ಒಬ್ಬ ವ್ಯಕ್ತಿ ಛಲಬಿಡದೇ ಪ್ರಯತ್ನಿಸಿ ತನ್ನ ಕನಸನ್ನು ನನಸು ಮಾಡಿಕೊಂಡ ನೈಜ ಕಥೆ ಇದು. 25 ವರ್ಷಗಳ ಹಿಂದಿನ ಘಟನೆ- ಮಂಗಳೂರಿನ ರವಿಶಂಕರ ಕಿಣಿ (ಇವರು ಇತ್ತೀಚೆಗೆ ನಿಧನರಾದರು) ಪ್ರಪಂಚ ಪರ್ಯಟನೆ ಕನಸನ್ನು ಕಾಣ್ತಿದ್ರು. ಅವರಿಗೆ ಆಗಿನ್ನೂ ಇಪ್ಪತ್ನಾಲ್ಕು ವರ್ಷ ವಯಸ್ಸು. ಸುತ್ತೋದಕ್ಕೆ ಹಣ ಬೇಕಿತ್ತಲ್ಲ? ಅದಕ್ಕಾಗಿ ಯಾರೂ ಮಾಡಿರಲಾರದಂಥ ಕಾರ್ಯಕ್ರಮ ವೊಂದನ್ನು ಮಾಡಲು ಯೋಚಿಸಲಾರಂಭಿಸಿದರು. ಆಗ ಹೊಳೆದದ್ದು ‘ಡಾ|| ರಾಜ್ಕುಮಾರ್ ನೈಟ್’. ರಾಜ್ಕುಮಾರ್ ಹಾಡುವ ಕಾರ್ಯಕ್ರಮ ಅದುವರೆಗೆ ನಡೆದಿರಲಿಲ್ಲ. ಇದರಿಂದ ಸಾಕಷ್ಟು ಕಲೆಕ್ಷನ್ ಮಾಡಿ ಪ್ರಪಂಚ ಸುತ್ತಬಹುದೆಂಬ ಯೋಚನೆ ಕಿಣಿಯದು. ಇದಕ್ಕಾಗಿ ಆಗ ಮದ್ರಾಸ್ನಲ್ಲಿದ್ದ ರಾಜ್ರನ್ನು ಕಷ್ಟಪಟ್ಟು ಒಪ್ಪಿಸಿ, ತನ್ನಲ್ಲಿದ್ದ ಸ್ವಲ್ಪ ದುಡ್ಡನ್ನು ಅಡ್ವಾನ್ಸ್ ಕೊಟ್ಟು ಬಂದವರೇ, ಸ್ಟೇಟ್ಬ್ಯಾಂಕ್ ಮೈದಾನವನ್ನು ಬುಕ್ ಮಾಡಿ, ಪೋಸ್ಟರ್ ಮುದ್ರಿಸಿ, ಊರೆಲ್ಲ ಅಂಟಿಸಿ, ಪ್ರಚಾರ ಪ್ರಾರಂಭಿಸಿದರು.
ರವಿಶಂಕರ ಸ್ವಾತಂತ್ರ್ಯಯೋಧ ರಾಮರಾಯ್ ಕಿಣಿಯವರ ಮಗ. ಆರಡಿ ಎತ್ತರದ ಕಟ್ಟುಮಸ್ತಾದ ಶರೀರ ಅವರದು. ನಾವಿಬ್ಬರೂ ಹುಟ್ಟಿ, ಬೆಳೆದಿದ್ದು ಮಂಗಳೂರಿನ ರಥಬೀದಿಯಲ್ಲಿ. ಈ ಕಾರಣದಿಂದಲೇ ನಾವು ಆತ್ಮೀಯರಾಗಿದ್ದೆವು. ಹಲವಾರು ವರ್ಷಗಳ ನಂತರ ಬೆಂಗಳೂರಿನಲ್ಲಿ ನನ್ನ ಜಾದೂ ಪ್ರದರ್ಶನ ನೋಡಿದ ಅವರು ‘ಕೆರೆಯಲ್ಲಿ ಮೀನು ಹಿಡಿಯುತ್ತ ಇದ್ದೀಯಲ್ಲೋ, ಸಮುದ್ರದಲ್ಲಿ ಮೀನು ಹಿಡೀಬೇಕು. ಇಂತಹ ಶೋ ವಿದೇಶಗಳಲ್ಲಿ ಕೊಟ್ಟರೆ ಸಾಕಷ್ಟು ದುಡ್ಡು ಮಾಡಬಹುದು’ ಅಂತ ನನ್ನ ತಲೆಯಲ್ಲೊಂದು ಹುಳ ಬಿಟ್ಟರು. ಸರಿ, ಇಬ್ಬರೂ ವಿದೇಶಕ್ಕೆ ಹೋಗೋದೂಂತ ನಿರ್ಧಾರ ಮಾಡಿದ್ವಿ.
ದುಬೈಯಲ್ಲಿ ವರ್ಷಕ್ಕೊಮ್ಮೆ ‘ದುಬೈ ಫೆಸ್ಟಿವಲ್’ ಅಂತ ಬಹಳ ದೊಡ್ಡ ವಾಣಿಜ್ಯ ಮೇಳ ನಡೆಯುತ್ತದೆ. ದೇಶ-ವಿದೇಶಗಳ ವ್ಯಾಪಾರಿಗಳು ತಮ್ಮ ಸರಕನ್ನು ಮಾರಲು ಬರುತ್ತಾರೆ. ಕೋಟ್ಯಂತರ ರೂಪಾಯಿ ವ್ಯವಹಾರವಾಗುತ್ತದೆ. ಇಲ್ಲಿ ವ್ಯಾಪಾರಿ ಮಳಿಗೆಗಳು ಮಾತ್ರವಲ್ಲದೆ, ಮನರಂಜನಾ ಕಾರ್ಯಕ್ರಮಗಳೂ ನಡೆಯುತ್ತವೆ. ಈ ಮೇಳದಲ್ಲಿ ಮ್ಯಾಜಿಕ್ ಶೋ ಮತ್ತು ಕಿಟ್ಗಳನ್ನು ಮಾರಿದರೆ ಸಕತ್ ಲಾಭ ಅಂತ ಲೆಕ್ಕಾಚಾರ ಹಾಕಿದ ಕಿಣಿ ಮತ್ತು ನಾನು ದುಬೈಗೆ ಹೊರಟೆವು. ದುಬೈನ ಆರ್ಗನೈಸರ್ ಅಲ್ಲಿಯವರೆಗೆ ಅಮೆರಿಕದ ಜಾದೂಗಾರರಿಗೆ ಮಾತ್ರ ಪ್ರದರ್ಶನ ಮಾಡಲು ಅವಕಾಶ ಕೊಡುತ್ತಿದ್ದರು. ನಮ್ಮ ಶೋವನ್ನು ಅದಕ್ಕಿಂತ ಹೆಚ್ಚಾಗಿ ಇಷ್ಟಪಡುವಂತೆ ಮಾಡುವುದೇ ನಮ್ಮ ಉದ್ದೇಶವಾಗಿತ್ತು.
ಸರಿ, ಇಬ್ಬರೂ ದುಬೈಗೆ ಹೊರಟದ್ದಾಯ್ತು. ಏರ್ಪೋರ್ಟ್ ನಲ್ಲಿ ತಪಾಸಣಾಧಿಕಾರಿಗಳು ಬಂದ ತಕ್ಷಣ ನಾನು ಪುಟ್ಟ ಮ್ಯಾಜಿಕ್ ತೋರಿಸಲು ಪ್ರಾರಂಭಿಸಿದೆ. ಅಧಿಕಾರಿಗಳು ದಂಗಾಗಿ ನೋಡುತ್ತ ನಿಂತರು. ಇದೇ ಸಂದರ್ಭವೆಂದು ಕಿಣಿ, ನನ್ನಲ್ಲಿದ್ದ ಮ್ಯಾಜಿಕ್ಗೆ ಬಳಸುವ ಪಾರಿವಾಳಗಳ ಗೂಡನ್ನು ಹಿಡಿದುಕೊಂಡು ಸೀದಾ ಗೇಟ್ ನುಗ್ಗಿ ಒಳಗೆ ಹೋದರು (ಪ್ರಾಣಿ-ಪಕ್ಷಿಗಳನ್ನು ವಿಶೇಷ ಪರವಾನಗಿ ಇಲ್ಲದೆ ವಿಮಾನದಲ್ಲಿ ಕೊಂಡೊಯ್ಯುವಂತಿಲ್ಲ), ಎಲ್ಲವೂ ನಿರಾಯಾಸವಾಗಿ ನಡೆಯಿತು.
ದುಬೈನಲ್ಲಿ ಬಂದಿಳಿದೆವು. ನಮ್ಮ ವಾಸ್ತವ್ಯಕ್ಕೆ ಶರತ್ ಶೆಟ್ಟಿಯವರ ‘ಅಣ್ಣಾ ಪ್ಯಾಲೇಸ್’ ಉಚಿತವಾಗಿ ದೊರೆಯಿತು. ಆದರೆ ಮೇಳದಲ್ಲಿ ಭಾಗವಹಿಸಲು ಸ್ಟಾಲ್ಗಳನ್ನು ಹಲವು ತಿಂಗಳುಗಳ ಮೊದಲೇ ಅಡ್ವಾನ್ಸ್ ಕೊಟ್ಟು ಪಡೆಯಬೇಕಾಗಿತ್ತು. ಅದನ್ನು ನಾವು ಮಾಡದೇ ಇದ್ದ ಕಾರಣ ಭಾಗವಹಿಸುವುದು ಸುತರಾಂ ಸಾಧ್ಯವಿರಲಿಲ್ಲ. ತಪನ್ ಬ್ರಹ್ಮ ಎಂಬುವನು ಸ್ಟಾಲ್ ನೀಡುವ ಅಧಿಕಾರಿಯಾಗಿದ್ದ. ಇವನ ಆಫೀಸ್ ಇದ್ದುದು ಶಾರ್ಜಾದಲ್ಲಿ. ಹೇಗಾದರೂ ಮಾಡಿ ಅವನ ಮನವೊಲಿಸಿ ಸ್ಟಾಲನ್ನು ಪಡೆಯಬೇಕಾಗಿತ್ತು. ಅವನು ನೇರವಾದ ಭೇಟಿಗೆ ಸಿಗುವ ಆಸಾಮಿಯಲ್ಲ. ಈಗೇನು ಮಾಡೋದು? ಒಂದು ಐಡಿಯಾ ಹೊಳೀತು.
ಶಾರ್ಜಾಕ್ಕೆ ಹೋದೆವು. ಮಧ್ಯಾಹ್ನ ಒಂದು ಗಂಟೆಗೆ ತಪನ್ ತನ್ನ ಆಫೀಸ್ ಕೋಣೆಯಿಂದ ಹೊರಗೆ ಬರುತ್ತಾನೆಂದು ತಿಳಿಯಿತು. ನಾನು ಹನ್ನೆರಡು ಗಂಟೆಗೇ ನನ್ನ ಮ್ಯಾಜಿಕ್ ಪೋಷಾಕಿನಲ್ಲಿ ಐಟಂಗಳನ್ನು ಆಯಾಯ ಜಾಗದಲ್ಲಿ ಇಟ್ಟುಕೊಂಡು ಚೇಂಬರ್ನ ಬಾಗಿಲಲ್ಲಿ ಸಜ್ಜಾಗಿ ನಿಂತೆ. ಹೊರಗೆ ವಿಪರೀತ ಸೆಕೆ, ಡ್ರೆಸ್ ಒಳಗಡೆ ವಿಪರೀತ ಧಗೆ. ಮರಳುಗಾಡಿನ ಉರಿಬಿಸಿಲು ನನ್ನನ್ನೇ ಸುಡುತ್ತಿತ್ತು. ಆಗಿನ ನನ್ನ ಪಾಡು-ನನಗೇ ಪ್ರೀತಿ. ಆತನನ್ನು ಹೇಗಾದರೂ ಇಂಪ್ರೆಸ್ ಮಾಡುವುದು, ನಂತರ ಸ್ಟಾಲ್ ಗಿಟ್ಟಿಸುವುದು ನನ್ನ ಯೋಜನೆಯಾಗಿತ್ತು.
ಅಂದು ಆತ ಒಂದು ಗಂಟೆ ತಡವಾಗಿ ಅಂದರೆ ಸರಿಯಾಗಿ ಎರಡು ಗಂಟೆಗೆ ಬಂದ. ತಕ್ಷಣ ನಾನು ಶೋ ಪ್ರಾರಂಭಿಸಿದೆ. ಕರವಸ್ತ್ರಗಳಿಂದ ಪಾರಿವಾಳಗಳು ಹೊರಬರುವ ಮ್ಯಾಜಿಕ್ ನೋಡುತ್ತಿದ್ದಂತೆಯೇ ಆತ ದಂಗಾದ. ಕಿಣಿಯನ್ನು ಗಾಳಿಯಲ್ಲಿ ತೇಲಿಸುವ ಐಟಂ ನೋಡಿ ಸುಸ್ತಾದ. ಅದನ್ನೇ ಪುನಃ ಪುನಃ ಮಾಡಲು ಹೇಳಿದ. ಮಾಡಿದೆ. ಅವನಿಗೋ ಅದರ ರಹಸ್ಯ ತಿಳಿದುಕೊಳ್ಳುವ ಬಯಕೆ. ಕೊನೆಗೂ ಆತನಿಂದ ಅದು ಸಾಧ್ಯವಾಗಲಿಲ್ಲ. ಮುಂದೆ ನಡೆದದ್ದೆಲ್ಲ ಗಮ್ಮತ್ತಿನ ಕತೆ. ಸ್ಟಾಲ್ ಬಾಡಿಗೆಗೆ ತೆಗೆದುಕೊಂಡು ಶೋ ನಡೆಸುವ ಐಡಿಯಾದಲ್ಲಿ ಹೋದ ನಮ್ಮನ್ನೇ ವಸ್ತುಪ್ರದರ್ಶನದಲ್ಲಿ ಕಾರ್ಯಕ್ರಮ ಕೊಡಲು ನಿಯೋಜಿಸಿದ! ದಿನಕ್ಕೆ ಎರಡು ಪ್ರದರ್ಶನದಂತೆ 15 ದಿನಗಳ ಕಾರ್ಯಕ್ರಮ. ಒಟ್ಟು 13 ಲಕ್ಷ ರೂಪಾಯಿಗಳ ಕಾಂಟ್ರಾಕ್ಟ್. ಜನಸಂದಣಿ ಜಾಸ್ತಿಯಾದಂತೆ ದಿನಕ್ಕೆ 5-6 ಶೋ ಕೊಡಬೇಕಾಯ್ತು. ರಜಾ ದಿನಗಳಲ್ಲಿ ಹಿಂದಿನ ದಿನ ಪ್ರಾರಂಭಿಸಿದ ಶೋ ಮರುದಿನ ಬೆಳಗ್ಗೆ ಮುಗಿದದ್ದೂ ಇದೆ! ಸರಿ, ಹೆಚ್ಚುವರಿ ಶೋಗಳಿಗೆ ಹಣ ಕೊಡಬೇಕಾಗಿಲ್ಲ, ಆದರೆ ನಮಗೆ ಮ್ಯಾಜಿಕ್ ಕಿಟ್ಗಳನ್ನು ಮಾರಲು ಅವಕಾಶ ಕೊಡಬೇಕೆಂದು ಸಂಘಟಕರನ್ನು ಕೇಳಿದೆ. ಒಪ್ಪಿಗೆ ಸಿಕ್ಕಿತು. ಆದರೆ ಕಿಟ್ ವ್ಯಾಪಾರ ಡಲ್ಲೋ ಡಲ್ಲು.
ಇದಕ್ಕೆ ಕಾರಣವೇನೆಂದರೆ, ಶೋಗೆ ಬರುತ್ತಿದ್ದವರು ಹೆಚ್ಚಾಗಿ ಅರಬ್ಬಿಗಳು. ಅವರು ಶೋಗಳನ್ನು 2-3 ಸಲವಾದರೂ ನೋಡುತ್ತಿದ್ದರು. ಆದರೆ ಕಿಟ್ ಖರೀದಿಸುತ್ತಿರಲಿಲ್ಲ. ಇದಕ್ಕೆ ಕಾರಣ- ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಕಿಟ್ನಲ್ಲಿ ಐಟಂಗಳನ್ನು ಮಾಡುವ ವಿಧಾನವನ್ನು ವಿವರಿಸುವ ಪುಸ್ತಕ ಇಂಗ್ಲಿಷ್ನಲ್ಲಿತ್ತು. ಯೋಚನೆ ಮಾಡಿ ಮಾಡಿ ಇದಕ್ಕೆ ಒಂದು ಪರಿಹಾರ ಕಂಡುಕೊಂಡೆ. ಆ ಪುಸ್ತಕವನ್ನು ಅರೇಬಿಕ್ ಭಾಷೆಗೆ ತರ್ಜುಮೆ ಮಾಡಿಸಿ ಪ್ರಿಂಟ್ ಮಾಡಿಸಿದೆ. ನಂತರ ಕಿಟ್ಗಳು ಬಿಸಿದೋಸೆಯಂತೆ ಖರ್ಚಾದವು. ಆಮೇಲೆ ಪ್ರತಿವರ್ಷವೂ ‘ದುಬೈ ಫೆಸ್ಟಿವಲ್’ನಲ್ಲಿ ಮ್ಯಾಜಿಕ್ ಕಿಟ್ಗಳ ಸ್ಟಾಲ್ ಇಡುವ ವ್ಯವಸ್ಥೆ ಮಾಡಿದೆ. ಕಿಟ್ಗಳು ನಿರೀಕ್ಷೆಗಿಂತ ಮೊದಲೇ ಖಾಲಿ ಆಗುತ್ತಿದ್ದವು. ಕಿಣಿಯವರು ಮ್ಯಾಜಿಕ್ ಕಿಟ್ಗಳನ್ನು ಮಾರದ ದೇಶವೇ ಇಲ್ಲ. ಅಮೆರಿಕ, ಯುರೋಪ್ ದೇಶಗಳಿಗೆ ಸಾಕಷ್ಟು ಸಲ ಭೇಟಿ ಇತ್ತರು. ಹೀಗೆ ಅವರ ಪ್ರಪಂಚ ಸುತ್ತುವ ಕನಸು ಕಡೆಗೂ ನನಸಾಯಿತು.
ನೀತಿ: ನಾವಿದ್ದಲ್ಲಿಯೇ ಅವಕಾಶಗಳು ಹುಡುಕಿಕೊಂಡು ಬರದಿದ್ದಲ್ಲಿ ಅವಕಾಶಗಳಿರುವ ಕಡೆಗೆ ನಾವು ಹೋಗಬೇಕು. ಪ್ರಯತ್ನ ನಿರಂತರವಾಗಿ ಇರಬೇಕು. ಸಣ್ಣಪುಟ್ಟ ಸೋಲಿಗೆ ನಮ್ಮ ಮನಸ್ಸು ಸೋಲಬಾರದು.
ಅಸಂಗತ: ನಾನು ಸಣ್ಣವನಿದ್ದಾಗ ದುಡ್ಡಿಗೆ ತುಂಬ ಬೆಲೆ ಇದೆ ಅಂತ ಅನ್ಕೊಂಡಿದ್ದೆ. ದೊಡ್ಡವನಾದ ಮೇಲೆ ಗೊತ್ತಾಯ್ತು ‘ಹೌದು ಅಂತ’.
(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)