ಅಂಕಣ

ರವಿ ಬೆಳಗೆರೆ ಅಂಕಣ: ದುಡ್ಡು ಕೊಡುವ ದಾರಿಗಳು ಹೀಗೂ ಉಂಟು...

ಕೆಟ್ಟದ್ದು ಹರಡಿದ ಹಾಗೆ ಒಳ್ಳೆಯದೂ ಹರಡುತ್ತೆ. ಹಾಗಂತ ನಂಬುವವನು ನಾನು. ಹಿಂದೆ ನಾನು ಮೆಡಿಕಲ್ ರೆಪ್ರೆಸೆಂಟೆಟಿವ್ ಆಗಿದ್ದಾಗ ಗಂಗಾವತಿಯಲ್ಲಿ ರಾಮರಾವ್ ಅಂತ ಒಬ್ಬರು ವೈದ್ಯರಿದ್ದರು. ವಿಪರೀತ ಜನಪ್ರಿಯತೆ ಇತ್ತು ಅವರಿಗೆ. ಒಳ್ಳೆಯ ಪ್ರಾಕ್ಟೀಸೂ ಇತ್ತು. ಸುತ್ತಲ ಹಳ್ಳಿಗಳಿಂದ, ಆಂಧ್ರದ ಕ್ಯಾಂಪುಗಳಿಂದ ಅವರನ್ನು ಹುಡುಕಿಕೊಂಡು ಜನ ಬರುತ್ತಿದ್ದರು. ಬಂದವರಿಗೆ ಔಷಧಿ, ಹಣೆಗೆ ಕುಂಕುಮ, ಕೈಗೊಂದು ದಾರ ಕಟ್ಟುತ್ತಿದ್ದರು. ಒಂದು ಚಿಕ್ಕ ಮಂತ್ರ ಹೇಳುತ್ತಿದ್ದರು. ರೋಗಿ ರಾಮರಾಯರ ಕಾಲಿಗೆ ನಮಸ್ಕರಿಸಿ ಔಷಧ ತೆಗೆದುಕೊಂಡು ಹೋಗುತ್ತಿದ್ದ. ಬಂದವರಲ್ಲಿ ತುಂಬ ಬಡವರೂ ಇರುತ್ತಿದ್ದರು.

ಒಮ್ಮೆ ನಾನು ಮತ್ತು ‘ರೋಷ್’ ಕಂಪನಿಯ ಒಬ್ಬ ರೆಪ್ರೆಸೆಂಟೆಟಿವ್ ಮಾತನಾಡುತ್ತ ಕುಳಿತಿದ್ದೆವು, ರಾಮರಾಯರೊಂದಿಗೆ. ಆಗಷ್ಟೆ ಆತ ರಾಮರಾಯರಿಗೆ ಒಂದು ಮೊಲದ ಬಿಳುಪಿನ, ದೊಡ್ಡ ಟರ್ಕಿ ಟವೆಲ್​ನ ಗಿಫ್ಟ್ ಮಾಡಿದ್ದ. ವೈದ್ಯರಿಗೆ ಗಿಫ್ಟುಗಳನ್ನು ಕೊಡುವುದು ಆಗಿನ ಕಂಪನಿಗಳ ವಾಡಿಕೆ. ಅಷ್ಟರಲ್ಲಿ ಒಬ್ಬ ಹಣ್ಣು ಮುದುಕಿ ನಡುಗುತ್ತ ಬಂತು. ವೃದ್ಧೆಗೆ ಚಳಿಜ್ವರ. ರಾಯರು ಮಂತ್ರ ಹೇಳಿದರು, ದಾರ ಕಟ್ಟಿದರು, ಹಣೆಗಿಟ್ಟರು, ಔಷಧಿ ಕೊಟ್ಟರು.

‘ಫೀಜು ಕೊಡೋಕೆ ನನ್ನತ್ರ ಏನೂ ಇಲ್ಲ ಸ್ವಾಮೀ...’ ಅಂದಿತು ಅಜ್ಜಿ.

ರಾಮರಾಯರು ವೃದ್ಧೆಯ ಕೈಗೆ ಹತ್ತು ರುಪಾಯಿ ಬಸ್​ಛಾರ್ಜಿಗೆ ಅಂತ ಕೊಟ್ಟು, ರೋಷ್ ಕಂಪನಿಯವನು ಆಗಷ್ಟೆ ಕೊಟ್ಟ ಹೊಚ್ಚ ಹೊಸ ಟವೆಲು ಕೊಡವಿ ಹೊದಿಸಿ ‘ಜ್ವರ ವಾಸಿಯಾಗ್ತದೆ ಹೋಗು’ ಅಂದರು.

ಅದರಲ್ಲಿ ಅವರ ದಯೆಯಿತ್ತು, ಕರುಣೆಯಿತ್ತು. ಜೊತೆಗೆ, ಅಸಹಜವಲ್ಲದ ಅನಾರೋಗ್ಯಕಾರಿಯೂ ಅಲ್ಲದ ಚಿಕ್ಕದೊಂದು ವ್ಯಾಪಾರೀ ಸ್ವಾರ್ಥವೂ ಇತ್ತು. ಕಂಪನಿಯವನು ಕೊಟ್ಟ ಟರ್ಕಿ ಟವಲಿನಂಥವು ಮನೆಯಲ್ಲಿ ಹತ್ತಾರಿವೆ. ಬೇಕು ಅಂದರೆ ಅಂಥ ಟವಲು ಮತ್ತೂ ಹತ್ತು ಕೊಳ್ಳಬಹುದು. ಇಲ್ಲಿ ವೃದ್ಧೆ ಚಳಿಯಲ್ಲಿ ನಡುಗುತ್ತಿದ್ದಾಳೆ. ಈಕೆಗೆ ಹೊದಿಕೆಯ need ಇದೆ. ಬಸ್​ಛಾರ್ಜಿಗೆ ಹತ್ತು ರುಪಾಯಿ ಕೊಟ್ಟರೆ ಊರು ತಲುಪಿಕೊಳ್ಳುತ್ತಾಳೆ.need ಆದರೆ ಅಜ್ಜಿ ತಾನು ಬದುಕಿರುವ ತನಕ ಡಾಕ್ಟ್ರು ಸ್ವಾಮಿಯ ಗುಣಗಾನ ಮಾಡುತ್ತಾಳೆ. ಊರ ತುಂಬ ಹೇಳಿಕೊಂಡು ಬರುತ್ತಾಳೆ. ಬಾಯಿಂದ ಬಾಯಿಗೆ ವೈದ್ಯರ ಹೆಸರು, ಒಳ್ಳೆತನ, ಕೈಗುಣ, ಕೀರ್ತಿ ಹಬ್ಬುತ್ತವೆ. ಅವರು ಹಣೆಗೆ ಹಚ್ಚಿದ ಅಂಗಾರ, ಕೈಗೆ ಕಟ್ಟಿದ ದಾರ ಕೆಲಸ ಮಾಡುತ್ತವೆಯೋ ಇಲ್ಲವೋ? ಮಂತ್ರ ಕೆಲಸ ಮಾಡುತ್ತದೋ ಇಲ್ಲವೋ? ಔಷಧಿಯಂತೂ ಕೆಲಸ ಮಾಡುತ್ತದೆ. ಇವತ್ತಿನ ಮಟ್ಟಿಗೆ ಟವಲು ಹೊದಿಕೆಯಾಗುತ್ತದೆ. ಹತ್ತು ರುಪಾಯಿ ಆಕೆಯನ್ನು ಊರು ತಲುಪಿಸುತ್ತದೆ. ರಾಮರಾಯರು ಖರ್ಚು ಅಂತ ಮಾಡಿಕೊಂಡದ್ದು ಎರಡು ಚಿಟಿಕೆ ಔಷಧಿ, ಹತ್ತು ರುಪಾಯಿ, ತಟುಗು ಒಳ್ಳೇತನ.

ಇದನ್ನ ನೀವು ನಾಟಕವೆನ್ನಬಹುದು. ಆದರೆ ಅದು ನಿರುಪದ್ರವಿ ನಾಟಕ. ನಾನದನ್ನು ದಯೆ, ಅನುಕಂಪಗಳೊಂದಿಗೆ ಬೆರೆತ street smartness ಅನ್ನುತ್ತೇನೆ. ನಮ್ಮ ಬಗ್ಗೆ ನಾಲ್ಕು ಮಂದಿ ಒಳ್ಳೆಯ ಮಾತಾಡಲಿ ಅಂತ ಬಯಸುವುದು ತಪ್ಪಲ್ಲ. ಒಳ್ಳೆಯ ಮಾತಿಗೆ ಅರ್ಹವಾಗುವಂಥ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದೂ ತಪ್ಪಲ್ಲ. ಆ ಚಿಕ್ಕಪುಟ್ಟ ಕೆಲಸಗಳು ಎಲ್ಲೋ ಒಂದು ಕಡೆ ಸಣ್ಣಗೆ ಪಬ್ಲಿಸಿಟಿ ಮಟೀರಿಯಲ್ಲಿನಂತೆ ಕೆಲಸ ಮಾಡಿದರೆ, ಮಾಡಲಿ ಅಂತ ಯಾರಾದರೂ ನಿರೀಕ್ಷಿಸಿದರೆ ಅದು ಕೂಡ ತಪ್ಪಲ್ಲ. ತನ್ನ ಮನೆಯಿರುವ ಬೀದಿಯ ಇಕ್ಕೆಲಗಳಿಗೂ ಮುನಿಸಿಪಾಲಿಟಿಯವರು ಹಚ್ಚಿಹೋದ ಸಸಿಗಳಿಗೆ ನೀರು ಹಾಕಿ, ಅವು ಮರಗಳಾಗುವಂತೆ ಮಾಡಿ ಕೂಡ ಒಬ್ಬ ವ್ಯಕ್ತಿ ಪ್ರಚಾರಕ್ಕೆ ಮುಂದಾಗದೆ ಮನೆಯಲ್ಲೇ, ಮರೆಯಲ್ಲೇ ಉಳಿದರೆ, ಆತ ಸಂತ. ತಾನು ನೀರು ಹಾಕಿದ, ಬೆಳೆಸಿದ ಮರಗಳಿಗೆ ತನ್ನ ಸಂಸ್ಥೆಯ ಚಿಕ್ಕದೊಂದು ತಗಡಿನ ಬೋರ್ಡ ಹೊಡೆಸಿದರೆ street smartness!

ಪುಗಸಟ್ಟೆಯಾಗಿ ಯಾರೂ ಏನನ್ನೂ ಮಾಡಲು ಮುಂದಾಗದಂತಹ ಕಾಲವಿದು. ಪ್ರತಿಯೊಬ್ಬನೂ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರಕ್ಕೆ ಕಂದಾಯ ಕಟ್ಟುತ್ತಾನಾದ್ದರಿಂದ ರಸ್ತೆ ಪಕ್ಕದ ಮರಕ್ಕೆ ನೀರು ಹನಿಸುವ, ವೃದ್ಧೆಯನ್ನು ಊರು ಮುಟ್ಟಿಸುವ, ಬೀದಿನಾಯಿಗೆ ವ್ಯಾಕ್ಸೀನು ಹಾಕಿಸುವ ಮುಂತಾದ ಕೆಲಸಗಳನ್ನು ‘ಸರ್ಕಾರ ಮಾಡಲಿ’ ಅಂತ ತೀರ್ವನಿಸಿರುತ್ತಾನೆ. ವಿದ್ಯೆ ಮತ್ತು ವೇಳೆಗೆ ಬಂದವರಿಗೆ ಊಟ, ಜೊತೆಗೆ ಅಧ್ಯಾತ್ಮ ಒದಗಿಸಲೆಂದೇ ಅಸ್ತಿತ್ವಕ್ಕೆ ಬಂದ ಕೆಲ ಮಠ ಮಾನ್ಯಗಳು ಮೂರನ್ನೂ ಮಾರುತ್ತವೆ. ಮಠಕ್ಕೆ ಮೆಡಿಕಲ್ ಕಾಲೇಜು ಬೇಕು. ಅಧ್ಯಾತ್ಮ ಬಿಡಿ: ಅದರಷ್ಟು ಸೇಲಬಲ್ ಕಮಾಡಿಟಿ ಇವತ್ತು ಜಗತ್ತಿನಲ್ಲೇ ಇಲ್ಲ. ಇಂಥವರ ಮಧ್ಯೆ, ಬಡವರ ಮಕ್ಕಳನ್ನು ಮನೆಯ ಜಗುಲಿ ಮೇಲೆ ಕೂಡಿಸಿಕೊಂಡು ಪಾಠ ಹೇಳುವ ಬಡ ಮೇಷ್ಟ್ರು ದೊಡ್ಡ ಸಂತನೆನ್ನಿಸುತ್ತಾನೆ. ಕೆಲಸದವಳ ಮಗನಿಗೆ ಊಟ ಹಾಕಿ, ತನ್ನ ಮಗನದೊಂದು ಹಳೇ ಅಂಗಿಕೊಡುವ ಗೃಹಿಣಿ ಶ್ರೇಷ್ಠಳೆನಿಸುತ್ತಾಳೆ. ಅಂಥವರು ತಾವು ಮಾಡಿದುದನ್ನು ನಾಲ್ಕು ಮಂದಿಗೆ ಹೇಳಿಕೊಂಡು ಬಂದರೆ, ಅದನ್ನು ಖಂಡಿಸಬೇಕಿಲ್ಲ ಎಂಬುದು ನನ್ನ ವಾದ. ‘ಆ ಮೇಷ್ಟ್ರು ಸಿಗರೇಟ್ ಸೇದ್ತಾನೆ ಗೊತ್ತಾ?’ ಅಂತ ಆತನದೊಂದು ದೌರ್ಬಲ್ಯವನ್ನು ಬುಟ್ಟಿಯೊಳಗಿನಿಂದ ಹಾವನ್ನು ಈಚೆಗೆ ತೆಗೆದಂತೆ ತೆಗೆಯಬೇಕಿಲ್ಲ.

ನನಗೆ ಅಲ್ಲಾಬಕ್ಷ್ ಅಂತ ಒಬ್ಬ ಮಿತ್ರನಿದ್ದ. ಅವನಿಗೊಂದು ತೆರನಾದ ತಿಕ್ಕಲು. ತಿಂಗಳಿಗೊಂದು ಸ್ಲಮ್ ಹುಡುಕುತ್ತಿದ್ದ. ಅದರ ಮಧ್ಯೆ ಇರುವ ಚಿಕ್ಕ ಕ್ಲಿನಿಕ್ಕೊಂದರಲ್ಲಿ ಸುಮ್ಮನೆ ಅರ್ಧಗಂಟೆ ಕೂತು ಆ ಡಾಕ್ಟರನೊಂದಿಗೆ ಹರಟುತ್ತಿದ್ದ. ಬರುವ ರೋಗಿಗಳಲ್ಲಿ ಬಡವರೆಷ್ಟು, ಅವರ ಔಷಧಿಗಳಿಗೆಷ್ಟಾಗುತ್ತದೆ, ಆ ಮೊತ್ತ ತಿಂಗಳಿಗೆಷ್ಟಾಗುತ್ತದೆ ಅಂತೆಲ್ಲ ತಿಳಿದುಕೊಳ್ಳುತ್ತಿದ್ದ. ನಂತರ ಹತ್ತಿರದ ಮೆಡಿಕಲ್ ಸ್ಟೋರಿಗೆ ಹೋಗಿ ಒಂದಷ್ಟು ಹಣ ಅಂತ ಕೊಟ್ಟು ‘ಆ ಡಾಕ್ಟರು ಯಾರಾದರೂ ಬಡವರಿಗೆ ಕೊಟ್ಟ ಪ್ರಿಸ್ಕ್ರಿಪ್ಷನ್ ಬಂದರೆ, ಈ ದುಡ್ಡಿನಲ್ಲಿ ಅವರಿಗೆ ಔಷಧಿ ಕೊಡಿ’ ಅಂತ ಹೇಳಿ ಬರುತ್ತಿದ್ದ. ಇಂಥ ಮೆಡಿಕಲ್ ಷಾಪಿಗೆ ಅವರನ್ನು ಕಳಿಸಿ ಅಂತ ಡಾಕ್ಟರಿಗೂ ಹೇಳಿರುತ್ತಿದ್ದ.

‘ಇದರಿಂದ ನಿನಗೇನಯ್ಯಾ ಬರುತ್ತೆ?’ ಅಂತ ಅಲ್ಲಾಬಕ್ಷ್ ನನ್ನು ಒಮ್ಮೆ ಕೇಳಿದೆ. ಅವನು ಸುಮ್ಮನೆ ನಕ್ಕ.

‘ವ್ಯಾಪಾರದಲ್ಲಿರೋರು ನಾವು. ಒಳ್ಳೆಯದೂ ಮಾಡ್ತೀವಿ, ಕೆಟ್ಟದೂ ಮಾಡ್ತೀವಿ. ದುಡ್ಡು ಅನ್ನೋದು ಹಂಗೂ ಬರುತ್ತೆ. ಹಿಂಗೂ ಬರುತ್ತೆ. ಡೈರೆಕ್ಟಾಗಿ ತಗೊಂಡೋಗಿ ಯಾರಿಗಾದರೂ ಕೊಟ್ರೆ ‘ಯಾಕೆ ಕೊಡ್ತಿದಾನೆ? ಏನು ಸ್ವಾರ್ಥ?’ ಅಂದ್ಕೋತಾರೆ. ಯಾರಿಗೆ ಕೊಡ್ತಿದೀವಿ ಅಂತ ಗೊತ್ತಾದರೆ ನಮಗೂ, ‘ಅವರಿಂದ ನಮಗೇನಾಗುತ್ತೆ?’ ಅಂತ ಇಣುಕಿ ನೋಡೋ ಹಾಗಾಗುತ್ತೆ. ಪರಿಚಿತರಿಗೆ ಉಪಕಾರ ಮಾಡಿದರೆ, ‘ಅವನಿಗಿಷ್ಟೆಲ್ಲ ಮಾಡಿದೆ’ ಅಂತ ಸಾಯೋತಂಕಾ ನಾವೇ ಹೇಳಿಕೊಳ್ತಾ ಇರ್ತೀವಿ. ಒಂದೇ ಸ್ಲಮ್ಲ್ಲಿ, ಒಂದೇ ಮೆಡಿಕಲ್ ಸ್ಟೋರಿಗೆ ಪ್ರತೀ ತಿಂಗಳು ಕೊಡ್ತಾ ಹೋದರೆ ‘ಇಲ್ಲಿ ಎಲೆಕ್ಷನ್ನಿಗೆ ನಿಲ್ತೀಯಾ?’ ಅಂತ ಕೇಳ್ತಾರೆ. ಆರು ತಿಂಗಳು ಕಂಟಿನುಯಸ್ ಆಗಿ ಕಾಸು ಕೊಟ್ರೆ ಒಂದೋ, ಮೆಡಿಕಲ್ ಸ್ಟೋರ್​ನವನು ಕಳ್ಳ ಆಗ್ತಾನೆ. ಅಥವಾ ಅವನು ಡಾಕ್ಟ್ರು ಇಬ್ರೂ ಸೇರಿಕೊಂಡೇ ಕಳ್ಳರಾಗ್ತಾರೆ. ಅದಕ್ಕೇ ಸ್ಲಮ್ ಬದಲಾಯಿಸ್ತೀನಿ. ಒಂದೇ ಸ್ವಾರ್ಥ ಅಂದ್ರೆ, ನಮ್ಮ ಜಾತಿಯವರೇ ಹೆಚ್ಚಾಗಿರೋ ಸ್ಲಮ್ ಹುಡುಕ್ತೀನಿ!’ ಇದು ಅಲ್ಲಾಬಕ್ಷ್​ನ ವಿವರಣೆ.

‘ನಾನು ವ್ಯಾಪಾರ ಮಾಡಲ್ಲ. ಅಂಥ ದುಡ್ಡೂ ಬರಲ್ಲ. ಹೀಗಾಗಿ ಸ್ಲಮ್ಮೂ ಹುಡುಕಲ್ಲ. ಅದರಲ್ಲಿ ನಮ್ಮವರಿದ್ದಾರಾ ಅಂತಾನೂ ನೋಡಲ್ಲ. ನಾನು ಯಾರಿಗೂ ಏನೂ ಕೊಡಲ್ಲ. ನನ್ನ ಆರೋಗ್ಯಕ್ಕೆ ಬೇಕಾದಷ್ಟು ದುಡ್ಡು ಎತ್ತಿಟ್ಕೊಂಡಿದೀನಿ. ಮೇಲೆ ಇನ್ಶೂರೆನ್ಸ್ ಮಾಡಿಸಿದೀನಿ. ಯಾಕಿದ್ದೀತು ಇಂಥದ್ದೆಲ್ಲ ಗೊಡವೆ?’

ಇದು ಇನ್ನೊಬ್ಬ ಮಿತ್ರನ ಅನಿಸಿಕೆ. ತಪು್ಪ ಯಾರಲ್ಲಿ ಹುಡುಕಲಿ?

(ಲೇಖಕರು ಹಿರಿಯ ಪತ್ರಕರ್ತರು)