ಸ್ವಾಮಿ ಶಿವಾನಂದ ಅವರು ಪದ್ಮಶ್ರೀ ಪುರಸ್ಕಾರ ಸ್ವೀಕರಿಸಿದ ಸಂದರ್ಭ 
ಅಂಕಣ

ದೇಹ, ಮನಸ್ಸುಗಳ ನಿಗ್ರಹದ ಯೋಗದಿಂದ ಆರೋಗ್ಯ

Webdesk - Ravikanth
ಮೂರು-ನಾಲ್ಕು ದಶಕಗಳ ಹಿಂದಿದ್ದ ನಮ್ಮ ಹಿರಿಯರ ಆರೋಗ್ಯಕ್ಕೂ ಪ್ರಸ್ತುತ ನಮ್ಮ ಆರೋಗ್ಯಕ್ಕೂ ಹೋಲಿಕೆ ಮಾಡಿದರೆ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. ಅಜ್ಜಿ-ತಾತಂದಿರು ಸದೃಢ ಆರೋಗ್ಯ ಹೊಂದಿದ್ದರು. ದೈಹಿಕ ಆರೋಗ್ಯದಷ್ಟೇ ಮಾನಸಿಕವಾಗಿಯೂ ಕ್ಷಮತೆ ಹೊಂದಿದ್ದರು. ಮಾತು-ನಡವಳಿಕೆಗಳು ಕೂಡ ಅಚ್ಚುಕಟ್ಟಾಗಿ ಇರುತ್ತಿದ್ದವು.

ಪ್ರತಿನಿತ್ಯ ಬೆಳಗ್ಗೆ ಎದ್ದೊಡನೆ ನಿತ್ಯ ಕರ್ವದಿಗಳನ್ನು ಮುಗಿಸಿ, ಶುಚಿಯಾಗಿ ಕಾಯಕವನ್ನು ಆರಂಭಿಸುವುದು ಭಾರತೀಯರ ಪರಿಪಾಠ. ನಿತ್ಯವೂ ನಮ್ಮ-ನಮ್ಮ ಮನೆ, ವಠಾರಗಳ ಕಸ-ಕಡ್ಡಿ, ಧೂಳುಗಳನ್ನು ತೆಗೆದು ಶುಚಿಗೊಳಿಸುತ್ತ ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛವಾಗಿ ಇರಿಸಲು ಪ್ರಯತ್ನಿಸುತ್ತಿರುತ್ತೇವೆ. ಅದೆಷ್ಟು ಶುಚಿ ಮಾಡಿದರೂ, ಎಚ್ಚರ ವಹಿಸಿದರೂ ಕಸ ಇತ್ಯಾದಿ ತ್ಯಾಜ್ಯ ವಸ್ತುಗಳು ಉಂಟಾಗುತ್ತಲೇ ಇರುತ್ತವೆ. ಹಾಗೆಯೇ ನಮ್ಮ ಮನೋವಾಕ್​ಕಾಯ (ಮನಸ್ಸು, ಮಾತು, ಶರೀರ)ಗಳನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳಲು ನಾವು ಸದಾ ಪ್ರಯತ್ನಿಸುತ್ತೇವೆ. ಶರೀರವನ್ನು ಅದೆಷ್ಟು ಜಾಗ್ರತೆ ವಹಿಸಿದರೂ ಅನಾರೋಗ್ಯ ತಪ್ಪಿದ್ದಲ್ಲ. ನಾವು ಅತೀ ಜಾಗ್ರತೆ ವಹಿಸಿದರೂ ಕರೊನಾ ಸೋಂಕಿನ ಹರಡುವಿಕೆ ತಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ನೋಡಿದ್ದೇವೆ.

ಹಿಂಸಾತ್ಮಕದೃಶ್ಯ ನೋಡಿದಾಗ ಮನಸ್ಸು ವ್ಯಗ್ರಗೊಳ್ಳುತ್ತದೆ. ಮಗು ನಗೆ ಬೀರುವುದನ್ನು ಕಂಡಾಗ ಮನಸ್ಸು ಪ್ರಫುಲ್ಲವಾಗುತ್ತದೆ. ಸ್ನೇಹಿತರು ಅಥವಾ ಇನ್ಯಾರಾದರೂ ಹೊಗಳಿದಾಗ ಖುಷಿಯಾಗುತ್ತದೆ, ತೆಗಳಿದಾಗ ಬೇಸರ, ದುಃಖ ಆಗುತ್ತದೆ. ಹೀಗೆ ಆಯಾ ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಮನಸ್ಸು ಭಾವನಾತ್ಮಕವಾಗುತ್ತದೆ. ಮಾತು ಆಡುವವನಿಗೂ, ಕೇಳುವವನಿಗೂ ಹಿತವಾಗಿ ಇರಬೇಕು. ಇಲ್ಲದಿದ್ದಲ್ಲಿ ಇಬ್ಬರಿಗೂ ನಷ್ಟ. ‘ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್’ ಎಂದು ಗೀತೆ ಹೇಳುತ್ತದೆ. ಜೊತೆಗೆ ನಡೆ-ನುಡಿ ಎರಡೂ ಒಂದೇ ತರಹ ಇರಬೇಕು. ಹಾಗಾಗಿ ಮಾತು ಮುತ್ತಿನಂತೆ, ಒಡೆದರೆ ಮತ್ತೆ ಜೋಡಿಸಲಾಗುವುದಿಲ್ಲ. ಆದ್ದರಿಂದಲೇ ಎಚ್ಚರ ವಹಿಸಬೇಕಾಗುತ್ತದೆ.

ದೇಹದ ವಿಷಯಕ್ಕೆ ಬಂದರೆ ಎಷ್ಟು ಕಾಳಜಿ ಮಾಡಿದರೂ ಸಾಲದು. ಹೊತ್ತು-ಹೊತ್ತಿಗೆ ಸರಿಯಾಗಿ ಊಟ, ತಿಂಡಿ, ನಿದ್ದೆ, ವಿಶ್ರಾಂತಿ ಇವೆಲ್ಲ ನಡೆಯಬೇಕು. ಇಲ್ಲದಿದ್ದಲ್ಲಿ ಅನಾರೋಗ್ಯಕ್ಕೆ ಗುರಿಯಾಗಬೇಕಾಗುತ್ತದೆ. ಮನಸ್ಸು, ಮಾತು, ಕಾಯ ಇವನ್ನು ಉತ್ತಮವಾಗಿ ಇರಿಸಿಕೊಂಡಾಗ ಸ್ವಸ್ಥವಾಗಿರಲು ಸಾಧ್ಯ. ಮನೆಯೊಳಗೆ ಕಸ, ಧೂಳು ಬರುವಂತೆ ನಮ್ಮ ಮನೋವಾಕ್​ಕಾಯಗಳಿಗೂ ಅನೇಕ ದೋಷಗಳೂ ಬರುತ್ತಿರುತ್ತವೆ. ಅವನ್ನು ಆಗಾಗ ಶುದ್ಧೀಕರಣ ಮಾಡದೇ ಇದ್ದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ನಮ್ಮ ನಡೆ-ನುಡಿ ತಪ್ಪಬಹುದು, ದೇಹ ಕೃಶವಾಗಬಹುದು. ಒಟ್ಟಿನಲ್ಲಿ ಸ್ವಾಸ್ಥ್ಯ ಕೆಡುವುದಂತೂ ನಿಜ. ಯೋಗದಿಂದ ಎಲ್ಲ ದೋಷಗಳನ್ನು ನಿವಾರಿಸಿಕೊಳ್ಳಲು ಸಾಧ್ಯ ಎಂದು ನಮ್ಮ ಪೂರ್ವಜರು ಸುಮಾರು ಸಹಸ್ರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು.

ಭಾರತವು ಯೋಗದ ಮೂಲ ಎಂಬುದು ನಾವೆಲ್ಲ ಹೆಮ್ಮೆ ಪಡುವಂಥ ಸಂಗತಿ. ಯೋಗ ಪಿತಾಮಹ ಪತಂಜಲಿ ಮಹಾಮುನಿಯು ‘ಯೋಗ ಸೂತ್ರ’ ಗ್ರಂಥದಲ್ಲಿ ‘ಯೋಗಃ ಚಿತ್ತವೃತ್ತಿ ನಿರೋಧಃ’ ಎಂದು ಯೋಗವನ್ನು ಸರಳವಾಗಿ ವ್ಯಾಖ್ಯಾನಿಸಿದ್ದಾನೆ. ಅಂದರೆ ಯೋಗವು ನಮ್ಮ ಮನಸ್ಸಿನ ವಿವಿಧ ವೃತ್ತಿಗಳನ್ನು ಹತೋಟಿಯಲ್ಲಿಡುವುದು, ಚಿತ್ತಚಂಚಲತೆಯನ್ನು ನಿಯಂತ್ರಣ ಮಾಡುವುದು ಎಂದಿದ್ದಾನೆೆ. ಚಿತ್ತದ ಸ್ಥಿರತೆಯಿಂದ ಅನೇಕ ದೋಷಗಳನ್ನು ದೂರ ಮಾಡಬಹುದು.

ಆರೋಗ್ಯವಾಗಿ ಇರುವುದು ಎಂದರೆ ಶಾರೀರಿಕ ಮತ್ತು ಮಾನಸಿಕವಾಗಿ ಯಾವುದೇ ರೀತಿಯ ರೋಗವನ್ನು ಹೊಂದದೇ ಇರುವುದಾಗಿದೆ. ಅದನ್ನೇ ‘ನೀರೋಗಃಆರೋಗ್ಯಃ’ ಎಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೈಹಿಕ ಮತ್ತು ಮಾನಸಿಕವಾಗಿ ರೋಗಮುಕ್ತರಾಗಿರುವವರೇ ಸ್ವಸ್ಥರು. ಈ ಸ್ವಾಸ್ಥ್ಯವನ್ನು ಯೋಗದಿಂದ ಪಡೆಯಲು ಸಾಧ್ಯ ಎಂದು ಅನಾದಿ ಕಾಲದಲ್ಲೇ ಭಾರತೀಯ ಋಷಿ-ಮುನಿಗಳು ಕಂಡುಕೊಂಡಿದ್ದರು. ಇಂದಿನ ಜೀವನಶೈಲಿಯಲ್ಲಿ ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ ಜನರು ದೇಹಾರೋಗ್ಯ ರಕ್ಷಣೆಗಾಗಿ ವಾಕಿಂಗ್, ಜಾಗಿಂಗ್ ಮುಂತಾದವುಗಳನ್ನು ಮಾಡುತ್ತಿದ್ದಾರೆ. ಅದೂ ಸಾಕಾಗದು ಎಂದು ಸ್ವಿಮ್ಮಿಂಗ್, ಜಿಮ್ ಮುಂತಾದ ದೇಹದಂಡನೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಅಲ್ಲಿನ ಇಂತಹ ದೇಹದಂಡನೆ ಕ್ರಮಗಳು ಕ್ರಮೇಣ ನಮ್ಮಲ್ಲೂ ಆರಂಭವಾಗಿ ಎಲ್ಲೆಡೆ ವ್ಯಾಪಿಸಿದವು. ಈ ರೀತಿಯ ವ್ಯಾಯಾಮಗಳಲ್ಲಿ ಅಡ್ಡ ಪರಿಣಾಮಗಳಿವೆ (ಖಜಿಛಛಿ ಉ್ಛ್ಚಠ) ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದರ ನಡುವೆ ಭಾರತದ ಕೊಡುಗೆಯಾದ ಯೋಗವನ್ನು ನಾವು ಮರೆತೇ ಹೋಗಿದ್ದು ಬೇಸರದ ವಿಷಯ. ಇದೀಗ ‘ಓಲ್ಡ್ ಈಸ್ ಗೋಲ್ಡ್’ ಎಂಬಂತೆ ಯಾವುದೇ ಅಡ್ಡಪರಿಣಾಮಗಳಿಲ್ಲದ ಎಲ್ಲ ವಯಸ್ಸಿನವರೂ ಪಾಲಿಸಬಹುದಾದ ನಮ್ಮ ಪ್ರಾಚೀನ ಯೋಗಶಾಸ್ತ್ರಕ್ಕೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲೂ ಬೇಡಿಕೆ ಬಂದಿದೆ. ವಿವಿಧ ದೇಶಗಳಲ್ಲೂ ಯೋಗದ ಕುರಿತಾಗಿ ಸಾಕಷ್ಟು ಅಧ್ಯಯನ ಮಾಡಲು ಮುಂದೆ ಬಂದಿರುವುದಲ್ಲದೆ ಯೋಗ ಶಾಸ್ತ್ರವನ್ನು ತಿಳಿಯಲು ಉತ್ಸುಕರಾಗಿದ್ದಾರೆ.

ಕಳೆದ ಎಂಟು ವರ್ಷಗಳಿಂದೀಚೆಗೆ ಕೇಂದ್ರ ಸರ್ಕಾರವು ಯೋಗವನ್ನು ವಿಶ್ವವ್ಯಾಪಿಗೊಳಿಸಲು ಸಾಕಷ್ಟು ಮುತುವರ್ಜಿ ವಹಿಸಿದ್ದು, ಸಫಲ ಹೊಂದುವತ್ತ ಮುನ್ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯಿಂದ ಜೂನ್ 21 ಯೋಗದಿನವಾಗಿ ಪ್ರಸಿದ್ಧವಾಗಿದೆ. ಈ ಬಾರಿ ಜೂನ್ 21ರಂದು ವಿಶ್ವದಾದ್ಯಂತ ನಡೆಯುವ ವಿಶೇಷ ಯೋಗ ದಿನಕ್ಕೆ ಪೂರ್ವಭಾವಿಯಾಗಿ 100 ದಿನಗಳ ಮುಂಚಿತವಾಗಿ ದೇಶದ 100 ಅಗ್ರಗಣ್ಯ ಯೋಗ ಸಂಸ್ಥೆಗಳಿಂದ 100 ಐತಿಹಾಸಿಕ ಸ್ಥಳಗಳಲ್ಲಿ ಒಂದು ದಿನದ ಯೋಗ ಪ್ರಾತ್ಯಕ್ಷಿಕೆ ಹಾಗೂ ಸಂಪೂರ್ಣ ಮಾಹಿತಿ ನೀಡುವ ಕಾರ್ಯಾಗಾರ ನಡೆಯಬೇಕೆಂದು ಸೂಚಿಸಿದ್ದಾರೆ. ಇದರ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಭಾರತ ಸರ್ಕಾರದ ಆಯುಷ್ ಇಲಾಖೆ, ನವದೆಹಲಿಯ ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪಥಿ ಕಾಲೇಜು ಮತ್ತು ಆಸ್ಪತ್ರೆಗಳ ಸಹಯೋಗದಲ್ಲಿ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಇದಲ್ಲದೆ ಕಾರ್ಕಳದಲ್ಲಿ 5 ಸಾವಿರ ಮಂದಿ ಭಾಗವಹಿಸಲಿರುವ ವಿಶೇಷ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

‘ಭವತಾಪೇನತಪ್ತಾನಾಮ್ೊಗೋ ಹಿ ಪರಮೌಷಧಮ್. ಅಂದರೆ ಭೂಮಿ ಮೇಲೆ ಜನ್ಮತಳೆದು ಎದುರಾಗುವ ಎಲ್ಲ ಸಮಸ್ಯೆ, ನೋವು, ದುಗುಡ-ದುಮ್ಮಾನಗಳಿಗೆ ಈ ಸೃಷ್ಟಿಯಲ್ಲಿ ಸಿಗುವ ಏಕೈಕ ಔಷಧ ಯೋಗ ಎಂಬುದನ್ನು ಮರೆಯದಿರೋಣ. ಯೋಗವು ಭಾರತದ ಹೆಮ್ಮೆಯಾಗಿದ್ದು, ಮುಂದಿನ ಪೀಳಿಗೆಗೆ ಅವುಗಳ ಮಹತ್ವ ತಿಳಿಸಿಕೊಡುವ ಕಾರ್ಯ ಇನ್ನಷ್ಟು ಆಗಬೇಕಿದೆ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸುಮಾರು 25 ವರ್ಷಗಳ ಹಿಂದೆಯೇ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮತ್ತು ಆರ್ಯುವೇದ ಚಿಕಿತ್ಸೆಗಳನ್ನೆಲ್ಲ ಆರಂಭಿಸಲಾಗಿತ್ತು. ಕಾಲೇಜು ಮತ್ತು ಆಸ್ಪತ್ರೆಗಳ ಮೂಲಕ ದೇಹಾರೋಗ್ಯ ಕಾಪಾಡಿಕೊಳ್ಳುವ ಕಾರ್ಯ ಆರಂಭವಾಗಿತ್ತು. ಹಲವು ವರ್ಷಗಳ ನಮ್ಮ ಪರಿಶ್ರಮ ಹಾಗೂ ಪ್ರಯತ್ನದ ಫಲವಾಗಿ ಅವುಗಳಿಗೆಲ್ಲ ಸರ್ಕಾರವು ಮಾನ್ಯತೆ ನೀಡಿದೆ ಹಾಗೂ ಅಂತಹ ಕಾರ್ಯಗಳಿಗೆ ಪ್ರೇರಣೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂಬುದು ಸಂತೋಷದ ವಿಚಾರ. ಯೋಗವೆಂದರೆ ಬರೀ ದೇಹದಂಡನೆಯಲ್ಲ. ಅದು ನಮ್ಮ ಜೀವನಕ್ರಮವೆಂದರೆ ತಪ್ಪಾಗಲಾರದು. ಯಾಕೆಂದರೆ ನಮ್ಮ ಬಹುತೇಕ ಹಿರಿಯೆರೆಲ್ಲ ಪಾರಂಪರಿಕವಾಗಿ ಯೋಗ ಕಲಿತವರಲ್ಲ. ಆದರೂ ಅವರಿಗೆ ಯೋಗದ ಬಗ್ಗೆ ಅರಿವು ಇತ್ತು. ಮಹತ್ವಗಳು ಗೊತ್ತಿತ್ತು. ಹಾಗಾಗಿಯೇ ಅವನ್ನು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡಿದ್ದು, ಯೋಗವನ್ನೇ ಜೀವನಕ್ರಮವನ್ನಾಗಿಸಿಕೊಂಡಿದ್ದರು.

ಯೋಗೋ ಜನನೀ ಯೋಗೋ ಜನಕೋ ಯೋಗೋ ಗುರುರಪಿ ಹಿತಕಾರೀ |

ಯೋಗೋ ಬಂಧುರ್ಯೂೕಗೋ ಮಿತ್ರಂಯೋಗೋಧಿಸ್ಮಾಕಂ ಸರ್ವಸ್ವಮ್ ||

ಯೋಗವೇ ತಾಯಿ, ಯೋಗವೇ ತಂದೆ, ಯೋಗವೇ ಹಿತವನ್ನುಂಟು ಮಾಡುವ ಗುರು, ಯೋಗವೇ ಬಂಧು, ಯೋಗವೇ ಮಿತ್ರ, ನಮಗೆ ಎಲ್ಲವೂ ಯೋಗವೇ ಎಂಬಂತೆ ಸರ್ವಸ್ವವೂ ಯೋಗಮಯವಾಗಿತ್ತು.

ಅವರ ಆಹಾರ ಸಾತ್ವಿಕವಾಗಿತ್ತು. ಮನಸ್ಸು ಯಾವ ಕೋಪ, ದ್ವೇಷಗಳಿಲ್ಲದೆ ಶಾಂತಿ-ನೆಮ್ಮದಿಯಿಂದ ಕೂಡಿತ್ತು. ಮಾತು-ಕೃತಿಯು ಅಚ್ಚುಕಟ್ಟುತನದಿಂದ ಕೂಡಿತ್ತು. ಎಲ್ಲ ತಾವೇ ಶ್ರಮವಹಿಸಿ ಮಾಡುವುದರಿಂದ ದೇಹವೂ ಕಟ್ಟುಮಸ್ತಾಗಿತ್ತು. ಅವರು ಮಾಡುತ್ತಿದ್ದ ಪ್ರತಿಯೊಂದು ಕೆಲಸವೂ ಒಂದಲ್ಲ ಒಂದು ವ್ಯಾಯಾಮಗಳೇ ಆಗಿದ್ದವು. ಗದ್ದೆ ಉಳುವುದಿರಲಿ, ಕೃಷಿ ಕೆಲಸವಿರಲಿ, ಬಾವಿಯಿಂದ ನೀರು ಸೇದುವ ಕ್ರಮವಿರಲಿ, ಅಕ್ಕಿ ರುಬ್ಬುವುದಿರಲಿ ಹೀಗೆ ಎಲ್ಲ ಕೆಲಸಗಳಲ್ಲಿ ವ್ಯಾಯಾಮ ದೊರೆತು ಸ್ವಾಸ್ಥ್ಯವಿತ್ತು.

ಯೋಗದಲ್ಲಿ ಹಲವು ವಿಭಾಗಗಳಿದ್ದು ಇವು ಮಾನವಜೀವನವನ್ನು ಉನ್ನತೀಕರಿಸಲು ಸಹಕರಿಸುತ್ತವೆ. ನಮ್ಮ ನಿತ್ಯಕರ್ಮಗಳು, ಸಮಾಜದಲ್ಲಿ ನಡೆದುಕೊಳ್ಳಬೇಕಾದ ರೀತಿ-ನೀತಿ, ಉಪಾಸನೆ, ದೇಹದಂಡನೆ, ವಿಶ್ರಾಂತಿ ಹೀಗೆ ಹಲವು ವಿಚಾರಗಳನ್ನು ತಿಳಿಸುವ ಮೂಲಕ ಯೋಗವು ಜ್ಞಾನವಿಕಾಸಕ್ಕೆ ಸಹಕಾರಿಯಾಗಿದೆ. ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಯೋಗಾಭ್ಯಾಸ ಮಾಡಬಹುದಾಗಿದೆ. ಯೋಗದ ಕುರಿತಾಗಿ ಕೆಲವು ಅಂತೆ-ಕಂತೆ ಸುದ್ದಿಗಳು ಇದ್ದು, ಅವೆಲ್ಲವನ್ನು ನಂಬದೆ ಯೋಗದಿಂದ ದೊರಕುವ ಪ್ರಯೋಜನವನ್ನು ಪಡೆಯುವ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ. ಸಂಶಯದ ಸಮಸ್ಯೆಗಳನ್ನು ಪ್ರಶ್ನಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಭಾರತದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ವಿವಿಧ ಸಾಧಕರುಗಳಿಗೆ ಇತ್ತೀಚೆಗೆ ನೀಡಲಾಯಿತು. ಈ ವೇಳೆ ಯೋಗ ಗುರುಗಳಾಗಿರುವ ಸ್ವಾಮಿ ಶಿವಾನಂದ ಅವರು ಯೋಗ ಸಾಧನೆಗಾಗಿ ಪದ್ಮಶ್ರೀ ಗೌರವ ಪ್ರಶಸ್ತಿಗೆ ಭಾಜನಾರಾದರು. ಅವರು ಗೌರವ ಸ್ವೀಕರಿಸಿದ ಕ್ಷಣವನ್ನು ಕಂಡು ನನಗೆ ಆಶ್ಚರ್ಯವೂ, ಸಂತೋಷವೂ ಆಯಿತು. ಏಕೆಂದರೆ 125 ವರ್ಷ ವಯಸ್ಸಿನ ಅವರು ನಮ್ಮೆಲ್ಲರನ್ನೂ ನಾಚಿಸುವಂತೆ ಪುಟ-ಪುಟನೆ ನಡೆದುಕೊಂಡು ಬಂದು ಅಲ್ಲಿದ್ದ ಗೌರವಾನ್ವಿತರಿಗೆ ನಂದಿ ಭಂಗಿಯಲ್ಲಿ ನಮಸ್ಕಾರ ಮಾಡಿ ರಾಷ್ಟ್ರಪತಿಗಳಿಂದ ಸನ್ಮಾನ ಸ್ವೀಕರಿಸಿದ ಕ್ಷಣ ಯೋಗಕ್ಕೆ ದೊರೆತ ಗೌರವವೇ ಆಗಿದೆ. ಇಂದಿನ ದಿನಗಳಲ್ಲಿ 60-70 ವಯಸ್ಸಿಗಾಗಲೇ ದೇಹದಚೈತನ್ಯ ಕಳೆದುಕೊಳ್ಳುವುದರ ಜೊತೆಗೆ ಊರು ಹೋಗು-ಕಾಡು ಬಾ ಅನ್ನುತ್ತದೆ ಎಂಬ ರೀತಿಯಲ್ಲಿ ಅನೇಕರು ಮಾತನಾಡಲು ಆರಂಭಿಸಿರುತ್ತಾರೆ. ವೃದ್ಧಾಪ್ಯ ಕೂಡ ಬಹಳ ಬೇಗನೇ ಆವರಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಈ 125 ವರ್ಷದ ಮಹನೀಯರು ಅಷ್ಟೊಂದು ಲವಲವಿಕೆ, ಚೈತನ್ಯದಿಂದ ಇರಲು ನಮ್ಮ ಭಾರತೀಯ ಯೋಗ ಪರಂಪರೆಯೇ ಮುಖ್ಯ ಕಾರಣ ಎಂಬುದಕ್ಕೆ ಸಂಶಯವೇ ಇಲ್ಲ. ಹಾಗೂ ಯೋಗದಿಂದ ಹೇಗೆ ಆರೋಗ್ಯವನ್ನು ಹೊಂದಬಹುದು ಎಂಬುದಕ್ಕೆ ಅವರೇ ಪ್ರತ್ಯಕ್ಷ ನಿದರ್ಶನ.

ಕೆಲವು ತಿಂಗಳುಗಳ ಹಿಂದೆ ಕೀನ್ಯಾದ ಮಾಜಿ ಪ್ರಧಾನಿಯೋರ್ವರು ಮಗಳ ಕಣ್ಣಿನ ದೃಷ್ಟಿಗಾಗಿ ನಮ್ಮ ನೆರೆಯ ನಾಡು ಕೇರಳಕ್ಕೆ ಆಗಮಿಸಿ ಪಾರಂಪರಿಕ ಆರ್ಯುವೇದ ಔಷಧದ ಸಹಾಯದಿಂದ ಚಿಕಿತ್ಸೆ ಪಡೆದರು. ಈ ಚಿಕಿತ್ಸೆ ಮೂಲಕ ಅವರ ಮಗಳು ಕಣ್ಣಿನದೃಷ್ಟಿಯನ್ನು ಮರಳಿ ಪಡೆದಳು. ಈ ಸಂಗತಿಯನ್ನು ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಂಚಿಕೊಂಡು, ‘ಇಲ್ಲಿನ ಪಾರಂಪರಿಕ ವೈದ್ಯ ಪದ್ಧತಿಯನ್ನು ನಮ್ಮ ಆಫ್ರಿಕಾಖಂಡಕ್ಕೂ ಪರಿಚಯಿಸಿ ಕೊಡಿ’ ಎಂದು ವಿಶೇಷವಾಗಿ ಮನವಿ ಮಾಡಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಹೀಗೆ ನಮ್ಮಲ್ಲಿರುವ ಯೋಗ, ಆರ್ಯುವೇದ, ಪ್ರಕೃತಿ ಚಿಕಿತ್ಸೆಗಳೆಲ್ಲ ವಿಶ್ವವ್ಯಾಪಿಯಾಗಿ ಜನರ ಆರೋಗ್ಯ ಹಾಗೂ ಜೀವನ ಗುಣಮಟ್ಟವನ್ನು ಸುಧಾರಿಸಿ ಸಮಷ್ಟಿಯ ಹಿತವನ್ನು ಕಾಪಾಡುವಂತಾಗಲಿ. ನಮ್ಮ ಭಾರತದ ಸಂಸ್ಕೃತಿ, ಮೌಲ್ಯ, ಪರಂಪರೆ, ಜೀವನಕ್ರಮಗಳು ಇತರ ದೇಶಗಳಿಗೂ ಪ್ರೇರಣೆಯಾಗಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತಾಗಲಿ,

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ ||

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)