ಅಂಕಣ

ಹಣ-ಝಣ ಅಂಕಣ: ಎಲ್ಲರೂ ನಂಬಿ ಕೆಟ್ಟವರೇ ಆದರೂ ಧೃತಿಗೆಡಬೇಡಿ!

‘ಅಲ್ಲಯ್ಯ ಅವ್ನು ನಿನ್ನ ಅಷ್ಟು ನಂಬಿದ್ದ, ಅಂಥವನನ್ನ ಮೋಸಾ ಮಾಡ್ಬಿಟ್ಟೆಯಲ್ಲೋ?’

‘ನಂಬಿದ್ರಿಂದನೇ ಕಣಯ್ಯ ಮೋಸ ಮಾಡಕ್ಕೆ ಆಗಿದ್ದು, ಇಲ್ಲದಿದ್ರೆ ಹೇಗೆ ಮೋಸ ಮಾಡ್ಲಿ?’ ಮೋಸ ಮಾಡೋವ್ರೆಲ್ಲಾ ಮೊದಲು ಮಾಡೋ ಕೆಲಸನೇ ವಿಶ್ವಾಸ ಗಳಿಸೋದು. ಆದ್ದರಿಂದ ಯಾರನ್ನೂ 100% ನಂಬಬೇಡಿ.

ಚಿಕ್ಕವನಿದ್ದಾಗ ನಮ್ಮಪ್ಪ ನನ್ನನ್ನು ಗೋಡೆ ಹತ್ತಿಸಿ ಕೆಳಗೆ ಹಾರು ಅಂದರು. ನಾನು ಹಿಂಜರಿದೆ. ‘ಹೆದರಬೇಡ, ಹಾರು. ನಾ ಹಿಡಿದುಕೊಳ್ತೇನೆ’ ಅಂದಿದ್ದಕ್ಕೆ ಹಾರಿದೆ. ಅವರು ನನ್ನನ್ನು ಹಿಡಿದುಕೊಳ್ಳಲೇ ಇಲ್ಲ! ಬಿದ್ದು ಪೆಟ್ಟು ಮಾಡಿಕೊಂಡು ಅತ್ತೆ, ‘ನೀವು ಮಾಡಿದ್ದು ಮೋಸ’ ಅಂದೆ. ಅದಕ್ಕವರು ಹೇಳಿದ್ದು ‘ನಿನ್ನ ಅಪ್ಪನನ್ನೂ ಪೂರ್ತಿ ನಂಬಬೇಡ, ಹಾಗೇನೇ ಬೇರೆಯವರನ್ನು ನಂಬಿಕೊಂಡು ನೀನು ಯಾವುದೇ ರಿಸ್ಕ್ ಇರುವ ವ್ಯಾಪಾರ ಮಾಡಬೇಡ. ನಿನ್ನಲ್ಲಿ ಆತ್ಮವಿಶ್ವಾಸವಿದ್ದರೆ ಮಾತ್ರ ಮಾಡು’ ಎಂದು. ಈ ಮಾತೇ ನನಗೆ ದಾರಿದೀಪವಾಯಿತು.

ಮೊದಲು ಗುರಿಯನ್ನು ನಿರ್ಧರಿಸಿ. ಅದರೆಡೆಗೇ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ಯಾವುದೇ ಕಾರಣಕ್ಕೆ ಹಿಂದೇಟು ಹಾಕಬೇಡಿ. ನಕಾರಾತ್ಮಕ ಯೋಚನೆಗಳು ಬಾರದಂತೆ ನೋಡಿಕೊಳ್ಳಿ. ಜಯ ನಿಮ್ಮದಾಗುತ್ತೆ. ಗುರಿಯನ್ನು ಕಾಗದದ ಮೇಲೆ ಕೆಂಪು ಇಂಕಿನಿಂದ ಬರೆದು, ಆಗಾಗ ಕಣ್ಣಿಗೆ ಬೀಳುವ ರೂಮಿನ ಕನ್ನಡಿಯ ಮೇಲೆ ಅಂಟಿಸಿ. ಯಾವುದನ್ನೇ ಮಾಡಬೇಕಿದ್ರೂ ಯಾವ ದಿವಸಕ್ಕೆ ಮಾಡಿ ಮುಗಿಸುತ್ತೀರಿ ಎಂದು ಸಮಯ ನಿರ್ಧರಿಸಿಕೊಳ್ಳಿ. ಸುಮ್ನೆ ಮಾಡ್ತೀನಿ ಅಂತ ಅಂದುಕೊಂಡರೆ ಆಗೊಲ್ಲ. ಅದು ಕೇವಲ ‘ವಿಶ್​ಫುಲ್ ಥಿಂಕಿಂಗ್’ ಆಗುತ್ತೆ. ಆರು ತಿಂಗಳು ಅಥವಾ 1 ವರ್ಷ ಹೀಗೆ ಸಮಯ ನಿರ್ಧರಿಸಿಕೊಳ್ಳಿ. ಹಾಗೆಯೇ ಎಷ್ಟು ಹಣ ಗಳಿಸಬೇಕು ಅಂತಲೂ ನಿರ್ಧರಿಸಿ. 5 ಅಥವಾ 10 ಲಕ್ಷವಿರಬಹುದು. ಆದರೆ ದೊಡ್ಡ ಗುರಿಯನ್ನು ಒಮ್ಮೆಲೇ ಇಟ್ಕೋಬೇಡಿ. ಬೇರೆಯವರ ದೃಷ್ಟಿಯಲ್ಲಿ ಅಸಾಧ್ಯ ಎಂದೆನಿಸುವ ಗುರಿಯನ್ನು ಇಟ್ಕೊಳ್ಳಿ. ಈ ಗುರಿಯನ್ನು ಸುತ್ತಮುತ್ತಲಿನವರಿಗೆ ಹೇಳಿ. ಏಕೆಂದರೆ ಗುರಿ ಮುಟ್ಟುವುದರಲ್ಲಿ ಉದಾಸೀನತೆ ತೋರಿದಿರಾದರೆ ಆ ಜನರೇ ನಿಮ್ಮ ಬೊಗಳೆ ಸ್ವಭಾವವನ್ನು ನಿಂದಿಸ್ತಾ, ಎಚ್ಚರಿಕೆಯ ಕರೆಗಂಟೆ ಬಾರಿಸ್ತಿರ್ತಾರೆ.

ಎಷ್ಟೋ ಬಿಜಿನೆಸ್​ಗಳಿವೆ. ಆದ್ರೆ ಯಾವುದನ್ನು ಆರಿಸ್ಕೋಬೇಕು? ಎಲ್ಲದರಲ್ಲೂ ಪೈಪೋಟಿ ಇದೆ. ಯಾವ ರಂಗದಲ್ಲಿ ಗೆಲುವು ಕಷ್ಟಕರ ಅನ್ನಿಸ್ತದೋ ಆ ರಂಗದಲ್ಲೇ ಮುಂದುವರಿಯಿರಿ. ಏಕೆಂದರೆ ಅಲ್ಲಿ ಹೆಚ್ಚಿನ ಸ್ಪರ್ಧಿಗಳು ಇರೊಲ್ಲ. ಯಾವ ರಂಗದಲ್ಲಿಯೇ ಆಗಲಿ ನಾನು ಹೇಳುವಂತೆ ಮುಂದುವರಿದರೆ ನಿಮಗೆ ಯಶಸ್ಸು ಗ್ಯಾರಂಟಿ. ವ್ಯಾಪಾರದ ಪ್ರಾರಂಭದಲ್ಲಿ ಸಣ್ಣಮಟ್ಟದಲ್ಲಿ ಪ್ರಾರಂಭಿಸಿ, ಅದರ ಗುಣಾವಗುಣಗಳನ್ನು ಅಭ್ಯಾಸ ಮಾಡ್ಬೇಕು. ಹೆಚ್ಚು ಬಂಡವಾಳ ಹಾಕದೆ ಹಂತಹಂತವಾಗಿ ಮುಂದುವರಿದ್ರೆ ಸುರಕ್ಷಿತ. ಯಾವುದೇ ಕಾರಣಕ್ಕೆ ಉತ್ಪಾದನೆ-ಮಾರಾಟ ವ್ಯವಸ್ಥಿತವಾಗಿ ಸಾಗದಿದ್ರೆ, ಸಾಲ ತೀರಿಸಲಾಗದೆ ಜೀವನಪರ್ಯಂತ ತಲೆಎತ್ತಲು ಸಾಧ್ಯವಾಗೋಲ್ಲ ಅನ್ನೋದು ನೆನಪಿರಲಿ. ಬರೋ ಲಾಭನಾ ಮತ್ತೆ ವ್ಯಾಪಾರಕ್ಕೆ ತೊಡಗಿಸುತ್ತ ಬಂಡವಾಳವನ್ನು ಜಾಸ್ತಿ ಮಾಡಬಹುದು.

ಹಿಂದೊಮ್ಮೆ ನಾನು ‘ಇಂಡಿಯಾರ್ನ್’ ಅನ್ನೊ ಖಾದಿಬಟ್ಟೆಯ ಸಂಸ್ಥೆ ಹುಟ್ಟುಹಾಕಿದೆ. ಗಾಂಧಿ ಜಯಂತಿ ಸಮಯದಲ್ಲಿ ಶೇಕಡ 50 ರಿಯಾಯ್ತಿಯಲ್ಲಿ ಬಟ್ಟೆ ಸಿಗುತ್ತಿದ್ದ ಕಾರಣ 1000 ಮೀಟರ್ ಬಟ್ಟೆ ಖರೀದಿ ಮಾಡಿದೆ. ಪ್ರಸಿದ್ಧವಾದ ಅಂಗಡಿಯೊಂದರಿಂದ ಚಾಲ್ತಿಯಲ್ಲಿರುವ ಡಿಸೈನ್ ಜುಬ್ಬವನ್ನು ತಂದು, ಮಾಸ್ಟರ್ ಟೇಲರ್ ಒಬ್ಬರಿಂದ ಬಟ್ಟೆಯನ್ನೆಲ್ಲ ಕಟ್ ಮಾಡಿಸಿ ತಂದಿದ್ದ ಜುಬ್ಬದ ಅಳತೆಗೆ ಹೊಲಿಯಲಾಯ್ತು.

ಎಲ್ಲ ಜುಬ್ಬಗಳನ್ನು ಹೊಲಿದ ನಂತರ ಖಾದಿಬಟ್ಟೆ ನೀರಿಗೆ ಹಾಕಿದರೆ ಬಟ್ಟೆ ಚಿಕ್ಕದಾಗುತ್ತದೆಂಬ ವಿಚಾರ ಗೊತ್ತಾಯ್ತು. ಇದನ್ನು ನನ್ನ ಮಾಸ್ತರು ಮುಂಚೇನೇ ಹೇಳಿರಲಿಲ್ಲ. ಎಷ್ಟೋ ಸಲ ಎಕ್ಸ್​ಪರ್ಟ್ಸ್ ಅನ್ನೋವ್ರು ಕೂಡ ತಪ್ಪುಗಳನ್ನು ಮಾಡ್ತಾರೆ. (ಪ್ರಸಿದ್ಧ ವಿಜ್ಞಾನಿ ಐಸಾಕ್ ನ್ಯೂಟನ್ ತನ್ನ ಬೆಕ್ಕು ಮರಿ ಹಾಕಿದಾಗ ಮರಿ ಓಡಾಡಲೆಂದು ಗೂಡಿನ ದೊಡ್ಡ ರಂಧ್ರದ ಬಳಿ ಪುಟ್ಟ ರಂಧ್ರ ಮಾಡಿಸಿದ್ದನಂತೆ. ಯಾಕೆ ಬೇಕಿತ್ತು?!) ಪರೀಕ್ಷೆ ಮಾಡ್ದಾಗ ಎರಡೆರಡು ಇಂಚು ಕಡಿಮೆಯಾಗ್ತಿತ್ತು. 38ರ ಸೈಜಿನಲ್ಲಿ ಹೊಲಿದ ಜುಬ್ಬ 36ಕ್ಕೆ ಇಳೀತಿತ್ತು. ಈ ಸೈಜಿನ ಗಂಡಸರೇ ಇಲ್ಲ. ಅಷ್ಟೂ ಬಟ್ಟೆ, ಮಜೂರಿ ನಷ್ಟವಾಯ್ತು. ನಂತರ ಬಟ್ಟೆಯನ್ನು ಮೊದಲೇ ನೀರಿನಲ್ಲಿ ನೆನೆಸಿ ಶ್ರಿಂಕ್ ಮಾಡಿಯೇ ಹೊಲಿಯಲಾರಂಭಿಸಿದೆವು. ಇನ್ನೊಂದು ಸಂದರ್ಭದಲ್ಲಿ ತಿರ್ಪರ್​ನಿಂದ ಬಟ್ಟೆಯನ್ನು ಹೋಲ್​ಸೇಲ್​ನಲ್ಲಿ ತರಿಸಿ ಗಂಡಸರ ಜುಬ್ಬಾ ಹೊಲಿಯಲಾಯ್ತು. ಆದರೆ ನಂತರ ಗೊತ್ತಾದದ್ದು ಆ ಬಣ್ಣಗಳನ್ನು ಗಂಡಸರಿಗಿಂತ ಹೆಂಗಸರು ಇಷ್ಟಪಡುವುದಾಗಿತ್ತು. ಜುಬ್ಬಗಳು ಮಾರಿಹೋಗದೆ ನಷ್ಟವಾಯ್ತು. ಇದರಿಂದ ಸ್ತ್ರೀ ಹಾಗೂ ಪುರುಷರಿಗೆ ಭಿನ್ನ ವಿಭಿನ್ನ ಬಣ್ಣಗಳನ್ನು ಬಳಸಬೇಕೆಂದು ತಿಳಿಯಿತು. ಮತ್ತೊಬ್ಬ ಮಾಸ್ಟರ್ ಟೇಲರ್​ಗೆ, 40 ಮತ್ತು 42 ಸೈಜಿನ ಅಂಗಿಗಳನ್ನು ಹೊಲಿಯಲು ಬಟ್ಟೆ ಕತ್ತರಿಸಿ ಕೊಟ್ಟಿದ್ದೆ. ಆತ, 40ರ ಸೈಜಿನ ಅಂಗಿಗೆ 42ರ ಭುಜವನ್ನೂ, 42ರ ಸೈಜಿನ ಅಂಗಿಗೆ 40ರ ಭುಜವನ್ನೂ ಹೊಲಿದಿದ್ದ. ಕಾರಣ-ಎಲ್ಲ ಬಟ್ಟೆ ನಷ್ಟವಾಯ್ತು. ಮೂರನೆಯ ಸೋಲು ಇದು. ಇದರಿಂದ ಕಲಿತ ಪಾಠವೇನೆಂದರೆ, ಚಿಕ್ಕದಾಗಿ ವ್ಯಾಪಾರ ಪ್ರಾರಂಭಿಸಬೇಕು ಎಂದು. ಆದರೂ ಪ್ರಯತ್ನ ಬಿಡಲಿಲ್ಲ.

ನಂತರ ತಿಂಗಳಿಗೆ ‘ಇಂಡಿಯಾರ್ನ್’ನ ಆರು ಸಾವಿರ ಕುರ್ತಾಗಳು ಮೆಟ್ರೋ, ಮೆನ್ಸ್ ಫೇವರಿಟ್​ನಂತಹ ಸುಪ್ರಸಿದ್ಧ ಮಳಿಗೆಗಳಲ್ಲಿ ಮಾರಾಟವಾಗಲಾರಂಭಿಸಿತು. ನಮ್ಮ ಬಟ್ಟೆಗಳ ಬಗ್ಗೆ ನಂತರ ಯಾವುದೇ ದೂರುಗಳು ಬಂದಿಲ್ಲ. ಮೊದಲಿಗೆ ಸ್ವಲ್ಪ ವೆಚ್ಚ ಹೆಚ್ಚಾದ್ರೂ ಪರ್ವಾಗಿಲ್ಲ, ಹೊರಗಡೆ ಕೆಲಸ ಮಾಡಿಸ್ಬೇಕೇ ಹೊರತು ಸ್ವಂತ ಯೂನಿಟ್ ಪ್ರಾರಂಭಿಸಬಾರದು. ಯಾಕಂದ್ರೆ ಪ್ರಾರಂಭದಲ್ಲಿ ನಮಗೆ ಅಷ್ಟೊಂದು ನಿರಂತರ ಬೇಡಿಕೆಗಳಿಲ್ಲದ ಕಾರಣ ಕೆಲಸಗಾರರಿಗೆ, ಯಂತ್ರಗಳಿಗೆ, ಕಟ್ಟಡಕ್ಕೆ ದುಡ್ಡು ವ್ಯಯಿಸದೆ ವ್ಯಾಪಾರ ಚೆನ್ನಾಗಿ ನಡೆಯುತ್ತದೆಂದು ಅನ್ನಿಸಿದಾಗ ಮಾತ್ರ ಇವನ್ನೆಲ್ಲ ಸ್ವಂತದ್ದಾಗಿಸಿಕೊಳ್ಬೇಕು. ಅಲ್ಲಿಯತನಕ ನಿಮ್ಮಲ್ಲಿ ಇರೋ ದುಡ್ಡನ್ನು ದಾಸ್ತಾನು ಇಡೋದಕ್ಕೆ ವ್ಯಯ ಮಾಡ್ಬೇಕು. ನಿಮ್ಮ ಕೆಲಸ ಬೇರೆ ಕಡೆ ಮಾಡಿಸೋದ್ರಿಂದ ಒಂದು ತೊಂದರೆ ಇದೆ, ಏನಂದ್ರೆ ಕೆಲವೊಮ್ಮೆ ಸರಕು ಬೇಕಾದ ಸಮಯಕ್ಕೆ ಸರಿಯಾಗಿ ಸಿಗದೆ ವ್ಯಾಪಾರ ಕೆಡುತ್ತದೆ. ಹಾಗಾದಾಗ ಮಾತ್ರ ನಿಮ್ಮದೇ ಯೂನಿಟ್​ನ್ನು ಪ್ರಾರಂಭಿಸಬೇಕು. ಇದು ಎಲ್ಲ ವ್ಯಾಪಾರಕ್ಕೂ ಅನ್ವಯಿಸುತ್ತದೆ, ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಲಿ ಎಂಬ ಕಾರಣದಿಂದ ಗಾರ್ವೆಂಟ್​ನ ಉದಾಹರಣೆ ಕೊಟ್ಟಿದ್ದೇನೆ ಅಷ್ಟೇ. ಥಾಮಸ್ ಆಲ್ವಾ ಎಡಿಸನ್ ಬಲ್ಬನ್ನು ಕಂಡುಹಿಡಿದ. ಇದರ ಫಿಲಮೆಂಟಿಗೆ ಯಾವ ವಸ್ತುವನ್ನು ಬಳಸಬೇಕು ಎಂಬುದಾಗಿ ಸಂಶೋಧಿಸಲು ಸಾವಿರಾರು ಪ್ರಯೋಗಗಳನ್ನು ಮಾಡಿ ಸೋತ. ಹಲವಾರು ತಿಂಗಳುಗಳನ್ನೇ ಕಳೆದ. ಆಗ ಒಬ್ಬಾತ ಕೇಳುತ್ತಾನೆ- ‘ಪ್ರಯೋಗಗಳಲ್ಲಿ ಸೋತದ್ದಕ್ಕೆ ಏನನ್ನಿಸುತ್ತೆ? ಬಲ್ಬನ್ನು ಕಂಡುಹಿಡಿಯಬಲ್ಲೆ ಎಂದು ನಿನಗೆ ಈಗಲೂ ಅನ್ನಿಸುತ್ತಿದೆಯಾ?’ ಅದಕ್ಕೆ ಎಡಿಸನ್ ಖುಷಿಯಿಂದ ಉತ್ತರ ಕೊಟ್ಟ- ‘ನಾನು ಮಾಡಿದ ಪ್ರಯೋಗಗಳಿಂದಾಗಿ ಯಾವ ಯಾವ ವಸ್ತುಗಳು ಫಿಲಮೆಂಟಿಗೆ ನಿಷ್ಪ್ರಯೋಜಕವೆಂಬುದಾಗಿ ಕಂಡುಕೊಂಡ ತೃಪ್ತಿಯಿದೆ. ಬಾಕಿ ಉಳಿದಿರುವುದು ಕೆಲವೇ ವಸ್ತುಗಳು. ಅವುಗಳನ್ನು ಪರೀಕ್ಷೆಗೊಳಪಡಿಸಿ ಗೆದ್ದೇ ಗೆಲ್ಲುತ್ತೇನೆ’. ಕೆಲವೇ ದಿನಗಳಲ್ಲಿ ಏನೋ ಯೋಚಿಸುತ್ತ ತನ್ನ ಷರ್ಟಿನ ಗುಂಡಿಯನ್ನು ಕಿತ್ತ. ಆಗ ಕಿತ್ತು ಬಂದ ದಾರವನ್ನೇ ಬಳಸಿದಾಗ ಬಲ್ಬ್ ಉರಿಯಿತು!

ಎಡಿಸನ್​ನ ಗುರಿ ನಿಚ್ಚಳವಾಗಿತ್ತು. ಹಾಗಾಗಿ ಆತ ತನ್ನ ಸಂಶೋಧನೆ ಬಗ್ಗೆ ಸುತ್ತಮುತ್ತಲಿನವರಲ್ಲಿ ಹೇಳಿಕೊಂಡಿದ್ದ. ಆತ ಪ್ರಯೋಗವನ್ನು ನಿಲ್ಲಿಸದೆ, ನಿರಂತರವಾಗಿ ಪ್ರಯತ್ನಿಸಿ ಯಶಸ್ಸು ಗಳಿಸಿದ. ಇದರಿಂದ ಗುರಿ ನಿರ್ಧರಿಸುವುದು ಹಾಗೂ ಅದನ್ನು ಬಿಡದೇ ಪ್ರಯತ್ನಿಸುವುದು ಯಶಸ್ಸಿನ ಮತ್ತೊಂದು ಸೂತ್ರವೆಂದು ತಿಳಿದುಬರುತ್ತದೆ. ನಾನು ಕೋಟ್ಯಧೀಶನಾಗುತ್ತೇನೆ, ವರ್ಲ್ಡ್​ಫೇಮಸ್ ಆಗುತ್ತೇನೆ ಎಂದು ಹೇಳಿಕೊಂಡಾಗಲೆಲ್ಲ ಸುತ್ತಮುತ್ತಲಿನವರು ಹೀಯಾಳಿಸಿದ್ದುಂಟು. ಅವರು ಅವಮಾನ ಮಾಡಿದಷ್ಟೂ ಗುರಿಯತ್ತ ನನ್ನ ಛಲ ಏರುತ್ತಿತ್ತೇ ಹೊರತು ಕಮ್ಮಿ ಆಗುತ್ತಿರಲಿಲ್ಲ-‘ಸೋಲೇ ಗೆಲುವಿನ ಮೂಲ’ ಎಂಬ ಮಾತಿನಂತೆ ಹಲವು ಬಾರಿ ಸೋತು ಕೊನೆಗೆ ಗೆಲುವು ನನ್ನದಾಯಿತು. ಇಂತಹ ಗೆಲುವು ನಿಮ್ಮದಾಗಲೆಂಬ ಹಾರೈಕೆ ನನ್ನದು.

ನೀತಿ: ಹಣವಂತರಾಗಬೇಕು ಅಂದರೆ ವಿದ್ಯೆ, ಬುದ್ಧಿ ಎರಡಿದ್ದರೆ ಸಾಲದು. ಅದನ್ನೂ ಮೀರಿದ ತಾಳ್ಮೆ ಇರಲೇಬೇಕು. Winners don’t quit, quitters don’t win.

(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)