ದೇವಸಭೆ ನಡೆಯುತ್ತಿತ್ತು. ಭೂಮಿದೇವಿ ಭೂಭಾರ ಹೆಚ್ಚಾಗುತ್ತಿರುವುದರ ಬಗ್ಗೆ, ಅದರಿಂದಾಗುತ್ತಿರುವ ತೊಂದರೆಗಳ ಬಗ್ಗೆ ಸಭೆಯ ಗಮನವನ್ನು ಸೆಳೆದಳು. ಆಗ ವಿಷ್ಣುವು ಅಭಯ ನೀಡಿ, ‘ಕಾಲಬಂದಾಗ ಅವತಾರಗಳನ್ನು ಹೊಂದಿ ದುಷ್ಟಶಕ್ತಿಗಳನ್ನು ಸಂಹಾರ ಮಾಡುತ್ತೇನೆ’ ಎಂದು ಭಾಷೆ ಕೊಟ್ಟನು. ಆಗ ಸೂರ್ಯವರ್ಚನೆಂಬ ಗಂಧರ್ವನು ಬಂದು, ‘ನೀನು ಬಹಳ ನಿಧಾನ. ಯಾವಾಗಲೂ ಕಾಲ-ಕಾಲ ಎಂದು ಕಾಲ ಕಳೆಯುತ್ತೀಯ’ ಎಂದು ವಿಷ್ಣುವನ್ನೇ ಹಂಗಿಸಿದ! ಸಭೆಯಲ್ಲಿ ಕುದಿಮೌನ. ಮುಂದೇನು ಕಾದಿದೆಯೋ ಎಂಬ ಆತಂಕ.
ಸೃಷ್ಟಿಕರ್ತ ಬ್ರಹ್ಮ ಕೋಪಗೊಂಡು, ‘ಶ್ರೀಮನ್ನಾರಾಯಣನನ್ನೇ ಹಂಗಿಸುವಂಥ ಅಹಂಕಾರಿಯಾದ ನೀನು ಭೂಲೋಕದಲ್ಲಿ ಜನಿಸಿ ಅಲ್ಲೇ ಮರಣಹೊಂದು’ ಎಂದು ಶಾಪ ಕೊಟ್ಟ. ನಂತರ ಸೂರ್ಯವರ್ಚ ಪರಿಪರಿಯಾಗಿ ಕ್ಷಮೆ ಕೇಳಲು, ‘ಕೊಟ್ಟ ಶಾಪವನ್ನು ಮರಳಿ ಪಡೆಯುವುದು ಅಸಾಧ್ಯ. ಆದರೆ, ನೀನು ಭೂಲೋಕದಲ್ಲಿ ಯಾವಾಗ ಮತ್ತೆ ಗರ್ವದ ಮಾತನ್ನು ಆಡುವೆಯೋ ಆಗ ವಿಷ್ಣುವಿನಿಂದಲೇ ನಿನಗೆ ಸಾವಾಗಲಿ’ ಎಂದು ತಿದ್ದಿದ. ಆ ಸೂರ್ಯವರ್ಚನೇ ಘಟೋತ್ಕಜನ ಮಗ ಬರ್ಬರಿಕನಾಗಿ ಭೂಲೋಕದಲ್ಲಿ ಜನಿಸಿದ. ಅವನು ತನ್ನ ಗುರುಗಳಿಂದ ಚಂಡಿಕೆಯ ಶಕ್ತಿಯಿದ್ದ ಅಕ್ಷಯಖಡ್ಗವನ್ನೇ ಪಡೆದು, ಅಹಂಕಾರಿಯಾದ.
ಮಹಾಭಾರತದ ಯುದ್ಧದ ಸಂದರ್ಭದಲ್ಲಿ, ಅವನು ಪಾಂಡವರ ಜೊತೆಯಾದನು. ಒಮ್ಮೆ ಶ್ರೀಕೃಷ್ಣನು ಪಾಂಡವರಲ್ಲಿ, ‘ನನ್ನ ಆಶೀರ್ವಾದ ನಿಮಗೆ ಇದ್ದೇ ಇದೆ. ನಿಮ್ಮ ಬಲಗಳ ಬಗ್ಗೆ ನೀವೇನು ಅರಿತಿದ್ದೀರಿ ಎಂಬುದನ್ನು ತಿಳಿಯಬಯಸುವೆ’ ಎಂದಾಗ, ಅಹಂಕಾರಿಯಾದ ಬರ್ಬರಿಕನು, ‘ಹೇ ಕೃಷ್ಣ! ನನಗೆ ನಿನ್ನ ಆಶೀರ್ವಾದದ ಅಗತ್ಯ ಇಲ್ಲ. ಈ ಅಕ್ಷಯಖಡ್ಗವು ಎಂತಹ ವೀರನನ್ನೂ ಸೋಲಿಸಬಲ್ಲದು’ ಎಂದು ಧಾಷ್ಟರ್್ಯದಿಂದ ನುಡಿದ. ಈ ಅಹಂಕಾರದ ನುಡಿಗಳನ್ನು ಕೇಳುತ್ತಲೇ ಭಗವಾನ್ ಶ್ರೀಕೃಷ್ಣನು ಚಕ್ರದಿಂದ ಅವನನ್ನು ಸಂಹರಿಸಿದ.
ಅಹಂಕಾರವು ಎಂಥವರನ್ನೂ ಆಕಾಶದಿಂದ ಪಾತಾಳಕ್ಕೆ ನೂಕಿ ಸರ್ವನಾಶಕ್ಕೆ ಕಾರಣವಾಗಬಲ್ಲದು. ಬರ್ಬರಿಕನ ಕಥೆಯಲ್ಲಿ ಸರ್ವಜ್ಞಾನಿಯಾದ ಶ್ರೀಕೃಷ್ಣ ಅವನನ್ನು ಸಂಹರಿಸಿದುದರ ಅರ್ಥ, ಅವನ ಅಹಂಕಾರವನ್ನು ಸಂಹರಿಸಿದ್ದು.
ಬಲವಂತನಾಗುವುದು ಜೀವನದ ಸಾಧನೆಯೇನೋ ನಿಜ. ಆದರೆ, ಆ ಸಾಧನೆ ಬದುಕಿನ ವೇದನೆ ಆಗಬಾರದು. ಬದಲಾಗಿ ಮುಂದಿನ ಬದುಕಿನ ಶೋಧನೆಯಾಗಬೇಕು, ಮೆಟ್ಟಲೇರುವ ಸಾಧನವಾಗಬೇಕು. ಸಾಧಿಸಿದ್ದು ಸಮಾಜಕ್ಕೆ ಉಪಯೋಗವಾಗಬೇಕು. ಎಷ್ಟೇ ಶಕ್ತಿವಂತನಾದರೂ ಭಗವಂತನ ಎದುರು ಶರಣಾಗತಿ ಹೊಂದಲೇಬೇಕು. ಶಕ್ತಿವಂತರಾದ ಪಾಂಡವರೇ ವಿನಮ್ರರಾಗಿ ನಿಂತಿರುವಾಗ ಬರ್ಬರಿಕನ ಗರ್ವ ಅವನನ್ನೇ ಬಲಿತೆಗೆದುಕೊಂಡಿತು. ಜ್ಞಾನ, ಸಾಧನಗಳ ಬಲವೇನೇ ಇರಲಿ, ಭಗವಂತನಲ್ಲಿ, ಶ್ರದ್ಧೆ, ವಿನಮ್ರತೆ ಇಲ್ಲವಾದಲ್ಲಿ ಆ ಜ್ಞಾನವಾಗಲಿ, ಸಾಧನವಾಗಲಿ ನಿಷ್ಪಲವಾಗುವುದು ಖಚಿತ ಎಂಬುದನ್ನು ಮರೆಯಬಾರದು.
| ಶ್ರೇಯಸ್ ರವಿ ಹೆಗಡೆ
(ಲೇಖಕ ಯಕ್ಷಗಾನದ ಬಾಲಕಲಾವಿದ)
(ಪ್ರತಿಕ್ರಿಯಿಸಿ: manollasavv@gmail.com)