ಟೂ ಮಾಡಲಿಲ್ಲ ಅಂದ್ರೆ ಅವರು ದೊಡ್ಡವರು ಅನ್ನಿಸಿಕೊಂಡು ಏನು ಪ್ರಯೋಜನ?’ ಅಂದೂ ಬಿಡುತ್ತಾನೆ.
ಆ ಕಡೆ- ಉಪಕಾರ ಮಾಡಿರುತ್ತಾರಲ್ಲ, ಅವರ ಮನಸ್ಥಿತಿಯೂ ಒಂದಿಷ್ಟು ಬದಲಾಗಿರುತ್ತದೆ. ಅವನು ಕಡು ಕಷ್ಟದಲ್ಲಿದ್ದಾಗ ಕೈ ಹಿಡಿದವರೇ ನಾವು. ಅವನಿಗೆ ನಷ್ಟವಾಗದಂತೆ ನೋಡಿಕೊಂಡವರೇ ನಾವು. ಅವನಿಗೆ ಅನ್ನಆಶ್ರಯ ಕೊಟ್ಟವರು ನಾವು. ಬದುಕಲು ಹೇಳಿಕೊಟ್ಟವರೇ ನಾವು. ಹಾಗಿರುವಾಗ ಅವನು ನಾವು ಹೇಳಿದಂತೆಯೇ ಕೇಳಲಿ. ನಾವು ಹೇಳಿದಂತೆಯೇ ನಡೆದುಕೊಳ್ಳಲಿ. ತನ್ನ ಯಶಸ್ಸಿಗೆ ನಾವೇ ಕಾರಣ ಎಂಬುದನ್ನು ಪದೇಪದೆ ಸ್ಮರಿಸಲಿ. ಹತ್ತು ಮಂದಿಯ ಮುಂದೆ ಕೂಡ ಇದೇ ಮಾತು ಹೇಳಲಿ ಎಂದೇ ಅವರು ಯೋಚಿಸುತ್ತಾರೆ.
ಆದರೆ, ಒಮ್ಮೆ ಯಶಸ್ಸೆಂಬ ಕುದುರೆ ಏರಿ ಕುಳಿತವನಿಗೆ ಉಹುಂ, ಯಾರೆಂದರೆ ಯಾರೂ ಕಾಣಿಸುವುದಿಲ್ಲ. ನನ್ನ ಯಶಸ್ಸಿಗೆ ಸಂಪೂರ್ಣವಾಗಿ ನಾನೇ ಹಕ್ಕುದಾರ. ಅವರ ಶ್ರಮ, ಲಾಭ, ಹೆಸರು, ಖ್ಯಾತಿ ಎಲ್ಲವೂ ನನ್ನದು. ಇನ್ನೊಬ್ಬರ ಹಾರೈಕೆಯಿಂದಲೇ ಎಲ್ಲವೂ ಆಗಿಬಿಡುತ್ತಿತ್ತು ಅನ್ನುವುದಾದರೆ ನಾನು ಇಷ್ಟೆಲ್ಲ ಕಷ್ಟಪಡಬೇಕಾದ ಪ್ರಮೇಯವೇ ಬರ್ತಾ ಇರಲಿಲ್ಲ ಅಂದುಬಿಡುತ್ತಾನೆ. ಇಂಥ ಮಾತು ಸಹಜವಾಗಿಯೇ ಸಂಬಂಧಗಳನ್ನು; ಗೆಳೆತನವನ್ನು; ಒಂದು ಮಧುರ ಬಾಂಧವ್ಯವನ್ನು ಹಾಳು ಮಾಡುತ್ತವೆ. ವಿಶ್ವಾಸ ಎಂಬ ಕನ್ನಡಿ ಒಮ್ಮೆ ಒಡೆದು ಹೋದರೆ, ಮುಗಿದೇ ಹೋಯಿತು, ಮತ್ತೆ ಅದನ್ನು ಜೋಡಿಸಲಾಗುವುದಿಲ್ಲ. ಹಾಗೊಮ್ಮೆ ವಿಪರೀತ ಕಷ್ಟಪಟ್ಟು ಜೋಡಿಸಿದರೂ ಅವರಲ್ಲಿ ಒಂದು ಸ್ಪಷ್ಟ ಚಿತ್ರ ನೋಡಲು ಸಾಧ್ಯವಾಗುವುದಿಲ್ಲ.
ಇದೆಲ್ಲವನ್ನೂ ನೀವು ಒಪ್ಪಬಹುದು, ಒಪ್ಪದೆಯೂ ಇರಬಹುದು. ಆದರೆ ಇಷ್ಟಂತೂ ನೆನಪಿರಲಿ. ಇವತ್ತು ಮಹಾನ್ ಸಾಧಕರು ಎಂದು ಹೆಸರು ಮಾಡಿರುವ ಇನ್ಪೋಸಿಸ್ ನಾರಾಯಣಮೂರ್ತಿ, ಪ್ರೇಮ್, ರಾಮೋಜಿ ರಾವ್ ಮತ್ತು ಅಂಬಾನಿ ಇವರ್ಯಾರೂ ಇನ್ನೊಬ್ಬರ ಆಶೀರ್ವಾದಕ್ಕೊ, ಹಾರೈಕೆಗೋ, ಶಾಸ್ತ್ರದ ಮಾತಿಗೋ ಕಾದು ಕೂರಲಿಲ್ಲ. ಹಾಗೆಯೇ ಅವರು ಬಹಳಷ್ಟು ಸಂದರ್ಭಗಳಲ್ಲಿ ಯಾರಿಗೂ ಸಹಾಯವನ್ನೂ ಮಾಡಲಿಲ್ಲ. ಅದೇ ಕಾರಣದಿಂದ ಅವರಿಗೆ ಯಾರಿಂದಲೂ ಒಂದು ನಿರೀಕ್ಷೆಯೂ ಇರಲಿಲ್ಲ.
ಆದರೆ, ಇವರೆಲ್ಲ ಯಾವ್ಯಾವ ಎತ್ತರ ತಲುಪಿಬಿಟ್ಟರೋ ನೋಡಿ, ಒಬ್ಬ ಸಾಧಾರಣ ಇಂಜಿನಿಯರ್ ಆಗಿದ್ದ ನಾರಾಯಣಮೂರ್ತಿ, ಅದೇ ಕಸುಬಿನ ಪ್ರೇಮ್ ಮತ್ತು ಉಪ್ಪಿನಕಾಯಿ ವ್ಯಾಪಾರದ ರಾಮೋಜಿರಾವು. ಈಗ ಇವರ್ಯಾರಿಗೂ ಸವಾಲೊಡ್ಡುವುದು ಸಾಧ್ಯವೇ ಇಲ್ಲ.
ನಾವಾದರೂ ಅಷ್ಟೆ. ಬೇರೆಯವರ ಮೇಲೆ ಡಿಪೆಂಡ್ ಆಗದೆ, ಅವರಿಂದ ಏನನ್ನೂ ಅಪೇಕ್ಷಿಸದೆ ಒಂದು ಗುರಿ ಇಟ್ಟುಕೊಂಡು ನಡೆದು ಹೋದರೆ ಸಾಧಕರ ಅಣ್ಣ ತಮ್ಮಂದಿರೇ ಆಗಬಹುದು. ಅಥವಾ ಸೆಂಟಿಮೆಂಟ್ನ ಕೈಗೆ ಬುದ್ಧಿ ಕೊಟ್ಟರೆ ಶುದ್ಧ ಕೊರಗಪ್ಪಗಳಾಗಿಯೇ ಉಳಿದು ಹೋಗಬಹುದು!
ನಿಮ್ಮ ಆಯ್ಕೆ ಯಾವುದು?
(ಲೇಖಕರು ಹಿರಿಯ ಪತ್ರಕರ್ತರು)