ಜನರಲ್ ಬಾಜ್ವಾ ಕುಟುಂಬದವರ ಆಸ್ತಿ, ಅಮೆರಿಕದ ಬ್ಯಾಂಕ್ಗಳಲ್ಲಿರುವ ಹಣದ ವಿವರಗಳು ಮಾಧ್ಯಮದಲ್ಲಿ ಕಾಣಸಿಕೊಂಡದ್ದರ ಹಿಂದಿರುವ ಕಾಣದ ಕೈ ಶರೀಫ್ ಸರ್ಕಾರದ್ದು ಎಂಬ ಗುಮಾನಿ ಇದೆ. ಬಾಜ್ವಾರ ಪತ್ನಿ ಮತ್ತು ಸೊಸೆಯ ನಡತೆಗಳ ಬಗ್ಗೆ ಅನುಮಾನ ಮೂಡಿಸುವ ವಿಡಿಯೋಗಳನ್ನು ಐಎಸ್ಐ ಗುಪ್ತವಾಗಿ ತಯಾರಿಸಿದೆ ಎಂದೂ ವರದಿಗಳು ಹೇಳುತ್ತವೆ.
ಇದೇ ನವೆಂಬರ್ 29ರಂದು ಸೇನಾ ದಂಡನಾಯಕರಾಗಿ ಎರಡನೆಯ ಅವಧಿ ಪೂರೈಸಿದ ಜನರಲ್ ಕಮರ್ ಜಾವೆದ್ ಬಾಜ್ವಾ ಅಭೂತಪೂರ್ವ ಮೂರನೆಯ ಅವಧಿಗೂ ಕಣ್ಣುಹಾಕಿದ್ದರು. ಅದನ್ನು ಪಡೆದುಕೊಳ್ಳುವುದು, ಪಾಕ್ ರಾಜಕಾರಣದ ಮೇಲೆ ಅವರಿಗಿದ್ದ ಹಿಡಿತದ ಹಿನ್ನೆಲೆಯಲ್ಲಿ, ಕಷ್ಟವೇನೂ ಆಗಿರಲಿಲ್ಲ. ಇಮ್ರಾನ್ ಖಾನ್ರನ್ನು ಕೆಳಗಿಳಿಸಿ ಶೆಹ್ಬಾಜ್ ಶರೀಫ್ರನ್ನು ಗದ್ದುಗೆಗೇರಿಸಿದವರೇ ಅವರು. ಹೀಗಾಗಿ ಋಣಸಂದಾಯವಾಗಿ ಅವರ ಮೂರನೆಯ ಅಧಿಕಾರಾವಧಿಯ ಬಯಕೆಗೆ ಪ್ರಧಾನಿ ಶರೀಫ್ ಪೂರಕವಾಗಿ ಸ್ಪಂದಿಸುವ ನಿರೀಕ್ಷೆಯಿತ್ತು. ಸೇನಾ ದಂಡನಾಯಕನಾಗಲು ಅಥವಾ ಆ ಸ್ಥಾನದಲ್ಲಿ ಮುಂದುವರಿಯಲು ಅಮೆರಿಕಾದ ಆಶೀರ್ವಾದ ಅಗತ್ಯವಿರುವ ವಾಸ್ತವದ ಹಿನ್ನೆಲೆಯಲ್ಲಿ ಬಾಜ್ವಾ ಶ್ವೇತಭವನಕ್ಕೆ ತೀರ್ಥಯಾತ್ರೆ ಕೈಗೊಂಡದ್ದೂ ಆಯಿತು. ಆದರೆ, ಬೆನ್ನ ಹಿಂದೆಯೇ ಬೇರೊಂದು ನಾಟಕದ ಪರದೆ ಮೇಲೇಳುತ್ತಿದ್ದುದು ಅವರಿಗೆ ತಿಳಿಯಲೇ ಇಲ್ಲ.
ಕೃತಜ್ಞತೆ ಎನ್ನುವುದು ಪಾಕಿಸ್ತಾನಿ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರದ ಪದ ಮತ್ತು ಸ್ವಭಾವ. ಇದುವರೆಗೆ ಅಲ್ಲಿ ಎಲ್ಲ ನಾಯಕರೂ ತಮಗೆ ಹಾಲೆರೆದ ಕೈಗಳನ್ನೇ ಕಚ್ಚಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ರಾಷ್ಟ್ರ ನಿರ್ವತೃ ಜಿನ್ನಾರನ್ನು ವಿಶ್ರಾಂತಿಯ ನೆಪದಲ್ಲಿ ರಾಜಧಾನಿಯಿಂದ ದೂರದ ಜಿಯಾರತ್ಗೆ ಕಳಿಸಿ, ನವರಾಷ್ಟ್ರದ ಎಲ್ಲ ಅಧಿಕಾರಗಳನ್ನು ಲಪಟಾಯಿಸಹೊರಟದ್ದು ಮೊದಲ ಪ್ರಧಾನಿ ಲಿಯಾಖತ್ ಆಲಿ ಖಾನ್. ಜಿನ್ನಾರ ಬಗ್ಗೆ ಖಾನ್ರ ಕೃತಘ್ನತೆ ಅದೆಷ್ಟರ ಮಟ್ಟಿಗಿತ್ತೆಂದರೆ ಸೆಪ್ಟೆಂಬರ್ 11, 1948ರಂದು ರಾಜಧಾನಿ ಕರಾಚಿಗೆ ಹಿಂತಿರುಗಿದಾಗ ಜಿನ್ನಾರನ್ನು ಬರಮಾಡಿಕೊಳ್ಳಲು ಮಾರಿಪುರ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಖಾನ್ ಆಗಲೀ, ಅವರ ಸಂಪುಟದ ಯಾರೊಬ್ಬರಾಗಲೀ ಹೋಗಲಿಲ್ಲ. ಜಿನ್ನಾರನ್ನು ಕರೆದೊಯ್ಯಲು ಬಂದದ್ದು ಚಾಲಕನೊಂದಿಗೆ ಆಂಬುಲೆನ್ಸ್ ಮಾತ್ರ. ಆ ವಾಹನವೂ ದಾರಿಯಲ್ಲಿ ಕೆಟ್ಟುಹೋಗಿ, ಮತೊಂದು ಬರಲು ಒಂದೂವರೆ ಗಂಟೆ ಹಿಡಿದು, ಜಿನ್ನಾ ನಿರ್ಗತಿಕನಂತೆ ರಸ್ತೆಯ ಬದಿಯಲ್ಲಿ ಮಲಗಿದ್ದರು! ಆ ರಾತ್ರಿಯೇ ಅವರು ಗತಿಸಿದರು. ನಂತರ 1951ರಲ್ಲಿ ಖಾನ್ರನ್ನು ಅವರೇ ನೇಮಕ ಮಾಡಿದ್ದ ಸೇನಾಧಿಕಾರಿಗಳು ಕೊಂದುಹಾಕಿದರು. 1958ರಲ್ಲಿ ಅಯೂಬ್ ಖಾನ್ ತನ್ನನ್ನು ದಂಡನಾಯಕನನ್ನಾಗಿ ನೇಮಿಸಿದ್ದ ಅಧ್ಯಕ್ಷ ಇಸ್ಕಂದರ್ ಮಿರ್ಜಾರನ್ನು ಕೆಳಗಿಳಿಸಿ ಎಂದೂ ಹಿಂತಿರುಗಬಾರದೆಂದು ಅಪ್ಪಣೆ ಮಾಡಿ ಲಂಡನ್ಗೆ ವಿಮಾನ ಹತ್ತಿಸಿ ಕಳಿಸಿಬಿಟ್ಟರು. ಹನ್ನೊಂದು ವರ್ಷಗಳ ನಂತರ ವಿದ್ಯಾರ್ಥಿ ಆಂದೋಲನ ಮತ್ತಿತರ ಸವಾಲುಗಳನ್ನು ನಿಭಾಯಿಸಲಾಗದೇ ಅಯೂಬ್ ಖಾನ್ ತಮ್ಮ ‘ವಿಧೇಯ’ ಯಾಹ್ಯಾ ಖಾನ್ರಿಗೆ ಅಧಿಕಾರ ವಹಿಸಿದಾಗ ಯಾಹ್ಯಾ ಸಾಹೇಬ ಗುರುವಿಗೇ ತಿರುಮಂತ್ರ ಹಾಕಿ ಮೂಲೆಗುಂಪು ಮಾಡಿದರು. ಅವರೇ ವಿಶ್ವಾಸವಿಟ್ಟು ನೇಮಕ ಮಾಡಿಕೊಂಡಿದ್ದ ವಿದೇಶಮಂತ್ರಿ ಝುುಲ್ಪಿಕಾರ್ ಆಲಿ ಭುಟ್ಟೋ ಮೂರೇ ವರ್ಷಗಳೊಳಗೆ ಅವರನ್ನೇ ಗೃಹಬಂಧನದಲ್ಲಿಟ್ಟರು.
ಐದು ವರ್ಷಗಳು ಗತಿಸುವ ಹೊತ್ತಿಗೆ ಭುಟ್ಟೋ ತಾವೇ ಸಾಕಿದ್ದ ಹದ್ದಿಗೆ ಬಲಿಯಾದರು. ಜಿಯಾ-ಉಲ್-ಹಕ್ ತನಗೆ ಸೇನಾ ದಂಡನಾಯಕನ ಪದವಿ ಕೊಟ್ಟವನನ್ನೇ ಕೆಳಗಿಳಿಸಿ ಗಲ್ಲಿಗೂ ಏರಿಸಿಬಿಟ್ಟರು. ಇದೇ ದುರಂತ ನಾಟಕ ಆಮೇಲೆ ನವಾಜ್ ಶರೀಫ್ ಮತ್ತು ಪರ್ವೆಜ್ ಮುಷರಫ್ ನಡುವೆಯೂ ಘಟಿಸಿತು. ಆಗ ಶರೀಫರ ತಲೆ ಕಾಪಾಡಿದ್ದು ಸೌದಿ ಅರೇಬಿಯಾದ ರಾಜಮನೆತನ. ಒಂದು ದಶಕ ಕಳೆಯುವುದರೊಳಗೇ ತಮಗೆ ಅಧಿಕಾರ ಕೊಟ್ಟಿದ್ದ ಮುಷರಫ್ರನ್ನೇ ಜನರಲ್ ಆಷ್ಪಾಕ್ ಪರ್ವೆಜ್ ಕಯಾನಿ ಕೈಬಿಟ್ಟು ಆ ಒಂದು ಕಾಲದ ಬಲಾಢ್ಯ ಸೇನಾ ಸರ್ವಾಧಿಕಾರಿ ಅಧಿಕಾರ ಕಳೆದುಕೊಂಡು ಗೃಹಬಂಧನಕ್ಕೊಳಗಾಗಿ, ಆಮೇಲೆ ದೇಶವನ್ನೇ ತೊರೆದು ಓಡಿಹೋಗಬೇಕಾಯಿತು. ಆಮೇಲೆ ಅದೇ ಕಯಾನಿ ಎರಡು ಅವಧಿಗಳಲ್ಲಿ ಅಧ್ಯಕ್ಷ ಜರ್ದಾರಿ ಮತ್ತು ಪ್ರಧಾನಿ ಯೂಸುಫ್ ರಾಜಾ ಗಿಲಾನಿ ತಲೆ ಮೇಲೆ ಕತ್ತಿ ಸದಾ ತೂಗುತ್ತಿರುವಂತೆ ಮಾಡಿದರು. ಅದೇ ಪ್ರಕ್ರಿಯೆ ಮುಂದುವರಿದು, ಜನರಲ್ ರಹೀಲ್ ಶರೀಫ್ ತಮಗೆ ಪದವಿಯಿತ್ತ ನವಾಜ್ ಶರೀಫ್ ವಿರುದ್ಧವೇ ರಾಷ್ಟ್ರವ್ಯಾಪಿ ಅಶಾಂತಿಯೆಬ್ಬಿಸಲು ಇಮ್ರಾನ್ ಖಾನ್ ಮತ್ತು ಮೌಲ್ವಿಗಳನ್ನು ಎತ್ತಿಕಟ್ಟಿದರು. ನವಾಜ್ ಶರೀಫ್ ಅದರಿಂದ ಹೇಗೋ ಬಚಾವಾಗಿ, ಬಾಜ್ವಾರನ್ನು ದಂಡನಾಯಕನನ್ನಾಗಿ ಮಾಡಿದರೆ ಈ ಚಾಲಾಕಿ ಮನುಷ್ಯ ಒಂದೇ ವರ್ಷದಲ್ಲಿ ಸುಪ್ರೀಂ ಕೋರ್ಟ್ ಅನ್ನು ಬಳಸಿಕೊಂಡು ಇದೇ ಶರೀಫ್ ರಾಜೀನಾಮೆ ನೀಡಿ ಒಂದಷ್ಟು ಕಾಲ ಕಾರಾಗೃಹ ಸೇರುವಂತೆ, ನಂತರ ಲಂಡನ್ಗೆ ಓಡಿಹೋಗುವಂತೆ ಮಾಡಿದರು. ಅಲ್ಲಿಗೆ ಪಾಕ್ ರಾಜಕಾರಣ ನಾಟಕದ ಕಥೆ-ಚಿತ್ರಕಥೆ-ನಿರ್ದೇಶನ ಎಲ್ಲವೂ ಅವರ ಕೈಗೆ ಬಂತು. ಹೀಗೆ ಬಾಜ್ವಾ ತಮ್ಮ ನೆಚ್ಚಿನ ಕುದುರೆ ಎಂದು ಇಮ್ರಾನ್ ಖಾನ್ರಿಗೆ ಪ್ರಧಾನಿ ಪಟ್ಟ ದೊರಕಿಸಿಕೊಟ್ಟರೆ ಈ ಮಾಜಿ ಕ್ರಿಕೆಟಿಗ ಕುದುರೆ ತುಸು ಹೆಚ್ಚೇ ಜಿಗಿದಾಡತೊಡಗಿದರು. ಆಗ ಬಾಜ್ವಾ ವಿರೋಧಪಕ್ಷಗಳನ್ನು ಒಟ್ಟುಗೂಡಿಸಿ, ಆಡಳಿತಾರೂಢ ಪಿಟಿಐ ಪಕ್ಷವನ್ನು ಒಡೆದು ಇಮ್ರಾನ್ ಖಾನ್ರನ್ನು ಕೆಳಗುರುಳಿಸಿ ಶೆಹ್ಬಾಜ್ ಶರೀಫ್ರಿಗೆ ಕುರ್ಚಿಯ ಹಾದಿ ಸುಗಮಗೊಳಿಸಿದರು. ಇದನ್ನೆಲ್ಲಾ ಅವರು ಮಾಡಿದ್ದು ಪಾಕ್ ರಾಜಕಾರಣದಲ್ಲಿ ತಾನು ಅಲಿಪ್ತ ಎಂದು ಹೇಳಿಕೊಳ್ಳುತ್ತಾ!
ಇಂತಹ ಪಾಕಿಸ್ತಾನದ ಇಂತಹ ಬಾಜ್ವಾ ಕೃತಜ್ಞತೆಯನ್ನು ಶೆಹ್ಬಾಜ್ ಶರೀಫ್ರಿಂದ ಬಯಸಿದ್ದು ಮೂರ್ಖತನ. ಅಮಾವಾಸ್ಯೆ ರಾತ್ರಿಯಲ್ಲಿ ಕತ್ತಲ ಕೋಣೆಯಲ್ಲಿ ಇಲ್ಲದ ಕರಿ ಬೆಕ್ಕಿಗಾಗಿ ಹುಡುಕಿದಂತೆ.
ಪ್ರಧಾನಿ ಶೆಹ್ಬಾಜ್ ಶರೀಫ್ ಜನರಲ್ ಬಾಜ್ವಾರ ಆಯ್ಕೆ, ನಿಜ. ಆದರೆ, ಶೆಹ್ಬಾಜ್ರ ನಿಷ್ಠೆ ಇರುವುದು ಅಣ್ಣ ನವಾಜ್ ಶರೀಫ್ರಲ್ಲಿ. ಪ್ರಧಾನಿಯಾದೊಡನೇ ಅವರು ಅಣ್ಣನ ಆಣತಿಗನುಗುಣವಾಗಿ ನಡೆಯತೊಡಗಿದರು. ನವಾಜ್ ಶರೀಫ್ ಅಮೆರಿಕಾಗಿಂತಲೂ ಸೌದಿ ಅರೇಬಿಯಾ ಮತ್ತು ಚೀನಾಗೆ ಹೆಚ್ಚು ಹತ್ತಿರ. ತನ್ನ ಕಷ್ಟಕಾಲದಲ್ಲಿ ಅಮೆರಿಕಾ ತನ್ನ ವಿರೋಧಿ ಮುಷರಫ್ ಬೆನ್ನಿಗೆ ನಿಂತದ್ದು, ತನ್ನ ಜೀವವುಳಿಸಿದ್ದು ಸೌದಿ ರಾಜಮನೆತನ ಎನ್ನುವುದನ್ನು ನವಾಜ್ ಶರೀಫ್ ಮರೆತಿಲ್ಲ. ಜತೆಗೆ ತಮ್ಮ 2013-17ರ ಅಧಿಕಾರಾವಧಿಯಲ್ಲಿ ಚೀನಾದ ಜತೆ ಸಿ-ಪೆಕ್ ಯೋಜನೆಯನ್ನಾರಂಭಿಸಿ, ಹೇರಳ ಚೀನೀ ಲಂಚವನ್ನು ಪಡೆದವರು. ಅವರ ಜತೆ ಚೀನೀ ಹಣಕ್ಕೆ ಕೈಯೊಡ್ಡಿದ ಮಗಳು ಮರಿಯಮ್ ಸಲ್ದಾರ್ ಈಗ ಚಿಕ್ಕಪ್ಪನ ಮಂತ್ರಿಮಂಡಳದ ಪ್ರಭಾವಶಾಲಿ ಸದಸ್ಯೆ. ಈ ತಂದೆ-ಮಗಳ ಮೂಲಕ ಚೀನಾವು ಪಾಕ್ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿ ಯಶಸ್ವಿಯಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಇದರ ಹೊಡೆತ ಬಿದ್ದದ್ದು ಬಾಜ್ವಾ ಮೇಲೆ. ಬಾಜ್ವಾ ಹೇಳಿಕೇಳಿ ಅಮೆರಿಕಾದ ಮನುಷ್ಯ. ಅವರ ಬದಲಿಗೆ ‘ತನ್ನ ಮನುಷ್ಯ’ನೊಬ್ಬ ಪಾಕ್ ಸೇನಾ ದಂಡನಾಯಕನಾದರೆ ಪ್ರಚಲಿತ ಪಾಕ್ ರಾಜಕೀಯ ಹಾಗೂ ಸೇನಾ ನಾಯಕತ್ವಗಳೆರಡೂ ತನ್ನ ಕೈಗೆ ಬೀಳುತ್ತವೆ ಎಂದು ಚೀನಾದ ಲೆಕ್ಕಾಚಾರ. ಅದರ ಕಣ್ಣಿಗೆ ಬಿದ್ದದ್ದು ಎಂದೂ ಅಮೆರಿಕಾಗೆ ಕಾಲಿಟ್ಟಿಲ್ಲದ, ತನ್ನಲ್ಲಿಗೆ ಬಂದು ತನ್ನ ಸೇನಾ ನಾಯಕರೊಂದಿಗೆ ಸ್ನೇಹ ಹೊಂದಿರುವ ಅಸೀಮ್ ಮುನೀರ್. ಅವರು ಚೀನಾದ ಜತೆಗೆ ಶರೀಫ್ ಕುಟುಂಬಕ್ಕೂ ಸಮ್ಮತವಾದದ್ದೊಂದು ಸ್ವಾರಸ್ಯಕರ ಕಥೆ. ಇಮ್ರಾನ್ ಖಾನ್ ಪ್ರಧಾನಿಯಾದಾಗ ಇದೇ ಮುನೀರ್ರನ್ನು ಅವರು ಮತ್ತು ಜಾಜ್ವಾ ಜತೆಗೂಡಿ ಐಎಸ್ಐ ಮುಖ್ಯಸ್ಥನನ್ನಾಗಿ ಮಾಡಿದ್ದರು. ಆದರೆ, ಮುನೀರ್ ಮಹಾಶಯ ಖಾನ್ರ ಪತ್ನಿ ಬುಶ್ರಾ ಬೀಬಿ (ಪಿಂಕಿ ಪೀರ್ನಿ) ಭ್ರಷ್ಟಾಚಾರದ ಬಗ್ಗೆ ಕಡತ ತಯಾರಿಸಿ ಸ್ವತಃ ಖಾನ್ರ ಮುಂದೆಯೇ ಇಟ್ಟುಬಿಟ್ಟರು! ಕುಪಿತಗೊಂಡ ಖಾನ್ ಐಎಸ್ಐ ಡೈರೆಕ್ಟರ್ ಜನರಲ್ ಸ್ಥಾನದಿಂದ ಮುನೀರ್ರನ್ನು ತಕ್ಷಣವೇ ತೆಗೆಯುವಂತೆ ಬಾಜ್ವಾರಿಗೆ ಹೇಳಿದರು. ಖಾನ್ - ಬಾಜ್ವಾ ಹನಿಮೂನ್ ಇನ್ನೂ ಹಸಿಯಾಗಿದ್ದ ಕಾಲ ಅದು. ಹೀಗಾಗಿ, ಕೇವಲ ಒಂಬತ್ತೇ ತಿಂಗಳಲ್ಲಿ ಮುನೀರ್ ಎತ್ತಂಗಡಿಯಾದರು. ಅವರು ಈ ಕಹಿಯನ್ನು ಮರೆತಿಲ್ಲ. ತಮಗೆ ಮಗ್ಗುಲ ಮುಳ್ಳಾಗಿರುವ ಇಮ್ರಾನ್ ಖಾನ್ರ ಕೈಗಳನ್ನು ಕಟ್ಟಿಹಾಕಲು ಶರೀಫ್ದ್ವಯರಿಗೆ ಮುನೀರ್ ಒಳ್ಳೆಯ ಆಯುಧವಾಗಬಲ್ಲರು. ಆದರೆ, ಅನಿರೀಕ್ಷಿತ ತಿರುವುಗಳ ಪಾಕ್ ರಾಜಕಾರಣ ಭವಿಷ್ಯದಲ್ಲಿ ಹೇಗೆ ಬದಲಾಗುತ್ತದೆಂದು ಹೇಳಲಾಗುವುದಿಲ್ಲ. ಇರಲಿ, ಚೀನೀ ಬಯಕೆಗೆ ಶರೀಫ್ ಸರ್ಕಾರ ಸಹಕರಿಸಿದ ಬಗೆಯನ್ನು ನೋಡೋಣ. ಆಸಿಮ್ ಮುನೀರ್ ಆಯ್ಕೆಗೆ ಮೊದಲ ಅಗತ್ಯವಾದದ್ದು ಕಣದಿಂದ ಬಾಜ್ವಾರ ಹಿಂದೆಗೆತ. ಮತ್ತದನ್ನು ಅವರು ತಾನಾಗಿಯೇ ಮಾಡುವಂತಹ ಸ್ಥಿತಿಯ ನಿರ್ವಣ.
ಪಾಕ್ ಸೇನಾಧಿಕಾರಿಗಳೆಲ್ಲರೂ ಭ್ರಷ್ಟರೇ. ಅಧಿಕಾರಾವಧಿಯಲ್ಲಿ ಹೇರಳ ಹಣ ಸಂಪಾದಿಸಿ, ವಿದೇಶಗಳಲ್ಲಿ ಆಸ್ತಿಪಾಸ್ತಿ ಮಾಡಿಕೊಂಡು, ನಿವೃತ್ತಿಯ ನಂತರ ಅಲ್ಲಿ ಹೋಗಿ ನೆಲೆಸುವುದು ಬಹುತೇಕ ಎಲ್ಲ ಉನ್ನತ ಹಾಗೂ ಮಧ್ಯಮ ಸೇನಾನಾಯಕರ ಸ್ವಭಾವ. ಇದಕ್ಕೆ ಬಾಜ್ವಾ ಹೊರತಲ್ಲ. ಆದರೆ, ಹಿಂದಿನ ಯಾವ ದಂಡನಾಯಕನ ಬಗೆಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ವಿವರಗಳು ಬಾಜ್ವಾ ಬಗ್ಗೆ ಏಕಾಏಕಿ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಅವರು ಮತ್ತವರ ಪತ್ನಿ, ಮಗ, ಸೊಸೆ, ಸೊಸೆಯ ಸಹೋದರಿಯರು ಮತ್ತು ತಂದೆ ಗಳಿಸಿರುವ ಆಸ್ತಿ, ವಿದೇಶಿ ಮುಖ್ಯವಾಗಿ ಅಮೆರಿಕದ ಬ್ಯಾಂಕ್ಗಳಲ್ಲಿರುವ ಹಣದ ವಿವರಗಳು ಕಾಣಸಿಕೊಂಡದ್ದರ ಹಿಂದಿರುವ ಕಾಣದ ಕೈ ಶರೀಫ್ ಸರ್ಕಾರದ್ದು ಎಂಬ ಗುಮಾನಿ ಇದೆ. ಜತೆಗೆ, ಬಾಜ್ವಾರ ಪತ್ನಿ ಮತ್ತು ಸೊಸೆಯ ನಡತೆಗಳ ಬಗ್ಗೆ ಅನುಮಾನ ಮೂಡಿಸುವ ವಿಡಿಯೋಗಳನ್ನು ಐಎಸ್ಐ ಗುಪ್ತವಾಗಿ ತಯಾರಿಸಿದೆ. ಮತ್ತವುಗಳ ಮೂಲಕ ಬಾಜ್ವಾರನ್ನು ಹೆದರಿಸಲಾಯಿತು ಎಂದೂ ಕೆಲವು ವರದಿಗಳು ಹೇಳುತ್ತವೆ. ಒಟ್ಟಿನಲ್ಲಿ ಪಾಕಿಸ್ತಾನ ಆರ್ಥಿಕ ದಿವಾಳಿಯ ಅಂಚಿನಲ್ಲಿರುವಾಗ, ದೇಶವನ್ನು ಲೂಟಿ ಮಾಡಿ ಕಳ್ಳ ಆಸ್ತಿ ಮಾಡಿಕೊಂಡದ್ದರ ಬಗ್ಗೆ ಸಾರ್ವಜನಿಕ ಆಕ್ರೋಶವನ್ನೆದುರಿಸುವುದು, ಅದಕ್ಕೂ ಹಿಂಜರಿಯದಿದ್ದರೆ ಕುಟುಂಬದ ಮಹಿಳೆಯರ ಮಾನ ಸಾರ್ವಜನಿಕವಾಗಿ ಚರ್ಚೆಗೊಳಗಾಗುವ ಅಪಾಯ ಸೈನಿಕನೊಬ್ಬನನ್ನು ಧೃತಿಗೆಡಿಸಲು ಸಾಕು. ಬಾಜ್ವಾ ಬಲಿಯಾದದ್ದು ಈ ಬಲೆಗೆ. ಅಷ್ಟಾಗಿಯೂ ಅವರು ತಮ್ಮದೇ ಮನುಷ್ಯನೊಬ್ಬನನ್ನು ದಂಡನಾಯಕನನ್ನಾಗಿಸಲು ಪ್ರಯತ್ನವನ್ನಂತೂ ಮಾಡಿದರು.
ಪಾಕ್ ಸೇನಾ ದಂಡನಾಯಕನ ಆಯ್ಕೆ ಮತ್ತು ನೇಮಕಾತಿಪ್ರಕ್ರಿಯೆ ಹೀಗಿದೆ- ಮೊದಲಿಗೆ ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯಾಲಯ (ಜಿಹೆಚ್ಓ) 4-6 ಸಮಾನಸ್ಕಂದರಾದ ಲೆಫ್ಟಿನೆಂಟ್ ಜನರಲ್ಗಳ ವಿವರಗಳನ್ನೊಂಡ ಸಮ್ಮರಿ ಎಂದು ಕರೆಯಲಾಗುವ ಕಡತವೊಂದನ್ನು ಪ್ರಧಾನಮಂತ್ರಿಗೆ ನೀಡುತ್ತದೆ ಮತ್ತು ಅಲ್ಲಿನ ಒಂದು ಹೆಸರನ್ನು ಪ್ರಧಾನಿ ಆಯ್ಕೆ ಮಾಢುತ್ತಾರೆ. ಅದಕ್ಕೆ ಅಧ್ಯಕ್ಷರು ಸಮ್ಮತಿ ನೀಡುವುದು ಅನಿವಾರ್ಯ. ಅದರಂತೆ ಐದು ಜನರ ವಿವರಗಳನ್ನು ಜಿಹೆಚ್ಓ ನವೆಂಬರ್ 21ರಂದು ಪ್ರಧಾನಿಗೆ ಕಳುಹಿಸಿತು. ಅದರಲ್ಲಿ ಮುನೀರ್ರ ಹೆಸರಿರಲಿಲ್ಲ. ಅದು ಸಕಾರಣವಾಗಿಯೇ ಇತ್ತು. ಯಾಕೆಂದರೆ ದಂಡನಾಯಕನ ಸ್ಥಾನ ತೆರವಾಗುವ ನವೆಂಬರ್ 29ಕ್ಕೆ ಎರಡು ದಿನ ಮೊದಲೇ ಲೆ.ಜ. ಮುನೀರ್ ನಿವೃತ್ತಿಯಾಗಲಿದ್ದರು. ಆದರೆ, ಈ ಅಂಶವನ್ನು ಪಕ್ಕಕ್ಕಿಟ್ಟು, ಮುನೀರ್ರ ಹೆಸರನ್ನು ಸೇರಿಸಿ ಹೊಸ ಸಮ್ಮರಿಯನ್ನು ಕಳುಹಿಸುವಂತೆ ಪ್ರಧಾನಿ ಕಾರ್ಯಾಲಯ ಜಿಹೆಚ್ಓಗೆ ಹೇಳಿತು. ಇದನ್ನು ವಿರೋಧಿಸಲು ಬಾಜ್ವಾಗೆ ದಾರಿ ಕಾಣದ ಸ್ಥಿತಿಯ ನಿರ್ವಣಕ್ಕಾಗಿ ಐಎಸ್ಐನ ಒಂದು ಭಾಗ ಅವರನ್ನು ಬ್ಲಾ್ಯಕ್ವೆುೕಲ್ ಮಾಡಿತು ಎಂಬ ವರದಿಗಳಿವೆ. ಅಂತಿಮವಾಗಿ ಬಾಜ್ವಾ ತಮ್ಮ ನೆಚ್ಚಿನವರೊಬ್ಬರನ್ನು ಉತ್ತರಾಧಿಕಾರಿಯಾಗಿಸುವ ಪ್ರಯತ್ನದಲ್ಲೂ ಸೋತರು. ಕೃತಜ್ಞತಾಹೀನ ಪಾಕ್ ವ್ಯವಸ್ಥೆಯಲ್ಲಿ ಮಾಡಿದ್ದುಂಡ ಮಹಾರಾಯರ ಪಟ್ಟಿ ದೊಡ್ಡದೇ ಇದೆ ಮತ್ತು ಅದಕ್ಕೀಗ ಹೊಸ ಸೇರ್ಪಡೆ ಜನರಲ್ ಬಾಜ್ವಾ ಎನ್ನುವುದೇನೋ ನಿಜ. ಆದರೆ, ಸೇನಾ ದಂಡನಾಯಕನೊಬ್ಬ ನಾಗರಿಕ ಸರ್ಕಾರದಿಂದ ಈ ಬಗೆಯಾಗಿ ಹಿನ್ನಡೆ ಅನುಭವಿಸಿದ್ದು, ಅದಕ್ಕೆ ಸೇನೆಯ ಒಂದು ಭಾಗವೇ ಸಹಕರಿಸಿದ್ದು ಮಾತ್ರ ಕಂಡು ಕೇಳರಿಯದ ಪ್ರಸಂಗ.
ಮುಂದೇನು? ಅದನ್ನು ಮುಂದಿನ ವಾರ ನೋಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)