ಬಾಲ್ಯದಲ್ಲಿ ಶಿರಸಿಯ ತೋಟದಲ್ಲಿ ಪುಟ್ಟ ಮಕ್ಕಳಾದ ನಮ್ಮನ್ನು ಕೈ ಹಿಡಿದು ಅಜ್ಜ ಮರದ ಮೇಲಿದ್ದ ಹೂವನ್ನು ತೋರಿಸಿ ಇದು ದ್ರೌಪದಿ ದಂಡೆ, ಇದು ಸೀತಾಳೆ ಎನ್ನುತ್ತಿದ್ದರು. ಆಗ ಪಕ್ಕದಲ್ಲಿದ್ದ ಅಜ್ಜಿ, ಸೀತೆಗೆ ಒಂದೇ ಗಂಡ;
ಇಲ್ಲಿರುವುದು ಹವ್ಯಕ ಸಮಾಜದ ಸೀಮಿತ ಪರಿಧಿಯೊಳಗಿನ ಕಥೆಗಳು ಅಥವಾ ವ್ಯಥೆಗಳು ಎಂದರೂ ತಪ್ಪಿಲ್ಲ. ಹದಿನೇಳು ಕಥೆಗಳ ಕಥಾಸಂಕಲನ ಇದು. ಎಲ್ಲ ಕತೆಗಳ ಪ್ರಮುಖ ಪಾತ್ರಗಳೂ ವಿಲಕ್ಷಣ ಸ್ವಭಾವ ಹೊಂದಿವೆ. ಕೊಂಕಣಿಚೌಡಿ, ಬೀಡಿ ಸುಬ್ಬಮ್ಮ, ಜಲದೇವತೆ ಕಲಾವತಕ್ಕ, ಪಾರ್ಲರ್ ಲಲಿತಕ್ಕ ಹೀಗೆ. ಮಹಿಳೆಯರನ್ನು ನಿರ್ದಿಷ್ಟ ನಿಯಮಗಳಲ್ಲಿ ಬಂಧಿಸಿಡುವ, ಮತ್ತು ಅದನ್ನು ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ದೇಶ-ಧರ್ಮ-ಕಾಲದ ಹಂಗಿಲ್ಲದೇ ಶತಶತಮಾನಗಳಿಂದ ನಡೆಸಿಕೊಂಡು ಬರಲಾಗಿದೆ. ಹಾಗೆಯೇ ಅದನ್ನು ಪ್ರತಿಭಟಿಸುವ ಕೆಲಸವೂ ನಡೆಯುತ್ತಲೇ ಇದೆ. ಆದರೆ ದಬ್ಬಾಳಿಕೆಯ ವಿರುದ್ಧದ ಪ್ರತಿಭಟನೆ ಅವರವರ ವ್ಯಕ್ತಿತ್ವ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಕೂಗಾಟ, ಜಗಳ, ಕಣ್ಣೀರು, ಮೌನ, ಉಪವಾಸ ಇವೆಲ್ಲವೂ! ಅದು ಫಲ ಕೊಟ್ಟಿತೇ ಎಂಬುದಕ್ಕಿಂತ ಪ್ರತಿಭಟಿಸುವ ಶಕ್ತಿ ಮಹಿಳೆಗಿದೆ ಎಂಬುದೇ ಕತ್ತಲಲ್ಲಿ ಆಶಾಕಿರಣ.
ಮುಖ್ಯಪಾತ್ರಗಳೇ ವಿಲಕ್ಷಣವಾಗಿರುವುದರಿಂದ ವರ್ತನೆಯೂ ವಿಚಿತ್ರವೇ. ಥಟ್ಟನೇ ಮಾನಸಿಕ ಅಸ್ವಸ್ಥರು ಎಂದು ಗುರುತಿಸಬಹುದು (ಹಳ್ಳಿಗಳಲ್ಲಾದರೆ ಹುಚ್ಚು ಎಂಬ ಹಣೆಪಟ್ಟಿ!). ಆದರೆ ಅವರ ಈ ವಿಲಕ್ಷಣತೆಗೆ ಕಾರಣವಾದ ಹಿನ್ನೆಲೆಯನ್ನು ಅರಿಯುತ್ತಾ ಹೋದಂತೆ ಸೂಕ್ಷ್ಮ ಮನಸ್ಸಿನ ಮೇಲಾದ ಆಘಾತ ಮತ್ತು ಅವುಗಳ ಪರಿಣಾಮ ಅರಿವಾಗುತ್ತದೆ. ಕೊಂಕಣಿಚೌಡಿ ಮತ್ತು ದುಗ್ಗತ್ತೆಯಲ್ಲಿ, ಆಕೆ ಚೆಂದವಾಗಿ ಸಂಸಾರ ಮಾಡಿಕೊಂಡಿದ್ದ ಗೃಹಿಣಿ. ಒಮ್ಮೆ ಗೆಳತಿ ಬಂದು ಮಾತನಾಡಿ ಹೋದ ನಂತರ ಅಪರಿಚಿತ ಕೊಂಕಣಿಯಲ್ಲಿ ಮಾತನಾಡುವ ಚೌಡಿಆಕೆಯ ಮೇಲೆ ಬರಲು ಆರಂಭಿಸಿದ್ದು, ನಂತರಮಾವ ಬಂದೊಡನೆ ಹೀಗಾಗುತ್ತಿದ್ದದ್ದು ಎಲ್ಲವೂ ಏನನ್ನೋ ಹೇಳಿಯೂ ಹೇಳದಂತೆ ತೆರೆದಿಡುತ್ತದೆ. ಹಾಗೆಯೇ ಗೋಡೆಯೊಂದಿಗೆ ಮಾತನಾಡುವ ಅವಳು ಕಥೆಯಲ್ಲಿ, ಚಪ್ಪಹರುಕತನದ ಯಂಕಜ್ಜನ ಹೆಂಡತಿ ತಾರುಣ್ಯದಲ್ಲಿ ಸುಂದರಿ, ಶ್ರೀಮಂತೆ, ಜಾಣೆ. ಆಕೆ ಗೋಡೆ ಕುಟ್ಟುವ, ಅದರೊಂದಿಗೆ ಮಾತನಾಡುವ ಅಮ್ಮಮ್ಮನಾಗಿದ್ದು ಹೇಗೆ ಎಂಬ ಕುತೂಹಲ ಮೂಡುತ್ತದೆ. ಆದರೆ ಇಡೀ ದಿನ ಮನೆಗೆಲಸ, ಗಂಡ-ಮಕ್ಕಳ ಸೇವೆ, ಕೊಟ್ಟಿಗೆ ಕೆಲಸ, ಗದ್ದೆ ನಾಟಿ, ಕೊನೆಕೊಯ್ಲು ಇವುಗಳಲ್ಲೇ ಸರಿದು ಹೋಗುತ್ತಿದ್ದ ಅವಳಿಗೂ ಮನಸ್ಸಿತ್ತು; ತನಗಾದ ಅನ್ಯಾಯವನ್ನು ಪ್ರತಿಭಟಿಸಬೇಕಿತ್ತು. ಎದುರಿಗಿದ್ದ ಗೋಡೆ ಮೂಲಕ ಕೈಲಾದ ಮಾರ್ಗವನ್ನು ಹುಡುಕಿಕೊಂಡಳು. ಅಂತೂ ಹಾಗೆಯೇ ಜೀವನ ಸಾಗಿಸಿ ಆಕೆ ಸತ್ತ ನಂತರ ಆಕೆಯ ಸೊಸೆಯೂ ಹೀಗೆ ಮಾಡುವುದರ ಕುರಿತು ಕಡೆಯಲ್ಲಿ ಬರುವ ಈಗಲೂ ಅಲ್ಲಿ ಗೋಡೆ ಇದೆ! ಎನ್ನುವ ಮಾತು ಮಹತ್ವದ್ದು. ತಂದೆಯ ಕೆಲಸ ಮಗ ಮುಂದುವರಿಸಿದರೆ ಅತ್ತೆಯ ಪ್ರತಿಭಟನೆಯನ್ನು ಸೊಸೆ ಮುಂದುವರಿಸುತ್ತಿದ್ದಾಳೆ. ಇಂದಲ್ಲಾ ನಾಳೆ ಗೋಡೆ ಬೀಳುತ್ತದೆ ಎಂಬ ಸಣ್ಣ ಭರವಸೆಯಷ್ಟೇ!
ಶೇಷಣ್ಣನ ಮಡದಿ ಸರಸೋತಕ್ಕ ಬಾವಿಯಲ್ಲಿ ತೇಲಿದ್ದು ಕಥೆಯಲ್ಲಿ, ಹದಿನಾರೂ ತುಂಬದ ಸುರಸುಂದರಿ ಸರಸ್ವತಿಯನ್ನು ನಲವತ್ತರ ಶೇಷಣ್ಣನಿಗೆ ಮದುವೆ ಮಾಡಿದ್ದಾಯ್ತು. ಅದೂ ಮನೆಗೆಲಸ ಮಾಡಲು, ಆತನ ಮಗು ನೋಡಿಕೊಳ್ಳಲು! ಆತ ಕೆಲ ವರ್ಷಗಳಲ್ಲಿಯೇ ಉರುಳು ಹಾಕಿಕೊಂಡು ಸತ್ತ. ಏರುಪ್ರಾಯದ ದೇಹ-ಮನಸ್ಸಿನ ಸರಸ್ವತಿಯ ಕಥೆ? ಗಂಡಸಿಗಾದರೆ ಹೆಣ್ಣಿಲ್ಲದೇ ಕಷ್ಟ ಎಂದು ಕಣ್ಣೀರಿಡುವ ಸಮಾಜದಲ್ಲಿ ಹೆಣ್ಣಿಗೆ ಎಲ್ಲಾ ರೀತಿ ನಿರ್ಬಂಧಗಳು. ಎಲ್ಲೋ ಇವೆಲ್ಲವನ್ನೂ ಪ್ರತಿಭಟಿಸಲು ಮೈದುನ, ಮಗ, ಆಳು ಹೀಗೆ ಎಲ್ಲರ ಸಂಸಾರದಲ್ಲಿ ಸಮ್ಮತವಲ್ಲದ ರೀತಿಯಲ್ಲಿ ಸರಸೋತಕ್ಕನ ಪ್ರವೇಶ. ಕಡೆಗೂ ಐವತ್ತರ ಸರಸೋತಕ್ಕ ಬಾವಿಯಲ್ಲಿ ತನ್ನ ಬಯಕೆಗಳೆಲ್ಲವನ್ನೂ ಉಸಿರುಗಟ್ಟಿಸಿ ತೇಲಿದಳು; ಎಲ್ಲರೂ ಬಹುಶಃ ನೆಮ್ಮದಿಯ ನಿಟ್ಟುಸಿರುಬಿಟ್ಟರು! ಸಣ್ಣಸದ್ದಿಗೂ ಬೆಚ್ಚುವ ಮೀನಾಕ್ಷಿಯಲ್ಲಿ ಮೂವತ್ತು ಮೀರಿದರೂ ಮದುವೆಯಾಗದ ಮೀನಾಕ್ಷಿ ಮುಖ್ಯ ಪಾತ್ರ. ಆದರೆ ಆಕೆ ಸೂತ್ರದ ಗೊಂಬೆಯಷ್ಟೇ. ಮೆಚ್ಚಿದ ಶಂಕ್ರಾ್ಯನನ್ನು ಮದುವೆಯಾಗಲು ಸಂಪದ್ರಾಯಸ್ಥ ಬುಡ್ಡಿ ಭಟ್ರು ಬಿಟ್ಟಾರೇ? ಈ ಸುಳಿವು ಸಿಕ್ಕಿದ್ದೇ ತಡ ಅದ್ಭುತ ಈಜುಗಾರ ನೀರಿನ ಸೆಳವಿಗೆ ಸಿಕ್ಕು ಸತ್ತ. ದಿಗ್ಭಂಧನಕ್ಕೊಳಗಾದ ಮೀನಾಕ್ಷಿ ಬದಲಾದಳು. ಮಂಕಾದ, ಊಟ-ತಿಂಡಿ ಮಾಡದೇ ಕೃಶಳಾದ ಮಗಳ ಬಗ್ಗೆ ಹೆದರದ ತಂದೆ-ತಾಯಿ, ಹೆದರಿದ್ದು ಆಕೆಯ ಹೊಟ್ಟೆಯಲ್ಲಿದ್ದ ಗಟ್ಟಿ ಪಿಂಡಕ್ಕೆ ಮತ್ತು ಇರುವ ಇನ್ನೂ ಮೂರು ಹೆಣ್ಣು ಮಕ್ಕಳ ಭವಿಷ್ಯಕ್ಕೆ!
ಹೀಗೆ ಇಲ್ಲಿರುವ ಎಲ್ಲಾ ಕಥೆಗಳನ್ನು ಸುಮ್ಮನೇ ಓದುತ್ತಾ ಹೋಗುವುದಕ್ಕಿಂತ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ ಮೂಲತಃ ಭಾವಜೀವಿಯಾದ ಮಹಿಳೆಯರ ಒಳತೋಟಿಯನ್ನು ಅರ್ಥೈಸಲಾಗದ ಸಮಾಜ-ಕುಟುಂಬದವರ ಅಸಾಮರ್ಥ್ಯ ಎದ್ದುಕಾಣುತ್ತದೆ. ಜತೆಗೇ ಸಮಾಜದಲ್ಲಿ ಮಹಿಳೆಗಿರುವ ಸ್ಥಾನವನ್ನೂ, ಅದಕ್ಕೆ ಅಂಜಿ ನಡೆಯಬೇಕಾದ ಅನಿವಾರ್ಯತೆ- ಕ್ರೌರ್ಯವನ್ನೂ ಸೂಚಿಸುತ್ತದೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗುವುದು ಮನಸ್ಸಿನೊಳಗೇ, ಮನೆಯ ನಾಲ್ಕು ಗೋಡೆಯ ಒಳಗೇ ನಡೆಯುವ ಸದ್ದಿಲ್ಲದ ಕತೆಗಳಾದರೂ ಅದನ್ನು ಮಹಿಳೆಯರು ಪ್ರತಿಭಟಿಸುವ ರೀತಿ. ವಿದ್ಯಾಭ್ಯಾಸ, ಆರ್ಥಿಕ ಬೆಂಬಲ, ಕುಟುಂಬದ ಸಹಕಾರ, ಕಾನೂನಿನ ಜ್ಞಾನ... ಇದ್ಯಾವುದೂ ಇಲ್ಲದ ಮಹಿಳೆಯರು ಸಮಾಜದ ಚೌಕಟ್ಟನ್ನು ಮೀರಬೇಕು ಎಂದು ನಿರೀಕ್ಷಿಸಲು ಅಸಾಧ್ಯ. ಹಾಗಿದ್ದೂ ಅದೇ ಚೌಕಟ್ಟಿನಲ್ಲಿದ್ದು ಅದರಿಂದ ಬಿಡುಗಡೆಯನ್ನು ಪಡೆಯುವ ಹುಡುಕಾಟದಲ್ಲಿವೆ ಇಲ್ಲಿನ ಎಲ್ಲಾ ಪಾತ್ರಗಳು. ಇಲ್ಲಿ ಲೇಖಕಿ ಬಾಲ್ಯದಲ್ಲಿ ಹತ್ತಿರದಿಂದ ಕಂಡ ಪಾತ್ರಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ, ಅದರೊಂದಿಗೇ ಎಲ್ಲವನ್ನೂ ನಿರೂಪಕರಾಗಿ ನಿರ್ಲಿಪ್ತತೆಯಿಂದ ಬರೆದಿದ್ದಾರೆ. ಹೀಗಾಗಿ ವಸ್ತುನಿಷ್ಠ ದಾಖಲೆ ಅಥವಾ ಬರೀ ಭಾವಾವೇಶ ತುಂಬಿದ ಕಲ್ಪನೆಯ ಕಥೆ ಎರಡೂ ಅಲ್ಲದ ನೈಜಜೀವನದ ವಿಶಿಷ್ಟ ಸೂಕ್ಷ್ಮ ಗ್ರಹಿಕೆಗಳು ಇವಾಗಿವೆ. ಹವ್ಯಕ ಸಮಾಜದ ಭಾಷೆ- ಪರಿಸರವನ್ನು ಸಮರ್ಥವಾಗಿ ಸಹಜವಾಗಿ ಬಳಸಿಕೊಂಡಿರುವ ಭಾರತಿಯವರು ಇಲ್ಲಿ ಬಳಸಿರುವ ಅನೇಕ ಪದಗಳು (ಬೂಚಿಕರ, ಒಬ್ಬಳಿಸು, ಪುಕ್ಷಾಟೆ, ಮೆತ್ತು ಇತ್ಯಾದಿ) ಈಗೀಗ ಮರೆಯಾಗುತ್ತಿವೆ. ಹವ್ಯಕ ಸಮಾಜದ ಪ್ರಾದೇಶಿಕ ನುಡಿಯನ್ನು ಅರಿಯುವ ನಿಟ್ಟಿನಲ್ಲಿಯೂ ಈ ಸಂಕಲನ ಸಹಕಾರಿ.
ಲೇಖಕಿಯ ಮನಸ್ಸಿನಾಳದಲ್ಲಿ ಸುಪ್ತವಾಗಿ ಹುದುಗಿದ್ದ ಕಥೆಗಳಿವು. ಬುದ್ಧಿ ಬೆಳೆದಂತೆ ಅವುಗಳನ್ನು ಹೊರಹೆಕ್ಕಿ ಈ ಕಥೆಗಳಲ್ಲಿ ಭಾವಪ್ರಧಾನವಾಗಿ ಚಿತ್ರಿಸಿದ್ದಾರೆ. ಅದರೊಂದಿಗೇ ಪ್ರತಿಭಟನೆ ಸರಿ; ಆದರೆ ಪರಿಹಾರ ಎಲ್ಲಿಂದ, ಹೇಗೆ ಎಂಬ ಬಹುಮುಖ್ಯ ಪ್ರಶ್ನೆಯೂ ಕೇಳುವಂತೆ ಮಾಡಿದ್ದಾರೆ. ಆ ಪ್ರಶ್ನೆಗೆ ಉತ್ತರವನ್ನು ನಾವೆಲ್ಲರೂ ಒಟ್ಟಾಗಿ ಕಂಡುಕೊಳ್ಳುವ ಅಗತ್ಯವಿದೆ. ಕಾಡಿನಲ್ಲಿರುವ ಸೀತಾಳೆ ದಂಡೆಯನ್ನು ಯಾರೂ ಮುಡಿಯುವುದಿಲ್ಲ, ಮರವನ್ನೇ ಆಶ್ರಯಿಸಿ ಬದುಕುವ ಅದು ಪರಾವಲಂಬಿ ಸಸ್ಯ. ಆದರೂ ತನ್ನ ಅಸ್ತಿತ್ವಕ್ಕಾಗಿ ಅದು ಹೋರಾಟ ನಡೆಸುತ್ತದೆ, ಎಲ್ಲಿಂದಲೋ ಸಾರ ಹೀರುತ್ತದೆ, ಏನೂ ಇಲ್ಲದೆಯೂ ಹೂವು ಅರಳಿಸುತ್ತದೆ. ಹೀಗೆ ಒಂದೇ ಕತೆಯಲ್ಲಿ ಬರುವ ಸೀತಾಳೆ ದಂಡೆ ಯೋಚಿಸಿದಷ್ಟೂ ನಾನಾರೂಪಕವಾಗಿ ನಿಲ್ಲುತ್ತದೆ. ಒಟ್ಟಿನಲ್ಲಿ ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳ ಮೂಲಕ ಮಹಿಳೆಯರ ಅಂತರಾಳದ ಕೂಗು ಮತ್ತು ಪ್ರತಿಭಟನೆಯ ಗಟ್ಟಿದನಿಯನ್ನು ಓದುಗರಿಗೆ ಕೇಳಿಸುವ ಉತ್ತಮ ಪ್ರಯತ್ನವನ್ನು ಭಾರತಿ ಹೆಗಡೆಯವರು ಮಾಡಿದ್ದಾರೆ.
ಪ್ರತಿಕ್ರಿಯಿಸಿ:sundayvijayavani@gmail.com