| ಭಾರತಿ ಎ. ಕೊಪ್ಪ
ಶ್ರೀರಾಮಚಂದ್ರನು ವನವಾಸಕ್ಕೆ ತೆರಳಿದ್ದಾಗ, ಭರತನು ನಂದಿಗ್ರಾಮದಲ್ಲಿ ದರ್ಬಾರನ್ನು ಆಯೋಜಿಸಿದ್ದ. ಅಲ್ಲಿ ನ್ಯಾಯ ದೊರಕಿಸಿಕೊಳ್ಳಲು ಸೇರಿದ್ದ ಜನಸಮೂಹಕ್ಕೆ, "ಎಲ್ಲರೂ ಸಾಲಾಗಿ ನಿಲ್ಲಿರಿ, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು' ಎಂದು ಮಂತ್ರಿ ೂಷಿಸಿದ. ಜನರು ಸಾಲಾಗಿ ನಿಲ್ಲತೊಡಗಿದರು. ಆಗ ಜನಸಮೂಹದಲ್ಲಿದ್ದ ಜಾಬಾಲಿ ಮಹರ್ಷಿಗಳು ಏರುಧ್ವನಿಯಲ್ಲಿ "ಇವೆಲ್ಲವೂ ವ್ಯರ್ಥಕಸರತ್ತು. ಸದೃಢ, ಬಲಶಾಲಿ, ನಿರುದ್ಯೋಗಿಯಾದವನಿಗೇ ಇಲ್ಲಿ ನ್ಯಾಯ ದೊರೆಯುವುದು' ಎಂದರು. ದಿವಾನರಿಗೆ ಈ ಮಾತು ಅರ್ಥವಾಗಲಿಲ್ಲ. ಮಾತಿನ ಅರ್ಥ ತಿಳಿಸಿ ಹೇಳುವಂತೆ ಮಂತ್ರಿಯು ಮುನಿವರ್ಯರಿಗೆ ವಿನಂತಿಸಿದರು. ಆಗ "ವತ್ಸ, ನಿರುದ್ಯೋಗಿಯಾದವನಿಗೆ ಮಾಡಲು ಕೆಲಸವಿರುವುದಿಲ್ಲ. ಅಂಥವನು ಬೇಗ ಬಂದು ಸಾಲಿನಲ್ಲಿ ನಿಲ್ಲುತ್ತಾನೆ. ಬಲಶಾಲಿಯಾದವನು ತನ್ನ ಬಲದಿಂದ ಇತರರನ್ನು ಪಕ್ಕಕ್ಕೆ ತಳ್ಳಿ ನಿಲ್ಲುತ್ತಾನೆ. ಸದಾಕಾಲ ಕಾಯೋರ್ನ್ಮುಖನಾಗಿರುವವನು, ಅನಾರೋಗ್ಯ ಪೀಡಿತರು, ವೃದ್ಧರು ಮತ್ತು ದುರ್ಬಲರು ಮೊದಲು ಬಂದು ನಿಲ್ಲಲು ಹೇಗೆ ಸಾಧ್ಯ? ಬಲಶಾಲಿಗಳು ಅಥವಾ ಸೋಮಾರಿಗಳಿಗೇ ನ್ಯಾಯ. ಇದೆಂತಹ ನ್ಯಾಯ?' ಎಂದು ಮಹರ್ಷಿಗಳು ಹೇಳಿದರು. ಮಂತ್ರಿಯ ಬಳಿ ಉತ್ತರ ಇರಲಿಲ್ಲ. ತಣದಿಂದಲೇ ವೃದ್ಧರನ್ನು, ಅಂಗವಿಕಲರನ್ನು, ದುರ್ಬಲರನ್ನು ಮತ್ತು ಅನಾರೋಗ್ಯ ಪೀಡಿತರನ್ನು ಸಾಲಿನಲ್ಲಿ ಮೊದಲು ನಿಲ್ಲಿಸಬೇಕೆಂದು ಆದೇಶ ಹೊರಡಿಸಲಾಯಿತು. ನಂತರ ಇದೇ ನ್ಯಾಯವ್ಯವಸ್ಥೆ ಆಡಳಿತದಲ್ಲಿ ಮುಂದುವರಿಯಿತು.
ಜಾಬಾಲಿ ಮಹರ್ಷಿಗಳು ದಿವಾನರ ಕಣ್ಣು ತೆರೆಸಿದಂತೆ, ನಾವು ಕಣ್ಣು ತೆರೆದು ಈ ಸಮಾಜವನ್ನು ನೋಡಬೇಕು. ನಮ್ಮಲ್ಲಿ ಅಪರಿಮಿತ ಸಾಮರ್ಥ್ಯವಿದೆಯೆಂದಾದರೆ, ಆರ್ಥಿಕ, ಸಾಮಾಜಿಕವಾಗಿ ಸದೃಢವಾಗಿದ್ದೇವೆಂದಾದರೆ ದೀನ ದುರ್ಬಲರನ್ನು ತುಳಿದು ಬದುಕಬಾರದು, ತಿಳಿದು ಬದುಕಬೇಕು. "ಒಬ್ಬರು ಮತ್ತೊಬ್ಬರನ್ನು ತುಳಿದು ಬದುಕಬಾರದು, ತಿಳಿದು ಬದುಕಬೇಕು' ಎಂದು ದ.ರಾ.ಬೇಂದ್ರೆಯವರು ಕೂಡ ತಿಳಿದು ಬದುಕುವ ಸಾಮರಸ್ಯದ ಜೀವನದ ಗುಟ್ಟು ತಿಳಿಸಿದ್ದಾರೆ.
ನಮಗಿಂತ ಕಡಿಮೆ ಸುಖ&ಸಂತೋಷದಲ್ಲಿ ಇರುವವರನ್ನು ನಮ್ಮ ದರ್ಪ, ಅಹಂಕಾರದಿಂದ ಮನನೋಯಿಸಬಾರದು. ಎಲ್ಲ ಸಿರಿತನ, ಸೌಲಭ್ಯ, ಒಳಿತುಗಳೂ ನನಗೆ ಮಾತ್ರ ಸಿಗಬೇಕೆಂದು ನಮ್ಮ ಸಹವರ್ತಿಗಳನ್ನು ಹಿಂದಕ್ಕೆ ತಳ್ಳಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಸರದಿ ಸಾಲು ಪಾಲನೆ, ಕೆಲಸ&ಕಾರ್ಯಗಳ ಹಂಚಿಕೆ ಎಲ್ಲೆಡೆ ದುರ್ಬಲರಿಗೆ ಆದ್ಯತೆ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಜೀವನದ ನಾಗಾಲೋಟದಲ್ಲಿ ಇನಿತು ಸಹಾಯ, ಸಹಕಾರಗಳ ಮೂಲಕ ನಮಗಿಂತ ಕಷ್ಟದಲ್ಲಿ ಇರುವವರನ್ನು ಮೇಲೆತ್ತಬೇಕು. ನಮ್ಮ ಸಹವರ್ತಿಗಳನ್ನು ನಮಗೆ ಸರಿಸಮನಾಗಿ ಬೆಳೆಸುವುದರಲ್ಲಿ ಜೀವನದ ಸಂತೋಷ ಅಡಗಿದೆ.
ಎಲ್ಲರಲು ದೇವರನು ಕಾಣುತಿಹ ಧೀರನಿಗೆ
ಮೇಲು ಕೀಳುಗಳೆನುವ ತುಚ್ಛ ಭಾವವು ಬರದು
ಮಾಡುತಿಹ ಕಾಯಕದಲಿ ದೈವ ಬುದ್ಧಿಯು ಇರಲು
ಪಾಪದಾ ಭಯವಿರದು ಸಚ್ಚಿದಾನಂದ>
ಎಂಬ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರ ವಚನದ ಸಾಲುಗಳಂತೆ, "ನಾವು ಎಲ್ಲರಲ್ಲೂ ದೇವರನ್ನು ಕಾಣುತ್ತ, ಮೇಲು&ಕೀಳೆಂಬ ಭಾವ ತೊರೆದು, ನಮ್ಮ ಪ್ರತಿಯೊಂದು ಕೆಲಸದಲ್ಲೂ ದೇವರನ್ನು ಕಾಣುತ್ತ ಹೋದಾಗ ಪಾಪ ಭಯ ಸುಳಿಯುವುದಿಲ್ಲ. ಆಗ ಎಲ್ಲರನ್ನೂ ಸಮಾನ ಪ್ರೀತಿ, ವಿಶ್ವಾಸದಿಂದ ಕಾಣುವ ಮನೋಭೂಮಿಕೆ ನಮ್ಮದಾಗುತ್ತದೆ.
(ಲೇಖಕರು ಶಿಕರು ಮತ್ತು ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ: manollasavv@gmail.com)