ಅಂಕಣ

ನಾನಾರೆಂಬುದು ಅರಿವಾದರೆ...

| ಬೇಲೂರು ರಾಮಮೂರ್ತಿ

ಸಾಧು&ಸಂತರು ನಮಗೆ ಭಗವಂತನ ದರ್ಶನ ಮಾಡಿಸುತ್ತಾರೆ ಎನ್ನುವ ನಂಬಿಕೆ ನಮ್ಮಲ್ಲಿ ಅನೇಕರಿಗೆ ಇದೆ. ಅದು ಹಿಂದೆಯೂ ಇತ್ತು. ತಪ್ಪಿಲ್ಲ. ನಾವು ಒಂದು ಊರಿಗೆ ಹೋಗಬೇಕು ಎಂದರೆ ವಾಹನ ಯಾವುದಾದರೂ ಸರಿ ಅದನ್ನು ಚಲಾಯಿಸುವವನು ಯಾರಾದರೂ ಸರಿ, ಒಟ್ಟಿನಲ್ಲಿ ನಾವು ಆ ಊರಿಗೆ ಸೇರಬೇಕು. ಹಾಗೆಯೇ ನಾವು ಪರಬ್ರಹ್ಮನನ್ನು ಕಾಣಬೇಕು ಎಂದರೆ ಅದು ಸಾಧು&ಸಂತರಿಂದಲಾದರೂ ಆಗಬಹುದು, ಋಷಿಮುನಿಗಳಿಂದಲಾದರೂ ಆಗಬಹುದು, ನಮ್ಮ ಗುರುಗಳಿಂದಲಾದರೂ ಆಗಬಹುದು.

ಒಂದು ಸಾರಿ ಸ್ವಾಮಿ ರಾಮತೀರ್ಥರ ಬಳಿ ಒಬ್ಬ ಭಕ್ತ ಬಂದು, "ನೀವು ದೇವರನ್ನು ನೋಡಿದ್ದೀರಂತೆ. ನನಗೂ ನೀವು ಭಗವಂತನ ದರ್ಶನ ಮಾಡಿಸುತ್ತೀರಾ?' ಎಂದು ಕೇಳಿದ. ಅದಕ್ಕೆ ರಾಮತೀರ್ಥರು, "ಖಂಡಿತಾ ನಿನಗೆ ದೇವರನ್ನು ತೋರಿಸುತ್ತೇನೆ. ಆದರೆ ಅದಕ್ಕೆ ಮೊದಲು ನೀನು ಯಾರು ಎಂದು ನನಗೆ ಹೇಳಬೇಕು' ಎಂದರು. ಅದಕ್ಕೆ ಅವನು "ಅಗತ್ಯವಾಗಿ ಹೇಳುತ್ತೇನೆ' ಎಂದ. "ನೀನು ಯಾರು?' ಎಂದು ಕೇಳಿದರು, "ನನ್ನ ಹೆಸರು ರಾಜ ಗಜಪತಿರಾಜು' ಎಂದ. "ಅದು ನಿನ್ನ ದೇಹವನ್ನು ಗುರುತಿಸುವ ಹೆಸರು. ನೀನು ಯಾರು?' "ನಾನು ಒಂದು ಕಾರ್ಖಾನೆಯಲ್ಲಿ ನೌಕರ' ಎಂದ. "ಅಲ್ಲಿ ಅಸಂಖ್ಯಾತ ನೌಕರರಿದ್ದಾರೆ. ಅದು ನಿನ್ನ ಉದರಪೋಷಣೆಗೆ ಇಟ್ಟುಕೊಂಡಿರುವ ಅನುಕೂಲ. ಆ ಹುದ್ದೆಯಲ್ಲಿ ಹಿಂದೆಯೂ ಅನೇಕರಿದ್ದರು, ಮುಂದೆಯೂ ಅನೇಕರಿರುತ್ತಾರೆ. ಆ ಹುದ್ದೆ ನಿನಗೆ ಶಾಶ್ವತವಲ್ಲ' ಎಂದರು. "ನಾನು ನಮ್ಮ ಊರಿನ ಜಮೀನ್ದಾರ. ನನ್ನ ಹೆಸರಿನಲ್ಲಿ ನೂರು ಎಕರೆ ಜಮೀನಿದೆ' ಎಂದ. "ಅದು ನಿನ್ನ ಜಮೀನಲ್ಲ. ಒಂದು ಕಾಲದಲ್ಲಿ ನಿನ್ನ ತಂದೆಯದಾಗಿತ್ತು, ಮುಂದೆ ನಿನ್ನ ಮಕ್ಕಳದಾಗಲಿದೆ. ಭೂಮಿ ಪರಬ್ರಹ್ಮ ಸ್ವತ್ತು. ಹೀಗಾಗಿ ಜಮೀನ್ದಾರ ಎನ್ನುವುದಕ್ಕೆ ಅರ್ಥ ಇಲ್ಲ. ಈಗಲಾದರೂ ಹೇಳು ನೀನು ಯಾರು?' ಎಂದು ಕೇಳಿದರು. ಹೀಗೆ ಅವರಿಬ್ಬರ ನಡುವೆ ಸುಮಾರು ಅರ್ಧತಾಸಿಗೂ ಹೆಚ್ಚು ಸಂಭಾಷಣೆಗಳಾದ ಮೇಲೆ ಬಂದವನು ದಾರಿಗಾಣದೇ ಸುಮ್ಮನಾದ.

ಇಬ್ಬರ ನಡುವೆ ತುಸುಮೌನ. ನಂತರ ಗಜಪತಿರಾಜು, "ನಾನು ಏನು ಹೇಳಿದರೂ ನೀವು ನಾನು ಅದಲ್ಲ ಅದಲ್ಲ ಎನ್ನುತ್ತಿದ್ದೀರ. ಹಾಗಾದರೆ ನೀವೇ ಹೇಳಿ ನಾನು ಯಾರು ಎಂದು' ಅಂತ ಕೇಳಿದ. ಆಗ ರಾಮತೀರ್ಥರು ನಕ್ಕು& "ನೀನು ಪ್ರತಿದಿನ ಇಲ್ಲಿಗೆ ಬಂದು ಒಂದೆರಡು ತಾಸು ಅಲ್ಲಿ ಕೂತು ಧ್ಯಾನ ಮಾಡು. ಯಾವತ್ತು ನಿನಗೆ ನೀನು ಯಾರೆಂದು ಅರಿವಾಗುವುದೋ ಆಗ ದೇವರು ನಿನಗೆ ಕಾಣಿಸುತ್ತಾನೆ' ಎಂದರು.

ನಮಗೆ ಹೊರಗಿನ ಪ್ರಪಂಚವನ್ನು ಅರಿಯುವುದಕ್ಕಿಂತ ನಮ್ಮೊಳಗೆ ಇರುವ ಪರಬ್ರಹ್ಮನನ್ನು ಅರಿಯುವುದು ಮುಖ್ಯ. ಯಾವಾಗ ನಾವು ಯಾರೆಂದು ಅರಿವಾಗುವುದೋ ಆಗ ನಾವು ಇದುವರೆವಿಗೂ ಯಾವುದನ್ನು ನಾನು ಎಂದುಕೊಂಡಿದ್ದೆನೋ ಅದು ನಾನಲ್ಲ ಎಂದು ಅರಿವಾಗುತ್ತದೆ. ಆ ಅರಿವೇ ದೇವರು.

(ಲೇಖಕರು ಸಾಹಿತಿ)

(ಪ್ರತಿಕ್ರಿಯಿಸಿ: manollasavv@gmail.com)