ನಯನಾ ಭಿಡೆ
ಒಂದುಸಲ, ಬ್ರಹ್ಮದೇವರಲ್ಲಿ ದೇವತೆಗಳು, ರಾಕ್ಷಸರು ಮತ್ತು ಮನುಷ್ಯರು ಮೂವರೂ ಒಂದೇ ಸಮಯದಲ್ಲಿ ವಿದ್ಯೆ ಕಲಿಯಲು ಸೇರಿಕೊಂಡರು. ಸರಿ, ದೀರ್ಘಕಾಲದ ವಿದ್ಯೆ, ಎಲ್ಲರೂ ತಾಳ್ಮೆಯಿಂದ ಕಲಿತರು. ಮನುಷ್ಯರು ಹಾಗೂ ರಾಕ್ಷಸರಿಗಿಂತ ದೇವತೆಗಳಿಗೆ ಆವಾಗಾವಾಗ ಸ್ವಲ್ಪ ಕೆಲಸ ಜಾಸ್ತಿ. ವರುಣ ಸಕಾಲಕ್ಕೆ ಮಳೆ ಬರಿಸಬೇಕು. ಅಗ್ನಿ ತನ್ನ ಕೆಲಸ ಮಾಡಬೇಕು. ಅಶ್ವಿನಿದೇವತೆಗಳಿಗೆ, ಇಂದ್ರನಿಗೆ ಯಾವಾಗಲೂ ಒಂದಿಲ್ಲೊಂದು ಕೆಲಸ. ಹಾಗಾಗಿ, ಬ್ರಹ್ಮದೇವರ ವಿದ್ಯಾರ್ಥಿಗಳಾದ ಎಲ್ಲರೂ, ‘ಇನ್ನು ಈ ಶಿಕ್ಷಣ ಸಾಕು, ಬ್ರಹ್ಮದೇವರಲ್ಲಿ ಉಪದೇಶ ಬೇಡೋಣ’ ಎಂದು ನಿರ್ಧರಿಸಿ, ಅದರಂತೆ ಬಿನ್ನವಿಸಿಕೊಂಡರು. ಬ್ರಹ್ಮದೇವರಿಗೂ, ಈ ಮೂರು ವಿಧವಾದ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಕುಳ್ಳಿರಿಸಿ ವಿದ್ಯೆ ನೀಡುವುದು ಸವಾಲೇ ಆಗಿತ್ತು. ಅವರಿಗೂ ಖುಷಿಯಾಯಿತು. ಎಲ್ಲರಿಗೂ ‘ದ’ ಎಂದು ಒಂದೇ ಒಂದಕ್ಷರ ಉಪದೇಶಿಸಿದರು ಹಾಗೂ ‘ಒಂದು ವರುಷ ಕಳೆದ ನಂತರ ಬನ್ನಿ, ಯಾರು ಈ ಒಂದಕ್ಷರದ ಉಪದೇಶವನ್ನು ಅರ್ಥಮಾಡಿಕೊಂಡು ಬರುತ್ತೀರೋ ಅವರಿಗೆ ದೀರ್ಘ ಉಪದೇಶ ನೀಡುತ್ತೇನೆ’ ಎಂದರು. ಒಂದಕ್ಷರ ಉಪದೇಶಿಸಿದರೆ ಯಾರಿಗೆ ತಾನೇ ಅರ್ಥವಾದೀತು? ಒಂದು ವರ್ಷವೇನು, ಇವತ್ತಿಗೂ ದೀಘೋಪದೇಶ ಹೊಂದಲು ದೇವತೆಗಳು, ರಾಕ್ಷಸರು ಹಾಗೂ ಮನುಷ್ಯರು ಹೋಗಲೇ ಇಲ್ಲ. ಯಾಕೆಂದರೆ ಒಂದಕ್ಷರದ ಉಪದೇಶವೇ ಇನ್ನೂ ಅರ್ಥವಾಗಲಿಲ್ಲ ಈ ಪುಣ್ಯಾತ್ಮರಿಗೆ!
ನಾವೆಲ್ಲರೂ ಈಗ ಮನೆಗಳಲ್ಲಿ ಬಂಧಿಗಳಾಗಿದ್ದೇವೆ ನೋಡಿ. ನಾವಾದರೂ ಈ ಮೂರು ‘ದ’ ಕಾರಗಳನ್ನು ಅರ್ಥ ಮಾಡಿಕೊಳ್ಳಲು ಆಗುತ್ತದೋ ನೋಡೋಣ. ದೇವತೆಗಳಿಗೆ ಯಾವಾಗಲೂ ತಾವು ಅಮೃತವನ್ನು ಕುಡಿದವರು ಎಂಬ ಅಹಮಿಕೆ. ಹಾಗಾಗಿ ಬ್ರಹ್ಮ, ‘ನಿಮ್ಮ ಅಹಮಿಕೆಯನ್ನು ಬದಿಗಿಟ್ಟು ನಿಮ್ಮ ಕೆಲಸಗಳನ್ನು ಸಕಾಲಕ್ಕೆ ಮಾಡುವುದರಲ್ಲಿ ತಲ್ಲೀನರಾಗಿ. ಅಹಂಕಾರವನ್ನು ‘ದಮನ’ ಮಾಡುವ ಬಗ್ಗೆ ಯೋಚಿಸಿ’ ಎಂದು ಉಪದೇಶಿಸಿದ್ದು. ರಾಕ್ಷಸರಿಗೆ ಯಾವುದೇ ಜೀವಿಗಳ ಮೇಲೆ ಕನಿಕರ ಇಲ್ಲವೇ ಇಲ್ಲ. ಯಾವ ಪ್ರಾಣಿ ಎಲ್ಲಿ ಸಿಕ್ಕಿದರೂ ಹಿಡಿದು, ಹರಿದು ಮುಕ್ಕುವುದೊಂದೇ ಕೆಲಸ. ಹಾಗಾಗಿ ಸಕಲ ಜೀವಿಗಳಿಗೂ ಬದುಕುವ ಹಕ್ಕಿದೆ, ಆದ್ದರಿಂದ ‘ದಯೆ’ ಎಂಬ ಪದದ ಬಗ್ಗೆ ದಯವಿಟ್ಟು ಅರಿತುಕೊಳ್ಳಿ ಎಂದು ಉಪದೇಶಿಸಿದರು.
ಇನ್ನು ಮನುಷ್ಯರಾದ ನಾವುಗಳು, ಸ್ವಾರ್ಥದ ಸೂಟ್ಕೇಸನ್ನು ಕೈಯಲ್ಲಿ ಹಿಡಿದುಕೊಂಡೆ ಓಡಾಡುವವರು. ಬೇಕಾದರೆ ಈಗಿನ ಪರಿಸ್ಥಿತಿಗೇ ಹೊಂದಿಸಿಕೊಂಡರೆ, ಸುಮಾರಾಗಿ ಮೂರರಿಂದ ನಾಲ್ಕು ತಿಂಗಳಿಗಾಗುವಷ್ಟು ದವಸಧಾನ್ಯಗಳನ್ನು ಮನೆಯಲ್ಲಿ ಕೂಡಿಟ್ಟುಕೊಂಡು ಸುಮ್ಮನೆ ಕುಳಿತಿಲ್ಲವೇ? ಯಾರಾದರೂ ಕೇಳಿದರೆ ನಮ್ಮಲ್ಲೇನೂ ಇಲ್ಲವೆಂಬಂತೆ ನಾಟಕವಾಡುವುದರಲ್ಲೂ ನಿಸ್ಸೀಮರು! ಅದಕ್ಕೇ ಇರಬಹುದು ಬ್ರಹ್ಮದೇವರು ‘ದಾನ’ ಎಂಬ ಉಪದೇಶದ ಮೂಲಕ ನಮ್ಮನ್ನು ಎಚ್ಚರಿಸಿದ್ದು. ನಮ್ಮಲ್ಲಿ ಇರುವುದನ್ನು ಎಲ್ಲರಲ್ಲಿ ಹಂಚಿಕೊಂಡು, ದಯಾವಂತರಾಗಿ, ನಾವೇ ಶ್ರೇಷ್ಠರು ಎಂಬ ಅಹಂಕಾರದ ದಮನವನ್ನು ಮಾಡಿ ಜೀವಿಸಲು ಕಲಿಯೋಣ. ಒಂದಕ್ಷರದ ಉಪದೇಶವನ್ನು ಅರ್ಥಮಾಡಿಕೊಂಡರೂ ಬೇಕಾದಷ್ಟಾಯಿತು, ನಮಗೆ ದೊರೆತ ಈ ಮನುಷ್ಯ ಜನ್ಮ ಸಾರ್ಥಕವಾಗಲು. ಏನಂತೀರಿ?
(ಲೇಖಕಿ ಯಕ್ಷಗಾನ ಕಲಾವಿದೆ, ಹವ್ಯಾಸಿ ಬರಹಗಾರ್ತಿ)