ಅಂಕಣ

ಹೊಂಬೆಳಕು ಅಂಕಣ: ಮನುಕುಲದ ಶ್ರೇಷ್ಠ ಹಾಗೂ ಮೂಲಜ್ಞಾನ ವೇದಗಳು…

ನಾಗರಿಕ ಸಮಾಜ ಕೆಲವು ಲಕ್ಷಣಗಳನ್ನು ಹೊಂದಿರುತ್ತದೆ. ಅದರಲ್ಲಿ ಅತ್ಯಂತ ಪ್ರಮುಖವಾದದ್ದು ಸಭ್ಯತೆ. ಸಭ್ಯತೆ ಎಂದರೆ ಸಾರ್ವಜನಿಕ ವಲಯಗಳಲ್ಲಿ ನಾವು ವ್ಯವಹರಿಸುವಾಗ ಅನಿವಾರ್ಯವಾಗಿ ಪಾಲಿಸಬೇಕಾದ ಕೆಲವು ನಿಯಮಗಳು, ಬದ್ಧತೆಗಳು ಇತ್ಯಾದಿ. ಈ ಸಭ್ಯತೆಯ ಲಕ್ಷಣಗಳಲ್ಲಿ ಅತ್ಯಂತ ಮೂಲಭೂತವಾದದ್ದು ಮತ್ತು ಸಾರ್ವತ್ರಿಕವಾದದ್ದು ಉದ್ಧಟತನವನ್ನು, ಮೃಗೀಯ ಪ್ರವೃತ್ತಿಯನ್ನು ಎಂದಿಗೂ ಯಾವ ರೂಪದಲ್ಲೂ ಪ್ರದರ್ಶಿಸದಿರುವುದು. ಸಹಸ್ರಾರು ವರ್ಷಗಳಿಂದ ಸಹಸ್ರಾರು ರೀತಿಯಲ್ಲಿ ಗೌರವಕ್ಕೆ ಪಾತ್ರರಾದ ವ್ಯಕ್ತಿ, ಗ್ರಂಥ, ಸಂಪ್ರದಾಯ ಇವುಗಳ ಬಗ್ಗೆ ಯಾವುದೇ ವೈಜ್ಞಾನಿಕ, ರ್ತಾಕ ಆಧಾರವಿಲ್ಲದೆ ನಿಂದಿಸಿಬಿಡುವುದು, ಅವಹೇಳನ ಮಾಡಿಬಿಡುವುದು. ಇವೆಲ್ಲಾ ಶಿಸ್ತಿಗೆ ಬದ್ಧವಾದ, ಮೌಲ್ಯಗಳನ್ನು ಗಂಭೀರವಾಗಿ ತೆಗೆದುಕೊಂಡ, ನೈತಿಕತೆ, ಸಂಸ್ಕೃತಿ ಇವುಗಳಿಗೆ ನ್ಯಾಯವಾದ ಸ್ಥಾನವನ್ನು ಕಲ್ಪಿಸಿಕೊಟ್ಟ ಜನರಿರುವವೆಡೆ ಅತ್ಯಂತ ಖಂಡನಾರ್ಹ ಮತ್ತು ಅಸಹ್ಯವಾಗದಿದ್ದಲ್ಲಿ ಮೂಢಮತಿಗಳು ಮತ್ತು ಅವೈಜ್ಞಾನಿಕ ಚಿಂತನೆಗಳು ಅಟ್ಟಹಾಸ ಗೈಯಲು ಪ್ರಾರಂಭಿಸುತ್ತವೆ. ಸ್ವಾಮಿ ವಿವೇಕಾನಂದರು ಈ ನಾಡಿಗೆ ಮಾಡಿದ ಅತ್ಯಮೂಲ್ಯ ಸೇವೆಗಳಲ್ಲಿ ಈ ಧರ್ಮ, ಈ ನಾಡಿನ ಬಗ್ಗೆ ಅಜ್ಞಾನಜನ್ಯ ಮಾತುಗಳು ಮತ್ತು ಬರಹಗಳು ಕಂಡು ಬಂದಾಗ ಅದಕ್ಕೆ ಕಾರಣನಾದ ವ್ಯಕ್ತಿಗೆ ಇನ್ನೆಂದಿಗೂ ಸೊಲ್ಲೆತ್ತದಂತೆ ಚುರುಕು ಮುಟ್ಟಿಸುತ್ತಿದ್ದುದೂ ಒಂದು.

ಪರಿವ್ರಾಜಕರಾಗಿ ಅವರು ಮದ್ರಾಸಿನಲ್ಲಿ ತಂಗಿದ್ದ ದಿನಗಳವು. ವಿಶ್ವವಿದ್ಯಾಲಯದ ಪದವಿಗಳನ್ನು ಪಡೆದಿದ್ದ ಕೆಲವು ಯುವಕರು ಮಾತಿನ ಮಧ್ಯೆ, ವೇದಗಳು ಮೂಢನಂಬಿಕೆಯ ಕೂಪಗಳು ಎಂಬ ವಾಕ್ಯವನ್ನು ಉಸುರಿಬಿಟ್ಟರು. ಈಗಿನಂತೆಯೇ ಆಗಲೂ ಕೂಡ ವಿದ್ಯಾವಂತರು , ವಿಚಾರವಂತರು ಅಂತ ಅನ್ನಿಸಿಕೊಳ್ಳಬೇಕಾದರೆ ಅವಶ್ಯವಿದ್ದ ಬೇರೆಲ್ಲಾ ಅರ್ಹತೆಗಳಿಗಿಂತಲೂ ಪ್ರಮುಖವಾದದ್ದೇ ಭಾರತೀಯ ಮೂಲ ಅಥವಾ ಹಿಂದೂ ಮೂಲವಾದದ್ದನ್ನು ಅವಹೇಳನಕ್ಕೆಡೆ ಮಾಡಿಬಿಡುವುದು. ಯಾರೋ ಯುರೋಪಿಯನ್ನರ ಮೆದುಳಿನಲ್ಲಿ ಸುಳಿದು ಹೋದ ಕೆಲವು ವಾಕ್ಯಗಳನ್ನು ಬಾಯಿಪಾಠ ಮಾಡಿ ಒದರಿಬಿಡುವುದು. ಆದರೆ, ಪಾಪ ಆ ಹುಡುಗರಿಗೆ ತಾವು ಹಾವಿನ ಹೆಡೆಯನ್ನೇ ತುಳಿದಿದ್ದೇವೆ ಎಂದು ತಿಳಿದಿರಲಿಲ್ಲ. ವೇದಗಳನ್ನೇ ಶರೀರವನ್ನಾಗಿಸಿಕೊಂಡಿದ್ದ ಸ್ವಾಮೀಜಿ ಒಮ್ಮೆಲೇ ಉಗ್ರರಾದರು, ಅವರ ಉತ್ತರದಲ್ಲೇ ಅದು ಸ್ಪಷ್ಟವಾಗಿತ್ತು. ಸ್ವಲ್ಪ ಮಟ್ಟಿಗಿನ ಯುರೋಪಿಯನ್ ಶಿಕ್ಷಣದಿಂದ ನಿಮ್ಮ ಮೆದುಳುಗಳು ಕೊಳೆತುಹೋಗಿವೆ. ವೇದಗಳು ನಿಮ್ಮ ಮುಂದಿರುವ ಸವಾಲುಗಳು, ಧೈರ್ಯವಿದ್ದರೆ ಎದುರಿಸಿ ಅವುಗಳನ್ನು ಎಂದು ಗುಡುಗಿದರು.

ವೈಜ್ಞಾನಿಕ ದೃಷ್ಟಿಕೋನ ಎನ್ನುವುದು ಸ್ವಲ್ಪ ಹೆಚ್ಚು ಕಡಿಮೆ ಸ್ಮಶಾನ ಸೇರಿದಂತೆಯೇ ಭಾಸವಾಗುತ್ತಿದೆ. ಇತ್ತೀಚೆಗೆ ವಿಚಾರಪರರು ಎಂಬ ಸ್ವಯಂ ಘೊಷಿತ ವರ್ಗ ಇನ್ನಿಲ್ಲದ ರೀತಿಯಲ್ಲಿ ಜಿಞಟ್ಠ್ಝಜಿಡಛಿ ಆಗುತ್ತಿದ್ದಾರೆ. ಇವರದ್ದೊಂದು ಹೇಳಿಕೆ, ಇವರ ಅನುಯಾಯಿಗಳದ್ದೊಂದು, ಇವರ ಶಿಷ್ಯರದ್ದೊಂದು ಎಲ್ಲ ಸೇರಿ ಒಂದು ಹೊಸ ರೀತಿಯ ಪ್ರಹಸನ ಲೋಕವನ್ನೇ ಸೃಷ್ಟಿಸುತ್ತಿವೆ. ಸುಮಾರು 15 ವರ್ಷಗಳ ಹಿಂದೆ ಹರಿಹರದಲ್ಲಿ ಪ್ರಸಿದ್ಧ ವೈದ್ಯರೊಬ್ಬರ ಮನೆಯಲ್ಲಿ ದೈನಿಕವೊಂದರ ವರದಿಗಾರ ವೇದಗಳ ಬಗ್ಗೆ ಹೀಗೆಯೇ ಹಗುರವಾಗಿ ಮಾತನಾಡಿದ್ದರು. ವೈಜ್ಞಾನಿಕತೆಗೆ ಹೆಸರಾದ ಪತ್ರಿಕೆ ಅದು. ವೇದಗಳನ್ನು ವಿರೋಧಿಸದಿದ್ದರೆ ಹೇಗಾದೀತು? ನಾನು ಆತನನ್ನು ಪ್ರಶ್ನಿಸಿದೆ. ‘ವೇದಗಳಲ್ಲಿ ಏನನ್ನು ನೋಡಿ ಈ ಮಾತು ಹೇಳುತ್ತಿದ್ದೀರಿ?’ ‘ಅಲ್ಲಿರುವುದೆಲ್ಲಾ ಅಷ್ಟೇ’ ಇದು ಅವರ ಉತ್ತರ. ‘ವೇದಗಳ ಯಾವುದಾದರೂ ಐದು ವಾಕ್ಯಗಳು ನಿಮಗೆ ಗೊತ್ತಿದ್ದಲ್ಲಿ ಅದನ್ನು, ಅದರ ಅರ್ಥವನ್ನು ಹೇಳಿ’ ಎಂದು ನಾನು ಕೇಳಿದೆ. ಉತ್ತರ ಮೌನ. ಹೋಗಲಿ, ‘ಎರಡು ವಾಕ್ಯಗಳನ್ನೋ ಇಲ್ಲವೇ ಒಂದೇ ಒಂದು ವಾಕ್ಯವನ್ನಾದರೂ ಹೇಳಿ ಮತ್ತು ಅದರಲ್ಲಿರುವ ಆಕ್ಷೇಪಣಾರ್ಹವಾದದ್ದನ್ನೂ ಹೇಳಿ.’ ಅವರ ಉತ್ತರ ಅದ್ಭುತವಾಗಿತ್ತು. ‘ನನಗೆ ಗೊತ್ತಿದೆ. ಆದರೆ, ಈಗ ಇಲ್ಲಿ ಹೇಳುವುದಿಲ್ಲ’. ಇಂಥ ವಿತಂಡ ವಾದಕ್ಕೆ ಏನನ್ನುವುದು? ಅವರು ಹಾಗೆ ಹೇಳಲೂ ಕಾರಣವಿತ್ತು. ಕೆಲ ದಿನಗಳ ಹಿಂದೆ ಅಪ್ರಬುದ್ಧ ಹೇಳಿಕೆಗಳಿಗೆ ಕುಪ್ರಸಿದ್ಧರಾದ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಭದ್ರಾವತಿಯಲ್ಲಿ ವೇದಗಳನ್ನು ತೆಗಳಿದ್ದರು. ಆ ಪ್ರಾಧ್ಯಾಪಕರಾದರೋ ತಮ್ಮ ಜೀವಮಾನದಲ್ಲೇ ಒಂದು ದಿನವೂ ವೇದಗಳನ್ನು ಓದುವುದಿರಲಿ ಆ ಪುಸ್ತಕವನ್ನು ನೋಡಿದವರೂ ಅಲ್ಲ. ಆದರೆ, ಕರ್ನಾಟಕದ ಚಿಂತನವಲಯಕ್ಕೆ ಅವರೊಬ್ಬ ಸರ್ವಜ್ಞ ! ಎಷ್ಟೋ ಮರಿಚಿಂತಕರು ತಮ್ಮ ಮೆದುಳನ್ನು ಅವರಿಗೆ ಅಡವಿಟ್ಟಿದ್ದರು. ಬಹುಶಃ ಆ ಗುಂಪಿನಲ್ಲಿ ಈ ವರದಿಗಾರನೂ ಸೇರಿದ್ದಿರಬೇಕು. ವೇದಗಳ ಒಂದು ವಾಕ್ಯವನ್ನೂ ಓದದ, ಮನನ ಮಾಡದ, ದೋಷವನ್ನು ಕಂಡುಹಿಡಿಯುವ ಉದ್ದೇಶದಿಂದಲಾದರೂ ಒಂದು ಸಲವೂ ಓದದ ವ್ಯಕ್ತಿ ಅದರ ಬಗ್ಗೆ ಹಗುರವಾಗಿ ಮಾತನಾಡುತ್ತಾನಲ್ಲ?! ಇದಕ್ಕೆ ಏನೆನ್ನಬೇಕು?! ‘ಉದ್ಧಟತನ’ ಎಂದು ನಾನು ಪ್ರಾರಂಭದಲ್ಲಿ ಹೇಳಿದ್ದು ಇದನ್ನೇ. ಅದೊಂದು ಮೃಗೀಯ ಸಂಸ್ಕೃತಿ. ಅನಾಗರಿಕರಲ್ಲಿ, ಅರೆ ನಾಗರೀಕರಲ್ಲಿ ಮಾತ್ರ ಕಾಣುವ ಲಕ್ಷಣ.

ನಮ್ಮನ್ನು ಪ್ರಶ್ನಿಸಿ ಎಂದು ವೇದಗಳೇ ನಮ್ಮನ್ನು ಆಹ್ವಾನಿಸುತ್ತವೆ. ಇಡೀ ವಿಶ್ವದಲ್ಲಿ ನಮ್ಮನ್ನು ಮೀರಿ ಹೋಗಿ ಎಂದು ಹೇಳುವ ಏಕಮೇವ ಧಾರ್ವಿುಕ ಸಾಹಿತ್ಯ ‘ವೇದಗಳು’. ನಾರದರು ಪರಾಭಕ್ತಿಯನ್ನು ಕುರಿತು ಹೇಳುವಾಗ ಅದನ್ನು ಪಡೆದ ಮಹಾತ್ಮನು ‘ವೇದಾನಿ ಸಂನ್ಯಸ್ಯತಿ’ ವೇದಗಳನ್ನೂ ಮೀರಿ ಹೋಗುತ್ತಾನೆ ಎಂದು ಹೇಳುತ್ತಾರೆ. ನಮ್ಮನ್ನು ಮೀರಿ ಹೋಗಿ ಎಂದು ಹೇಳುವ ಎದೆಗಾರಿಕೆ, ಪ್ರಾಮಾಣಿಕತೆ, ಸತ್ಯನಿಷ್ಠೆಗಳನ್ನು ವೇದಗಳು ಪ್ರದರ್ಶಿಸಿವೆ. ಅವು ಪ್ರಶ್ನೆಗಳಿಗೆ ಎಂದೂ ಹೆದರಿಲ್ಲ. ಪ್ರಶ್ನೆಗಳಿಗೆ, ವೈಚಾರಿಕತೆಯ ತುತ್ತತುದಿಯನ್ನು ಮುಟ್ಟಿದ್ದ ಬೌದ್ಧರ ಪ್ರಶ್ನೆಗಳಿಗೆ ಉತ್ತರವನ್ನಿತ್ತಿದ್ದು, ಅವರನ್ನು ಮೌನವಾಗಿರಿಸಿದ್ದು ವೇದವಿದ್ವಾಂಸರಾದ ಕುಮಾರಿಲಭಟ್ಟರೇ. ಇವರ ಶಿಷ್ಯರೇ ಮಂಡನಮಿಶ್ರರು. ಮುಂದೆ ಸುರೇಶ್ವರಾಚಾರ್ಯರೆಂಬ ಹೆಸರಿನಿಂದ ಶೃಂಗೇರಿ ಪೀಠಕ್ಕೆ ಶ್ರೀ ಶಂಕರಾಚಾರ್ಯರಿಂದ ನೇಮಿಸಲ್ಪಟ್ಟ ಮೊಟ್ಟ ಮೊದಲಿಗರು.

ಆ ಕಡೆ ವಿವೇಕಾನಂದರು ಈ ಕಡೆ ಕುಮಾರಿಲ ಭಟ್ಟರು ಮತ್ತೊಂದೆಡೆ ಸಾಯಣಾಚಾರ್ಯರು, ಆಚಾರ್ಯ ಪರಂಪರೆ ಹೀಗೆ ಇನ್ನಿಲ್ಲದ ರೀತಿಯಲ್ಲಿ ಪ್ರಶಂಸೆಗೊಳಗಾದ ವೇದಗಳು ನಿಜಕ್ಕೂ ಏನು? ಈ ಪ್ರಶ್ನೆಗೆ ಒಂದು ಪುಸ್ತಕವನ್ನೇ ಬರೆಯಬೇಕಾಗುತ್ತದೆ ಉತ್ತರ ರೂಪವಾಗಿ. ಮನುಷ್ಯನ ಪರಿಪೂರ್ಣತೆಗೆ ಉದ್ಧಾರಕ್ಕೆ ಬೇಕಾದ ಎಲ್ಲಾ ಮಾರ್ಗದರ್ಶನಗಳನ್ನೂ ಒಳಗೊಂಡ ಅದ್ಭುತವಾದ ಸಾಹಿತ್ಯರಾಶಿ ಅದು. ಕೇವಲ ಪಾಂಡಿತ್ಯಕ್ಕೋ, ವಿದ್ವತ್ತಿಗೋ ವೇದಗಳು ಎಂದಿಗೂ ತಮ್ಮ ಅರ್ಥವನ್ನು ತಿಳಿಸಿಕೊಡಲಾರವು. ಆತ್ಮ ಯಾರನ್ನು ತಾನು ಇಷ್ಟಪಡುತ್ತೋ ಅವರಿಗೆ ಮಾತ್ರ ತನ್ನನ್ನು ತಿಳಿಸಿಕೊಡುತ್ತದೆ ಎಂದು ಕಠೋಪನಿಷತ್ ಹೇಳುವಂತೆ ವೇದಗಳು ಕೂಡ ತಾವೇ ಇಷ್ಟ ಪಟ್ಟವರಿಗೆ ಮಾತ್ರ ತಮ್ಮ ರಹಸ್ಯಗಳನ್ನು ಬಿಟ್ಟುಕೊಡುವುದು. ಅರ್ಥಾತ್ ಶ್ರದ್ಧಾವಂತರಿಗೆ; ಅದರ ಆರಾಧಕರಿಗೆ! ವೇದಗಳನ್ನು ಕೇವಲ ಸಂಸ್ಕೃತ ಭಾಷೆಯ ಪಾಂಡಿತ್ಯದಿಂದಲೂ ತಿಳಿಯಲಸಾಧ್ಯ. ವೇದ ಸಂಸ್ಕೃತ ಅತ್ಯಂತ ಪ್ರಾಚೀನ. ವಿವೇಕಾನಂದರ ಭಾಷೆಯಲ್ಲಿ ಹೇಳಬೇಕೆಂದರೆ ಇಡೀ ಜೀವಮಾನವೆಲ್ಲ ಅಧ್ಯಯನ ಮಾಡಿದರೂ ಅದರ ನಾಡಿಹಿಡಿಯುವುದು ಕಷ್ಟ ಸಾಧ್ಯ. ಆರು ಗ್ರಂಥಗಳ ಸಹಾಯವಿಲ್ಲದೆ ವೇದಸಾಹಿತ್ಯ ಸ್ಪಷ್ಟವಾಗದು. ಅವೇ ವೇದಗಳ ಅಂಗಗಳು ಅರ್ಥಾತ್ ವೇದಾಂಗಗಳು ; ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ ಇವೇ ಆ ಆರು. ಇಲ್ಲಿ ಪ್ರಧಾನ ಪಾತ್ರ ನಿರುಕ್ತದ್ದು. ಇದರ ಕರ್ತೃ ಯಾಸ್ಕರು. ವೇದ ಸಾಹಿತ್ಯದಲ್ಲಿ ‘ಉಕ್ತ’ ವಾದ ಕೃತಿಯೊಂದನ್ನು ಬಿಡಿಸಿ ಬಿಡಿಸಿ ಮನನಗಯ್ಯಲು ಇದು ಅತ್ಯಂತ ಸಹಾಯಕಾರಿ. ‘ಉಕ್ತ’ ವಾದದ್ದನ್ನು ‘ನಿರುಕ್ತ’ ಗೊಳಿಸುವುದು ಇದು. ವಚನಗಳನ್ನು ನಿರ್ವಚನ ಮಾಡಿದಂತೆ. ಹೀಗೆ ಅಗಾಧವಾದ ತಯಾರಿ ವೇದಾಧ್ಯಯನಕ್ಕೆ ಅತ್ಯವಶ್ಯ.

ಕಾರಣ ಇಷ್ಟೇ. ಅದರ ‘ವಸ್ತು’ ಪರಮ ಪರಿಶುದ್ಧ ಹೃದಯದ, ಮಹಾಜ್ಞಾನಾಕಾಂಕ್ಷಿಗಳಾದ, ನಿರ್ಮಲ ಮನಸ್ಸಿನ ಶ್ರದ್ಧಾವಂತರಾದ ಋಷಿಗಳ ಮನಸ್ಸುಗಳಿಗೆ ಅತೀಂದ್ರಿಯ ಸ್ಥಿತಿಯಲ್ಲಿ ಗೋಚರವಾಗಿದ್ದು. ಪ್ರಕೃತಿಯಲ್ಲಿ ತಾವು ಪ್ರತಿನಿತ್ಯ ಕಾಣುವ ನಿಗೂಢ ಘಟನಾವಳಿಗಳ, ಬದಲಾವಣೆಗಳ ಹಿಂದಿನ ಕರ್ತೃ ಯಾರು? ಉದ್ದೇಶ್ಯವಾದರೂ ಏನು ? ಎಂಬ ದೀರ್ಘಕಾಲದ ಮನನಕ್ಕೆ, ಸೃಷ್ಟಿಯ ಹಿಂದಿನ ಅಗಮ್ಯ ಅಗೋಚರನಾದ ಕರ್ತೃವಿಗೆ ಮಾಡಿದ ಪ್ರಾರ್ಥನೆಗೆ ಅವರ ಕಣ್ಣಮುಂದೆಯೇ ಗೋಚರಿಸಿದ ಮಂತ್ರಗಳೇ ವೇದಗಳು. ಮಂತ್ರಗಳನ್ನು ಅವರು ನಿರ್ವಿುಸಿದ್ದು ಎನ್ನುವುದಕ್ಕಿಂತ ಅವರು ಕಂಡಿದ್ದು ಎನ್ನುವುದೇ ಸೂಕ್ತ. ಮೊದಲೇ ಇದ್ದ ಮಂತ್ರಗಳು ಇವರ ದೃಷ್ಟಿಗೆ ಗೋಚರವಾಯಿತು. ಆದ್ದರಿಂದ ಅವರು ವೇದಗಳ ಕರ್ತೃ ಎನ್ನುವುದಕ್ಕಿಂತ ‘ಮಂತ್ರದ್ರಷ್ಟಾರ’ ಎಂದೇ ಪ್ರಖ್ಯಾತರಾಗಿದ್ದಾರೆ. ಇಡೀ ಸೃಷ್ಟಿ, ಸೃಷ್ಟಿಯ ಪ್ರಾರಂಭ, ಸೃಷ್ಟಿಯ ಮೂಲವಸ್ತು, ಸೃಷ್ಟಿಗೆ ಆದಿ ಅಂತ್ಯಗಳಿವೆಯೋ ಇಲ್ಲವೋ, ಈ ಜಗತ್ತು ಹೇಗಿದೆ, ಕೇವಲ ಭೂಗ್ರಹ ಅಲ್ಲ ; ಇಡೀ ಜಗತ್ತು ಹೇಗಿದೆ? ಮನುಷ್ಯ ಯಾರು? ವಿಕಾಸದ ಅಂತಿಮ ಹಂತಗಳಲ್ಲಿ ಅವನ ಸ್ಥಿತಿ ಏನು? ಅವನ ಆಂತರ್ಯ ಮತ್ತು ಬಾಹ್ಯ ಜಗತ್ತುಗಳ ಸಂಬಂಧವೇನು ? ಹೀಗೇ ಇಡೀ ಸೃಷ್ಟಿಯ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಸೂತ್ರರೂಪದಲ್ಲಿ ವೇದಗಳು ಒಳಗೊಂಡಿವೆ. ಈ ಸೂತ್ರಗಳನ್ನು ಅರಿತು ಪ್ರಕೃತಿಯನ್ನು ನಿಯಂತ್ರಿಸುವುದೇ ಮನುಷ್ಯ ಜನ್ಮದ ಗುರಿ ಎಂದು ವೇದಗಳು ಸ್ಪಷ್ಟವಾಗಿ ಹೇಳುತ್ತವೆ. ಮನುಷ್ಯನ ವಿಕಾಸದ ಹತ್ತು ಹಲವು ಹಂತಗಳನ್ನು ರ್ಚಚಿಸುವುದರ ಜೊತೆಗೇ ಪ್ರತಿಹಂತದಲ್ಲೂ ಅವನ ಅವಶ್ಯಕತೆಗಳು ಮತ್ತು ಅವುಗಳನ್ನು ಈಡೇರಿಸಿಕೊಳ್ಳುವ ಮಾರ್ಗಗಳನ್ನು ಅವು ಸ್ಪಷ್ಟವಾಗಿ ಹೇಳುತ್ತವೆ. ಇಂಥ ನೂರಾರು ಸೂತ್ರಗಳಿವೆ ಅಲ್ಲಿ ಮತ್ತು ಅದರ ಪ್ರಧಾನ ಸೂತ್ರವೇ ಸೃಷ್ಟಿಯ ಮೂಲವಸ್ತು ಪ್ರಜ್ಞಾಪೂರ್ಣ ಮತ್ತು ಅದು ಕೇವಲ ಏಕ; ಆದ್ದರಿಂದ ಅನಂತ; ಆನಂದ ರೂಪ. ಅದರ ವಿಚಿತ್ರವಾದ ವ್ಯಕ್ತರೂಪವೇ ಜಗತ್ತು ಮತ್ತು ಆ ಮೂಲವಸ್ತು ಬಾಹ್ಯದಲ್ಲಿ ಬ್ರಹ್ಮ ಎಂದು ಕರೆಯಲ್ಪಟ್ಟರೆ ಮನುಷ್ಯನ ಆಂತರ್ಯದಲ್ಲಿ ವ್ಯಷ್ಟಿಸ್ತರದಲ್ಲಿ ಆತ್ಮ ಎಂದು ಕರೆಯಲ್ಪಡುತ್ತದೆ. ಆತ್ಮ ಇಲ್ಲವೇ ಬ್ರಹ್ಮನಲ್ಲಿ ಮನುಷ್ಯ ತನ್ನನ್ನು ತಾದಾತ್ಮ್ಯಗೊಳಿಸಿಕೊಂಡಾಗ ಪ್ರಕೃತಿಯ ಎಲ್ಲ ನಿಯಮಗಳನ್ನೂ ಮೀರಿ ಹೋಗುತ್ತಾನೆ ; ಸ್ವತಂತ್ರನಾಗುತ್ತಾನೆ, ಈ ಸ್ವಾತಂತ್ರ್ಯವೇ ದೈವತ್ವ (ಈಜಿಡಜ್ಞಿಜಿಠಿಢ).

ಅದನ್ನು ಸಾಧಿಸುವುದೇ ಮನುಷ್ಯ ಜೀವನದ ಗುರಿ. ಆದರೆ, ಎಷ್ಟೋ ಜನರಿಗೆ ಅದಿನ್ನೂ ದೂರದ ಮಾತು. ಅವರೆಲ್ಲ ಇನ್ನೂ ವಸ್ತುಪ್ರಪಂಚದ ಆಕರ್ಷಣೆಗಳಲ್ಲಿ ಕರಗಿಹೋದವರು. ಅತ್ಯಂತ ಪ್ರಾಯೋಗಿಕ (ಕ್ಟಚ್ಚಠಿಜ್ಚಿಚ್ಝ) ರಾಗಿದ್ದ ಋಷಿಗಳು ಅವರಿಗಾಗಿ ಪ್ರಾಕೃತಿಕ ಶಕ್ತಿಗಳೊಡನೆ ಸಂಪರ್ಕ ಬೆಳೆಸಿ ಆಸೆಗಳನ್ನು ಪೂರೈಸಿಕೊಳ್ಳುವ ದಾರಿಗಳನ್ನು ನಿರ್ವಿುಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲೇ ಋಗ್ವೇದದ ದೇವತೆಗಳು, ಮಂತ್ರಗಳು, ಯಜುರ್ವೆದದ ಯಜ್ಞಗಳು, ಸಾಮವೇದದ ಗಾನಗಳು ಇವುಗಳನ್ನು ಅರ್ಥೈಸಬೇಕು. ಕೇವಲ ಧರ್ಮ ಮೋಕ್ಷಗಳನ್ನು ಗುರಿಯಾಗಿರಿಸದೆ ಅರ್ಥ ಕಾಮಗಳನ್ನು ಪುರುಷಾರ್ಥಗಳಲ್ಲಿ ಸೇರಿಸಿದ್ದಾರೆ ಎನ್ನುವುದು ಇದನ್ನು ಸಮರ್ಥಿಸುತ್ತದೆ. ಅಶಕ್ತನೊಬ್ಬ ಶಕ್ತನಿಂದ ಸಹಾಯ ಪಡೆದು ಉಧೃತನಾಗುವುದು ಸಾಮಾನ್ಯ ಸಂಗತಿ. ಇಷ್ಟೇ ಅಲ್ಲದೆ, ಆಧುನಿಕ ಪ್ರಪಂಚದಲ್ಲಿ ಹಾಸುಹೊಕ್ಕಾಗಿರುವ ಅನೇಕ ಚಿಂತನೆಗಳು, ಮೌಲ್ಯಗಳ ಬಗ್ಗೆ ವಿಸõತ ವಿವರಣೆಗಳನ್ನು ಅಥರ್ವ ವೇದದಲ್ಲಿ ಕಾಣುತ್ತೇವೆ. ಪ್ರಜಾಪ್ರಭುತ್ವದ ಲಕ್ಷಣಗಳು, ಆರೋಗ್ಯ, ದೀರ್ಘಾಯುಷ್ಯ, ಸಂಗೀತ, ನೃತ್ಯ, ಶಿಲ್ಪ ಶಾಸ್ತ್ರ, ಕೃಷಿ, ಭೂಗರ್ಭ ಶಾಸ್ತ್ರ, ಶಸ್ತ್ರಾಸ್ತ್ರಗಳು, ಲಲಿತಕಲೆಗಳು ಇವುಗಳನ್ನು ಕುರಿತ ಮೂಲಭೂತ ತತ್ವಗಳು, ವಿವರಣೆಗಳು ನಮ್ಮನ್ನು ಬೆರಗಾಗಿಸುತ್ತವೆ. ಉದ್ದಾರದ ಮಾರ್ಗವನ್ನು ಕುರಿತು ಹೇಳಿ ಎಂಬ ಪ್ರಶ್ನೆ ಹಲವು ಕಡೆ ಪುನರುಚ್ಚರಿಸಲ್ಪಟ್ಟಿದೆ. ಪಾಪ, ಶಿಕ್ಷೆ, ನರಕ ಇವುಗಳ ಬಗ್ಗೆ ಒಂದು ವಾಕ್ಯವೂ ಎಲ್ಲಿಯೂ ಕಾಣುವುದಿಲ್ಲವಷ್ಟೇ ಅಲ್ಲ ಮನುಷ್ಯನ ಭವ್ಯತೆ, ಸಾಮರ್ಥ್ಯಗಳ ಬಗ್ಗೆ ರೋಮಾಂಚಗೊಳಿಸುವ ವಿವರಗಳಿವೆ. ಎಲ್ಲವೂ ಸಂಪೂರ್ಣವಾಗಿ ಸಕಾರಾತ್ಮಕ! ನಕಾರಾತ್ಮಿಕತೆಗೂ ವೇದಗಳಿಗೂ ಸಂಬಂಧವೇ ಇಲ್ಲ.

ನ್ಯೂಟನ್ನಿನ ಬಹಳಷ್ಟು ಸಿದ್ಧಾಂತ ವೇದಗಳಲ್ಲಿದೆ ಎಂದು ವಿಲಿಯಂ ಜೋನ್ಸ್ ಹೇಳಿದರೆ, ಆಧುನಿಕ ವಿಜ್ಞಾನದ ಮೈಲಿಗಲ್ಲುಗಳಿಗೆ ವೇದಗಳೇ ಮೂಲ ಎಂದು ಮೋನಿಯರ್ ವಿಲಿಯಮ್ಸ್ ಹೇಳುತ್ತಾನೆ. ಮೆಸ್ಯಾಚುಸೆಟ್ಸ್ ರಾಜ್ಯದ ಹಲವು ಪಟ್ಟು ವೇದಗಳ ಒಂದು ವಾಕ್ಯಕ್ಕೆ ಸಮ ಎಂದು ಹೇಳಿದ್ದಲ್ಲದೆ, ವೇದಗಳಲ್ಲಿ ಸಂಕುಚಿತತೆಯ ಸ್ಪರ್ಶವೇ ಇಲ್ಲ. ಅದು ಎಲ್ಲ ಕಾಲಕ್ಕೂ, ಎಲ್ಲ ಜನಾಂಗಗಳಿಗೂ ಸೇರಿದ್ದು ಎಂದು ಅಮೆರಿಕದ ಚಿಂತಕ ಥೋರೋ ಹೇಳಿದ್ದಲ್ಲದೆ, ವೇದಗಳಿಗಾಗಿ ಇಡೀ ಪಶ್ಚಿಮವೇ ಭಾರತಕ್ಕೆ ಶಾಶ್ವತವಾಗಿ ಋಣಿಯಾಗಿದೆ ಎಂದು ವಾಲ್ಟೇರ್ ಹೇಳುತ್ತಾನೆ. ಪಾಶ್ಚಾತ್ಯರಿಗೆ ಇದೊಂದು ಅತ್ಯಂತ ಪ್ರಾಚೀನತಮ, ಶ್ರೇಷ್ಠತಮ ಜ್ಞಾನಸಾಗರ.

ವೇದ ಮಂತ್ರಗಳ ಗಂಭೀರ ಅನುರಣಿತಗಳ ಮೂಲಕ ಈ ದೇಶವನ್ನು ಮತ್ತೊಮ್ಮೆ ಜಾಗೃತಗೊಳಿಸಬೇಕೆಂದಿದ್ದೇನೆ.'I want to rise this country through the infallible vedic mantras' ಎಂಬ ವಿವೇಕಾನಂದರ ಗುಡುಗು ಸಾವಿರ ವಿಷಯಗಳನ್ನು ಹೊರಗೆಡಹುತ್ತವೆ, ಕೇಳುವ ಕಿವಿ ಬೇಕು! ಭಾವಿಸುವ ಹೃದಯ ಬೇಕು! ಅಷ್ಟೆ!

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)