ಅಂಕಣ

ವಿಜಯವಾಣಿ ಸಂಪಾದಕೀಯ: ಸಂಕೀರ್ಣ ಸವಾಲು

ರಮೇಶ್​ ಕುಮಾರ್​​ ಬಿ ಎಡಮೋಳೆ

ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದುಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿರುವುದು ನಿರೀಕ್ಷಿತವೇ ಆಗಿದೆ. ಏಕೆಂದರೆ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಈ ಎರಡೂ ಕಾಯ್ದೆಗಳನ್ನು ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯ್ದೆಯ ಪ್ರಕಾರ, ಬಲವಂತವಾಗಿ ಮತಾಂತರ ಮಾಡಿದವರಿಗೆ 3-5 ವರ್ಷ ಜೈಲು ಶಿಕ್ಷೆ , 25 ಸಾವಿರ ರೂ. ದಂಡ ವಿಧಿಸಲು ಹಾಗೂ ಅಪ್ರಾಪ್ತ, ಬುದ್ದಿಮಾಂದ್ಯರನ್ನು ಮತಾಂತರ ಮಾಡಿದರೆ 3-10 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿತ್ತು. ಆಮಿಷ ಒಡ್ಡುವ ಮೂಲಕ ಇಲ್ಲವೇ ಬಲವಂತವಾಗಿ ಮತಾಂತರ ತಡೆಗಟ್ಟಲು ಉದ್ದೇಶಿಸಿ ಜಾರಿಗೊಳಿಸಲಾದ ಈ ಕಾನೂನನ್ನು ರಾಜ್ಯ ಸರ್ಕಾರ ಯಾವ ರೀತಿ ಹಿಂದೆ ಪಡೆಯಲಿದೆ ಎಂಬುದು ಸಂಕೀರ್ಣ ಹಾಗೂ ಸವಾಲಿನ ಸಂಗತಿಯಾಗಿದೆ.

ನೂತನ ಸರ್ಕಾರ ಉದ್ದೇಶಿಸಿರುವ ಹೊಸ ಮತಾಂತರ ಕಾಯ್ದೆಯ ಪ್ರಕಾರ, ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಅರ್ಜಿ ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡಬೇಕು. ಮತಾಂತರ ಮಾಡಿಸುವ ವ್ಯಕ್ತಿಯೂ ಒಂದು ತಿಂಗಳ ಮೊದಲು ಅರ್ಜಿ ನೀಡಬೇಕು. ಇದಕ್ಕೆ ತಕರಾರು ಸಲ್ಲಿಸಬಯಸುವವರಿಗೆ ದೂರು ದಾಖಲಿಸಲು ಅವಕಾಶ ಕೊಡಲಾಗುವುದು ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ವಾಗ್ವಾದ ನಿರೀಕ್ಷಿತ. ಆದರೆ, ಈ ಕಾನೂನು ರದ್ದುಮಾಡುವುದು ಎಂದರೆ ಬಲವಂತದ ಅಥವಾ ಆಮಿಷದ ಮತಾಂತರಕ್ಕೆ ಅವಕಾಶ ನೀಡಿದಂತೆ ಎಂಬ ತಪು್ಪ ಸಂದೇಶ ರವಾನೆಯಾಗಿ, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಜವಾಬ್ದಾರಿ ಮಾತ್ರ ಸರ್ಕಾರದ್ದೇ ಆಗಿರುತ್ತದೆ.

ಹಿಂದಿನ ಸರ್ಕಾರ ಕೈಗೊಂಡಿದ್ದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ರದ್ದು ಮಾಡಿ, ಹಳೆಯ ಪಠ್ಯವನ್ನು ಮುಂದುವರಿಸಲು ಸರ್ಕಾರ ತೀರ್ವನಿಸಿರುವುದು ಕೂಡ ನಿರೀಕ್ಷಿತವೇ ಆಗಿದೆ. ವಿ.ಡಿ. ಸಾರ್ವಕರ್ ಮತ್ತು ಹೆಡಗೇವಾರ್ ಕುರಿತ ಅಧ್ಯಾಯಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಸರ್ಕಾರಗಳು ಬದಲಾದಾಗಲೆಲ್ಲ ಈ ರೀತಿ ನಡೆದರೆ, ರಾಜಕೀಯ ಸಿದ್ಧಾಂತಗಳಿಂದ ಪ್ರೇರಿತವಾದ ಪಠ್ಯ ಬದಲಾವಣೆಯ ಪ್ರಯೋಗಗಳಿಗೆ ವಿದ್ಯಾರ್ಥಿಗಳು ಒಡ್ಡಿಕೊಳ್ಳಬೇಕಾಗುತ್ತದೆ ಎಂಬುದು ಕಳವಳಕಾರಿ. ವಿದ್ಯಾರ್ಥಿಗಳ ಜ್ಞಾನ, ಬೌದ್ಧಿಕ ವಿಕಾಸ, ನೈತಿಕ ಮೌಲ್ಯ ಬೆಳೆಸಲು ಕೊಡುಗೆ ನೀಡುವ ಯೋಗ್ಯ ಪಠ್ಯವನ್ನು ಯಾವುದೇ ರಾಜಕೀಯ ಬೆರೆಸದೆ ಪರಿಣತರು, ತಜ್ಞರ ಮಾರ್ಗದರ್ಶನದೊಂದಿಗೆ ರೂಪಿಸುವಂತಾಗಬೇಕು.

ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರೈತರಿಗಾಗಲಿ, ವರ್ತಕರಿಗಾಗಲಿ ಅನುಕೂಲವಾಗಲಿಲ್ಲ ಎಂದಿರುವ ಕಾಂಗ್ರೆಸ್ ಸರ್ಕಾರ, ಇದನ್ನು ರದ್ದುಪಡಿಸಿ ಮೂಲ ಕಾಯ್ದೆಯನ್ನು ಸುಧಾರಿತ ರೂಪದೊಂದಿಗೆ ಜುಲೈ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಈ ಕ್ರಮಗಳು ರೈತರಿಗೆ ಪ್ರಯೋಜನ ತರುತ್ತವೆಯೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ, ನೂತನ ಸರ್ಕಾರದ ನೀತಿನಿಲುವುಗಳ ಜಾರಿ ಮತ್ತು ಅನುಷ್ಠಾನದ ಪರಿಣಾಮವನ್ನು ಕಾದುನೋಡಬೇಕಿದೆ.