ಅಂಕಣ

ಜನಮತ| ಟ್ರಂಪ್ ಹೇಳಿಕೆಯ ಗೂಢಾರ್ಥವೇನು?

arunakunigal
ಡೊನಾಲ್ಡ್ ಟ್ರಂಪ್ ಮರು ಮತಎಣಿಕೆಗೆ ಕೋರಿಕೆ ಮಂಡಿಸುತ್ತ, ನ್ಯಾಯಾಲಯದ ಕದತಟ್ಟಿರುವುದು ಸುಲಭದಲ್ಲಿ ಸೋಲು ಒಪ್ಪಿಕೊಳ್ಳುವುದಿಲ್ಲವೆಂಬ ಮೊಂಡಾಟ ಮಾಡಿರುವುದು, ಎಲ್ಲವೂ ಜಗಜ್ಜಾಹೀರಾ ಗಿದೆ. ಆದರೂ ತಾನು ಸೋಲನ್ನು ಒಪ್ಪಿಕೊಂಡು ಅಧಿಕಾರ ಹಸ್ತಾಂತರಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದೂ ವರದಿಯಾಗಿದೆ.

ಇದೆಲ್ಲದರ ನಂತರ ಟ್ರಂಪ್ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಯಾವುದೋ ವ್ಯೂಹ ರಚನೆಯ ಹುನ್ನಾರದಲ್ಲಿರುವಂತೆ ಭಾಸವಾಗುತ್ತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶ ನಮ್ಮ ದೇಶಕ್ಕಿಂತ ಭಿನ್ನ. ಅಮೆರಿಕದಲ್ಲಿ ಬೇರೆ ಬೇರೆ ರಾಜ್ಯಕ್ಕೆ ಜನಸಂಖ್ಯೆಯ ಆಧಾರದಲ್ಲಿ ನಿರ್ದಿಷ್ಟ ಸಂಖ್ಯೆಯ ಸದಸ್ಯರಿದ್ದು, ಒಟ್ಟು 538 ಸದಸ್ಯರಿರುವ ಇಲೆಕ್ಟ್ರೋಲರ್ ಕಾಲೇಜಿನ ಸದಸ್ಯರನ್ನು ಮೊದಲೇ ನಾಮನಿರ್ದೇಶನ ಮಾಡಲಾಗಿರುತ್ತದೆ. ಮತಪತ್ರದಲ್ಲಿ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರೇ ಇದ್ದರೂ ಯಾವ ಅಭ್ಯರ್ಥಿಗೆ ಹೆಚ್ಚು ಮತ ದೊರಕುತ್ತದೆಯೋ ಅಷ್ಟು ಸದಸ್ಯರನ್ನು ಅಭ್ಯರ್ಥಿಯ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ. ಇದು ಮೊದಲ ಹಂತವಾಗಿರುತ್ತದೆ. ಅಂತಿಮ ಹಂತವಾಗಿ ಡಿಸೆಂಬರ್ 14ಕ್ಕೆ ನಡೆಯುವ ಚುನಾವಣೆಯಲ್ಲಿ ಇಲೆಕ್ಟ್ರೋಲರ್ ಕಾಲೇಜಿನ ಸದಸ್ಯರಿಂದ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಬಹುಮತ ಪಡೆಯುವವರು ಅಧ್ಯಕ್ಷರೆಂದು ಘೊಷಿಸಲ್ಪಡುತ್ತಾರೆ.

ಇಲೆಕ್ಟ್ರೋಲರ್ ಕಾಲೇಜಿನಲ್ಲಿ ಜೋ ಬೈಡೆನ್ ಪ್ರತಿನಿಧಿಸುವ ಡೆಮಾಕ್ರಟಿಕ್ ಪಕ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರೂ, ಅವರೆಲ್ಲರೂ ಬೈಡೆನ್ ಅವರಿಗೇ ಮತದಾನ ಮಾಡಬೇಕೆಂಬ ನಿಯಮವಿಲ್ಲ. ಆದ್ದರಿಂದಲೇ ಇಷ್ಟೆಲ್ಲ ತಕರಾರು ಮಾಡಿದರೂ ಟ್ರಂಪ್, ಇತ್ತೀಚೆಗೆ ಇಲೆಕ್ಟ್ರೋಲರ್ ಕಾಲೇಜು ಅನುಮೋದಿಸಿದರೆ ಅಧಿಕಾರ ಬಿಟ್ಟು ಕೊಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ನಮ್ಮ ದೇಶದ ರಾಜಕೀಯ ಭಾಷೆಯಲ್ಲಿ ಹೇಳುವುದಾದರೆ ‘ಕುದುರೆ ವ್ಯಾಪಾರ’ ನಡೆಸುವ ಉದ್ದೇಶವಿರಬಹುದೇ?

| ಮೋಹನದಾಸ ಕಿಣಿ ಕಾಪು